ವಿರಾಟ್ ಶಕೆಯ ಒಂದು ದಶಕ

ಜೂನಿಯರ್ ವಿಶ್ವ ಕಪ್ ಅನ್ನು ಗೆದ್ದ ವರ್ಷದಲ್ಲೇ (2008) ವಿರಾಟ್ ಏಕದಿನದ ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಪಾದರ್ಪಣೆ ಮಾಡಿದರು. 2011 ರಲ್ಲಿ ಭಾರತ ಗೆದ್ದ ವಿಶ್ವ ಕಪ್ ಫೈನಲ್ ನಲ್ಲಿ ಅವರ ಕೊಡುಗೆ ಅಮೂಲ್ಯವಾಗಿತ್ತು.  ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ನೆರಳಿನಲ್ಲಿ ಬೆಳೆದ ವಿರಾಟ್ ಅಂದಿನಿಂದ ಇಂದಿನವರೆಗೂ ತಮ್ಮ ಬ್ಯಾಟಿಂಗ್ ನ ತೀವ್ರತೆಯನ್ನು ಕಳೆದುಕೊಂಡಿಲ್ಲ.

ವಿರಾಟ್ ಶಕೆಯ ಒಂದು ದಶಕ

ಹೊಸವರ್ಷದ ಆಗಮನವನ್ನು ಸಂಭ್ರಮಿಸಲು ಅರ್ಹತೆ ಗಳಿಸಿಕೊಳ್ಳಬೇಕು. ಪೂರೈಸುತ್ತಿರುವ ವರ್ಷವನ್ನು ಸಮರ್ಥವಾಗಿ ಕಳೆದು ಸಾಧನೆ ಮಾಡಿದವರಿಗಷ್ಟೆ ಹೊಸವರ್ಷದ ಹೊಸ್ತಿಲಲ್ಲಿ ಆಚರಣೆ ಮಾಡುವ ನೈತಿಕ ಹಕ್ಕಿರುವುದು. ಅಂತಹ ಹಕ್ಕನ್ನು ಭಾರತದ ಕ್ರಿಕೆಟ್ ತಂಡ ಗಳಿಸಿಕೊಂಡಿದೆ. ವಿಶೇಷವಾಗಿ ತಂಡದ ನಾಯಕ ವಿರಾಟ್ ಕೊಹ್ಲಿ ಆ ಹಕ್ಕು ತನಗೆ ಆಜನ್ಮಸಿದ್ಧವಾಗಿ ಬಂದಿದೆ ಎಂಬ ರೀತಿಯಲ್ಲಿ ಸಾಧನೆಗೈದಿದ್ದಾರೆ. ಆ ಸಾಧನೆಯತ್ತ ಪಕ್ಷಿನೋಟ ಬೀರಿದರೂ ಸಾಕು, ವಿರಾಟ್ ಹೊಸವರ್ಷದ ಸಡಗರವನ್ನು ಜನವರಿ ಒಂದರ ನಸುಕಿನವರೆಗೆ ಮುಂದುವರೆಸಿದರೂ ನಮಗಾರಿಗೂ ಅದರ ಬಗ್ಗೆ ಅಭ್ಯಂತರವಿಲ್ಲ ಅನಿಸುತ್ತದೆ. ಅವರ ಸಾಧನೆ ಕೊನೆಗೊಳ್ಳುತ್ತಿರುವ ವರ್ಷಕ್ಕೆ ಸೀಮಿತವಾಗಿಲ್ಲ; ಕಳೆದ ದಶಕದುದ್ದಕ್ಕೂ ಹರಡಿಕೊಂಡಿದೆ. ಅದನ್ನು ಅಭಿನಂದಿಸಿ ಐಸಿಸಿ ವಿರಾಟ್ ರ ಚಿತ್ರವನ್ನು ಟ್ವೀಟ್ ಮೂಲಕ ಬಿಡುಗಡೆ ಮಾಡಿ ಅವರ ದಶಕದ ಸಾಧನೆಯ ಪಟ್ಟಿಯನ್ನು ಅಂಕಿ-ಅಂಶಗಳಲ್ಲಿ ದಾಖಲಿಸಿದೆ.

