ವಿಶ್ವ ಭೂ ದಿನ: ಸಕಲ ಜೀವಸಂಕುಲವನ್ನು ಸಂರಕ್ಷಿಸೋಣ

ವಿಶ್ವ ಭೂ ದಿನ: ಸಕಲ ಜೀವಸಂಕುಲವನ್ನು ಸಂರಕ್ಷಿಸೋಣ

ಸೌರಮಂಡಲದ ಐದನೇ ಅತ್ಯಂತ ದೊಡ್ಡ ಗ್ರಹ ಭೂಮಿ. ಲಕ್ಷ ಕೋಟಿ ಜೀವ ಸಂಕುಲವನ್ನು, ಜೀವ ವೈವಿಧ್ಯತೆಯನ್ನು, ನೀರು, ಗಿಡ- ಮರ ಹೀಗೆ ಬದುಕಲುಬೇಕಾದ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕಾರಣ ಬೇರೆ ಗ್ರಹಗಳಿಗಿಂತ ವಿಶೇಷತೆ ಹೊಂದಿರುವ ಏಕೈಕ ಗ್ರಹವಾಗಿದೆ. ಇರುವುದೊಂದೇ ಭೂಮಿ ಎಂದು ಆಗಾಗ ಸಂಬೋಧಿಸುವುದು ಕೂಡ ಇದೇ ಕಾರಣಕ್ಕೆ. ಭೂಮಿಯೂ ಸುಸ್ಥಿರವಾದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಜೀವಿಗಳು ವಾಸಿಸಲು ಯೋಗ್ಯವಾದ ಒಂದೇ ಒಂದು ಸ್ಥಳವಾಗಿದೆ. ಹಾಗಾಗಿ ಭೂಮಿಗೆ ತಾಯಿ ಸ್ಥಾನ ನೀಡಲಾಗುತ್ತಿದೆ.

ಆದರೆ, ಈಗ ಆ ಮಾತಿನ ಅರ್ಥ ಕಳೆದು ಕೊಳ್ಳುತ್ತಿದೆಯೇನೋ ಎಂದು ಅನಿಸುವುದುಂಟು. ಮನುಷ್ಯ ತನ್ನ ಸುಖದ ಜೀವನಕ್ಕಾಗಿ ಭೂಮಿಯ ಒಡಲನ್ನು ಬಗೆದು ತಾನು ಶ್ರೀಮಂತಿಕೆಯನ್ನು ಕಾಣುತ್ತಿದ್ದಾನೆ. ಇದರಿಂದ ಸಂತುಲಿತ ಪರಿಸರವೂ ಕೂಡ ಹಾಳಾಗುತ್ತಿದೆ. ನೀರು, ವಾಯು ಮಾಲಿನ್ಯ ವಾಗುತ್ತಿವೆ. ಪ್ರಾಣಿಗಳು ಅಳಿವಿನಂಚಿಗೆ ತಲುಪಿವೆ. ಇದೆಲ್ಲ ಆಗಿದ್ದು ಮನುಷ್ಯ ತನ್ನ ಶ್ರೀಮಂತಿಕೆಯ ದಾಹದ ಬುದ್ಧಿಯಿಂದಾಗಿ. ಈ ಎಚ್ಚರಿಕೆಯನ್ನು ತಲುಪಿಸಲು ಹಾಗೂ ಭೂಮಿಯ ಬಗ್ಗೆ ಹಿತ ಚಿಂತನೆಗಾಗಿಯೇ ಎ. 22ರಂದು ವಿಶ್ವ ಭೂಮಿ ದಿನ ಎಂದು ಆಚರಿಸಲಾಗುತ್ತದೆ.

