ಶಾಶ್ವತ ಮೌನಕ್ಕೆ ಶರಣಾಗಿಬಿಟ್ಟಿರಲ್ಲಾ ಏಕೆ ರಾಯ್ ?

ಶಾಶ್ವತ ಮೌನಕ್ಕೆ ಶರಣಾಗಿಬಿಟ್ಟಿರಲ್ಲಾ ಏಕೆ ರಾಯ್ ?

ಸಂಸದರಾಗಿದ್ದಾಗ ತಮ್ಮ ಇಡೀ ವೇತನವನ್ನು ಪಕ್ಷದ ಸದಸ್ಯರಿಗೆ ಮತ್ತು ಕಲ್ಲಿದ್ದಲು ಗಣಿ ನೌಕರರ ಅಭಿವೃದ್ಧಿಗಾಗಿ ನೀಡುತ್ತಿದ್ದ  ರಾಯ್ ತಮ್ಮ ಪಿಂಚಣಿಯನ್ನು ರಾಷ್ಟ್ರಪತಿಗಳ ನಿಧಿಗೆ ಅರ್ಪಿಸುತ್ತಿದ್ದರು. ರಾಜಕಾರಣಿಗೆ ನಿವೃತ್ತಿ ವಯಸ್ಸು ಇರುವುದಿಲ್ಲ ಹಾಗಾಗಿ ಪಿಂಚಣಿಗೆ ಅರ್ಹರಲ್ಲ ಎನ್ನುವುದು ರಾಯ್ ಅವರ ಅಚಲ ನಿಲುವು ಆಗಿತ್ತು ಎನ್ನುತ್ತಾರೆ ನಾ ದಿವಾಕರ.

ನಮ್ಮ ದೇಶದ ಸಾರ್ವಜನಿಕ ಪ್ರಜ್ಞೆಗೆ ಲತ್ತೆ ಬಡಿದಿದೆ ಎಂದು ಪದೇಪದೇ ಸಾಬೀತಾಗುತ್ತಲೇ ಇರುತ್ತದೆ. ಮಾಧ್ಯಮಗಳ ನಿಷ್ಕ್ರಿಯತೆ ಅಥವಾ ಉದ್ದೇಶಿತ ನಿರ್ಲಿಪ್ತತೆ ಇದನ್ನು ದೃಢೀಕರಿಸುತ್ತಲೇ ಇರುತ್ತದೆ. ಹುಟ್ಟು, ಸಾವು, ಹತ್ಯೆ , ಅತ್ಯಾಚಾರ, ಹತ್ಯಾಕಾಂಡ, ಹಿಂಸಾಚಾರ ಏನೇ ಆಗಲಿ ಅದಕ್ಕೆ ಮಾರುಕಟ್ಟೆ ಮೌಲ್ಯ ಇದ್ದರೆ ಮಾತ್ರ ಚಾಲನೆಗೆ ಬರುತ್ತದೆ, ಮುನ್ನೆಲೆಗೆ ಬರುತ್ತದೆ. ಇಲ್ಲವಾದರೆ ಎಲ್ಲವೂ ಭೂಗತ ವಿದ್ಯಮಾನಗಳಾಗಿಬಿಡುತ್ತವೆ. ಐಶ್ವರ್ಯ ರಾಯ್ ಗರ್ಭಿಣಿಯಾಗುವುದು ದೊಡ್ಡ ಸುದ್ದಿಯಾಗುತ್ತದೆ , ಲಕ್ಷಾಂತರ ಹೆಣ್ಣು ಭ್ರೂಣಗಳು ಸದ್ದಿಲ್ಲದೆ ತಿಪ್ಪೆಗುಂಡಿಗೆ ಸೇರುವುದು ಅಲ್ಲಲ್ಲಿ ಗುಲ್ಲೆಬ್ಬಿಸುತ್ತದೆ. ರಾಜಕಾರಣಿಗಳ ಸಲಿಂಗ ಕಾಮ ಸಾರ್ವಜನಿಕ ಚರ್ಚೆಯ ವಿಷಯವಾಗುತ್ತದೆ. ಭೂಮಾಲಿಕನ ಗುಂಡೇಟಿಗೆ ಬಲಿಯಾಗುವ ಅಮಾಯಕ ರೈತನ ನಿಷ್ಕಾಮ ಕರ್ಮ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಎಷ್ಟು ವಿಚಿತ್ರ ಅಲ್ಲವೇ ಅಲ್ಲೊಂದೆಡೆ ನಿಧಿಗಾಗಿ ನೂರಾರು ವರ್ಷದ ಹಿಂದಿನ ಯತಿಗಳ ಬೃಂದಾವನ ಕೆಡವಲಾಗುತ್ತದೆ ಮತ್ತೊಂದೆಡೆ ಅತ್ಯಲ್ಪ ನಿಧಿಗಾಗಿ ಮಲಗುಂಡಿಯಲ್ಲಿ ಇಳಿದು ಶೋಧಿಸಲಾಗುತ್ತದೆ. ಯಾವುದು ಸತ್ಯ ಯಾವುದು ಸುಳ್ಳು ? ಇರಲಿ ಈ ನಡುವೆಯೇ ನಮ್ಮೊಳಗಿನ ಒಂದು ಬೆವರ ದನಿ ಇಂದು ಮರೆಯಾಗಿರುವುದನ್ನು ನೆನೆಯೋಣ.

