ಬಿಜೆಪಿ ಸರ್ಕಾರ ನಡೆಯುವುದೆಂದು?

ಬಿಜೆಪಿ ಸರ್ಕಾರ ನಡೆಯುವುದೆಂದು?

ಕರ್ನಾಟಕದಲ್ಲಿ ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡು ಎರಡು ವಾರ ಆಯಿತು. ಆ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷ ಸರಳ ಬಹುಮತದಿಂದ ಅಧಿಕಾರಕ್ಕೆನೋ ಬಂದಿತು. ಜುಲೈ 27ರಂದು ರಾಜ್ಯಪಾಲರು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್ . ಯಡಿಯೂರಪ್ಪ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ನೇಮಿಸಿದರು. ಅಂದು ಸಂಜೆಯೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಮೂರು ದಿನಗಳಲ್ಲಿಯೇ ಅಂದರೆ ಜುಲೈ 29ರಂದು ವಿಧಾನಸಭೆಯ ವಿಶ್ವಾಸ ಗಳಿಸುವ ಮೂಲಕ ತಮ್ಮ ಸರ್ಕಾರದ ಅಸ್ತಿತ್ವವನ್ನು ಭದ್ರ ಮಾಡಿಕೊಂಡರು.

ಇದು ಈ ಎರಡು ವಾರಗಳ ಇತಿಹಾಸವಷ್ಟೇ. ಈ ಎರಡು ವಾರದಲ್ಲಿ ಅವರ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಾಗಲಿಲ್ಲ. ಅದಕ್ಕೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ರಹಸ್ಯೆ ಕಾರ್ಯಕ್ರಮ ರೂಪಿಸುವುದರಲ್ಲಿ ಮಗ್ನವಾಗಿದ್ದದ್ದು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ.

ಬಿಜೆಪಿಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಕೇಂದ್ರ ಸಂಪುಟ ಸೇರಿದ್ದರಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸ್ಥಾನಕ್ಕೆ ಜೆ.ಪಿ. ನಡ್ಡಾ ಬಂದರೂ ಪಕ್ಷದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಅವರು ಸ್ವತಂತ್ರರಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜೊತೆ ಚರ್ಚಿಸದೆ ಮತ್ತು ಅವರ ಸಲಹೆ ಪಡೆಯದೆ ಒಂದು ಹೆಜ್ಜೆ ಮುಂದಿಡಲಾಗದ ಅಸಹಾಯಕ ಪರಿಸ್ಥಿತಿ ಅವರದ್ದು. 

ಕೇಂದ್ರದಲ್ಲಿ ಎರಡನೇ ಬಾರಿಗೆ ಅಚ್ಚರಿಯ ಬಹುಮತ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲ ಸಂಸತ್ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ತಮಗಿರುವ ಬಹುಮತದಿಂದಾಗಿ ಹತ್ತಾರು ಮಸೂದೆಗಳಿಗೆ ಅಂಗೀಕಾರ ಪಡೆಯುವುದರಲ್ಲಿ ಮೋದಿ ಮತ್ತು ಶಾ ಗಡಿಬಿಡಿಯಲ್ಲಿದ್ದಾರೆ.

