ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹಿಂಜರಿಕೆ ಏಕೆ?

ಇತ್ತ ಕೇಂದ್ರದಲ್ಲೂ ನಮ್ಮ ಪಕ್ಷದ್ದೇ ಸರ್ಕಾರ ರಾಜ್ಯದಲ್ಲೂ ನಮ್ಮದೇ ಸರ್ಕಾರ ಬಂದರೆ ಅಭಿವೃದ್ಧಿ ಸುಲಭ ಸಾಧ್ಯ ಎಂದು ಜನರನ್ನು ಮರಳು ಮಾಡಿದ ರಾಜ್ಯ ಬಿಜೆಪಿ ನಾಯಕರಿಗೆ ಈಗ ಮುಖವಿಲ್ಲ.

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಹಿಂಜರಿಕೆ ಏಕೆ?

ಪ್ರವಾಹದಿಂದ ಮನೆ ಮಠ ಕಳೆದುಕೊಂಡು, ಬೆಳೆ ನಾಶವಾಗಿ ಅತಂತ್ರರಾಗಿರುವ ಜನರ ಕಣ್ಣೀರು ಒರೆಸಲು ಈಗ ಯಾರೂ ಇಲ್ಲ ! ಈ ಜನರ ಬದುಕು ಮೂರಾಬಟ್ಟೆಯಾಗಿ ಎರಡು ತಿಂಗಳಾಯಿತು. ಉತ್ತರ ಕರ್ನಾಟಕದ ಜನರ ಬೆಂಬಲವಿರುವ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಸಹಾ ಎರಡು ತಿಂಗಳಾಯಿತು. ಮಹಾರಾಷ್ಟ್ರದಲ್ಲಿನ ಮಹಾಮಳೆಯಿಂದ ಉಕ್ಕಿ ಹರಿದ ಕೃಷ್ಣ ನದಿಯಿಂದ ಹಸಿರು ಬರ ಉತ್ತರ ಕರ್ನಾಟಕದ ಜನರ ಬದುಕನ್ನು ಕಿತ್ತುಕೊಂಡಿತು. ಈ ದುರಂತಕ್ಕೆ ಪ್ರಕೃತಿಯನ್ನು ಶಪಿಸುವುದರಲ್ಲಿ ಅರ್ಥವಿಲ್ಲ. ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ಮನುಷ್ಯ ದಾಳಿ ಮಾಡಿದಾಗಿನಿಂದ ಮಳೆ-ಬೆಳೆ ಎನ್ನುವುದು ಯಾರ ಲೆಕ್ಕಾಚಾರಕ್ಕೂ ಸಿಗುತ್ತಿಲ್ಲ. ಹಾಗಾಗಿ ಯಾವಾಗ ಅನಾವೃಷ್ಟಿ ಮತ್ತು ಅತಿವೃಷ್ಟಿ ಆಗುತ್ತದೆ ಎಂದು ಊಹಿಸಲಾಗದಷ್ಟು ಕಾಡನ್ನು ನಾಶ ಮಾಡಿರುವ ಪರಿಣಾಮವೇ ಇದು. ಅಂದರೆ ಪ್ರಕೃತಿಯ ಸಮತೋಲನ ತಪ್ಪಿರುವುದರಿಂದ ಈ ಎಲ್ಲ ಅವಾಂತರಕ್ಕೆ ಕಾರಣ.

