ಪಪ್ಪು ಎಂದವರ ಬುದ್ದಿವಂತಿಕೆಯೇ ಬೆತ್ತಲು

ಪಪ್ಪು ಎಂದವರ ಬುದ್ದಿವಂತಿಕೆಯೇ ಬೆತ್ತಲು

ಪ್ರಧಾನಿ ನರೇಂದ್ರ ಮೋದಿ ತಂತ್ರಜ್ಞಾನ ಕುರಿತು ಇತ್ತೀಚೆಗೆ ನೀಡಿರುವ ಹೇಳಿಕೆಗಳಿಂದ ನಗೆಪಾಟಲಿನ ವಸ್ತುವಾಗುತ್ತಿದ್ದಾರೆ ಎನ್ನುತ್ತಾರೆ ಜಿ.ಆರ್.ಸತ್ಯಲಿಂಗರಾಜು.

ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಏನೂ ಮಾಡಿಲ್ಲ, ರಾಹುಲ್ ಗಾಂಧಿ ಪಪ್ಪು ಎಂದೇ ವಾದಮಂಡಿಸುತ್ತಿದ್ದ ಪ್ರಧಾನ ಮಂತ್ರಿ ಮೋದಿ, ಸಂಸತ್ ಚುನಾವಣೆಯ ಕೊನೆಯ ಮೂರು ಹಂತಗಳಿರುವಾಗ ರಾಜೀವ್ ಗಾಂಧಿ ವಿಚಾರವನ್ನೆತ್ತಿಕೊಂಡರು, ಭಾರೀ ಟೀಕೆಗೊಳಗಾದರು.

 ಇಷ್ಟಕ್ಕೇ ಸುಮ್ಮನಾಗದೆ ಬಾಲಾಕೋಟ್ ದಾಳಿಗೆ ಮಳೆ ಮೋಡದ ವಾತಾವರಣದಲ್ಲೇ ಕಾರ್ಯಾಚರಣೆ ಮಾಡಿ ಇದರಿಂದ ಶತ್ರುರಾಷ್ಟ್ರದ ರೆಡಾರ್ ಗಳಿಗೆ ಸುಳುಹು ಸಿಕ್ಕಲ್ಲ ಎಂದೇಳಿದ್ದೆ ಎನ್ನುವ ಮೂಲಕ, ರೆಡಾರ್ ಗಳು ಎಂಥಾ ವಾತಾವರಣದಲ್ಲು ಕಣ್ಗಾವಲು ಕಾಯುವ ಸಾಮರ್ಥ್ಯ ಹೊಂದಿರುತ್ತವೆಂಬ ವೈಜ್ಞಾನಿಕ ಸತ್ಯವನ್ನ ಮರೆಮಾಚಿಬಿಟ್ಟರು. ಅಲ್ಲಿಗೆ ವಿಜ್ಞಾನದಲ್ಲೂ ನಾನೇ ಅತಿಯಾಗಿ ತಿಳಿದಿದ್ದೇನೆ, ಸೇನಾಧಿಕಾರಿಗಳಿಗೆ ಹೇಳಿಕೊಟ್ಟಿದ್ದೇನೆ ಎಂದು ಬಿಂಬಿಸಿಕೊಂಡುಬಿಟ್ಟರು. ಒಸಾಮಾ  ಬಿನ್ ಲಾಡೆನ್ ವಿರುದ್ದದ ಕಾರ್ಯಾಚರಣೆಯನ್ನ ಅಂದಿನ ಅಮೆರಿಕ ಅಧ್ಯಕ್ಷ ಒಬಾಮಾ ನಡುರಾತ್ರಿಯಲ್ಲೂ ಸ್ಟ್ರಾಂಗ್ ರೂಮಲ್ಲಿ ಸೈನ್ಯಾಧಿಕಾರಿಗಳ ಜತೆ ಕೂತು ವೀಕ್ಷಿಸಿ, ಅದು ಯಶಸ್ಸಾದಾಗಲೇ ಸಮಾಧಾನದ ನಿಟ್ಟುಸಿರು ಎಳೆದಿದ್ದರು. ಅವರ ಅಷ್ಟೊಂದು ಕಾಳಜಿಗೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆ ರೀತಿಯ ಮೆಚ್ಚುಗೆ ತನಗೂ ದಕ್ಕಲಿದೆ ಎಂಬ ಲೆಕ್ಕದಿಂದ ಮೋಡ ಮಳೆ ರೇಡಾರ್ ಬಗ್ಗೆ ಹೇಳಿಕೆ ಕೊಟ್ಟು ಮೋದಿಯವರೇ ಟೀಕೆಗೊಳಗಾಗಿದ್ದಾರೆ.

