ಯಾರ್ ರಾಜ್ಯ ಆಳಿದ್ರೇನು....? ನಮ್ಮಂತವ್ರು ಹಿಂಡಿ-ರೊಟ್ಟಿ ತಿನ್ನೋದು ತಪ್ಪಂಗಿಲ್ಲ..!

ಯಾರ್ ರಾಜ್ಯ ಆಳಿದ್ರೇನು....? ನಮ್ಮಂತವ್ರು ಹಿಂಡಿ-ರೊಟ್ಟಿ ತಿನ್ನೋದು ತಪ್ಪಂಗಿಲ್ಲ..!

ಏ...ಅಡ್ನಾಡಿ ಬಸ್ಯಾ... ಈಗರ ಬಿಡಲೇ ಆ ಸುಡಗಾಡಿ ಮುಸಡಿ ಪೋನ್...! 'ತಂಬಾಕ್ ತಿಕ್ಕಾಕ ಹತ್ತೇರ ಹಂಗ್ ಒಂದ್ ಸಮನ ಆ ಮೊಬೈಲ್ನ ತಿಕ್ಕಾಕ ಹತ್ತಿಬಿಟ್ಟಿಯಲ್ಲ'.. ..? 'ದೊಡ್ಡರ್ ಹಿಂಗ್ ಮೊಬೈಲ್ ಹಿಡ್ಕಂಡ್ ತಿಕ್ಕಾಕ ಹತ್ತಿದ್ರ....ಇದನ್ನ ನೋಡೋ ಸಣ್ಣ ಮಕ್ಕಳು ಗತಿ ಏನು'... ? 'ಆರ್ ತಿಂಗಳ ಕೂಸು ಸತಗಿ ಮೊಬೈಲ್ ನೋಡಾಕ ಹತ್ಯಾವು'...... 'ಈ ಸುಡಗಾಡ ಮುಸಡಿ ಮೊಬೈಲ್ಗಳು ಯಾವಾಗ ಸೆಟಗೊಂಡ ಹೊಕ್ಕಾವೋ ಅಂತ ಅನಿಸೇತಿ'..?


ಇಷ್ಟ್ಯಾಕ... ಮೊಬೈಲ್‍ಮ್ಯಾಲ್ ಸಿಟ್ಟಾಗಿರೀ'....? ತಡೀರಿ ಕಾಕಾ...  'ಈ ಹಳೆ ಮಂದಿಗೆ ಹೊಸ ಹೊಸ ಜ್ಞಾನ ಹೆಂಗ್ ಬಳ್ಸಿಗ್ಯಾಬೇಕು ಅನ್ನೋದು ಗೊತ್ತಿಲ್ಲ್ದ ಹೊಸಾದೇನರ ಜ್ಞಾನ ಬಂತು ಅಂದ್ರ ಅದನ್ನ ಒಗ್ಗಿಸಿಕೊಳ್ಳಾಕ ಆಗ್ದ ನಿಮ್ಮ ಹಂಗ್ ಹೆಂಡಾ ಕುಡ್ತ ಮಂಗನ ಹಂಗ್ ಆಡ್ತಾರ'....... ..?


ಮುಚ್ಚಲೇ ಬಾಯಿ... ಮಗ್ನ....! 'ನಾ..ನೋಡ್ದ ಟಿಕ್ನಾಲಜಿ ಈ ಮಗಂದು... ಅದೆಂತಾದ್ದಲೇ ಅದು'...?  'ಬದುಕು -ಬಾಳೆವೂ ಬಿಟ್ಟು ಒಂದ ಸಮನ ತಿಕ್ಕೆಂತ ಕುಂದ್ರದು.'.. 'ಸಣ್ಣರಿಂದ ಹಿಡ್ದು ದೊಡ್ಡೋರು ವರ್ಗೂ ಗೋಣ ತಳಗಿಟಗೊಂಡು ಒಂದ ಸಮನ ತಿಕ್ಕಿದ್ದ... ತಿಕ್ಕಿದ್ದು'.... ಕೈ -ಕಣ್ಣು ಎದಕ ಬರ್ತಾವಲೇ..? ಸೂರ್ಯ ಹುಟ್ಟೋಕ ಮುಂಚೆ ಮೊಬೈಲ್ ಹಿಡಕೊಂಡೋರು ಸೂರ್ಯ ತಾಯಿಮನಿ ಸೇರಿ ಕತ್ಲಾದ್ರು ಮೊಬೈಲ್ ಸರೋಸೋದು ಬಿಡಂಗಿಲ್ಲ' ಅಂದ್ರ ಇದೆಂತಾದ್ದೋ ಈಮೊಬೈಲ್... ಹುಚ್ಚು. ...? 'ಮೊಬೈಲ್ ಹುಚ್ಚು... ಹುಚ್ಚ ಮೊಬೈಲ್ಲೂ ನನಗಂತು ಒಂದು ತಿಳಿದಂಗ್ ಆಗೇತಿ'.!. 


