ಯಾರ ಪೌರತ್ವವನ್ನು ಯಾರು ನಿರ್ಧರಿಸಬೇಕು...?

ದೇಶವನ್ನು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಛಿದ್ರಗೊಳಿಸುವ CAT ಮತ್ತು NRC ಯಂತ ಕಾಯಿದೆಗಳನ್ನು ಸೃಷ್ಟಿಸುವುದು ಮೋಹನ್ ಭಾಗವತ್ ರಂತಹ ನಾಗಪುರದ ಚಿತ್ಪಾವನರು, ಇದನ್ನು ಜಾರಿಗೆ ತರುವುದು ಅಮಿತ್ ಶಾ ನಂತಹ ವೈಶ್ಯರು. ಈ ಕೃತ್ಯಕ್ಕೆ ಬಳಸಿಕೊಳ್ಳುವುದು ಮೋದಿ ಎಂಬ ಹಿಂದುಳಿದ ವರ್ಗಕ್ಕೆ ಸೇರಿದ ಶೂದ್ರರನ್ನು. ಚಿತ್ಪಾವನ ಬ್ರಾಹ್ಮಣ ಅನ್ನುವ ಈ ದೇಶದ ವಂಶವಾಹಿಗೆ ದೂರವಿರುವ ಜಾತಿಯವರು ಸೃಷ್ಟಿಸಿದ 'ಕಾಯಿದೆ'ಯನ್ನು ಅನುಷ್ಠಾನಕ್ಕೆ ತರುವವನು ಅಮಿತ್ ಶಾ ಎಂಬ ವೈಶ್ಯ. ಈತನೂ ಈ ದೇಶದ ವಂಶವಾಹಿಗೆ ದೂರವೇ, ಅದಿರಲಿ, ಈತನ ಪಕ್ಕದಲ್ಲಿರುವ 'ಶಾ' ಎಂಬ ಹೆಸರೂ ವಿದೇಶಿಯದೆ, ಅಂದರೆ ಪರ್ಶಿಯನ್ ದೇಶದ್ದು.

ಯಾರ ಪೌರತ್ವವನ್ನು ಯಾರು ನಿರ್ಧರಿಸಬೇಕು...?

The Citizenship (Amendment) Act, 2019 (CAT), The National Register of Citizens act 2019(NRC) ಇಂದು ದೇಶದಾದ್ಯಂತ ಚರ್ಚಾರ್ಹ ವಿಷಯಗಳಾಗಿ ಹತ್ತಿ ಉರಿಯುತ್ತಿವೆ. ರಾಷ್ಟ್ರದಲ್ಲಿ ಪೌರತ್ವದ ದೃಢೀಕರಣ ಪ್ರಕ್ರಿಯೆ ನಡೆಯುವಾಗ ಪೌರತ್ವಕ್ಕೆ‌ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲದೇ ಇದ್ದರೂ ಪೌರತ್ವ ತಿದ್ದುಪಡಿ ಕಾಯಿದೆಯಿಂದಾಗಿ  ಹಿಂದೂ, ಜೈನ, ಬೌದ್ಧ,‌ ಕ್ರಿಶ್ಚಿಯನ್, ಪಾರ್ಸಿ ಧರ್ಮದವರು ತಮ್ಮನ್ನು ತಾವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫಘಾನಿಸ್ತಾನದಿಂದ‌ ಬಂದವರೆಂದು ಹೇಳಿಕೊಂಡು ಪೌರತ್ವ ಪಡೆಯಬಹುದಿತ್ತು. ಆದರೆ, NRCಗೆ ಸಂಭಂದಿಸಿದಂತೆ ನೋಡಿದರೆ ಈ ದೇಶದ ಪ್ರತಿಯೊಬ್ಬ ಮುಸ್ಲಿಮನೂ ಈ ದೇಶದ ಪೌರನೆಂಬುದನ್ನು ದಾಖಲಾತಿಗಳ ಸಮೇತ ಶತಯಾಗತಾಯ ಸಾಬೀತುಪಡಿಸಬೇಕು, ಸಾಬೀತುಪಡಿಸದೇ ಹೋದರೆ ಆತ ಈ ದೇಶದ ದೇಶವಾಸಿ ಅಲ್ಲ. ಆದ್ದರಿಂದ ಆತ ಎಂತಹದ್ದೇ ಶಿಕ್ಷೆಗೆ ಅರ್ಹ ಎನ್ನುವುದು ಇದರ ತಿರುಳು.

