ಕನಿಷ್ಠ ಮನುಷ್ಯತ್ವ ಇದ್ದವರ್ಯಾರೆ ಆಗಿದ್ದರೂ ಇಷ್ಟೊತ್ತಿಗೆ ಪರಿಹಾರ ಬಿಡುಗಡೆ ಮಾಡ್ತಿದ್ರು….

ಕನಿಷ್ಠ ಮನುಷ್ಯತ್ವ ಇದ್ದವರ್ಯಾರೆ ಆಗಿದ್ದರೂ ಇಷ್ಟೊತ್ತಿಗೆ ಪರಿಹಾರ ಬಿಡುಗಡೆ ಮಾಡ್ತಿದ್ರು….

ಮೊನ್ನೆ ನಾನು  ಬಾಗಲಕೋಟೆಯ ನನ್ನೂರಿಗೆ ಹೋಗಿದ್ದಾಗ ಹತ್ತಿರದಲ್ಲೇ ಇರುವ, ದವನಾಳ, ಕಲಾದಗಿ, ಯಡಹಳ್ಳಿ, ಸೊಕನಾದಗಿ ಇತ್ಯಾದಿ ಊರುಗಳಿಗೆ ತಿರುಗಾಡಿಕೊಂಡು ಬಂದೆ. ಅಲ್ಲಿನ ದುಸ್ಥಿತಿ ನೋಡಲಿಕ್ಕಾಗದೇ ಎದೆಯೊಳಗೆ ಸಂಕಟ ಮಡುಗಟ್ಟಿತು. ಮೊದಲೇ ನಮ್ಮ ಕಡೆ, ಶೌಚಕ್ಕೆ ಊರ ಮಗ್ಗಲಿನ ಬಯಲಿಗೆ ಹೋಗ್ತಾರೆ. ನೆರೆ ಬಂದ ಮೇಲೆ ಹೊರ ಬಯಲಿನಲ್ಲಿನ ಮಲದ ಗುಪ್ಪೆಗಳು ಊರೋಳಕ್ಕೆ ಪ್ರವೇಶಿಸಿ, ಅಲ್ಲಲ್ಲೆ ನಿಂತು ಊರೆಲ್ಲ ಗಪ್ಪುನಾತ. ಈ ಹೇಲಿನ ಗುಪ್ಪೆಗಳನ್ನೆ ದಾಟಿಕೊಂಡೇ ಓಡಾಡುವ ಶಿಕ್ಷೆ ಯಾರಿಗೂ ಬರಬರಾದು.

ಮನೆಯೊಳಗಿನ ಹರಕುಮುರುಕ,  ನೆಗ್ಗಿದ ಸಾಮಾನುಗಳೆಲ್ಲವೂ ಮುರಿದು ಬಿದ್ದ ಮನೆಯ ಮುಂದಿನ ಪ್ಲಾಸ್ಟಿಕ್ ತಾಡಪಾಲಿನ ಮೂರು ಮೂಲೆಯ ಗುಡಾರದಲ್ಲಿ ಜಾಗ ಪಡೆದಿದ್ದವು. ಅಲ್ಲೆ ಮುಂದಿನ ಮೂರ್ಕಲ್ಲಿನ ಒಲೆ ಮೇಲೆ ಬೇಯುತ್ತಿದ್ದ ಸಾಂಬಾರಿನ ಘಮವು ಗಬ್ಬುನಾತದೊಂದಿಗೆ ಮೇಳೈಸಿಕೊಂಡು ವಿಚಿತ್ರ ಕಲಬೆರಕೆ ವಾಸನೆ ಮೂಗಿಗೆ ಅಡರುತ್ತಿತ್ತು. ಕೃಷಿಭೂಮಿಯೆಲ್ಲ ನೀರಲ್ಲಿ ಮುಳುಗಿ, ಒಡ್ಡುಗಳೆಲ್ಲ ಕೊಚ್ಕೊಂಡು ಹೋಗಿ ಮಾಡಲು ಕೆಲಸವಿಲ್ಲದೇ ಜನ ಅಲ್ಲಲ್ಲೆ ಗುಂಪುಗೂಡಿ ನಿರ್ಲಿಪ್ತರಾಗಿ ಗುನು ಗುನು ಮಾತಾಡಿಕೊಳ್ಳುತ್ತಿದ್ದರು.

