ಎಲ್ಲಿ ಹೋದರು ಕೋಮಲ್?

ಬಹಳ ಸಮಯದಿಂದ ಹಾಸ್ಯ ಕಲಾವಿದ ಕೋಮಲ್ ನಟಿಸಿರುವ ಯಾವುದೇ ಚಿತ್ರ ತೆರೆ ಕಂಡಿಲ್ಲ. ಯಾಕೆ ಹೀಗೆ, ಅವರೇನು ಮಾಡುತ್ತಿದ್ದಾರೆ ಎಂಬೆಲ್ಲ ಪ್ರಶ್ನೆಗಳಿಗೆ ಶ್ರೀನಾಥ್ ಬೆಳಚಿಕ್ಕನಹಳ್ಳಿ ಉತ್ತರಿಸಿದ್ದಾರೆ.

ಎಲ್ಲಿ ಹೋದರು ಕೋಮಲ್?

 

ಬಹಳ ಸಮಯದಿಂದ ಹಾಸ್ಯ ಕಲಾವಿದ ಕೋಮಲ್ ನಟಿಸಿರುವ ಯಾವುದೇ ಚಿತ್ರ ತೆರೆ ಕಂಡಿಲ್ಲ. ಯಾಕೆ ಹೀಗೆ, ಅವರೇನು ಮಾಡುತ್ತಿದ್ದಾರೆ ಎಂಬೆಲ್ಲ ಪ್ರಶ್ನೆಗಳಿಗೆ ಶ್ರೀನಾಥ್ ಬೆಳಚಿಕ್ಕನಹಳ್ಳಿ ಉತ್ತರಿಸಿದ್ದಾರೆ.

ಕನ್ನಡ ಸಿನಿಮಾಗಳನ್ನು ನಿಯಮಿತವಾಗಿ ನೋಡುವವರು, ಗಮನಿಸುವವರು ಕೇಳುತ್ತಿರುವ ಪ್ರಶ್ನೆ ಇದು. ಕೋಮಲ್ ನಟಿಸಿದ ಕೊನೆಯ ಚಿತ್ರ ಡೀಲ್ ರಾಜ. ಅದು ಬಿಡುಗಡೆಯಾಗಿದ್ದು ಜುಲೈ 2016 ರ ಕೊನೇ ಭಾಗದಲ್ಲಿ. ಮೂರು ವರ್ಷ ಮುಗಿಯುತ್ತಾ ಬಂದಿದ್ದರೂ ಕೋಮಲ್‌ರ ಮತ್ತೊಂದು ಚಿತ್ರ ಬಿಡುಗಡೆಯಾಗಿಲ್ಲ. ಹಾಗಿದ್ದರೆ ಕೋಮಲ್ ಏನು ಮಾಡುತ್ತಿದ್ದಾರೆ? 

       ಇದಕ್ಕೆ ಕೋಮಲ್ ಆಪ್ತರು ಕೊಡುವ ಉತ್ತರ, ಕೆಂಪೇಗೌಡ-2 ಚಿತ್ರವನ್ನು ಮುಗಿಸಿರುವ ಕೋಮಲ್ ಸದ್ಯ ಹೊಸ ಸಿನಿಮಾ ಮಾಡುವುದಕ್ಕೆ ಕಥೆ ಹುಡುಕುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಥೆಗಳಿಗೆ ಬರವೇ ಎಂದುಕೊಳ್ಳಬೇಡಿ. ಈಗ ಕೋಮಲ್ ಹುಡುಕುತ್ತಿರುವ ಕಥೆ, ಅದರ ಮೂಲಕ ತಾವು ಬೆಳೆಸಿಕೊಳ್ಳಬೇಕು ಎಂದುಕೊಂಡಿರುವ ಇಮೇಜ್-ಇವೆಲ್ಲದರ ಹಿಂದೆ ಒಂದು ಸುದೀರ್ಘ ಹಿನ್ನೆಲೆ ಇದೆ.

