'ಹೊಟ್ಟಿಗೆ ಹಿಟ್ಟಿಲ್ಲಾ... ಇನ್ನ ಜುಟ್ಟಿಗೆ ಮಲ್ಗಿ ಹೂ ಎಲ್ಲಿಂದಾ ತರೋದ್ರೀ'

"ಕೇಂದ್ರದಾಗೂ ನಾವ್ ಅದವೀ... ರಾಜ್ಯದಾಗ ನಾವ್ ಅದವೀ ಕೇಂದ್ರದಿಂದಾ ರಾಶಿಗಟ್ಲೆ ರೊಕ್ಕಾ ತಂದು ಪ್ರವಾಹದಿಂದಾ ತೊಂದ್ರಿ ಆಗಿರೋ ಜನ್ರಿಗೆ ಮನಿ ಕಟ್ಟಿಸಿಕೊಡ್ತವಿ, ಮಠಾ ಕಟ್ಸಿಕೊಡ್ತವಿ, ಬೆಳಿ ಪರಿಹಾರ ಕೊಡ್ತವಿ ಅಂತ್ ಹೊಯಕೊಂಡಿದ್ರಿಲ್ಲ... ಈ ಪ್ಯಾಂಟ್ ಲೆಸ್ ಪಕ್ಷದವ್ರು. "ಈ ಪಕ್ಷದ ಸಿಎಂ ಯಡೆಯೂರ್ಸಪ್ಪ ಈಗ ನೋಡಿದ್ರ ಖಜಾನಿ ಖಾಲಿ ಆಗೇತಿ, ರೊಕ್ಕಾ ಇಲ್ಲಾ ಅಂತ್ ಎರ್ಡು ಕೈ ಎತ್ತೇತಿ"

'ಹೊಟ್ಟಿಗೆ ಹಿಟ್ಟಿಲ್ಲಾ... ಇನ್ನ ಜುಟ್ಟಿಗೆ ಮಲ್ಗಿ ಹೂ ಎಲ್ಲಿಂದಾ ತರೋದ್ರೀ'

ಯಾಕೋ ಬಸಣ್ಣಾ....ಹಿಂಗ್ಯಾಕ್ ಕುಂತೀ..!, ಎಲ್ಲೆಂತ್ ಹುಡ್ಕೋದು ನಿನ್ನ....?. ಮೊನ್ನಿಂದಾ ಮೊಬೈಲ್ಗೂ ಸಿಗವಲ್ಲಿ... ಮನಿಗೆ ಹೇಳಿ ಕಳ್ಸಿದ್ರು ಬರವಲ್ಲೀ...ಎಲ್ಲೆ ಹಾಳಾಗಿ ಹೋಗಿದ್ಯೋ...?.

ನಾ ...ಎಲ್ಲೆ ಹಾಳಾಗಿ ಹೋಗ್ಲಿ ಕಾಕಾ, ಮತ್ತ "ಮಳಿ ಸುರವಾಗಿದ್ದಕ್ ಕೈಗೆ ಬಂದ್ ಗೋಂಜಾಳದ ಬೆಳೆ ಹಾಳಾಗಿ ಹೋತು"!. "ಎರ್ಡ ಸಲಾ ಬಿತ್ತಿದ ಗೋಂಜಾಳಾನ ಮುರ್ದು ಮತ್ತ ಬಿತ್ತಿ ಗೋಂಜಾಳದ  ಬೆಳಿನ ಬೆಳ್ದಿದ್ದೆ", "ಇದ್ದಿದ್ರಾಗ ಚೊಲೋ ಇತ್ರೀ ಬೆಳಿ"!. "ಗೇಣುದ್ದಾ ಗೊಂಜಾಳದ ತೆನಿ ಬೆಳ್ದಿದ್ವು" "ಇನ್ನೊಂದ್‍ವಾರ ಹೋಗಿದ್ರ ತೆನಿ ಮುರ್ಸತಿದ್ದೇ", "ಅಷ್ಟರಾಗ ಮತ್ತ ಸುರವಿಟಗಂಡಿದ್ದ ಈ ಮಳೆ ಬಿಡವಲ್ದ ನೋಡ್ರೀ"....! "ಗೋಂಜಾಳದ ತೆನಿ ದಂಟಿನ್ಯಾಗ ಮೆಳ್ಕಿ ಒಡ್ದಾವು"... "ಅದ್ಕ ಬ್ಯಾಜಾರಾಗಿ ಹೊಳಿಕಡಿಗೆ ಹೋಗಿದ್ದೆ ನೋಡ್ರೀ"?.

