ಆ ಏಳನೆಯ ಆಟಗಾರ ಯಾರು? 

ಆ ಏಳನೆಯ ಆಟಗಾರ ಯಾರು? 

ಬೇರೊಂದು ವೇದಿಕೆಯಲ್ಲಿ, ದೇಶವನ್ನು ಕಾಯುವ ಯೋಧರ ಶೌರ್ಯದ ಕುರಿತು ಮಾತನಾಡುವಾಗ, ಅವರಿಗೆ ಸಿಗಬೇಕಾದಷ್ಟು ಪ್ರಚಾರ, ಪುರಸ್ಕಾರ, ಸಂಭಾವನೆ ಸಿಗದೇ ಕ್ರಿಕೆಟಿಗರನ್ನೇ ದೇವರನ್ನಾಗಿ ನೋಡುವ ಪ್ರವೃತ್ತಿಯ ಬಗ್ಗೆ ಕಟುವಾಗಿ ಮಾತನಾಡುವುದು ಇದ್ದೇ ಇದೆ. ಅದು ಬೇರೆಯದೇ ಮಾತು. ಆದರೆ, ರಣರಂಗವನ್ನೂ, ಕ್ರೀಡಾರಂಗವನ್ನೂ  ಪ್ರತ್ಯೇಕಿಸಿ ನೋಡಬೇಕಾದ ಮನೋಭಾವವನ್ನೂ ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ವಿಶ್ವ ಕಪ್ ನಲ್ಲಿ ಶತಕ ಗಳಿಸುವುದನ್ನು ವನವಿಹಾರದಷ್ಟೇ ಸುಲಭ ಎನ್ನುವಂತೆ ಆಡುವ ರೋಹಿತ್ ಶರ್ಮಾರನ್ನು ಹೊಗಳುವ ಮುನ್ನ ಈ ಪೀಠಿಕೆ ಅವಶ್ಯಕವೆನಿಸಿತು. 

ವಿಶ್ವ ಕಪ್ ನ್ನು ಗೆಲ್ಲಬೇಕೆಂದು ಛಲತೊಟ್ಟು ಆಡುತ್ತಿರುವ ಭಾರತ ತಂಡದ ಸದಸ್ಯರು ತಂಗುವ ಹೊಟೆಲ್ ನಲ್ಲೇ ಭಾರತ ಗೆಲ್ಲಲು ಅದನ್ನು ಹುರಿದುಂಬಿಸಲು ವಿವಿಧೆಡೆಗಳಿಂದ ಬಂದ ಕ್ರಿಕೆಟ್ ಅಭಿಮಾನಿಗಳ ದಂಡು ಕೂಡ ತಂಗಿರುತ್ತದೆ. ಮೈದಾನದಲ್ಲೆರಗುವ ಸವಾಲುಗಳಿಗಿಂತ ಈ ಅಭಿಮಾನಿಗಳ ಅಭಿಮಾನದ ಒತ್ತಡವನ್ನು ನಿಭಾಯಿಸುವುದು ನಮ್ಮ ತಂಡದ ಮುಖ್ಯ ಸವಾಲು. ಬೃಹತ್ ಪ್ರತಿಭೆಯಿಂದ ಅಭಿಮಾನಿಗಳ ಅಂತರಂಗವನ್ನಾಕ್ರಮಿಸಿರುವ ಆಟಗಾರರ ಮೇಲಂತೂ ಆ ಒತ್ತಡ ಇನ್ನೂ ಹೆಚ್ಚು. ಅಂತಹ ಆಟಗಾರರಲ್ಲಿ ರೋಹಿತ್ ಸಹಜವಾಗೇ ಮೊದಲಿಗರು. 

ನಿಮಗಿದು ತಿಳಿದಿರುತ್ತದೆ: ದೊಡ್ಡ ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸುವ ಅಡಿಗೆಯವರನ್ನು ಕೇಳಿನೋಡಿ. ಅವರು ಊಟಮಾಡುವುದು ತೀರಾ ಕಡಿಮೆ.  ದೀರ್ಘಾವಧಿ ಒಲೆಯ ಮುಂದೆ ನಿಂತು ಬೆಂದು, ಅತಿಥಿಗಳೆಲ್ಲರ ಊಟ  ವೇಳೆಗೆ ಹೈರಾಣಾಗಿರುತ್ತಾರೆ. ಊಟದ ಬಗ್ಗೆ ಯಾವುದೇ ದೂರುಗಳಿಲ್ಲದಿದ್ದರೆ ಅದೇ ಅವರ ಅಂದಿನ ವೃತ್ತಿ ಜೀವನದ ಸಾರ್ಥಕತೆ. ಶಾಸ್ತ್ರಕ್ಕೆ ಎರಡು ತುತ್ತು ತಿಂದು  ಖಾಲಿಮಾಡಿದರೆ ಸಾಕಪ್ಪ ಎಂದು ನಿಡುಸುಯ್ದಿರುತ್ತಾರೆ. 

