ಸೂತ್ರಧಾರ ಸಿದ್ದರಾಮಯ್ಯ...

ಮುಖ್ಯಮಂತ್ರಿಯಾದ ಮೊದಲ ದಿನವೇ ಹಸಿದವರಿಗೆ ಅನ್ನಭಾಗ್ಯ ಕರುಣಿಸಿದ  ಸಿದ್ದರಾಮಯ್ಯ ಕೆಲವು ವಿಶ್ವವಿದ್ಯಾಲಯಗಳಿಗೆ ಗಮನಕ್ಕೇ ಬಾರದ ಸಣ್ಣಪುಟ್ಟ ಜಾತಿಯ ಪ್ರತಿನಿಧಿಗಳನ್ನು ಕುಲಪತಿಗಳನ್ನಾಗಿಸಿದರು. ಇಂದಿರಾ ಕ್ಯಾಂಟೀನ್ ಸೇರಿದಂತೆ ಕೆಲವು ಜನಪರ ಕಾರ್ಯಕ್ರಮಗಳನ್ನೂ ರೂಪಿಸಿದರು. ಆದರೆ ಲೋಕಾಯುಕ್ತ ವರದಿ ಆಧರಿಸಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಗಣಿಕಳ್ಳರ ವಿರುದ್ಧ ಪ್ರಾಮಾಣಿಕ ಕ್ರಮಕೈಗೊಳ್ಳುವಲ್ಲಿ ವಿಫಲರಾದರು.

ಸೂತ್ರಧಾರ ಸಿದ್ದರಾಮಯ್ಯ...

ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ರಾಜಕೀಯದಲ್ಲಿ ಪಡೆದ ಅನುಭವ, ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲರ ಒಡನಾಟ, ತನ್ನದೇ ಕಾರ್ಯತಂತ್ರ, ಹೋರಾಟದಿಂದ ಬಂದ ವರ್ಚಸ್ಸು ಅಹಿಂದ ಹಣೆಪಟ್ಟಿ, ಅಚಲ ಗುರಿ, ಸಂದರ್ಭಗಳ ಸಮರ್ಥ ಬಳಕೆ ಇವೆಲ್ಲವುಗಳ ಫಲವಾಗಿ ಸಿದ್ದರಾಮಯ್ಯ ತನ್ನ ದಾಳಕ್ಕೆ ತಕ್ಕಂತೆ ಕಾಂಗ್ರೆಸ್ ಪಕ್ಷವನ್ನು ಕುಣಿಸುತ್ತಿದ್ದರೆ, ಮೂಲನಿವಾಸಿಗಳೆಂಬ ಪಾಪಿಗಳು ಅಸಹಾಯಕರಾಗಿ ಗೊಣಗುತ್ತಾ, ಮೈಪರಚಿಕೊಂಡು ಕಾಲಹರಣ ಮಾಡುತ್ತಿದ್ದಾರೆ. 

ಸಿದ್ದರಾಮಯ್ಯ ಇನ್ನೊಂದು ಪಕ್ಷದಿಂದ ಬಂದು ಕಾಂಗ್ರೆಸ್ ಪಕ್ಷದ ಘಟಾನುಘಟಿಗಳೆಲ್ಲರನ್ನೂ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮೆರೆದಿದ್ದು ಸಾಮಾನ್ಯ ಸಂಗತಿ ಏನಲ್ಲ. ಜಾಫರ್ ಷರೀಫ್(ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಬದುಕಿದ್ದರು), ವಿ.ಶ್ರೀನಿವಾಸ್ ಪ್ರಸಾದ್, ಎ.ಎಚ್.ವಿಶ್ವನಾಥ್(ಈ ಇಬ್ಬರೂ ಸಿದ್ದರಾಮಯ್ಯ ಕಾರಣ ಹೇಳಿ ಕಾಂಗ್ರೆಸ್ ತೊರೆದವರು) , ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್,ಡಿ.ಕೆ.ಶಿವಕುಮಾರ್ ಅವರಂಥ ಘಟಾನುಘಟಿಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು ಸಿದ್ದರಾಮಯ್ಯ.  

ಸಂದರ್ಭಗಳ ಸಮರ್ಥ ಬಳಕೆ

ಜನತಾ ಪರಿವಾರ ಒಡೆದು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಪ್ರತ್ಯೇಕ ಪಕ್ಷಗಳಲ್ಲಿ ಗುರುತಿಸಿಕೊಂಡಾಗ ಗೌಡರ ಜತೆಯಲ್ಲಿ ಉಳಿದ ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗುವ ನಂಬಿಕೆಯಲ್ಲಿ ಇದ್ದವರು. 1996 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ವಾತಾವರಣ ನಿರ್ಮಾಣವಾಗಿತ್ತು. ನಿದ್ರಾಭೋಗಿ ಜೆ.ಎಚ್.ಪಟೇಲ್ ಗಿಂತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಲೇಸೆಂದು ಎರಡನೇ ಶ್ರೇಣಿಯ ನಾಯಕರೆಲ್ಲ ಭಾವಿಸಿದ್ದರು. ಆದರೆ ಯಾವ್ಯಾವುದೋ ಲೆಕ್ಕಾಚಾರ. ಒತ್ತಡಗಳಿಂದ ಅವರು ಕೇವಲ ಉಪಮುಖ್ಯಮಂತ್ರಿಯಾಗುವುದಷ್ಟೇ ಸಾಧ್ಯವಾಗಿತ್ತು.  2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗ ದೇವೇಗೌಡರು ಮನಸ್ಸು ಮಾಡಿದ್ದರೆ ಧರಂಸಿಂಗ್ ಬದಲು ತಾವೇ ಮುಖ್ಯಮಂತ್ರಿಯಾಗಬಹುದಿತ್ತೆಂದು ಸಿದ್ದರಾಮಯ್ಯ ಭಾವಿಸಿದ್ದರು. ಆದರೆ ಆಗಲೂ ಉಪಮುಖ್ಯಮಂತ್ರಿಯಷ್ಟೇ ಆಗಬೇಕಾಯಿತು. ಆಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಗದ್ದುಗೆ ಕಡೆಗೆ ಅಚಲ ಗುರಿ ಇರಿಸಿ ಸಿಕ್ಕ ಸಂದರ್ಭಗಳನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳತೊಡಗಿದರು. ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವರವಾಗಿ ಬಂದಿದ್ದೇ ಉಡುಪಿಯಲ್ಲಿ ಕನಕ ಗೋಪುರ ಕೆಡವಿದ ವಿವಾದ. 16 ನೇ ಶತಮಾನದ ಸಂತಕವಿ ಕನಕದಾಸ ತಮ್ಮವನೆಂದು ಗುರುತಿಸಿಕೊಂಡಿದ್ದ ಕುರುಬ ಸಮುದಾಯವನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳುವ ಅಸ್ತ್ರದಂತೆ ಬಳಕೆಯಾಯಿತು ಕನಕಗೋಪುರ ಕೆಡವಿದ ವಿವಾದ. 2004 ರ ಆಗಸ್ಟ್ 14 ರಂದು ಗೋಪುರ ಕೆಡವಿದ್ದರಿಂದಾಗಿ ಕುರುಬ ಸಮುದಾಯ ಉಡುಪಿ ಚಲೋ ಕಾರ್ಯಕ್ರಮ ಆಯೋಜಿಸಿತು. ಆ ಹೊತ್ತಿಗೆ ಉಡುಪಿಯಲ್ಲಿ ಕುರುಬ ಸಮುದಾಯದ ಯುವಕರ ಮೇಲೆ ಸಂಘ ಪರಿವಾರದ ಒಂದಷ್ಟು ಮಂದಿ ಹಲ್ಲೆ ನಡೆಸಿದ ಪರಿಣಾಮ ಕುರುಬ ಸಮುದಾಯಕ್ಕೆ ಸೇರಿದವರ್ಯಾರೂ ಸಂಘ ಪರಿವಾರದ ಜತೆ ಕೈಜೋಡಿಸಬಾರದೆಂದು ರಾಜ್ಯ ಕುರುಬರ ಸಂಘ ಕರೆ ನೀಡುವಂತೆ ವ್ಯವಸ್ಥಿತ ಪ್ರಯತ್ನ ನಡೆಸಲಾಯಿತು. ಆಗಸ್ಟ್ 17 ರಂದು ಕುರುಬ ಸಮುದಾಯದ ಉಡುಪಿ ಚಲೋ ಎಂಬ “ಕುರುಬ ಸಮುದಾಯದ ನಡಿಗೆ ರಾಜಕೀಯ ಶಕ್ತಿ ಪ್ರದರ್ಶನದೆಡೆಗೆ” ಆಗಿತ್ತು. ಅದರ ಹಿಂದೆ ಸಿದ್ದರಾಮಯ್ಯನವರ ಭಾರೀ ಗಾತ್ರದ ನೆರಳಿತ್ತು. ಮುಖ್ಯಮಂತ್ರಿಯಾಗದ ನೋವು, ದೇವೇಗೌಡರ ಮೇಲಿನ ಸಿಟ್ಟು ಸಿದ್ದರಾಮಯ್ಯ ಅಹಿಂದ ಹೋರಾಟದಲ್ಲಿ ಸಕ್ರಿಯರಾಗಿ ಅನಿವಾರ್ಯವಾಗಿ ಗುರುತಿಸಿಕೊಳ್ಳುವಂತಾಗಿ ಅವರ ನೆರಳು ವಿರಾಡ್ರೂಪ ಪಡೆಯತೊಡಗಿತು. 

ಕಾಂಗ್ರೆಸ್ ಎಂಬ ಸೇತುವೆ

ಆದರೆ ಸಿದ್ದರಾಮಯ್ಯ ಅವರ ಅಹಿಂದ ಹೋರಾಟ ಕಾಂಗ್ರೆಸ್ ಸೇರ್ಪಡೆಗೆ ಸೇತುವೆಯಾಗಿಯಷ್ಟೇ ಉಪಯೋಗವಾಗಿ ದಡ ಸೇರಿದ ಮೇಲೆ ಅಂಬಿಗನ ಮಿಂಡ ಎಂಬಂತೆ ಅಹಿಂದ ಹೋರಾಟ ಭಂಡ ನಿರ್ಲಕ್ಷ್ಯಕ್ಕೆ ಒಳಗಾಯಿತು. ಸದೃಢ ತತ್ವಗಳ ನೆಲೆಯ ಮೇಲೆ ಹೋರಾಟ ನಡೆಸುವ ಒಬ್ಬ ಪ್ರಾಮಾಣಿಕ ನಾಯಕನಿಗೆ ಕೇವಲ ಅಧಿಕಾರ ಪಡೆಯುವ ಹುಸಿ ಗುರಿ ಇರುವುದಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ಅಹಿಂದ ಹೋರಾಟವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ದೂರದೃಷ್ಟಿ ಇರಲಿಲ್ಲ ಅಥವಾ ಬೇಕಿರಲಿಲ್ಲ. ಅವರಿಗಿದ್ದದ್ದು ಕಾಂಗ್ರೆಸ್ ಸೇರಿ ಕೇವಲ ಮುಖ್ಯಮಂತ್ರಿಯಾಗುವ ಸಮೀಪದೃಷ್ಟಿ. ಸೀಮಿತವಾಗಿ ಕೇಂದ್ರೀಕರಿಸಿದ ದೃಷ್ಟಿ. ಅದರ ಅರ್ಥ ಇಷ್ಟೇ.  ಸಿದ್ದರಾಮಯ್ಯನವರು ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಅಹಿಂದ ಹೋರಾಟ ಮುಂದುವರಿಸಿದ್ದರೆ ಅವರು ಆಗಲೇ ಮುಖ್ಯಮಂತ್ರಿಯಾಗುವುದು ಸಾಧ್ಯವಿರುತ್ತಿರಲಿಲ್ಲ.ಯಾಕೆಂದರೆ ಅದಕ್ಕೊಂದು ರಾಜಕೀಯ ಸ್ವರೂಪ ದೊರೆತಿರಲಿಲ್ಲ. ಅದು ರಾಜಕೀಯ ಶಕ್ತಿಯಾಗಿ ಬೆಳೆದಿರಲಿಲ್ಲ. ಅದು ಅಹಿಂದ ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಬಲವರ್ಧನೆಯ ಹೋರಾಟವಾಗಿಯೇ ಮುಂದುವರಿದಿದ್ದರೆ ರಾಜ್ಯದಲ್ಲೊಂದು ಬಲಾಢ್ಯ ಶಕ್ತಿಯಾಗುವ ಎಲ್ಲ ಸಾಧ್ಯತೆ ಇತ್ತು. ಒಕ್ಕಲಿಗರು, ಲಿಂಗಾಯತರ ನಂತರ ಮೂರನೇ ಪ್ರಬಲ ಜಾತಿಯಾದ ಕುರುಬರ ಬೆಂಬಲವಿದ್ದರೂ ಸಣ್ಣಪುಟ್ಟ ಜಾತಿಗಳು ಸಿದ್ದರಾಮಯ್ಯನವರೇ ತಮ್ಮ ನಾಯಕನೆಂದು ಗುರುತಿಸಿಕೊಂಡಿದ್ದವು. ಆದರೆ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗುವುದಕ್ಕೆ ಕಾಂಗ್ರೆಸ್ ಎಂಬ ಪಕ್ಷದ ಕೇರಾಫ್ ಅಡ್ರೆಸ್ ಬೇಕಿತ್ತು. ಅಹಿಂದ ಹೋರಾಟದ ಮೂಲಕವೇ ಮುಖ್ಯಮಂತ್ರಿ ಗಾದಿಗೆ ಕಾಯುವ ಸಹನೆ ಅವರಿಗಿರಲಿಲ್ಲ. ಹೋರಾಟ ಆ ಕ್ಷಣದ ಅಗತ್ಯವಾಗಿತ್ತು. 