             ಕೋಮಲ್ ನವರಸ ನಾಯಕ ಜಗ್ಗೇಶ್‌ರ ತಮ್ಮ. ಅಣ್ಣನ ಹಾದಿಯಲ್ಲಿಯೇ ಕೋಮಲ್ 1992 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್ ಹೀರೋ ಆಗಿದ್ದ ಸೂಪರ್ ನನ್ ಮಗ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಮಾಡುವ ಮೂಲಕ ಕೋಮಲ್‌ರ ವೃತ್ತಿಜೀವನ ಆರಂಭವಾಗಿತ್ತು. ಜಗ್ಗೇಶ್ ಮೊದಲು ಹೀರೋ ಸಹಚರನ ಪಾತ್ರ, ರೌಡಿ ಪಾತ್ರಗಳನ್ನು ಮಾಡಿ ನಂತರ ಹಾಸ್ಯನಟರಾದರು. ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಬೇಡಿಕೆಯ ಹೀರೋ ಕೂಡ ಆದರು; ತಮ್ಮದೇ ಹಾದಿಯೊಂದನ್ನು ರೂಪಿಸಿಕೊಂಡರು. 

              ಕೋಮಲ್ ಆರಂಭದಿಂದಲೂ ಹಾಸ್ಯ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿದ್ದರು. ಕನ್ನಡ ಚಿತ್ರರಂಗದ ಸ್ಟಾರ್‌ಗಳಾದ ವಿಷ್ಣುವರ್ಧನ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಉಪೇಂದ್ರ, ರಮೇಶ್ ಅರವಿಂದ್, ಸುದೀಪ್ ಮುಂತಾದವರ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದರು. ಗಾಂಧಿನಗರದ ಬಹು ಬೇಡಿಕೆಯ ಹಾಸ್ಯ ನಟರೂ ಆದರು. ಹೀಗಿರುವಾಗಲೇ ಕೋಮಲ್‌ಗೆ ಹೀರೋ ಆಗುವ ಉಮೇದು ಹುಟ್ಟಿಕೊಂಡದ್ದು. 