ಗಂಟೆಗಟ್ಟಲೆ ಆಡಬೇಕಾದ ಕ್ರಿಕೆಟ್ ಪಂದ್ಯದಂಥ ಸುದೀರ್ಘ ಮ್ಯಾಚ್ಒಂದರ ನಂತರ ಕ್ರಿಕೆಟಿಗರೂ ಹೆಚ್ಚೂ ಕಡಿಮೆ ಅದೇ ಮನಸ್ಥಿತಿಯಲ್ಲುರುತ್ತಾರೆ. ಮ್ಯಾಚ್ ನಂತರದ ಮಾಧ್ಯಮ ಗೋಷ್ಠಿ ಎಷ್ಟು ಹೊತ್ತಿಗೆ ಮುಗಿದರೆ ಸಾಕೆಂಬ ತವಕದಲ್ಲಿರುತ್ತಾರೆ. ಹೊಟೆಲ್ ರೂಮ್ ಗೆ ಹೋಗಿ ಬಿದ್ದುಗೊಂಡರೆ ಸಾಕೆಂಬ ಹವಣಿಕೆಯಲ್ಲಿರುತ್ತಾರೆ. ಪ್ರಚಾರ, ಗಿಚಾರ ಬೇಡ. 

ರೋಹಿತ್ ಅಂತಹ ಒಂದು ನಿರುದ್ವಿಗ್ನ ಸ್ಥಿತಿಯಲ್ಲಿದ್ದಾರೆ. ವಿಶ್ವ ಕಪ್ ಗೆಲ್ಲುವುದೊಂದೇ ಅವರ ಏಕೈಕ ಗುರಿ. ಆದರೆ, ಆ ಗುರಿಯತ್ತ ಒಮ್ಮೆಗೇ ಹಾರಲಾಗದು, ಒಂದು ಬಾರಿಗೆ ಒಂದು ಮೆಟ್ಟಿಲು ಮಾತ್ರ. ಆ ಗುರಿಯನ್ನು ಮುಟ್ಟಲು ಅಂತಹ ಮನಸ್ಥಿತಿ ಅವಶ್ಯಕ. ಕಳೆದ ಸುಮಾರು ಒಂದು ತಿಂಗಳಿನಲ್ಲಿ ಭಾರತ ತಂಡ ಮಾಡಿದ್ದೆಲ್ಲವೂ ಸರಿ ಎಂದು ಹೇಳಲಿಕ್ಕೆ ಬಾರದಿದ್ದರೂ, ಅದರ ದಿಗ್ವಿಜಯ ಯಾತ್ರೆ ಅದರ ಸಣ್ಣಪುಟ್ಟ ತಪ್ಪುಗಳನ್ನು ಮುಚ್ಚಿಹಾಕಿದೆ. 

ಸರಣಿ ಆರಂಭದ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಮತ್ತು ನ್ಯೂಜಿಲ್ಯಾಂಡ್  ಸೆಮಿಫೈನಲ್ ಹಂತ ತಲುಪುವದೆಂದು ಬಹುತೇಕರ ನಿರೀಕ್ಷೆ ಇತ್ತು. ಆ ನಿರೀಕ್ಷೆ ನಿಜವಾಗಿರುವುದಾದರೂ ಭಾರತ ಲೀಗ್ ಹಂತದ ನಂತರ ಅಗ್ರಾಂಕದಲ್ಲಿರುವುದನ್ನು ಯಾರೂ ಊಹಿಸಿರಲಾರರು. ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾಗಳ ಪೈಕಿ ಯಾವುದೇ ದೇಶ ಆಶ್ಚರ್ಯಕರವಾದ ರೀತಿಯಲ್ಲಿ ಸೆಮಿಫೈನಲ್ ಪ್ರವೇಶಿಸಬಹುದೆಂಬ ಎಣಿಕೆ ಕೂಡ ಇತ್ತು. ನಾನು ತುದಿಗಾಲ ಮೇಲೆ ನಿಂತು ನೋಡುವುದಕ್ಕೆ ಕಾತುರನಾಗಿರುವುದು ಭಾರತ ಮತ್ತು ಇಂಗ್ಲೆಂಡ್ ಫೈನಲ್ ಅನ್ನು. ನಿಜ, ಫೈನಲ್ಗೆ ಮುಂಚೆ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಬೇಕಾಗಿದೆ. ಟೂರ್ನಮೆಂಟ್ ಆರಂಭಕ್ಕೆ ಮುನ್ನ ನಡೆದ ಪೂರ್ವಭಾವಿ ಪಂದ್ಯವೊಂದರಲ್ಲಿ ನ್ಯೂಜಿಲ್ಯಾಂಡ್ ಭಾರತವನ್ನು ಬಗ್ಗು ಬಡಿದಿತ್ತು. 

