ವಿಶ್ವನಾಥ್ ಅತಂತ್ರ

ವಿಶ್ವನಾಥ್ ಅತಂತ್ರ

ಪ್ರಿಯ ಓದುಗರೇ,


ಅಡಗೂರು ವಿಶ್ವನಾಥ್ ಎಂಬ ಅಪರೂಪದ ನಾಯಕ ರಾಜಕೀಯವಾಗಿ ಚಿಂತಾಜನಕ ಸ್ಥಿತಿಯಲ್ಲಿರುವುದು ನನಗಂತೂ ನೋವನ್ನುಂಟು ಮಾಡಿದೆ. ಈ ಹಿಂದೆಯೂ ವಿಶ್ವನಾಥ್ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದೇನೆ. ಅವರನ್ನು ಹತ್ತಿರದಿಂದ ಬಲ್ಲೆನಾದರೂ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜತೆ ಹತ್ತಿರವಿದ್ದೂ ದೂರವಿರುವಂಥ ನನ್ನ ಸ್ವಭಾವದಿಂದಾಗಿ ಆತ್ಮೀಯ ಸ್ನೇಹಿತನಾಗಿ ಇರಲಾರೆ. ಸ್ವಲ್ಪವಾದರೂ ಜನಪರ ವ್ಯಕ್ತಿಯಾಗಿದ್ದರೆ ಸಿಕ್ಕರೆ ಸೌಜನ್ಯದಿಂದ ಮಾತಾಡುತ್ತೇನೆ. ದುಷ್ಟರು, ಅಹಂಕಾರಿಗಳು, ಧಿಮಾಕಿನವರು, ಭ್ರಷ್ಟರು, ಜಾತಿವಾದಿಗಳು ನನಗೆ ಅಷ್ಟಕ್ಕಷ್ಟೇ. ನನ್ನ ಸ್ವಭಾವದಿಂದಾಗಿಯೋ ಏನೋ ಈ ಯಾವುದೇ ಲಕ್ಷಣಗಳಿರದ ವಿಶ್ವನಾಥ್ ಬಗ್ಗೆ ನನಗೆ ಪ್ರೀತಿ, ಗೌರವ, ವಿಶ್ವಾಸ.  ವಿಶ್ವನಾಥ್ ಜನರೊಂದಿಗೆ ಹೇಗೆ ಮಾತನಾಡಬೇಕು, ಬೆರೆಯಬೇಕು ಎಂಬುದನ್ನು ಬಲ್ಲವರು. ಸಾಂಸ್ಕೃತಿಕ ಅಭಿರುಚಿಗಳಿರುವ ಮನುಷ್ಯ. ದಿಟ್ಟತನ, ಸ್ವಾಭಿಮಾನ, ಪ್ರಾಮಾಣಿಕತೆ ಅವರ ಹೆಚ್ಚುವರಿ ಅರ್ಹತೆ. ಜನಪರನಾಗಿರುವ ರಾಜಕಾರಣಿಗೆ ಇದಕ್ಕಿಂತ ಇನ್ನೇನು ಬೇಕು? 


ಈ ಎಲ್ಲ ಅರ್ಹತೆಗಳಿದ್ದರೂ ಅವರು ರಾಜಕೀಯವಾಗಿ ವಿಫಲರಾಗಿದ್ದಾರೆ. ಅದು ಅವರ ದೋಷ ಅನ್ನುವುದಕ್ಕಿಂತ ವ್ಯವಸ್ಥೆಯ ದೋಷ. ಕುರುಬ ಸಮುದಾಯಕ್ಕೆ ಸೇರಿದ ವಿಶ್ವನಾಥ್ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಗೆ ಹೋದಾಗಲೇ ನನಗೆ ಅದು ಸರಿಯಾದ ನಿರ್ಧಾರ ಅನ್ನಿಸಿರಲಿಲ್ಲ. ಜೆಡಿಎಸ್ನೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತ ಮಿತ್ರರೊಬ್ಬರ ಜತೆ ಮೊನ್ನೆ ಮಾತನಾಡುತ್ತಾ, “ ನೀವು ವಿಶ್ವನಾಥ್ ಅವರನ್ನು ಜೆಡಿಎಸ್ಗೆ ಸೇರಿಸಿ ತಪ್ಪು ಮಾಡಿಬಿಟ್ಟಿರಿ” ಎಂದೆ. ಅದಕ್ಕವರು ,” ಅದು ಹಾಗೆ ಅಲ್ಲ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಬೇಕೆಂದಿದ್ದರು. ಅದನ್ನು ತಪ್ಪಿಸಿ ಜೆಡಿಎಸ್ಗೆ ಬರುವಂತೆ ಮಾಡಿದೆ ಅಷ್ಟೇ” ಎಂದು ಸಮಜಾಯಿಷಿ ನೀಡಿದರು.  ಈಗ ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 


ಹಾಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ರಾಜೀನಾಮೆ ನೀಡಿದಾಗ ಅವರಿಗಿದ್ದ ಸಿಟ್ಟು, ಬೇಸರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ಸಿದ್ದರಾಮಯ್ಯ ವಿರುದ್ಧವೇ ಮಾತನಾಡಿದ್ದಾರೆ. ಕಾಂಗ್ರೆಸ್ ತ್ಯಜಿಸುವುದಕ್ಕೆ ಸಿದ್ದರಾಮಯ್ಯ ಕಾರಣರಿರಬಹುದು. ಸಿದ್ದರಾಮಯ್ಯ ದುರಹಂಕಾರ, ಉಡಾಫೆ, ಇತರರನ್ನು ನಿರ್ಲಕ್ಷ್ಯದಿಂದ ಕಾಣುವ ಮನೋಭಾವ ವಿಶ್ವನಾಥ್ ಬಗ್ಗೆಯೂ ತೋರಿರಬಹುದು. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಸೇರುವುದಕ್ಕೆ ವಿಶ್ವನಾಥ್ ಅವರ ಸಾಸಿವೆಯಷ್ಟು ಪ್ರಯತ್ನವಾದರೂ ಇದ್ದಿರಬಹುದು. ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿದ್ದರೂ ವಿಶ್ವನಾಥ್ ಅವರನ್ನೂ ನಿರ್ಲಕ್ಷಿಸುವಷ್ಟು ಸಿದ್ದರಾಮಯ್ಯ ಅಹಂಕಾರ ಪ್ರದರ್ಶಿಸಿದ್ದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಹಾಗೊಂದು ವೇಳೆ ಸಿದ್ದರಾಮಯ್ಯ ಅವರಿಂದ ಬೇಸತ್ತು ವಿಶ್ವನಾಥ್ ಸ್ವಲ್ಪ ಸಮಯವಾದರೂ ರಾಜಕೀಯ ವಿಶ್ರಾಂತಿ ಪಡೆದಿದ್ದರೆ ಕಾಲವೇ ಎಲ್ಲ ನಿರ್ಧಾರಗಳನ್ನೂ ಕೈಗೊಳ್ಳುತ್ತಿತ್ತು. ಆದರೆ ರಾಜಕೀಯವಾಗಿ ಸಕ್ರಿಯವಾಗಿರುವ ಒಬ್ಬ ನಾಯಕನಿಗೆ ಹಾಗೆ ತಟಸ್ಥವಾಗಿರುವುದು ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿದ್ದೂ ಏನೂ ಮಾಡದ ಸ್ಥಿತಿ ಎದುರಿಸುತ್ತಿರಬೇಕಾದರೆ ಅಲ್ಲಿ ಇದ್ದು ಮಾಡುವುದಾದರೂ ಏನು ಎಂದು ಅವರಿಗೆ ಅನ್ನಿಸಿರಬಹುದು. ಆದರೆ ಸಂದರ್ಭಕ್ಕೆ ಕಾಯುವ ಗುಣವೂ ಒಬ್ಬ ನಾಯಕನಲ್ಲಿರಬೇಕು. ಸಹನೆ ರೂಢಿಸಿಕೊಳ್ಳದ ನಾಯಕ ಎಷ್ಟೇ ಸಮರ್ಥ, ಪ್ರಾಮಾಣಿಕ, ಜನಪರ, ದಕ್ಷನಾಗಿದ್ದರೂ ಅವಕಾಶವಾದಿಯಂತೆಯೇ ಕಾಣುತ್ತಾನೆ. ವಿಶ್ವನಾಥ್ ವಿಷಯದಲ್ಲೂ ಆಗಿದ್ದು ಇದೇ. 