ಈ ವಿಷಯದಲ್ಲಿ ಪಾರ್ಲಿಮೆಂಟಿನಲ್ಲೂ ಸೇರಿದಂತೆ ದೇಶಾದ್ಯಂತ  ಚರ್ಚೆಯಾಗುತ್ತಿದೆ. ಪತ್ರಿಕೊದ್ಯಮವನ್ನು ಗಂಭೀರವಾಗಿ ತೆಗೆದುಕೊಂಡ ಕೆಲವೇ ಪತ್ರಿಕೆಗಳು, ದೃಷ್ಯ ಮಾದ್ಯಮಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿವೆ, ಬರೆಯುತ್ತಿವೆ. ಚರ್ಚೆಯ ಪರದಿ ಕಾನೂನು, ಪೌರತ್ವ, ಸಂವಿಧಾನ, ರಾಜಕಾರಣ, ರಾಷ್ಟ್ರೀಯತೆಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಈ ಎಲ್ಲವನ್ನೂ ಹೊರತುಪಡಿಸಿ ಸದರಿ ಚರ್ಚೆಯನ್ನು ಈ ದೇಶದ 'ಮೂಲನಿವಾಸಿ'ಗಳಿಗೆ ಸಂಭಂದಿಸಿದಂತೆ ಮೂಲಭೂತ ಪ್ರಶ್ನೆಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಈ ದೇಶದ ಪೌರತ್ವವನ್ನು ಯಾರ ಮುಂದೆ ಯಾರು ಸಾಭೀತುಪಡಿಸಬೇಕು ಎಂಬ ಸರಳ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇನೆ. ಈ ನನ್ನ ವಾದ ಸರಣಿ ಕೆಲವರಿಗೆ ಅಪಥ್ಯವಾಗಬಹುದು. ನನ್ನ ಅನೇಕ ಮಂದಿ ಬ್ರಾಹ್ಮಣ ಮಿತ್ರರು, ಆಪ್ತರು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವುದರಿಂದ ಅವರ್ಯಾರೂ ನನ್ನನ್ನು ಅನ್ಯತಾ ಭಾವಿಸುವುದಿಲ್ಲ ಎಂಬ ನಂಬಿಕೆ ನನಗಿದೆ. ಇಲ್ಲಿ ಜಾತಿಯ ಹೆಸರು ತರುವುದು ಅನಿವಾರ್ಯ ಎಂಬ ಕಾರಣಕ್ಕೆ ತರುತಿದ್ದೇನೆಯೇ ಹೊರತು ಮತ್ಯಾವುದೇ ಪೂರ್ವಾಗ್ರಹದಿಂದಲ್ಲ. 

ಈಚೆಗೆ ಬಂದ ತ್ರಿಬಲ್ ತಲಾಖ್, ಆರ್ಟಿಕಲ್ 370, ಈಗಿನ CAB ಮತ್ತು NRC ಕಾಯಿದೆಗಳೆಲ್ಲಾ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ದ್ವೇಷದ ಪ್ರಕ್ರಿಯೆಗಳು ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕೆ ಹೆಚ್ಚು ಸಮಯ ಬೇಕಿಲ್ಲ. ಇದು ಸುಮಾರು ಒಂಬತ್ತು ದಶಕಗಳಿಂದಲೂ ಸಂಘಪರಿವಾರ ಈ ದೇಶದಲ್ಲಿ ಪ್ರತಿಪಾದಿಸಿಕೊಂಡು, ಬೆಳೆಸಿಕೊಂಡು ಬಂದ  'ಸಿದ್ದಾಂತ' ಎನ್ನುವುದನ್ನೂ ಹೇಳಬೇಕಿಲ್ಲ. ಈಗ ಈ ಸಿದ್ದಾಂತದ ಪ್ರತಿಪಾದಕರಿಗೆ ಅಧಿಕಾರ ಸಿಕ್ಕಿದೆ. ಈಗ ಇದನ್ನು ಅವರು ವ್ಯವಸ್ತಿತವಾಗಿ ಅನುಷ್ಠಾನಗೊಳಿಸುತಿದ್ದಾರೆ. ಇದೆಲ್ಲದರ 'ಮೆದುಳು' ನಾಗಪುರದಲ್ಲಿದೆ. ಅದರ ನಿರ್ದೇಶನದ ಮೇಲೆ ಅಧಿಕಾರದಲ್ಲಿರುವವರು ನಡೆದುಕೊಳ್ಳುತ್ತಾರೆ. ಹಾಗಾದರೆ ನಾಗಪುರದ 'ಮೆದುಳಿಗೆ' ಇರುವ ದೇಸೀಯ ಅರ್ಹತೆಗಳಾದರೂ ಏನು?, ಅವರ 'ಅರ್ಹತೆ' ಜಾತಿಯೊಂದೆ? ಚಿತ್ಪಾವನ ಬ್ರಾಹ್ಮಣರಾದ ಇವರು ಹಿಂದು ಧರ್ಮದ ಹೆಸರಲ್ಲಿ, ರಾಷ್ಟ್ರೀಯತೆಯ ನೆಪದಲ್ಲಿ, ಭಾರತೀಯತೆಯ ಭ್ರಮೆಯಲ್ಲಿ ಬ್ರಾಹ್ಮಣ್ಯವನ್ನು ದೇಶಾದ್ಯಂತ ಪ್ರತಿಷ್ಟಾಪಿಸುವುದು. ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವುದು. ಚತುರ್ವರ್ಣವನ್ನು ಜೀವಂತವಾಗಿಡುವುದು. ಇತರೆ ಧರ್ಮಗಳ ವಿರುದ್ಧ ಅಪಪ್ರಚಾರ ಮಾಡಿ ಅಮಾಯಕರನ್ನು ಸದರಿ ಧರ್ಮಗಳ ವಿರುದ್ಧ ಎತ್ತಿಕಟ್ಟಿ ಸಂಘರ್ಷಕ್ಕೆ ಸಜ್ಜುಗೊಳಿಸುವುದು. ಮತ್ತು ಇದರೊಂದಿಗೆ ಜಾತಿಯ ಮೇಲುಕೀಳುಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದೇ ಇವರ 'ಸಿದ್ದಾಂತ'. ಇದೆಲ್ಲದರ ಮುಂದುವರೆದ ಭಾಗವೇ ಈ ಪೌರತ್ವ ದೃಢೀಕರಣದ ಮೂಲಕ ಅನ್ಯ ಧರ್ಮೀಯರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವುದು ಮತ್ತು ಅವರನ್ನು ಈ ದೇಶದಿಂದ ಹೋರಹೋಗುವಂತೆ ಹುನ್ನಾರ ಮಾಡುವುದು. ಅಮಾಯಕ ಜನರಲ್ಲಿ ಜನಾಂಗೀಯ ದ್ವೇಷ ಬಿತ್ತುವುದು.