ಕಾಂಗ್ರೆಸ್ ನ್ನು ಮತ್ತು ಪಾಕಿಸ್ತಾನವನ್ನು ಮಟ್ಟ ಹಾಕುವ ಅವರ “ಹಿಡನ್ ಅಜೆಂಡಾ” ಪ್ರಕಾರವಾಗಿ ಕಾಶ್ವೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ. ಈ ಮಧ್ಯೆ ಮುಸ್ಲಿಮರಲ್ಲಿರುವ ತ್ರಿವಳಿ ತಲಾಕ್ ಪದ್ಧತಿಗೆ ಇತಿಶ್ರೀ ಹಾಡುವ ಮಸೂದೆಗೂ ಉಭಯ ಸದನಗಳ ಒಪ್ಪಿಗೆ ಪಡೆದುಕೊಂಡರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಹತ್ತಾರು ಭರವಸೆಯಂತೆ ಕಾಶ್ವೀರಕ್ಕೆ ನೀಡಿದ್ದ ವಿಶೇಷ ಅಧಿಕಾರ ಅಥವಾ ಸ್ವಾಯತ್ತತೆಯ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಅಚ್ಚರಿ ಸಾಧನೆಯನ್ನು ಈಗ ಪ್ರಧಾನಿ ಮೋದಿ ಸಾಧಿಸಿ ತೋರಿಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರನ್ನು ಮಟ್ಟ ಹಾಕಲು ಅಡ್ಡಿಯಾಗಿದ್ದ ಕಾಶ್ಮೀರದ ಸ್ವಾಯತ್ತತೆಗೆ ಇತಿಶ್ರೀ ಹಾಡುವ ಮೂಲಕ ಕೇಂದ್ರ ಸರ್ಕಾರವೇ ನೇರವಾಗಿ ಎಲ್ಲ ಸೇನಾ ಕ್ರಮಗಳನ್ನು ಕೈಗೊಳ್ಳುವ ಹಾದಿಯನ್ನು ಸುಲಭ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಭಾರತದ ಬೆಳವಣಿಗೆಗಳ ಬಗೆಗೆ ಆಸಕ್ತಿ ತೋರುವ ಅಮೆರಿಕ, ಪಾಕಿಸ್ತಾನ ಮತ್ತು ಚೀನಾ ಮತ್ತು ದೇಶದ ಜನರನ್ನೂ ಪ್ರಧಾನಿ ಮೋದಿ ಅಚ್ಚರಿಗೊಳಿಸಿದ್ದಾರೆ.

ಇಂತಹ ಗಂಭೀರವಾದ ಮತ್ತು ಮಹತ್ವದ ಸಮಸ್ಯೆಯ ಬಗೆಗೆ ಕಾರ್ಯೋನ್ಮುಖರಾಗಿರುವ ಪ್ರಧಾನಿ ಮೋದಿ ಮತ್ತು ಶಾ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದರೂ ಇತ್ತ ಗಮನಿಸಲು ಆಗಿಲ್ಲ ಎನ್ನುವುದು ನಿಜ. ಕಾಶ್ಮೀರದ ವಿಷಯದ ಮುಂದೆ ಕರ್ನಾಟಕದ ಸಂಪುಟ ವಿಸ್ತರಣೆಗೆ ಗಮನ ಕೊಡುವುದು ಅವರಿಗೆ ಮಹತ್ವದ್ದಲ್ಲ ಎನ್ನುವುದು ಅಷ್ಟೇ ಸತ್ಯ. 

ಹಾಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತ ಈ ಎರಡು ವಾರಗಳಲ್ಲಿ ಏಕಚಕ್ರಾಧಿಪತ್ಯದಂತಾಗಿದ್ದರೂ ಇಲ್ಲೊಂದು ಸರ್ಕಾರವಿದೆ ಎನ್ನುವ ಭಾವನೆ ಜನರಲ್ಲಿ ಇದ್ದಂತಿಲ್ಲ.

ಈ ಮಧ್ಯೆ ಅಧಿಕಾರ ಬಿಟ್ಟು ಹೋಗುವಾಗ ವಿಧಾನಸಭೆಯ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟುಮಾಡಿದ ಕಾಂಗ್ರೆಸ್ ನ 14 ಶಾಸಕರು ಮತ್ತು ಜನತಾದಳದ ಮೂವರು ಶಾಸಕರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸುವುದು ಮಾತ್ರವಲ್ಲದೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆ ಕಾಂಗ್ರೆಸ್ ಮತ್ತು ದಳದ ಮನವಿಯನ್ನು ಕೈಗೆತ್ತಿಕೊಂಡರು. ತಮ್ಮ ಅಧಿಕಾರದ ಕೊನೆಯ ದಿನ ಈ ಹದಿನೇಳು ಶಾಸಕರ ವಿಧಾನಸಭೆಯ ಸದಸ್ಯತ್ವವನ್ನು ರದ್ದು ಮಾಡಿದರು.