ಏಕದಿನದ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿದ್ದ್ದು – 11125,ಅತಿಹೆಚ್ಚು ಶತಕಗಳು - 42  ,ಅತಿಹೆಚ್ಚು ಅರ್ಧ ಶತಕಗಳು – 52,ಅತಿಹೆಚ್ಚು ಪಂದ್ಯ ಪುರುಷೋತ್ತಮ ಪ್ರಶಸ್ತಿ – 35,ಅತಿಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ – 7,ಅತಿಹೆಚ್ಚು ಬೌಂಡರಿ – 1038, ಅತಿಹೆಚ್ಚು ಕ್ಯಾಚ್ – 117, ಅತಿಹೆಚ್ಚು ಮ್ಯಾಚ್ – 227. ಪ್ರತಿಸ್ಪರ್ಧಿಗಳ ಕಣ್ಣುಕೆಂಪು ಮಾಡುವಂತಹ ಈ ಸಾಧನೆಯ ಮೂಲಕ ವಿರಾಟ್ ಅವರೆಲ್ಲರನ್ನೂ ಬೃಹತ್ ಅಂತರದಿಂದ ಹಿಮ್ಮೆಟ್ಟಿದ್ದಾರೆ.

ಈಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಜಯ ಸಾಧಿಸಿದ ನಂತರದಲ್ಲಿ ಬಿಡುಗಡೆಯಾದ ಐಸಿಸಿ ಬ್ಯಾಟಿಂಗ್ ರಾಂಕಿಂಗ್ ನಲ್ಲಿ   928 ಅಂಕಗಳನ್ನು ಪಡೆದು ವಿರಾಟ್ ಅಗ್ರಸ್ಥಾನದಲ್ಲಿ ವಿಜೃಂಭಿಸುತ್ತಿದ್ದಾರೆ. ಅಷ್ಟೇ ಪ್ರಬಲ ಬ್ಯಾಟ್ಸ್ ಮನ್ದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ರನ್ನು 17 ಅಂಕಗಳಿಂದ ಹಿಂದೆ ಹಾಕಿದ್ದಾರೆ.

ಈಗಷ್ಟೇ ಬಿಡುಗಡೆಯಾದ ವಿಸ್ಡ್ನನ್ ವಿಶ್ವ ಟೆಸ್ಟ್ ಕ್ರಿಕೆಟ್ ತಂಡದಲ್ಲಿರುವ ಏಕೈಕ ಭಾರತೀಯ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಯ ಗರಿಯೂ ವಿರಾಟ್ ರ ಕಿರೀಟ ಸೇರಿದೆ. (ಮತ್ತೊಬ್ಬನೇ ಒಬ್ಬ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್.)

ವಿಂಡೀಸ್ ವಿರುದ್ಧ ಮೂರು ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಆರಂಭಿಕರಾದ ಲೋಕೇಶ್ ರಾಹುಲ್ ಮತ್ತು ರೋಹಿತ್ ಶರ್ಮಾ ಹಾಕಿದ ಭದ್ರ ಅಡಿಪಾಯದ ಮೇಲೆ ಕಟ್ಟಡವನ್ನು ಲಿಂಟೆಲ್ ವರೆಗೆ ಎಬ್ಬಿಸಿ ತಾರಸಿ ಹಾಕುವ ವೇಳೆಗೆ ಔಟಾದರು. ತಾರಸಿ ಕೆಲಸವನ್ನು ರವೀಂದ್ರ ಜಡೇಜಾ ಮತ್ತು ಶಾರ್ದುಲ್ ಠಾಕೂರ್ ಮುಗಿಸಿ ಮತ್ತೆ ಬಲಿಷ್ಠವಾಗುತ್ತಿರುವ ವಿಂಡೀಸ್ ತಂಡವನ್ನು ಮಣಿಸಿದರು. ಗೆದ್ದೇ ಗೆಲ್ಲುವೆನೆಂಬ ಧೃಡ ನಿಶ್ಚಯ ಅವರದ್ದಾಗಿತ್ತು.

ವರ್ಷಗಳ ಹಿಂದೆ ಭಾರತ ತಂಡ ಮೊದಲು ಬ್ಯಾಟ್ ಮಾಡಿದರಷ್ಟೇ ಗೆಲ್ಲುವ ಸಾಧ್ಯತೆ ಇರುವುದು, ದೊಡ್ಡ ಮೊತ್ತವನ್ನು ಬೆನ್ನತ್ತಿ ಹೋಗುವ ಸಾಮರ್ಥ್ಯ ಅದಕ್ಕಿಲ್ಲ ಎಂಬ ಪ್ರತೀತಿಯಿತ್ತು. ಕಳೆದ ಕೆಲವು ವರ್ಷಗಳಲ್ಲಿ  ಅಭಿಪ್ರಾಯ ಬದಲಾಗಿದೆ. ಈ ಪರಿವರ್ತನೆಗೆ ಹಿಂದಿನ ನಾಯಕರಾದ ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಆಕ್ರಮಣಕಾರಿ ನಿಲುವು. ಸೌರವ್ ಭಾರತ ತಂಡದ ಅತ್ಯಂತ ಸಮರ್ಥ ನಾಯಕನೆಂಬುದು ನಿರ್ವಿವಾದ.