ನಾವು ಈಚೆಗಷ್ಟೇ ಜಗತ್ತಿನಲ್ಲಿ ಕಂಡಂತೆ ದಿನನಿತ್ಯ ರಕ್ತಸಿಕ್ತವಾಗಿ ನಿರ್ನಾಮಾಗುತ್ತಿರುವ ಇರಾಕ್, ಲಿಬಿಯಾ, ಯೆಮೆನ್, ಪಾಕಿಸ್ತಾನ, ಸಿರಿಯಾಗಳು ಮತ್ತು ತಮ್ಮ ದೇಶದಲ್ಲೇ civil warಗಳಿಂದ ತತ್ತರಿಸಿ ರಕ್ತದ ಕೋಡಿ ಹರಿಸುತ್ತಿರುವ ರುವಾಂಡ, ಸುಡಾನ್, ಬುರುಂಡಿ, ಸೈಬೀರಿಯಾ ಮುಂತಾದ ರಾಷ್ಟ್ರಗಳಲ್ಲಿ ಮೊಟ್ಟಮೊದಲು ಆರಂಭವಾಗಿದ್ದು ಇದೇ ರೀತಿಯ ಧಾರ್ಮಿಕ ಅಲ್ಪಸಂಖ್ಯಾತರ ಬಗೆಗಿನ ಅಸಹನೆ, ಹಿಂಸೆ ಹಾಗೂ ಅಲ್ಪಸಂಖ್ಯಾತರ ತುಚ್ಛೀಕರಣ. ಇದು ಹಂತಹಂತವಾಗಿ ಬೆಳೆದು ಈ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರು ದೇಶಾಂತರ ಹೋಗಿ, ಮಾರಣಹೋಮಗಳಾಗಿ, ಅವರ ಸಂಖ್ಯೆ ಕ್ಷೀಣಿಸಿದ ನಂತರ, ಅಲ್ಲಿನ ಬಹುಸಂಖ್ಯಾತರು ತಮ್ಮೊಳಗೇ ರಕ್ತದಾಹವೇ ಮುಂತಾದ ಕಾರಣಾಂತರಗಳಿಂದ ಕಚ್ಚಾಡಲು ಆರಂಭಿಸಿದರು. ಇಂದು ಇದೇ ರಾಷ್ಟ್ರಗಳಲ್ಲಿ ಬಹುಸಂಖ್ಯಾತರು ತಮ್ಮ ಸಮುದಾಯವರನ್ನೇ ಕೊಂದು ನೆತ್ತರದಾಹಿಗಳಾಗುತ್ತಿದ್ದಾರೆ. ನೆತ್ತರ ರುಚಿ ಕಂಡ ಆಯುಧ ಸುಮ್ಮನೆ ಕೂರದು. ಭಾರತ ಕೂಡ ಇಂಥಹದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವುದು ದುರಂತ. ಇಲ್ಲೊಂದು ಮುನ್ಸೂಚನೆ ಕಾಣುತ್ತಿದೆ..?  ಮುಸ್ಲಿಮ್ ಸಮುದಾಯದವರು ಅಥವಾ ಅಂತವರೇ ಆದ ಆದಿವಾಸಿಗಳು ಅಥವಾ ಯಾರೇ ಅಲ್ಪಸಂಖ್ಯಾತರು ತೀರಾ ದುರ್ಬಲರಾಗಿದ್ದಾರೆ ಅಸಹಾಯಕರಾಗಿದ್ದಾರೆ, ಇವರಿಂದ ನಮಗೇನೂ ತೊಂದರೆಯಿಲ್ಲವೆಂಬ  ಹುಂಬತನದ ದುರಹಂಕಾರದಿಂದ ವರ್ತಿಸುತ್ತಿರುವವರು ಒಂದು ದಿನ ಪಶ್ಚಾತ್ತಾಪ ಪಡುವ ಪರಿಸ್ಥಿತಿಗೆ ಈ ದ್ವೇಷದ ಕಾಳ್ಗಿಚ್ಚು  ಹರಡುವಂತಹ ಆತಂಕ ಎದ್ದು ಕಾಣುತ್ತಿದೆ. ನಮ್ಮ ಮುಂದೆ ಹಿಟ್ಲರ್ ನ ವಿನಾಶದ ಪಾಠವಿದೆ. ಹಿಟ್ಲರ್ ಕೇವಲ ಯಹೂದಿಗಳ ವಿರೋಧಿಯೇ ಹೊರತು ತಮ್ಮ ವಿರೋಧಿಯಲ್ಲ. ತಮ್ಮನ್ನು ಎಂದೂ ಹಿಂಸೆಗೊಳಿಸಲಾರ, ಕಾಡಲಾರ ಎಂದು ಭಾವಿಸಿದ್ದ ಎಡಪಂಥೀಯರು, ಪ್ರಾಟೆಸ್ಟಂಟರು, ಕ್ಯಾಥೋಲಿಕ್ಕರು ಕೊನೆಗೆ ತಾವೇ ಹಿಟ್ಲರನ ಗ್ಯಾಸ್ ಚೇಂಬರ್‍ ಗಳಲ್ಲಿ, Concentration Camp ಗಳಲ್ಲಿ ಹೆಣವಾಗಿ ಹೋದ ರಕ್ತಚರಿತ್ರೆ ನಮ್ಮ ಕಣ್ಣಮುಂದಿದೆ. ಬಲ್ಲವರು, ಚಿಂತಕರು, ಕಾಲಜ್ಞಾನಿಗಳು, ದಾರ್ಶನಿಕರು "ಚರಿತ್ರೆ ಪುನಾರವರ್ತನೆಯಾಗುತ್ತದೆ" ಎನ್ನುತ್ತಾರೆ. ಹೌದು, ವರ್ತಮಾನದವರು ಚರಿತ್ರೆಯಿಂದ ಪಾಠ ಕಲಿತಿಲ್ಲವೆಂದರೆ ಚರಿತ್ರೆ ಪುನಾರವರ್ತನೆಯಾಗುತ್ತದೆ ನಿಜ, ಅಂತೆಯೇ ವರ್ತಮಾನದವರೂ ಚರಿತ್ರೆಯ ರಕ್ತಸಿಕ್ತ ಪುಟಗಳಲ್ಲಿ ನೆತ್ತರಲ್ಲಿ ನೆತ್ತರಾಗಿ ಕರಗಿಹೋಗುತ್ತಾರೆ ಅನ್ನುವುದೂ ಸುಳ್ಳಲ್ಲ.