ಚಾಮುಂಡೇಶ್ವರಿಯಲ್ಲಿ ಪ್ರಬಲ ಜಾತಿಗಳ ಎದುರು ಐತಿಹಾಸಿಕ ಗೆಲುವು 

ಉಪಮುಖ್ಯಮಂತ್ರಿ ಸ್ಥಾನಕ್ಕೂ, ಶಾಸಕ ಸ್ಥಾನಕ್ಕೂ, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ನಂತರ 2006 ರ ಡಿಸೆಂಬರ್ 4 ರಂದು ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ವಿರುದ್ಧ ಸಿದ್ದರಾಮಯ್ಯ ಕೇವಲ 257 ಮತಗಳ ಅಂತರದಲ್ಲಿ ಗೆದ್ದರೂ ಆ ಫಲಿತಾಂಶ ಪ್ರಬಲ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಒಗ್ಗೂಡಿದರೂ ಅಹಿಂದ ಶಕ್ತಿಯ ಎದುರು ಮಣಿದಿದ್ದನ್ನು ಪ್ರತಿಫಲಿಸಿತ್ತು. ಸಿದ್ದರಾಮಯ್ಯ ಅವರಿಗೂ ಕೇವಲ ಕುರುಬ ಸಮುದಾಯವಲ್ಲದೇ ದಲಿತರು, ಇತರ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಗ್ಗೂಡಿದರೆ ಪ್ರಬಲ ಮತ್ತು ಪ್ರಭಾವಿ ಜಾತಿಗಳನ್ನು ಮಂಡಿಯೂರುವಂತೆ ಮಾಡಬಹುದೆಂಬುದನ್ನು ಈ ಫಲಿತಾಂಶ ತೋರಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೇರದೇ ಇದ್ದಿದ್ದರೂ ಸಿದ್ದರಾಮಯ್ಯ ಇದೇ ಅಂತರದಲ್ಲಿ ಗೆಲ್ಲುವುದು ಆಗ ಸಾಧ್ಯವಿತ್ತು. ತಕ್ಷಣ ಮುಖ್ಯಮಂತ್ರಿಯಾಗುವುದಕ್ಕೆ ಒಂದು ಕ್ಷೇತ್ರದ ತಮ್ಮ ಸ್ವಂತ ಗೆಲುವು ಮಾತ್ರ ಸಾಕಾಗದು ಎಂಬ ಸ್ಪಷ್ಟ ಅರಿವು ಸಿದ್ದರಾಮಯ್ಯ ಅವರಿಗೆ ಮೊದಲೇ ಇದ್ದುದರಿಂದಲೇ  ಅಹಿಂದ ಹೋರಾಟಕ್ಕೆ ವಿಶ್ರಾಂತಿ ನೀಡಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದರು. 2008 ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಫಲವಾಗಿ ಆಪರೇಷನ್ ಕಮಲದ ನೆರವಿನಿಂದ ಆಡಳಿತ ಪಕ್ಷವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾದರು. ಸಿದ್ದರಾಮಯ್ಯ ಆಗಲೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗುವ ಒಲವು ವ್ಯಕ್ತಪಡಿಸಿರಲಿಲ್ಲ. ಎಲ್ಲ ಸವಲತ್ತುಗಳಿರುವ ಹುದ್ದೆಯ ನೆಲೆಯಲ್ಲಿ ಕೆಲಸ ಮಾಡುವುದು ಸುಲಭ ಎನ್ನುವುದು ಅವರಿಗೆ ಗೊತ್ತಿತ್ತು. ಬಳ್ಳಾರಿ ರೆಡ್ಡಿ ಸಹೋದರರ ಗಣಿ ಗದ್ದಲವನ್ನು ಸಮರ್ಥವಾಗಿ ಬಳಸಿಕೊಂಡ ಸಿದ್ದರಾಮಯ್ಯ 2010 ರ ಜುಲೈ ಮತ್ತು ಆಗಸ್ಟ್ ನಡುವೆ ಬಳ್ಳಾರಿ ಚಲೋ ಪಾದಯಾತ್ರೆಯನ್ನು ತಮ್ಮ ನಾಯಕತ್ವದಲ್ಲೇ ಸಂಘಟಿಸಿ ಮುಖ್ಯಮಂತ್ರಿ ಗಾದಿಗೆ ಹತ್ತಿರಾಗುತ್ತಾ ಹೋದರು. ಸಿದ್ದರಾಮಯ್ಯ ಸದೃಢರಾಗುತ್ತಾ ಹೋದಂತೆ ಕಾಂಗ್ರೆಸ್ ಘಟಾನುಘಟಿಗಳು ಮಂಕಾಗುತ್ತಾ ಹೋದರು. ಗಣಿಕಳ್ಳರ ವಿರುದ್ಧ ಪಾದಯಾತ್ರೆ ಮೂಲಕ ನಡೆಸಿದ ಹೋರಾಟ ಸಿದ್ದರಾಮಯ್ಯ ರಾಜಕೀಯ ಬದುಕಿನಲ್ಲಿ ಅತಿ ಮಹತ್ವದ ತಿರುವು. ಸಿದ್ದರಾಮಯ್ಯ ನಾಯಕತ್ವದ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಅವರ ನೃತ್ಯ, ಡೊಳ್ಳುಕುಣಿತ ಬಿಜೆಪಿ ಆಡಳಿತದ ವಿರುದ್ಧ ಬೇಸತ್ತಿದ್ದ ಎಂಥವರಲ್ಲೂ ರೋಮಾಂಚನ ಉಂಟುಮಾಡುತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲೊಂದು ಹೊಸತೊಂದು ಗಾಳಿ ಬೀಸತೊಡಗಿತು. ಇದರಿಂದಾಗಿಯೇ ಸಿದ್ದರಾಮಯ್ಯ ತಮ್ಮ ಬಲವರ್ಧನೆಯಾಗುತ್ತಿದ್ದಂತೆ ವರಿಷ್ಠರನ್ನೂ ತಮ್ಮ ತಾಳಕ್ಕೆ ತಕ್ಕಂತೆ ಬಗ್ಗಿಸಬಹುದು ಎಂಬುದನ್ನೂ ಅರಿತುಕೊಂಡರು. 2012 ರಲ್ಲೊಮ್ಮೆ ರಾಜ್ಯ ವಿಧಾನ ಪರಿಷತ್ ಗೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ ಎಂದು ತಗಾದೆ ತೆಗೆದು ವಿಪಕ್ಷ ನಾಯಕನ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರಿಂದ ಪಕ್ಷದಲ್ಲಿ ಅಲ್ಲೋಲ ಕಲ್ಲೋಟ ಉಂಟಾಗಿತ್ತು. ದೆಹಲಿಯ ಪ್ರತಿನಿಧಿ ಬೆಂಗಳೂರಿಗೆ ದೌಡಾಯಿಸುವಂತೆ ಮಾಡಿದ ಈ ಪ್ರಕರಣದಿಂದ ಸಿದ್ದರಾಮಯ್ಯ ತಮ್ಮ ಬಲದ ಮಹತ್ವ ಅರಿತುಕೊಂಡು ಅದಕ್ಕೆ ತಕ್ಕಂತೆ ಹೆಜ್ಜೆ ಇಡತೊಡಗಿದರು. 

ಮುಖ್ಯಮಂತ್ರಿ ಗಾದಿಗೆ ಶ್ರಮಿಸಿದ ಆ ಏಳು ವರ್ಷಗಳು

ಇಂದಿರಾ ಕಾಲದ ಕಾಂಗ್ರೆಸ್ ಮತ್ತು ಸೋನಿಯಾ ಕಾಂಗ್ರೆಸ್ ನಡುವಿನ ವ್ಯತ್ಯಾಸ ಗುರುತಿಸುವವರಲ್ಲೂ ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಪ್ರವೇಶದಿಂದಾಗಿ ಅಚ್ಚರಿಯ ಬೆಳವಣಿಗೆಗಳು ಕಂಡು ಬಂದವು. ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿಯಂಥ ಹಿಂದುಳಿದ ವರ್ಗದವರು ಕಾಂಗ್ರೆಸ್ ಬಹುಮತ ಪಡೆದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದಿರಬಹುದು. ಆದರೆ ಹಿಂದುಳಿದ ವರ್ಗದ ನಾಯಕನೊಬ್ಬನ ಕಾರಣದಿಂದ ಕಾಂಗ್ರೆಸ್ ಬಹುಮತ ಪಡೆಯಬಹುದು ಎಂಬುದನ್ನು ಸಿದ್ದರಾಮಯ್ಯ 2013 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟರು. ಸಹಜವಾಗಿಯೇ ಅವರ ಮಹತ್ವಾಕಾಂಕ್ಷೆಯಂತೆ ಮುಖ್ಯಮಂತ್ರಿಯೂ ಆದರು. 2006 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದಾಗಿನಿಂದ ಮುಖ್ಯಮಂತ್ರಿಯಾಗಲು 7 ವರ್ಷಗಳನ್ನು ತೆಗೆದುಕೊಂಡರು. ಒಂದರ್ಥದಲ್ಲಿ ರಾಜಕೀಯ ಗದ್ದುಗೆ ಪಡೆಯುವ ಸಪ್ತಪದಿ ತುಳಿದಿದ್ದರು. ಅವರ ರಾಜಕೀಯ ಬದುಕಿನಲ್ಲಿ ಮೊದಲ ಮುಖ್ಯ ಹೆಜ್ಜೆ ಎಂದರೆ 1996 ರಲ್ಲಿ ಜೆ.ಎಚ್.ಪಟೇಲರ ಆಡಳಿತಾವಧಿಯಲ್ಲಿ ಮೊದಲ ಸಲ ಉಪಮುಖ್ಯಮಂತ್ರಿಯಾಗಿದ್ದು, ಎರಡನೇ ಮುಖ್ಯ ಹೆಜ್ಜೆ 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೆ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಡುಪಿಯಲ್ಲಿ ಕನಕ ಗೋಪುರ ಕೆಡವಿದಾಗ ಕುರುಬ ಸಮುದಾಯದ ಸ್ವಾಭಿಮಾನದ ಸಂಕೇತವೆಂಬಂತೆ ಅದರ ವಿರುದ್ಧ ಹೋರಾಟ ಸಂಘಟಿಸಿದ್ದು, ಮೂರನೇ ಮುಖ್ಯ ಹೆಜ್ಜೆ 2006 ರಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡಿ ಅಹಿಂದ ಹೋರಾಟದಲ್ಲಿ ಗುರುತಿಸಿಕೊಂಡಿದ್ದು, ನಾಲ್ಕನೇ  ಮುಖ್ಯ ಹೆಜ್ಜೆ 2006 ರಲ್ಲಿ ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಜಾತಿಗಳ ಶಕ್ತಿ ಪ್ರದರ್ಶನದ ಎದುರು ಗೆಲುವು ಸಾಧಿಸಿದ್ದು , ಐದನೇ ಮುಖ್ಯ ಹೆಜ್ಜೆ 2008 ರಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು,   ಆರನೇ ಮುಖ್ಯ ಹೆಜ್ಜೆ 2010 ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ ಸಂಘಟಿಸಿದ್ದು, ಏಳನೇ ಅತಿ ಮುಖ್ಯ ಹೆಜ್ಜೆ 2013 ರಲ್ಲಿ ಮಹದಾಸೆಯ ಮುಖ್ಯಮಂತ್ರಿ ಪಟ್ಟ ಏರಿದ್ದು. 

