ನಾವು ಸೇವಿಸುತ್ತಿರುವುದು ಆಹಾರವೋ? ವಿಷವೋ?? !!

ನಾವು ಸೇವಿಸುತ್ತಿರುವುದು ಆಹಾರವೋ? ವಿಷವೋ?? !!

ಹಾಗಲಕಾಯಿ ತನ್ನ ಕಹಿಯನ್ನು ಕಳೆದುಕೊಂಡಿದೆ. ಕರಿಬೇವು ಕೊತ್ತಂಬರಿ ಸೊಪ್ಪು, ಪುದಿನ ತಮ್ಮ ಸುವಾಸನೆಯನ್ನು ಕಳೆದುಕೊಂಡಿವೆ. ಎಲ್ಲಾ ಕಾಲದಲ್ಲೂ ಎಲ್ಲಾ ತರಕಾರಿಗಳು ಸಿಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎನ್ನುತ್ತಾರೆ ಎಂ. ಎಸ್. ಆಶಾರಾಣಿ.

ಎಲ್ಲಿ ನೋಡಿದರಲ್ಲಿ ದೊಡ್ಡ ದೊಡ್ಡ ಮಾಲ್ ಗಳು ಅದರಲ್ಲಿ ಸಂಸ್ಕರಿತ ಆಹಾರ ಪದಾರ್ಥಗಳು. ಬೀದಿ ಬದಿಯಲ್ಲಿ ಗೋಬಿ, ಪಾನಿಪುರಿ, ಚಿಕನ್ ಮುಂತಾದ ತರಹೇವಾರಿ ತೈಲಭರಿತ ಖಾದ್ಯಗಳು. ಯಾವುದು ದೇಹಕ್ಕೆ ಹಿತಕರ? ನಮ್ಮ ಕಣ್ಣು ಯಾವಾಗಲೂ ಬಾಯಿಗೆ ಹಿತಕರವಾದುದರ ಕಡೆಗೆ ಇರುತ್ತದೆ ಬಿಡಿ. ಹಾಗಾದರೆ ಒಳ್ಳೆಯ ಆಹಾರವೆಂದರೇನು?  

ಆಹಾರ ಬರಹಗಾರ ಮಾರ್ಕ್ ಬಿಟ್ ಮ್ಯಾನ್ ಇತ್ತೀಚಿಗೆ ಹೇಳಿದಂತೆ ಆಹಾರವೆಂದರೆ “ ದೇಹಕ್ಕೆ ಪೋಷಕಾಂಶಗಳನ್ನೊದಗಿಸಿ ಬೆಳವಣಿಗೆಗೆ ಸಹಕಾರಿಯಾಗಿರುವ ಒಂದು ವಸ್ತು “. ವಿಷವೆಂದರೆ “ ದೇಹಕ್ಕೆ ಕಾಯಿಲೆಯನ್ನು ತರುವ ಒಂದು ವಸ್ತು “. ಹಾಗಾದರೆ ಕೈಗಾರಿಕಾ ಕೃಷಿಯಿಂದ ಉತ್ಪಾದಿಸಿದ್ದೆಲ್ಲ ಅಕ್ಷರಶಃ ಆಹಾರವಲ್ಲ,  ವಿಷ!. ಈ ಪರಿಸ್ಥಿತಿ ಹೀಗೆ ಇರಬೇಕೆಂದೇನೂ ಇಲ್ಲ. ಕಳೆನಾಶಕಗಳನ್ನು ದೂರವಿಟ್ಟು, ಸಾವಯವ ಉತ್ತೇಜಿತ ಕೃಷಿಯನ್ನು ಮಾಡುವುದರಿಂದ ಮತ್ತು ಸೂಕ್ಷ್ಮಾಣು ಜೀವಗೋಳದ ಮರು ನಿರ್ಮಾಣದಿಂದ ಸತ್ವಭರಿತ ಆಹಾರ ಪದಾರ್ಥದ ಉತ್ಪಾದನೆ ಹಾಗೂ ನಮ್ಮ ಆರೋಗ್ಯದ ಕಾಳಜಿ ಮಾಡಬಹುದು. 

