ಕಿಚ್ಚ ಸುದೀಪ್ ಬಗ್ಗೆ ‘ಕುರುಕ್ಷೇತ್ರ’ದ ಭೀಮ ಡ್ಯಾನಿಶ್ ಹೇಳಿದ್ದೇನು ಗೊತ್ತೇ?

ಕಿಚ್ಚ ಸುದೀಪ್ ಬಗ್ಗೆ ‘ಕುರುಕ್ಷೇತ್ರ’ದ ಭೀಮ ಡ್ಯಾನಿಶ್ ಹೇಳಿದ್ದೇನು ಗೊತ್ತೇ?

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರವನ್ನು ನೋಡಿದವರು ದುರ್ಯೋಧನನಾಗಿರುವ ದರ್ಶನ್ ಜತೆಯಲ್ಲೇ ಭೀಮನ ಪಾತ್ರ ನಿರ್ವಹಿಸಿದಂಥ ಡ್ಯಾನಿಶ್ ಅಖ್ತರ್ ಅವರನ್ನು ಕೂಡ ಮರೆಯಲಾರರು. ಅದಕ್ಕೆ ಪ್ರಮುಖ ಕಾರಣ ಡ್ಯಾನಿಶ್ ಅವರ ಬೃಹದಾಕಾರವಾದ ದೇಹ ಎಂದು ಹೇಳಲೇಬೇಕು. ದರ್ಶನ್ ಎತ್ತರ ಸರಿ ಸುಮಾರು ಆರಡಿ ಮೂರಿಂಚು ಇದ್ದರೆ, ಅದಕ್ಕಿಂತಲೂ ಮೂರು ಇಂಚುಗಳಷ್ಟು ಎತ್ತರವಾಗಿರುವವರು ಡ್ಯಾನಿಶ್! ಕನ್ನಡದಲ್ಲಿ ಇದು ಇವರಿಗೆ ಪ್ರಥಮ ಚಿತ್ರವಾದರೂ ಕುರುಕ್ಷೇತ್ರ ಬಿಡುಗಡೆಗೂ ಮೊದಲೇ ಅವರು ಸುದೀಪ್ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಅದೇ ಕೋಟಿಗೊಬ್ಬ 3 ಸಿನಿಮಾ

ರೆಸ್ಲರ್ ಆಗುವುದನ್ನೇ ಕನಸು ಕಂಡಿದ್ದವರು ಡ್ಯಾನಿಶ್. ಆದರೆ ಯು ಎಸ್ ಎಗೆ ವಿಸಾ ಸಿಗದೇ ಹೋದ ಕಾರಣ ಮುಂಬೈಗೆ ವಾಪಾಸಾಗಿದ್ದ ಡ್ಯಾನಿಶ್ ಗೆ ಅವಕಾಶ ಸಿಕ್ಕಿದ್ದು ಸಿಯಾಕೆ ರಾಮ್ ಎನ್ನುವ ಒಂದು ಹಿಂದಿ ಧಾರಾವಾಹಿಯಲ್ಲಿ. ಸಿನಿಮಾಗಳ ವಿಚಾರಕ್ಕೆ ಬಂದರೆ ಸಲ್ಮಾನ್ ಖಾನ್ ರನ್ನು ಇಷ್ಟಪಡುತ್ತಿದ್ದ ಡ್ಯಾನಿಶ್ ಗೆ ಹಾಗೆ ನಟನಾಗಬೇಕು ಎನ್ನುವ ಕನಸೂ ಇತ್ತು. ಆದರೆ ಧಾರಾವಾಹಿಯ ಮೂಲಕ ಅದು ನೆರವೇರುವಾಗ ದೊರಕಿದ್ದು ಮಾತ್ರ ಪೌರಾಣಿಕ ಪಾತ್ರ. ಹಾಗೆ ಹನುಮಂತನಾಗಿ ಗುರುತಿಸಿಕೊಂಡ ಡ್ಯಾನಿಶ್ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನುವುದು ಈಗಾಲೇ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕುರುಕ್ಷೇತ್ರ ಚಿತ್ರ ಸಿದ್ಧವಾಗಲು ಬಹಳಷ್ಟು ಸಮಯ ಬೇಕಾಯಿತು. ಆ ಸಂದರ್ಭದಲ್ಲಿ ಡ್ಯಾನಿಶ್ ಕನ್ನಡದ ಇನ್ನೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಒಂದು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ. ಚಿತ್ರದ ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಡ್ಯಾನಿಶ್ ಗೆ ತನ್ನ ದೇಹದಾರ್ಢ್ಯತೆಯನ್ನು ಪ್ರದರ್ಶಿಸುವ ಅವಕಾಶ ಚಿತ್ರದಲ್ಲಿತ್ತು. ಆದರೆ ವಿಪರ್ಯಾಸ ಎನ್ನುವ ಹಾಗೆ ಚಿತ್ರ ಯಶಸ್ಸು ಗಳಿಸಲಿಲ್ಲ. ಹಾಗಾಗಿ ಡ್ಯಾನಿಶ್ ಆ ಚಿತ್ರದಲ್ಲಿ ನಟಿಸಿದ್ದೇ ಸುದ್ದಿಯಾಗಲಿಲ್ಲ. ಆದರೆ ಒಂದು ಕಡೆಗೆ ದರ್ಶನ್ ಜತೆಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಲೇ ಮತ್ತೊಂದೆಡೆ ಸುದೀಪ್ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಡ್ಯಾನಿಶ್. ಅದು ಕೋಟಿಗೊಬ್ಬ 3 ಸಿನಿಮಾ ಎನ್ನುವುದನ್ನು ಈಗಾಗಲೇ ನಿಮಗೆ ಹೇಳಿದ್ದೇವೆ. ಆದರೆ ಇಂದು ಪರಸ್ಪರ ವಿರೋಧಿ ಬಣಗಳಂತೆ ಗುರುತಿಸಿಕೊಳ್ಳುತ್ತಿರುವ ಈ ಸ್ಟಾರ್ ನಟರುಗಳ ಚಿತ್ರಗಳನ್ನು ಡ್ಯಾನಿಶ್ ಒಂದೇ ಬಾರಿ ಹೇಗೆ ನಿಭಾಯಿಸಿದರು ಎನ್ನುವುದೇ ಕುತೂಹಲದ ಅಂಶ.

