ತನ್ನ ಸಾಧನೆಯ ವಿವರಗಳು ಸಚಿನ್ ಗೆ ನೆನಪುಂಟೇ?

ತನ್ನ ಸಾಧನೆಯ ವಿವರಗಳು ಸಚಿನ್ ಗೆ ನೆನಪುಂಟೇ?

ಮೊನ್ನೆ ದುರ್ಗಾಷ್ಠಮಿ ಪ್ರಯುಕ್ತ ಸ್ನೇಹಿತರ ಮನೆಯಲ್ಲಿ ಸಂಗೀತ ಕಚೇರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಒಂದು ಕರ್ನಾಟಕ ಶಾಸ್ತ್ರೀಯ ಸಂಗೀತ, ಎರಡನೆಯದು ಹಿಂದೂಸ್ತಾನಿ ಗಾಯನ. ಅವರನ್ನು ನೆರೆದ ಸೀಮಿತ ಆಹ್ವಾನಿತರಿಗೆ ಪರಿಚಯಿಸುವ ಜವಾಬ್ದಾರಿ ನನಗೆ ವಹಿಸಲಾಗಿತ್ತು. ಆ ಇಬ್ಬರು ಸಂಗೀತಗಾರರ ಪರಿಚಯ ನನಗಿರಲಿಲ್ಲ. ಮುಂಚಿತವಾಗಿಯೇ ಅವರ ಸಾಧನೆಯ ಪಟ್ಟಿಯನ್ನು ನನಗೆ ಒದಗಿಸಲಾಗಿತ್ತು. ನಾನು ಅದರತ್ತ ಒಮ್ಮೆ ಕಣ್ಣೋಡಿಸಿದ್ದೆ. ಅದನ್ನು ಓದುವುದು ನನಗಿಷ್ಟವಿರಲಿಲ್ಲ. ಆ ವಿದುಷಿ-ವಿದ್ವಾಂಸರ ಸಾಧನೆ ವಿಶಿಷ್ಠವೇ ಆಗಿದ್ದರು ಅದನ್ನು ಸುದೀರ್ಘವಾಗಿ ಓದಿ ರಸಿಕರ ತಾಳ್ಮೆಯನ್ನು ಪರೀಕ್ಷಿಸುವುದು ಬೇಡವೆಂದು ಮುಂಚೆಯೇ ನಿರ್ಧರಿಸಿದ್ದೆ. ಓದಿದರೂ ಬಹಳಷ್ಟು ಮಂದಿ ಅದನ್ನು ಕೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿರುವುದಿಲ್ಲ; ಇದ್ದರೂ ಅದನ್ನು ಮನನ ಮಾಡುವುದಿಲ್ಲ. ಆದರೆ, ಆ ಸಾಧಕರಿಗೆ ಅಗೌರವ ಸೂಚಿಸದಂತೆ ಜಾಗರೂಕನಾಗಿ ಅವರ ಬಗ್ಗೆ ಮಾತನಾಡಬೇಕಾದ ಅರಿವು ನನಗಿತ್ತು. ವಾಸ್ತವವಾಗಿ,  ಅಂತಹ ಸಾಧನೆಯ ಪಟ್ಟಿಯನ್ನು ಪ್ರವರ ಒಪ್ಪಿಸುವಂತೆ ಓದುವುದೇ ಕಲಾವಿದರಿಗೆ ತೋರುವ ಅಗೌರವ. "ಸಚಿನ್ ತೆಂಡುಲ್ಕರ್ ನ ದಾಖಲೆಗಳು ಅನೇಕ, ಅದನ್ನು ಬದಿಗಿರಿಸಿ ಆತನ ಬ್ಯಾಟಿಂಗ್ ಕಲಾತ್ಮಕತೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಹಾಗೆಯೇ ಈಗಲೂ ಇವರ ಸಂಗೀತವನ್ನು ಸವಿಯೋಣ, ಅವರ ಸಾಧನೆಗಳನ್ನು ಪಟ್ಟಿಮಾಡುವುದು ಇಲ್ಲಿ ಬೇಡ" ಎಂದು ಹೇಳುತ್ತಾ ನನ್ನ ಪರಿಚಯ ಭಾಷಣವನ್ನು ಮೊಟಕುಗೊಳಿಸಿದೆ.