ದೇಸೀಯ ವಿದೇಶೀಯ ಎನ್ನುವುದು ಪೌರತ್ವವನ್ನು ನಿರ್ಧರಿಸುವ ಮಾನದಂಡ ಅಂದುಕೊಂಡಾಗ ಇದನ್ನು ನಿರ್ಧರಿಸುವ  ಕಾರಣಕ್ಕೆ ಈ ಇಡೀ ಸಮಸ್ಯೆಯ 'ಮೆದುಳು' ಅನ್ನಿಸಿಕೊಂಡಿರುವುದು ನಿಜಕ್ಕೂ ದೇಸಿಯವೇ ಎಂಬುದನ್ನು ನಾವಿಂದು ವಿಶ್ಲೇಷಿಸಬೇಕಿದೆ. 

ಇಲ್ಲಿನ ಮುಸ್ಲಿಮರು ಅಥವಾ ಸಾಬರು ಯಾರೂ? ಇವರು ಎಂದೂ ಯಾವುದೇ ದೇಶದಿಂದ ಬಂದವರಲ್ಲ. ಇಲ್ಲಿನ ಮೂಲನಿವಾಸಿಗಳಾದ ತಳ ಸಮುದಾಯದ ಜನ ವೈದಿಕ ಧರ್ಮ ತಮ್ಮ ಮೇಲೆ ವಿಧಿಸಿದ‌ ಅಸ್ಪೃಶ್ಯತೆ, ತಾರತಮ್ಯ, ಜಾತಿವಿಕಾರಗಳಿಂದ ನಲುಗಿ, ನೊಂದು, ನೋವುಂಡು ಇದರಿಂದ ಪಾರಾಗಲೂ ಅನಿವಾರ್ಯವಾಗಿ ವಿದೇಶಿ ನೆಲದಲ್ಲಿ ಹುಟ್ಟಿದ ಧರ್ಮವೊಂದರ ಮೊರೆ ಹೋದವರಷ್ಟೆ.  ಇವರು ಇಲ್ಲೇ ಹುಟ್ಟಿ, ತಲೆತಲಾಂತರಗಳಿಂದ ನೆಲೆಸಿ,  ಇವರ ಬೆವರು, ಶ್ರಮಗಳನ್ನು ಈ ನೆಲಕ್ಕೇ ಬಸಿದ ಅಪ್ಪಟ ದೇಶವಾಸಿಗಳಾದ್ದರಿಂದಲೇ ಇವರು ಸತ್ತಾಗ ಇಂದಿಗೂ ಇವರನ್ನು ಈ ನೆಲಕ್ಕೇ ಹೂಳುತ್ತಾರೆ ಹೊರತು ಇವರನ್ನು ಸುಟ್ಟು ಇವರ ಚಿತಾಭಸ್ಮವನ್ನು ಹರಿಯುವ ನದಿಗೆ ಬಿಟ್ಟು ಇತರೆ ದೇಶಕ್ಕೆ ಕಳಿಸಲ್ಲ. 

ಇಂದು ಈ ಮೂಲನಿವಾಸಿಗಳನ್ನು 'ವಿದೇಶದಿಂದ ಬಂದವರು' ಎಂದು ಹಣೆಪಟ್ಟಿ ಕಟ್ಟುತ್ತಿರುವವರು ನಿಜಕ್ಕೂ ಈ ದೇಶದ ಮೂಲನಿವಾಸಿಗಳಾಗಿದ್ದರೆ..? ಎಂಬುದನ್ನು ನಾವು ಚಿಂತಿಸಬೇಕಾದ, ವಿಮರ್ಶಿಸಬೇಕಾದ ಕಾಲ ಸನ್ನಿಹಿತವಾಗಿದೆ.

ನಮಗೆ ನಮ್ಮ ಶಾಲೆಯ ಚರಿತ್ರೆಯ ಪಾಠದಲ್ಲಿ ಹೇಳುತ್ತಾ ಬಂದಿರುವುದು ಇನ್ನೂ ನಮ್ಮ ನೆನಪಲ್ಲಿ ಹಸಿರಾಗಿದೆ. "ವಿದೇಶದಿಂದ ಬಂದ ಆರ್ಯರು ಈ ದೇಶದ ಮೂಲನಿವಾಸಿಗಳಾದ ದ್ರಾವಿಡರ ಮೇಲೆ ಪ್ರಭಾವ ಹೊಂದಿ ತಮ್ಮ ಅಧಿಕಾರ, ಸಂಸ್ಕೃತಿಯನ್ನು ಇಲ್ಲಿನ ದ್ರಾವಿಡರ ಮೇಲೆ ಪ್ರತಿಷ್ಠಾಪಿಸಿದರು” ಎನ್ನುವುದು ಸಂಕ್ಷಿಪ್ತವಾಗಿ ನಾವು ಕಲಿತ ಪಾಠ.