ದರ್ಶನ್ ಆಹ್ವಾನದ ಮೇರೆಗೆ ಬಂದು, ಸುದೀಪ್ ಚಿತ್ರಕ್ಕೆ ಎಂಟ್ರಿ!

`ಈ ತಾರೆಯ ಸಿನಿಮಾಗಳಲ್ಲಿ ಈ ಕಲಾವಿದರು ಇರಲೇಬೇಕು’ ಎನ್ನುವ ಅಲಿಖಿತ ನಿಯಮ ನಮ್ಮಲ್ಲಿ ಹಿಂದಿನಿಂದಲೂ ಇದೆ. ಡಾ.ರಾಜ್ ಕುಮಾರ್ ಚಿತ್ರಗಳಲ್ಲಿ ನರಸಿಂಹ ರಾಜು ಇರಲೇಬೇಕು ಎನ್ನುವ ನಂಬಿಕೆ ಪ್ರೇಕ್ಷಕರಲ್ಲಿತ್ತು.ತೂಗುದೀಪ ಶ್ರೀನಿವಾಸ್ ಅವರಿಗಾಗಿಯೇ ತಮ್ಮ ಸಿನಿಮಾಗಳಲ್ಲಿ ಪಾತ್ರಗಳನ್ನು ಸೃಷ್ಟಿಸಬೇಕು ಎಂದು ರಾಜ್ ಕುಮಾರ್ ಅವರು ಚಿ.ಉದಯಶಂಕರ್ ಅವರಿಗೆ ಮೊದಲೇ ಸೂಚಿಸುತ್ತಿದ್ದರಂತೆ! ಅಂಥ ಪರಂಪರೆ ಇರುವುದರಿಂದಾಗಿ ದರ್ಶನ್ ಚಿತ್ರದಲ್ಲಿ ಸಾಧು ಕೋಕಿಲ, ಶರತ್ ಲೋಹಿತಾಶ್ವ ಮೊದಲಾದ ಕಲಾವಿದರನ್ನು ನಿರೀಕ್ಷೆ ಮಾಡುವುದು ಸಹಜವೇ. ಆದರೆ ಮೊದಲ ಬಾರಿಗೆ ಅಂಥ ನಿರೀಕ್ಷಿತ ಕಾಂಬಿನೇಶನ್ ಗಳಿಗೆ ತಿಲಾಂಜಲಿ ಇರಿಸುವ ಹಾಗೆ, ಇತರ ತಾರೆಗಳೇ ಪೋಷಕ ಕಲಾವಿದರಾಗಿ ಕಾಣಿಸಿಕೊಂಡಂಥ ಚಿತ್ರ ಕುರುಕ್ಷೇತ್ರವಾಗಿತ್ತು. ಚಿತ್ರದ ಬಜೆಟ್ ಆ ರೀತಿಯಲ್ಲಿ ತಾರೆಗಳನ್ನು ಬೇಡಿತ್ತು ಎನ್ನಬಹುದು. ಈ ಮೊದಲೇ ಹನುಮಾನ್ ಪಾತ್ರಧಾರಿಯಾಗಿದ್ದ ಡ್ಯಾನಿಶ್ ಅನ್ನು ನೋಡಿದ್ದ ದರ್ಶನ್ ತಮ್ಮ ಕುರುಕ್ಷೇತ್ರ ಚಿತ್ರದಲ್ಲಿ ಭೀಮ ಕೂಡ ಈತನಂತೆ ತನಗಿಂತ ಎತ್ತರದ ಕಲಾವಿದನಾಗಿದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಾರೆ. ಮಾತ್ರವಲ್ಲ ಆತನನ್ನೇ ಕರೆಸುವಂತೆ ನಿರ್ಮಾಪಕ ಮುನಿರತ್ನ ಅವರಿಗೆ ಹೇಳುತ್ತಾರೆ. ಅದರಂತೆ ಬಂದ ಭೀಮ ಮಾಡಿದ್ದೇನು? ದರ್ಶನ್ ಚಿತ್ರಗಳಲ್ಲಿ ನಟಿಸುವ ಜತೆಗೆ ಅದಾಗಲೇ ತಮ್ಮ ನಡುವೆ ವೈಮನಸ್ಸು ಇದೆಯೆಂದು ತೋರಿಸಿಕೊಟ್ಟಿದ್ದಂಥ ಮತ್ತೋರ್ವ ನಟನ ಜತೆಗೆ ಪರದೆ ಹಂಚಿಕೊಂಡರು. ಸಾಮಾನ್ಯವಾಗಿ ಪೋಷಕ ಕಲಾವಿದರು ಒಬ್ಬರ ಆಸ್ಥಾನ ಕಲಾವಿದರಂತೆ ಕಂಡರೂ, ಇತರರ ಚಿತ್ರಗಳಲ್ಲಿ ಕೂಡ ನಟಿಸುತ್ತಿರುತ್ತಾರೆ. ಆದರೆ ಡ್ಯಾನಿಶ್ ಅಖ್ತರ್ ಸೈಫಿ ಎನ್ನುವ ಈ ಕಲಾವಿದನ ಬಗ್ಗೆ ಹೇಳುವುದಾದರೆ ಈತ ಬಂದಿದ್ದೇ ದರ್ಶನ್ ಅವರ ವಿಶೇಷ ಆಹ್ವಾನದ ಮೇರೆಗೆ. ಅದರಲ್ಲಿಯೂ ಭೀಮನೆಂಬ ವಿಶೇಷ ಪಾತ್ರಕ್ಕಾಗಿ. ಅದರ ನಡುವೆ ಮತ್ತೊಂದು ಚಿತ್ರದಲ್ಲಿ ನಟಿಸಲು ಮುಂದಾಗಿದ್ದು ನಿಜಕ್ಕೂ ವಿಶೇಷವಾಗಿತ್ತು. ಆದರೆ ಆ ಅನುಭವ ಹೇಗಿತ್ತು ಎನ್ನುವುದನ್ನು ಸ್ವತಃ ಡ್ಯಾನಿಶ್ ಅಖ್ತರ್ ಸೈಫಿ ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಕೋಟಿಗೊಬ್ಬ 3ರಲ್ಲಿ ಸುದೀಪ್ ಜತೆಗೆ ಹೊಡೆದಾಟ 