"ಆನಿಗೆ ಆನಿನ್ ಹೋದ ಹೊತ್ತಿನ್ಯಾಗ ಬಾಲಕ್ ಬಡದಾಡಿದ್ರಂತ್" ಅಲ್ಲೋ "ಹೋದ ತಿಂಗ್ಳ ಸುರ್ದ ಮಳಿಗೆ ಎಲ್ಲಾ ಬೆಳಿನೂ ಕೊಚಿಗೆಂಡ ಹೋಗ್ಯಾವು"!, "ಜೀವಾ ಉಳದ್ರ ಸಾಕು ಅನ್ನೋ ಹೊತ್ತಿನ್ಯಾಗ್ ಇವಂಗ್ ಗೊಂಜಾಳದ ಚಿಂತಿ"..!  ನಾ.... ನೋಡು ಹೆಂಗ್ಯ ಅದನೀ...., "ಇಪ್ಪತ್ತೇಕ್ರೆ ಗೋಂಜಾಳ", "ಆರ್ಎಕ್ರೆ ಕಬ್ಬು", "ಐದ್‍ಎಕ್ರೆ ಭತ್ತ", "ಒಂದ್‍ಎಕ್ರೆ ಹಾಗ್ಲ" "ಎಲ್ಲಾನು ಹಾಳಾಗಿ ಹೋಗ್ಯಾವು..? ಆದ್ರು ಏನು ಆಗಲಿಲ್ಲದಂಗ್ ಅದನೀ ನೋಡು..!. ದೊಡ್ಡಮಳಿ ಬಂದ್ ಬೆಳಿ ಹಾಳಾಗಿ ಹೋದ್ರು ನಾವು ಆತ್ಮಸ್ಥೆರ್ಯಾ ಕಳ್ಕೋಬಾರ್ದೋ?, ಮನ್ಸ್ನ ಕಲ್ಲು ಮಾಡ್ಕೋ ಬೇಕು.".!.

ನಿಮ್ಮದೇನ್ರೀ... "ಹಿರೇರು ಮಾಡಿಟ್ಟ ಹೆಪ್ಪು ಹಂಗ್ ಐತಿ!, ಅದು ಎಷ್ಟ ವರ್ಷಾದ್ರು ಕರ್ಗಂಗಿಲಾ"್ಲ!. ನಾ ಬಡ್ವಾ ಅದೇನ್ರೀ ಕಾಕಾ!. "ದುಡಿ ಬೇಕು, ಮನಿ ನಡಿಬೇಕು"!, "ಹೋದವರ್ಷ ನಿಮ್ಮ ಹೊಲ್ದಾಂಗಿನ ಬೋರ್ನಿಂದ್ ನೀರು ಕಡಾ ತಗೊಂಡು ಬ್ಯಾಸ್ಗಿಗೆ  ಹತ್ತಿ ಬೆಳ್ದಿದ್ದೆ". ಹತ್ತಿ ಹೆಂಗೂ ಕೈಹಿಡ್ದಿತ್ತು..!. "ಆದ್ರ ಈ ವರ್ಷ ಹೆಚ್ಚಿಗೆ ಲಾವಣಿ ಕೊಟ್ಟು ಆರ್ಎಕ್ರೆ ಹೋಲಾನ ಹಾಕ್ಕೊಂಡಿದ್ದೆ". "ಹಾಳಾದ್ದ ಈ ಮಳಿ ಹೆಚ್ಗಿ ಆಗಿ ಎಲ್ಲಾನೂ ನೀರಾಗ್ ಹೋಮಾ ಮಾಡ್ದಂಗ್ ಆಗೇತಿ ನೋಡ್ರೀ"..?.