ಮ್ಯಾಕ್ಸ್ ಮುಲ್ಲರ್ ಮತ್ತು ಇತರೆ ಅನೇಕ ವಿದ್ವಾಂಸರ ಪ್ರಕಾರ ಆರ್ಯರು ಮೂಲತಃ ಆಸ್ಟ್ರಿಯಾ, ಹಂಗೇರಿ ಮತ್ತು ಬೋಹಿಮಿಯ ಪ್ರದೇಶಗಳಲ್ಲಿ ವಾಸವಾಗಿದ್ದು ಕ್ರಮೇಣ ವಲಸೆ ಹೊರಟು, ಅವರಲ್ಲಿ ಒಂದು ಗುಂಪು ಜರ್ಮನಿ, ಇಟಲಿ ಕಡೆಗೆ ಹೊರಟು ಮತ್ತು ಗ್ರೀಸ್ ದೇಶಗಳಲ್ಲಿ ಪ್ರಸರಿಸಿತು. ಮತ್ತೊಂದು ಗುಂಪು ಪುರ್ವಾಭಿಮುಖವಾಗಿ ಬಂದು ತುರ್ಕಿ, ಇರಾನ್ ಮತ್ತು ಭಾರತ ದೇಶಗಳಲ್ಲಿ ನೆಲೆಸಿತು. ಏಷ್ಯಮೈನರ್ ಪ್ರದೇಶದಲ್ಲಿ ಸಿಕ್ಕಿರುವ ಅತಿ ಪ್ರಾಚೀನವಾದ 'ಭೋಗಸ್ಕಾಯ್' ಶಾಸನದ ವಿವರಗಳು ಆರ್ಯರು ವಲಸೆ ಬಂದುದಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನೊದಗಿಸುತ್ತವೆ ಎಂದು ಇತಿಹಾಸಕಾರರು ಪ್ರತಿಪಾದಿಸಿದರು. ಆರ್ಯರ ಮೂಲನಿವಾಸ ಕಪ್ಪು ಸಮುದ್ರತೀರ ಪ್ರದೇಶ ಮತ್ತು ಉಕ್ರೇನ್ ಪರ್ಯಾಯ ದ್ವೀಪವಾಗಿರಬೇಕೆಂದು ಮತ್ತೆ ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟರು. 'ಲೋಕಮಾನ್ಯ' ಬಾಲಗಂಗಾಧರ ತಿಲಕ್ ಮತ್ತು ಜಾಕೊಬಿ ಅವರು ಖಗೋಳಶಾಸ್ತ್ರಾಧ್ಯಯನದ ಆಧಾರದ ಮೇಲೆ ಆರ್ಯರು ಆರ್ಕ್ಟಿಕ್ ಪ್ರದೇಶದಲ್ಲಿ ವಾಸವಾಗಿದ್ದರೆಂದು ಅಭಿಪ್ರಾಯಪಟ್ಟರು. ಆದರೆ, ಇದರಿಂದ ವಿಚಲಿತರಾಗಿ ಬುದ್ದಿವಂತರಾದ ಇಂದಿನ ಆರ್ಯಬ್ರಾಹ್ಮಣರು ತಮ್ಮ ಬುಡವೇ ಅಲುಗಾಡುವುದನ್ನು ಕಂಡು  ಹಿಂದಿನ ವಿದ್ವಾಂಸರು, ಖಗೋಳಶಾಸ್ತ್ರಾಧಾರ ಮತ್ತು ಅದಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಒಪ್ಪದೆ. ಆರ್ಯರು ಹೊರಗಿನಿಂದ ಬಂದವರಲ್ಲ. ಅವರು ಭಾರತದ ಮೂಲನಿವಾಸಿಗಳು, ಪ್ರಾರಂಭದಲ್ಲಿ ಸರಸ್ವತಿ ಮತ್ತು ಧೃಷದ್ವತೀ ನದಿಗಳ ಮಧ್ಯಪ್ರದೇಶವಾದ ಆರ್ಯಾವರ್ತದಲ್ಲಿ ವಾಸವಾಗಿದ್ದು ಕ್ರಮೇಣ ಭಾರತದ ಎಲ್ಲ ಭಾಗಗಳಲ್ಲೂ ಪ್ರಸರಿಸಿದುದಲ್ಲದೆ, ಪಶ್ಚಿಮ ದೇಶಗಳಿಗೂ ಹೋಗಿ ನೆಲೆಸಿದರು ಎಂಬುದಾಗಿ ತಮ್ಮದೇ  ವಾದಗಳನ್ನು ಮಂಡಿಸುತ್ತಾ ಹೊರಗಿನಿಂದ ಬಂದವರೆಂಬ ವಾದವನ್ನು ಬಲವಾಗಿ ನಿರಾಕರಿಸುತಿದ್ದಾರೆ. ಈ ವಾದ ಇವರಿಗೆ‌ ಅನಿವಾರ್ಯ, ಯಾಕೆಂದರೆ ಇವರ ಅಸ್ಥಿತ್ವವೇ ಇಲ್ಲಿ ಅಲುಗಾಡುತ್ತಿದೆ.