ಕಾಕಾರ ನೀವು ಇಷ್ಟ ಕಾಕಾ ಆಗೀರಿ ಅಂದ್ರ ಏನೋ ಎಡವಟ್ಟಾಗಿರಬೇಕು,....? ಏನ್ರೀ ಅದು,  ನಿಮ್ಮ ಮೊಬೈಲ್ ಕೋಪಕ್ಕ ಕಾರ್ಣ..? ಏನು ಅಂತ್ ಹೇಳಿದ್ರ ಅದನ್ನ ಕೇಳಿ ನನ್ನ ಕಿವಿ ಪಾವ್ನ ಆಕ್ಕಾವು..?


ಅದನ್ನ ಹೇಳಾಕಂತ್ ನಿನ್ನ ಮನಿಗೆ ಹೋಗಿದ್ದೇ... ನಿನ್ನ ಹೆಂಡ್ತಿ .... ನೀಲವ್ವ ನಿನ್ನ ಮಕ್ಕಳನ್ನ ಕರಗೊಂಡು ಎಲ್ಲಿಗೆ ಹೋಗಾಕ ತಯಾರಿ ನಡೆಸಿದ್ಲು.... ನಾನು ಬಂದದ್ದು ನೋಡಿ 'ಬರ್ರೀ ಕಾಕಾರ ಅಂತ ಒಳಗ ಕರ್ದು ಕಂಬಳಿ ಹಾಸಿ ಕುತಗ್ಗೋಳ್ರಿ ಕಾಕಾರ ಅಂದ್ಲು'... 'ಎಲ್ಲಿ ಹೋಗ್ಯಾನವಾ...ನಿನಗಂಡ... ಒಂದ್ ವಾರದಮ್ಯಾಗ ಆತೂ ಮನಿಗೂ ಬಂದಿಲ್ಲ....! 'ಯಾವದಾದ್ರೂ ಊರಿಗೆ ಹೋಗ್ಯಾನನು ಮತ್ತ ಅಂತ ಅಂದೆ'. ಅದಕ್ಕ ನಿನ್ನ ಹೆಂಡ್ತಿ.....ಹಂಗೇನೂ ಇಲ್ರೀ.. ಯಾವೂರಿಗೂ ಹೋಗಿಲ್ಲ ಅವ್ರು....  ಬಾಳದಿವ್ಸಾತು ಮನ್ಯಾಗ ಮಸಾಲಿ ಅರದಿದ್ದಿಲ್ರೀ....ಮಕ್ಕಳು ಹಠಾ ಮಾಡಾಕ ಹತ್ತಿದ್ವು.... ಇವತ್ತ ಸಂತಿದಿನ ಗುರುವಾರ ಅಲ್ರೀ ... ಅದಕ್ ಮಟನ್ ಮಾರ್ಕೆಟ್ಗೆ ಹೋಗಿ,  ಮಟನ್‍ರ-ಚಿಕನ್‍ರ ತರ್ತನಿ ಅಂತ ಬೆಳಿಗ್ಗೆ 9 ಕ್ಕ ಮನಿಂದ ಹೋಗ್ಯಾರ್ರೀ... ಗಂಟೆ ಹನ್ನಾಂದ್ರೂ ಇನ್ನು ಬಂದಿಲ್ಲ....  ಅವರ ಮೊಬೈಲ್ಗೆ ಪೋನ್ ಮಾಡಿದ್ರ ಅವ್ರು ಪೊನ್ ಎತ್ತಾಕವಲ್ರೂ, ಬರಿ ಟೊಯ್ ಟೊಯ್ ಅಂತ್ ಶಬ್ದ ಬರಾಕ ಹತ್ತೇತಿ, ಯಾವಾಗ ಬರ್ತಾರ ಬರ್ಲಿ ಅಂತ್  ನಾನು   ಸಂತಿಗೆ ಹೋಗಿ ಉಳ್ಳಾಗಡ್ಡಿ, ಕರಿಬೇವು, ಕೋತಂಬ್ರಿ, ಹಸೆ ಅಲ್ಲ , ತೆಂಗಿನಕಾಯಿ, ನಿಂಬಿಹಣ್ಣು, ಸೊಪ್ಪು- ಸೆದಿ ತರಾಕ ಅಂತ ಮಕ್ಕಳನ್ನ ಕರಕೊಂಡ ಹೊಂಟಿದ್ದೆ ನೋಡ್ರೀ' ಅಂದ್ಲು...