ಜನಪರ ಕಾರ್ಯಕ್ರಮಗಳೂ, ಸ್ವಾರ್ಥದ ನಡೆಯೂ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಲೇ ಅಸಹನೆ ಕಾರಿಕೊಂಡ ಜಾತಿಬದ್ಧ ರಾಜಕೀಯ ಪಂಡಿತರು “ಸಿದ್ದರಾಮಯ್ಯ ಆಡಳಿತಾವಧಿ ಕೇವಲ ಇಪ್ಪತ್ತು ತಿಂಗಳಷ್ಟೇ. ಕಾಂಗ್ರೆಸ್ಸಿನವರು ಜೆಡಿಎಸ್ ನಿಂದ ಬಂದ ಸಿದ್ದರಾಮಯ್ಯನವರನ್ನು ಸುಮ್ಮನೆ ಬಿಡುತ್ತಾರೆಯೇ? ಪರಮೇಶ್ವರ್ ಅಥವಾ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವಂಥ ವಾತಾವರಣ ನಿರ್ಮಾಣ ಮಾಡುತ್ತಾರೆ” ಎಂದೆಲ್ಲ ವಿಶ್ಲೇಷಣೆ ಮಾಡತೊಡಗಿದ್ದರು. ಜಾತಿಬದ್ಧ ರಾಜಕೀಯ ಪಂಡಿತರ ಇಂಥ ಮಾತುಗಳು ಸಿದ್ದರಾಮಯ್ಯ ವಿಚಾರದಲ್ಲಿ ನಡೆಯುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಅದು ಸುಲಭವೂ ಆಗಿರಲಿಲ್ಲ. ಸಿದ್ದರಾಮಯ್ಯ ಕೇವಲ ಇಪ್ಪತ್ತು ತಿಂಗಳಷ್ಟೇ ಅಲ್ಲ, ಐದು ವರ್ಷಗಳ ಆಡಳಿತವನ್ನು ಆನೆ ನಡೆದಿದ್ದೇ ದಾರಿ ಎಂಬಂತೆ ಸುಲಭವಾಗಿ ಪೂರೈಸಿದರು. 

ಮುಖ್ಯಮಂತ್ರಿಯಾದ ಮೊದಲ ದಿನವೇ ಹಸಿದವರಿಗೆ ಅನ್ನಭಾಗ್ಯ ಕರುಣಿಸಿದ  ಸಿದ್ದರಾಮಯ್ಯ ಕೆಲವು ವಿಶ್ವವಿದ್ಯಾಲಯಗಳಿಗೆ ಗಮನಕ್ಕೇ ಬಾರದ ಸಣ್ಣಪುಟ್ಟ ಜಾತಿಯ ಪ್ರತಿನಿಧಿಗಳನ್ನು ಕುಲಪತಿಗಳನ್ನಾಗಿಸಿದರು. ಇಂದಿರಾ ಕ್ಯಾಂಟೀನ್ ಸೇರಿದಂತೆ ಕೆಲವು ಜನಪರ ಕಾರ್ಯಕ್ರಮಗಳನ್ನೂ ರೂಪಿಸಿದರು. ಆದರೆ ಲೋಕಾಯುಕ್ತ ವರದಿ ಆಧರಿಸಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಗಣಿಕಳ್ಳರ ವಿರುದ್ಧ ಪ್ರಾಮಾಣಿಕ ಕ್ರಮಕೈಗೊಳ್ಳುವಲ್ಲಿ ವಿಫಲರಾದರು. ಅಷ್ಟೇ ಅಲ್ಲ. ತಮ್ಮ ತಾಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬಲ್ಲ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸ್ಥಾಪಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿದರು. ಶಾಂಭಟ್ ಎಂಬ ಮಹಾನ್ ಭ್ರಷ್ಟನನ್ನು ಕೆ.ಪಿ.ಎಸ್.ಸಿ. ಅಧ್ಯಕ್ಷನಾಗಿಸಿದ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಪ್ರಾಮಾಣಿಕರಾಗಿಯೇ ಉಳಿದಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು. 

