ಯಾರು ದೇಶಪ್ರೇಮಿಗಳು?

ಯಾರು ದೇಶಪ್ರೇಮಿಗಳು?

ದೇಶಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವುದು ವ್ಯವಸ್ಥಿತ ಸುಲಿಗೆ. ದೇಶಪ್ರೇಮಿಗಳು ಎಂದು ತಮ್ಮನ್ನು ತಾವು ಕರೆದುಕೊಳ್ಳುವವರಿಗೆ ಸಾಸಿವೆಯಷ್ಟಿರುವ ಸಾಧನೆಯ ಲೇಪ ಕಂಡೀತೆ ಹೊರೆತು ರಾಶಿ ರಾಶಿಯಷ್ಟಿರುವ ಸಮಸ್ಯೆಯಲ್ಲ. ಈ ಕುರಿತಾಗಿ ಕೆ.ಆರ್.ಹರಿಪ್ರಸಾದ್‌ ಅವರ ವಿಶ್ಲೇಷಣೆ.

 

ಪ್ರತಿ ಚುನಾವಣೆಯು ಜಾತಿ ಆಧರಿಸಿಯೇ ನಡೆಯುತ್ತಾ ಬಂದಿದೆ. ಆದರೆ ಬಾರಿ ಜಾತಿ ಕಣ್ಣಿಗೆ ಕುಕ್ಕುವಷ್ಟು ಹಿಂದೆ ಆದಂತಿಲ್ಲ. ಈ ಬಾರಿ ಹೊಸಹೊಸ ಜಾಗಗಳಲ್ಲಿ ಓಡಾಡುತ್ತ ಅಭಿಪ್ರಾಯ ತಿಳಿಯಲು ಸಾಹಸ ಪಡುತ್ತಿದ್ದಾಗ ವಾಸನೆಗಳು ಎಗ್ಗಿಲ್ಲದಂತೆ ರಾಚುತ್ತಿದ್ದವು. ಜಾತಿ, ಧರ್ಮ, ಪಂಥಗಳು ಇಷ್ಟೊಂದು ಪ್ರಖರವಾಗಿ ಮುನ್ನೆಲೆಗೆ ಬಂದಿರುವುದು ಎದ್ದು ಕಾಣುತ್ತಿದೆ. ಇವು ರಾಷ್ಟ್ರೀಯತೆ, ಚೌಕೀದಾರ್, ವಿಶ್ವಗುರು ಎಂಬ ಹೆಸರಿನ ಕವಚದೊಳಗೆ ಮುಗ್ಧವಾಗಿ ಅಡಗಿ ಕೂತಿವೆ. 

ಒಂದಂತೂ ನಿಜ. "ಇಲ್ಲಿ ಯಾವನು ಬಂದರೂ ಅಷ್ಟೇ " ಎಂದು ಸಿನಿಕಗೊಂಡಿದ್ದ ಮಧ್ಯಮ ವರ್ಗ ಬಾರಿ ಚುನಾವಣಾ ಉತ್ಸಾಹ ಆವಾಹಿಸಿಕೊಂಡು ಓಡಾಡುತ್ತಿದೆ. ಅಷ್ಟರ ಮಟ್ಟಿಗಂತೂ ಇದು ಪ್ರಧಾನಿಯವರ ಸಾಧನೆಯೇ ಸರಿ. ಸಿನಿಕರನ್ನು ಉತ್ಸಾಹಿಗಳನ್ನಾಗಿ ಮಾಡಿರುವುದೇನೊ ಸರಿ. ಆದರೆ ಇವರ ಉತ್ಸಾಹ ಅಥವಾ ಭಾಗವಹಿಸುವಿಕೆಯನ್ನು ಎಚ್ಚರಿಕೆಯಿಂದ ನೋಡಬೇಕಾಗಿದೆ.