1975 ರಿಂದ 2010ರ ವರೆಗೆ ಅಮೆರಿಕದ ಕೃಷಿ ಇಲಾಖೆ ಒದಗಿಸಿದ ದತ್ತಾಂಶ ಆಧರಿಸಿ ಪ್ಲಾನೆಟರಿ ಹೆಲ್ತ್ ತಯಾರಿಸಿದ ವರದಿಯ ಪ್ರಕಾರ , ಒಂದು ಪೀಳಿಗೆ ಹಿಂದಿನ ಕೋಸಿನ ಸಂಪೂರ್ಣ ಪೌಷ್ಟಿಕಾಂಶವನ್ನು ಪಡೆಯಲು ಇಂದು ಅದರ ಎರಡರಷ್ಟನ್ನು ಸೇವಿಸಬೇಕಾಗಿದೆ. ಅಷ್ಟೊಂದು ಜಗಿಯಬೇಕು ಅಂದರೆ ಕಲ್ಪಿಸಿಕೊಳ್ಳಿ ಪೌಷ್ಟಿಕಾಂಶ ಸಿಗುವ ಆಹಾರದಲ್ಲಿ ಎಷ್ಟೊಂದು ಬದಲಾವಣೆಯಾಗಿದೆ ಎಂದು. 

1940 ರ ದತ್ತಾಂಶ ಆಧರಿಸಿ ಏಕೋ ಫಾರ್ಮಿನ್ಗ್ ಡೈಲಿ ಯ ವರದಿ ಪ್ರಕಾರ ಎಲ್ಲ ರೀತಿಯ ಆಹಾರಗಳಲ್ಲಿ ಪೋಷಕಾಂಶಗಳ ಕೊರತೆ ಶೇ.10ರಿಂದ ಶೇ.100 ರಷ್ಟಿದೆ. 1940 ರ ಕಾಲದ ಪೋಷಕಾಂಶದಷ್ಟು ಪಡೆಯಲು ಇಂದಿನ ಮಾನವನು ತಾನು ತಿನ್ನುವ ಮಾಂಸದ ಎರಡರಷ್ಟು , ಹಣ್ಣಿನ ಮೂರುಪಟ್ಟು, ದಿನ ನಿತ್ಯ ಬಳಸುವ ತರಕಾರಿಯನ್ನು 4ರಿಂದ 5ಪಟ್ಟು ಸೇವಿಸಬೇಕು. ಈ ನಿಟ್ಟಿನಲ್ಲಿ ಮಲ್ಟಿ ವಿಟಮಿನ್ ಗಳಿಗೆ ಥ್ಯಾಂಕ್ಸ್ ಹೇಳಬೇಕು. ಆದರೆ ಈ ಅಪೌಷ್ಟಿಕತೆಯ  ಅಂತರವನ್ನು ಸರಿತೂಗಿಸಬೇಕಿದೆ. 

ಯಾಕೆ ಇಂದಿನ ಆಹಾರದಲ್ಲಿ ಪೋಷಕಾಂಶಗಳು ಕ್ಷೀಣಿಸುತ್ತಿವೆ? ಅದಕ್ಕೆ ಒಂದು ಕಾರಣ, ಆಹಾರ ಬೆಳೆಯುವ ಮಣ್ಣನ್ನು ನಾವು ಕೊಲ್ಲುತ್ತಿದ್ದೇವೆ. ಎರ್ರಾಬಿರ್ರಿ ಬಯೋ ಸೈಡ್ಸ್ ಗಳಾದ,  ಹೆರ್ಬಿಸೈಡ್ಸ್, ಇನ್ಸೆಕ್ಟಿಸೈಡ್ಸ್, ಫ್ಯಾಂಗಿಸೈಡ್ಸ್ ಮತ್ತು ಸಿಂಥೆಟಿಕ್ ರಾಸಾಯನಿಕ ರಸಗೊಬ್ಬರಗಳು ಮತ್ತು ಆಂಟಿಬಯೋಟಿಕ್ ಗಳ ಬಳಕೆಯು ಮಣ್ಣಿನ ನೈಸರ್ಗಿಕ ಫಲವತ್ತತೆಯನ್ನು ಕೊಲ್ಲುತ್ತಿದೆ. ಇದರಿಂದ ಮಣ್ಣಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಸತ್ತು, ಸಸ್ಯಗಳು ಮಣ್ಣಿನಿಂದ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೈಗಾರಿಕೆಗಳಿಂದ ವಾತಾವರಣದ ಇಂಗಾಲಾಮ್ಲವು ಹೆಚ್ಚಾಗಿ ಗಿಡಗಳ ದ್ಯುತಿಸಂಶ್ಲೇಷಣೆಯು ಸಹ ಹೆಚ್ಚುತ್ತಿದೆ. ಇದರಿಂದ ಗಿಡಗಳು ಬೇಗ ಬೆಳೆಯುತ್ತವೆ, ಆದರೆ ಅವು ನೀಡುವ ಪೋಷಕಾಂಶಗಳಲ್ಲಿ ಯಾವುದೇ ವೃದ್ಧಿಯಾಗುವುದಿಲ್ಲ.ಇದರಿಂದ ವಿಶ್ವದಲ್ಲಿ ಪೋಷಕಾಂಶದ ಕೊರತೆಯು ಹೆಚ್ಚಾಗುತ್ತಿದೆ. ತರಕಾರಿಗಳು ಕೂಡ ಸಕ್ಕರೆಯ ಗೂಡಾಗುತ್ತಿವೆ. ಹಾಗಲಕಾಯಿ ತನ್ನ ಕಹಿಯನ್ನು ಕಳೆದುಕೊಂಡಿದೆ. ಕರಿಬೇವು ಕೊತ್ತಂಬರಿ ಸೊಪ್ಪು, ಪುದಿನ ತಮ್ಮ ಸುವಾಸನೆಯನ್ನು ಕಳೆದುಕೊಂಡಿವೆ.ಎಲ್ಲಾ ಕಾಲದಲ್ಲೂ ಎಲ್ಲಾ ತರಕಾರಿಗಳು ಸಿಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. 