ಠೇಂಕಾರದ ನಿರ್ಲಜ್ಜ ಪ್ರದರ್ಶನ

ಜತೆಜತೆಯಾಗಿಯೇ ಕಾಂಗ್ರೆಸ್ ಮೂಲನಿವಾಸಿಗಳನ್ನು ನಿರ್ಲಕ್ಷಿಸಿ ತಮ್ಮ ಬುಡ ಭದ್ರ ಮಾಡಿಕೊಳ್ಳುವ ಕೆಲಸದಲ್ಲಿಯೇ ನಿರತರಾದರು. ಕಾಂಗ್ರೆಸ್ ಪಕ್ಷದ ದೆಹಲಿ ಮಟ್ಟದಲ್ಲಿ ಪ್ರಭಾವಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆ ಬಿಟ್ಟರೆ ಇತರ ನಾಯಕರನ್ನು ಒಂದಿಷ್ಟೂ ಹತ್ತಿರ ಬಿಟ್ಟುಕೊಳ್ಳದೇ ತಮ್ಮದೇ ಹೊಸ ಗುಂಪೊಂದನ್ನು ಸೃಷ್ಟಿಸಿಕೊಳ್ಳುವ ಕಾಯಕದಲ್ಲಿ ಮಗ್ನರಾದರು. ಹಿಂದುಳಿದ ವರ್ಗ ಎಂಬ ಕಾರಣಕ್ಕೆ ಆರಂಭದ ದಿನಗಳಲ್ಲಿ ಬೆಂಬಲ ನೀಡಿದ್ದ ಆಗಿನ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅಂಥವರಿಗೂ ಭೇಟಿ ಮಾಡುವ ಅವಕಾಶವನ್ನೂ ನೀಡದೇ ದೂರವಿಡತೊಡಗಿದರು. ಜಾಫರ್ ಷರೀಫ್, ಮಲ್ಲಿಕಾರ್ಜುನ ಖರ್ಗೆ ಥರದವರು ವೃದ್ಧಾಪ್ಯದೆಡೆಗೆ ಸಾಗುತ್ತಿದ್ದರೆ, ಇತರ ಎರಡನೇ ಶ್ರೇಣಿಯ ನಾಯಕರು ನಿಷ್ಪ್ರಯೋಜಕರಂಥಾಗಿದ್ದನ್ನು ಕಂಡ ಸಂದರ್ಭವನ್ನು ಸಿದ್ದರಾಮಯ್ಯ ಸಮರ್ಥವಾಗಿಯೇ ಬಳಸಿಕೊಂಡರು. ದಲಿತ ಮುಖ್ಯಮಂತ್ರಿಯ ಕೂಗು ಕೇಳುವಂತೆ ವ್ಯವಸ್ಥಿತ ಸಂಚು ನಡೆಯಿತಾದರೂ ಸಿದ್ದರಾಮಯ್ಯ ಅದ್ಯಾವ ಒತ್ತಡಕ್ಕೂ ಸೊಪ್ಪು ಹಾಕಲಿಲ್ಲ. 2013 ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಬೇಸತ್ತಿದ್ದ ಜಿ.ಪರಮೇಶ್ವರ್ ಅವರಂಥ ನಾಯಕ ಈ ಅವಧಿಯ ಮೊದಲ ಹಂತದಲ್ಲಿ ಮಂತ್ರಿ ಸ್ಥಾನ ಪಡೆಯದೇ ಅನುಭವಿಸಿದ ಅವಮಾನ ಯಾವುದೇ ಕೋನದಿಂದ ನೋಡಿದರೂ ಐತಿಹಾಸಿಕ ನೋವು. ದಲಿತ ನಾಯಕರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ,  ದೇವನೂರು ಮಹದೇವ ಅವರಂಥ ದಲಿತ ಚಿಂತಕರನ್ನು ಹತ್ತಿರಿಟ್ಟುಕೊಂಡು ಸಿದ್ದರಾಮಯ್ಯ ತಮ್ಮ ರಾಜಕೀಯ ಜಾಣ್ಮೆ ಮೆರೆದರು. ಈ ಸಂದರ್ಭದಲ್ಲೇ ಸಿದ್ದರಾಮಯ್ಯ ಜೆಡಿಎಸ್ ನಿಂದ ತಮ್ಮ ಜತೆಯಲ್ಲೇ ಬಂದಿದ್ದ ಕೆಲವು ಪ್ರಮುಖರಿಗೆ ಮಹತ್ವದ ಸ್ಥಾನ ನೀಡಿದ ಜತೆಯಲ್ಲೇ ಕಾಂಗ್ರೆಸ್ಸಿನ ಕೆಲವರನ್ನೂ ತಮ್ಮ ಅನುಯಾಯಿಗಳಾಗುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಎಂಥದ್ದೇ ಆರೋಪಗಳಿದ್ದರೂ ಎಚ್.ಆಂಜನೇಯ ತರಹದ ದಲಿತ ಸಮುದಾಯದ ನಾಯಕನನ್ನು ಸಚಿವನಾಗಿಸಿ ಪ್ರೋತ್ಸಾಹಿಸಿದ್ದು ಸಿದ್ದರಾಮಯ್ಯ ಅವರ ದೊಡ್ಡ ಗುಣವೇ. ಆದರೆ ತಾವು ಅಧಿಕಾರದಲ್ಲಿದ್ದಾಗಲೆಲ್ಲ ಯಾವುದಾದರೂ ಅಕಾಡೆಮಿ ಅಥವಾ ಪ್ರಾಧಿಕಾರಕ್ಕೆ ತಮ್ಮದೇ ಕುರುಬ ಸಮುದಾಯಕ್ಕೆ ಸೇರಿದ ಎಸ್.ಜಿ.ಸಿದ್ದರಾಮಯ್ಯ ಬಿಟ್ಟರೆ ಬೇರೊಬ್ಬ ಸಾಹಿತಿ ಇಲ್ಲವೆಂಬಂತೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುತ್ತಿದ್ದುದೂ ಸ್ವಜನ ಪಕ್ಷಪಾತದ ಅತ್ಯುತ್ತಮ ಉದಾಹರಣೆಯಾಗಿದೆ. ಕೆಂಪಯ್ಯ ಎಂಬ ತಮ್ಮ ಕುಲಬಾಂಧವ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವರ ಸಲಹೆಗಾರನಾಗಿ ನೇಮಿಸಿದ್ದೂ ಜಾತಿ ಪ್ರೀತಿಯಿಂದಷ್ಟೇ ಅಲ್ಲ, ಎಲ್ಲವೂ ತನ್ನ ಮೂಗಿನ ನೇರಕ್ಕೇ ನಡೆಯಬೇಕೆಂಬ ಲೆಕ್ಕಾಚಾರ ಈ ನೇಮಕದಲ್ಲಿತ್ತು. ಸಚಿವ ಸಂಪುಟದಲ್ಲಿ ತಮಗೆ ಕಿರಿಕಿರಿ ಉಂಟು ಮಾಡದ ದುರ್ಬಲರನ್ನು ಪೋಷಿಸಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಉಂಟು ಮಾಡಬಹುದೆಂಬ ಬಲಿಷ್ಠರನ್ನು ಕಡೆಗಣಿಸಿದ್ದೂ ಸಿದ್ದರಾಮಯ್ಯ ಆಡಳಿತಾವಧಿಯ ಬಹು ಮುಖ್ಯ ದೋಷವೂ ಆಗಿದೆ. ಸಿದ್ದರಾಮಯ್ಯ ಅವರ ಠೇಂಕಾರದ ನಿರ್ಲಜ್ಜ ಪ್ರದರ್ಶನವಾಗಿದ್ದೂ ಇದೇ ಅವಧಿಯಲ್ಲಿ.

ಸಂಪೂರ್ಣ ಜನಪರವಾಗಿದ್ದರೆ ಬಹುಮತ ಕಳೆದುಕೊಂಡರೇಕೆ?