ಜಾಗೃತಿ ದಿನ
ರಿತ್ಯ, ಅರಣ್ಯ ನಾಶ, ಗಣಿಗಾರಿಕೆಯಿಂದಾಗಿ ಭೂಮಿಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತವೆ. ಈ ಕಾರಣಕ್ಕಾಗಿಯೇ ವಿಶ್ವ ಭೂಮಿ ದಿನಾಚರಣೆ ಸ್ತುತ್ಯಾರ್ಹ ಎನಿಸುತ್ತದೆ.ಎಪ್ರಿಲ್‌ 22ರಂದು ವಿಶ್ವ ಭೂಮಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವೂ ಭೂಮಿಯ ವಾಸ್ತವಿಕ ಸ್ಥಿತಿಗತಿಗಳು ಹಾಗೂ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಥಾ, ವಿಚಾರ ಸಂಕಿರಣ, ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಜೀವಿಗಳನ್ನು ಸಂರಕ್ಷಿಸಿ
2019ರ ವಿಶ್ವ ಭೂಮಿ ದಿನವನ್ನು ಅಳವಿನಂಚಿಲ್ಲಿರುವ ಪ್ರಾಣಿ- ಪಕ್ಷಿಗಳ ಉಳಿವಿಗಾಗಿ ಮೀಸಲಿಡಲಾಗಿದ್ದು, “ನಮ್ಮ ಜೀವ- ಜಾತಿಯನ್ನು ರಕ್ಷಿಸಿ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತದೆ. 2018ರಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದಾಗಿ ಭೂಮಿಗೆ ಆಗುವ ಆಪಾಯದ ಬಗ್ಗೆ ಜಾಗೃತಿಗೆ ಪ್ಲಾಸ್ಟಿಕ್‌ ಮಾಲಿನ್ಯ ಮುಕ್ತಗೊಳಿಸಿ ಎಂಬ ಸಂದೇಶದೊಂದಿಗೆ ಆಚರಿಸಲಾಗಿತ್ತು.

ವೈಯಕ್ತಿಕ ಜವಾಬ್ದಾರಿಗಳು
ವಿಶ್ವ ಭೂಮಿ ದಿನದ ಅಂಗವಾಗಿ ಪ್ರತಿಯೊಬ್ಬರೂ ಆಚರಿಸುವ ಮುನ್ನ ಕೆಲವೊಂದು ವೈಯಕ್ತಿಕ ಜವಾಬ್ದಾರಿಗಳನ್ನು ಅನುಸರಿಸುವುದು ಕೂಡ ಅನಿವಾರ್ಯ.
1 ಮನೆ ಹೊರಾಂಗಣದಲ್ಲಿ ಗಿಡವನ್ನು ನೆಟ್ಟು, ಪೋಷಿಸಬೇಕು.
2 ಭೂಮಿಗೆ ಕಂಟಕವಾಗಿರುವ ಪ್ಲಾಸ್ಟಿಕ್‌ ಅನ್ನು ತ್ಯಜಿಸುವುದು.
3 ತ್ಯಾಜ್ಯವನ್ನು ಮರುಬಳಕೆ ಮಾಡುವುದು.
4 ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯಬಾರದು.
5 ವಿಶ್ವ ಭೂಮಿ ದಿನದ ಅಂಗವಾಗಿ ಭೂ ಸಂರಕ್ಷಣೆಗೆ ಸಂಬಂಧಿಸಿದ ಗೀತೆ ಹಾಗೂ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವುದು.
6 ಪರಿಸರ ಮಾಲಿನ್ಯ ತಡೆಗಟ್ಟಿ, ಭೂಮಿ ಸಂರಕ್ಷಣೆ, ಪ್ರಾಣಿ ಪಕ್ಷಿಗಳ ರಕ್ಷಣೆಗೆ ಪಣ ತೊಡಲು ಇತರರಿಗೂ ಪ್ರೇರಣೆ ನೀಡುವುದು.
7 ಅಳವಿನಂಚಿಲ್ಲಿರುವ ಪ್ರಾಣಿಗಳ  ಉಳಿವಿಗಾಗಿ ಪಣ ತೊಡಬೇಕು.
8 ಪರಿಸರವನ್ನು ಆದಷ್ಟು ಸ್ವತ್ಛವಾಗಿಟ್ಟುಕೊಳ್ಳುವುದು.
9 ಮನೆ ಸುತ್ತಮುತ್ತ ಆದಷ್ಟು ಗಿಡಗಳನ್ನು ನೆಡುವುದು, ಬೇರೆಯವರಿಗೂ ನೆಡುವಂತೆ ಪ್ರೇರಣೆ ನೀಡುವುದು.
10 ಕಾಡು, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೆ ಜಾಗೃತಿ ಕಾರ್ಯ ಕ್ರಮಗಳನ್ನು ನಡೆಸುವುದು.