  ಆದೇನ್ಲೇ.... ಅದೇನಾಗೇತಿ ನಿನ್ನ ಮೊಬೈಲ್ಗೆ..? ನಾನು ಬೆಳಿಗ್ಗಿಂದ ನಾಲ್ಕಸರಿ ಪೋನ್‍ಮಾಡೇನಿ, ಪೋನ್ ಎತ್ತಾಕ ವಲ್ಲಿ.. ಈಗ ನೋಡಿದ್ರ ಬೇವಿನಗಿಡ್ದ ಕೆಳಗ ಕುತಗೊಂಡ ಮೊಬೈಲ್ ತಿಕ್ಕಾಕ ಹತ್ತಿ.? ಏನೋ ತಮ್ಮಾ ನಿನ್ನ ಹಕಿಕತ್.? ಅಲ್ಲೆ ನೋಡಿದ್ರ "ನಿನ್ನ ಹೆಂಡ್ತಿ ನಿ ಮಟನ್ ತರ್ತೀ... ಅಂತ್ ಮನ್ಯಾಗ ಕಾಯಾಕ ಹತ್ಯಾಳ.'.! 'ನೀ ನೋಡಿದ್ರ ಇಲ್ಲೆ ಕುತಗೊಂಡು ಮೊಬೈಲ್ ಜೊತಿಗೆ  ಸರಸ ಆಡಾಕ ಹತ್ತೀ'....?