ಕೋಮಲ್ ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ ಮಿಸ್ಟರ್ ಗರಗಸ. ದ ಡಿನ್ನರ್ ಗೇಮ್ ಎನ್ನುವ ಫ್ರೆಂಚ್ ಚಿತ್ರವನ್ನು ಹಿಂದಿಯಲ್ಲಿ `ಬೇಜಾ ಫ್ರೈ’ ಆಗಿ ಮಾಡಿದ್ದರು. ಅದನ್ನು ಪ್ರತಿಭಾವಂತ ನಿರ್ದೇಶಕ ದಿನೇಶ್ ಬಾಬು ಕೋಮಲ್ ಗಾಗಿ ಮಿಸ್ಟರ್ ಗರಗಸ ಎನ್ನುವ ಹೆಸರಲ್ಲಿ ಕನ್ನಡಕ್ಕೆ ತಂದಿದ್ದರು. ದೊಡ್ಡ ಲಾಭ ಮಾಡದಿದ್ದರೂ ಆ ಚಿತ್ರ ಕೋಮಲ್‌ಗೆ ಒಂದಿಷ್ಟು ಹೆಸರು ತಂದುಕೊಟ್ಟಿತ್ತು. ನಂತರ ಸೋಲೋ ಹೀರೋ ಆಗಿ ಇಲ್ಲವೇ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ಕೋಮಲ್‌ ನಟಿಸಿದರು. ಆದರೆ ಅವು ಯಾವುವೂ ನೆಟ್ಟಗೆ ಮೂರು ದಿನ ಓಡಲಿಲ್ಲ. 2010ರಿಂದ 2016 ರವೆರೆಗೆ ಕೋಮಲ್ 20 ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳ ಪೈಕಿ 10 ಚಿತ್ರಗಳು ನೇರ ರಿಮೇಕ್ ಆದರೆ, ಮೂರು ಚಿತ್ರಗಳು ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ತೆಗೆದಂಥವು. ಇವುಗಳ ಪೈಕಿ ಹೆಚ್ಚಿನ ಚಿತ್ರಗಳು ಹಾಕಿದ ಬಂಡವಾಳವನ್ನೂ ವಾಪಸ್ ತಂದುಕೊಡಲಿಲ್ಲ. ಆದರೂ ಕೋಮಲ್‌ಗೆ ಒಂದರ ನಂತರ ಒಂದರಂತೆ ಚಿತ್ರಗಳು ಸಿಗುತ್ತಲೇ ಇದ್ದವು. ಅವುಗಳಲ್ಲಿ ಹೆಚ್ಚಿನವು ಕಾಮಿಡಿ ಪಾತ್ರಗಳು. ರಂಗಾಯಣ ರಘು, ಶರಣ್, ಸಾಧುಕೋಕಿಲಾ ಮುಂತಾದ ಕಾಮಿಡಿಯನ್‌ಗಳ ಜೊತೆ ಕೋಮಲ್ ತಮ್ಮದೇ ಒಂದು ಸ್ಥಾನವನ್ನು ಕಂಡುಕೊಂಡಿದ್ದರು. ಅದರ ನಡು ನಡುವೆಯೇ ಹೀರೋ ಆಗಿ ಕೂಡ ನಟಿಸತೊಡಗಿದರು. ಕೋಮಲ್‌ಗೆ ಹೀರೋ ಆಗಿ ಯಶಸ್ಸು ತಂದುಕೊಟ್ಟ ಚಿತ್ರ ಗೋವಿಂದಾಯ ನಮಃ. ಪವನ್ ಒಡೆಯರ್ ನಿರ್ದೇಶನದ ಆ ಚಿತ್ರದ ಯಶಸ್ಸಿನಲ್ಲಿ ಪ್ಯಾರ್‌ಗೆ ಆಗ್ಬುಟ್ಟೈತೆ ಎನ್ನುವ ಹಾಡಿನ ಪಾಲು ದೊಡ್ಡದು. 

       ಹೀಗೇ ಸಾಗಿದ್ದರೆ ಕೋಮಲ್ ಹೀರೋ ಆಗಿ, ಹಾಸ್ಯ ನಟನಾಗಿ ತಮ್ಮ ವೃತ್ತಿಜೀವನವನ್ನು ಅಬಾಧಿತವಾಗಿ ಮುಂದುವರೆಸಲು ಎಲ್ಲ ಅವಕಾಶಗಳೂ ಇದ್ದವು. ಅಷ್ಟರಲ್ಲಿ ಕೋಮಲ್ ಒಂದು ಮುಖ್ಯ ನಿರ್ಧಾರ ಕೈಗೊಂಡರು; ತಾನು ಇನ್ನು ಮುಂದೆ ಕಾಮಿಡಿ ಚಿತ್ರಗಳಲ್ಲಿ, ಹಾಸ್ಯದ ಲೇಪನ ಇರುವ ಪಾತ್ರಗಳಲ್ಲಿ ನಟಿಸುವುದಿಲ್ಲ ಎನ್ನುವುದೇ ಆ ನಿರ್ಧಾರ. ಕೇವಲ ಹೀರೋ ಆಗಿ ಮಾತ್ರವೇ ನಟಿಸಬೇಕು ಎನ್ನುವ ಕೋಮಲ್ ಅವರ ನಿರ್ಧಾರ ಗಾಂಧಿನಗರದ ಕೆಲ ಮಂದಿಗೆ ವಿಚಿತ್ರವಾಗಿ ಕಂಡಿತ್ತು. ಆ ಹೊತ್ತಿಗೆ ಕೋಮಲ್ ಹಾಸ್ಯ ನಟನಾಗಿ ಸುಮಾರು ನೂರು ಸಿನಿಮಾಗಳನ್ನು ಮಾಡಿದ್ದರು. ಅವರ ವಯಸ್ಸು ಕೂಡ 40 ದಾಟಿತ್ತು. ಕೋಮಲ್‌ರ ಈ ನಿರ್ಧಾರದಿಂದ ಕನ್ನಡ ಪ್ರೇಕ್ಷಕರು ಒಬ್ಬ ಒಳ್ಳೆಯ ಹಾಸ್ಯ ನಟನನ್ನು ಕಳೆದುಕೊಂಡಿದ್ದಂತೂ ನಿಜ. ಆದರೆ, ಕೋಮಲ್ ತಮ್ಮ ಭವಿಷ್ಯದ ಬಗ್ಗೆ ತಾವೇ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಅದರ ಭಾಗವಾಗಿಯೇ ಬಂದದ್ದು ಕೆಂಪೇಗೌಡ-2.