ಇಂಥ ಸಿದ್ದರಾಮಯ್ಯ 2013-18 ರ ಅವಧಿಯಲ್ಲಿ ಸಂಪೂರ್ಣ ಜನಪರ ಆಡಳಿತ ನೀಡಿದ್ದರೆ ಅದೆಂಥ ವಿಷಗಾಳಿಯಾದರೂ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾಗಿತ್ತು. ಸಾಮಾಜಿಕ ಜಾಲತಾಣದ ಭಜನಾಮಂಡಳಿಯ ದೃಢೀಕರಣ ಪತ್ರಗಳು ಯಾವುದೇ ಚುನಾವಣೆಯನ್ನು ಗೆಲ್ಲಿಸಿ ಕೊಡುವುದಿಲ್ಲ. ಮಾಧ್ಯಮಗಳಿಂದ ನಂಬರ್ ಒನ್ ಮುಖ್ಯಮಂತ್ರಿ ಎಂದು ಬರೆಸಿಕೊಂಡರೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಎಸ್.ಎಂ.ಕೃಷ್ಣ ಆಡಳಿತಾವಧಿಯೇ ತೋರಿಸಿಕೊಟ್ಟಿದೆ. ಜನರ ಪ್ರಾಮಾಣಿಕ ಪ್ರೀತಿ ಮತ್ತು ವಿಶ್ವಾಸ ಮಾತ್ರ ನಿಜವಾದ ನಾಯಕನನ್ನು ಮತ್ತೆ ಅಧಿಕಾರಕ್ಕೆ ತಂದು ಕೂರಿಸಬಲ್ಲದು ಎಂಬುದನ್ನು ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು 23 ವರ್ಷ ಮತ್ತು ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ಸುಮಾರು 20 ವರ್ಷ  ಆಳ್ವಿಕೆ ನಡೆಸುವ ಮೂಲಕ ತೋರಿಸಿಕೊಟ್ಟಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ವಿವಿಧ ಹಂತಗಳು ತಂತ್ರಗಾರಿಕೆಯನ್ನು ಪ್ರದರ್ಶಿಸಿದ್ದರೆ ಅವರೊಳಗಿನ ನಿಜ ರಾಜಕಾರಣಿ ಗೋಚರಿಸಿದ್ದು 2018 ರಲ್ಲಿ  ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಾಗಲೇ. ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅದನ್ನು ಅಧಿಕಾರದಿಂದ ದೂರವಿಡಬೇಕೆಂಬ ವರಿಷ್ಠರ ನಿರ್ಧಾರದಂತೆ  ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದ ತಲೆಯಾಡಿಸಿದರೂ ಅಸಹನೆಯಿಂದ ಕುದಿಯತೊಡಗಿದರು. ಮತ್ತೆ ಮುಖ್ಯಮಂತ್ರಿಯಾಗದ ಹತಾಶೆ, ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಬಹುದೆಂಬ ಸಂಶಯ ಸಿದ್ದರಾಮಯ್ಯ ಅವರನ್ನು ಕಾಡತೊಡಗಿತು. ಧರ್ಮಸ್ಥಳದ ರಿಸಾರ್ಟ್ ವೊಂದರಲ್ಲಿ ಕುಳಿತುಕೊಂಡು ಕುಮಾರಸ್ವಾಮಿ ಆಡಳಿತ ಕುರಿತ ತಮ್ಮ ಜತೆಗಾರರೊಂದಿಗೆ ನಡೆಸಿದ ಚರ್ಚೆಯ ವಿಡಿಯೋ ‘ಸೋರಿಕೆ’ಯಾಗುವಂತೆ ನೋಡಿಕೊಂಡರು.  ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ತಮ್ಮ ಅನುಯಾಯಿಗಳಿಗೇ ಟಿಕೆಟ್ ನೀಡಿದ್ದರಿಂದ ಪಕ್ಷದ ವರಿಷ್ಠರ ಮೇಲೆ ತನಗೆ ಬೇಕಾದಂತೆ ಒತ್ತಡ ಹೇರಬಹುದೆಂಬ ಅರಿವು ಸಿದ್ದರಾಮಯ್ಯ ಅವರಿಗಿತ್ತು. ಇದರ ಫಲವಾಗಿಯೇ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷರಾದರು. ಸಿದ್ದರಾಮಯ್ಯ ಅವರ ಶಕ್ತಿ, ತಂತ್ರಗಾರಿಕೆಯ ಮಟ್ಟ ಈ ಬೆಳವಣಿಗೆಯಿಂದಲೇ ಅರ್ಥವಾಗುತ್ತದೆ. ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದು ಸಾಧ್ಯವಿರಲಿಲ್ಲ, ಇನ್ನೊಂದು ಪಕ್ಷವನ್ನು ಕಟ್ಟುವುದು ಅಹಿಂದ ಹೋರಾಟಕ್ಕೆ ತರ್ಪಣ ಬಿಟ್ಟಾಗಲೇ ಕಮರಿಹೋಗಿತ್ತು. ವಯಸ್ಸು ಹೊಸತೊಂದು ಪಕ್ಷ ಸಂಘಟನೆಗೆ ಅವಕಾಶ ನೀಡುತ್ತಿರಲಿಲ್ಲ. ಕುರುಬ ಸಮುದಾಯದ ಬಲಾಢ್ಯರ ಹಣವೆಲ್ಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವವರೆಗಿನ ಏಳು ವರ್ಷಗಳ ಅವಧಿಗೆ ಖರ್ಚಾಗಿ ಹೋಗಿತ್ತು. ಆ ಹೊತ್ತಿಗಾಗಲೇ ಕೆಲವು ಕುರುಬ ಸಿರಿವಂತ ಪ್ರಮುಖರು ಸಿದ್ದರಾಮಯ್ಯ ಸಖ್ಯವನ್ನು ತೊರೆದಿದ್ದರು. ಹೀಗಾಗಿ ಕಾಂಗ್ರೆಸ್ ನಲ್ಲೇ ಇದ್ದು ತನ್ನ ಪ್ರಾಮುಖ್ಯ ಒಂದಿಷ್ಟೂ ಕಡಿಮೆಯಾಗದಂತೆ ನೋಡಿಕೊಳ್ಳುವುದೇ ಸಂದರ್ಭದ ಅಗತ್ಯವಾಗಿತ್ತು. ಅದಕ್ಕೆ ತಕ್ಕಂತೆ ಸಿದ್ದರಾಮಯ್ಯ ಹೆಜ್ಜೆ ಇಡತೊಡಗಿದರು. 

ಆಕ್ಟೋಪಸ್ ಹಿಡಿತ   

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೊದಲು ಸಂತೃಪ್ತಿ ಪಡಿಸಿದ್ದು ಕೆ.ಸಿ.ವೇಣುಗೋಪಾಲ್ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು. ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2012 ರಲ್ಲಿ ಇದೇ ವೇಣುಗೋಪಾಲ್ ಅಂದಿನ ಕೇರಳ ರಾಜ್ಯ ಸಚಿವ ಎ.ಪಿ.ಅನಿಲ್ ಕುಮಾರ್ ನಿವಾಸದಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರೆಂದು ಆರೋಪಿಸಿದ್ದರು. ಮಾಜಿ ಮುಖ್ಯಮಂತ್ರಿ ಊಮನ್ ಚಾಂಡಿ ವಿರುದ್ಧವೂ ಸರಿತಾ ನಾಯರ್ ಇದೇ ರೀತಿಯ ಆರೋಪ ಮಾಡಿದ್ದರು. ಈ ಆರೋಪ ಸಂಬಂಧ ಉನ್ನತ ಮಟ್ಟದ ತನಿಖೆ ನಡೆದರೂ ಕ್ರಮೇಣ ಮುಚ್ಚಿ ಹೋಯಿತು. ಇಂಥ ವೇಣುಗೋಪಾಲ್ ದೆಹಲಿ ಮಟ್ಟದಲ್ಲಿ ರಾಹುಲ್ ಗಾಂಧಿಗೆ ಆಪ್ತರಾಗಿದ್ದನ್ನು ಅರಿತು ಅವರ ಬೇಕುಬೇಡಗಳನ್ನು ಪೂರೈಸಿ ಸಂತೃಪ್ತರಾಗಿಸಿದ್ದರಿಂದಲೇ ಕಾಂಗ್ರೆಸ್ ವರಿಷ್ಠರಿಗೆ ಸಿದ್ದರಾಮಯ್ಯ ವಿರುದ್ಧದ ನಕಾರಾತ್ಮಕ ಅಂಶಗಳ ವರದಿ ಹೋಗುವುದು ಸಾಧ್ಯವೇ ಇರಲಿಲ್ಲ. ಸಿದ್ದರಾಮಯ್ಯ ಉಳಿವಿನಲ್ಲಿ ವೇಣುಗೋಪಾಲ್ ಮಹತ್ವದ ಪಾತ್ರ ವಹಿಸುವುದು ಹೀಗೆ ಸಾಧ್ಯವಾಗಿತ್ತು. 