ಅಂತಾದ್ದೇನು ಇಲ್ಲ ಬಿಡ್ರೀ.... ಮನಿ ಬಿಡ ಹೊತ್ತಿನ್ಯಾಗ ಸೂರ್ಯಾ ಕೆಂಡಾ ಕಾರಾಕಹತ್ತಿದ್ದ.... 'ಬಿಸಲಾಗ ಹೆಂಗ್ಯಪಾ ಅಷ್ಟ ದೂರಾ ಇರೋ ಮಟನ್ ಮಾರ್ಕೆಟ್ಗೆ ಹೋಗೂದು ಅಂತ ಯಾರ್ವರ ಗಾಡಿ ಬರ್ತಾವೇನೋ ? ಅಂತ ನಡಕೊತ ಬಂದೆ'.  ನನ್ನ ಕರ್ಮಕ್ಕ ಒಂದು ಗಾಡಿ ಬರ್ಲಿಲ್ಲ ನೋಡ್ರೀ..! ಅದ್ಕ ಮುನ್ಸಿಪಾಲ್ಟಿ ಮುಂದ ಬೇವಿನಮರದ ನೆರಳು ಕಂಡು  ಉಸ್ಸಪ್ಪಾ ಅಂದು ಇಲ್ಲೆ ಕುತಗೊಂಡೆ. ಆವಾ ಅದಾನಲ್ರೀ ಅಡ್ನಾಡಿ ಕನವಳ್ಳಿ ಜಗದೀಶ..!  ಅವಾ ಅದೇನೋ ಹುಳಾ ಬಿಟ್ಟು ಹೋದ. 'ಏ ನಮ್ಮ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾನ', 'ಬಿ.ಸಿ.ಪಾಟೀಲ್ರು ಮಂತ್ರಿ ಆಗ್ತಾರ',... 'ಮತ್ತ ನಮ್ಮ ಸರ್ಕಾರ ರಾಜ್ಯದಾಗ ಬರೈತೈತಿ.'.... 'ರಮೇಶ ಸಾಹುಕಾರ ಮಂತ್ರಿ ಆಗ್ತಾರ, ಬಡವ್ರು ಶ್ರೀಮಂತರಾಗ್ತಾರ, ಶ್ರೀಮಂತ್ರು ಬಡವರಾಗ್ತಾರ' ಅಂತ ಹೇಳಿ ಬೆಳಿಗ್ಗೆ ಟಿವ್ಯಾಗ ಸುದ್ದಿ ಬಂದೈತಿ ಅಂದ ಒಂದ ಸಮನ ಒದರಿ ಓಡಿಹೋಗ್ಯಾನ..! ಗಡಾದರ ಅಂಗಡಿಗೆ ಪಟಾಕಿ ತರಾಕ... ಅವಾ ಹೇಳಿದ ಸುದ್ದಿ ಕೇಳಿ ನಾನು ಮೊಬೈಲ್ನಾಗ ಸುದ್ದಿ ನೋಡಕೊಂತ ಕುತಗಂಡಿದ್ದೆ. 'ಒಂದೊಂದ ಟಿವ್ಯಾಗ ಒಂದೊಂದ ನಮೂನಿ ಸುದ್ದಿ ಹೇಳ್ತಾರ, ಯಾವದನ್ನ ನಂಬಬೇಕು, ಯಾವದನ್ನ ನಂಬಬಾರ್ದು ಅನ್ನೋದ ತಿಳಿದಂಗ ಆಗೇತಿ ನೋಡ್ರೀ.' ಕಾಕಾ. ಅದಕ ರಾಜ್ಯದ ಚಾನಲ್ ಬಿಟ್ಟು ರಾಷ್ಟ್ರದ ಚಾನಲ್‍ಗಳ ಒಳಗ ಅದೇನು ಸುದ್ದಿ ಹೇಳ್ತಾರೋ ಅಂತ ಮೊಬೈಲ್ನೋಳ್ಗ ಹುಡುಕಾಕಾಕ ಹತ್ತಿದ್ದೆ.  ಅಷ್ಟರಾಗ ನೀವು ಬಂದ್ರೀ. ಈಗ ಹೇಳ್ರೀ ನಿಮ್ಮ ಸಮಸ್ಯೆ ಏನು ಅನ್ನೋದನ್ನ..?


ಮೊಬೈಲ್‍ಅನ್ನೋ ಗುಂಗಿಹುಳದ್ದಪಾ ಸುದ್ದಿ..... ನಮ್ಮ ಆಳಮಗಾ ಪರಮ್ಯಾ ಸೋಮಾರ ಗಳೆ ಹೂಡಂಗಿಲ್ಲ ಅಂತ ಬೆಳಿಗ್ಗೆ ಎತ್ತ ಮೈತೊಳ್ದು, ಮುಸುರಿಕುಡ್ಸಿ ಹಕ್ಕಿಮನ್ಯಾಗ ಎತ್ತುಕಟ್ಟಿ ಹೋಗಿದ್ದನಂತ್....! ಆಕಿ ಹಿತ್ಲದಾಗ ಜೋಳಾ ಹಸಮಾಡಾಕಹತ್ತಿದ್ದಳಂತ್... ಇಬ್ರು ಮಕ್ಕಳು ಮೊಬೈಲ್ಗ ಹಿಡಕಂಡ ಕುತುಗಂಡಾರ. ಅವಾಗ 'ಯಾರೋ ಮನಿಗೆ ಬಂದು ಹಾಡ ಹಗ್ಲೇ ಎರಡು ಎತ್ತಿನಕಣ್ಣಿ ಬಿಚಿಗೊಂಡ ಹೋಗ್ಯಾರ. ಎತ್ತುಗಳು ಕಳ್ದು ಮೂರುದಿವ್ಸಾತು... ಸುತ್ತು-ಮುತ್ತ ಹಳ್ಳಿಹುಡಕೇನಿ ಎಲ್ಲೂ ಎತ್ತು ಕಂಡು ಬಂದಿಲ್ಲ'. ಅದ್ಕ ನಿನ್ಗ  ಪೋನ ಹಚ್ಚಿದ್ರ ನೀನು ಪೊನ್ ಎತ್ತವಲ್ಲಿ ..! ನಿನ್ನ ಹುಡ್ಕಿಕೊಂಡು ನಿನ್ನ ಮನಿಗೆ ಹೋಗಿದ್ದೆ....! ಆವಾಗ ನೀ ಮಟನ್ ತರಾಕ ಹೊಂಟ ಸುದ್ದಿ ಗೊತ್ತಾತು. ನೀ ನೋಡಿದ್ರ ಇಲ್ಲೆ ನೆರಳ್ಗಾ ಕುತಗೊಂಡು ಮೊಬೈಲ್ ತಿಕ್ಕಾಕಹತ್ತಿ......!