ಹೋಗ್ಲಿ ಬಾರೋ...., "ಈ ವರ್ಷ ಬೆಳೆ ಹೋದ್ರ ಏನಾತು, ಹೆಂಗೂ ಮಳಿಂದಾ ಬೋರ್‍ವೆಲ್   ಭರ್ತಿ ಆಗ್ಯಾವು? ಬ್ಯಾಸ್ಗಿಗೆ ಒಳ್ಳೆ ನೀರಾವರಿ ಬೆಳಿ ಬರ್ತಾವು...ಬಾ". "ಮಳಿ ಬಂದ್ರ ಕೇಡಲ್ಲಾ... ಮನಿ ಮಗಾ ಉಂಡ್ರ ಕೇಡಲ್ಲಾ... ಅನ್ನೋ ಗಾದಿ ಮಾತ ಕೇಳಿ ಇಲ್ಲ....!. "ಬೆಳಿ ಹೋದ್ರೇನಾತೋ , ನಂಬಿದೋರ್ನ ಭೂಮಿ ತಾಯಿ ಕೈಬಿಡೋದಿಲ್ಲ" "ಬ್ಯಾಸ್ಗಿಗೆ ಒಳ್ಳೆಪೀಕ್ ಬೆಳಿವಂತಿ..., ಹೌದು ಹೊಳಿಕಡಿಗೆ ಯಾಕ ಹೋಗಿದ್ದೀ"...?.

ನೀವು ಅನಕೊಂಡಂಗ್ ಏನೂ ಇಲ್ರೀ ಕಾಕಾ!. "ಹೊಚ್ಚ ಹೊಳಿ ತುಂಬಿ ಎಲ್ಲಾನು ಕೊಚ್ಚಿಗೊಂಡು ಸುಮ್ನ ಹರಿತೈತಿ"?,  "ಆ ಹೊಳಿ ನೀರು ನನ್ಗ ನನ್ನಂತಾ ಸಾವಿರಾರ್ ಜನ್ರು ಕಣ್ಣೀರು ಕಂಡಂಗಾತು ನೋಡ್ರೀ"!. "ಹೊಳಿ ಹರೆದನ್ನ ನೋಡ್ಕೋತ ಹೊತ್ತ ಹೋಗಿದ್ದು ತಿಳಿಲಿಲ್ಲಾ, ಕತ್ಲಾಗಿಂದಾ ಮನಿಗೆ ಬಂದೆ" ಹಿಂಗಾಗಿ ನಿಮ್ಮನ್ನ ಕಾಣಾಕ ಆಗಲಿಲ್ಲ ನೋಡ್ರೀ.

ಹೌದು.. ಇವತ್ತಿಂದು ಸರಿ, ಎರ್ಡದಿನಾ ಎಲ್ಗೇ ಹೋಗಿದ್ದೀ...?.

"ಸಾಲಗಾರರ ಕಾಟ ಬಳಾಗಿತ್ರೀ"!, "ಮನ್ಯಾಗ ಹೆಣ್ಮಕ್ಕಳ್ ತಾಳಿಸರಾ", "ಬಿಗ್ರು ಕೊಟ್ಟಿದ್ದ ಉಂಗ್ರಾ, "ಚೈನ್‍ಸರಾ", "ಬೆಂಡಾಲಿ", "ಮಗ್ಳ ಚೈನು", "ಬುಗುಡಿ", "ವಾಲಿ" ಎಲ್ಲಾನು ಬ್ಯಾಂಕಿನ್ಯಾಗ ಒತ್ತಿ ಇಟ್ಟು ಸಾಲ ತಗೊಂಡಿದ್ದೆ!. "ಸುವರ್ಣಾ ಬ್ಯಾಂಕಿನವ್ರು ನೀವು ತಗೊಂಡಿರೋ ಸಾಲ ಕಟ್ಟಲಿಲ್ಲಾಂದ್ರ ನೀವು ಒತ್ತಿ ಇಟ್ಟ ಬಂಗಾರದ ಆಬರ್ಣಗಳನ್ನ ಹರಾಜ್ ಮಾಡ್ತವಿ ಅಂತ್ ನೋಟಿಸ್ ಕೊಟ್ಟಿದ್ರು". "ಅದ್ಕ ಅವ್ರು ಸಾಲ ತೀರ್ಸಾಕ್ ಅಂತ್ ಮಾವಾರ  ಊರ್ಗೆ ಕೈಗಡಾ ಸಾಲಾ ಕೇಳಾಕ್ ಅಂತ್ ಮೊನ್ನೆ ಬಾಗಲಕೋಟಿಗೆ ಹೋಗಿದ್ದೆ.., "ಪಾಪಾ ಅವ್ರ ಸ್ಥಿತಿ ನೋಡಿ ಸಾಲ ಕೇಳಾಕ್ ಮನ್ಸ್ ಬರ್ಲಿಲ್ಲ್ರೀ".. "ಅವುಕ್ ಇರಾಕ ಮನಿ ಇಲ್ಲಾ", "ಉಣ್ಣಾಕ ಜ್ವಾಳಾ ಇಲ್ಲಾ..., "ಉಟ್ಟ ಬಟ್ಟಿಮ್ಯಾಗ ಮನಿ-ಮಠ ಬಿಟ್ಟೂ ತಗ್ಡಿನ ಶೆಡ್ಡಿನ್ಯಾಗ್ ಮಕ್ಳು-ಮರಿ ಅದಾವು"!. "ಅವ್ನ ನೋಡಾಕ್ ಬರಿಗೈಯಾಗ ಹೋಗಬಾರ್ದು ಅಂತ್ ಬ್ರೆಡ್-ಬಿಸ್ಕಿಟ್ ತಗೊಂಡು ಹೋಗಿದ್ದೆ, ಮಕ್ಳು ಅವ್ನ ಗಬದಾಡಿಕೊಂಡು ತಿಂದ್ವು ನೋಡ್ರೀ". "ಅವ್ರ ಸ್ಥಿತಿ ನೋಡಿ ಸಾಲಾ ಕೇಳ್ದ ಹಂಗ್ ಊರ್ಗೆ ವಾಪಾಸ ಬಂದೆ ನೋಡ್ರೀ"..!