ಎ ಕೆ ರಾಯ್ ಬಹುಶಃ ಭಾರತದ ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ನಗರ ನಕ್ಸಲ್ ಪಟ್ಟಕ್ಕೆ ಅತ್ಯಂತ ನಿಕಟ ಸ್ಪರ್ಧಿಯಾಗಬಹುದಾಗಿದ್ದ ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ಗಣಿಗಳ ನಡುವಿನ ಒಂಟಿ ದನಿ. ಈಗ ಇಲ್ಲವಾಗಿದ್ದಾರೆ. 84 ವರ್ಷಗಳ ಬದುಕು ಆರು ದಶಕಗಳ ಅವಿರತ ಹೋರಾಟ ಮತ್ತು ದಣಿವರಿಯದ ಸಂಘರ್ಷ. ಕಾರ್ಮಿಕರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅಂತ್ಯ ಕಂಡ ಕೆಲವೇ ರಾಜಕಾರಣಿಗಳ ಸಾಲಿಗೆ ರಾಯ್ ಸೇರುತ್ತಾರೆ. ಇಂದು ಮಾರುಕಟ್ಟೆಯ ಸರಕುಗಳಂತಾಗಿರುವ ಸಂಸದ ಅಥವಾ ಶಾಸಕ ಎನ್ನುವ ಹುದ್ದೆಗೆ ಇಂದಿಗೂ ಗೌರವ, ಮರ್ಯಾದೆ ಏನಾದರೂ ಉಳಿದಿದ್ದರೆ ಅದಕ್ಕೆ ರಾಯ್ ಅವರಂತಹ ಕೆಲವೇ ಆದರ್ಶಪ್ರಾಯ ನಾಯಕರು ಕಾರಣರಾಗುತ್ತಾರೆ. ಬ್ಯಾಂಕ್ ಖಾತೆಯನ್ನೇ ಹೊಂದಿರದ ರಾಜಕೀಯ ನಾಯಕ ಅಥವಾ ಕಾರ್ಮಿಕ ನಾಯಕ ಯಾರಾದರೂ ಇದ್ದರೆ ರಾಯ್ ಅಂತಹವರಿಗೆ ಮುಂದಾಳತ್ವ ವಹಿಸುವವರಾಗುತ್ತಾರೆ. ಅವರ ಸಾವಿಗೆ ಕಂಬನಿ ಮಿಡಿಯುತ್ತಾ, ಸಕಲ ಸರ್ಕಾರಿ ಗೌರವದೊಂದಿಗೆ, ತ್ರಿವರ್ಣ ಧ್ವಜವನ್ನು ಮೃತ ದೇಹಕ್ಕೆ ಹೊದಿಸಿ, ಅಂತ್ಯಕ್ರಿಯೆ ಮಾಡುವ ಇಂದಿನ ಪ್ರಭುತ್ವ ರಾಯ್ ಅವರ ನಡೆದು ಬಂದ ಹಾದಿಯಲ್ಲಿ ಎಷ್ಟೋ ಸಮಾಧಿಗಳನ್ನು ನಿರ್ಮಿಸಿಬಿಟ್ಟಿರುವುದನ್ನು ರಾಯ್ ಸ್ವತಃ ಹೆಜ್ಜೆ ಹೆಜ್ಜೆಗೂ ಕಂಡಿದ್ದಾರೆ. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಗಾಳಿಯಲ್ಲಿ ಹಾರಿಸಲಾಗುವ ಗುಂಡು ಈ ಹಿಂದೆ ಅನೇಕ ಬಡ ಜೀವಗಳ ಬಲಿ ತೆಗೆದುಕೊಂಡಿರುವುದನ್ನು ರಾಯ್ ಪ್ರತ್ಯಕ್ಷವಾಗಿ ಕಂಡಿದ್ದಾರೆ. ಕಲ್ಲಿದ್ದಲು ಗಣಿಗಳ ಮಸಿ ಅಲ್ಲಿನ ಕಾರ್ಮಿಕರ ಬದುಕನ್ನು ಮುಚ್ಚಿಹಾಕಿರುವಂತೆಯೇ ಸಾರ್ವಜನಿಕ ಬದುಕಿನಲ್ಲೂ ಕರಿಪರದೆಯನ್ನು ನಿರ್ಮಿಸಿರುವುದನ್ನು ತಮ್ಮ ಜೀವಿತಾವಧಿಯಲ್ಲೇ ಕಂಡು ರಾಯ್ ಅಂತಿಮವಾಗಿ ಲಾಲ್ ಸಲಾಂ ಹೇಳಿದ್ದಾರೆ.