ದೇಶದಲ್ಲೇ ಆಗಬಾರದ ಕೆಲಸಗಳು ನಡೆದಿವೆ ಎಂದು ಹೇಳಿಕೊಂಡು ಓಡಾಡುವ ವರ್ಗ ನೋಟು ರದ್ದತಿಯಿಂದ ಕಪ್ಪು ಹಣ ಕರಗಿ ಹೋಯಿತು ಎನ್ನುತ್ತದೆ. ಭ್ರಷ್ಟಾಚಾರವೇ ನಿಂತು ಹೋಯಿತು ಎನ್ನುತ್ತದೆ. ನೋಟು ರದ್ದತಿ ನಂತರ ನಡೆದ ಚುನಾವಣೆಗಳಲ್ಲಿ ಮೊದಲಿಗಿಂತ ಹೆಚ್ಚು ಹಣದ ಹೊಳೆ ಹರಿದಿದ್ದನ್ನು ಅನುಮಾನದಿಂದ ನೋಡಲು ಕೂಡ ಪ್ರಯತ್ನಿಸುವುದಿಲ್ಲ. ಈ ವರ್ಗದ ಉತ್ಸಾಹ ಯಾವ ಮಟ್ಟಕಿದೆಯೆಂದರೆ ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದೆ ಎನ್ನುತ್ತದೆ. ಪುಲ್ವಾಮ ಘಟನೆ, ವಿಂಗ್ ಕಮಾಂಡರ್ ಅಭಿನಂದನ್ ವಾಪಸಾತಿ ಉಲ್ಲೇಖಿಸಿ "ಇದು ಭಾರತದ ವಿಜಯ" ಎಂದು  ಬಣ್ಣಿಸುತ್ತದೆ. ಪುಲ್ವಾಮ ಘಟನೆ ಭದ್ರತಾ ವೈಫಲ್ಯದ ಬಗ್ಗೆ ಒಂದು ಮಾತನ್ನೂ ಆಡಲಾರದೆ ಪುಂಖಾನುಪುಂಖವಾಗಿ ಕೆಟ್ಟ ಕೆಟ್ಟ ದಾರಿ ತಪ್ಪಿಸುವ ಇತಿಹಾಸವನ್ನೆಲ್ಲ ಹೇಳುವ ವರ್ಗದ ಆಳದಲ್ಲಿ ಅಡಗಿರುವುದು ಕೋಮುದ್ವೇಷ.

ಇದಕ್ಕಿಂತ ಅಚ್ಚರಿ ಎಂದರೆ ಮಧ್ಯಮ ವರ್ಗದ ವಿದ್ಯಾವಂತ ಮಹಿಳೆಯರ ಧನ್ಯತಾಭಾವ. ಬೆಂಗಳೂರಿನಲ್ಲಿ ಪ್ರಧಾನಿಯವರೇ ಬಂದು ಮಹಿಳೆಯರ ಜೊತೆ 'ಲಲಿತಾ ಸಹಸ್ರನಾಮ' ಪಠಿಸಿದ್ದು‌ ಅವರಲ್ಲಿ ಧನ್ಯತೆ ಮೂಡಿಸಿರಲಿಕ್ಕೂ ಸಾಕು. ಈ ಧನ್ಯತೆ ಊರೂರುಗಳಲ್ಲಿ ವೈದಿಕಗೊಳ್ಳುತ್ತಿರುವ ಹಣವಂತ ಜಾತಿಗಳನ್ನು ಸೋಕಿ ಪುಳಕಗೊಂಡಂತಿದೆ.

ಇವೆಲ್ಲಾ ಮೇಲ್ವರ್ಗದ ಹಾಗೂ ಮೇಲು ವರ್ಗಗಳೊಂದಿಗೆ ಗುರುತಿಸಿಕೊಳ್ಳಲು ಯತ್ನಿಸುತ್ತಿರುವ ವರ್ಗಗಳ ಚಿಹ್ನೆಗಳು ತಾನೇ?