ಅನಿರೀಕ್ಷಿತವಾಗಿ ಬಂದೆರಗಿದ ಈ ಪ್ರವಾಹದಿಂದ ಬದುಕನ್ನು ಕಳೆದುಕೊಂಡಿರುವವರಿಗೆ ಪುನರ್ ವಸತಿ ಕಲ್ಪಿಸಲು ಯಾವುದೇ ಒಂದು ನಾಗರಿಕ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದರೆ ಅದು ನೈತಿಕ ಅಧಃಪತನವನ್ನು ತಲುಪಿರುವ ಸೂಚನೆ ಎಂದೇ ತಿಳಿಯಬೇಕಿದೆ. ಇಂತಹ ಆಡಳಿತ ವ್ಯವಸ್ಥೆ ಜನರ ಪಾಲಿಗೆ ನಿಷ್ಪ್ರಯೋಜಕ. ಜನರು ಪ್ರವಾಹದಲ್ಲಿ ಸಿಲುಕಿದಾಗ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಷಾ ಕೂಡ ವೈಮಾನಿಕ ಸಮೀಕ್ಷೆ ನಡೆಸಿ ಹೋದರು. ಅಧಿಕಾರಿಗಳ ತಂಡವೂ ಬಂದು ಹೋಯಿತು. ಆದರೆ ಇದುವರೆಗೂ ಪರಿಸ್ಥಿತಿಯ ಗಂಭೀರತೆಯನ್ನು ನಿರ್ಲಕ್ಷಿಸಿ ಒಂದು ನಯಾಪೈಸೆಯನ್ನೂ ನೀಡದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ತನ್ನ ಬೇಜಾವ್ದಾರಿಯನ್ನು ನಿರ್ಲಜ್ಜವಾಗಿ ಪ್ರದರ್ಶಿಸಿರುವುದು ಕಾಣುತ್ತದೆ.

ಇತ್ತ ಕೇಂದ್ರದಲ್ಲೂ ನಮ್ಮ ಪಕ್ಷದ್ದೇ ಸರ್ಕಾರ ರಾಜ್ಯದಲ್ಲೂ ನಮ್ಮದೇ ಸರ್ಕಾರ ಬಂದರೆ ಅಭಿವೃದ್ಧಿ ಸುಲಭ ಸಾಧ್ಯ ಎಂದು ಜನರನ್ನು ಮರಳು ಮಾಡಿದ ರಾಜ್ಯ ಬಿಜೆಪಿ ನಾಯಕರಿಗೆ ಈಗ ಮುಖವಿಲ್ಲ. ಜನರನ್ನು ನೇರವಾಗಿ ಎದುರಿಸುವ ನೈತಿಕತೆ ಉಳಿದಿಲ್ಲ . ರಾಜ್ಯದ ಅತಿವೃಷ್ಟಿ ಮತ್ತು ಹಲವೆಡೆ ಇರುವ ಅನಾವೃಷ್ಟಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಆರ್ಥಿಕ ನೆರವು ಕೇಳಲು ಹೋಗುವ ಮುಖ್ಯಮಂತ್ರಿಗೆ ಪ್ರಧಾನಿ ಭೇಟಿಯ ಅವಕಾಶವನ್ನೇ ನೀಡುತ್ತಿಲ್ಲದಿರುವುದು ಅಚ್ಚರಿ.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಅವರನ್ನು ಅವರ ಹುಟ್ಟು ಹಬ್ಬಕ್ಕೆ ಅಭಿನಂದಿಸಲು ಸುಲಭವಾಗಿ ಭೇಟಿಯಾಗುತ್ತಾರೆ. ಗೃಹ ಸಚಿವರನ್ನೂ ಕಂಡು ರಾಜ್ಯದ ಪರಿಸ್ಥಿತಿ ಕುರಿತು ಮಾತನಾಡುತ್ತಾರೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಹೀಗೆಯೇ ಬಾಂಧವ್ಯ ಇರಬೇಕು. ಆದರೆ ಸಂಕಷ್ಟಕ್ಕೀಡಾಗಿರುವ ಜನರು ಅನಾಥ ಸ್ಥಿತಿ ಅನುಭವಿಸುತ್ತಿರುವವರ ನೆರವಿಗೆ ಸಹಕರಿಸಿ ಎಂದು ಮನವಿ ಮಾಡಲು ಹೋಗುವ ಮುಖ್ಯಮಂತ್ರಿಗೆ ಭೇಟಿಯ ಅವಕಾಶವಿಲ್ಲದೆ ಮುಖಭಂಗವಾಗುವುದು ಅತ್ಯಂತ ಶೋಚನೀಯವಾದುದು.