ಕೆಂಪೇಗೌಡ ಅಂದರೆ ಸದ್ಯದ ಮಟ್ಟಿಗೆ ಕನ್ನಡ ಪ್ರೇಕ್ಷಕರಿಗೆ ನೆನಪಾಗುವುದು ಸುದೀಪ್ ನಟಿಸಿದ್ದ ಚಿತ್ರ. ಅದಕ್ಕೂ ಈಗ ಕೋಮಲ್ ನಟಿಸುತ್ತಿರುವ ಕೆಂಪೇಗೌಡ-2 ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಕೆಂಪೇಗೌಡ ತಮಿಳಿನಲ್ಲಿ ಸೂರ್ಯ ನಟಿಸಿದ್ದ ಸಿಂಗಂ ಚಿತ್ರದ ರೀಮೇಕ್. ಕೋಮಲ್ ಅವರೇ ಹೇಳಿಕೊಂಡಿರುವಂತೆ, ಕೆಂಪೇಗೌಡ-2 ಒಂದು ಸ್ವಮೇಕ್ ಚಿತ್ರ. ಆ ಚಿತ್ರಕ್ಕಾಗಿ ಕೋಮಲ್ ಹೆಚ್ಚುಕಡಿಮೆ ಮೂರು ವರ್ಷ ವ್ಯಯಿಸಿದ್ದಾರೆ. ಒಂದು ಮೂಲದ ಪ್ರಕಾರ ಆ ಚಿತ್ರದ ಶೂಟಿಂಗ್ ಮುಗಿದು ತುಂಬಾ ದಿನವಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಮುಗಿದಿದೆಯಂತೆ. ನಿರ್ಮಾಪಕನ ವ್ಯಾವಹಾರಿಕ ತೊಡಕುಗಳಿಂದ ಚಿತ್ರವಿನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗುತ್ತಿದೆ.

ಕೆಂಪೇಗೌಡ ಚಿತ್ರದಲ್ಲಿ ಕೋಮಲ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಅದಕ್ಕಾಗಿ ಕೋಮಲ್ ಮೀಸೆ ಬಿಟ್ಟಿರುವ ಫೋಟೋಗಳು ವೈರಲ್ ಕೂಡ ಆಗಿದ್ದವು. ಈ ಚಿತ್ರಕ್ಕಾಗಿ ಕೋಮಲ್ ರಿಯಲ್ ಪೊಲೀಸ್ ಅಧಿಕಾರಿಗಳ ಮ್ಯಾನರಿಸಂ, ಅವರ ಕೆಲಸದ ಶೈಲಿ ಎಲ್ಲವನ್ನೂ ಅಧ್ಯಯನ ಮಾಡಿದ್ದಾರಂತೆ. ಜೊತೆಗೆ 20 ಕೆ.ಜಿ ತೂಕ ಇಳಿಸಿಕೊಂಡು ಫಿಟ್ ಆಂಡ್ ಫೈನ್ ಆಗಿ ಕಾಣುತ್ತಾರಂತೆ. ಈ ಚಿತ್ರದಿಂದ ತಮಗೆ ಆಕ್ಷನ್ ಹೀರೋ ಇಮೇಜ್ ಪ್ರಾಪ್ತವಾಗುವುದು ಗ್ಯಾರಂಟಿ ಎನ್ನುವ ಭರವಸೆ ಕೋಮಲ್ ಅವರದ್ದು. 