ಜಾರ್ಖಂಡ್ ನೈಸರ್ಗಿಕ ಸಂಪನ್ಮೂಲಗಳ ಶ್ರೀಮಂತ ಕಣಜ. ಶ್ರೀಮಂತಿಕೆ ಮೆರೆಯುವುದೇ ದಾರಿದ್ರ್ಯದ ಸಮಾಧಿಯ ಮೇಲೆ. ಅಥವಾ ಎಲ್ಲಿ ಶ್ರೀಮಂತಿಕೆ ಮೆರೆಯುವುದೋ ಅಲ್ಲಿ ದಾರಿದ್ರ್ಯ ಮರೆಯಲ್ಲೇ ತಾಂಡವಾಡುತ್ತದೆ. ಧನಬಾದ್ನ ಕಲ್ಲಿದ್ದಲು ಗಣಿಗಳ ಸುತ್ತ ಇಂತಹ ಒಂದು ಬದುಕನ್ನು ಇಂದಿಗೂ ಕಾಣಬಹುದು. ಅಂದಿಗೂ ಕಾಣಬಹುದಿತ್ತು. ಗಣಿ ಎಂದ ಕೂಡಲೇ ಕಾರ್ಪೋರೇಟ್ ಧಣಿಗಳ ಕಿವಿಗಳು ನಿಮಿರುತ್ತವೆ. ಏಕೆಂದರೆ ಅವರ ಭವಿಷ್ಯದ ಸಂಪತ್ತು ಅಲ್ಲಿ ಅಡಗಿರುತ್ತದೆ. ಆದರೆ ಗಣಿಯೊಳಗೆ ಹೊಕ್ಕು ಹೊರಬರುವ ಕಾರ್ಮಿಕರ ಎದೆಬಡಿತ ಹೆಚ್ಚಾಗುತ್ತದೆ. ಏಕೆಂದರೆ ಅಲ್ಲಿ ಅವರ ಅಳಿವು ಉಳಿವು ನಿರ್ಧಾರವಾಗುತ್ತದೆ. ಹತ್ತಾರು ಕಾರ್ಮಿಕರು ಗಣಿಗಳಲ್ಲಿ ಸಿಲುಕಿ ತಿಂಗಳುಗಳೇ ಕಳೆದರೂ ನಿರ್ಲಿಪ್ತವಾಗಿ ಜೀವನ ಸವೆಸುವ ಒಂದು ಸಮಾಜವನ್ನು ನಾವು ರೂಪಿಸಿಕೊಂಡುಬಿಟ್ಟಿದ್ದೇವೆ. ಆದರೆ ರಾಯ್ ಈ ಸಮಾಜದಿಂದ ದೂರ ನಿಂತವರು. ತಮ್ಮ ಕನಸಿನ ಸಮ ಸಮಾಜಕ್ಕಾಗಿ ಕ್ಷಣಕ್ಷಣವೂ ಶ್ರಮಿಸಿದವರು. ಒಂದು ತೊಟ್ಟ ವಸ್ತ್ರ ಮತ್ತೊಂದು ಬಿಚ್ಚಿಟ್ಟ ವಸ್ತ್ರ ಇಷ್ಟರಲ್ಲೇ ಬದುಕು ಕಳೆದ ರಾಯ್ ಇಂದು ವಿವಸ್ತ್ರರಾಗಿ ವಿದಾಯ ಹೇಳಿದ್ದಾರೆ.