ಹಾಗೆ ನೋಡಿದರೆ ಈಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೊಸ ರೂಪ ತಾಳಿರುವುದು ಇವರನ್ನು ತಟ್ಟಿಯೇ ಇಲ್ಲವೇ? ಕಟುವಾದ ದೇವಾಲಯದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ದಾನಮ್ಮಳ ಮೇಲಿನ ಅತ್ಯಾಚಾರ ಇವೆಲ್ಲ ಮಹಿಳೆಯರಿಗೆ ಸಂಬಂಧಿಸಿದವಲ್ಲವೇ? ಹೋಗಲಿ ತಮ್ಮ ತಕ್ಷಣದ ಅಗತ್ಯವಾದ  'ಸ್ಯಾನಿಟರಿ ಪ್ಯಾಡ್' ಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಯಾಗಲೀ, ಬಾಲ್ಯವಿವಾಹ 'ಲವ್ ಜಿಹಾದ್' ತಡೆಯಲು ಇರುವ ಏಕೈಕ ದಾರಿ ಎನ್ನುವ ಹೇಳಿಕೆಯಾಗಲೀ ಇವರನ್ನು ಯಾವ ಬಗೆಯಲ್ಲೂ ತಟ್ಟುತ್ತಿಲ್ಲವೇ?

ಸಲದ ಚುನಾವಣೆಗೆ ಹೊರದೇಶಗಳಿಂದ ಅನೇಕಾನೇಕರು ಬಂದರು. ಬರುವ ಮುಂಚೆ ಜಾಲತಾಣಗಳಲ್ಲಿ ತಮ್ಮ ಬರುವಿಕೆ ಮತ್ತು ಹಕ್ಕು ಚಲಾವಣೆ ಬಗ್ಗೆ ಹೇಳಿಕೊಂಡರು. ಸಂತೋಷ. ಇವರಿಗೆ ಈಗಲಾದರೂ ತಮ್ಮ ಹಕ್ಕು ಚಲಾಯಿಸುವ ಜ್ಞಾನೋದಯ ಆಗಿದ್ದಕ್ಕೆ ಅಭಿನಂದಿಸೋಣ. ವಿದೇಶಗಳಿಂದ ಮತ ಚಲಾಯಿಸಲು ಬಂದವರನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಗೆಬಗೆಯಾಗಿ ಬಣ್ಣಿಸಿ, ಇದೊಂದು ದೇಶ ಪ್ರೇಮ ಎಂದು ಬಿಂಬಿಸಲಾಯಿತು. ಬಹುಪಾಲು ದೇಶ ಪ್ರೇಮಿಗಳ ಮೂಲ ಬೆಂಗಳೂರು, ಮೈಸೂರು ಹೆಚ್ಚೆಂದರೆ ಕೆಲ ಪಟ್ಟಣ ಪ್ರದೇಶಗಳು. ಇವರ ಚಿಂತನೆಯೆಲ್ಲ ಹೆಚ್೧ ವೀಸಾ ಸುತ್ತವೆ ಅಥವಾ ರಾಷ್ಟ್ರೀಯತೆ ಸುತ್ತಲೇ ಇವೆ. ಪ್ರಧಾನಿಯವರ ಬಗ್ಗೆ ಇರುವ ಕಕ್ಕುಲಾತಿಗೆ ಇದಕ್ಕಿಂತ ಆಚೆಯ ಕಾರಣಗಳೇನಿವೆಯೋ ಗೊತ್ತಿಲ್ಲ.

ಇವರಿಗೆ ಇಂಡಿಯಾದಲ್ಲಿ ನಡೆಯುತ್ತಿರುವುದರ ಬಗ್ಗೆ ಏನೂ ಗೊತ್ತಿಲ್ಲ.