ಅಲ್ಲೋ... "ಈ ಸರ್ಕಾದವ್ರು ಮನಿ ಬಿದ್ದವ್ರಿಗೆ ಹತ್ತತ್ತ ಸಾವ್ರಾ ಕೊಟ್ಟಾರಂತಲ್ಲೋ"...! "ಆ ರೊಕ್ಕ ಅವ್ರಿಗೆ ಇನ್ನು ಬಂದಿಲ್ಲನೂ"...?. 

"ಎಲ್ಲೆ ಬರ್ತಾವ್ರೀ ರೊಕ್ಕಾ!, ರೊಕ್ಕಕ್ ಕೈಯ್... ಕಾಲ...! ಅವು ನಡ್ಕಂಡ್ ಬರಾಕ್"?. "ಆ ರೊಕ್ಕಕ್ ವಾರಸ್ದಾರ್ ಬ್ಯಾರೆ ಅದಾರ್"!. "ಮನಿ ಕಳ್ಕಂಡೋರ್ಗೆ ಬಿಟ್ಟು ಮನಿ ನೆಟ್ಗ ಇದ್ದವರ್ಗೆ ಚೆಕ್ ಕೊಟ್ಟಾರ್"?. "ಆ ಪಾರ್ಟಿ ಲೀಡರ್ ಹೇಳಬೇಕು!, ಅಂವ್ಗ ಕೈಬೆಚ್ಗ ಮಾಡಿದಮ್ಯಾಕ್ ಅವಾ ಅಧಿಕಾರಿಗಳ್ಗೆ ಹೇಳಿ ಲಿಸ್ಟ್ನ್ಯಾಗ್ ಹೆಸ್ರ ಸೇರ್ಸಾಕ ಹೇಳ್ತಾನ್"! . ಅವ್ರ ಮೂರ್ನಾಕ್ ಸಲಾ ಬಂದ್ "ರೇಷನ್ ಕಾರ್ಡ ಕೊಡ್ರೀ"..."ಆಧಾರ ಕಾರ್ಡ ಕೋಡ್ರೀ", "ಓಟಿನ್ ಕಾರ್ಡ ಕೋಡ್ರೀ"...ಅಂತ್ ನೋರಾ ಎಂಟಸಲಾ ಓಡ್ಯಾಡ್ಸತಾರ್?.

ಮತ್ತ "ಮನಿ ಬಿದ್ದೋರ್ಗೆ ಐದಲಕ್ಷಾ ರೊಕ್ಕಾ ಖರ್ಚಮಾಡಿ ಹೊಸಾ ಮನಿ ಕಟ್ಸಿಕೊಡ್ತವಿ ಅಂತ್ ಸಿಎಂ ಹೇಳಿತ್ತಲ್ಲ"..!.  "ಹೊಸಾ ಮನಿ ಇನ್ನು ಆಗಿಲ್ಲಾ ಹಂಗಾರ್"!. "ಬೆಳೆಪರಿಹಾರ ಎಲ್ಗೆ ಬಂತೋ"...?