ಈ ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿಯು ಸರಳ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತೆನ್ನುವುದು ಬೆಳಕಿನಷ್ಟು ನಿಚ್ಚಳ. ಈ ಹದಿನೇಳು ಶಾಸಕರು ಸ್ಪೀಕರ್ ಕ್ರಮವನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. 9 ರಂದು ಇವರ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ. ಅಂದೇ ತಮ್ಮ ಅರ್ಜಿ ಇತ್ಯರ್ಥವಾಗಿ ಮತ್ತೆ ಶಾಸಕರಾಗುತ್ತೇವೆ ಎನ್ನುವ ವಿಶ್ವಾಸ ಅನರ್ಹತೆ ಹೊಂದಿರುವವರದ್ದು. ಆದರೆ ನ್ಯಾಯಾಲಯ ಏನು ಮಾಡುತ್ತದೆ ಎನ್ನುವುದನ್ನು ಈಗಲೇ ಹೇಳಲಾಗದು. 

ನಮ್ಮ ಸಂವಿಧಾನದ ಪ್ರಕಾರ ಸಂಸದೀಯ ವ್ಯವಸ್ಥೆಗೆ ವಿಶೇಷ ಅಧಿಕಾರ ಮತ್ತು ಹಕ್ಕುಗಳಿರುವ ಕಾರಣ ನ್ಯಾಯಾಲಯ ಒಂದೇ ದಿನದಲ್ಲಿ ಸ್ಫೀಕರ್ ಕ್ರಮವನ್ನು ಎತ್ತಿಹಿಡಿಯುವುದಾಗಲಿ ಅಥವಾ ತಿರಸ್ಕರಿಸುವುದಾಗಲಿ ಕಷ್ಟ. ಸ್ಪೀಕರ್ ತಮಗೆ ಸಂವಿಧಾನದಲ್ಲಿ ನೀಡಿರುವ ಅಧಿಕಾರವನ್ನು ಹೇಗೆ ಬಳಸಿದ್ದಾರೆ. ಅವರ ಕ್ರಮ ಸಂವಿಧಾನ ಮತ್ತು ವಿಧಾನಸಭೆಯ ರೂಲ್ ಬುಕ್ ನಂತೆಯೇ ಆಗಿದೆಯೇ? ಹೀಗೆ ಹಲವಾರು ಅಂಶಗಳ ಬಗೆಗೆ ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಈ ಪ್ರಕರಣ ಎಷ್ಟು ದಿನದಲ್ಲಿ ಇತ್ಯರ್ಥವಾಗಲಿದೆ ಎಂದು ಈಗಲೇ ಹೇಳಲಾಗದು.

ಈ ಎಲ್ಲದರ ನಡುವೆ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ರೈತರ ಸಾಲ ಮನ್ನಾ, ಹಿಂದಿನ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತಿದ್ದ ಕೊನೆ ದಿನಗಳಲ್ಲಿ ಕೈಗೊಂಡ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ ರೇವಣ್ಣ ಯರ್ರಾಬಿರ್ರಿ ಮಾಡಿದ ಎಂಜಿನಿಯರುಗಳ ವರ್ಗಾವಣೆಯನ್ನು ರದ್ದುಪಡಿಸಿದರು.

ಅದೇ ರೀತಿಯಲ್ಲಿ ಯಡಿಯೂರಪ್ಪ ಸಹಾ ಮನಸ್ಸಿಗೆ ಬಂದಂತೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಈ ವರ್ಗಾವಣೆಯಿಂದಾಗಿ ಸಹಜವಾಗಿಯೇ ಅಧಿಕಾರಿ ವರ್ಗ ಗೊಂದಲದಲ್ಲಿ ಮುಳುಗಿದೆ. ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಆಡಳಿತದ ಗುಂಗಿನಲ್ಲಿದ್ದ ಅಧಿಕಾರಶಾಹಿ ಬಿಜೆಪಿ ಆಡಳಿತಕ್ಕೆ ಹೊಂದಿಕೊಳ್ಳುವ ಗೊಂದಲವನ್ನು ಪರಿಹರಿಸಿಕೊಳ್ಳುವುದರಲ್ಲಿ ನಿರತವಾಗಿದೆ. 