ನ್ಯೂಜಿಲ್ಯಾಂಡ್ ಮತ್ತು ಫೈನಲ್ ನಲ್ಲಿ ಎದುರಾಗಬಹುದಾದ ಇಂಗ್ಲೆಂಡ್ ತಂಡವನ್ನು ಭಾರತ ಸಂಹರಿಸಿದ್ದೇ ಆದಲ್ಲಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ವಿರುದ್ಧ ಜಯ ಸಾಧಿಸಿದ ಅಭೂತಪೂರ್ವ ಸಾಧನೆ ಭಾರತದ್ದಾಗುತ್ತದೆ. ಅಂತಹ ದಾಖಲೆ ನಿರ್ಮಿಸಲೋಸುಗ, ತನ್ಮೂಲಕ ಕೀರ್ತಿಗೆ ಪಾತ್ರವಾಗಲೋಸುಗ ಭಾರತ ತಂಡ ಫೈನಲ್ ನಲ್ಲಿ ಇಂಗ್ಲೆಂಡ್ ಜತೆ ಮುಖಾಮುಖಿಯಾಗಲಿ ಎಂಬ ಹಂಬಲ ನನ್ನದು. 

ದಕ್ಷಿಣ ಆಫ್ರಿಕಾ ಅನಿರೀಕ್ಷಿತವಾಗಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸದಿದ್ದರೆ, ಭಾರತ ಸೆಮಿಫೈನಲ್ ನಲ್ಲೇ ಇಂಗ್ಲೆಂಡನ್ನು ಎದುರಿಸುವುದಿತ್ತು. ಮೊದಲೆರಡೂ ಆವೃತ್ತಿಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಭಾರತ 1983 ರಲ್ಲಿ ಇಂಗ್ಲೆಂಡನ್ನು ಸೆಮಿಫೈನಲ್ ನಲ್ಲಿ ಮಣಿಸಿತ್ತು. ಅಂದು ಭಾರತ ನೀಡಿದ ಪ್ರದರ್ಶನ ನಮ್ಮ ತಂಡ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುತ್ತಿರುವುದಕ್ಕೆ ದ್ಯೋತಕವಾಗಿತ್ತು. ಗೆದ್ದ ಆ ಹುಮ್ಮಸ್ಸೇ ಅಷ್ಟು ಹೊತ್ತಿಗೆ ಎರಡೂ ವಿಶ್ವ ಕಪ್ ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಪ್ರಬಲ ವೆಸ್ಟ್ ಇಂಡೀಸ್ ತಂಡವನ್ನು ಹಿಮ್ಮೆಟ್ಟಿಸುವುದಕ್ಕೆ ಸಹಾಯಕವಾಯಿತು. 

ಇಂದಿನ ಭಾರತ ತಂಡ ಹಿಂದೆಂದಿಗಿಂತಲೂ ಪರಿಪೂರ್ಣವಾಗಿದೆ. ಯಾವುದೇ ಒಂದು ತಂಡದ ವಿರುದ್ಧ ಒಂದುದಿನದ ಪಂದ್ಯದಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಕೀರ್ತಿ ಆಸ್ಟ್ರೇಲಿಯಾದ್ದು. ನ್ಯೂಜಿಲ್ಯಾಂಡ್ ಅದು ಗೆದ್ದಿರುವ ಒಟ್ಟು ಪಂದ್ಯಗಳು 91. ಶ್ರೀಲಂಕಾವನ್ನು ಲೀಲಾಜಾಲವಾಗಿ ಸೋಲಿಸಿದ ಭಾರತ ಆ ದಾಖಲೆಯನ್ನು ಸರಿಗಟ್ಟಿದೆ. 