ಏಕದಿನದ ಪಂದ್ಯಗಳಿಗೆ ಮುನ್ನ ನಡೆದ ಟಿ-20 ಸರಣಿಯ ಮೊದಲ ಹಾಗೂ ಮೂರನೆಯ ಪಂದ್ಯಗಳಲ್ಲಿ ವಿರಾಟ್ ಮಿಂಚಿದರು. ಮೊದಲನೆಯ ಪಂದ್ಯದಲ್ಲಿ ಭಾರತ ಸೋಲುಂಡಿತಾದರೂ ವಿರಾಟ್ ತಮ್ಮ ಜೀವನದ ಅತ್ಯಧಿಕ ಸ್ಕೋರ್ ಆದ ಅಜೇಯ 94 (50 ಎಸೆತಗಳಲ್ಲಿ)  ಗಳಿಸಿದರು.  ಕೊನೆಯ ಪಂದ್ಯದಲ್ಲಂತೂ ಮೈಮೇಲೆ ಕ್ರಿಕೆಟ್ ದೇವತೆ ಆವಾಹನೆಯಾದಂತೆ ಚೆಂಡನ್ನು ಬಡಿದು ಕೇವಲ 29 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗದೇ ಉಳಿದರು. ಭಾರತ ಪಂದ್ಯವನ್ನೂ, ಸರಣಿಯನ್ನೂ ತನ್ನದಾಗಿಸಿಕೊಂಡಿತು.

ಮೊನ್ನೆ ತಾನೇ ವಿರಾಟ್ ಹೇಳಿದ್ದು ತಾವು ಕ್ರಿಕೆಟ್ ನ ಮೂರು ಆವಿಷ್ಕಾರಗಳಲ್ಲಿ ಯಾವುದೇ ಒಂದರಲ್ಲಿ ಪರಿಣತಿ ಹೊಂದಿದವನೆಂದು ಗುರುತಿಸಿಕೊಂಡಿಲ್ಲ ಎಂದು. ಪ್ರೇಕ್ಷಕರಿಗೆ/ವೀಕ್ಷಕರಿಗೆ ಮನರಂಜನೆ ಒದಗಿಸುವುದು ತನ್ನ ಉದ್ದೇಶವಲ್ಲ, ತನ್ನ ಗುರಿಯೇನಿದ್ದರೂ ತಂಡಕ್ಕೆ ತನ್ನ ಕೈಲಾದಷ್ಟು ನೀಡುವುದು ಎಂದು ತಿಳಿಸಿದರು. ಹಾಗಾಗಿ ತಮ್ಮ ಆಟದಲ್ಲಿ ಯಾವುದೇ ಬದಲಾವಣೆ ತಂದುಕೊಳ್ಳಬೇಕೆಂದು ತಮಗೆ ಕಂಡುಬಂದಿಲ್ಲ ಎಂದರು.

ವಾಂಖೆಡೆ ಮೈದಾನದಲ್ಲಿ ಅವರು ಹೊಡೆದ 70 ರನ್ ಗಳಲ್ಲಿ 7 ಸಿಕ್ಸರ್ ಗಳಿದ್ದವು. ಆ ಇತ್ತೀಚಿನ ಒಂದು ಉದಾಹರಣೆಯೇ ಸಾಕು ವಿರಾಟ್ ಚೆಂಡನ್ನು ಎಲ್ಲಿಬೇಕಾದರೂ ಅಟ್ಟಬಹುದಾದ ಸಾಮರ್ಥ್ಯವುಳ್ಳ ಬ್ಯಾಟ್ಸ್ ಮನ್ ಎಂದು. ಬ್ಯಾಟಿಂಗ್ ನ ಸರಳ ತತ್ವ ಏನೆಂದರೆ ಕ್ರೀಸ್ ಬಳಿ ಹೆಚ್ಚುಹೊತ್ತು ನಿಲ್ಲುವ ಬ್ಯಾಟ್ಸ್ ಮನ್ ಆಗಬೇಕಾದರೆ ಗಾಳಿಯಲ್ಲಿ ಚೆಂಡನ್ನು ಬಾರಿಸಬಾರದು. ಹಾಗಾಗಿ ವಿರಾಟ್ ವಿಷಯದಲ್ಲಿ ಅದು ಆಯ್ಕೆಯ ಪ್ರಶ್ನೆ, ಸಾಮರ್ಥ್ಯದ ಪ್ರಶ್ನೆಯಲ್ಲ. ಹೆಚ್ಚು ಹೊತ್ತು ನಿಂತು ತಂಡವನ್ನು ಸುಭದ್ರತೆಯ ದಡ ಮುಟ್ಟಿಸುವುದು ಅವರ ಗುರಿ. ಅಷ್ಟಾಗ್ಯೂ ಕ್ರಿಕೆಟ್ ಆಟದ ಮೂರೂ  ಅವಿಷ್ಕಾರಗಳಲ್ಲಿ ಅವರ ಸರಾಸರಿ ರನ್ ಗಳಿಕೆ 50 ನ್ನು ಮೀರಿದೆ.