ಸಸ್ಯಗಳಲ್ಲಿ ಬರೀ ಪೋಷಕಾಂಶಗಳು ಕ್ಷೀಣಿಸುತ್ತಿಲ್ಲ, ಅವೂ ವಿಷಕಾರಿಯಾಗಿಯೂ ಪರಿವರ್ತಿತ ಗೊಳ್ಳುತ್ತಿವೆ. ಉದಾಹರಣೆಗೆ ಶೇ.90 ಮೆಕ್ಕೆ ಜೋಳದ ಸಸ್ಯಗಳನ್ನು ತಳೀಯವಾಗಿ ಮಾರ್ಪಡಿಸಿದ ಕಾರಣ ಅವು, ಇತರೆ ರೀತಿಯ ಮೆಕ್ಕೆಜೋಳದ ಸಸ್ಯದಿಂದ ವಂಶವಾಹಿಗಳನ್ನು ಪಡೆದಿದ್ದಾವೆ. ಈ ವಂಶವಾಹಿಗಳು ಜೋಳಕ್ಕೆ ಪದೇ ಪದೇ ಕಳೆನಾಶಕಗಳನ್ನು ತಮ್ಮ ರಕ್ಷಣೆಗೆ ಸಿಂಪಡಿಸುವಂತೆ ಮಾಡುತ್ತವೆ. ಈ ಕಳೆನಾಶಕಗಳು ನೀರಿನಲ್ಲಿ ಕರಗುವಂತಿದ್ದು, ನೀರು ಹರಿದಲ್ಲೆಲ್ಲ ಸಾಗಿ ಸಸ್ಯಗಳ ಜೀವಕೋಶದೊಳಗೆ ಸೇರಿಕೊಳ್ಳುತ್ತವೆ. ಹಾಗಾಗಿ ನಾವು ತಿನ್ನುವ  ತರಕಾರಿಗಳು, ಹಣ್ಣುಗಳನ್ನು ಸುಮ್ಮನೆ ಮೇಲೆ ತೊಳೆಯುವುದರಿಂದ ಒಳಗಿನ ವಿಷವು ಹೊರಹೋಗದು. ಬದಲಾಗಿ ನಮ್ಮಲ್ಲೇ ಸೇರಿಕೊಳ್ಳುತ್ತಿದೆ. 