 'ಹಗಲ ಹೊತ್ತಿನ್ಯಾಗ ಎತ್ತ ಕದ್ದಕಂಡ ಹೋಗ್ಯಾರ ಅಂದ್ರ ಅವ್ರು ಭಾರೀ ಐನಾತಿ ಕಳ್ಳ್ರು ಇದ್ದಂಗ ಕಾಣತೈತ್ರೀ ಗೌಡ್ರ,'.... ಸ್ಟೇಶನ್‍ಗೆ ಹೋಗಿ ಕಂಪ್ಲೇಟ್ ಕೊಡಬೇಕಿತ್ತ್ರೀ... ! ನಿಮ್ಮ ಮನ್ಯಾಗ ಹಗಲಹೊತ್ತಿನ್ಯಾಗ ಎತ್ತಕದ್ದಕೊಂಡ ಹೋಗ್ಯಾರ. ಆದ್ರ,  ಮೊನ್ನೆ ಎಮ್ಮಿ ರಾಮಣ್ಣನ ನಾಲ್ಕ ಹಾಲ ಹಿಂಡ ಎಮ್ಮಿಗಳನ್ನ ಕಳ್ಳ್ರು ಕದ್ದಕೊಂಡು ಹೋಗಿದ್ರೂ,.... ಪಾಪಾ ಎಮ್ಮಿ ರಾಮಣ್ಣ ಬಡ್ವಾ ಏನಮಾಡಬೇಕಂತಿರೀ... ಹಗಲ ಹೊತ್ತಿನ್ಯಾಗ ಕಳುವು ಮಾಡ್ತಾರ ಅಂದ್ರ "ಈಕಳ್ಳ ಸುಳೆಮಕ್ಳು ಬೇತಗಳ್ಳರ ಇದ್ದಂಗ್ ಕಾಣತೈತಿ'?


  ಲೇ ತಮ್ಮ  ಯಾಕ್, ಎಮ್ಮೆ ಹೆಂಗ್ಯ ಕಳವಾದ್ವಲೇ...?