ಅಂಕಿ-ಅಂಶಗಳನ್ನು ಲೇಖನದ ಮೂಲದ್ರವ್ಯವಾಗಿಸುವುದಕ್ಕೆ ನನ್ನ ಪ್ರತಿರೋಧವಿದೆ ಎಂಬುದನ್ನು ಮುಂಚೆಯೇ ತಿಳಿಸಿದ್ದೇನೆ. ಅಪರೂಪಕ್ಕೆ, ಲೇಖನಕ್ಕೆ ಪೂರಕವಾಗಿ ಅವನ್ನು ಬಳಸಿದರೆ ತಪ್ಪಿಲ್ಲ. ಅಂಕಿ-ಅಂಶಗಳನ್ನು ನಮೂದಿಸಲೇ ಬರೆಯಲ್ಪಡುವ ಲೇಖನ ಚುನಾವಣಾ ಫಲಿತಾಂಶದಂತಿರುತ್ತದೆ. ಇಂತಿಂಥ ಅಭ್ಯರ್ಥಿಗೆ ಇಷ್ಟಿಷ್ಟು ಓಟು ಬಿದ್ದವೆಂದು ಸೂಚಿಸುವ ಶುಷ್ಕ ಅಂಕಿಗಳಾಗಿರುತ್ತವೆ.