              ಹಕೀಕತ್ತೇನೆಂದರೆ, ಈಗ ಕೋಮಲ್ ಕೆಂಪೇಗೌಡ ಚಿತ್ರದಂಥದ್ದೇ ಭರ್ಜರಿ ಆಕ್ಷನ್ ಇರುವ ಚಿತ್ರಗಳನ್ನು ಮಾಡಲು ಪಣ ತೊಟ್ಟಂತಿದೆ. ಇದಕ್ಕೆ ಪುರಾವೆಯಾಗಿ ತೆಲುಗು, ತಮಿಳಿನ ಹಳೆಯ ಆಕ್ಷನ್ ಚಿತ್ರಗಳನ್ನು ರೀಮೇಕ್ ಮಾಡುವ ಬಗ್ಗೆ ಕೋಮಲ್, ಗಾಂಧಿನಗರದ ಒಂದಷ್ಟು ಆಪ್ತರೊಂದಿಗೆ ಚರ್ಚಿಸಿದ್ದಾರೆ. ತನ್ನ ಮುಂದಿನ ಚಿತ್ರಗಳಲ್ಲಿ ಅಥವಾ ಪಾತ್ರಗಳಲ್ಲಿ ಹಾಸ್ಯದ ಲೇಪವೇ ಇರದೇ, ಆಕ್ಷನ್‌ನ ಹೈ ಡೋಸ್ ಇರಬೇಕು ಎನ್ನುವುದು ಕೋಮಲ್ ಬಯಕೆ. ಆದರೆ, ಕೋಮಲ್ ಅವರನ್ನು ಹಾಗೆ ಪೂರ್ಣ ಪ್ರಮಾಣದಲ್ಲಿ ಆಕ್ಷನ್ ಹೀರೋ ಆಗಿ ಹಾಕಿಕೊಂಡು ಚಿತ್ರ ನಿರ್ಮಿಸಲು ಯಾವ ನಿರ್ಮಾಪಕನೂ ಸದ್ಯ ಮುಂದಕ್ಕೆ ಬರುತ್ತಿಲ್ಲ. ಹಾಗಾಗಿಯೇ ಕೆಂಪೇಗೌಡ-2 ಚಿತ್ರದ ನಂತರ ಅವರ ಮತ್ತೊಂದು ಚಿತ್ರ ಸೆಟ್ಟೇರಿಲ್ಲ ಎನ್ನಲಾಗುತ್ತಿದೆ.    

 ಕೆಂಪೇಗೌಡ-2 ಚಿತ್ರದ ಆಕ್ಷನ್ ಸೀನ್‌ಗಳನ್ನು ಹೆಚ್ಚು ಹಣ ಖರ್ಚು ಮಾಡಿ, ಚೆನ್ನಾಗಿ ಚಿತ್ರೀಕರಿಸಿದ್ದಾರಂತೆ. ಚಿತ್ರದ ಪ್ರತಿಯನ್ನು ಹಿಡಿದುಕೊಂಡು ಕೋಮಲ್ ಮುಂಬೈಗೆ ಕೂಡ ಹೋಗಿ ಡಬ್ಬಿಂಗ್ ಹಕ್ಕುಗಳನ್ನು ಉತ್ತಮ ಮೌಲ್ಯಕ್ಕೆ ಮಾರಿಕೊಡಲು ಪ್ರಯತ್ನ ನಡೆಸಿದ್ದಾರಂತೆ. ಈ ಚಿತ್ರ ಯಶಸ್ವಿಯಾದರೆ ತನ್ನ ವೃತ್ತಿಬದುಕಿಗೆ ತಿರುವು ಸಿಗಲಿದೆ; ಸದ್ಯಕ್ಕೆ ಎಲ್ಲ ಚಿತ್ರರಂಗಗಳಲ್ಲೂ ಆಕ್ಷನ್ ಚಿತ್ರಗಳ ಜಮಾನಾ ನಡೆಯುತ್ತಿದ್ದು, ಆಕ್ಷನ್ ಹೀರೋ ಆದರೆ ತಮ್ಮ ಭವಿಷ್ಯ ಉಜ್ವಲವಾಗಲಿದೆ ಎನ್ನುವುದು ಕೋಮಲ್ ಅನಿಸಿಕೆ ಇರುವಂತಿದೆ.