ಜೂನಿಯರ್ ವಿಶ್ವ ಕಪ್ ನ್ನು ಗೆದ್ದ ವರ್ಷದಲ್ಲೇ (2008) ವಿರಾಟ್ ಏಕದಿನದ ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಪಾದರ್ಪಣೆ ಮಾಡಿದರು. 2011 ರಲ್ಲಿ ಭಾರತ ಗೆದ್ದ ವಿಶ್ವ ಕಪ್ ಫೈನಲ್ ನಲ್ಲಿ ಅವರ ಕೊಡುಗೆ ಅಮೂಲ್ಯವಾಗಿತ್ತು.  ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ನೆರಳಿನಲ್ಲಿ ಬೆಳೆದ ವಿರಾಟ್ ಅಂದಿನಿಂದ ಇಂದಿನವರೆಗೂ ತಮ್ಮ ಬ್ಯಾಟಿಂಗ್ ನ ತೀವ್ರತೆಯನ್ನು ಕಳೆದುಕೊಂಡಿಲ್ಲ.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂರೂ ಆವಿಷ್ಕಾರಗಳಲ್ಲಿ ಬೇರೂರಲು ವಿರಾಟ್ ಎರಡು-ಮೂರು ವರ್ಷ ತೆಗೆದುಕೊಂಡರು. ಆದರೆ ಆ ಬೇರುಗಳು ಅಲುಗಾಡಷ್ಟು ಭದ್ರವಾಗಿವೆ. ಅವರು ಆಡುವ ಪ್ರತಿಯೊಂದು ಪಂದ್ಯದಲ್ಲೂ ಸಚಿನ್ ರ ದಾಖಲೆಯನ್ನು ಮುರಿಯುತ್ತಾರೆ ಅಥವಾ ಮುರಿಯುವತ್ತ ದಾಪುಗಾಲು ಹಾಕುತ್ತಾರೆ ಅನ್ನುವಷ್ಟು ಸಾಮರ್ಥ್ಯ ಹೊಂದಿರುವ ವಿರಾಟ್ ಗೆ ಕಳೆದ ವರ್ಷ ಮುಖ್ಯವಾದದ್ದು. ವಿಶ್ವ ಕಪ್ ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಒಂದು ಅಪವಾದ ಬಿಟ್ಟರೆ ವಿರಾಟ್ ಭಾರತ ತಂಡವನ್ನು ಬಲಿಷ್ಠಗೊಳಿಸುತ್ತಲೇ ಬಂದಿದ್ದಾರೆ. ತಂಡದ ಮುನ್ನಡೆಗೆ ಸದ್ಯಕ್ಕಂತೂ ಯಾವುದೇ ಅಡೆತಡೆಗಳು ಕಾಣುತ್ತಿಲ್ಲ.