ನೋಟುಬಂಧಿಯಿಂದ ಎಲ್ಲಾ ಹಣ ಈಚೆ ಬಂತು ಎಂಬುದು ಇವರ ಮುಗ್ದಆನಂದ. ಪ್ರತಿ ಸಲ ಐಟಿ ದಾಳಿಯಲ್ಲಿ ಕಾಣುವ ಕಂತೆ ಕಂತೆ ಹಣದ ಬಗ್ಗೆ ಯಾವ ಪ್ರಶ್ನೆಗಳೂ ಹುಟ್ಟುವುದಿಲ್ಲ? ಕಳೆದ ಐದು ವರ್ಷದಲ್ಲಿ ಸತ್ತ ರೈತರೆಷ್ಟು? ತಮಿಳುನಾಡಿನ, ಮಹಾರಾಷ್ಟ್ರದ ರೈತರ ಪ್ರತಿಭಟನೆಗಳಲ್ಲಿ ರೈತರು ತೋರಿದ ಸಂಯಮ, ಸಹನೆ ಇವರಿಗೆ ಕಾಣುವುದಿಲ್ಲವೇ? ಅಥವಾ ನಮಾಮಿ ಗಂಗೆ ಮೂಲಕ ಗಮನ ಸೆಳೆದ ವಾರಣಾಸಿಯೇ ಗಬ್ಬೆದ್ದು ನಾರುತ್ತಿರುವುದು ಕಾಣಲಾರರೇ? ವರ್ಲ್ಡ್ ಇಕಾನಿಮಿಕ್ ಫೋರಂ ಸರ್ವೆಯ ಪ್ರಕಾರ ಪರಿಸರ ಸಂಬಂದೀ ನಿರ್ವಹಣೆಯ ಪಟ್ಟಿಯ 180 ರಾಷ್ಟ್ರಗಳಲ್ಲಿ ಕೊನೆಯ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಇರುವುದು ತಿಳಿದಿಲ್ಲವೇ? ಅಥವಾ ಇವೆಲ್ಲವೂ 'ದೇಶಪ್ರೇಮ'ದ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಇವರ ದೇಶಪ್ರೇಮಗಳೆಲ್ಲ ಜಾಲತಾಣಗಳಲ್ಲಿ ಬಿತ್ತುವ ಹುಸಿ ಸುಳ್ಳು, ಕೋಮುವಿದ್ವೇಷಕ್ಕೆ ಸಿಮೀತವಾದಂತಿವೆ.

ಪ್ರತಿ ಚುನಾವಣೆಯಲ್ಲೂ ಇನ್ನೂ ಒಂದು ವಿದ್ಯಮಾನ ನಡೆಯುತ್ತದೆ. ಅದು ವಲಸೆ ಹೋಗಿದ್ದ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ನೌಕರರು ಲಗೇಜು ಆಟೊ, ಟೆಂಪೋ,ಬಸ್ಸು,  ಟಂಟಂಗಳನ್ನು ಮಾಡಿಕೊಂಡು ಮತ ಚಲಾಯಿಸಲು ಬರುತ್ತಾರೆ. ಊರ ಹಬ್ಬಕ್ಕೆ ಬಂದ ಖುಷಿಯಲ್ಲಿ ಬಂದು ಮತ ಹಾಕಿ, ಫ್ರೀ ಊಟ, ಎಣ್ಣೆ, ಕಾಸು ಪಡೆದು ಹೊರಟು ಹೋಗುತ್ತಾರೆ. ಅನೇಕ ಸಲ ವಾಹನಗಳು ಅಪಘಾತಕ್ಕೆ ಒಳಗಾಗಿ ಹೆಸರಿಲ್ಲದ ಜನ ಸಾಯುತ್ತಾರೆ, ಹೆಚ್ಚೆಂದರೆ ನಾಕನೆ ಪುಟದ ಸಣ್ಣ ಕಾಲಂ ಸುದ್ದಿಯಾಗುತ್ತಾರೆ. ಇದು ಲಾಗಾಯ್ತಿನಿಂದಲೂ ನಡೆದು ಬರುತ್ತಲೇ ಇದೆ. ಇದನ್ನು ನೋಡುವುದೇ ವಕ್ರ ಕಣ್ಣುಗಳಿಂದ. ಇವರು ದುಡ್ಡಿಗಾಗಿ ಮತ ಮಾರಿಕೊಳ್ಳುವರೆಂದು ಆಡಿಕೊಳ್ಳಲಾಗುತ್ತದೆ. ಒಂದು ಮನೆಯ ನಾಕಾರು ಜನ ಕೂಲಿ ಕಾರ್ಮಿಕರು ಅದೊಂದು ದಿನ ಎಷ್ಟು ಸಂಪಾದಿಸುತ್ತಾರೆಂದು ಚರ್ಚೆಗಳು ನಡೆಯುತ್ತವೆ. ಇವರು ಯಾರು? ಇವರು ದೇಶ ವಿರೋಧಿಗಳೇ? ಎಲ್ಲಾ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸುವ ಇವರು ಅವಿದ್ಯಾವಂತರೇ? ತಮ್ಮ ಹಕ್ಕುಗಳ ಬಗ್ಗೆ ಅರಿವುಳ್ಳವರಲ್ಲವೇ?