"ಇನ್ನು ಪರಿಹಾರ ಸರ್ಕಾರದ ಖಜಾನಿ ಬಿಟ್ಟ ಬರಾಕ ಒಲ್ಲೆ ಅಂತೈತಿ ನೋಡ್ರೀ".....!

ಬಸಣ್ಣಾ "ಕೇಂದ್ರ ಸರ್ಕಾರ ಪ್ರವಾಹ ಬಂದ್ ಎರ್ಡ ತಿಂಗ್ಳಾದಮ್ಯಾಲ್ ಹನ್ನೆರಡನೂರು ಕೋಟಿ ಪರಿಹಾರ ಕೊಟೈತಲ್ಲೋ..!ಇವತ್ತಲ್ಲಾ ನಾಳೆ ಪರಿಹಾರ ಕೊಡ್ತಾರ ಬಿಡೂ"?.

ಕಾಕಾ"ಪರಿಹಾರ ಕೊಡ್ತಾರೋ... ಬಿಡ್ತಾರೋ"..? ಅದು ಬ್ಯಾರೆ ವಿಷ್ಯಾ?. ಆದ್ರ  "ಈ ಪ್ಯಾಂಟ್‍ಲೆಸ್ ಪಕ್ಷದವ್ರು, ಈ ಪ್ಯಾಂಟಮ್ ಪಕ್ಷದವ್ರು ಜನ್ರು ಕಷ್ಟದಾಗ ಇರೋ ಹೊತ್ತಿನ್ಯಾಗ್ ಇಬ್ರು ಏಂತೆಂತಾ ಮಾತಾಡಿದ್ರು ಅಂತಿರೀ!". ಛೇ ...ಛೇ.. ಅವ್ರ ಮಾತನ್ನ ಕೇಳಬ್ಯಾಡ್ದು ನೋಡ್ರೀ.!.

ಹಂಗಂದ್ರ ಹೆಂಗೋ ತಮ್ಮಾ... "ಕೇಂದ್ರದಾಗೂ ನಾವ್ ಅದವೀ... ರಾಜ್ಯದಾಗ ನಾವ್ ಅದವೀ ಕೇಂದ್ರದಿಂದಾ ರಾಶಿಗಟ್ಲೆ ರೊಕ್ಕಾ ತಂದು ಪ್ರವಾಹದಿಂದಾ ತೊಂದ್ರಿ ಆಗಿರೋ ಜನ್ರಿಗೆ ಮನಿ ಕಟ್ಟಿಸಿಕೊಡ್ತವಿ, ಮಠಾ ಕಟ್ಸಿಕೊಡ್ತವಿ, ಬೆಳಿ ಪರಿಹಾರ ಕೊಡ್ತವಿ ಅಂತ್ ಹೊಯಕೊಂಡಿದ್ರಿಲ್ಲ... ಈ ಪ್ಯಾಂಟ್ ಲೆಸ್ ಪಕ್ಷದವ್ರು. "ಈ ಪಕ್ಷದ ಸಿಎಂ ಯಡೆಯೂರ್ಸಪ್ಪ ಈಗ ನೋಡಿದ್ರ ಖಜಾನಿ ಖಾಲಿ ಆಗೇತಿ, ರೊಕ್ಕಾ ಇಲ್ಲಾ ಅಂತ್ ಎರ್ಡು ಕೈ ಎತ್ತೇತಿ" ಅಂತ್..?. "ಇದ್ಕ ಹೊರೆ ಒಕ್ಕಟ್ಟ ಪಕ್ಷದ ಮಾಜಿ ಸಿಎಂ ಕುಮಾರಣ್ಣ , ಪ್ಯಾಂಟಮ್ ಪಕ್ಷದ ಸಿದ್ದ್ರಾಮಣ್ಣ  ನಾವು ಮುಖ್ಯಮಂತ್ರಿಗಳು ಇದ್ದಾಗ ಖಜಾನಿ ತುಂಬಿ ಹೊರ್ಗ ಬಂದವೀ, ಖಜಾನಿ ಒಳ್ಗ ಇದ್ದ ರೊಕ್ಕಾ ಲೂಠಿ ಆಗೇತಿ ಅಂತ್ ಹೇಳ್ಕಿ ನೀಡ್ಯಾರಂತ"?, "ಕುಮಾರಣ್ಣ ಇನ್ನು ಒಂದ್ ಹೆಜ್ಜಿ ಮುಂದ ಹೋಗಿ ಖಾಲಿ ಆಗಿರೋ ಖಜಾನಿ ವಿಜೇಣ್ಣಂದೋ ಸರ್ಕಾರದ್ದೂ ಅಂತ್ ಹೇಳೇತಿ ಅಂತ್". 