ಸಾಮಾನ್ಯವಾಗಿ ಇಂತಹ ಅತಿವೃಷ್ಟಿ ಮತ್ತು ಅನಾವೃಷ್ಟಿಯಾದಾಗ ಕೇಂದ್ರ ಸರ್ಕಾರ ಯಾವುದೇ ಪಕ್ಷದ್ದಾಗಿದ್ದರೂ ಹಾಗೆಯೇ ರಾಜ್ಯ ಸರ್ಕಾರವೂ ಯಾವುದೇ ಪಕ್ಷದ್ದಾಗಿದ್ದರೂ ತಾತ್ಕಾಲಿಕ ನೆರವನ್ನಾದರೂ ಘೋಷಿಸಿ ಕಷ್ಟಕ್ಕೆ ನೆರವಾಗುವುದು ಸಾಮಾನ್ಯ. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿರುವುದೇ ವಿಚಿತ್ರ.

ಈ ಮಧ್ಯೆ ರಾಜ್ಯ ಸರ್ಕಾರ ಸುಮಾರು ಎರಡೂವರೆ ಸಾವಿರ ಕೋಟಿ ಖರ್ಚು ಮಾಡಿ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುತ್ತಿದೆ. ಕೇಂದ್ರ ಸರ್ಕಾರವೂ ಸಹಾ ನೆರವಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನರನ್ನು ಸಮಾಧಾನ ಮಾಡುವ ಮಾತನ್ನಾಡುತ್ತಿದ್ದಾರೆ. ಕೇಂದ್ರದ ನೆರವಿನ ಬಗೆಗೆ ಆಶಾಧಾಯಕವಾಗಿರುವ ಜೊತೆಗೆ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಕಾಯ್ದಿರಿಸಿರುವ ಹಣವನ್ನು ನೆರೆ ಸಂತ್ರಸ್ತರಿಗೆ ಖರ್ಚು ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಈ ಕ್ರಮದ ಬದಲಿಗೆ ಅನವಶ್ಯಕವಾಗಿ ಖರ್ಚು ಮಾಡುವುದನ್ನು ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಆರ್ಥಿಕ ಶಿಸ್ತನ್ನು ಜಾರಿಗೆ ತರಲು ಆರ್ಥಿಕ ಮಿತವ್ಯಯವನ್ನು ಘೋಷಿಸಬೇಕು. ವಸ್ತು ಸ್ಥಿತಿಯನ್ನು ಅರಿತು ಆರ್ಥಿಕ ಮಿತವ್ಯಯವನ್ನು ಘೋಷಿಸಿದರೆ ಸರ್ಕಾರ ದಿವಾಳಿ ಆಗುತ್ತಿದೆ ಎನ್ನುವ ಪ್ರತಿಪಕ್ಷಗಳ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದು ಬಹುತೇಕ ಸರ್ಕಾರಗಳ ಆತಂಕ. ರಾಜ್ಯ ಸರ್ಕಾರದಲ್ಲೂ ದುಡ್ಡಿಲ್ಲದೆ ಕೇಂದ್ರ ಸರ್ಕಾರವೂ ನೆರವು ನೀಡದಿದ್ದಾಗ ಇಂತಹ ಘೋಷಣೆ ಅನಿವಾರ್ಯ ಎನ್ನುವ ಸತ್ಯಸಂಗತಿಯನ್ನು ಆಡಳಿತ ನಡೆಸುವವರ ಒಪ್ಪಿಕೊಳ್ಳಬೇಕಾಗುತ್ತದೆ. ಈ ವಾಸ್ತವವನ್ನು ಸರ್ಕಾರ ಜನರಿಗೂ ಮನದಟ್ಟು ಮಾಡಿಕೊಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಆರ್ಥಿಕ ಸ್ಥಿತಿಗತಿಯ ಬಗೆಗೆ ಶ್ವೇತಪತ್ರವನ್ನೂ ಹೊರಡಿಸಬೇಕು.