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ತೆರೆಕಂಡ ಬೆನ್ನಲೇ ಬರಲು ತಯಾರಾಗಿರುವ ಚಿತ್ರ ಕೋಟಿಗೊಬ್ಬ 3. ಅದಕ್ಕಾಗಿ ಹದಿನೈದು ದಿನಗಳ ಕಾಲ್ ಶೀಟ್ ನೀಡಿದ್ದಾರೆ ಡ್ಯಾನಿಶ್ ಅಖ್ತರ್ ಸೈಫಿ. ಚಿತ್ರಕ್ಕಾಗಿ ಡ್ಯಾನಿಶ್ ನಟಿಸಬೇಕಾದ ದೃಶ್ಯಗಳ ಚಿತ್ರೀಕರಣ ಪೂರ್ತಿಯಾಗಿದೆ. ಈ ಬಗ್ಗೆ ಡೆಕ್ಕನ್ ನ್ಯೂಸ್ ಜತೆಗೆ ಮಾತನಾಡಿದ ಡ್ಯಾನಿಶ್, ``ಅದರಲ್ಲಿ ಆರು ದಿನಗಳ ಕಾಲ ಸುದೀಪ್ ಸರ್ ಜತೆಗಿನ ಕಾಂಬಿನೇಶನ್ ದೃಶ್ಯಗಳಿದ್ದವು. ಆದರೆ ಚಿತ್ರದಲ್ಲಿ ನನಗೆ ಮಾತುಕತೆಗಿಂತ ಹೊಡೆದಾಟದ ಸನ್ನಿವೇಶವೇ ಹೆಚ್ಚು ಇತ್ತು. ಹಾಗಾಗಿ ಪರದೆಯ ಮೇಲೆ ನಾನು ಅವರೊಂದಿಗೆ ಹೆಚ್ಚು ಮಾತನಾಡುವ ದೃಶ್ಯಗಳು ಇರುವುದಿಲ್ಲ. ಆದರೆ ಅವರು ಸೆಟ್ ನಲ್ಲಿ ನನ್ನ ಜತೆಗೆ ಚೆನ್ನಾಗಿಯೇ ಮಾತನಾಡಿದ್ದಾರೆ. ಕನ್ನಡದ ದೊಡ್ಡ ಸ್ಟಾರ್ ಆಗಿದ್ದು, ಬೇರೆ ಭಾಷೆಗಳಲ್ಲಿ ಕೂಡ ಗುರುತಿಸಿಕೊಂಡಿರುವ ಅವರು ಹೊಸಬನಾದ ನನ್ನೊಡನೆ ಕಾಳಜಿ ತೋರಿಸಿ ಮಾತನಾಡಿದರು. ನನಗಂತೂ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಗೌರವ ಮೂಡಿದೆ’’ ಎಂದಿದ್ದಾರೆ. ಹೀಗೆ ಅಪರೂಪದ ಅತಿಥಿಯಾಗಿ ಬಂದ ಡ್ಯಾನಿಶ್ ಎರಡೂ ಸ್ಟಾರ್ ಗಳ ಜತೆಗೆ ನಟಿಸಲು ಸಾಧ್ಯವಾಗುವಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಪಾತ್ರವೂ ಇದೆ ಎನ್ನಬಹುದು. ಯಾಕೆಂದರೆ ಎರಡೂ ಚಿತ್ರತಂಡಗಳೊಂದಿಗೆ ಮತ್ತು ಸುದೀಪ್ ಮತ್ತು ದರ್ಶನ್ ಜತೆಗೆ ಆತ್ಮೀಯವಾಗಿರುವವರಲ್ಲಿ ಅವರೇ ಪ್ರಮುಖರು. ಹಾಗಂತ ಡ್ಯಾನಿಶ್ ಇಷ್ಟಕ್ಕೆಲ್ಲ ತೃಪ್ತಿ ಹೊಂದಿಲ್ಲ! “ಮುಂದೆ ದರ್ಶನ್, ಸುದೀಪ್ ಮಾತ್ರವಲ್ಲ ಯಶ್ ಅವರ ಜತೆಗೂ ಇನ್ನಷ್ಟು ಚಿತ್ರಗಳಲ್ಲಿ ದೊಡ್ಡ ಖಳನಾಯಕನ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದೇನೆ’’ ಎಂದು ಹೇಳಿದ್ದಾರೆ. ಅವರ ಆಸೆಗಳು ಈಡೇರಲೆಂದು ನಾವು ಹಾರೈಸುತ್ತೇವೆ.

                                                                                                                                                                                                                             -ಶಶಿಕರ ಪಾತೂರು​
 

 

.