ಇವ್ರದ್ದು ಹಿಂಗಾದ್ರ ಈ ಸಿಮ್ಮನ ಪ್ರತಾಪಾ ನೋಡಿದ್ರೆನೂ....! "ಮೋದಿ ಸಾಹೇಬ್ರು ಅಂದ್ರ ಅವ್ರು ದೇವ್ರಸಮಾನ"!, "ಅವ್ರ್ನ ಟೀಕಾ ಮಾಡೋದು ಅಂದ್ರ ತಮ್ಗ ತಾವು ಉಗಳಿಕೊಂಡಂಗ್ ಅಂತ್ ಹೇಳೇತಿ". "ಇನ್ ಮೂರು ಹೊತ್ತು ಮೋದಿ ಭಜ್ನಿ ಮಾಡಿಕೊಂಡು ತಿರ್ಗತಿದ್ದ ಚಕ್ರವರ್ತಿ ಸಂಸದರ್ನ ಟೀಕಾ ಮಾಡ್ದಾ ಅಂತ್ ಅವ್ನ ದೇಶದ್ರೋಹಿ ಅಂತ್ ಹಲ್ಲು ಕಾಕಾ? ಟೀಕಾ ಮಾಡೇತಿ"!. 

"ಅಲ್ಲೋ ಇವು ಮಾತ ಬಂಡವಾಳಾಮಾಡಿಕೊಂಡಿದ್ವು!,  ಈಗ ಅವು ಇವುಕ್ಕ ತಿರ್ಗಾಕಾ ಹತ್ಯಾವು". "ಒಬ್ಬರಿಗೊಬ್ಬರು ಬೇದಾಡ್ಕೊಂಡು ತಿರಗಾಡ್ಲಿ ಬಿಡೂ"!. "ಅಂದಂಗ್ ವಿರೋಧ ಪಕ್ಷದ ನಾಯ್ಕ ಯಾರಾದ್ರೋ?. ಸಿದ್ದ್ರಾಮಣ್ಣ-ಪಾಟೀಲ್ರೂ ದಿಲ್ಲಿಗೆ ಹೋಗಿದ್ರಲ್ಲ ಏನಾತೋ".? 

"ಸೋನಿಯಾ ಮೇಡಂ ಇದ್ರ ಜವಾಬ್ದಾರಿನ ಮೀಸ್ತ್ರಿಗೆ ವಹಿಸ್ಯಾರಂತ್" ಮೀಸ್ತ್ರೀ ಸಾಹೇಬ್ರು ಅದ್ನ ಸರಿಮಾಡ್ತಾರ್ ಬಿಡ್ರೀ.

ಮತ್ತೇನ್ಪಾ ಬಸಣ್ಣಾ ದಸ್ರಾ ಹಬ್ಬ ಜೋರ್...?.