ಕ್ರಿಕೆಟ್ ಅಂತಹ ಕ್ರೀಡೆಯಲ್ಲಂತೂ ಅಂಕಿ-ಅಂಶಗಳಿಗೆ ವಿಶೇಷವಾದ ಮಹತ್ವ. ಮ್ಯಾಚನ್ನು ವರದಿ ಮಾಡುವ ಕ್ರೀಡಾ ವರದಿಗಾರರಿಗೆ, ರೇಡಿಯೊ, ಟಿವಿಗಳಲ್ಲಿ ವೀಕ್ಷಕ ವಿವರಣೆ ನೀಡುವವರಿಗೆ ಅಂಕಿ-ಅಂಶ ತಜ್ಞರು ಆಗಿಂದಾಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಿರುತ್ತಿರುತ್ತಾರೆ. ಹಾಗಾಗಿ ವರದಿಗಾರರು, ವೀಕ್ಷಕ ವಿವರಣಕಾರರು ರಸಾನುಭವದಿಂದ ವಂಚಿತರಾಗುವುದಿಲ್ಲ. ಕ್ರೀಡಾ ವರದಿಗಾರರ ಸೌಭಾಗ್ಯವೇನೆಂದರೆ ಕಾಯಕ ಮತ್ತು ಮನರಂಜನೆ ಒಂದಕ್ಕೊಂದು ಹಾಸುಹೊಕ್ಕಾಗಿರುವುದು. ಕಾಯಕವೇ ಮನರಂಜನೆ, ಮನರಂಜನೆಯೇ ಕಾಯಕ ಅಂದರೂ ನಡೆಯುತ್ತದೆ. ಮೈದಾನದಲ್ಲಿನ ಇಬ್ಬರು ಅಂಪೈರ್ ಗಳಿಗೂ ಅಂತಹ ಸುಯೋಗ ಇಲ್ಲವೆಂದೇ ಹೇಳಬೇಕು. ಕಿವಿ, ಕಣ್ಣು, ಮನಸ್ಸು ಸದಾ ಚುರುಕಾಗಿರಬೇಕಾಗುತ್ತದೆ. ಆಟದ ಮೈದಾನದ ಸುತ್ತ ಸಿಂಹಾವಲೋಕನ ಬೀರುತ್ತಿರುತ್ತಾರೆ. ಜತೆಜತೆಗೆ ಬೌಲರ್ ಬೌಲ್ ಮಾಡುವಾಗ ಪ್ರತಿ ಎಸೆತವನ್ನೂ ಎಣಿಸುವುದಲ್ಲದೇ  ಆತ ಹೆಜ್ಜೆ ಎಲ್ಲಿಟ್ಟ, ಚೆಂಡು ಎಲ್ಲಿ ಪುಟವಿಟ್ಟಿತು, ಬ್ಯಾಟ್ಸ್ ಮ್ಯಾನ್ ನ ಪ್ಯಾಡ್ ಗೆ ಎಷ್ಟು ಎತ್ತರದಲ್ಲಿ ಬಾಲು ಬಡಿಯಿತು, ಬಡಿಯುವ ಮುನ್ನ ಬ್ಯಾಟನ್ನು ಮುಟ್ಟಿತೇ ಮುಂತಾದ ವಿವರಗಳತ್ತ ಹದ್ದಿನ ಕಣ್ಣು, ನಾಗರ ಕಿವಿಗಳೊಂದಿಗೆ ಕಾರ್ಯತತ್ಪರವಾಗಿರುತ್ತಾರೆ. ತಂತ್ರಜ್ಞಾನ ಬೆಳೆದಿದ್ದು,ತಾಂತ್ರಿಕ ನೆರವಿನೊಂದಿಗೆ ಕಾರ್ಯ ನಿರ್ವಹಿಸುತ್ತಾರೆ ನಿಜ, ಆದರೆ ಅಂತಹ ಬೆಂಬಲ ತಾವು ಮಾಡುವ ತಪ್ಪನ್ನು ಇಡೀ ಜಗತ್ತಿಗೇ ಸಾರಿಹೇಳುತ್ತದೆ ಎಂಬುದೂ ಅಷ್ಟೇ ನಿಜ. ಆ ಕಾರಣದಿಂದ, ತಾಂತ್ರಿಕ ನೆರವಿನಿಂದ ಸಹಾಯಕ್ಕಿಂತಲೂ ಮುಜುಗರವೇ ಜಾಸ್ತಿ. ಮತ್ತೆ ಮತ್ತೆ ನಿರ್ಣಯ ತಪ್ಪೆಂದು ಘೋಷಿಲ್ಪಟ್ಟಾಗ ಅಂಪೈರ್ ಕೆಲಸ ಕಳೆದುಕೊಳ್ಳುತ್ತಾನೆ.  ಇಂತಹ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವಾಗ ಆಟವನ್ನು ನೋಡಿ ಆನಂದಿಸುವುದು ಕಷ್ಟ ಸಾಧ್ಯ.