ಧನಬಾದ್ನ ಗಣಿಗಳ ಕಲ್ಲಿದ್ದಲಿನ ಮಸಿ ಅಧಿಕಾರಸ್ಥರ ಕಣ್ಣುಗಳನ್ನು ಮುಚ್ಚಿಹಾಕಿತು. ಕಾರ್ಮಿಕರ ಬದುಕನ್ನು ಕಪ್ಪಾಗಿಸಿತು. ಉದ್ಯಮಿಗಳ ಮಾನವ ಪ್ರಜ್ಞೆಯನ್ನೇ ಮರೆಯಾಗಿಸಿಬಿಟ್ಟಿತು. ಕೊನೆಗೆ ಕಾರ್ಮಿಕರ ದೃಷ್ಟಿಯನ್ನೇ ಮಂಜುಮಂಜಾಗಿಸಿಬಿಟ್ಟಿತು.  ಆದರೆ ರಾಯ್ ಅವರ ಶ್ವೇತ ವಸ್ತ್ರ ಮಸಿಯಾಗಲೇ ಇಲ್ಲ. ಏಕೆಂದರೆ ಅವರು ತೊಟ್ಟ ವಸ್ತ್ರಗಳಲ್ಲಿ ಕಾರ್ಮಿಕ ಪ್ರಜ್ಞೆ ಸದಾ ಜೀವಂತವಾಗಿತ್ತು. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ, ಗಣಿಯ ಕೊರಕಲುಗಳ ನಡುವೆ, ಕಲ್ಲಿದ್ದಲ ರಾಶಿಯ ನಡುವೆ, ಹಾದಿ ಬೀದಿಗಳಲ್ಲಿ, ಶ್ರಮಿಕರ ಹೃದಯದಲ್ಲಿ ಅವರ ಇಂಕ್ವಿಲಾಬ್ ಘೋಷಣೆ ಯಾವ ಮಸಿಯಿಂದಲೂ ಕಪ್ಪಾಗಲಿಲ್ಲ, ಯಾವ ಗಣಿ ಧಣಿಯಿಂದಲೂ ಮುಪ್ಪಾಗಲಿಲ್ಲ. 1977, 1980 ಮತ್ತು 1989ರ ಚುನಾವಣೆಗಳಲ್ಲಿ ಧನಬಾದ್ ಕ್ಷೇತ್ರದಿಂದ ಸಂಸದರಾಗಿದ್ದ ರಾಯ್  1967, 1969 ಮತ್ತು 1972ರಲ್ಲಿ ಸಿಂದ್ರಿ ಕ್ಷೇತ್ರದ ಶಾಸಕರಾಗಿಯೂ ಬಿಹಾರದ ವಿಧಾನಸಭೆಯಲ್ಲಿ ಶ್ರಮಜೀವಿಗಳ ದನಿಯಾಗಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ಮತ್ತು 1950ರಲ್ಲಿ ಕಮ್ಯುನಿಸ್ಟ್ ಪಕ್ಷಗಳ ಕಾರ್ಮಿಕ ಹೋರಾಟಗಳ ಕರ್ಮಭೂಮಿಯಾಗಿದ್ದ ಅವಿಭಜಿತ ಮನ್ಭೂಮ್ ಪ್ರಾಂತ್ಯದ ಪುರುಲಿಯಾ ಕಮ್ಯುನಿಸ್ಟ್ ಹೋರಾಟಗಳ ಕೇಂದ್ರವಾಗಿದ್ದರೆ 1960ರಲ್ಲಿ ಧನಬಾದ್ ಪ್ರಧಾನ ಭೂಮಿಕೆ ವಹಿಸಿಕೊಂಡಿತ್ತು. ಇದಕ್ಕೆ ಮೂಲ ಕಾರಣ ಎ ಕೆ ರಾಯ್ ಎಂದೇ ಕರೆಯಲ್ಪಡುತ್ತಿದ್ದ ಅರುಣ್ ಕುಮಾರ್ ರಾಯ್. ರಾಯ್ ಅವರ ಹೋರಾಟದ ಬದುಕು ಆರಂಭವಾದದ್ದೂ ಬಾಲ್ಯದಿಂದಲೇ.  1952ರಲ್ಲಿ, 17 ವರ್ಷದ ಬಾಲಕ ಎ ಕೆ ರಾಯ್ ಜಾರ್ಖಂಡ್ನಲ್ಲಿ ತಾಯ್ನಾಡಿಗಾಗಿ ನಡೆದ ಆಂದೋಲನದ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲೇ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ಬಂಧನಕ್ಕೊಳಗಾಗಿದ್ದರು. ಅಂದಿನ ಪೂರ್ವ ಪಾಕಿಸ್ತಾನ ಸರ್ಕಾರ ರಾಯ್ ಅವರಿಗೆ ಎರಡು ತಿಂಗಳ ಸೆರೆವಾಸದ ಶಿಕ್ಷೆ ನೀಡಿತ್ತು. ಸ್ವಾತಂತ್ರ್ಯ ಸಂಗ್ರಾಮಿಗಳ ಕುಟುಂಬದಲ್ಲಿ ಜನಿಸಿದ ರಾಯ್ ಹೋರಾಟದ ಬದುಕಿನ ಕನಸು ಕಂಡವರಲ್ಲ. 1959ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಎಸ್ಸಿ(ತಂತ್ರಜ್ಞಾನ) ವ್ಯಾಸಂಗ ಮುಗಿಸಿದ ನಂತರ ಧನಬಾದ್ನಲ್ಲಿ ಸ್ಥಾಪನೆಯಾಗಿದ್ದ ಸಿಂದ್ರಿ ರಸಗೊಬ್ಬರ ಕಾರ್ಖಾನೆಯ ಯೋಜನೆ ಮತ್ತು ಅಭಿವೃದ್ಧಿ ಘಟಕದಲ್ಲಿ ನೌಕರಿ ಗಳಿಸಿದ ರಾಯ್ ಡಾ ಕ್ಷಿತಿಜ್ ರಂಜನ್ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯದ ಹಾದಿ ಕಂಡುಕೊಂಡಿದ್ದರು. ಡಾ ಕ್ಷಿತಿಜ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಪ್ರತಿಮ ವಿದ್ವಾಂಸರ ಪಡೆಯಲ್ಲಿ ರಾಯ್ ಒಬ್ಬರಾಗಿದ್ದುದು ಅವರ ಪ್ರಾಮಾಣಿಕತೆ, ಶ್ರದ್ಧೆ ಮತ್ತು ನಿಷ್ಠೆಯ ದ್ಯೋತಕವಾಗಿತ್ತು.