 'ನಿಮ್ಮ ಎತ್ತು ಹೆಂಗ್ಯ ಕಳವಾದ್ವೋ  ಎಮ್ಮೀನು ಹಂಗ್ ಕಳವಾಗ್ಯಾವು'. ರಾಮಣ್ಣ ಎಮ್ಮಿಗೆ ಮೇವು ತರಾಕಂತ ಹೊರಗಡೆ ಹೋಗ್ಯಾನ. ಮನ್ಯಾಗ ಅವ್ನ ಹೆಂಡ್ತಿ ಅಡಗಿಮನ್ಯಾಗ ರೊಟ್ಟಿ ಸುಡಾಕ ಹತ್ತಿದ್ಲಂತ.....  ಅಂಗಳಕಟ್ಟಿಮ್ಯಾಗ ಮೊಬೈಲ್ ನೋಡಿಕೋತ ಕುತಗಂಡಿದ್ದ ಅವ್ನ ಮಗ ಈರ್ಯಾಗ 'ಲೇ ತಮ್ಮಾ ನಾ ಎಮ್ಮಿಗೆ ಮೇವು ತರಾಕ ಹೊಂಟೇನಿ ಗೊದ್ಲಿಕಡೆ ಹುಷಾರು ! ಮೇವು ತಂದು ಎಮ್ಮಿ ಮೇಯಾಕ ಹೊಡಕಂಡ ಹೊಕ್ಕನಿ.... ಅಲ್ಲಿ ಮಟ  ಎಮ್ಮಿ ನೋಡಿಕ್ಯಾ ಅಂತ ಹೇಳಿ ಹೋಗಿದ್ನಂತ.' ಆದ್ರ ಈ ಈರಪ್ಪ ಮೊಬೈಲ್ ಸರಸಿಗೆಂತ ಕುಂತಹೊತ್ತಿನ್ಯಾಗ ಕಳ್ಳ್ರು ನಾಲ್ಕ ಎಮ್ಮಿ ಹೊಡಕಂಡ ಹೋಗ್ಯಾರ. ಈಹುಚ್ಚಪ್ಯಾಲಿಗೆ ಎಮ್ಮಿ ಕಳವಾಗಿದ್ದು ಗೊತ್ತ ಆಗಿಲ್ಲ. ನೋಡ್ರೀ...?


ಹೂಂ,,',ಕಲತರ ಸುಂಬಳಾ ಕಿಸೇದಾಗ ಅನ್ನೋಹಂಗ್ ಆಗೇತ ನೋಡು.'.... ಎಂಎ ಕಲ್ತು, ಪಿಎಚ್ ಡಿ ಪಾಸಾದ್ರ ಪ್ರಯೋಜನಾ ಏನು..? 'ನೆಟ್ಟಗ ಮನಿಕಾಯದವ್ರು ನಾಳೆ ಪಾಠಾ ಮಾಡಾಕ ಹೋದ ಹೊತ್ತಿನ್ಯಾಗ ಹಿಂಡ ಹೂಡಗರ್ನ ಹೆಂಗ್ಯ ಕಾಯ್ತಾರ ಇವರು'.. ! ನೀ ಏನ ಅನ್ನು 'ಈ ಮೊಬೈಲ್ ಅನ್ನೋ ಗುಂಗಿಹುಳ ಬಂದ್ ಮ್ಯಾಲ  ಹುಡ್ರು-ಹುಡಗ್ಯಾರು ಮೊಬೈಲ್ ದಾಸರಾಗಿ ಬಿಟ್ಟಾರ.'..! ಅವ್ರಿಗೆ ಯಾವಾಗ ಮೊಬೈಲ್ ಬ್ಯಾಸರಾಕ್ಕೇತೂ ತಿಳಿವಲ್ದು ನೋಡು.  


ಹಂಗ್ಯಾಕ ಅಂತಿರಿ ಮೊಬೈಲ್ನಿಂದ ಬರಿ ಕೆಟ್ಟದ್ದಾಕತಂತ ಯಾಕ ಹೇಳ್ತೀರಿ....! ಒಮ್ಮೆಮ್ಮೊ ಒಳ್ಳೆದು ಆಕೈತಿ., ಈಗ ನೋಡಿದ್ರಲ್ಲ. ಮೊಬೈಲ್ನಿಂದ ಕಳಕೊಂಡು ಎಮ್ಮಿ ಸಿಕ್ಕಾವು...,' ಕಲ್ತರ  ಬಗ್ಗೆ ಹಂಗ್ ಹಗ್ರಾಗಿ ಮಾತಾಡಬ್ಯಾಡ್ರೀ..ಗೌಡ್ರ'. ರಾಮಣ್ಣನ ಮಗಾ ಈರಪ್ಪನಿಂದಾನ ಮತ್ತ ಕಳವಾಗಿದ್ದ ಎಮ್ಮಿ ಸಿಕ್ಕವಂತ ನೋಡ್ರೀ..


ಹೆಂಗ್ಯೋ ಅದು , ಬಿಡ್ಸಿ ಹೇಳಲ್ಲ...?