ಬ್ಯಾಟ್ಸ್ ಮ್ಯಾನ್ ಇರಲಿ, ಬೌಲರ್ ಇರಲಿ, ವಿಕೆಟ್ ಕೀಪರ್ ಅಥವಾ ಫೀಲ್ಡರ್ ಇರಲಿ, ಬೇರೆ ಯಾವುದೇ ಕ್ರೀಡೆಯಲ್ಲಿಯಂತೆ ಆಟದಲ್ಲಿ ತನ್ಮಯನಾಗಿರುತ್ತಾನೆ. ಅಪಾರವಾದ ಏಕಾಗ್ರತೆ ಬೇಕಾಗುತ್ತದೆ.  ಇದ್ದುದರಲ್ಲಿ ಬ್ಯಾಟ್ಸಮನ್ ಒಬ್ಬನ ಆಟವನ್ನು ತಕ್ಕಮಟ್ಟಿಗೆ ಆನಂದಿಸುವುದು ನಾನ್-ಸ್ಟ್ರೈಕರ್ ಮತ್ತು ಡಗ್-ಔಟ್ ನಲ್ಲಿ ಕೂತ ತಂಡದ ಸಹಪಾಠಿಗಳು, ಇತರೆ ಬೆಂಬಲಿಗ ಸದಸ್ಯರು. ಆನಂದಿಸುತ್ತಲೇ ಸ್ಕೋರ್ ಬೋರ್ಡ್ ನತ್ತಲೂ ಒಂದು ಕಣ್ಣಿಟ್ಟಿರುತ್ತಾರೆ. ಯಾವುದೇ  ಆಟಗಾರ ದಾಖಲೆ ನಿರ್ಮಿಸಲೆಂದು ಆಡುವುದಿಲ್ಲ. (ಆ ಉದ್ದೇಶದಿಂದ) ಆಡಿದ್ದೇ ಆದರೆ, ತನ್ಮಯತೆ ಕಳೆದುಕೊಂಡು ಸಮರ್ಪಕವಾಗಿ ಆಡಲಿಕ್ಕಾಗದೇ ದಾಖಲೆಯನ್ನು ನಿರ್ಮಿಸಲಾರ. ಉತ್ತಮ ಆಟ ಆಡುವುದಕ್ಕಷ್ಟೇ ಆತ ಗಮನ ಕೊಡಬೇಕಾಗುತ್ತದೆ, ಹಾಗೆ ಮಾಡಿದಾಗ ದಾಖಲೆಗಳು ತಾವಾಗಿಯೇ ನಿರ್ಮಿಸಲ್ಪಡುತ್ತವೆ, ಹಳೆಯ ದಾಖಲೆಗಳು ಮುರಿದು ಬೀಳುತ್ತವೆ.

ದಾಖಲೆ ನಿರ್ಮಿಸುವತ್ತ ಸಚಿನ್ ತೆಂಡುಲ್ಕರ್ ಗಮನ ಹರಿಸಿದಿದ್ದಿದ್ದರೆ ಆತ ದಾಖಲೆಗಳ ಸರದಾರನಾಗುತ್ತಿರಲಿಲ್ಲ. ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ, ವಿಶ್ವ ಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ, ಮುಂತಾದ 19 ಗಿನ್ನೆಸ್ ದಾಖಲೆಗಳನ್ನು ಹೊಂದಿರುವ ಸಚಿನ್ ಅತ್ಯಂತ ಹೆಚ್ಚು ದಾಖಲೆ ನಿರ್ಮಿಸಿರುವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.  ಕ್ರಿಕೆಟ್ ಪ್ರೇಮಿಯಾದ ನನ್ನಲ್ಲಿ ಕುತೂಹಲ ಕೆರಳಿಸುವ  ಪ್ರಶ್ನೆಯೊಂದಿದೆ: ಸಚಿನ್ ಗೆ ತಾನು ನಿರ್ಮಿಸಿರುವ ಎಲ್ಲಾ ದಾಖಲೆಗಳ ನೆನಪಿದೆಯೇ? ಯಾವ ಮ್ಯಾಚ್ ಎಂದು ಆಡಿದೆನೆಂದು ಹೇಳಬಲ್ಲರೇ? ಯಾವ ತಂಡದ ವಿರುದ್ಧ ಎಷ್ಟು ರನ್ ಗಳಿಸಿದೆನೆಂದು ದಾಖಲೆ ಪುಸ್ತಕವನ್ನೂ, ಡೈರಿಯನ್ನೋ ನೋಡದೇ ಹೇಳಬಲ್ಲರಾ? ತಾವು ಪ್ರತಿನಿಧಿಸಿ ಭಾರತ ವಿಜಯ ಗಳಿಸಿದ ಕಟ್ಟ ಕಡೆಯ ವಿಶ್ವ ಕಪ್ ಪಂದ್ಯದ ಫೈನಲ್ ನಲ್ಲಿ ತಂಡದ ಮೊದಲ ಏಳು ಬ್ಯಾಟ್ಸ್ ಮ್ಯಾನ್ ಗಳು ಗಳಿಸಿದ ರನ್ ಎಷ್ಟೆಂದು ಹೇಳಲಿಕ್ಕೆ ಸಾಧ್ಯವೇ? ಅವರು ಈವರೆಗೆ ಆಡಿದ ಪಂದ್ಯಗಳಲ್ಲಿ ಉಪಯೋಗಿಸಿದ ಬ್ಯಾಟ್ ಗಳ ಸಂಖ್ಯೆ ಗೊತ್ತೇ? ಈ ಬಗೆಯ ನೂರಾರು ಪ್ರಶ್ನೆಗಳನ್ನು ಅವರಲ್ಲಿ ಕೇಳಬೇಕೆನಿಸುತ್ತದೆ. ಅವರನ್ನು ಭೇಟಿ ಮಾಡಿದ್ದು ಒಮ್ಮೆಯೇ. ಸಮಯದ ಅಭಾವದಿಂದ ಕೇಳಲಿಕ್ಕಾಗಲಿಲ್ಲ, ಆದರೆ, ಕೇಳಿ, ಅವರನ್ನು ಕ್ಲೀನ್ ಬೋಲ್ಡ್ ಮಾಡುವ ಉದ್ದೇಶವಿದೆ.