ಆದರೆ ಅವರು ಹೋಗಿದ್ದು ಜೆಡಿಎಸ್ ಗೆ. ಅಲ್ಲಿ ಹೋಗಿ ಮಾಡುವುದಾದರೂ ಏನಿತ್ತು? ಅಲ್ಲಿ ಎಲ್ಲವೂ ಕುಮಾರಸ್ವಾಮಿಯದೇ ಅಂತಿಮ ನಿರ್ಧಾರ. ಪ್ರಜಾಸತ್ತಾತ್ಮಕ ವ್ಯವಸ್ಥೆಯಿಲ್ಲದ, ಕೇವಲ ಕುಟುಂಬ ರಾಜಕಾರಣ ನಡೆಸುವ ಪಕ್ಷ. ಹಾಗೆ ವಿಶ್ವನಾಥ್ ಜೆಡಿಎಸ್ ಗೆ ಹೋದಾಗಲೇ ತಪ್ಪು ನಿರ್ಧಾರ ಕೈಗೊಂಡುಬಿಟ್ಟಿದ್ದರು. ಅವರಿಗೆ ಜೆಡಿಎಸ್, ದೇವೇಗೌಡ ಮತ್ತು ಕುಮಾರಸ್ವಾಮಿ ಗೊತ್ತಿರದ ವಿಷಯವೇನಲ್ಲ. ನಿಷ್ಠುರವಾಗಿ ಮಾತನಾಡುವ ವಿಶ್ವನಾಥ್ ಅಲ್ಲೂ ಕೀಲುಗೊಂಬೆಯಾಗುತ್ತಾರಷ್ಟೇ ಎಂದು ನನ್ನಂತೆ ಅನೇಕರಿಗೆ ಅನ್ನಿಸಿತ್ತು.

ಆದರೆ ಕೀಲುಗೊಂಬೆಯಂತಿರುವುದು ವಿಶ್ವನಾಥ್ ಅವರ ಸ್ವಭಾವದಲ್ಲಿಲ್ಲ. ಹೀಗಾಗಿ ಅವರು ಎಡವಿ ಜೆಡಿಎಸ್  ಕುಟುಂಬಕ್ಕೆ ಬಿದ್ದರು. ಅಲ್ಲಿ ಗುಲಾಮರಾಗಬಹುದೇ ಹೊರತು ನಾಯಕನಾಗುವುದು ಸಾದ್ಯವಿಲ್ಲ. ರಾಜ್ಯಾಧ್ಯಕ್ಷ ಸ್ಥಾನವೂ ಕೇವಲ ತೋರಿಕೆಯದ್ದಷ್ಟೇ ಆಗಿರುತ್ತದೆ. ಕುಮಾರಸ್ವಾಮಿಯ ನಿರ್ಧಾರಗಳಿಗೆ ಸಹಿ ಹಾಕುವ ಯಂತ್ರದಂತೆ ಇರಬೇಕಾಗಿರುತ್ತದೆ. ಕೆಲವು ತಿಂಗಳು ಅವರು ಇದನ್ನೆಲ್ಲ ಅನುಭವಿಸಿ ಅಲ್ಲಿ ಇರಲಾಗದೇ ಹೊರ ಬರಲು ನಿರ್ಧರಿಸಿದ್ದಾರೆ. ಆದರೆ ಅವರ ಮನಃಸ್ಥಿತಿಗೆ ಇನ್ಯಾವ ಪಕ್ಷಕ್ಕೆ ಹೋಗುವುದು ಸಾಧ್ಯವಿದೆ? ಪ್ರಾಮಾಣಿಕವಾಗಿ ಯೋಚಿಸುವುದಾದರೆ ಅವರು ಬಿಜೆಪಿಗೆ ಹೋಗುವುದು ಸಾಧ್ಯವಿಲ್ಲ ನಿಜ. ಸಕ್ರಿಯ ರಾಜಕಾರಣದಲ್ಲಿರಬೇಕೆಂದರೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಹೋಗಿ ಇನ್ನು ಬಿಜೆಪಿಗೆ ಹೋಗುವುದಲ್ಲದೇ ಅನ್ಯ ಮಾರ್ಗವೇನಿದೆ?  ವಿಚಿತ್ರ ಎಂದರೆ ಅವರು ಬಿಜೆಪಿಗೆ ಹೋಗುವುದಿಲ್ಲ ಎಂದರು. ತಮ್ಮ ರಾಜೀನಾಮೆಗೆ ಸಿದ್ದರಾಮಯ್ಯ ಮೈತ್ರಿ ಸರ್ಕಾರಕ್ಕೆ ಕೊಡುತ್ತಿದ್ದ ಕಾಟವೇ ಕಾರಣ ಎಂದರು. ಕುಮಾರಸ್ವಾಮಿ ಕೆಲಸ ಮಾಡುವುದಕ್ಕೂ ಸಿದ್ದರಾಮಯ್ಯ ಅವಕಾಶ ನೀಡುತ್ತಿರಲಿಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ತುಂಬ ದಿಟ್ಟರೆಂದು ಭಾವಿಸಿದ್ದ ವಿಶ್ವನಾಥ್ ತಮ್ಮ ರಾಜೀನಾಮೆಗೆ ನೀಡಿದ ಕಾರಣಗಳು ಸಮರ್ಥನೀಯವಾಗಿರಲಿಲ್ಲ. ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಕೊಡುತ್ತಿದ್ದ ಕಾಟಕ್ಕೂ ಇವರ ರಾಜೀನಾಮೆಗೂ ಸಂಬಂಧ ಎಳ್ಳಷ್ಟೂ ಕಾಣುತ್ತಿಲ್ಲ. ಅವರು ಮೊದಲಿನ ವಿಶ್ವನಾಥರೇ ಆಗಿದ್ದರೆ ತಮ್ಮ ಮಾತಿಗೆ ಜೆಡಿಎಸ್ ನಲ್ಲಿ ಚಿಕ್ಕಾಸಿನ ಬೆಲೆಯೂ ಇಲ್ಲ, ಎಲ್ಲ ನಿರ್ಧಾರಗಳನ್ನು ಅಪ್ಪ, ಮಕ್ಕಳೆ ತೆಗೆದುಕೊಂಡು ತಮಗೆ ತಿಳಿಸುತ್ತಿದ್ದಾರೆ, ಇದು ತಮ್ಮ ಆತ್ಮಗೌರವಕ್ಕೆ ಧಕ್ಕೆ ತಂದಿದ್ದರಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಬೇಕಿತ್ತು. ಆದರೆ ಅವರಲ್ಲಿದ್ದ ದಿಟ್ಟತನ, ನೇರ ಮಾತು ಮಾಯವಾದಂತೆ ಕಾಣುತ್ತಿದೆ. ಅವರು ಜೆಡಿಎಸ್ ಗೂ ರಾಜೀನಾಮೆ ಎಸೆದು ಬಂದು ಬಿಡುತ್ತಿದ್ದರೇನೋ. ಆದರೆ ಹಾಗೆ ಮಾಡಲಿಲ್ಲ. ಅವರು ರಾಜೀನಾಮೆ ಕೊಡುತ್ತಾರೆ ಎಂಬ ಸುಳಿವು ದೊರೆಯುತ್ತಿದ್ದಂತೆ ದೇವೇಗೌಡರು ಮನವೊಲಿಸಿ ವಿಶ್ವನಾಥ್ ಆಡಬೇಕಿದ್ದ ಮಾತುಗಳನ್ನು ಎಡಿಟ್ ಮಾಡಿಸಿದ್ದಾರೆ. ದೇವೇಗೌಡರು ವಿಶ್ವನಾಥ್ ಅವರ ಮನವೊಲಿಸಿದ್ದಾರೆ ಎಂದು ನನಗನ್ನಿಸಲಿಲ್ಲ. 


ಇಕ್ಕಟ್ಟಿಗೆ ಸಿಕ್ಕಿಕೊಂಡ ವಿಶ್ವನಾಥ್ ರಾಜಕೀಯವಾಗಿ ಅತಂತ್ರ ಸ್ಥಿತಿಯಲ್ಲಿರುವುದನ್ನು ಈ ಬೆಳವಣಿಗೆ ತೋರಿಸುತ್ತದೆ. ಅವರು ಉಸಿರು ಕಟ್ಟಿಸುವ ಜೆಡಿಎಸ್್ನಲಲ್ಲಿ ಉಳಿಯುವುದು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಅವರು ಕ್ರಮೇಣ ಬಿಜೆಪಿಗೆ ಹೋದರೂ ಅವರನ್ನು ಕೋಮುವಾದಿಯೆಂದೇನೂ ಕರೆಯುವ ಅಗತ್ಯ ಇರುವುದಿಲ್ಲ. ಯಾಕೆಂದರೆ ಈಗಾಗಲೇ ಬಿಜೆಪಿಯಿಂದ ವಿದಾಯ ಪಡೆಯಲು ಸಿದ್ಧರಾಗಿರುವ ಯಡಿಯೂರಪ್ಪ ಕೂಡ ಕೋಮುವಾದಿಯೇನೂ ಅಲ್ಲ. ಕೋಮುವಾದಿಗಳು, ಜಾತಿವಾದಿಗಳು ಕಾಂಗ್ರೆಸ್ ನಲ್ಲೂ ಇದ್ದಾರೆ, ಜೆಡಿಎಸ್ನಲ್ಲೂ ಇದ್ದಾರೆ, ಬಿಜೆಪಿಯಲ್ಲೂ ಇದ್ದಾರೆ. ಆದರೆ ಬಿಜೆಪಿ ಕೋಮುವಾದಿ ಕಾರ್ಯಕ್ರಮಗಳನ್ನು ಬಹಿರಂಗವಾಗಿಯೇ ತೋರಿಸಿಕೊಳ್ಳುತ್ತಿದೆ.

ತುಂಬ ಮನುಷ್ಯ ಪ್ರೀತಿಯ ವಿಶ್ವನಾಥ್ ಯಾವುದೇ ಪಕ್ಷಕ್ಕೇ ಹೋದರೂ ಅವರ ಸ್ವಭಾವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬಿಜೆಪಿಯಲ್ಲೂ ಅವರು ಸಮಾಧಾನದಿಂದಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಸದಾ ಸ್ವತಂತ್ರವಾಗಿರುವ ವ್ಯಕ್ತಿತ್ವದ ವಿಶ್ವನಾಥ್ ಎಲ್ಲ ವಿಷಯಗಳಲ್ಲೂ ಒಂದಕ್ಕೇ ಅಂಟಿಕೊಂಡವರಲ್ಲ. ಆರೋಗ್ಯಕರ ಬದಲಾವಣೆಯ ತುಡಿತವೇ ಅವರನ್ನು ಜೀವಂತವಾಗಿಟ್ಟಿದೆ. ಕಾಂಗ್ರೆಸ್ ನಲ್ಲಿ ವಿಶ್ವನಾಥ್ ರನ್ನು ಉಳಿಸಿಕೊಳ್ಳಲಾಗದವರು ಅದೇ ಮನಃಸ್ಥಿತಿಯ ಇನ್ಯಾರನ್ನು ತಾನೇ ಉಳಿಸಿಕೊಳ್ಳುವುದು ಸಾಧ್ಯವಿದೆ?ವೃತ್ತಿಪರ ರಾಜಕಾರಣಿಗಳ ನಡುವೆ ಅಪರೂಪದ ಪ್ರತಿಭೆ, ಮನುಷ್ಯತ್ವ ಇರುವ ವಿಶ್ವನಾಥ್ ಈಗಲೂ ಬಿಂಕದ ಸಿಂಗಾರಿ, ಮೈ ಡೊಂಕಿನ ವಯ್ಯಾರಿ ಎಂದು ಸುಮಧುರವಾಗಿ ಹಾಡುವಂಥ ಗಾಯಕ. ಅವರು ಸಾಹಿತ್ಯದ ಓದುಗರಷ್ಟೇ ಅಲ್ಲ,

ಲೇಖಕ ಕೂಡ. ಇಂಥ ಅಭಿರುಚಿಗಳಿರುವ ಮನುಷ್ಯ ವೈಯಕ್ತಿಕ ಬದುಕಿನಲ್ಲಿ ಸೋಲುವುದೂ ಸಾಧ್ಯವಿಲ್ಲ, ನೋವನುಭವಿಸುವುದೂ ಸಾಧ್ಯವಿಲ್ಲ. ಹೀಗಾಗಿ ಅವರ ತಪ್ಪು ನಿರ್ಧಾರಗಳು ಕೂಡ ಅಪರಾಧದಂತೆ ಕಾಣುವುದಿಲ್ಲ. ಅಪಾರ ಜೀವನ ಪ್ರೀತಿಯ ವಿಶ್ವನಾಥ್ ಇರುವುದೇ ಹೀಗೆ. ಹಾಗೇ ಇರಬೇಕು. ಕುರುಬ ಸಮುದಾಯದಿಂದ ಬಂದಿರುವ ದುರಹಂಕಾರದ ಸಿದ್ದರಾಮಯ್ಯ, ಒಡಕು ಬಾಯಿಯ ಈಶ್ವರಪ್ಪಗಿಂತ ವಿಶ್ವನಾಥ್ ಇಷ್ಟವಾಗುವುದಕ್ಕೆ ಇದೇ ಕಾರಣ. ರಾಜಕಾರಣದಲ್ಲಿ ಮನುಷ್ಯರನ್ನು ಪ್ರೀತಿಸುವವರೂ ಇರಬೇಕು, ಸರಳವಾಗಿರುವವರೂ ಬೇಕು, ಕಪಟತನ ಇಲ್ಲದವರೂ ಇರಬೇಕು. ಜನರೊಡನೆ ಬೆರೆಯುವ ಮನಸ್ಸೂ ಇರಬೇಕು. ಇದು ವಿಶ್ವನಾಥ್ ಅವರಲ್ಲಿ ನಾನು ಕಂಡ ಗುಣಗಳು. ಅವರ ವಯಸ್ಸು ಎಷ್ಟೋ ನನಗೆ ಗೊತ್ತಿಲ್ಲ. ಈಗಲೂ ಯುವಕರಂತೆ ಉತ್ಸಾಹದಿಂದಿರುವ ವಿಶ್ವನಾಥ್ ರಾಜಕೀಯ ಬದುಕಿನ ಏರಿಳಿತಗಳು ಸೋಲು ಅಥವಾ ಗೆಲುವಲ್ಲ. ಜನಪ್ರೀತಿ ಎಷ್ಟರ ಮಟ್ಟಿಗೆ ಗಳಿಸಿದ್ದಾರೆ ಎನ್ನುವುದರಲ್ಲೇ ಅವರ ಗೆಲುವಿದೆ. ಇದನ್ನು ವಿಶ್ವನಾಥ್ ಅರ್ಥ ಮಾಡಿಕೊಳ್ಳಬೇಕು.ಮುಂದಿನ ಹೆಜ್ಜೆ ನಿರ್ಧರಿಸಲಾಗದ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಅವರಿರಬಹುದು. ಈ ಅತಂತ್ರ ಪರಿಸ್ಥಿತಿಯಿಂದ ಅವರು ಹೊರಬರುವುದು ಕಷ್ಟವೇನಲ್ಲ. ಆ ಸಾಮರ್ಥ್ಯವೂ ಅವರಿಗಿದೆ. ನಿಜಕ್ಕೂ ರಾಜಕಾರಣದಲ್ಲಿ ವಿಶ್ವನಾಥ್ ತರಹದ ವ್ಯಕ್ತಿಗಳು ಯಶಸ್ಸು ಕಾಣಬೇಕು. ಆದರೆ ಕಲುಷಿತ ವ್ಯವಸ್ಥೆ ಅದಕ್ಕೆ ಪೂರಕವಾಗಿಲ್ಲ. ರಾಜಕಾರಣದ ಯಶಸ್ಸಿಗೆ ಕೇವಲಲ ಒಳ್ಳೆ ಗುಣಗಳಿದ್ದರಷ್ಟೇ ಸಾಲದು, cunningness ಕೂಡ ಇರಬೇಕು, ಸಿದ್ದರಾಮಯ್ಯರಂಥ ವ್ಯಕ್ತಿಗಳನ್ನೂ ಎದುರಿಸುವ ತಂತ್ರಗಳನ್ನು ಸಿದ್ಧಿಸಿಕೊಳ್ಳಬೇಕು. ವಿಶ್ವನಾಥ್‌ರಂಥವರನ್ನು ಕಳೆದುಕೊಂಡಿರುವುದು ಕಾಂಗ್ರೆಸ್‌ ಪಾಲಿಗೆ ನಷ್ಟ. ಅದನ್ನು ಸರಿಪಡಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.


                                                                                               -ಟಿ.ಕೆ.ತ್ಯಾಗರಾಜ್