  'ಈರಪ್ಪ ತನ್ನ ಮೊಬೈಲ್ನೊಳಗ ಅವ್ರು ಎಮ್ಮಿ ಪೋಟೋ ತಗದಿದ್ದನಂತ'. 'ಕಳ್ದ ಎಮ್ಮಿ ಪೋಟೋಗಳನ್ನ ವಾಟ್ಟಪ್, ಫೇಸ್‍ಬುಕ್‍ಗೆ ಹಾಕಿ ನಮ್ಮ ಎಮ್ಮಿ ಕಳುವಾಗ್ಯಾವು', 'ಇವು ಯಾರರ ಕಣ್ಣಿಗೆ ಬಿದ್ರ ತಿಳಸ್ರೀ ಅಂತ ಮೊಬೈಲ್ ನಂಬರ ಹಾಕಿದ್ದನಂತ'. 'ಕದ್ದು ಎಮ್ಮಿಗಳ್ನ ಕಳ್ರು ಹಾವೇರಿಪ್ಯಾಟಿಗೆ ತಂದು ಮಾರಾಕ ಹತ್ತಿದ್ದ್ರಂತ'....  ಎತ್ತು ತರಾಕ ಅಂತ್ ಪ್ಯಾಟಿಗೆ ಹೋಗಿದ್ದ ರಾಮಣ್ಣನ ಪರಿಚಯಸ್ತ ಕೂನಬೇವಿನ ಚಂದ್ರಣ್ಣ  ಈ ಎಮ್ಮಿಗಳನ್ನು ನೋಡಿ, ಎಮ್ಮಿ ರಾಮಣ್ಣಗ ಪೋನಮಾಡಿ 'ನಿನ್ನ ಎಮ್ಮಿ ಇಲ್ಲೇ ಹಾವೇರಿಪ್ಯಾಟ್ಯಾಗ ಅದಾವು, ಲಗೂನ ಬಾ ಅಂತ ಹೇಳಿದ್ಕ,  ರಾಮಣ್ಣ ಹೋಗಿ ಎಮ್ಮಿ ಗುರ್ತು ಹಿಡ್ದು , ಕಳ್ಳರನ್ನ ಪತ್ತೆ ಹಚ್ಚಿ ಪೊಲೀಸ್‍ರಿಗೆ ಅವರನ್ ಒಪ್ಪ್ಸಿ ಎಮ್ಮಿಗಳನ್ನಹೊಡಕೊಂಡು ಬಂದಾನಂತ ನೋಡ್ರೀ'... 


 'ಯುಗಾದಿ ಹಬ್ಬದ ದಿವ್ಸ್ ಹೊಲಾ ಪೂಜಾ ಮಾಡ ಹೊತ್ತಿನ್ಯಾಗ ಕಳವಾಗಿರೋ ನಿಮ್ಮ ಎತ್ತಿನ ಪೋಟೋಗಳನ್ನ ಮೊಬೈಲ್ನಾಗ ನಿಮ್ಮ ಮಗ ತಗ್ಯಾಕ ಹತ್ತಿದ್ದನ್ನ ನಾ ನೋಡಿದ್ದೆ'..... ಆ ಪೋಟೋ ಇದ್ರ ಫೇಸ್‍ಬುಕ್, ವಾಟ್ಸಪ್ ಗುಂಪಿಗೆ ಹಾಕಸ್ರೀ ಕಾಕಾ ... ನಿಮ್ಮ ಎತ್ತು ಎಲ್ಲೇ ಇದ್ರು ಪತ್ತೆ ಆಗತಾವು. ಈ ಪೊಲೀಸ್ರು ಹುಡಕತಾರೋ ಬಿಡ್ತಾರೋ ಗೊತ್ತಿಲ್ಲ. ! ಆದ್ರ ಯಾರಾದ್ರು ವಾಟ್ಸಾಪ್ -ಫೇಸಬುಕ್ ಮಂದಿ ಹುಡ್ಕೆ ಹುಡ್ಕತಾರ....?