ಸಿಂದ್ರಿ ಕಾರ್ಖಾನೆಯ ಕಾರ್ಮಿಕರು ಮುಷ್ಕರ ಹೂಡಿದ್ದ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಮಂಡಲಿ ಯೋಜನೆ ಮತ್ತು ಅಭಿವೃದ್ಧಿ ಘಟಕದ ಸಿಬ್ಬಂದಿಯನ್ನು ಪರ್ಯಾಯವಾಗಿ ಬಳಸಿಕೊಳ್ಳಲು ಮುಂದಾದಾಗ ರಾಯ್ ಪ್ರತಿಭಟಿಸಿದ್ದೇ ಅಲ್ಲದೆ, ಇದರಿಂದ ಕಾರ್ಮಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರು. ಸಿಂದ್ರಿ ಕಾರ್ಖಾನೆಯ ಕಾರ್ಮಿಕರು ರಾಯ್ ನೇತೃತ್ವದಲ್ಲಿ ಕೇವಲ ಕಾರ್ಮಿಕ ಸಂಘಟನೆಯನ್ನು ಕಟ್ಟಲಿಲ್ಲ. ಅಧ್ಯಯನ ಕೇಂದ್ರಗಳು ಆರಂಭವಾದವು. ಈ ಕೇಂದ್ರಗಳಲ್ಲಿ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸುವಂತಹ ಶಿಬಿರಗಳನ್ನು ನಡೆಸುತ್ತಿದ್ದರು. 1966 ಆಗಸ್ಟ್ 9ರಂದು ನಡೆದ ಬಿಹಾರ್ ಬಂದ್ ಸಂದರ್ಭದಲ್ಲಿ ರಾಯ್ ಬಂಧನಕ್ಕೊಳಗಾಗಿದ್ದರು. ಸಹಜವಾಗಿ ರಾಯ್ ತಮ್ಮ ನೌಕರಿ ಕಳೆದುಕೊಳ್ಳಬೇಕಾಯಿತು. ಎದೆಗುಂದದ ರಾಯ್ ಕೂಡಲೇ ಆಗತಾನೇ ಸ್ಥಾಪನೆಯಾಗಿದ್ದ ಸಿಪಿಎಂ ಪಕ್ಷದ ಸದಸ್ಯತ್ವ ಪಡೆದು 1967 ಮತ್ತು 1969ರ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.  1967-71ರ ನಾಲ್ಕು ವರ್ಷಗಳ ರಕ್ತಸಿಕ್ತ ಇತಿಹಾಸಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ರಾಯ್ ನಕ್ಸಲ್ ಚಳುವಳಿ ಭಾರತದ ಮಧ್ಯಮ ವರ್ಗಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾದದ್ದು ಎಂದು ಪ್ರತಿಪಾದಿಸಿದ್ದರು. ಫ್ರಾಂಟಿಯರ್ ಪತ್ರಿಕೆಯಲ್ಲಿ ತಮ್ಮ ಪ್ರಖರ ಲೇಖನಗಳನ್ನು ಬರೆಯುವ ಮೂಲಕ ಸಿಪಿಎಂ ನಕ್ಸಲ್ ಚಳುವಳಿಯೊಡನೆ ಬೆರೆತು ಕ್ರಾಂತಿಯ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಪ್ರತಿಪಾದಿಸಿದ್ದರು. ಪರಿಣಾಮ ಸಿಪಿಎಂ ರಾಯ್ ಅವರನ್ನು ಹೊರಹಾಕಿತ್ತು.

