ಭಾರತದಲ್ಲಿ ಹೆಣ್ಣಿಗೆ ಆದ ಅತ್ಯಾಚಾರಕ್ಕಿಂತ, ಜಾತಿ ಚರ್ಚೆಯೇ ಮುಖ್ಯವೇ?

ಒಂದು ಲೆಕ್ಕಾಚಾರದ  ಪ್ರಕಾರ ಭಾರತದಲ್ಲಿ ಪ್ರತಿದಿನ 93 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ (ದಾಖಲಾಗದ ಪ್ರಕರಣಗಳು ಇನ್ನೆಷ್ಟೋ!). ಅದರಲ್ಲಿ ಒಬ್ಬ ನಿರ್ಭಯಾ ಪ್ರಕರಣವೋ ಅಥವಾ ಪ್ರಿಯಾಂಕಾ ರೆಡ್ಡಿ ಪ್ರಕರಣವೋ ಏಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ ಮತ್ತು ಉಳಿದ ಪ್ರಕರಣಗಳು ಸ್ಥಳೀಯ ಜಿಲ್ಲಾವಾರು ತಾಲೂಕುವಾರು ಕಾಲಂ ಸುದ್ದಿ ಆಗುತ್ತದೆ? ಇದಕ್ಕೆ ಜಾತಿ ಕಾರಣವೇ, ಧರ್ಮ ಕಾರಣವೇ, ಅಥವಾ ಇದೊಂದು ಸಮೂಹ ಸನ್ನಿಯೇ ?

ಭಾರತದಲ್ಲಿ ಹೆಣ್ಣಿಗೆ ಆದ ಅತ್ಯಾಚಾರಕ್ಕಿಂತ, ಜಾತಿ ಚರ್ಚೆಯೇ ಮುಖ್ಯವೇ?

ಸಿ ಎಸ್ ದ್ವಾರಕಾನಾಥ್ ಬರೆದಿರುವ ಪ್ರಿಯಾಂಕಾ ದುರಂತವನ್ನು ಓದಿ ದುಃಖವಾಯಿತು. ಅವಳಿಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ  ದ್ವಾರಕಾನಾಥ್, ಭಾಸ್ಕರ್ ಪ್ರಸಾದ್ ಮುಂತಾದ ಲೇಖಕರ ಪ್ರಯತ್ನ ಅಭಿನಂದನೀಯ. ಆದರೆ ಜಾತಿಯ ಕಾರಣದಿಂದ ಒಬ್ಬಳಿಗೆ ಪ್ರಚಾರ ಸಿಕ್ಕಿತು ಮತ್ತೊಬ್ಬಳಿಗೆ ಪ್ರಚಾರ ಸಿಗಲಿಲ್ಲ ಎಂಬ ಇವರ ತರ್ಕ ನನಗೆ ಅರ್ಥವಾಗಲಿಲ್ಲ.

ಹೆಣ್ಣು ಎಲ್ಲ ಕಾಲಕ್ಕೂ ಶೋಷಿತಳೇ. ಅವಳು  ಮೇಲ್ಜಾತಿಯ ಹೆಣ್ಣಿರಬಹುದು ಅಥವಾ ದಲಿತ ಹೆಣ್ಣು ಮಗಳಿರಬಹುದು. ಪುರುಷ ದೌರ್ಜನ್ಯದ ಎದುರು ಇಬ್ಬರೂ  ಅನಾದಿಕಾಲದಿಂದಲೂ ಸಮಾನವಾಗಿ ಬಲಿಪಶುಗಳಾಗಿದ್ದಾರೆ. 

ಸತ್ತು ಸ್ವರ್ಗ ಸೇರಿರುವ ಇಬ್ಬರ ಆತ್ಮಗಳೂ ದ್ವಾರಕಾನಾಥರ ಈ ತಾರತಮ್ಯದ ತರ್ಕವನ್ನು ಒಪ್ಪುವುದಿಲ್ಲ. ಇಲ್ಲಿ ಜಾತಿಗಿಂತಲೂ ರಾಜಕಾರಿಣಿಗಳ ಪ್ರಭಾವ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಇಂತಹ ಪ್ರಕರಣಕ್ಕೆ ಜಾತೀಯತೆಯ ಬಣ್ಣ ಕೊಟ್ಟರೆ ಪ್ರಕರಣ ಮತ್ತಷ್ಟು ಹಳಿ ತಪ್ಪುತ್ತದೆ.

