ಸಂಘ ಪರಿವಾರವನ್ನು ವಿರೋಧಿಸುತ್ತಿರುವುದಾದರೂ ಏಕೆ?

ಸಂಘ ಪರಿವಾರವನ್ನು ವಿರೋಧಿಸುತ್ತಿರುವುದಾದರೂ ಏಕೆ?

ಹಿಂದೂ, ಹಿಂದಿ, ಹಿಂದೂಸ್ಥಾನ್ ಎಂಬ ಧೋರಣೆ ಮತ್ತು ನಂಬಿಕೆಗಳಲ್ಲಿ ಗಾಢ ವಿಶ್ವಾಸ ಇರುವ ಈ ಸಂಘ ಪರಿವಾರ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಮತ್ತು ಸಮಾನತೆಗಳೆಂಬ ನಮ್ಮ ಮೂಲ ಆಶಯಗಳಿಗೆ ಪೂರಕವಾಗುತ್ತವೆ ಎಂಬುದು ತಿಳಿಯುವುದಿಲ್ಲ ಎನ್ನುತ್ತಾರೆ ನಮ್ಮ ನಡುವಿನ ಪ್ರಖರ ಚಿಂತಕ ಜಿ.ಕೆ.ಗೋವಿಂದರಾವ್.

 

ರಾಜ್ಯದಲ್ಲಿ ಆಗಲಿ,, ರಾಷ್ಟ್ರ ಮಟ್ಟದಲ್ಲಿ ಆಗಲಿ ಒಂದು ಸಂದಿಗ್ಧ ಪರಿಸ್ಥಿತಿ ಉಂಟಾದಾಗ ನಾವು ಕೆಲವು ಮಂದಿ ಸಂಘ ಪರಿವಾರ (ಆರ್.ಎಸ್.ಎಸ್., ಬಿ.ಜೆಪಿ., ಭಜರಂಗದಳ ಇತ್ಯಾದಿ) ವನ್ನು ಕಟುವಾಗಿ ವಿರೋಧಿಸುವುದು ಏಕೆ? ಈ ವಿರೋಧ ಕೇವಲ ಪೂರ್ವಗ್ರಹ ಪ್ರೇರಿತವೇ ಅಥವಾ ದ್ವೇಷವೇ? ಈ ಪ್ರಶ್ನೆಗಳನ್ನು ನಾವು ಆಗಿಂದಾಗ್ಗೆ ಕೇಳಿಕೊಳ್ಳುವುದು ತೀರ ಅವಶ್ವಕ ಮತ್ತು ವಸ್ತುನಿಷ್ಠವಾಗಿ ನಮ್ಮ ಸಮಾಧಾನಕ್ಕಾದರೂ ನಾವು ತಿಳಿಯುವುದು ನಮ್ಮದೇ ವ್ಯಕ್ತಿತ್ವಗಳ ಆರೋಗ್ಯಕ್ಕೆ ಒಳ್ಳೆಯದು.

ಢಾಳಾಗಿ ಕಾಣುವ ಕೆಲವು ಕಾರಣಗಳನ್ನು ಮೊದಲು ನೋಡೋಣ.

