ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಂದ ದಿಢೀರ್ ಕದನವಿರಾಮ: ಕಕ್ಕಾಬಿಕ್ಕಿಯಾದ ಕಮಲ ಪಡೆ

ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಂದ ದಿಢೀರ್ ಕದನವಿರಾಮ: ಕಕ್ಕಾಬಿಕ್ಕಿಯಾದ ಕಮಲ ಪಡೆ

ಮಿತ್ರ ಪಕ್ಷಗಳ ಕಿತ್ತಾಟದಿಂದ ಇನ್ನೇನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಮರುಸ್ಥಾಪನೆಯಾಗುವ ದಿವ್ಯ ಬೆಳಕೊಂದು ಗೋಚರಿಸುತ್ತಿದೆ ಎಂದು ಭಾವಿಸಿದ್ದ ಬಿಜೆಪಿ ನಾಯಕರೇ ಕಕ್ಕಾಬಿಕ್ಕಿಯಾಗುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಂದು ಒಪ್ಪಂದಕ್ಕೆ ಬಂದು ಕದನವಿರಾಮ ಘೋಷಿಸಿದ್ದಾರೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವಿಶ್ಲೇಷಣೆ.

 

ಕಾಂಗ್ರೆಸ್ ಮತ್ತು ಜೆಡಿಎಸ್ ಎಂಬ ಮಿತ್ರಪಕ್ಷಗಳು ತಾವೇ ಕಿತ್ತಾಡಿಕೊಳ್ಳುತ್ತಿರುವುದರ ಪರಿಣಾಮ ಕುಂದಗೋಳ ಮತ್ತು ಚಿಕ್ಕೋಡಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ, ಅದೇ ಬಿಜೆಪಿ ಪ್ರಯತ್ನಕ್ಕೆ ದಿಕ್ಕು ತೋರಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ, ಮಿತಿಮೀರಿ ಮಾತಾಡಬಾರದು ಎಂಬ ಕಟ್ಟಪ್ಪಣೆಗಳು ಎರಡೂ ಪಕ್ಷಗಳಿಂದ ರವಾನೆಯಾಗಿದ್ದು ಕಳೆದ ಮೂರು ದಿನದಿಂದ ಎದ್ದಿದ್ದ ಸುಂಟರಗಾಳಿ ಅಡಗಿದೆ.

 ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಣ ಮಾತು ಹಾಗು ಟ್ವಿಟರ್ ಕದನ ಕಮಲ ಪಾಳಯಕ್ಕೆ ಹುರುಪು ತಂದುಕೊಟ್ಟಿತ್ತು. ಗ್ಯಾರಂಟಿಯೇ ಇಲ್ಲದ ಸರ್ಕಾರ ಯಾವಾಗಬೇಕಾದರೂ ಬಿದ್ದೋಗುತ್ತೆ, ಇಂಥ ಪಕ್ಷದವರನ್ನ ಗೆಲ್ಲಿಸಿದರೆ ಕ್ಷೇತ್ರಕ್ಕೇನೂ ಆಗಲ್ಲ. ಬದಲಿಗೆ ಸರ್ಕಾರ ರಚಿಸುವ ಜಿಜೆಪಿಗೆ ಮತ ಕೊಡೋಣ ಎಂಬ ವಾತಾವರಣ ತನ್ನಂತಾನೇ ಉಪಚುನಾವಣಾ ಕ್ಷೇತ್ರಗಳಲ್ಲೂ ಸೃಷ್ಟಿಯಾಗಿತ್ತು.

 ಕಿತ್ತಾಡುವವರು ಕನಿಷ್ಠಪಕ್ಷ ಇಷ್ಟೂ ಪರಿಜ್ಞಾನವಿಲ್ಲದೆ ಕಿತ್ತಾಡಿದ್ದರಿಂದ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತಾಗಿತ್ತು. ಅಷ್ಟರಲ್ಲಿ ಎಚ್ಚೆತ್ತುಕೊಂಡಿರುವ ಉಭಯ ಪಕ್ಷಗಳ ನಾಯಕರೂ ಕದನ  ವಿರಾಮ ಘೋಷಿಸಿಕೊಳ್ಳುವ ಮೂಲಕ ಕಮಲ ಪಾಳಯದ ಮೇಲೆ ಮೋಡ ಕವಿಸಿದ್ದಾರೆ.

 ಫಲಿತಾಂಶ ಏನಾದರಾಗಲಿ ಮೈತ್ರಿಸರ್ಕಾರ ಉಳಿಸಿಕೊಳ್ಳುವುದು  ಅನಿವಾರ್ಯ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯಲಾಗದೇ ಕರ್ನಾಟಕ ರಾಜ್ಯದ ಚುಕ್ಕಾಣಿಯನ್ನೂ ಕಳೆದುಕೊಂಡರೆ ಭವಿಷ್ಯದ ಚುನಾವಣೆಗಳಿಗೆ ಸಕಲೆಂಟು ರೀತಿಯ ಸಂಪನ್ಮೂಲಗಳ ಲಭ್ಯತೆಗೂ ಕೊರೆಯಾಗುತ್ತೆ. ದಕ್ಷಿಣ ಭಾರತದಲ್ಲಿ ತನ್ನ ನೆಲೆ ಇರುವುದು ಇದೊಂದೇ ರಾಜ್ಯದಲ್ಲಿ, ಇದನ್ನೂ ಕಳೆದುಕೊಂಡರೆ ಮಾಡುವುದಿನ್ನೇನು? ಅದೂ ರಾಹುಲ್ ಗಾಂಧಿ ಪಕ್ಕದ ವಯನಾಡಿನಿಂದ ಗೆಲ್ಲುವ ಸ್ಥಿತಿ ಇದೆಯಾದರೂ, ಅವರ ಬೆಂಬಲಕ್ಕೆ ಕೇರಳದಲ್ಲಿ ಇನ್ನೋರ್ವ ಕಾಂಗ್ರೆಸ್ ಸಂಸದ ಗೆಲ್ಲುವಂಥದ್ದೂ ಕಷ್ಟ,  ವಿಧಾನಸಭೆಯಲ್ಲಿ ಇರುವ ಪಕ್ಷದ ಬಲವೂ ಗಣನೀಯವಾಗಿಲ್ಲ. ಅಂತೆಯೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿಯಲ್ಲೂ ಇಂಥದ್ದೇ ಸ್ಥಿತಿ, ಹೀಗಿರುವಾಗ  ಅಪರೋಕ್ಷವಾಗಿ ಅದು  ರಾಹುಲ್ ಗಾಂಧಿ ದಕ್ಷಿಣದಿಂದ ಗೆದ್ದರೂ ಅವರೊಡನೆ ಧ್ವನಿ ಎತ್ತಿ ನಿಲ್ಲಲು ಅವರ ಪಕ್ಷದ ಜನಪ್ರತಿನಿಧಿಗಳೇ ಈ ಭಾಗದಲ್ಲಿ ಇರಲ್ಲ!

 ರಾಷ್ಟ್ರೀಯ ನಾಯಕನಿಗೆ ತಾನು ಗೆದ್ದ ರಾಜ್ಯ, ಅಕ್ಕಪಕ್ಕದ ರಾಜ್ಯದಲ್ಲಿ ತನ್ನವರಿದ್ದರೇ ಗತ್ತು ಹೆಚ್ಚು. ಇಲ್ಲವಾದರೆ ಏಕಾಂಗಿ ಭಾವ ಕಾಡುತ್ತೆ, ಇವರ ಸ್ಪರ್ಧೆಯ ಪರಿಣಾಮ ಏನೇನೂ ಪರಿಣಾಮ ಬೀರಲಿಲ್ಲ ಎಂಬ ಟೀಕೆಗಳಿಗೂ ತುತ್ತಾಗಬೇಕಾಗುತ್ತೆ, ಇದು ಪರಿಸ್ಥಿತಿ. ಕಂಡೂ ಕಂಡು ಅಂಥ ಸ್ಥಿತಿಗೆ ಬೀಳುವ ಬದಲು, ನೆರೆಯ ಕರ್ನಾಟಕದಲ್ಲಿ ನಮ್ಮ ಸರ್ಕಾರವಿದೆ ಎಂಬ ಧೈರ್ಯದಲ್ಲಿ ರಾಹುಲ್ ಇರಬೇಕಾದರೆ, ಇಲ್ಲಿನ  ಮೈತ್ರಿ ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ ಅಗತ್ಯವೂ ಹೌದು.

 ಅದರಲ್ಲೂ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ದಕ್ಷಿಣ ರಾಜ್ಯಗಳವರು ಒಟ್ಟಾಗಿರಬೇಕು, ಪ್ರಧಾನಿ ಹುದ್ದೆ ನಮ್ಮದಾಗಿಸಿಕೊಳ್ಳಬೇಕು ಅದಾಗದಿದ್ದರೆ ನಾವು ಹೇಳಿದವರು ಪ್ರಧಾನಿಯಾಗುವಂತೆ ಮಾಡಬೇಕು ಎಂಬ ಗುರಿಯಿಟ್ಟುಕೊಂಡು ಓಡಾಡುತ್ತಿರುವಾಗ ನಾನೂ ದಕ್ಷಿಣದಿಂದ ಗೆದ್ದಿರುವುದು, ಕರ್ನಾಟಕದಲ್ಲೂ ನನ್ನ ನೆಲೆಯಿದೆ ಎಂದು ಪ್ರತಿಪಾದಿಸಿಕೊಳ್ಳುವುದಕ್ಕಾದರೂ ಇಲ್ಲಿನ ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇಬೇಕು. ಇದು ರಾಹುಲ್ ಗಾಂಧಿಗಿರುವ ಅನಿವಾರ್ಯ ಸ್ಥಿತಿ

 ಇದನ್ನೇ ಮಾಜಿ ಪ್ರಧಾನಿ ದೇವೇಗೌಡರು ಮನದಟ್ಟು ಮಾಡಿಕೊಡುತ್ತಿರುವುದು. ಫಲಿತಾಂಶ ಏನಾದರಾಗಲಿ ದಕ್ಷಿಣದಲ್ಲಿ ನೆಲೆ ಉಳಿಸಿಕೊಳ್ಳಲು ಇರುವ ಒಂದೇ ರಾಜ್ಯ ಕರ್ನಾಟಕವನ್ನ ಕಳೆದುಕೊಳ್ಳಬೇಡಿ ಎಂಬ ಬುದ್ದಿವಾದವನ್ನೇಳಿದ್ದಾರೆ. ರಾಜಕೀಯವಾಗಿ ಇದು ಸರಿಯಾದುದೂ ಆಗಿರುವುದರಿಂದ, ಮೈತ್ರಿಗೆ ದಕ್ಕೆಯಾಗುವ ಹೇಳಿಕೆ ಯಾರೂ ಕೊಡಬೇಡಿ. ಆಗಿರುವುದಕ್ಕೆಲ್ಲ ಫುಲ್‍ಸ್ಟಾಪ್ ಇಡಿ ಎಂಬ ಸೂಚನೆ ರವಾನೆಯಾಗಿದೆ.

 ಮುಖ್ಯಮಂತ್ರಿಕುಮಾರಸ್ವಾಮಿಗೂ ದೊಡ್ಡಗೌಡರು ಕೊಟ್ಟಿರುವ ಸಲಹೆ ಮೇರೆಗೆ ಸಿದ್ದರಾಮಯ್ಯ ಜತೆ ದೂರವಾಣಿಯಲ್ಲಿ ಮಾತುಕತೆಯಾಡಿ, ಎಲ್ಲದಕ್ಕೂ ಅಂತ್ಯವಾಡುವ, ಮೈತ್ರಿಗೆ ದಕ್ಕೆಯಾಗದಂತೆ ನಡೆದುಕೊಳ್ಳೋಣ ಎಂದು ಹೇಳಿದ್ದಾರೆ. ವಿಶ್ವನಾಥ್ ಕೂಡ ಇನ್ನು ಮುಂದೆ ಆ ರೀತಿ ಮಾತಾಡಲ್ಲ ಎಂಬ ಭರವಸೆಯನ್ನೂ ಕೊಟ್ಟಿದ್ದಾರೆ.

 ಸಿದ್ದುವೇ ಮತ್ತೆ ಮುಖ್ಯಮಂತಿ ್ರಎಂದು ಕಾಂಗ್ರೆಸ್ ಗುಂಪು ಹೇಳುವುದನ್ನ ನಿಲ್ಲಿಸಿದರೆ, ತಾನೂ ಮೌನವಾಗುವ ಭರವಸೆಯನ್ನ ವಿಶ್ಜನಾಥ್ ನೀಡಿರುವುದರಿಂದಾಗಿ, ಸದ್ಯಕ್ಕೆ ದಿಡೀರನೆ ಎದ್ದಿದ್ದ ಜ್ವಾಲೆ ತಣ್ಣಗಾಗಿದೆ. ಮೋಡ ಮಳೆಯ ವಾತಾವರಣದಲ್ಲೇ ಶತ್ರುಪಾಳಯಕ್ಕೆ ನುಗ್ಗಬೇಕು ಎಂದು ತಮ್ಮ ನಾಯಕರಾದ ಮೋದಿಯೇ ಹೇಳಿದ್ದರಿಂದ ಪುಳಕಿತರಾಗಿ, ಮೈತ್ರಿ ನಡುವೆ ಕವಿದಿದ್ದ ಮೋಡದೊಳಗೆಯೇ ಉಪಚುನಾವಣಾ ಕಣದೊಳಕ್ಕೆ ನುಗ್ಗಿದ್ದ ಬಿಜಿಪಿಯವರು ಕಕ್ಕಾಬಿಕ್ಕಿಯಾಗಿದ್ದಾರೆ.