ತಾವೇ ಸ್ಥಾಪಿಸಿದ ಎಂಸಿಸಿ (Marxist Coordination Committee) ಪಕ್ಷದ ಅಭ್ಯರ್ಥಿಯಾಗಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ರಾಯ್ ಪ್ರತ್ಯೇಕ ಜಾರ್ಖಂಡ್ಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ನಾಂದಿ ಹಾಡಿದ್ದ ಪ್ರಾಮಾಣಿಕ ನಾಯಕ ಎನ್ನುವುದನ್ನು ಇತಿಹಾಸ ಗುರುತಿಸಿಯೇ ತೀರಬೇಕು. ಮೂಲತಃ ಲಾಲ್ಖಂಡ್-ಜಾರ್ಖಂಡ್ ಹೋರಾಟದ ಪರಿಕಲ್ಪನೆ ಹೊಂದಿದ್ದ ರಾಯ್ ತಮ್ಮ ಗ್ರಾಮೀಣ ಪ್ರದೇಶದ ಜಾಗೃತಿ ಶಿಬಿರಗಳಲ್ಲಿ ಗುರುತಿಸಿದ ಹೋರಾಟದ ಕಿಡಿಗಳೇ ಜಾರ್ಖಂಡ್ ಹೋರಾಟದ ರೂವಾರಿಗಳಾದ ಬಿನೋದ್ ಬಿಹಾರಿ ಮಹತೋ, ಆನಂದ್ ಮಹತೋ, ಶಿಬು ಸೊರೆನ್, ನಿರ್ಮಲ್ ಮಹತೋ, ಕೃಪಾಶಂಕರ್ ಚಟರ್ಜಿ, ಗುರುದಾಸ್ ಚಟರ್ಜಿ ಮುಂತಾದವರು. ತಮ್ಮ ಎಂಸಿಸಿ ಪಕ್ಷದ ಹೋರಾಟಗಳ ಮೂಲಕ ರಾಯ್ ಕೇವಲ ಕಾರ್ಮಿಕ ಸಂಘಟನೆಗೆ ಸೀಮಿತರಾಗಲಿಲ್ಲ. ಧನಬಾದ್ನ ಕಲ್ಲಿದ್ದಲು ಗಣಿ ನೌಕರರಿಗೆ ಉತ್ತಮ ಜೀವನ ಒದಗಿಸಲು ನೆರವಾಗುವುದಾದರೆ ಸಶಸ್ತ್ರ ಹೋರಾಟಗಳನ್ನೂ ಬೆಂಬಲಿಸಲು ರಾಯ್ ಸಿದ್ಧರಾಗಿದ್ದರು. ಹಾಗಾಗಿಯೇ ರಾಯ್ ಕೃಷಿಕರು, ಕಾರ್ಖಾನೆಗಳು, ಗಿರಣಿಗಳು, ಕಲ್ಲಿದ್ದಲು ಗಣಿ ಹೀಗೆ ಎಲ್ಲೆಡೆ ಜನಪ್ರಿಯರಾಗಿದ್ದರು. ಇದಕ್ಕೆ ಕಾರಣ ಅವರ ಪ್ರಾಮಾಣಿಕತೆ, ನೇರನಡೆ, ಅವಿರತ ಶ್ರಮ, ಸಂಘಟನಾ ಸಾಮಥ್ರ್ಯ ಮತ್ತು ಅಪ್ರತಿಮ ಉತ್ಸಾಹ. ಪಕ್ಕದ ಛತ್ತಿಸ್ ಘಡ್ ನಲ್ಲಿ ಶಂಕರ್ ಗುಹ ನಿಯೋಗಿ ನೇತೃತ್ವದಲ್ಲಿ ಛತ್ತಿಸ್ ಘಡ್ ಮುಕ್ತಿ ಮೋರ್ಚಾ ರೂಪುಗೊಳ್ಳುತ್ತಿದ್ದಂತೆಯೇ ಬಿಹಾರದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ರೂಪುಗೊಳ್ಳುತ್ತಿತ್ತು.