ತಳೀಯವಾಗಿ ಮಾರ್ಪಡಿಸಿದ ಸಸ್ಯಗಳು ಅತ್ಯಧಿಕವಾಗಿ ತಮ್ಮಲ್ಲಿ ಬಹು ರೀತಿಯ ಕಳೆನಾಶಕಗಳನ್ನು ಎಲ್ಲಾ ಜೀವಕೋಶದಲ್ಲೂ ಉತ್ಪಾದಿಸುತ್ತವೆ ಇದನ್ನು ಸಸ್ಯ ಜನಿತ ರಕ್ಷಾಕವಚವೆನ್ನಲಾಗುತ್ತದೆ. ಇಂತಹ ಸಸ್ಯಗಳ ಬೀಜಗಳನ್ನು ಮತ್ತೊಮ್ಮೆ ಕೀಟನಾಶಕಗಳಲ್ಲಿ ಮುಳುಗಿಸಿಟ್ಟು ಮಾರುಕಟ್ಟೆಗೆ ಬಿಡುವುದರಿಂದ ಬರಿಗೈಯಿಂದ ಮುಟ್ಟದೆ, ಮತ್ತು ಸಾಕು ಪ್ರಾಣಿಗಳಿಂದ ದೂರವಿಡಬೇಕೆಂಬ  ಎಚ್ಚರಿಕೆ ಚೀಟಿಯೊಂದಿಗೆ ಬಳಸಬೇಕಾಗಿದೆ .ತನ್ನ ಕೆಲಸಕ್ಕೆ ಕೈ ಹಾಕುವ  ಮಾನವನ ಇಂತಹ ಮಾರ್ಪಾಡನ್ನು ನಿಸರ್ಗವೂ ಕೂಡ ಪ್ರತಿರೋಧಿಸುತ್ತದೆ. ಈ ನಿಟ್ಟಿನಲ್ಲಿ ಒಟ್ಟಾಗಿ ಮಾನವನು ಪ್ರಕೃತಿ ನೀಡುವ ಆಹಾರಕ್ಕೆ ತನ್ನ ಬುದ್ಧಿವಂತಿಕೆಯ ವಿಷ ಬೆರೆಸುವ ಕಾರ್ಯಕ್ಕೆ ಕೈ ಹಾಕಿದ್ದಾನೆ. 

ಬಹುತೇಕ ತಳೀಯವಾಗಿ ಮಾರ್ಪಡಿಸಿದ ಸಸ್ಯ ಜನಿತ ಆಹಾರವು ಪರಿಷ್ಕ್ರಿತ ಸಂಸ್ಕರಿತ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆಯಾಗುತ್ತಿದೆ. ಉದಾ : ಮೆಕ್ಕೆಜೋಳ ವು ಕಾರ್ನ್ ಸಿರಪ್, ಎಣ್ಣೆಗಳು ಮತ್ತು ಪ್ರಾಣಿಗಳು ತಿನ್ನುವ ಹಿಂಡಿ ಬೂಸಾಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತಿದೆ. ಈ ರೀತಿಯಾಗಿ ಪ್ರತಿಯೊಂದು ತುತ್ತಿನಲ್ಲೂ ಹಲವಾರು ತರಹದ ವಿಷವನ್ನು ಸೇರಿಸುತ್ತಿದ್ದೇವೆ. ಇದೊಂದು ಆತಂಕಕಾರಿ ಬೆಳವಣಿಗೆ. 

ಎರಡನೇ ವಿಶ್ವ ಮಹಾಯುದ್ಧದ ನಂತರ ಜಗತ್ತಿನೆಲ್ಲೆಡೆ “ಹಸಿರು ಕ್ರಾಂತಿ” ಉಂಟಾಯಿತು. ಇದರೊಂದಿಗೆ ನಮ್ಮ ಕಾರ್ಖಾನೆಗಳು ರಾಸಾಯನಿಕ ಭರಿತ, ಕೃತಕ ನೈಟ್ರೋಜನ್ ಗೊಬ್ಬರಗಳು, ಕಳೆನಾಶಕಗಳು ಮತ್ತು ಕೀಟನಾಶಕಗಳ ತಯಾರಿಕೆಗೆ ನಿಂತವು. ನಿಸರ್ಗದ ಜೀವ ವೈವಿದ್ಯತೆಯನ್ನು ಕಡೆಗಣಿಸಿ ಮನುಕುಲವನ್ನು ಉಳಿಸಲು ದೊಡ್ಡ ಪ್ರಮಾಣದಲ್ಲಿ ಏಕರೂಪ ಕೃಷಿಯು  ಪ್ರಾರಂಭವಾಯಿತು. ಎರಡು ದಶಕದಿಂದೀಚೆಗೆ ಜೀನ್ ಕ್ರಾಂತಿ ಅಥವಾ ಜೈವಿಕ ಕ್ರಾಂತಿಯು  ಕೈಗಾರಿಕೆ ಆಧಾರಿತ ಕೃಷಿಗೆ ಒತ್ತು ನೀಡಿತು. ರಾಸಾಯನಿಕ ಭರಿತ ಮತ್ತು ತಂತ್ರಜ್ಞಾನ ಆಧಾರಿತ ಆಹಾರದ  ಪೂರೈಕೆಯು ಇಂದು ವಿಶ್ವದ ಹಸಿವನ್ನು ಇಂಗಿಸುತ್ತದೆ ಎನ್ನುವುದಾದರೂ ಅದಕ್ಕೊಂದು ಮಿತಿಯಿರಬೇಕು. ಇದು ಬರೀ ಉತ್ಪಾದನೆಯ ಇಳುವರಿಯನ್ನು ಹೆಚ್ಚಿಸುವುದೇ ಹೊರತು ಅದರ ಪೋಷಕಾಂಶಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ.ಈ ರೀತಿಯಾಗಿ ವಿಷಪೂರಿತವಾದ ಆಹಾರ ಪ್ರಾಣಿ ಸಂಕುಲವನ್ನು ಸೇರುತ್ತಿದೆ. 