ಎಲ್ಲೆ ಜೋರ ತರ್ತೀರಿ ಕಾಕಾ?. "ಹೊಟ್ಟಿಗೆ ಹಿಟ್ಟಿಲ್ಲಾ... ಇನ್ನ ಜುಟ್ಟಿಗೆ ಮಲ್ಗಿ ಹೂ ಎಲ್ಲಿಂದಾ ತರೋದ್ರೀ". "ಈಸರ್ಕಾದವ್ರಿಗೆ, ಅಧಿಕಾರಿಗಳಿಗೆ ಅತಿವೃಷ್ಠಿ ಅನ್ನೋದು ಮಕ್ಳ ಆಟಾ ಆದಂಗ್ ಆಗೇತಿ?", "ಟಿವ್ಯಾಗ್- ಪೇಪರ್ನ್ಯಾಗ ಮನಿ ಬಿದ್ದೋರಿಗೆ ಹತ್ತಸಾವ್ರಾ ಕೊಟ್ಟೇವಿ ಅಂತ್ ಹೇಳ್ತಾರ"!, "ಆದ್ರ ಇವ್ರು ಕೊಟ್ಟಿದ್ದು ಐದ್ ಸಾವ್ರಾ ನೋಡ್ರೀ"?. "ಇವ್ರು ಕೊಟ್ಟಿದ್ದ ಐದ್ ಸವ್ರಾ ತಗೋಳ್ಳಾಕ ಎರ್ಡ ಜೋಡು ಹರ್ದಾವು". "ಪಾಪ ಮೊನ್ನೆ ಕಾಟೇನಹಳ್ಯಾಗ ಹನಮಂತಪ್ಪ ಪವಾಡಿ ಅನ್ನೋ ರೈತ ದಸ್ರಾ ಹಬ್ಬಾಮಾಡಕಾ ರೊಕ್ಕ ಇಲ್ದಕ ಸಾಲಗಾರರ ಕಾಟಾ ತಡಿಲಾರ್ದ ಹೋಗಿ ಹೊಂಡಕ್ಕ ಹಾರಿ ಆತ್ಮಹತ್ಯಾಮಡಿಕೊಂಡಾನ". ಏನ್ ಮಾಡ್ತೀರಿ... ಎಲ್ಲಾರು ಪರಿಸ್ಥಿತಿ ಹಿಂಗ್ ಅದಾವು. 

ಅದ್ಕ್  ನಾ... ಹೇಳಿದ್ದು, "ಕಷ್ಟಾ ಮನ್ಷಾಗ ಬರ್ದ ಮರಕ್ಕ ಬರ್ತಾವನು" ಅಂತ್. "ಕಷ್ಟ ಬಂದಾಗ ತಾಳ್ಮಿ ವಹಿಸಿ ಎಲ್ಲಾನು ನಿಬಾಯ್ಸಿಬೇಕೋ". 

ಏನ್ ಸಹ್ಸಿಗ್ಯಾಬೇಕೋ ಏನೋ? ನನಗ್ಗಂತು ಒಂದು ಗೊತ್ತಾಗವಲ್ದು ನೋಡ್ರೀ ಕಾಕಾ. ಜೀವ್ನಾ ಸಾಕ-ಸಾಕಗೇತಿ.

ಅಲ್ಲೋ...., ಎಲ್ಲಾ ತಿಳ್ದ ನೀನ ಹಿಂಗ್ ಅಂದ್ರ ಹೇಂಗ್ಯ..? ಕಷ್ಟಾ ಇರೋವ ಬಾ...

ಏನ ಬರ್ತಿರೀ...ಬಿಡ್ರೀ ಇಂತಾ "ಕಷ್ಟದಾಗ ಈಹಬ್ಬ ಬ್ಯಾರೇ...! ಈ ಕಲ್ಲ "ದೇವ್ರಿಗೆ ಪೂಜಾ ಮಾಡಿ, ಹುಗ್ಗಿ-ಹೋಳ್ಗಿ ಎಡಿಮಾಡಿ ಸಾಕಗೇತಿ". ಸಾಕ್ ಬಿಡ್ರೀ ಈ ದೇವ್ರ ಪೂಜಾ ಮಾಡಿದ್ದು?. ಇದ್ರಿಂದ್ ಆಗೋಲಾಭ ಆದ್ರೂ ಏನು ಅಂದ್ರೂ ನಮ್ಮ ಮನ್ಯಾಗ ಕೇಳಂಗಿಲ್ಲ? ದೀಪಾವಳಿ ಹಬ್ಬ ಬ್ಯಾರೇ ಬರಾಕ ಹತ್ತೇತಿ... "ದೀಪಾವಳಿ ಬರದ್ರಾಗ ಒತ್ತಿ ಇಟ್ಟಿದ್ದ ಆಭರ್ಣಾನ ಬಿಡ್ಸಬೇಕೂ!, ಇಲ್ಲಾಂದ್ರ ಮನ್ಯಾಗ ನಮ್ಮಾಕಿಗೆ ಮೈಮ್ಯಾಗ ದೇವ್ರು ಬಂದ್ರು ಬರಬಹ್ದೂ!". ಎಲ್ಲೆರ ಸಾಲ ಕೊಡ್ಸ ನಡ್ರೀ ಕಾಕಾ ಎನ್ನುತ್ತಾ ಬಸಣ್ಣ ಮಾತುಗಳಿಗೆ ವಿರಾಮ ನೀಡಿದ.