ಈಗಾಗಲೇ ಇದು ಹಳಿ ತಪ್ಪುತ್ತಿದೆ. "ಪ್ರಿಯಾಂಕಾ ರೆಡ್ಡಿ ಪ್ರಕರಣದ ನಾಲ್ವರು ಅತ್ಯಾಚಾರಿಗಳೂ ಮುಸ್ಲಿಮರೇ. ಅವರ ಪೈಕಿ ಮೂವರು ಅಪ್ರಾಪ್ತ ವಯಸ್ಕರಾದ ಕಾರಣ ಪೊಲೀಸರು ಅವರ ಹೆಸರು ಬಹಿರಂಗ ಪಡಿಸಿಲ್ಲ, ಹುಸಿ ಹೆಸರುಗಳನ್ನೂ ನೀಡಲಾಗಿದೆ. ಹುಸಿ ಹೆಸರೇ ನೀಡುವುದಾದರೆ ಹಿಂದೂ ಹೆಸರನ್ನೇ ಏಕೆ ನೀಡಬೇಕು? ಮುಸ್ಲಿಂ ಹೆಸರನ್ನೇ ನೀಡಬೇಕಲ್ಲವೇ? ಇವೆಲ್ಲ ಹಿಂದೂಧರ್ಮಕ್ಕೆ ಮಸಿ ಬಳಿಯುವ ಷಡ್ಯಂತ್ರವಾಗಿದೆ. ಇಂತಹ ಕೆಲಸ ಮಾಡಿದ ಸಂಬಂಧ  ಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕು" ಎಂದು ಕೆಲವರು ಹಿಂದೂ ಸಂಘಟನೆಯ ನಾಯಕರು ಆಗ್ರಹಿಸುತ್ತಿದ್ದಾರೆ.

ತಾರ್ಕಿಕವಾಗಿ ವಿವೇಚಿಸುವುದಾದರೆ ದ್ವಾರಕಾನಾಥರ ವಾದಕ್ಕೂ, ಹಿಂದುತ್ವವಾದಿಗಳ ವಾದಕ್ಕೂ ಯಾವುದೇ ಮೂಲಭೂತ ವ್ಯತ್ಯಾಸ ಕಾಣಿಸುವುದಿಲ್ಲ, ಇಬ್ಬರ ವಾದಗಳೂ ಸಮಾನವಾಗಿ ಸಮರ್ಥನೀಯ ಎನ್ನಬೇಕಾಗುತ್ತದೆ. ಆದರೆ ಆಂತರ್ಯದಲ್ಲಿ ಈ ಎರಡೂ ವಾದಗಳಿಗೆ ಆತ್ಮವೇ ಇಲ್ಲ.ಹೆಣ್ಣಿಗಾದ ಅನ್ಯಾಯ ಈ ಇಬ್ಬರಲ್ಲಿ ಯಾರೊಬ್ಬರಿಗೂ ಮುಖ್ಯವೆನಿಸುತ್ತಿಲ್ಲ, ಇಬ್ಬರಿಗೂ ಮಾನವೀಯತೆಯ ಹೆಸರಿನಲ್ಲಿ ತಾವು ಬೆಂಬಲಿಸುತ್ತಿರುವ ಕೋಮುಗಳ ಬಗ್ಗೆಯೇ ಕಾಳಜಿ ಇದ್ದಂತಿದೆ. ಈ ಹಗರಣಗಳನ್ನೆಲ್ಲ ಆ ಇಬ್ಬರು ಹೆಣ್ಣು ಮಕ್ಕಳು ಮೇಲಿನ ಲೋಕದಿಂದ ಗಮನಿಸುತ್ತಿದ್ದರೆ ಇಬ್ಬರ ಆತ್ಮಗಳೂ ಮಮ್ಮಲ ಮರುಗದಿರದು.  