ಬೆಂಗಳೂರು ಪೊಲೀಸ್ ಕಮೀಷನರ್ ಹುದ್ದೆಗೆ ನೇಮಕವಾಗಿದ್ದ ಅಲೋಕ್ ಕುಮಾರ್ ಅವರನ್ನು ಕೇವಲ 45 ದಿನದಲ್ಲೇ ವರ್ಗಾವಣೆ ಮಾಡಲಾಗಿದೆ. ದಕ್ಷ ಅಧಿಕಾರಿ ಎನ್ನಲಾದ ಅಲೋಕ್ ಕುಮಾರ್ ಈಗ ಕರ್ನಾಟಕ ಅಪಲೇಟ್ ಟ್ರಿಬ್ಯೂನಲ್ ಕದ ತಟ್ಟಿದ್ದಾರೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಒಮ್ಮೆ ವರ್ಗ ಮಾಡಿದ ಮೇಲೆ ಎರಡು ವರ್ಷಗಳ ವರೆಗೆ ಬದಲಾಯಿಸಬಾರದೆಂಬ ನಿಯಮವಿದೆ. ಆದರೆ ಈ ನಿಯಮವನ್ನೆಲ್ಲ ಯಡಿಯೂರಪ್ಪ ಗಾಳಿಗೆ ತೂರಿದ್ದಾರೆ. ಒಂದು ವೇಳೆ ಸಿಎಟಿಗೆ ಹೋಗಿರುವ ಅಲೋಕ್ ಕುಮಾರ್ ಅವರ ವರ್ಗಾವಣೆಯನ್ನು ರದ್ದುಪಡಿಸುವಂತೆ ತೀರ್ಪು ಬಂದರೆ ಮುಖ್ಯಮಂತ್ರಿಗೇ ಮುಖಭಂಗವಾಗುವುದು ಖಚಿತ. ಇಂತಹ ಎಚ್ಚರಿಕೆ ಆಡಳಿತ ಮಾಡುವವರಿಗೆ ಇದ್ದರೆ ಒಳ್ಳೆಯದು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವ ಮುನ್ನ ಇದ್ದ ಆಕರ್ಷಣೆ ಮತ್ತು ಚಟುವಟಿಕೆ ಈಗ ಇಲ್ಲವಾಗಿದೆ. ಅದಕ್ಕೆ ಕಾರಣಗಳೂ ಹಲವಾರು. ಅವರು ಅಧಿಕಾರ ಸ್ವೀಕಾರ ಮಾಡಿದ ಮೇಲೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೆಲವು ಘಟನೆಗಳು ನಡೆದಿವೆ. ದೇಶದಾದ್ಯಂತ ಮತ್ತು ವಿಶ್ವದ ಅನೇಕ ಕಡೆ ಕರ್ನಾಟಕದ ಕಾಫಿಯ ಸವಿರುಚಿಯನ್ನು ಪರಿಚಯಿಸಿದ “ಕೆಫೆ ಕಾಫಿ ಡೇ” ಆರಂಭ. ಸಾಫ್ಟ್ ವೇರ್ ಉದ್ಯಮ ಮತ್ತು ಇತರೆ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಸುಮಾರು ಐವತ್ತು ಸಾವಿರ ಮಂದಿಗೆ ಉದ್ಯೋಗ ನೀಡಿದ ಚಿಕ್ಕಮಂಗಳೂರಿನ ವಿ.ಜಿ. ಸಿದ್ದಾರ್ಥ ಅವರ ಸಾವು ರಾಜ್ಯವನ್ನು ಕಾಡುತ್ತಲೇ ಇದೆ. ಇತ್ತ ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಹಾ ಮಳೆಯ ಪರಿಣಾಮ ಕೃಷ್ಣ ನದಿ ಉಕ್ಕಿ ಹರಿದು ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈಗ ಜಲಪ್ರಳಯವಾಗಿದೆ. ಕೊಡಗು, ಚಿಕ್ಕಮಗಳೂರು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಬೀಳುತ್ತಿರುವ ಮಳೆಯಿಂದ ಆಗಿರುವ ಪ್ರವಾಹದ ಪರಿಸ್ಥಿತಿಯಿಂದಾಗಿ ಅಲ್ಲಿನ ಜನರ ಗೋಳು ನೋಡುವವರಿಲ್ಲವಾಗಿದೆ.