ವಿಶ್ವ ಕಪ್ ಅಸಾಮಾನ್ಯ ಪ್ರತಿಭಾವಂತರನ್ನು ಎಲ್ಲಾ ವಿಭಾಗಗಲ್ಲಿ ಕಂಡಿದೆ. ಹಾಗಿದ್ದಾಗ್ಯೂ,  ಆರಂಭಿಕ ಆಟಗಾರರಿಬ್ಬರೂ ವಿಶ್ವ ಕಪ್ ಪಂದ್ಯಾವಳಿಯ ಒಂದೇ ಪಂದ್ಯದಲ್ಲಿ ಶತಕ ಬಾರಿಸಿರುವುದು ಮೂರೇ ಬಾರಿ. ಶ್ರೀಲಂಕಾದ ಉಪುಲ್ ತರಂಗ ಮತ್ತು ದಿಲ್ಶಾನ್ ವಿಶ್ವ ಕಪ್ ನ ಒಂದೇ ಆವೃತ್ತಿಯಲ್ಲಿ (2011) ಎರಡು ಬಾರಿ ಅದನ್ನು ಸಾಧಿಸಿದರು. ಮೊನ್ನೆ ಲೋಕೇಶ್ ರಾಹುಲ್ ಮತ್ತು ರೋಹಿತ್ ಶರ್ಮ ಆ ದಾಖಲೆಯನ್ನು ಸಮಗಟ್ಟಿದರು. 

ಆ ದಾಖಲೆಯನ್ನು ನಿರ್ಮಿಸುವ ಹೊತ್ತಿನಲ್ಲೇ ವಿಶ್ವ ಕಪ್ ನ ಆರಂಭಿಕ ವಿಕೆಟ್ಗೆ ಅತೀ ಹೆಚ್ಚು ರನ್ ಪೇರಿಸಿದ ದಾಖಲೆಯನ್ನು ಒಂದೇ ಸರಣಿಯಲ್ಲಿ ಎರಡನೇ ಬಾರಿಗೆ ಮುರಿದಿದ್ದಾರೆ. ಅಗ್ರಶ್ರೇಣಿಗೆ ಸೇರಿದವರೆಲ್ಲರೂ ಭಾರತೀಯರೇ ಎಂಬುದು ಹೆಮ್ಮೆ: ರೋಹಿತ್ ಶರ್ಮ-ಲೋಕೇಶ್ ರಾಹುಲ್ 183 ಮತ್ತು 180; ರೋಹಿತ್ ಶರ್ಮ-ಶಿಖರ್ ಧಾವನ್ 175 (2015); ಅಜಯ್ ಜಡೇಜಾ-ತೆಂಡೂಲ್ಕರ್ 163 (1996), ಮತ್ತು ಸಚಿನ್ ತೆಂಡೂಲ್ಕರ್-ವಿರೇಂದರ್ ಸೆಹ್ವಾಗ್ 153 (2003).  

ಎಲ್ಲದಕ್ಕೂ ಮೀರಿದ ಸಾಧನೆಯೆಂದರೆ, ರೋಹಿತ್ ವಿಶ್ವ ಕಪ್ ಪಂದ್ಯಾವಳಿಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದ ಸಚಿನ್ರ ದಾಖಲೆಯ ಸಹ-ನಿರ್ಮಾತೃವಾಗಿದ್ದಾರೆ. ಆದರೆ ಆರು ವಿಶ್ವ ಕಪ್ ಸೆಂಚುರಿ ಗಳಿಸಲು ಸಚಿನ್  ಆಡಿದ ಮ್ಯಾಚ್ ಗಳ ಸಂಖ್ಯೆ 44, ರೋಹಿತ್ ಮೊನ್ನೆಯವರೆಗೂ ಆಡಿದ್ದು ಕೇವಲ 16. ತಲಾ ಐದು ಶತಕ ಗಳಿಸಿದ ರಿಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಕ್ಕಾರ ತಮ್ಮ ಸಾಧನೆಗಾಗಿ ಕ್ರಮವಾಗಿ 42 ಮತ್ತು 35 ಪಂದ್ಯಗಳನ್ನಾಡಬೇಕಾಯಿತು.  ಆ ಐದು ಶತಕಗಳಲ್ಲಿ ನಾಲ್ಕನ್ನು ಸಂಗಕ್ಕಾರ ಕಳೆದ ವಿಶ್ವಕಪ್ನಲ್ಲಿ ಸಿಡಿಸಿದರು. ಆದರೆ, ರೋಹಿತ್ ತಮ್ಮ ಆರು ಶತಕಗಳಲ್ಲಿ ಐದನ್ನು ಪ್ರಸಕ್ತ ವಿಶ್ವ ಕಪ್ನಲ್ಲೇ ಗಳಿಸಿರುವುದು ಬೃಹತ್ ಸಾಧನೆ. 