ಇವರ ಬಗೆಗೇಕೆ ಸಮಾಜ ಅಥವಾ ಮಾಧ್ಯಮಗಳಿಗೆ ವ್ಯಂಗ್ಯ, ತಿರಸ್ಕಾರ. ಪತ್ರಕರ್ತನೊಬ್ಬ ಯಾರೋ  ಅಬ್ಬೇಪಾರಿ ಕುಡಿದು ಮಲಗಿರುವ ಪಟ ಹಾಕಿ ಇವನು ನಮ್ಮ ಪ್ರತಿನಿಧಿಯನ್ನು ಆರಿಸ್ತಾನೆ. ನಾವೇ ಹೋಗಿ ಓಟು ಹಾಕಿ ನಮ್ಮ ಪ್ರತಿನಿಧಿ ಆರಿಸೋಣ ಎಂದು ಪೋಸ್ಟ್ ಹಾಕುವುದರಲ್ಲಿ ದೇಶ ಪ್ರೇಮವಿದೆಯೊ, ದುರ್ಬಲರ ಬಗ್ಗೆ ಅಸಹನೆಯಿದೆಯೊ? 

ಒಟ್ಟಾರೆ ದೇಶ ಪ್ರೇಮ ಎಂಬುದು ಮುಖವಾಡ ಆಗಿಹೋಗಿದೆ. ಈ ದೇಶ ಪ್ರೇಮದ ವ್ಯಾಖ್ಯಾನ ಹೊಸದಾಗಿ ಮಾಡಬೇಕಾದ ಜರೂರಿದೆ.

 ನೂರಾರು ಮರ ನೆಟ್ಟು ಬೆಳೆಸಿದ ಸಾಲುಮರದ ತಿಮ್ಮಕ್ಕ, ಬತ್ತಿಹೋಗಿದ್ದ ನದಿಗಳನ್ನು ಮತ್ತೆ ಉಕ್ಕಿಸಿದ ಡಾ.ರಾಜೇಂದ್ರ ಸಿಂಗ್, ಮಲ ಎತ್ತುವ ಕರ್ಮಚಾರಿಗಳಿಗಾಗಿ ಹೋರಾಡುತ್ತಿರುವ ಬೆಜವಾಡ ವಿಲ್ಸನ್, ಹತ್ತಾರು ಕೆರೆಗಳನ್ನು ಒಬ್ಬನೇ ಕಟ್ಟಿದ ಕೆರೆ ಕಾಮೇಗೌಡರು, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹಾಜಿರಬ್ಬ ಮುಂತಾದವರೆಲ್ಲ  ದೇಶಭಕ್ತರ ವ್ಯಾಪ್ತಿಯಲ್ಲಿ ಇದ್ದಾರೆಯೋ ಇಲ್ಲವೋ ?