  1. ಸಂಘಪರಿವಾರದ ನಿಷ್ಠೆ ಎಂಬುದು ಕನಿಷ್ಠ ಎರಡು ಮುಖದ್ದು. ಒಂದು ಪ್ರಜಾತಂತ್ರವನ್ನು ಎತ್ತಿ ಹಿಡಿಯುವ ಸಂವಿಧಾನಕ್ಕೆ; ಮತ್ತೊಂದು ಹಿಂದುತ್ವ ಸಿದ್ಧಾಂತದ ಮೇಲೆ ರೂಪುಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ್ದು. 1977ರ ಜನತಾ ಸರಕಾರ ಒಡೆದು ಹೋಗಲು ಕಾರಣವನ್ನು ನಾನಿಲ್ಲಿ ವಿವರಿಸಬೇಕಾದ ಅವಶ್ಯಕತೆಯೇ ಇಲ್ಲ.
  2. ಆರ್.ಎಸ್.ಎಸ್.ಗೆ ಪ್ರಧಾನ ಪ್ರೇರಕಶಕ್ತಿ ಗುರೂಜಿ(ಗೊಳ್ವಾಲ್ಕರ್ ಮತ್ತು ಹಿಂದುತ್ವ ಸಿದ್ಧಾಂತದ ಮೂಲ ಪುರುಷ ಸಾವರ್ಕರ್ ಅವರು. ಸಂಘಪರಿವಾರಕ್ಕೆ ಸಂವಿಧಾನ, ಸಮಾನತೆ, ಸ್ವಾತಂತ್ರ್ಯ ಎಂಬ ಮೌಲ್ಯಗಳೀಗಿಂತ ಗುರೂಜಿ ಮತ್ತು ಸಾವರ್ಕರ್ ಇವರುಗಳ ನಿಲುವುಗಳೇ ಸ್ಪೂರ್ತಿ.
  3. ಇವುಗಳ ಜೊತೆಗೆ ಮಠಗಳಿಗೆ ಸೀಮಿತಗೊಂಡ ನಮ್ಮ ಧಾರ್ಮಿಕತೆ, ಕೋಮು, ಜಾತಿ ಇವುಗಳನ್ನು ಮಾತ್ರ ಉತ್ತೇಜಿಸುವ ಶಕ್ತಿಯಾಗಿದೆ. ಈಗ ಧರ್ಮ ಸಂಸದ್ ಎಂಬ ವೇದಿಕೆಯನ್ನೂ ಸೃಷ್ಟಿ ಮಾಡಿಕೊಂಡು ಸಾಂವಿಧಾನಿಕವಾಗಿ ರೂಪುಗೊಂಡ ನಮ್ಮ ಸಂಸದ್‌ಗೇ ಸವಾಲಿನ ರೀತಿ ಎದುರಾಗಿದೆ. ಇವು ಯಾವುವೂ ಪರಿಚಿತವಾದ ಡಿಸ್ಕವರಿಗಳಲ್ಲ. ಈ ಅಂಶಗಳು ಹೊಸತೇನೂ ಅಲ್ಲ.

 

ಸಾಂವಿಧಾನಿಕ ತತ್ವಗಳಿಗೆ ಸ್ಪಷ್ಟವಾಗಿ ವ್ಯತಿರಿಕ್ತವಾದ ನಿಲುವುಗಳು ಇವು. ಹಿಂದೂ, ಹಿಂದಿ, ಹಿಂದೂಸ್ಥಾನ್ ಎಂಬ ಧೋರಣೆ ಮತ್ತು ನಂಬಿಕೆಗಳಲ್ಲಿ ಗಾಢ ವಿಶ್ವಾಸ ಇರುವ ಈ ಸಂಘ ಪರಿವಾರ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಮತ್ತು ಸಮಾನತೆಗಳೆಂಬ ನಮ್ಮ ಮೂಲ ಆಶಯಗಳಿಗೆ ಪೂರಕವಾಗುತ್ತವೆ ಎಂಬುದು ತಿಳಿಯುವುದಿಲ್ಲ.

 

ಹೀಗಾಗಿಯೇ ಸಂಘಪರಿವಾರವನ್ನು ನಾವು ವಿರೋಧಿಸುತ್ತೇವೆ. ಸಂಘ ಪರಿವಾರದ ಸಿದ್ಧಾಂತವೆಂದರೆ ಮಿದುಳಿಗೆ ಸ್ಪಷ್ಟಗೊಳ್ಳುವ ತರ್ಕ ಮೂಲದ ಸಿದ್ಧಾಂತ. ಈ ಬಗೆಯ ನಿಲುವು, ಅಂದರೆ ಮೂರ್ತರೂಪದ ನಂಬಿಕೆಗಳು-ನಿಜದಲ್ಲಿ ಸಾಧಿಸಿಬಿಡಬಹುದಾದ ತತ್ವಗಳ ಮೇಲೆ ನಿಂತಿರುವುವು. ಈ ಗುರಿಗಳನ್ನು ತಲುಪಲು ಅನುಸರಿಸಬೇಕಾದ ಮಾರ್ಗವೂ ಕೂಡ ಸ್ಪಷ್ಟ. ಮೂರ್ತರೂಪದ ಅಸಹನೆ, ಅನ್ಯ ಕೋಮುಗಳ ಕುರಿತಾದ ನಿರಂತರ ಸಂಶಯ ಮತ್ತು ಅಂತಿಮವಾಗಿ ಕೋಮುಗಲಭೆ ಮತ್ತುಹಿಂಸೆ; ಇವು ದಿಢೀರ್ ಪರಿಣಾಮಗಳನ್ನು ನಿರೀಕ್ಷಿಸಬಹುದಾದ ಮಾರ್ಗ.