ಇದೇನೇ ಇದ್ದರೂ, ಕೇಂದ್ರ ಸರ್ಕಾರ ಇಷ್ಟು ನಿರ್ಲಕ್ಷ್ಯ ಮಾಡುವಾಗ ಪ್ರತಿಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿ ತೆಗೆದುಕೊಂಡು ಹೋಗಿ ರಾಜ್ಯಕ್ಕಿರುವ ಹಕ್ಕನ್ನು ಪ್ರತಿಪಾದಿಸಿ ಆರ್ಥಿಕ ನೆರವು ಪಡೆಯುವುದು ಬುದ್ಧಿವಂತಿಕೆಯ ಲಕ್ಷಣ. ಸ್ವಪ್ರತಿಷ್ಠೆಗೆ ಕಷ್ಟದಲ್ಲಿರುವ ಬಡವರ ಸಹನೆಯನ್ನು ಹೆಚ್ಚು ಕಾಲ ಪರೀಕ್ಷಿಸಬಾರದು. ಹಸಿವು ಎನ್ನುವುದು ಯಾವ  ಅಚ್ಚೇ ದಿನಕ್ಕಾಗಿ ಕಾಯುವುದಿಲ್ಲ. ಭರವಸೆ ಮತ್ತು ಜನರನ್ನು ಮರಳು ಮಾಡುವ ಆಕರ್ಷಕ ಘೋಷಣೆಗಳು ಹೆಚ್ಚು ದಿನ ಉಳಿಯಲಾರವು.

ಈ ನಡುವೆ ಪ್ರತಿ ವರ್ಷ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ವಿಧಾನಸೌಧದಲ್ಲಿ ನಡೆಸುತ್ತಾ ಬಂದಿರುವುದು ವಾಡಿಕೆ. ಆದರೆ ಉತ್ತರ ಕರ್ನಾಟಕದ ಜನರು ಅಧಿವೇಶನದ ವೇಳೆಯಲ್ಲಿ ಮುತ್ತಿಗೆ ಹಾಕಬಹುದು ಎಂಬ ಭಯದಿಂದ ಸರ್ಕಾರ ಈ ಬಾರಿ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನ ವಿಧಾನಸೌಧದಲ್ಲಿಯೇ ನಡೆಸಲು ತೀರ್ಮಾನಿಸಿರುವುದು ಸರ್ಕಾರದ ಮುಖೇಡಿ ಸ್ಥಿತಿಯನ್ನು ತೋರಿಸುತ್ತದೆ.

ವರ್ಷದಲ್ಲಿ ಒಮ್ಮೆ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನವನ್ನು ಆ ಸೌಧ ಉದ್ಘಾಟನೆಗೊಂಡ ವರ್ಷದಿಂದ (2012) ನಡೆಸಿಕೊಂಡು ಬರಲಾಗಿದೆ. ಉತ್ತರ ಕರ್ನಾಟಕದ ಜನರ ಭಾವನೆಗೆ ಮತ್ತು ಆ ಭಾಗದ ಅಭಿವೃದ್ಧಿಯ ಬಗೆಗೆ ವಿಶೇಷ ಚರ್ಚೆ ನಡೆಸಬೇಕೆನ್ನುವ ಉದ್ದೇಶದಿಂದಲೇ ಈ ಸುವರ್ಣ ಸೌಧವನ್ನು ನಿರ್ಮಿಸಲಾಗಿದೆ. ಈ ಸೌಧದ ನಿರ್ಮಾಣಕ್ಕಾಗಿ ಸುಮಾರು 390 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣದಿಂದ ನಿರ್ಮಿಸಿರುವ ಸೌಧ ಸಾರ್ವಜನಿಕರ ಹಿತಕ್ಕಾಗಿ ಸದ್ಬಳಕೆ ಆಗಬೇಕು.