ಕೊಡಗಿನಲ್ಲಿ ಮುಂಗಾರು ಮಳೆಯ ವೈಫಲ್ಯದಿಂದ ಈ ಬಾರಿ ಕೆ.ಆರ್.ಎಸ್. ಅಣೆಕಟ್ಟು ಹೆಚ್ಚು ಕಡಿಮೆ ಖಾಲಿ ಖಾಲಿ ಆಗುವ ದುಸ್ಥಿತಿ ತಲುಪಿತ್ತು. ಕಳೆದ ವಾರ 90 ಅಡಿವರೆಗೆ ಇದ್ದ ನೀರು 83 ಅಡಿವರೆಗೆ ಇಳಿದಿತ್ತು. ಈಗಾಗಲೇ ತಮಿಳುನಾಡಿಗೆ ಸುಮಾರು 20ಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ಹೋಗಿದೆ. ಕಾವೇರಿ ನದಿ ನಿರ್ವಹಣೆಯ ಪ್ರಾಧಿಕಾರವೇ ಈಗ ನೀರು ನಿರ್ವಹಣೆಯ ಅಧಿಕಾರ ಹೊಂದಿರುವುದರಿಂದ ಕಾವೇರಿ ನೀರನ್ನೇ ನಂಬಿದ ಮಂಡ್ಯ, ಮೈಸೂರು ಮತ್ತು ಇತರೆ ಭಾಗದ ರೈತರು ಇನ್ನೂ ಬತ್ತದ ಬಿತ್ತನೆ ಮತ್ತು ನಾಟಿ ಮಾಡಿಲ್ಲ. ಈ ಸಮಸ್ಯೆಗೆ ಕಿವಿಗೊಡಬೇಕಾಗಿದ್ದ ಸರ್ಕಾರದ ಪಂಚೇಂದ್ರಿಯ ಈಗ ನಿಷ್ಕ್ರಿಯವಾಗಿರುವುದು ದುರದೃಷ್ಟಕರ.

ಮುಖ್ಯಮಂತ್ರಿ ಯಡಿಯೂರಪ್ಪ ಒಮ್ಮೆ ಬೆಳಗಾವಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ ನಂತರ ಏನಾಯಿತು ಎಂದು ಜನರ ಕಷ್ಟವನ್ನು ವಿಚಾರಿಸುವವರಿಲ್ಲ. ಜನರ ಬಳಿ ಹೋಗಲು ಶಾಸಕರನ್ನು ತಡೆದಿರುವವರು ಯಾರೂ ಇಲ್ಲ. ಆದರೆ ಎಲ್ಲರ ಕಣ್ಣು ಸಿಗಬಹುದಾದ ಅಧಿಕಾರದ ಮೇಲೆಯೇ. ಇದು ಈಗಿನ ಸರ್ಕಾರದ ಕಾರ್ಯವೈಖರಿ.

ಈ ಎಲ್ಲ ಗೊಂದಲದ ನಡುವೆ ಸರ್ಕಾರವನ್ನು ಕಳೆದುಕೊಂಡ ಜನತಾದಳವಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ತಮ್ಮ ಈ ಸ್ಥಿತಿಗೆ ಕಾರಣವೇನು? ಈ ವೈಫಲ್ಯದಲ್ಲಿ ಸ್ವಯಂಕೃತ ಅಪರಾಧವಿದೆಯೇ ಎಂದು ಆತ್ಮಾವಲೋಕನ ಮಾಡಿಕೊಂಡು ಮುಂದೆ ಏನು ಮಾಡಬೇಕೆನ್ನುವ ಮುನ್ನೋಟವೂ ಅವರಲ್ಲಿ ಕಂಡು ಬರುತ್ತಿಲ್ಲದಿರುವುದು ದುರಂತ.