 1990 ರ ಬಳಿಕವೇ ಡಿಜಿಟಲ್ ಕ್ಯಾಮೆರಾ, 1995   ರ ಬಳಿಕವೇ ಇ-ಮೇಲ್  ನಮ್ಮ ರಾಷ್ಟ್ರದಲ್ಲಿ ಜನಸಾಮಾನ್ಯರ ಕೈಗೆ ಸಿಗುವಂತಾಗಿದ್ದು. ಈ ತಂತ್ರಜ್ಞಾನಗಳು ಮೂಲತ: ಆವಿಷ್ಕಾರವಾಗಿದ್ದು ಕೂಡ ಅಮೆರಿಕಾದಲ್ಲಿ. ಅದರ ಉದ್ದೇಶ ಕೂಡ ಸೈನ್ಯದವರಿಗೆ  ನೆರವಾಗುವುದೇ ಆಗಿತ್ತು.  ತದನಂತರದಲ್ಲೆ ಈ ತಂತ್ರಜ್ಞಾನಗಳು ಶ್ರೀಸಾಮಾನ್ಯನ ಬಳಕೆಗೂ ಲಭ್ಯವಾಗುತ್ತಾ ಹೋಗಿದ್ದು ಎಂಬುದು ವಾಸ್ತವ.  ಹೀಗಿದ್ದರೂ ಮೋದಿಯವರು 1980 ರಲ್ಲೇ ಡಿಜಿಟಲ್ ಕ್ಯಾಮೆರಾಬಳಸಿ, ಅಡ್ವಾಣಿಯವರ ವರ್ಣಚಿತ್ರ ತೆಗೆದು ಇಮೇಲ್ ಮೂಲಕ ಕಳುಹಿಸಿಬಿಟ್ಟಿದ್ದರಂತೆ! ಇದನ್ನ ಕಂಡು ಅಡ್ವಾಣಿಯೇ ಬೆರಗಾಗಿದ್ದರಂತೆ. ಹೀಗಂತ ಖುದ್ದು ಮೋದಿಯೇ ಸಂದರ್ಶನದಲ್ಲಿ ಹೇಳಿಕೊಂಡಿರುವುದು ಅತ್ಯಂತ ವೇಗವಾಗಿ ತಮಾಷೆಯ ಟ್ರೋಲ್ ಆಗುತ್ತಿದೆ

  ಮೊದಲೆಲ್ಲ ಜೋಕ್‍ ಗಳೆಂದರೆ ಸಿಂಗ್ ಸಮುದಾಯದವರನ್ನೇ ಆಧರಿಸಿ ಟ್ರೋಲ್ ಆಗುತ್ತಿದ್ದವು. ಅತಿ ರಂಜಕ ಮತ್ತು ಅತಿಮಾನುಷ ಜೋಕ್‍ ಗಳು ನಟ ರಜನೀಕಾಂತ್ ಹೆಸರನ್ನು ಅಂಟಿಕೊಂಡು ಬರುತ್ತಿದ್ದವು. ಆದರೀಗ ಇವೆರಡನ್ನೂ ಮೀರಿಸಿ ಪ್ರಧಾನಿಯವರ ಹೇಳಿಕೆಗಳು ತಮಾಷೆಯ ವ್ಯಂಗ್ಯದ ರೂಪ ತಾಳಿ ಟ್ರೋಲ್ ಆಗುತ್ತಿವೆ.

 ರಾಹುಲ್ ಏನೂ ಗೊತ್ತಿಲ್ಲದ ಪಪ್ಪು ಎಂದು ಜರಿಯುತ್ತಿದ್ದ ಮೋದಿ ಮತ್ತು ಬಳಗವೇ ಈಗ ಜಾಗತೀಕ ಮಟ್ಟದಲ್ಲೂ ತಮಾಷೆಗೀಡಾಗಿಬಿಟ್ಟಿರುವುದು ವಿಶೇಷ.