ಈ ಸುವರ್ಣ ಸೌಧವು ಅಧಿವೇಶನದ ನಂತರ ಖಾಲಿ ಆಗಿರುತ್ತದೆ. ಆದ್ದರಿಂದ ಉತ್ತರ ಕರ್ನಾಟಕದ ಹಲವು ಇಲಾಖೆಗಳನ್ನು ಈ ಸೌಧಕ್ಕೆ ವರ್ಗಾಯಿಸಬೇಕೆನ್ನುವ ಬೇಡಿಕೆಯೂ ಇನ್ನೂ ಕಾರ್ಯಗತವಾಗದಿರುವುದು ವಿಪರ್ಯಾಸ. ಗಡಿ ಸಮಸ್ಯೆ ಇದ್ದುದರಿಂದ ಬೆಳಗಾವಿ ನಗರ ಮತ್ತು ಜಿಲ್ಲೆಯನ್ನು ಒಟ್ಟಾರೆ ಆ ಭಾಗವನ್ನು ಅಭಿವೃದ್ಧಿ ಪಡಿಸಿ ಇದು ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವುದನ್ನು ಸಾಬೀತುಪಡಿಸಲು ಎಪ್ಪತ್ತರ ದಶಕದಲ್ಲಿ ಆಡಳಿತ ನಡೆಸಿದ ಡಿ. ದೇವರಾಜ ಅರಸು ಅವರು ಬೆಳಗಾವಿ ವಿಭಾಗವನ್ನು ಅಭಿವೃದ್ಧಿ ಪಡಿಸಿದರು. ವಿಭಾಗಾಧಿ ಕಚೇರಿ ಸೇರಿದಂತೆ ಹಲವು ಇಲಾಖೆಗಳನ್ನು ಬೆಂಗಳೂರಿನಿಂದ ಇಲ್ಲಿಗೆ ವರ್ಗಾಯಿಸಿದ್ದರು. ಅದರ ಮುಂದುವರಿದ ಭಾಗವೇ ಈ ಸುವರ್ಣ ಸೌಧದ ನಿರ್ಮಾಣ.

ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ  ಮತ್ತು ಅವರ ಪಕ್ಷಕ್ಕೆ ಉತ್ತರ ಕರ್ನಾಟಕದ ಜನರಿಂದ ದೊರೆತಿರುವ ಬೆಂಬಲ ಪ್ರಶ್ನಾರ್ಹ. ಹಾಗೆಯೇ ಉತ್ತರ ಕರ್ನಾಟಕದ ಬಗೆಗೆ ಯಡಿಯೂರಪ್ಪ ಅವರಿಗೂ ವಿಶೇಷ ಮಮತೆ. ಅದಕ್ಕಾಗಿ ಹೈದರಬಾದ್ ಕರ್ನಾಟಕ ಭಾಗಕ್ಕೆ ಈಗ “ಕಲ್ಯಾಣ ಕರ್ನಾಟಕ” ಎಂದು ಹೆಸರಿಟ್ಟಿದ್ದಾರೆ. ಕೇವಲ ಹೆಸರಿಟ್ಟರೆ ಸಾಲದು. ಹೆಸರಿನಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ಆ ಭಾಗದ ನಿಜವಾದ ಕಲ್ಯಾಣ ಆಗಬೇಕಾದರೆ ನಡೆಯಬೇಕದ  ಕೆಲಸಗಳಿಗೆ ಸಾಕಷ್ಟು ಹಣವನ್ನು ಪೂರೈಸಬೇಕು. ಇದಕ್ಕಾಗಿ ಅವರು ಪ್ರತ್ಯೇಕ ಸಚಿವಾಲಯವನ್ನೂ ತೆರೆಯುವ ಭರವಸೆಯೇನೋ ನೀಡಿದ್ದಾರೆ. ಈ ಹಿಂದೆ ಇದ್ದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಬದಲಿಗೆ ಈ ಸಚಿವಾಲಯ ಬರಲಿದೆ ಎನ್ನಲಾಗುತ್ತಿದೆ.