ರನ್ ಗಳ, ದಾಖಲೆಗಳ ರಾಶಿಯಲ್ಲಿ ಹುದುಗಿ ಹೋಗಿರುವ ಸಚಿನ್ ರ ಮಾತು ಬೇಡ. ಕಳೆದ ವಾರವಷ್ಟೇ ವಿಶಾಖ ಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ಇನ್ನಿಂಗ್ ನಲ್ಲಿ ಮಿಂಚಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವೇಗಿ ಮೊಹಮ್ಮದ್ ಶಮಿಯನ್ನು ಪಂದ್ಯದ ಎರಡು ಇನ್ನಿಂಗ್ಸ್ ನ ತಮ್ಮೊಬ್ಬರ ಬೌಲಿಂಗ್ ವಿವರಗಳನ್ನು ಹೇಳಲು ಕೇಳಿ.

ಚೆಕ್ ಲೇಖಕ ಮಿಲನ್ ಕುಂದೇರರ ಮುಖ್ಯ ಕಾದಂಬರಿಗಳಲ್ಲೊಂದಾದ "ಇಮ್ಮಾರ್ಟಾಲಿಟಿ"ಯಲ್ಲಿ ರೂಬೆನ್ ಎಂಬ ಪಾತ್ರಧಾರಿಯೊಬ್ಬನಿದ್ದಾನೆ. ಅವನು ಸ್ತ್ರೀ ವ್ಯಸನಿ. ಅನೇಕ ಸುಂದರ ಹೆಣ್ಣುಗಳ ಸಂಬಂಧವಿದ್ದ ಅವನು ಮಧ್ಯವಯಸ್ಕನಾದಾಗ ಒಂದು ದಿನ ಆ ರಸಘಳಿಗೆಗಳನ್ನು ಮೆಲುಕು ಹಾಕುತ್ತಾ ಸ್ಮೃತಿಹ್ಪಟಲದ ಮುಂದೆ ತನ್ನ ಜೀವನಾನುಭವದ ಆ  ದೃಶ್ಯಗಳನ್ನು ತಂದುಕೊಳ್ಳಲು ತಡಕಾಡುತ್ತಾನೆ. ಎಲ್ಲೋ ಒಂದು ದೃಶ್ಯದ ತುಣುಕು, ಮತ್ತೊಂದು ಸನ್ನಿವೇಶದ ಇನ್ನೊಂದು ಸಣ್ಣ ತುಣುಕನ್ನಷ್ಟೇ ಆವಾಹಿಸುವುದರಲ್ಲಿ ಸಫಲನಾಗುತ್ತಾನೆ. (ಅದರಿಂದ ವಿಷಣ್ಣನಾಗುತ್ತಾನೆ.)