ಈ ಎರಡೂ ಕ್ರಾಂತಿಗಳು, ಅತ್ಯಧಿಕವಾಗಿ ಪಳೆಯುಳಿಕೆ ಇಂಧನದಿಂದಾದ (fossil fuels) ಕೃತಕ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ, ದೊಡ್ಡ ಯಂತ್ರಗಳಿಂದ ಹೊಲ ಉಳುಮೆ ಮತ್ತು ಧಾನ್ಯ ವಿಂಗಡಣೆ , ಮೊದಲೇ ತಯಾರಿಸಿ ಪ್ಲಾಸ್ಟಿಕ್ ನಿಂದ ಪ್ಯಾಕ್ ಮಾಡಲ್ಪಟ್ಟ, ತಂಗಳು ಪೆಟ್ಟಿಗೆಯಲ್ಲಿಟ್ಟು ಬಹುದೂರ ಕ್ರಮಿಸಿದ ಆಹಾರವನ್ನು ಜನರಿಗೆ ಉಣಬಡಿಸುತ್ತಿವೆ. ಈ ಪ್ರಕ್ರಿಯೆಗಳು ಕೈಗಾರಿಕಾ ಕೃಷಿಗೆ ಇಂಬು ನೀಡುತ್ತಿರುವುದಲ್ಲದೆ ಹವಾಮಾನ ವೈಪರೀತ್ಯಕ್ಕೂ ಕಾರಣವಾಗುತ್ತಿವೆ. 

ಈ ಎರಡೂ ಕ್ರಾಂತಿಗಳು ಮಾನವನ ಆರೋಗ್ಯಕ್ಕೆ ಮಾರಕವಾಗಿವೆ. ಪ್ರಸ್ತುತ 20ರೀತಿಯ ರೋಗಗಳಾದ ಡೈಯಾಬಿಟೀಸ್, ಸ್ಥೂಲಕಾಯ, ಸ್ಥನ ಮತ್ತು ಥೈರಾಯಿಡ್ ಕ್ಯಾನ್ಸರ್ ಗಳು, ಪಾರ್ಶ್ವ ವಾಯು ಮತ್ತು ಕಿವುಡುತನ ಗಳು ಜೈವಿಕವಾಗಿ ಮಾರ್ಪಡಿಸಿದ ಮೆಕ್ಕೆಜೋಳ ಮತ್ತು ಸೋಯಾ ಗಳ ಬಳಕೆಯಿಂದ ಬಳುವಳಿಯಾಗಿ ಕೊಡಲ್ಪಟ್ಟವು. ಕಾರಣ ಅವುಗಳಿಗೆ ನಿರಂತರವಾಗಿ ಸಿಂಪಡಿಸಿದ ಗ್ಲೈ ಫೋಸೇಟ್  (glyphosate).ಇದರೊಂದಿಗೆ ಅಪೌಷ್ಟಿಕ ಆಹಾರ ಸೇವನೆಯು ಈ ರೋಗಗಳ ವಿರುದ್ಧ ಹೋರಾಡುವಲ್ಲಿ ನಮ್ಮ ದೇಹದ ಕ್ಷಮತೆಯೆನ್ನು ಕ್ಷೀಣ ಗೊಳಿಸುತ್ತಿರುವುದು ವಿಪರ್ಯಾಸ. 

ವಿಶ್ವದ ಅರೋಗ್ಯ ಕಾಪಾಡುವಲ್ಲಿ ಹಸಿರುಕ್ರಾಂತಿ ಮತ್ತು ಜೈವಿಕ ಕ್ರಾಂತಿಯನ್ನು ದೂರವಿರಿಸಿ ಸಾವಯವ ಕೃಷಿಯನ್ನು ಮಾಡುವತ್ತ ಹೆಜ್ಜೆ ಹಾಕೋಣ. ಪೌಷ್ಟಿಕ ಆಹಾರ ಎಲ್ಲರಿಗೂ ಸಿಗುವಂತಾಗಲು ಶ್ರಮಿಸೋಣ. ಅನ್ನದಾತನಿಗೆ ನೆರವಾಗೋಣ. ಪ್ರಕೃತಿಯನ್ನು ಉಳಿಸೋಣ.