ಪ್ರಜಾತಂತ್ರದ ಯಾವ ಮೌಲ್ಯಗಳ ಹತ್ತಿರವೂ ಸುಳಿಯಲು ಸಾಧ್ಯವಿಲ್ಲದ ಧೋರಣೆಗಳು ಇವು ಎಂದೇ ಸ್ಪಷ್ಟವಾಗಿರುವುದರಿಂದ  ಈ ಸಂಘ ಪರಿವಾರದ ನಿಲುವನ್ನು ಪ್ರಜಾತಂತ್ರದಲ್ಲಿ ನಂಬಿಕೆ, ವಿಶ್ವಾಸವಿರುವ ಯಾರೂ ಸಮರ್ಥಿಸಲು ಸಾಧ್ಯವಿಲ್ಲ.

ದುರದೃಷ್ಟಕರ ಸಂಗತಿ ಎಂದರೆ ಕಳೆದ ಐದಾರು ದಶಕಗಳಿಂದ ನಮ್ಮ ಮಾಧ್ಯಮಗಳು ಶೇ.90 ಭಾಗದಷ್ಟು ಈ ಭವಿಷ್ಯ ವಿರೋಧಿ ವ್ಯವಸ್ಥೆಯ ರೀತಿ ನೀತಿಗಳಿಗೆ ಪೂರಕವಾಗಿವೆ.

ಇಷ್ಟು ಹೇಳಿದ ಮೇಲೆ ಸದ್ಯದ ಕರ್ನಾಟಕ ರಾಜಕೀಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವಾಗಲೀ , ಜೆಡಿಎಸ್ ಆಗಲೀ ಸರ್ವಸಮ್ಮತವೂ, ಸಂಪೂರ್ಣ ಪ್ರಜಾತಂತ್ರವಾದಿ ಪಕ್ಷಗಳು ಎಂದಾಗಲಿ ಖಂಡಿತ ಹೇಳುತ್ತಿಲ್ಲ. ಅವರಲ್ಲಿಯೂ ಅವಕಾಶವಾದಿಗಳು, ಸ್ವಾರ್ಥಿಗಳು, ಜಾತೀವಾದಿಗಳು, ಅಧಿಕಾರ ವ್ಯಾಮೋಹಿಗಳೂ ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಆದರೆ ಸಮಾಧಾನದ ಸಂಗತಿ ಎಂದರೆ ಸಿದ್ಧಾಂತಗಳ ಮಟ್ಟದಲ್ಲಿಯಾದರೂ ಪ್ರಜಾತಂತ್ರವಾದಿಗಳು ಇದ್ದಾರೆ ಎಂಬ ಕಾರಣಕ್ಕೆ ಅವರ ಪರವಾಗಿ ನಾವು ನಿಲುವು ತಾಳುವುದು. ಸದ್ಯದ ಬಿಕ್ಕಟ್ಟಿನಲ್ಲಿ ಎಷ್ಟು ಮಂದಿ ಅತೃಪ್ತರು ಪ್ರಜಾತಂತ್ರ ಹಾಗೂ ಸ್ವಾತಂತ್ರ್ಯ ಮತ್ತು ವ್ಯಕ್ತಿ ಘನತೆಗಳ ಕುರಿತಾದ ನಿಷ್ಠೆ ಉಳ್ಳವರು ಎಂಬುದನ್ನೂ ಅವರೇ ಹೇಳಬೇಕು ಪ್ರಾಮಾಣಿಕವಾಗಿ, ವಸ್ತುನಿಷ್ಠವಾಗಿ.

 

                                                                                                                                                                                   -ಜಿ.ಕೆ.ಗೋವಿಂದರಾವ್