ಕುಂದೇರಾರ ಸಣ್ಣ ಕತೆಯಲ್ಲಿನ ಒಂದು ಪಾತ್ರದ ಮುಂದೆ ಕಣ್ಣಿಗೆ ಕುಕ್ಕುವಂಥ ಸುಂದರ ಹೆಣ್ಣೊಬ್ಬಳು ಎದುರಾಗುತ್ತಾಳೆ. ಅದು ಅರೆಕ್ಷಣದ ಆಕಸ್ಮಿಕವಷ್ಟೆ. ಸ್ವಲ್ಪ ದಿನಗಳ ನಂತರ ಅವಳನ್ನು ಮತ್ತೊಂದು ಸಂದರ್ಭದಲ್ಲಿ ಬೇರೆ ಕೆಲವು ಹೆಂಗಸರುಗಳ ಗುಂಪಿನಲ್ಲಿ ಗುರುತಿಸಬೇಕಾದ ಅನಿವಾರ್ಯ ಎದುರಾಗುತ್ತದೆ. ಗಂಡಸಿನ ಆ ಪಾತ್ರ ಸೋಲುತ್ತದೆ.  ನೆನಪು ಮತ್ತು ಮರೆವುಗಳ ಕುರಿತು ಅಸಾಧಾರಣವಾಗಿ ಬರೆಯುತ್ತಲೇ ಅವುಗಳ ಬಗ್ಗೆ ಹೊಳಹುಗಳನ್ನು ನೀಡುತ್ತಾ ಸಾಗುವ ಕುಂದೇರಾ ಹೇಳುವುದು:

1. ನೆನಪು ಮರೆವಿನ ವೈರುಧ್ಯವಲ್ಲ, ಮರೆವಿನ ಒಂದು ರೂಪ
2. ನೆನಪು ವಿಡಿಯೋ ನಿರ್ಮಿಸುವುದಿಲ್ಲ, ಛಾಯಾಚಿತ್ರವನ್ನು ಸೃಷಿಸುತ್ತದೆ.

ಹೀಗೆ ಮಾಡಿ ನೋಡಿ. ರಾತ್ರಿ ದಿನಚರಿ ಬರೆಯಲು ಕುರಿತಾಗ, ಆ ದಿನದ ಮುಖ್ಯ ಘಟನೆಗಳನ್ನು ದಾಖಲಿಸುವಾಗ ಹೆಣಗಾಡುವಾಗ ನೆನಪಿನ ಶಕ್ತಿಯ ಸೀಮಿತತೆಯ ಅರಿವಾಗುತ್ತದೆ. ಅಷ್ಟೇ ಏಕೆ. ಗೆಳೆಯರೊಬ್ಬರೊಟ್ಟಿಗೆ ಫೋನಲ್ಲಿ ಐದು ನಿಮಿಷ ಮಾತನಾಡಿ ನಂತರ ಆ ಐದು ನಿಮಿಷದ ಅವಧಿಯಲ್ಲಿ ಮಾತನಾಡಿದ ಮಾತುಗಳನ್ನು ಅದೇ ಕ್ರಮದಲ್ಲಿ ಜ್ಞಾಪಿಸಿಕೊಳ್ಳಲು ಪ್ರಯತ್ನ ಪಡಿ.