ಈ ಮದ್ಯೆ ಅಮೆರಿಕದ ಪ್ರತಿಷ್ಠಿತ ಯುಟ್ಹಾ ವಿಶ್ವವಿದ್ಯಾಲಯ(Utah university)ದ ಸಂಶೋಧನೆಯೊಂದರಲ್ಲಿ ಮೈಖೇಲ್ ಬಾಮ್ಶದ್ ನೇತೃತ್ವದ ಜೆನೆಟಿಕ್ ವಿಜ್ಞಾನದ ತಜ್ಞ ವಿಜ್ಙಾನಿಗಳ ತಂಡ ಭಾರತದ ಜಾತಿಗಳ ವಂಶವಾಹಿಗಳ ಮೇಲೆ ಸಂಶೋಧನೆ ನಡೆಸಿ "Genome research" ಎಂಬ ವಿಜ್ಞಾನ ಸಂಶೋಧನಾ ಪತ್ರಿಕೆಯಲ್ಲಿ "Genetic evidence on the origins of Indian caste populations"  (https://www.ncbi.nlm.nih.gov/pmc/articles/PMC311057/) ಎಂಬ ಸುದೀರ್ಘವಾದ ಸಂಶೋಧನಾ ಲೇಖನ ಪ್ರಕಟಿಸಿ, ಭಾರತದ ಜಾತಿಗಳ ವಂಶವಾಹಿಗಳ(genetic) ಬಗ್ಗೆ ಬೆಳಕು ಚೆಲ್ಲಿದೆ. ಈ ಲೇಖನದ ಪ್ರಕಾರ, ನಮ್ಮ ದೇಶದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ವಂಶವಾಹಿಗಳು ಯೂರೋಪಿಯನ್ನರ ವಂಶವಾಹಿಗಳಿಗೆ ಬಹಳ ಹತ್ತಿರವಿದೆಯೇ ಹೊರತು ಇಲ್ಲಿನ ಶೂದ್ರ ಸಮುದಾಯಗಳ ವಂಶವಾಹಿನಿಗೆ ಹತ್ತಿರವಾಗಿಲ್ಲ ಎನ್ನುವುದು.

ಸುದೀರ್ಘವಾದ ಈ ಸಂಶೋಧನಾ ಲೇಖನದಲ್ಲಿ ಇಲ್ಲಿನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರೆಂಬ ಸುಮಾರು ಶೇ.15ರಷ್ಟು ಜನ ಯೂರೋಪ್ ವಂಶವಾಹಿನಿಗೆ ಹತ್ತಿರವಾಗಿರುವುದು ಮತ್ತು ಈ ದೇಶದ ಶೂದ್ರ, ದಲಿತ, ಆದಿವಾಸಿ, ಅಲ್ಪಸಂಖ್ಯಾತರಾದ ಶೇ.85 ರಷ್ಟು ಜನ ಯೋರೋಪ್ ವಂಶವಾಹಿನಿಯಿಂದ ದೂರವಿರುವುದು ಇಲ್ಲಿ ಸಾಭೀತಾಗಿದೆ. ಈಚಿನ ಈ ಸಂಶೋಧನೆಯನ್ನು ಈವರೆಗೂ ಬೇರೆ ಯಾವುದೇ ಸಂಶೋಧನೆಗಳು ನಿರಾಕರಿಸಿದಂತಿಲ್ಲ.