ಹಂಗ ಅಂತಿಯಾ!  'ಮದ್ಲ ಆ ಕೆಲ್ಸಾ ಮಾಡಕಾ ನಮ್ಮ ಹುಡ್ಗಗ ಹೇಳ್ತನಿ ತಡಿ'...! ಅಲ್ಲೋ 'ಇಲೇಕ್ಷನ ಮುಗದೈತಿ, 'ನಿಮ್ಮ ಕೂಡ್ಕಿ ಸರ್ಕಾರಕ್ಕ ಒಂದವರ್ಷ ಆಗೇತಿ'....! 'ನಿ ಹಿಂಗ್ ಚಂದ್ ಮೊಬೈಲ್ನಾಗ ಸಿಗಿಸಿಕೊಂಡು ಹೊಂಟ್ರ ...ಯಾವಾನಾರ ಗಾಡಿಯಾವ್ ಹೆಟಿಗೊಂಡ ಹೊಕ್ಕಾನ ಆವಾಗ ಗೊತ್ತಾಕ್ಕೈತಿ ನಿನಗ ಮೊಬೈಲ್ ಯಾಕರ ಹಿಡಕೊಂಡಿದ್ದಿನೋ ಅಂತ'.? ಮೊದ್ಲ ಈ ಮೊಬೈಲ್ ಚಟ ಬಿಡೂ ಮಾರಾಯಾ...? 'ಪಾಟೀಲ್ರು ಮಂತ್ರಿ ಆಗ್ಲಿ, ಸಾವುಕಾರ್ರು ಕುದರಿ ಏರ್ಲಿ... ಮೋದಿ ಎರಡನೇ ಬಾರಿ ಅಲ್ಲ ..'.ವಿರೋಧ ಪಕ್ಷದವ್ರು ಹಿಂಗ್ ಕಚ್ಚಾಡ್ತಾ ಇದ್ರ ಮುಂದ ಇಪ್ಪತ್ತೆಂಟ್ ವರ್ಷ ಮೋದಿ , ಯೋಗಿ, ರೋಗಿ ಮುಂದ ಹೊತ್ಕಂಡ ಹೋಗಿ,  ಹಿಂಗ್ ಮತ್ತಬ್ಬಾವ ಈ ದೇಶಾನ ಆಳ್ಳಾರ'!. 

' ಹಿಂದ ಇಂದ್ರಮ್ಮನ ಕಾಲಕ್ಕ ಕಾಂಗ್ರೆಸ್‍ನ್ನಿಂದ ಕತ್ತಿ ನಿಂತ್ರು ಆರ್ಸಿ ಬರ್ತಾವು ಅನ್ನೋ ಮಾತು ಇತ್ತು'. 'ಈಗ ಕಾಲಾ ಬದ್ಲಾಗೇತಿ.....'ಮೋದಿ ಹೆಸ್ರ ಹೇಳಿದ್ರ ಸಾಕು ಕತ್ತಿ-ಕುದ್ರಿ ಸಹ  ಆರ್ಸಿ ಬರ್ತಾವು ಅನ್ನೋ ಕಾಲ ಬಂದೈತಿ',  ಪ್ಯಾಲಿ... ಹಳೇ ಪ್ಯಾಲಿ ರಾಜಕೀಯದರ ಚಿಂತಿ ಬಿಡು, ಯಾರಾ ರಾಜ್ಯಾ ಆಳಿದ್ರೇನು....? ನಮ್ಮಂತವರಿಗೆ ಹಿಂಡಿ-ರೊಟ್ಟಿ ತಿನ್ನೋದು ತಪ್ಪೋದಿಲ್ಲ. ಲಗೂನ ಮನಗೆ ಹೋಗು ಹೆಂಡ್ತಿ, ಮಕ್ಕಳು ನಿನ್ನ ದಾರಿ ನೋಡಾಕ ಹತ್ಯಾರ,  ಲಗೂನ ಮಾರ್ಕೆಟ್ಗೆ ಹೋಗಿ ಸೀದಾ ನಿನ್ನ ಮನಿಗೆ ಹೋಗು , ಮೊಬೈಲ್ ಸರಸಾಡಿಕೆಂತ ಮತ್ತಯಾರರ ಮನಗೆ ಹೋದೀ....ತಿಳಿತಿಲ್ಲ..ನಡಿ..ನಡಿ. ಎನ್ನುತ್ತಾ ಕಾಕಾ ಕಳೆದು ಹೋದ ತಮ್ಮ ಎತ್ತಿನ ಹುಡುಕಾಟಕ್ಕೆ ಹೋದ್ರು...