ಈ ಹಿಂದೆ ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ನೀಡುವುದು ಅನಿವಾರ್ಯವಾದಾಗ ಎಂ.ಕೃಷ್ಣಪ್ಪ, ಬಿ.ಕೆ.ಹರಿಪ್ರಸಾದ್ ಮತ್ತು ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿತ್ತಾದರೂ ಈ ಮೂವರಲ್ಲಿ ಯಾರೂ ಅಧ್ಯಕ್ಷರಾಗದಂತೆ ಸಿದ್ದರಾಮಯ್ಯ ನೋಡಿಕೊಂಡರು. ಬಿ.ಕೆ.ಹರಿಪ್ರಸಾದ್ ಕೂಡ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಗುಂಡೂರಾವ್ ಕಾಲದ ದಾದಾ ಸಂಸ್ಕೃತಿಯಿಂದ ಪ್ರಗತಿಪರ ಚಿಂತನೆಯ ನಾಯಕನೆಂದು ಗುರುತಿಸಿಕೊಳ್ಳುವಂತೆ ಬದಲಾದವರು. ವಿಶಿಷ್ಠ ಘನತೆ, ಗಾಂಭೀರ್ಯದ ಹರಿಪ್ರಸಾದ್ ಧನಬಲವಿಲ್ಲದಿದ್ದರೂ ಸೋನಿಯಾ ನಿಷ್ಠರಾಗಿ ಅವರ ಬಳಗದಲ್ಲಿ ಸಮೀಪದಿಂದಲೇ ಗುರುತಿಸಿಕೊಂಡ ಮೂಲ ಕಾಂಗ್ರೆಸ್ಸಿಗರು. ಅವರನ್ನು ತನಗೆ ಬೇಕಾದಂತೆ ಬಾಗಿಸುವುದು ಸಾಧ್ಯವಿಲ್ಲ ಎನ್ನುವ ಅರಿವು ಸಿದ್ದರಾಮಯ್ಯ ಅವರಿಗಿತ್ತು. ಹೀಗಾಗಿ ಅವರೂ ಈ ಪಟ್ಟಕ್ಕೆ ಬಾರದಂತೆ ಮಾಡುವುದು ಕಷ್ಟವಾಗಿರಲಿಲ್ಲ. ಡಿ.ಕೆ.ಶಿವಕುಮಾರ್ ಧನಬಲ, ಸ್ನಾಯುಬಲ, ಜಾತಿಬಲ ಇರುವ ಒಕ್ಕಲಿಗ ಪ್ರಮುಖ. ಎಸ್.ಎಂ.ಕೃಷ್ಣ, ಧರಂಸಿಂಗ್ ಅವರಂಥವರನ್ನೇ ತನಗೆ ಬೇಕಾದಂತೆ ಬಳಸಿಕೊಂಡಿದ್ದ ಬುದ್ಧಿವಂತ. ಕೆಪಿಸಿಸಿ ಅಧ್ಯಕ್ಷ ಗಾದಿ ಸಿಕ್ಕರೆ ಕೇಳಬೇಕೆ? ಡಿ.ಕೆ. ಕೂಡ ಅಧ್ಯಕ್ಷರಾಗುವುದು ಸಿದ್ದರಾಮಯ್ಯನವರಿಗೆ ಬೇಕಿರಲಿಲ್ಲ. ಎಂ.ಕೃಷ್ಣಪ್ಪ ಧನಬಲ, ಜಾತಿ ಬಲದ ಮನುಷ್ಯ. ಹೀಗಾಗಿ ಸಿದ್ದರಾಮಯ್ಯ ತಾವು ಹೇಳಿದಂತೆ ತಲೆಯಾಡಿಸುವ, ತಮ್ಮ ಮಾತುಗಳಿಗೆ ಬಾಯಾಗುವ ವ್ಯಕ್ತಿಯೊಬ್ಬರನ್ನು ಹುಡುಕಿಕೊಂಡರು. ಆತ ದಿನೇಶ್ ಗುಂಡೂರಾವ್. ದೀರ್ಘಾವಧಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ದಾಖಲೆ ಹೊಂದಿರುವ ಈತ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪುತ್ರ ಎಂಬುದನ್ನು ಬಿಟ್ಟರೆ ಅಂಥ ವಿಶೇಷ ಗುಣಲಕ್ಷಣಗಳಿಲ್ಲ. ಮುಸ್ಲಿಂ ಸಮುದಾಯದ ತಬುಸ್ಸಂ(ಟಬು) ಎಂಬವರನ್ನು ಮದುವೆಯಾದರೂ ಬ್ರಾಹ್ಮಣ ಜಾತಿ ಪ್ರೀತಿಯಿಂದ ಮುಕ್ತರಾದಂತೆ ಕಾಣುತ್ತಿಲ್ಲ.ಈ ಕಾರಣದಿಂದಲೇ ಕಾರವಾರದಲ್ಲಿ ಅನಂತಕುಮಾರ್ ಹೆಗಡೆ ಮತ್ತು ಧಾರವಾಡದಲ್ಲಿ ಪ್ರಲ್ಹಾದ್ ಜೋಷಿ ಎಂಬ ಇಬ್ಬರು ಬಿಜೆಪಿ ಅಭ್ಯರ್ಥಿಗಳಿಗೆ ತೊಡಕಾಗದಂತೆ ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದರೆಂಬ ಆರೋಪ ಇದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ದಿನೇಶ್ ಗುಂಡೂರಾವ್ ಪತ್ನಿ ಟಬು ಅವರೇ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿ ಕೆಲವು ಕೋಟಿಗಳಷ್ಟು ಹಣ ಪಕ್ಷದಿಂದ ಪಡೆದುಕೊಂಡಿದ್ದಾರೆ ಎಂಬ ಗುಸುಗುಸು ಕೆಪಿಸಿಸಿ ಕಚೇರಿಯಲ್ಲಿ ಕೇಳಿ ಬರುತ್ತಿದೆ. 

ಇಂಥ ದಿನೇಶ್ ಗೆ ಸಂಘಟನಾ ಸಾಮರ್ಥ್ಯವಿಲ್ಲ, ಸ್ವಂತ ಮೆದುಳು, ಬೆನ್ನುಮೂಳೆ ಇಲ್ಲ, ಜಾತಿ ಬಲ ಇಲ್ಲ. ಪಕ್ಷವನ್ನು ಇನ್ನಷ್ಟು ವಿಸ್ತೃತ ನೆಲೆಯಲ್ಲಿ ಕೊಂಡೊಯ್ಯುವ ನಾಯಕತ್ವದ ಲಕ್ಷಣವೂ ಇಲ್ಲ. ತಾವು ಹೇಳಿದಂತೆ ಕೇಳುವ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಅವರಿಗೆ ಬೇಕಿತ್ತೇ ಹೊರತು ಪಕ್ಷಕ್ಕಂತೂ ಎಳ್ಳಷ್ಟೂ ಉಪಯೋಗವಾಗಲಿಲ್ಲ. ಕಳೆದ ಚುನಾವಣೆಯಲ್ಲಿ ಅವರ ಶಕ್ತಿ, ಸಾಮರ್ಥ್ಯದ ಅರಿವು ವರಿಷ್ಠರಿಗಾಗಿದೆ. 