ಈ ಪ್ರತ್ಯೇಕ ಸಚಿವಾಲಯ ಬರಲಿ. ಆದರೆ ಆ ಸಚಿವಾಲಯದ ಆಡಳಿತ ನಡೆಸಿಕೊಂಡು ಹೋಗುವವರು ಎಂತಹವರು ಎನ್ನುವುದು ಅದರ ಯಶಸ್ವಿಯನ್ನು ಅವಲಂಬಿಸಿರುತ್ತದೆ. ಇದರ ಜೊತೆಗೆ ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮಾಡಲಾಗಿರುವ ಸಂವಿಧಾನದ ವಿಧಿ  371 ಜೆ ನೆರವು ಇದ್ದೇ ಇದೆ. ಆದರೆ ಅಭಿವೃದ್ಧಿ ಕಾರ್ಯವನ್ನು ಮಾಡುವ ದಕ್ಷ ನಾಯಕತ್ವ ಮತ್ತು ಅಧಿಕಾರಿ ಪಡೆ ಮುಖ್ಯ. ಸಮರ್ಥ ಅಧಿಕಾರಿಗಳು ಯಾರ ಮಧ್ಯಸ್ಥಿಕೆ ಮತ್ತು ಒತ್ತಡಗಳಿಲ್ಲದೆ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿ ಮಾಡಬೇಕಾಗುತ್ತದೆ. ಆದರೆ ಇತ್ತೀಚೆಗೆ ದಕ್ಷ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿಯದ ಹಾಗು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡುತ್ತಾ ಹೋಗಿರುವುದನ್ನು ಗಮನಿಸಿದರೆ ಯಡಿಯೂರಪ್ಪ ಅವರ ಉದ್ದೇಶ ಕೇವಲ ಕಾಗದದ ಮೇಲೆ ಉಳಿಯಲಿದೆ.

ಇದೇನೇ ಇದ್ದರೂ ಅಕ್ಟೋಬರ್ 14ರಿಂದ 26ರವರೆಗೆ ನಡೆಸಲು ಉದ್ದೇಶಿಸಿರುವ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ನಡೆಸುವ ದಿಟ್ಟತನವನ್ನು ಮುಖ್ಯಮಂತ್ರಿ ಪ್ರದರ್ಶಿಸಬೇಕು. ನಿಜ . ಕಷ್ಟದಲ್ಲಿರುವ ನೆರೆ ಪೀಡಿತ ಜನರು ಅಧಿವೇಶನದ ವೇಳೆಯಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳಲು ಬೀದಿಗಿಳಿಯಬಹುದು. ಹೋರಾಟ ಅವರ ಜನ್ಮಸಿದ್ಧ ಹಕ್ಕು. ಅವರ ಕಷ್ಟಕ್ಕೆ ಸ್ಪಂದಿಸದಿದ್ದರೆ ಯಾವುದೇ ಜನರು ಮಾಡುವ ಸಹಜವಾದ ಪ್ರತಿಭಟನೆಯನ್ನು ಹತ್ತಿಕ್ಕಲಾಗದು. ಅವರ ಹಕ್ಕನ್ನಾಗಲಿ, ಪ್ರತಿಭಟನೆಯನ್ನಾಗಲಿ ನಿರ್ಬಂಧಿಸುವುದು ಜಾಣತನವಲ್ಲ. ಬದಲಾಗಿ ಅದು ಹೇಡಿತನವಾಗುತ್ತದೆ. ಜನರ ಸಮಸ್ಯೆಗೆ ಸರ್ಕಾರ ಕಿವಿಗೊಡಬೇಕು. ಪಂಚೇಂದ್ರಿಯವನ್ನು ಜನರ ಕಷ್ಟ ಕೇಳಲು ತೆರೆದಿಟ್ಟುಕೊಳ್ಳಬೇಕು. ಆ ಧೈರ್ಯವನ್ನು ಯಡಿಯೂರಪ್ಪ ಸರ್ಕಾರ ಪ್ರದರ್ಶಿಸಬೇಕು. ಅದು ಒಬ್ಬ ನಾಯಕನ ಗುಣ. ಆ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಯೋಚಿಸಲಿ ಎಂದು ಆಶಿಸೋಣ.