ಏಕದಿನ ತಂಡದ ರಚನೆಯಲ್ಲಿ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ ಮನ್ ಸ್ಥಾನಕ್ಕೆ ನಡೆದಿದ್ದ ಹುಡುಕಾಟ ಶ್ರೇಯಸ್ ಅಯ್ಯರ್ ಅಂತ್ಯಗೊಳಿಸಿದ್ದಾರೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ, ಭಾರತ ಪಾರಂಪರಿಕವಾಗಿ ಸ್ಪಿನ್ನರ್ಗಳನ್ನು ಅವಲಂಬಿಸಿತ್ತು. ಮೊದಲ ಬಾರಿಗೆ, ಆ ಅವಲಂಬನೆಯಲ್ಲಿ ಸ್ಥಿತ್ಯಂತರ ಕಂಡುಬಂದಿದ್ದು ಜಗತ್ತಿನ ಯಾವುದೇ ಮೈದಾನದಲ್ಲಿ, ಯಾವುದೇ ವಾತಾವರಣದಲ್ಲಿ ಎದುರಾಳಿ ತಂಡದ ಹತ್ತು ವಿಕೆಟ್ ಗಳನ್ನು ಎರಡೂ ಇನ್ನಿಂಗ್ಸ್ ನಲ್ಲಿ ಕಬಳಿಸಬಲ್ಲ ಸಾಮರ್ಥ್ಯವನ್ನು ನಮ್ಮ ವೇಗಿಗಳು ಮೆರೆದಿದ್ದಾರೆ. ಅತ್ತಕಡೆ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡದ ಹತ್ತು ವಿಕೆಟ್ಗಳನ್ನು ಕೀಳುವುದಕ್ಕೆ ಹೆಸರುವಾಸಿ ಬೌಲರ್ ಗಳೂ ಪರದಾಡಿದ್ದಾರೆ. ವಿಜಯೀ ಮನಃಸ್ಥಿತಿ ತಂಡವನ್ನಾವರಿಸಿಕೊಂಡಿದೆ. ಅದಕ್ಕೆ ನಾಯಕ ವಿರಾಟ್ ಕೊಹ್ಲಿಯ ಕೊಡುಗೆ ಅಪಾರ. ಮಾಡು ಇಲ್ಲವೇ ಮಡಿ ಎಂಬ ಆತನ ಸೈನಿಕನ ಮನೋಭಾವ ತಂಡದ ವಿಜಯಯಾತ್ರೆಗೆ ಮುಖ್ಯ ಕಾರಣವಾಗಿದೆ.

ಸತತವಾಗಿ ನಾಲ್ಕನೇ ಬಾರಿಗೆ ಒಂದು ವರ್ಷದಲ್ಲಿ 2000+ ರನ್ ಗಳಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆ ಅವರ ಪಾಲಾಗಿರುವುದು ಆಕಸ್ಮಿಕವಲ್ಲ.

ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ನ ತಂಡದ ಪರವಾಗಿ ವಿರಾಟ್ 2016 ರಲ್ಲಿ ಪೇರಿಸಿದ 973 ರನ್ಗಳನ್ನು ಯಾವುದೇ ಬ್ಯಾಟ್ಸ್ ಮನ್ ಐಪಿಎಲ್ನಲ್ಲಿ  ಒಂದು ಆವೃತ್ತಿಯಲ್ಲಿ ಮೀರಿಸಲಾಗಿಲ್ಲ. ರಾಯಲ್ ಚಾಲೆಂಜರ್ಸ್ ನ ನಾಯಕನಾಗಿ ವಿರಾಟ್ ತನ್ನ ತಂಡಕ್ಕೆ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿಲ್ಲ ಅನ್ನುವ ಕೊರಗು ಅವರಿಗೂ, ಆರ್ ಸಿ ಬಿ ಅಭಿಮಾನಿಗಳಿಗೂ ಇದೆ. ಒಂದೇ ಫ್ರ್ಯಾಂಚೈಸೀಯಲ್ಲಿ ಉಳಿಸಿಕೊಳ್ಳಲ್ಪಟ್ಟ ಏಕೈಕ ಆಟಗಾರ ವಿರಾಟ್ ಎಂಬ ಅಂಶವನ್ನು ಗಮನಿಸಿದಾಗ ಅವರ ಮಹತ್ವದ ಮರುಪರಿಚಯವಾಗುತ್ತದೆ.

ಸದ್ಯದಲ್ಲೇ ಎದುರಾಗುವ ಹೊಸವರ್ಷದ ಆರಂಭದಲ್ಲೇ ಆಡಲಾಗುವ  ಶ್ರೀಲಂಕಾ ವಿರುದ್ಧದ ಮೂರು  ಟಿ-20 ಪಂದ್ಯಗಳಲ್ಲೂ, ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನದ ಪಂದ್ಯಗಳಲ್ಲೂ, ಆ ನಂತರದಲ್ಲಿ ನಡೆಯುವ ಐಪಿಲ್ ಪಂದ್ಯಾವಳಿಯಲ್ಲೂ ವಿರಾಟ್ ತನ್ನ ಬೆರಗನ್ನು ಮುಂದುವರಿಸುತ್ತಲೇ ತನ್ನ ತಂಡಗಳಿಗೆ ವಿಜಯಮಾಲೆ ದೊರಕಿಸಲೆಂದು ಹಾರೈಸೋಣ. (ಅದಕ್ಕೆ ಮುನ್ನ ಭಾರತ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ).