ಫೀನಿಕ್ಸ್ ನಂತೆ ಈಗಲೂ ಸಮಯಕ್ಕಾಗಿ ಕಾಯುತ್ತಿದ್ದೇನೆ...

ಫೀನಿಕ್ಸ್ ನಂತೆ ಈಗಲೂ ಸಮಯಕ್ಕಾಗಿ ಕಾಯುತ್ತಿದ್ದೇನೆ...

ಪುರಾಣದ ಅಥವಾ 
ಇತಿಹಾಸಗಳ ಯುದ್ಧಗಳಲ್ಲಿ
ಎದೆಗವಚ ತೊಡತ್ತಿದ್ದರ ಬಗ್ಗೆ
ಓದಿದ್ದೆ. 

ಕೈಯಲ್ಲಿ ಕತ್ತಿ ಹಿಡಿದು
ರಕ್ಷಣೆಗೆ ಗುರಾಣಿ ಹಿಡಿದು
ಯುದ್ಧ ಮಾಡಿದ ಕತೆಗಳನ್ನು
ಸಹ..

ಅಜ್ಜಿಯ ಮಡಿಲಿನಲ್ಲಿ ಮಲಗಿ
ಆವಳು ನನ್ನ ಕೂದಲ ಬುಡಕ್ಕೆ ಕೈ
ಹಾಕಿ ನವೀರಾಗಿ ತೀಡುತ್ತಿದ್ದರೆ ಸುಖದ ಮಂಪರು, ಅರೆ ಬರೆ
ಕೇಳಿಸಿಕೊಳ್ಳುತ್ತಲೇ ನಿದ್ದೆ ಹೋದ
ಸವಿ ನೆನಪು  ಈಗಲೂ ಕನಸಾಗುವುದು ಉಂಟು

ಅಪ್ಪನ ಅಂತಃಕರಣ, ಅಮ್ಮನ 
ಆರೈಕೆ,... ಬಂದು ಬಾಂಧವರ ನೆರಳಲ್ಲೇ
ಕಳೆದು ಹೋದ ಕಾರಣ, ಹಾಲು ನೀರಿನ ವ್ಯತ್ಯಾಸ ತಿಳಿಯದೇ ಹೋದೆ..

ಅಮ್ಮ ಕಷ್ಟ ಕಾಲದಲ್ಲಿ ಹೇಳುತ್ತಿದ್ದ 
"ಕಾಲ ಕೆಟ್ಟುಹೋಯ್ತು" ಎಂಬ ಮಾತಿನ
ಅರಿವಾಗಲು ಇಂತಹದೊಂದು ದುರಿತ
ಕಾಣಬೇಕಿತ್ತು..

ಈಗ ಬೆನ್ನ ತುಂಬಾ ಭರ್ಜಿ, ಚೂರಿ
ಕತ್ತಿ ತರೆವಾರಿ ಆಯುಧಗಳ ಇರಿತಗಳೇ.
ಬೆನ್ನೆಂಬ ಬೆನ್ನು ನೆತ್ತರ ಓಕುಳಿ

ಬಣ್ಣಗಳ ಬಳಿದ ಮುಖಗಳು ಸುತ್ತಲೂ
ಕುಣಿಯುತ್ತವೆ ಕೇಕೆ ಹಾಕುತ್ತಾ..
ನನ್ನ ಬಗ್ಗೆ ಬಹು ಪರಾಕ್ ಮಾಡುತ್ತಾ
ಕೊಡಗೈ ತಾಯಿ ಎಂಬ ಬಿರುದು ಇರುವ ತನಕ..

ಯಾರೋ ಹುಚ್ಚಿ ಎಂದು ಜರಿದದ್ದು
ಲೊಚಗುಟ್ಟಿದ್ದು ಕೇಳಿದ್ದು ನಿಜವಾ
ಅಥವಾ ಭ್ರಮೆಯಾ?

ಸುತ್ತಲೂ ಕುಣಿಯುತ್ತಿದ್ದ ಬಣ್ಣದ ಬೊಂಬೆಗಳು ಕರಾಳವಾಗಿ ಕಾಣತೊಡಗುತ್ತದೆ..
ವಿಕಾರವಾಗಿ ಗಹಗಹಿಸಿ ಅಗ್ನಿಕುಂಡಗಳಾಗಿ ನನ್ನ ಹಿಂಬಾಲಿಸ
ತೊಡಗುತ್ತವೆ..

ಅಸಹ್ಯದಿಂದ ಅತ್ತ ಕಡೆಗೊಮ್ಮೆ ನೋಡಿ
ನನ್ನನೇ ಅಗ್ನಿಕುಂಡವಾಗಿಸಿ ಬೂದಿಯಾಗುತ್ತೇನೆ, ಫೀನಿಕ್ಸ್ ಆಗಲೂ
ಸಮಯಕ್ಕಾಗಿ ಕಾಯುತ್ತಿದ್ದೇನೆ..!!

..ಹೇಮಾ