ನಾನು ಮೊದಲ ಬಾರಿಗೆ ವೀಕ್ಷಿಸಿದ ದೊಡ್ಡ ಮಟ್ಟದ ಪಂದ್ಯವೆಂದರೆ ದಕ್ಷಿಣ ವಲಯ ಮತ್ತು ಬಿಲ್ ಲಾರಿ ನಾಯಕತ್ವದ ಆಸ್ಟ್ರೇಲಿಯಾ ತಂಡ. ಮೂರು ದಿನದ ಪಂದ್ಯ ನಡೆದದ್ದು ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ. ನನಗಾಗ ಒಂಭತ್ತು ವರ್ಷ ವಯಸ್ಸು. ಎರಡನೇ ದಿನದ ಪಂದ್ಯಕ್ಕೆ ಲಂಚ್ ವಿರಾಮದ ಹೊತ್ತಿಗೆ ಹೋಗಿದ್ದೆವು. ಹುಲ್ಲಿನ ಮೇಲೆ ಬೌಂಡರಿ ಲೈನ್ ಹೊರಗಡೆ ಚಕ್ಕಂಬಕ್ಕಳ ಹಾಕಿಕೊಂಡು ಕುಳಿತಿದ್ದು ನೆನಪಿದೆ. ದಿನದ ಆಟ ಮುಗಿಯುವ ವೇಳೆಗೆ ಆರಂಭಿಕ ಬೌಲರ್ ಮೇಯಿನ್ ಡೈವ್ ಬಿದ್ದು ಆರಂಭಿಕ ಬಾಟ್ಸ್ ಮ್ಯಾನ್ ಜಯಂತಿಲಾಲ್ ರ ಪತನಕ್ಕೆ ಕಾರಣರಾಗಿದ್ದು ನೆನಪಿದೆ. ಅಂದಿನ ದಕ್ಷಿಣ ವಲಯದ ಸ್ಕೋರ್ 13 ಕ್ಕೆ ಎರಡು ವಿಕೆಟ್.

ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡ ಹೆಸರುಗಳೆಂದರೆ ರೆಡ್ಪಾತ್, ಸ್ಟಾಕ್ಪೋಲ್, ಡಗ್ ವಾಲ್ಟರ್ಸ್, ಕಾನೊಲಿ, ಗ್ಲೀಸನ್. ಕಿವಿ ಮೇಲೆ ಬಿದ್ದ ದಕ್ಷಿಣ ವಲಯದ ಆಟಗಾರರ ಹೆಸರುಗಳು ಬಿ ಎಸ್ ಚಂದ್ರಶೇಖರ್, ಅಬಿದ್ ಅಲಿ, ಜಯಸಿಂಹ, ಪ್ರಸನ್ನ ಅವರುಗಳದ್ದು.

ಕೊನೆಯ ದಿನ ದಕ್ಷಿಣ ವಲಯ ಗೆಲ್ಲುವುದರಲ್ಲಿದ್ದು ಬಿಲ್ ಲಾರಿ ಋಣಾತ್ಮಕ ಬ್ಯಾಟಿಂಗ್ ಅವಲಂಬಿಸಿ, ಸ್ಪಿನ್ ದಾಳಿಯನ್ನು ಎದುರಿಸಲು ಪ್ಯಾಡನ್ನು ಮುಖ್ಯ ಅಸ್ತ್ರವನ್ನಾಗಿ ಅವಲಂಬಿಸಿ ಸೋಲುವುದನ್ನು ತಪ್ಪಿಸಿಕೊಂಡರೆಂದು ಕೇಳ್ ಪಟ್ಟೆ. ರೊಚ್ಚಿಗೆದ್ದ ಪ್ರೇಕ್ಷಕರು ಸ್ಟ್ಯಾಂಡ್ ಗಳಿಗೆ ಬೆಂಕಿ ಹಚ್ಚಿದರೆಂಬ ಮಾಹಿತಿಯೂ ಲಭ್ಯವಾಗಿತ್ತು.