1971ರ ಈ ಕನಸು ನನಸಾಗಿದ್ದು 2000ದಲ್ಲಿ. ಆದರೆ ಆ ವೇಳೆಗಾಗಲೇ ಜಾರ್ಖಂಡ್ ನಾಯಕರ ನಿಷ್ಠೆ ಬದಲಾಗಿತ್ತು. ಶಿಬುಸೊರೆನ್ ಸೇರಿದಂತೆ ಹಲವರು ಕಾಂಗ್ರೆಸ್ ಮತ್ತಿತರ ಪಕ್ಷಗಳನ್ನು ಹಿಂಬಾಲಿಸಿದ್ದರು. ಅಧಿಕಾರ ರಾಜಕಾರಣಕ್ಕಾಗಿ ಎಂದೂ ಹಾತೊರೆಯದ ರಾಯ್ 1989ರಲ್ಲಿ ಸಂಸದರಾದ ನಂತರ ಬದಲಾದ ರಾಜಕೀಯ ಸನ್ನಿವೇಶ ಮತ್ತು ರಾಜಕಾರಣದಲ್ಲಿ ಹಣದ ಪ್ರಭಾವವನ್ನು ವಿರೋಧಿಸಿ ಚುನಾವಣಾ ರಾಜಕಾರಣದಿಂದ ದೂರವಾಗಿಯೇ ಇದ್ದರು. ಆದರೆ ಅವರ ತತ್ವನಿಷ್ಠೆ ಮತ್ತು ಕ್ರಾಂತಿಕಾರಿ ಧೋರಣೆಗಳಲ್ಲಿ ರಾಜಿಯಾಗಲಿಲ್ಲ. ಎಂಸಿಸಿ ಪಕ್ಷದ ಅನೇಕ ನಾಯಕರು ರಾಯ್ ಅವರ ನೇರ ನಡೆಯನ್ನು ಸಹಿಸದೆ ಹೊರನಡೆದದ್ದೂ ಉಂಟು. ಆದರೆ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಯಾರಿಂದಲೂ ಪ್ರಶ್ನಿಸಲಾಗುತ್ತಿರಲಿಲ್ಲ ಎನ್ನುವುದು ಮಾತ್ರ ಸತ್ಯ. ಸಂಸದರಾಗಿದ್ದಾಗ ತಮ್ಮ ಇಡೀ ವೇತನವನ್ನು ಪಕ್ಷದ ಸದಸ್ಯರಿಗೆ ಮತ್ತು ಕಲ್ಲಿದ್ದಲು ಗಣಿ ನೌಕರರ ಅಭಿವೃದ್ಧಿಗಾಗಿ ನೀಡುತ್ತಿದ್ದ  ರಾಯ್ ತಮ್ಮ ಪಿಂಚಣಿಯನ್ನು ರಾಷ್ಟ್ರಪತಿಗಳ ನಿಧಿಗೆ ಅರ್ಪಿಸುತ್ತಿದ್ದರು. ರಾಜಕಾರಣಿಗೆ ನಿವೃತ್ತಿ ವಯಸ್ಸು ಇರುವುದಿಲ್ಲ ಹಾಗಾಗಿ ಪಿಂಚಣಿಗೆ ಅರ್ಹರಲ್ಲ ಎನ್ನುವುದು ರಾಯ್ ಅವರ ಅಚಲ ನಿಲುವು ಆಗಿತ್ತು. ವಿದ್ಯುತ್ ಸೌಲಭ್ಯವೇ ಇಲ್ಲದ ಪಕ್ಷದ ಕಚೇರಿಯಲ್ಲಿ ತಂಗಿದ್ದ ರಾಯ್, ಕಲ್ಲಿದ್ದಲು ಗಣಿ ಕಾರ್ಮಿಕರು ಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯ ಪಡೆಯವವರೆಗೆ ತಾವು ವಿದ್ಯುತ್ ಬಳಸುವುದಿಲ್ಲ ಎಂಬ ಹಠ ತೊಟ್ಟಿದ್ದರು ಎನ್ನುತ್ತಾರೆ ಅವರೊಡನೆಯೇ ಬದುಕು ಸವೆಸಿದ ಸಂಗಾತಿ ಮುಖರ್ಜಿ. 

ತಾವು ಸಾಯುವ ಮುನ್ನ ಒಂದು ಬ್ಯಾಂಕ್ ಖಾತೆಯನ್ನೂ ಹೊಂದಿರದೆ 2600 ರೂಗಳನ್ನು ಇಟ್ಟುಕೊಂಡಿದ್ದ  ರಾಯ್ ಅವರ ಆಸ್ತಿ ಎನ್ನಬಹುದಾಗಿದ್ದ ಎಚ್.ಎಂ.ಟಿ. ಕೈಗಡಿಯಾರವನ್ನು ಕಳೆದ ವಾರವಷ್ಟೇ ಯಾರೋ ಲಪಟಾಯಿಸಿದ್ದರು. ಅದು ರಾಯ್ ತಮ್ಮ ಜೀವಿತಕಾಲದಲ್ಲಿ ಪಡೆದಿದ್ದ ಏಕೈಕ ಉಡುಗೊರೆಯಾಗಿತ್ತು. ರಾಯ್ ಅವರ ಬದುಕು ಶ್ರಮಜೀವಿಗಳಿಗಾಗಿಯೇ ಮುಡಿಪಾಗಿದ್ದ ಒಂದು ಸುದೀರ್ಘ ಪಯಣ. ಕಲ್ಲಿದ್ದಲು ಮಾಫಿಯಾ, ಕಾರ್ಪೋರೇಟ್ ಉದ್ಯಮಿಗಳು ಮತ್ತು ಪ್ರಭುತ್ವ ಈ ಮೂರೂ ಪ್ರಬಲ ಕೇಂದ್ರಗಳ ವಿರುದ್ಧ ಏಕಾಂಗಿಯಾಗಿಯೇ ಹೋರಾಡಿದ್ದ ರಾಯ್ ಎಂದಿಗೂ ರಾಜಿಯಾಗಲಿಲ್ಲ ಅಥವಾ ಶ್ರಮಜೀವಿಗಳ ಹಿತಾಸಕ್ತಿಯನ್ನು ಕಡೆಗಣಿಸಲಿಲ್ಲ. ಇಂದು ಜಾರ್ಖಂಡ್ ಕಾರ್ಪೋರೇಟ್ ಪಾಖಂಡಿಗಳ ವಶವಾಗಿದೆ. ಅಲ್ಲಿನ ಕಲ್ಲಿದ್ದಲು ಗಣಿಗಳು ವಿದೇಶಿ ಹಣಕಾಸು ಬಂಡವಾಳ ಮತ್ತು ಸ್ವದೇಶಿ ಸ್ವಾರ್ಥ ರಾಜಕಾರಣಿಗಳ ಸಾಮ್ರಾಜ್ಯದ ಪೀಠದಂತೆ ಕಾಣುತ್ತಿದೆ. ರಾಯ್ ಬೆಳೆಸಿದ ಕುಡಿಗಳು ಇಂದು ಅವರು ವಿರೋಧಿಸಿದವರಿಗೆ ನೀರೆರೆಯುತ್ತಿದ್ದಾರೆ. ಆದರೆ ರಾಯ್ ಮೂಡಿಸಿರುವ ಕ್ರಾಂತಿಯ ಗೆರೆಗಳು ಧನಬಾದ್ ಕಲ್ಲಿದ್ದಲು ಗಣಿಗಳ ಕಪ್ಪು ಛಾಯೆಯ ನಡುವೆ ಮಿಂಚುಳ್ಳಿಯಂತೆ ಕಾಣುತ್ತಲೇ ಇರುತ್ತದೆ.

ಧನಬಾದ್ ನ ಕಲ್ಲಿದ್ದಲು ಬೆರೆತ ಹಸಿ ಮಣ್ಣನ್ನು ಬೊಗಸೆಯೊಳು ಹಿಡಿದಾಗ ಅದರೊಳಗೆ ಲಕ್ಷಾಂತರ ಕಾರ್ಮಿಕರ ಬೆವರಿನ ವಾಸನೆ ಬರುವಂತೆಯೇ ಅರುಣ್ ಕುಮಾರ್ ರಾಯ್ ಅವರ ಕ್ರಾಂತಿಯ ನೆತ್ತರ ಕಣಗಳೂ ಕಾಣುತ್ತವೆ. ಮಣ್ಣ ಕಣದೊಳಗಿನ ರಕ್ತದ ಕಣಗಳನ್ನು ನೋಡುವ ಕಾಣ್ಕೆ ಇದ್ದವರಿಗೆ ರಾಯ್ ಶ್ರಮಜೀವಿಗಳ ಹೋರಾಟದ ಧೃವತಾರೆಯಾಗಿ ಕಂಡುಬರುತ್ತಾರೆ. ಇಂತಹ ಒಂದು ಅದ್ಭುತ ಚೇತನ ನಮ್ಮನ್ನಗಲಿದೆ. “ ನೀವಿನ್ನೂ ಇರಬೇಕಿತ್ತು ,,,,,,” ಎನ್ನುವ ಪಟ್ಟಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.

ಕೊನೆಯ ಹನಿ : ನೀವು ನಮ್ಮ ನಡುವಿನ ನಗರ ನಕ್ಸಲರಾಗಿಯಾದರೂ ಇರಬೇಕಿತ್ತು ರಾಯ್. ಧನಬಾದ್ನ ಕರಿನೆಲದ ಮಣ್ಣ ಕಣ ಕಣಗಳಲಿ ನಿಮ್ಮ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಧ್ವನಿಸುತ್ತದೆ. ಮತ್ತೊಮ್ಮೆ ಹೇಳಿ ರಾಯ್ “ ಲಾಲ್ ಸಲಾಂ ಇಂಕ್ವಿಲಾಬ್ ಜಿಂದಾಬಾದ್ ”. ಹೇಳಲಾಗುತ್ತಿಲ್ಲವೇ, ಏಕೆ ರಾಯ್ ? ನಮಗೆ ನಿಮ್ಮ ದನಿ ಕೇಳುತ್ತಲೇ ಇರುತ್ತದೆ. ಹೋಗಿಬನ್ನಿ ಕಾಮ್ರೇಡ್ ಎ ಕೆ ರಾಯ್. ಲಾಲ್ ಸಲಾಂ.