ಹಾಗೆಯೇ ಮೂಲ ಕಾಂಗ್ರೆಸ್ಸಿಗರಾದವರಲ್ಲಿ ಕೆಲವರನ್ನೂ ಸಿದ್ದರಾಮಯ್ಯ ತಮ್ಮ ಅನುಯಾಯಿಗಳಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಂಥವರಲ್ಲಿ ಪ್ರಮುಖರು ಕೆ.ಜೆ.ಜಾರ್ಜ್ ಅರ್ಥಾತ್ ಕೇಳಚಂದ್ರ ಜೋಸೆಫ್ ಜಾರ್ಜ್.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೃಹ ಸಚಿವರಾಗಿದ್ದವರು, ಮೈತ್ರಿ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿದ್ದವರು. ಕ್ರೈಸ್ತರಾಗಿರುವುದರಿಂದ ಅಲ್ಪಸಂಖ್ಯಾತರೊಬ್ಬರಿಗೆ ಮಹತ್ವದ ಖಾತೆ ಕೊಟ್ಟರೆಂಬ ಗೌರವವೂ ಸಿಗುತ್ತದೆ, ಸೋನಿಯಾ ಗಾಂಧಿ ಅವರ ಬಳಿಯೂ ಧರ್ಮದ ಕಾರ್ಡ್ ಬಳಸುವುದಕ್ಕೂ ನೆರವಾಗಬಹುದು ಎನ್ನುವ ಲೆಕ್ಕಾಚಾರವೂ ಸಿದ್ದರಾಮಯ್ಯ ಅವರಿಗೆ ಇದ್ದಿರಬಹುದು. ಆದರೆ ವಾಸ್ತವದಲ್ಲಿ ವ್ಯಾವಹಾರಿಕ ಕಾರಣಗಳೇ ಈ ಇಬ್ಬರನ್ನೂ ಹತ್ತಿರ ತಂದಿದೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಾರೆ. ಇಂಥ ಜಾರ್ಜ್, ಸಿದ್ದರಾಮಯ್ಯ ಆಪ್ತ ಬಳಗ ಸೇರಿದ್ದಷ್ಟೇ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರವೂ ತಮ್ಮ ಹೆಸರಿಗೆ ಮಂಜೂರಾಗಿದ್ದ ಕಾವೇರಿ ಬಂಗಲೆಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡುವುದಕ್ಕೆ ಅವಕಾಶವನ್ನೂ ಕಲ್ಪಿಸಿಕೊಟ್ಟಿದ್ದರು.  

ಜನತಾ ಪರಿವಾರದ ದಿನಗಳಿಂದಲೂ ಹತ್ತಿರಿರುವ ಸಿ.ಎಂ.ಇಬ್ರಾಹಿಂ, ಕೃಷ್ಣ ಬೈರೇಗೌಡ, ವಿ.ಎಸ್.ಉಗ್ರಪ್ಪ, ಜಮೀರ್ ಅಹ್ಮದ್ ಖಾನ್, ಯುವಕಾಂಗ್ರೆಸ್ ಮುಖಂಡ ರಿಜ್ವಾನ್ ಕಾಂಗ್ರೆಸ್ ಸೂತ್ರರಾಗಿ ಬೆಳೆದಿರುವ ಸಿದ್ದರಾಮಯ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಇತರ ಪ್ರಮುಖರು. ಸಿದ್ದರಾಮಯ್ಯ ಪರವಾಗಿ ಯಾವ್ಯಾವ ವೇದಿಕೆಗಳಲ್ಲಿ ಹೇಗೆ ಮಾತಾಡಬೇಕು, ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂಬುದನ್ನು ಈ ಗುಂಪು ಪ್ರಾಮಾಣಿಕವಾಗಿ ಮಾಡಿ ತೋರಿಸುತ್ತಿದೆ. 

ಮೈತ್ರಿ ಸರ್ಕಾರ ಬಹುಮತ ಕಳೆದುಕೊಳ್ಳಲು ಕಾರಣರಾದ ಅನರ್ಹ ಶಾಸಕರಲ್ಲಿ ಬಹುತೇಕರು ಸಿದ್ದರಾಮಯ್ಯ ಅನುಯಾಯಿಗಳೇ. ಸರ್ಕಾರ ಪತನವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಮನ್ವಯ ಸಮಿತಿ ತನ್ನ ಪ್ರಾಮುಖ್ಯ ಕಳೆದುಕೊಂಡಿತು. ಸಹಜವಾಗಿಯೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನದತ್ತ ಕಣ್ಣಿಟ್ಟರು. ಎಚ್.ಕೆ.ಪಾಟೀಲ್, ಡಿ.ಕೆ.ಶಿವಕುಮಾರ್ ಹೆಸರುಗಳೂ ಈ ಸ್ಥಾನಕ್ಕೆ ಕೇಳಿ ಬಂದಿತ್ತಾದರೂ ಅವರ್ಯಾರಿಗೂ ಒಲಿಯದಂತೆ ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸಿದರು. ಮೂಲ ಕಾಂಗ್ರೆಸ್ಸಿಗರಾದ ಹುಲಕೋಟಿ ಹುಲಿ ಎಂದೇ ಕರೆಸಿಕೊಂಡಿದ್ದ ಕೆ.ಎಚ್.ಪಾಟೀಲರ ಪುತ್ರ. ಸದ್ಯ ಗದಗ ವಿಧಾನಸಭಾ ಕ್ಷೇತ್ರದ ಸದಸ್ಯ. ವಿವಿಧ ಖಾತೆಗಳಲ್ಲಿ ಸಚಿವರಾಗಿರುವ ಅನುಭವ ಇರುವ ನಾಯಕ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಲು ಎಲ್ಲ ರೀತಿಯಲ್ಲೂ ಅರ್ಹತೆ  ಇರುವ ಮನುಷ್ಯ. ಹಾಗೇ ಡಿ.ಕೆ.ಶಿವಕುಮಾರ್. ‘ಸರ್ವಬಲ ಸಂಪನ್ನ’ನಾಗಿರುವ ಡಿ.ಕೆ.ವರ್ತಮಾನದ ವ್ಯಾವಹಾರಿಕ ರಾಜಕಾರಣಕ್ಕೆ ಬೇಕಿರುವ ‘ಸೂಕ್ತ’ ಅರ್ಹತೆಗಳಿರುವ ವ್ಯಕ್ತಿ. ಇವರಿಬ್ಬರಲ್ಲಿ ಯಾರಾದರೊಬ್ಬರು ವಿರೋಧ ಪಕ್ಷದ ನಾಯಕರಾಗಬೇಕೆಂದು ಮೂಲ ಕಾಂಗ್ರೆಸ್ಸಿಗರು ಬಯಸಿದ್ದರು. ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ಸ್ಥಾನವನ್ನೂ ಪಡೆದಿರುವ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲೇ ದೇವೇಗೌಡರಂತೆ ಇದೇ ತಮ್ಮ ಪಾಲಿನ ಕೊನೇ ಚುನಾವಣೆ ಎಂದು ಹೇಳಿಕೊಂಡಿದ್ದರು. ಆದರೆ ರಾಜಕೀಯ ಅಧಿಕಾರ ದಾಹದ ಅವರ ಆಳದಲ್ಲಿ ಇನ್ಯಾವ ಆಸೆಗಳಿವೆಯೋ? ಅಧಿಕಾರದಿಂದ ನಿರ್ಗಮಿಸುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ ಎನ್ನುವುದನ್ನು ಅವರ ನಡವಳಿಕೆಗಳೇ ಸಾರಿ ಹೇಳುತ್ತಿವೆ. ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆಲ್ಲ ಸಿದ್ದರಾಮಯ್ಯ ಬಯಸಿದಂತೆಯೇ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯಂಥ ಪ್ರಮುಖ ಅಧಿಕಾರ ಕಳೆದುಕೊಂಡರೂ ಅಧಿಕಾರದ ಯಾವುದೇ ಹಂತದಲ್ಲೂ ತನ್ನದೇ ಮಾತು ನಡೆಯಬೇಕೆಂಬ ಹಠ ತೊಟ್ಟು ಅದರಂತೆ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಅವರಂಥ ಇನ್ನೊಬ್ಬ ನಾಯಕನನ್ನು ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿಲ್ಲ. ಅವರೇ ಕಾಂಗ್ರೆಸ್ ಪಕ್ಷದ ನಿಜವಾದ ಸೂತ್ರಧಾರ. ಉಳಿದವರೆಲ್ಲ ಸಿದ್ದರಾಮಯ್ಯ ಆಡಿಸುವ ಗೊಂಬೆಗಳಂತೆ ಕಾಣುತ್ತಿದ್ದಾರೆ. ಇತರ ಕಾಂಗ್ರೆಸ್ ನಾಯಕರ ಬಗ್ಗೆ ಅದೇಕೋ ಅನುಕಂಪ ಹುಟ್ಟುತ್ತಿದೆ.