ನಾನು ಇಷ್ಟಪಟ್ಟು ಆಡಿದ, ನೋಡಿದ ಮ್ಯಾಚ್ ಗಳು ಅದೆಷ್ಟೋ. ಆದರೆ ರೂಬೆನ್ನಿನಂತೆ ಆ ಮ್ಯಾಚುಗಳ ಹೈಲೈಟ್ಸ್ ಕೂಡ ನೆನಪಿನಲ್ಲಿ ಮಸಕು ಮಸಕು. ನಾನು ಆಡಿದ ಮ್ಯಾಚ್ ಯಾವುದೂ ವಿಡಿಯೋ ಆಗಲಿಲ್ಲ. ನೋಡಿದ ಪ್ರಮುಖ ಮ್ಯಾಚುಗಳ ಅಂಕಿಅಂಶಗಳನ್ನು ನೆನಪಿಸಿಕೊಳ್ಳಲು ತಿಣುಕಾಡಬೇಕು. ಅಂಕಿಅಂಶಗಳ ಮಾತು ಬೇಡ, ನೋಡಿ ಆನಂದಿಸಿದ ಕ್ಷಣಗಳೂ ಆ ದಿನಗಳಿಗೆ ಸೇರಿದ್ದು. ವೀಕ್ಷಕರಾಗಿ ನೋಡಿ ಆನಂದಿಸಿದ ನಮ್ಮಗಳ ಪಾಡಿಗೂ, ಆಡ-ಆಡುತ್ತಲೇ ಕ್ರಿಕೆಟ್ ಜಗತ್ತಿಗೆ ಸಹಸ್ರಾರು ಸಂತಸದ ಗಳಿಗೆಗಳನ್ನು ಉಣಬಡಿಸಿದ ಸಚಿನ್ ಪಾಡಿಗೂ ವ್ಯತ್ಯಾಸವೇನಿಲ್ಲ. ಆತನೂ ತನ್ನ ಕ್ರಿಕೆಟ್ ಇತಿಹಾಸವನ್ನು ನೆನಪಿಸಿಕೊಳ್ಳಬೇಕಾದರೆ ತಾನಾಡಿದ ಮ್ಯಾಚುಗಳ ವಿಡಿಯೋ ನೋಡಿಯೇ ನೆನಪಿಸಿಕೊಳ್ಳಲು ಸಾಧ್ಯ. ಇನ್ನು ಪರ್ವತದಷ್ಟು ಎತ್ತರವೂ, ವಿಸ್ತಾರವೂ ಆದ ತನ್ನ ಅಂಕಿ-ಅಂಶಗಳನ್ನು ಜ್ಞಾಪಿಸಿಕೊಳ್ಳಬೇಕೆಂದರೆ ಅದಕ್ಕೆ ಆತ ಪಡಬೇಕಾದ ಶತಪ್ರಯತ್ನವೂ ಒಂದು ದಾಖಲೆಯನ್ನೇ ನಿರ್ಮಿಸಬಿಡಬಹುದು.

ಏತನ್ಮಧ್ಯೆ, ಮೊನ್ನೆಯ ಟೆಸ್ಟ್ ನಲ್ಲಿ ಎರಡೂ ಇನಿಂಗ್ಸ್ ನಲ್ಲಿ ಶತಕ ಗಳಿಸುತ್ತಲೇ ಹಲವು ನೂತನ ದಾಖಲೆಗಳನ್ನು ನಿರ್ಮಿಸಿದ ರೋಹಿತ್ ಶರ್ಮಾ ತನ್ನ ಜತೆಯಾಡುತ್ತಿದ್ದ ಚೇತೇಶ್ವರ್ ಪೂಜಾರನ ಕ್ಷುಲ್ಲಕ ಪ್ರಮಾದವನ್ನು ಸಹಿಸದೇ ಆತನಿಗೆ ಬೈದ ಬೈಗುಳ ವಿಕೆಟ್ ಗೆ ಹೊಂದಿಸಿದ ಮೈಕ್ ನಿಂದ ಇಡೀ ಜಗತ್ತಿನ ಕಿವಿಗೇ ಬಿದ್ದಿದೆ. ಸಂಭಾವಿತರ ಕ್ರೀಡೆಯೆಂದೇ ಹೆಸರಾದ ಕ್ರಿಕೆಟ್ ಗೆ, ಭಾರತಕ್ಕೆ, ಮತ್ತು ಪೂಜಾರನಿಗೆ ಮಸಿ ಬಳಿದ ರೋಹಿತ್ ನ ಆ ಎಲ್ಲಾ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಿದ್ದೇನೆ.