ಗಾಯಗೊಂಡು,  ಟೂರ್ನಿಯಿಂದ ಅಕಾಲಿಕವಾಗಿ ನಿರ್ಗಮಿಸಿದ ಅನುಭವಿ ಆಟಗಾರ ಶಿಖರ್ ಧಾವನ್ರನ್ನು ಮರೆತೇಬಿಡುವಂತೆ ರಾಹುಲ್ ಭರವಸೆ ಮೂಡಿಸಿದ್ದಾರೆ. ಧ್ಯಾನಯೋಗದಲ್ಲಿ ನಿರತನಾದಂತೆ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಪ್ರತಿಭೆಯ ಸಂಪೂರ್ಣ ಪ್ರದರ್ಶನವನ್ನು ಕ್ರಿಕೆಟ್ ಪ್ರೇಮಿಗಳಿಗೆ ಉಣಿಸಲು ಕಿರಿಯ ರಿಷಭ್ ಪಂತ್ ಕಾಯುತ್ತಿದ್ದಾರೆ. ನಿಧಾನಗತಿಯ ಆಟವಾಡುತ್ತಾ ಟೀಕಾಕಾರರ ಪ್ರಹಾರಕ್ಕೆ ಮರುಪ್ರಹಾರವೆಂಬಂತೆ ವಿಕೆಟ್ ಹಿಂದೆ ಅದ್ಭುತ ಪ್ರದರ್ಶನ ನೀಡಿದ ದಿನವೇ ಎಂಎಸ್ ಧೋನಿ ತಮ್ಮೆ ೩೮ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಅಪಾರ ಅನುಭವದ ಪೂರ್ಣ ಪ್ರಯೋಜನವನ್ನು ತಂಡಕ್ಕೆ ನೀಡಲು ನಾಕ್ಔಟ್ ಹಂತಕ್ಕೆ ಕಾಯುತ್ತಿದ್ದರೇನೊ, ನೋಡೋಣ. ಉಳಿದಂತೆ, ಹರ್ದಿಕ್ ಪಾಂಡ್ಯ ತಂಡಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಉಪಯುಕ್ತ ಸೇವೆ ಸಲ್ಲಿಸುತ್ತಿದ್ದಾರೆ.  

ದಿನೇಶ್ ಕಾರ್ತೀಕ್ ಮತ್ತು ರವೀಂದ್ರ ಜಡೇಜಾರಿಗೆ ಆಡಲು ಅವಕಾಶ ಸಿಕ್ಕಿದ್ದು ತಡವಾಗಿ. ದಿನೇಶ್ ಆ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ ನಿಜ, ಆದರೆ ತಂಡ ಆತನನ್ನು ಅವಲಂಬಿಸಿಕೊಳ್ಳಬಹುದು. ದಿನೇಶ್ ರನ್ನು ಕಡೆಗಣಿಸಿ ಗಾಯಗೊಂಡ ಆಲ್ರೌಂಡರ್ ವಿಜಯ್ ಶಂಕರ್ ಬದಲಿಗೆ ಕರೆಸಿಕೊಂಡ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಗೆ ಸೆಮಿಫೈನಲ್ ಪಂದ್ಯದಲ್ಲಿ ಅವಕಾಶ ಕೊಟ್ಟರೂ ಆಶ್ಚರ್ಯವಿಲ್ಲ. ಅಂತಹ ಸಂದರ್ಭದಲ್ಲಿ, ಅವರನ್ನು ರಿಷಭ್ ಪಂತ್ ಗೆ ಬದಲು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೆ ತಂಡಕ್ಕೆ ಅನುಕೂಲವಾಗಿ ಪರಿನಾಯಿಸಬಹುದು. ಜಡೇಜಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು, ಅವರ ಫೀಲ್ಡಿಂಗ್ ಬಗ್ಗೆ ದೂಸ್ರಾ ಮಾತಿಲ್ಲ. 