ಕನ್ನಡದ ಬಹುತೇಕ ಪತ್ರಿಕೆಗಳು ಜಮಖಂಡಿಯ ಆ ನಿರ್ಲಕ್ಷಿತ ಪ್ರಿಯಾಂಕಾಳ ಸುದ್ದಿಯನ್ನು ಪ್ರಕಟಿಸಿರುವುದನ್ನು ನಾನು ಓದಿದ್ದೇನೆ. ಪ್ರಿಯಾಂಕಾ ರೆಡ್ಡಿ ಪ್ರಕರಣದಷ್ಟು ವ್ಯಾಪಕ ಸುದ್ದಿ ಆಗದಿದ್ದರೂ ಕೆಲವು ಟಿವಿ ಚಾನೆಲ್ ಗಳಲ್ಲೂ ನೋಡಿದ್ದ ನೆನಪಿದೆ. ಒಂದು ಲೆಕ್ಕಾಚಾರದ  ಪ್ರಕಾರ ಭಾರತದಲ್ಲಿ ಪ್ರತಿದಿನ 93 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ (ದಾಖಲಾಗದ ಪ್ರಕರಣಗಳು ಇನ್ನೆಷ್ಟೋ!). ಅದರಲ್ಲಿ ಒಬ್ಬ ನಿರ್ಭಯಾ ಪ್ರಕರಣವೋ ಅಥವಾ ಪ್ರಿಯಾಂಕಾ ರೆಡ್ಡಿ ಪ್ರಕರಣವೋ ಏಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ ಮತ್ತು ಉಳಿದ ಪ್ರಕರಣಗಳು ಸ್ಥಳೀಯ ಜಿಲ್ಲಾವಾರು ತಾಲೂಕುವಾರು ಕಾಲಂ ಸುದ್ದಿ ಆಗುತ್ತದೆ? ಇದಕ್ಕೆ ಜಾತಿ ಕಾರಣವೇ, ಧರ್ಮ ಕಾರಣವೇ, ಅಥವಾ ಇದೊಂದು ಸಮೂಹ ಸನ್ನಿಯೇ,  ಅಥವಾ ಹಿಂದುತ್ವವಾದಿಗಳು ಹೇಳುವಂತೆ ಭಾರತದ ಕಾನೂನು ಸುವ್ಯವಸ್ಥೆ ಪದ್ಧತಿಗೆ ಮಸಿ ಬಳಿಯುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯಾವುದೋ ಕಾರ್ಪೊರೇಟ್ ಹುನ್ನಾರವೇ? ಇವೆಲ್ಲ ಕುತೂಹಲಕರವಾದ, ಅಧ್ಯಯನ ಯೋಗ್ಯವಾದ ವಿಷಯವಾಗಿದೆ. ಇಂತಹ ವಿಷಯಗಳನ್ನು ಕುರಿತು ವಿವೇಚಿಸುವಾಗ ನಮ್ಮ ಆತುರದ ತೀರ್ಮಾನ, ತುಲನೆ, ತಾರತಮ್ಯದ ಧೋರಣೆಗಳಿಂದಾಗಿ ಪ್ರಕರಣದ ಗಂಭೀರತೆಯೇ ನಾಶವಾಗುವ ಅಪಾಯವಿದೆ.  

ಇನ್ನು ದ್ವಾರಕಾನಾಥ್ ಮತ್ತು ರಾಜೇಂದ್ರ ಪ್ರಸಾದ್ ರ ಹಿನ್ನೆಲೆಗಳನ್ನು ಗಮನಿಸಿದರೆ ಇಬ್ಬರೂ ಪ್ರಭಾವಿಗಳೇ, ಧೀಮಂತರೇ ಆಗಿದ್ದಾರೆ. ಆ ನತದೃಷ್ಟ ಹೆಣ್ಣುಮಗಳ ತಾಯ್ತಂದೆಯರಿಗೆ ನ್ಯಾಯ ದೊರಕಿಸಿಕೊಡುವ ಸಾಮರ್ಥ್ಯ ಇಬ್ಬರಿಗೂ ಉಂಟು. ದೇವರ ದಯದಿಂದ ಮೊದಲು ಆ ಕೆಲಸವಾಗಲಿ. ಕೊನೆಯ ಪಕ್ಷ ಮಗಳನ್ನು ದುರಂತಮಯವಾಗಿ ಕೊಂದ ಕಟುಕರಿಗೆ ತಕ್ಕ ಶಿಕ್ಷೆ ಆಯಿತೆಂಬ ತೃಪ್ತಿ ಆ ಹೆತ್ತವರಿಗೆ ಸಿಗಲಿ. ಅದಾದ ತರುವಾಯ ಈ ಬರವಣಿಗೆ ಪ್ರಕಟವಾಗಿದ್ದರೆ ಇದಕ್ಕೊಂದು ವರ್ಚಸ್ಸು ಸಿಗುತ್ತಿತ್ತು, ಎಲ್ಲ ಮಾಧ್ಯಮಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಂತೆ ಆಗುತ್ತಿತ್ತು. ಅಥವಾ ಲೇಖಕರು ಎಲ್ಲ ಮಾಧ್ಯಮಗಳ ಸಂಪಾದಕರುಗಳಿಗೆ ಖಾಸಗಿಯಾಗಿ ಈ ಪತ್ರ ಬರೆದಿದ್ದರೂ ಆಗುತ್ತಿತ್ತು. ಆದರೆ ಹೋರಾಟ ಜಾರಿಯಲ್ಲಿ ಇರುವಾಗಲೇ ಹೀಗೆ ಸಾರ್ವಜನಿಕವಾಗಿ ಬರೆಯುವುದು ಸ್ವಮರುಕ, ಸಿನಿಕತನದ ಅಭಿವ್ಯಕ್ತಿಯಂತೆ ಭಾಸವಾಗುತ್ತದೆ. ಇವರಿಗೆ ಹೆಣ್ಣಿಗಾದ ಅನ್ಯಾಯಕ್ಕಿಂತ ಜಾತಿ ಚರ್ಚೆಯೇ ಮುಖ್ಯವಾಗಿದೆ ಎಂಬ ತಪ್ಪು ಸಂದೇಶ ಸಮಾಜಕ್ಕೆ ಹೋದಂತಾಗುತ್ತದೆ.