ವಿಶ್ವಕಪ್ ಕ್ರಿಕೆಟ್ 2019: ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿದ ಭಾರತ: ಸೆಮಿಫೈನಲ್ ಗೆ ಲಗ್ಗೆ

ವಿಶ್ವಕಪ್ ಕ್ರಿಕೆಟ್ 2019: ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿದ ಭಾರತ: ಸೆಮಿಫೈನಲ್ ಗೆ ಲಗ್ಗೆ

ಬರ್ಮಿಂಗ್ ಹ್ಯಾಮ್: ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 6ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಈಗಾಗಲೇ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತ ಎರಡನೇ ತಂಡವಾಗಿದೆ.

ಭಾರತ ಆಡಿರುವ ಒಟ್ಟು 8 ಪಂದ್ಯಗಳಲ್ಲಿ 6 ಗೆಲುವು, ಒಂದು ಸೋಲು, ಒಂದು ಡ್ರಾ ಫಲಿತಾಂಶದೊಂದಿಗೆ 13 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ 104 ರನ್ ಹಾಗೂ ಕೆಎಲ್ ರಾಹುಲ್ 77ರನ್ ಅದ್ಭುತ ಆರಂಭ ಒದಗಿಸಿದರು. ಕೊಹ್ಲಿ 26 ರನ್ ಜೊತೆಗೂಡಿದ ರಿಷಬ್ ಪಂತ್ 48 ರನ್ ಭರ್ಜರಿ ಆಟವಾಡಿದರೂ, ಕೇವಲ 2 ರನ್ ಗಳ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು. ಬಳಿಕ ಅಂತಿಮ ಹಂತದಲ್ಲಿ ಮಹೇಂದ್ರ ಸಿಂಗ್ 35 ರನ್ ತಂಡದ ಮೊತ್ತವನ್ನು 300ರ ಗಡಿ ದಾಟಿದರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314ರನ್ ಗಳಿಸಿತು.

ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 22 ರನ್ ಗಳಿಸಿದ್ದ ತಮೀಮ್ ಇಕ್ಬಾಲ್ ಶಮಿಗೆ ವಿಕೆಟ್ ಒಪ್ಪಿಸಿದರೆ, 33 ರನ್ ಗಳಿಸಿದ್ದ ಸೌಮ್ಯ ಸರ್ಕಾರ್ ಹಾರ್ದಿಕ್ ಪಾಂಡ್ಯಗೆ ಬಲಿಯಾದರು. ಬಳಿಕ ಬಂದ ಶಕೀಬ್ ಅಲ್ ಹಸನ್ ಅಕ್ಷರಶಃ ಭಾರತೀಯ ಬೌಲರ್ ಗಳನ್ನು ಕಾಡಿದರು. 74 ಎಸೆತಗಳನ್ನು ಎದುರಿಸಿದ ಶಕೀಬ್ 66ರನ್ ಗಳಿಸಿ ಭಾರತದ ಪಾಳಯದಲ್ಲಿ ಆಂತಕ ಮೂಡಿಸಿದರು.  ಸಬ್ಬೀರ್ ರೆಹಮಾನ್ 36 ರನ್ ಮತ್ತು ಮಹಮದ್ ಸೈಫುದ್ದೀನ್ ಕೊನೆಯವರೆಗೂ ಕ್ರೀಸ್ ನಲ್ಲಿ ನಿಂತು ಬಾಂಗ್ಲಾ ಗೆಲುವಿಗೆ ಹೋರಾಡಿದರು. ಆದರೆ 48ನೇ ಓವರ್ ಎಸೆದ ಭಾರತದ ಜಸ್ ಪ್ರೀತ್ ಬುಮ್ರಾ, ರುಬೆಲ್ ಹುಸೇನ್ ಮತ್ತು ಮುಸ್ತಫಿಜುರ್ ರೆಹಮಾನ್ ರನ್ನು ಔಟ್ ಮಾಡುವ ಮೂಲಕ ಬಾಂಗ್ಲಾ ಸೋಲಿಗೆ ಕಾರಣರಾದರು.

ಬಾಂಗ್ಲಾದೇಶ 48 ಓವರ್ ಗಳಲ್ಲಿ 286 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತದ ಎದುರು 28 ರನ್ ಗಳ ಅಂತರದಲ್ಲಿ ಮಂಡಿಯೂರಿತು.