      ಕೋಮಲ್ ತಮ್ಮ ಚಿತ್ರಕ್ಕಾಗಿ ಹಾಕಿರುವ ಶ್ರಮವನ್ನು ಮೆಚ್ಚೋಣ. ಅದೇ ರೀತಿ ಆಕ್ಷನ್ ಹೀರೋ ಆಗಬೇಕು ಎನ್ನುವ ಅವರ ಬಯಕೆಯನ್ನೂ ಗೌರವಿಸೋಣ. ಆದರೆ, ಸಿನಿಮಾ ಎನ್ನುವ ರೂಢಿಗತ ಹಾದಿಯ, ಸಿದ್ಧಸೂತ್ರಗಳ ಕ್ಷೇತ್ರದಲ್ಲಿ ಒಂದೇ ಥರದ ಪಾತ್ರಗಳಲ್ಲಿ ದಶಕಗಟ್ಟಲೇ ನಟಿಸಿದ ನಟನೊಬ್ಬ ದಿಢೀರ್ ಎಂದು ತನ್ನ ಹಾದಿ ಬದಲಿಸಿದರೆ ಅದನ್ನು ಜನ ಸ್ವೀಕರಿಸುತ್ತಾರಾ ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಹಾಸ್ಯ ಮಾಡುವುದಕ್ಕಿಂತಲೂ ಆಕ್ಷನ್ ಮಾಡಿದರೆ ಹೆಚ್ಚು ಬೇಡಿಕೆ, ಬೆಲೆ, ಹೀರೋಯಿಸಂ ಎನ್ನುವ ಕೋಮಲ್‌ ಅವರ ನಿಲುವು ಅಸಂಬದ್ಧ ಅಂತಲೂ ಅನ್ನಿಸುತ್ತದೆ. ಹಾಸ್ಯದ ಮೂಲಕವೇ ಜಾಗತಿಕ ಸಿನಿಮಾ ರಂಗದಲ್ಲಿ ಸಾಟಿಯಿಲ್ಲದ ಸಾಧನೆ ಮಾಡಿದ, ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಿದ ಚಾರ್ಲಿ ಚಾಪ್ಲಿನ್‌ನಂಥ ಅನ್ಯಾದೃಶ ಪ್ರತಿಭೆಯ ನಿದರ್ಶನ ನಮ್ಮ ಮುಂದಿದೆ.  ಜನರನ್ನು ನಗಿಸುವುದು ಕಡು ಕಷ್ಟದ ಕೆಲಸ. ಆ ಕಲೆ ಕೋಮಲ್‌ಗೆ ಸಿದ್ಧಿಸಿದೆ. ಕೋಮಲ್ ಅದನ್ನು ಕೇವಲವಾಗಿ ಕಾಣದಿರಲಿ; ತಮ್ಮ ಹೀರೋಯಿಸಂ ಹಾಗೂ ಆಕ್ಷನ್‌ನ ಮೋಹದಲ್ಲಿ ನಗುವ, ನಗಿಸುವ ಮನಸ್ಸನ್ನು ಕಳೆದುಕೊಳ್ಳದಿರಲಿ.