ಮೈತ್ರಿ ಸರ್ಕಾರ ಬೀಳಲು ಸಹಜವಾಗಿ ಹಲವಾರು ಕಾರಣಗಳಿವೆ. ಅವುಗಳಲ್ಲಿ ಕಾಂಗ್ರೆಸ್ ಶಾಸಕರಾಗಿ ಸರ್ಕಾರ ಬೀಳಲು ಕಾರಣರಾದವರ ಆರೋಪಗಳು ಹಲವು. ಅವುಗಳಲ್ಲಿ ಕುಮಾರಸ್ವಾಮಿ ಅವರ ಅಣ್ಣ ಎಚ್.ಡಿ ರೇವಣ್ಣ ಎಲ್ಲ ಸಚಿವ ಖಾತೆಗಳಲ್ಲೂ ಕೈ ಹಾಕುತ್ತಿದ್ದರು ಎನ್ನುವುದು ಒಂದು ಪ್ರಬಲ ಕಾರಣ ಎನ್ನಲಾಗಿದೆ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಸುಲಭವಾಗಿ ತಳ್ಳಿಹಾಕಲಾಗದು. ರೇವಣ್ಣ ಅವರದ್ದು ದಾದಾಗಿರಿ ಎಂದೇ ಟೀಕೆಗಳಿದ್ದವು.ಒಂದು ಕುಟುಂಬದಲ್ಲಿ ಒಬ್ಬರು ಮುಖ್ಯಮಂತ್ರಿ ಆದ ಮೇಲೆ ಮತ್ತೊಬ್ಬರು ಪ್ರಬಲ ಖಾತೆಗೆ ಸಚಿವರಾಗುವುದೆಂದರೆ ಏನು? ಸರ್ಕಾರವೇನು ಒಂದು ಕುಟುಂಬದ ಆಸ್ತಿಯೇ ಎಂದು ಕೇಳುವವರಿದ್ದರೂ ಉತ್ತರ ಮಾತ್ರ ಇರಲಿಲ್ಲ. 

ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ರೇವಣ್ಣನವರನ್ನು ನಿಯಂತ್ರಣದಲ್ಲಿಡಬೇಕಿತ್ತು. ಬದಲಾಗಿ ಅವರು ಮಾಡಿದ್ದೆಲ್ಲ ಸರಿ ಎನ್ನುವಂತೆ ಕಂಡು ಕಾಣದಂತೆ ಇದ್ದದ್ದು ಸಹ ಸರ್ಕಾರದ ಅವನತಿಗೆ ಕಾರಣ ! ಆದರೆ ವಾಸ್ತವವನ್ನು ಮುಚ್ಚಿಟ್ಟು ಕಾಂಗ್ರೆಸ್ ನಾಯಕರು ಜನತಾದಳವನ್ನು ಮತ್ತು ದಳದವರು ಕಾಂಗ್ರೆಸ್ ನಾಯಕರನ್ನು ದೂರುತ್ತಾ ಹೋಗುವುದು ಎರಡೂ ಪಕ್ಷಗಳಿಗೆ ಹಾನಿಯೇ ಹೊರತು ಉಪಯೋಗವಿಲ್ಲ.

ಬರುವ ಶುಕ್ರವಾರ ಮಂತ್ರಿ ಮಂಡಲ ವಿಸ್ತರಣೆ ಇರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರ ಮಂತ್ರಿ ಮಂಡಲ ರಚನೆ ಆಗಿ ಹೊಸ ಮಂತ್ರಿಗಳ ಪೂಜೆ ಪುನಸ್ಕಾರ ಮತ್ತು ದೇವಾಲಯಗಳನ್ನು ಸುತ್ತಿ ಬಂದು ವಿಧಾನಸೌಧದಲ್ಲಿ ಕೆಲಸ ಆರಂಭವಾಗಬೇಕಾದರೆ ಇನ್ನೂ ಎರಡು ವಾರ ಆದರೆ ಅಚ್ಚರಿ ಇಲ್ಲ. ಇದು ಕರ್ನಾಟಕದ ಹಣೆಬರಹ !