ಇನ್ನು ಪೌರತ್ವ ಸಾಭೀತುಮಾಡುವಂತೆ ಅಲ್ಪಸಂಖ್ಯಾತರ ಮೇಲೆ ಬೇರೆ ಬೇರೆ ರೂಪಗಳಲ್ಲಿ ಒತ್ತಡ ಹಾಕುವಂತಹ  ಹುನ್ನಾರಗಳ 'ಪ್ರಯೋಗಶಾಲೆ' ಇರುವುದು ನಾಗಪುರದಲ್ಲಿ. ಅದರ ಮುಖ್ಯಸ್ಥರ ತಲೆಗಳು ಚಿತ್ಪಾವನದವರದು. ಈ ಚಿತ್ಪಾವನರು ಅತ್ಯಂತ ಮೇಲ್ವರ್ಗದ ಶ್ರೇಷ್ಠ ಬ್ರಾಹ್ಮಣರು ಎಂದು ಖ್ಯಾತಿ ಮತ್ತು ಪ್ರತೀತಿ. ಆದರೆ 'ಬೆನೆ ಇಸ್ರೇಲಿ ಜ್ಯೂವಿಶ'ರು ಪ್ರತಿಪಾದಿಸುವಂತೆ "..they are one of the lost tribe of Israel and that chitpavan brahmins were part of their group, but later converted into Hinduism and became brahmins.." ಎಂದು ಮುಂದುವರೆದು "the lost tribes  are said to have been deported from Israel at 722 CE" ಎನ್ನುವ ವಾದವನ್ನು ಯಾವುದೇ ಪ್ರಮುಖ ಇತಿಹಾಸಜ್ಞರು ನಿರಾಕರಿಸಿದಂತಿಲ್ಲ. ಆದರೆ 'ವೇದ್ ಐತರಾಜು' ಎನ್ನುವ ಆಂಧ್ರದ  ವ್ಯಕ್ತಿಯೊಬ್ಬ ಅಲ್ಲಗಳೆಯುತ್ತಾನೆ. ಆದರೆ ಈ ವೇದ್ ಐತರಾಜು ಸಂಶೋಧಕನೂ ಅಲ್ಲ ಅಥವ ಇತಿಹಾಸಕಾರನೂ ಅಲ್ಲದ ಅನಾಮದೇಯ ವ್ಯಕ್ತಿಯಾದ್ದರಿಂದ ಈತನನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಈತನ ವಾದವನ್ನೂ ಪುರಸ್ಕರಿಸಲಿಲ್ಲ.

ದೇಶವನ್ನು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಛಿದ್ರಗೊಳಿಸುವ CAT ಮತ್ತು NRC ಯಂತ ಕಾಯಿದೆಗಳನ್ನು ಸೃಷ್ಟಿಸುವುದು ಮೋಹನ್ ಭಾಗವತ್ ರಂತಹ ನಾಗಪುರದ ಚಿತ್ಪಾವನರು, ಇದನ್ನು ಜಾರಿಗೆ ತರುವುದು ಅಮಿತ್ ಶಾ ನಂತಹ ವೈಶ್ಯರು. ಈ ಕೃತ್ಯಕ್ಕೆ ಬಳಸಿಕೊಳ್ಳುವುದು ಮೋದಿ ಎಂಬ ಹಿಂದುಳಿದ ವರ್ಗಕ್ಕೆ ಸೇರಿದ ಶೂದ್ರರನ್ನು. ಚಿತ್ಪಾವನ ಬ್ರಾಹ್ಮಣ ಅನ್ನುವ ಈ ದೇಶದ ವಂಶವಾಹಿಗೆ ದೂರವಿರುವ ಜಾತಿಯವರು ಸೃಷ್ಟಿಸಿದ 'ಕಾಯಿದೆ'ಯನ್ನು ಅನುಷ್ಠಾನಕ್ಕೆ ತರುವವನು ಅಮಿತ್ ಶಾ ಎಂಬ ವೈಶ್ಯ. ಈತನೂ ಈ ದೇಶದ ವಂಶವಾಹಿಗೆ ದೂರವೇ, ಅದಿರಲಿ, ಈತನ ಪಕ್ಕದಲ್ಲಿರುವ 'ಶಾ' ಎಂಬ ಹೆಸರೂ ವಿದೇಶಿಯದೆ!? ಅಂದರೆ ಪರ್ಶಿಯನ್ ದೇಶದ್ದು.

ಇಂತಹ ಹಿನ್ನೆಲೆಯುಳ್ಳವರು ಸೇರಿ ಈ ದೇಶದ ಮೂಲನಿವಾಸಿಗಳ ಪೌರತ್ವವನ್ನು ನಿರ್ಧರಿಸುವುದು ಅಂದರೆ ಏನು?. ಇಲ್ಲಿ ಪೌರತ್ವವನ್ನು ಕುರಿತಂತೆ ಯಾರನ್ನಾದರೂ ಪ್ರಶ್ನಿಸಲು ಇವರಿಗಿರುವ ನೈತಿಕತೆಯಾದರೂ ಎಂತದ್ದು?. ಹಾಗೆ ನೋಡಿದರೆ ಇವರ ಐತಿಹಾಸಿಕ ಹಿನ್ನೆಲೆ ಮತ್ತು ವಂಶವಾಹಿಯ ಹಿನ್ನೆಲೆಯಲ್ಲಿ ಇವರ ಪೌರತ್ವವನ್ನೇ ಮೊದಲು ಪ್ರಶ್ನಿಸಬೇಕಲ್ಲವೆ? ಹಾಗೆ ನೋಡಿದರೆ ದೇಶದಿಂದ ಮೊದಲು  ಹೊರಕ್ಕೆ ಹೋಗಬೇಕಾಗಿರುವುದು ಇವರೇ ಅಲ್ಲವೆ…?