ಬುಮ್ರಾ ತಾವೇಕೆ ಎದುರಾಳಿಯ ಆತ್ಮವಿಶ್ವಾಸವನ್ನು ಕೆಡಿಸಬಲ್ಲ ಬೌಲರ್ ಎಂಬ ಖ್ಯಾತಿ ಹೊತ್ತಿದ್ದೇನೆಂಬುದಕ್ಕೆ ಮತ್ತೊಮ್ಮೆ ನಿದರ್ಶನ ಒದಗಿಸಿದರು. ಅತಿ ಕಡಿಮೆ ಏಕದಿವಸೀಯ ಪಂದ್ಯಗಳಲ್ಲಿ ೧೦೦ ವಿಕೆಟ್ ಕಬಳಿಸಿದ ಬೌಲರ್ಗಳ ಪೈಕಿ ಎರಡನೇ ಸ್ಥಾನವನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಪಡೆದುಕೊಂಡರು. ಭುವನೇಶ್ವರ್ ಕುಮಾರ್/ಮೊಹಮ್ಮದ್ ಶಮಿ ಮತ್ತೊಂದು ತುದಿಯಿಂದ ಅವರ ಮೇಲೆ ಹೆಚ್ಚಿನ ಒತ್ತಡವಾಗದಂತೆ ಬೌಲ್ ಮಾಡಬೇಕು. ಸೆಮಿಫೈನಲ್ ನಲ್ಲಿ  ಭುವಿ ಮತ್ತು ಕುಮಾರ್ ಇಬ್ಬರನ್ನೂ ಆಡಿಸಬೇಕೋ ಅಥವಾ ಯಜುವೇಂದ್ರ ಚಹಲ್ ಮತ್ತು ಕುಲದೀಪ್ ಯಾದವ್ ನಡುವೆ ಒಬ್ಬರನ್ನು ಆಯ್ಕೆಮಾಡಬೇಕೋ ಎಂಬುದು ಸ್ಥಳೀಯ ಸಂದರ್ಭ/ವಾತಾವರಣವನ್ನೂ, ಎದುರಾಳಿಗಳ ಪೈಕಿ ಎಷ್ಟು ಜನ ಎಡಗೈ ಬ್ಯಾಟ್ಸ್ ಮ್ಯಾನ್ ಇರುತ್ತಾರೆ ಎಂಬುದನ್ನೂ ಅವಲಂಬಿಸಿರುತ್ತೆ. 

ಲಂಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗನ್ನು ಬಲಗೊಳಿಸುವ ನಿಟ್ಟಿನಲ್ಲಿ ಕೇವಲ ಐದು ಜನ ಬೌಲರ್ಗಳನ್ನು ಆಡಿಸಲಾಯಿತು. ಭುವಿ ಉದಾರವಾಗಿ ರನ್ ನೀಡಿದರು. ಆದರೆ, ಒಟ್ಟಾರೆ ಭಾರತ ಲಂಕಾವನ್ನು ಹದ್ದುಬಸ್ತಿನಲ್ಲಿಟ್ಟಿತು. ಆ ಕಾರಣದಿಂದ, ಆರನೇ ಬೌಲರ್ನ ಅಭಾವ ಕಾಣಲಿಲ್ಲ. ನಾಕ್ ಔಟ್ ಪಂದ್ಯದ(ಗಳ)ಲ್ಲಿ ಈ ತಂತ್ರ ಮುಳುವಾಗಬಹುದು. ಚಳಿರಾತ್ರಿಯಂದು ತುಂಡಾದ ಕಂಬಳಿ ಹೊದ್ದಿಕೊಂಡು ಕಾಲನ್ನೂ, ಮುಖವನ್ನೂ ಏಕಕಾಲಕ್ಕೆ ಮುಚ್ಚಿಕೊಳ್ಳಲಾಗದೇ ನಿದ್ದೆಕೆಡುವಂಥ ಪರಿಸ್ಥಿತಿ. ಏಳನೆಯವನು ಬ್ಯಾಟ್ಸ್ ಮ್ಯಾನ್ ಇರಬೇಕೇ, ಬೌಲರ್ ಇದ್ದರೆ ಒಳ್ಳೆಯದೇ ಎಂಬ ಸಂಧಿಗ್ಧ ಸ್ಥಿತಿ. ಭಾರತ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಅದರ ಮುನ್ನಡೆ ನಿರ್ಧಾರವಾಗುತ್ತದೆ.