ಇಂದು ಮಹಾರಾಷ್ಟ್ರದಲ್ಲಿ ಯಾರೂ ಸರ್ಕಾರ ರಚಿಸದಿದ್ದರೆ ಏನಾಗುತ್ತದೆ?

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ  ಹುದ್ದೆ ಸಂಬಂಧ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಡುವಿನ ವೈಮನಸ್ಸು  2 ವಾರಗಳಿಂದಲೂ ಸರ್ಕಾರ ರಚನೆಗೆ ಅಡ್ಡಗಾಲು ಹಾಕಿದೆ. ಪ್ರಸ್ತುತ ವಿಧಾನಸಭೆಯ ಅವಧಿ ನಾಳೆ ಮುಕ್ತಾಯಗೊಳ್ಳುತ್ತದೆ.

ಇಂದು ಮಹಾರಾಷ್ಟ್ರದಲ್ಲಿ ಯಾರೂ ಸರ್ಕಾರ ರಚಿಸದಿದ್ದರೆ ಏನಾಗುತ್ತದೆ?

ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್ 9 ರ ಶನಿವಾರದಂದು ಮುಕ್ತಾಯಗೊಳ್ಳುತ್ತದೆ ಮತ್ತು ಇದರಿಂದ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳ್ಳಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿದೆ.

ಹಿಂದಿನ ವಿಧಾನ ಸಭೆಯ ಅವಧಿ ಮುಗಿದ ಕೂಡಲೇ ಸರ್ಕಾರ ರಚನೆಯಿಲ್ಲದಿದ್ದರೂ ಸಹ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಲಿದೆ ಎಂದು ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಹೇಳಿದ್ದಾರೆ. ಅವರ ಪ್ರಕಾರ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಮತ್ತು ಅವರ ಸಂಬಳ, ಭತ್ಯೆ ಇತ್ಯಾದಿಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ.

ಮೊದಲಿಗೆ ಸರ್ಕಾರವನ್ನು ರಚಿಸುವುದಾಗಿ ಹೇಳಿಕೊಳ್ಳುವುದೇ ತಪ್ಪು ಎಂದು ಹೇಳಿರುವ ಕಶ್ಯಪ್ "ಸಂವಿಧಾನದ ಪ್ರಕಾರ, ಸರ್ಕಾರವನ್ನು ರಚಿಸಲು ಹಕ್ಕು ಸಾಧಿಸುವುದಕ್ಕೆ ಯಾರಿಗೂ, ಯಾವುದೇ ಅವಕಾಶವಿಲ್ಲ” ಇದು ದುರದೃಷ್ಟಕರ ಪ್ರವೃತ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕಶ್ಯಪ್ ಅವರು ಹೇಳುವಂತೆ ಸರ್ಕಾರ ರಚನೆಗೆ ಯಾರನ್ನು ಕರೆಯಬೇಕೆಂದು ನಿರ್ಧರಿಸುವುದು ರಾಜ್ಯಪಾಲರ ಅಧಿಕಾರ ಮತ್ತು ವಿವೇಚನೆಯಾಗಿದೆ.

"ರಾಜ್ಯಪಾಲರು ಸರ್ಕಾರವನ್ನು ರಚಿಸಲು ಏಕೈಕ ಅತಿದೊಡ್ಡ ಪಕ್ಷದ ನಾಯಕನನ್ನು ಆಹ್ವಾನಿಸಬಹುದು ಅಥವಾ ಸರ್ಕಾರವನ್ನು ರಚಿಸಲು ಅತಿದೊಡ್ಡ ಮತದಾನ ಪೂರ್ವ ಮೈತ್ರಿಕೂಟವನ್ನು ಕರೆಯಬಹುದು" ಎಂದು ಅವರು ಹೇಳಿದರು.

"ಅವರು ಬಹುಮತದ ಬೆಂಬಲ ಸಾಬೀತುಪಡಿಸಲು ವಿಫಲವಾದರೆ, ರಾಜ್ಯಪಾಲರು ಸರ್ಕಾರ ರಚಿಸಲು ಎರಡನೇ ಅತಿದೊಡ್ಡ ಪಕ್ಷದ ನಾಯಕನನ್ನು ಕರೆಯಬಹುದು ಮತ್ತು ಅವರೂ ಸಹ ತಮ್ಮ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬಹುದು," ಎಂದು ಕಶ್ಯಪ್ ಹೇಳುತ್ತಾರೆ. ಆದರೆ ಯಾವುದೇ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆಯು ಕೊನೆಯ ಆಯ್ಕೆಯಾಗಿರಬೇಕು.

ಆರು ತಿಂಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯನ್ನು ವಿಧಿಸಬಹುದು, ನಂತರ ಚುನಾವಣಾ ಆಯೋಗವು ರಾಜ್ಯದಲ್ಲಿ ಹೊಸ ಚುನಾವಣೆಗಳನ್ನು ಪ್ರಕಟಿಸಬೇಕಾಗುತ್ತದೆ. ಹೇಗಾದರೂ, ಈ ಮಧ್ಯೆ, ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುವ ಯಾವುದೇ ರಾಜಕೀಯ ರಾಜಿಸೂತ್ರ ಹೊರಹೊಮ್ಮಿದರೆ, ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳಬಹುದು.

ಸರ್ಕಾರ ರಚಿಸಲು ರಾಜ್ಯಪಾಲರು ಒಂದು ಪಕ್ಷವನ್ನು ಆಹ್ವಾನಿಸಬೇಕೆಂಬುದಕ್ಕೆ ಸಂವಿಧಾನವು ಯಾವುದೇ ಸಮಯದ ಮಿತಿಯನ್ನು ವಿಧಿಸುವುದಿಲ್ಲ, ಆದರೆ ರಾಜ್ಯಪಾಲರು ಸರ್ಕಾರವನ್ನು ರಚಿಸಲು ಒಂದು ಪಕ್ಷ ಅಥವಾ ಮೈತ್ರಿಯನ್ನು ಆಹ್ವಾನಿಸಿರಬೇಕು ಎಂದು ಕಶ್ಯಪ್ ಹೇಳಿದರು. ವಾಸ್ತವವಾಗಿ, ಅಂತಹ ಸ್ಥಗಿತದ ಸಂದರ್ಭದಲ್ಲಿ ಮತದಾನದ ಮೂಲಕ ತಮ್ಮ ನಾಯಕನನ್ನು ಆಯ್ಕೆ ಮಾಡಲು ರಾಜ್ಯಪಾಲರು ಎಲ್ಲಾ ಶಾಸಕರಿಗೆ ಸಂದೇಶವನ್ನು ಕಳುಹಿಸಬಹುದು.