ಇದು ಮನುಷ್ಯರು ಪಾಡಾದರೆ, ಅಳಿದುಳಿದ ಹಸು ಎಮ್ಮೆಗಳ ಪಾಡಂತೂ ಯಾರಿಗೂ ಬೇಡದ್ದು. ಜಾನುವಾರುಗಳಿಗೆಂದು ಊರ ಹೊರಗಿನ ದೊಡ್ಡಿಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ, ಜೋಳದ ಕನಕಿ, ಸೆಂಗಾ ಹೊಟ್ಟು, ಗೊಂಜಾಳ ಬಣವಿಗಳೆಲ್ಲವೂ ವಾರಗಟ್ಟಲೇ ನೀರಲ್ಲಿ ನಿಂತದ್ದರಿಂದ ಸೊಂಟ ಬಿದ್ದ ಮುದುಕಿಯರಂತೆ ನೆಲಕ್ಕೆ ಬಾಗಿದ್ದವು, ಊರ ಸುತ್ತಲೂ ಇರುವ ಬಣವೆಗಳೆಲ್ಲವೂ ನೀರಲ್ಲಿ ನಿಂತು ಕೊಳೆಯತೊಡಗಿದ್ದರಿಂದ ಕೊಳೆತ ಹಸಿ ವಾಸನೆಯೂ ಗಬ್ಬುನಾತದೊಂದಿಗೆ ಸಾತ್ ನೀಡತೊಡಗಿತ್ತು. ಈ ಕೊಳೆಯುತ್ತಿರುವ ಬಣವೆಗಳಿಂದ ದನಕ್ಕೆ ಮೇವು ಹೊಂದಿಸುವುದಾದರೂ ಹೇಗೆ?

ಇನ್ನೂ ಊರ ಸುತ್ತಲೂ ಹಬ್ಬಿದ ಮಸಾರಿ ಜಮೀನು, ಎರಿಭೂಮಿಯಲ್ಲಿನ ಕಬ್ಬು ಬೇಳೆ ತಿಂಗಳ ಗಟ್ಟಲೇ ನೀರಲ್ಲಿ ನಿಂತು, ನಿಲ್ಲಲಿಕ್ಕಾಗದೇ ಕಾಮನಿ ರೋಗಕ್ಕೆ ಈಡಾದಂತೆ ಹಸಿರಿನಿಂದ ಹಳದಿಬಣ್ಣಕ್ಕೆ ತಿರುಗತೊಡಗಿತ್ತು. ತೆಂಗಿನ ಗಿಡಗಳ ಗರಿಗಳೆಲ್ಲವೂ ಒಣಗಿ ಗಿಡದಿಂದ ಪಾತಾಳಮುಖಿಯಾಗಿ ಜೋತ್ಯಾಡುತ್ತಿದ್ದವು.

ಇಂಥ ನೆರೆ ಪ್ರದೇಶವನ್ನೆಲ್ಲ ತಿರುಗಾಡಿಕೊಂಡು ಬಂದ ಯಡಿಯೂರಪ್ಪ ಮತ್ತವರ ದಂಡು ನೆರೆ ಪರಿಹಾರ ಕೊಡಿ ಎಂದು ತಿಂಗಳಿನಿಂದ ಅಂಗಲಾಚುತ್ತಿದ್ದರೂ ನಮ್ಮ ಶೋಕಿಲಾಲ ಪ್ರಭುಗಳು ಕಣ್ಣು ತೆರೆಯುತ್ತಿಲ್ಲ. ಬಹುಶಃ ಈ ಮನುಷ್ಯ,  ವಿಕೃತ ಜನರ ಸಂಕಷ್ಟ, ಅನುಭವಿಸುತ್ತಿರುವ ಹಿಂಸೆ ಇದನ್ನೆಲ್ಲ ನೋಡಿ ವಿಕೃತ ಆನಂದ ಪಡುವ ವಿಕೃತ ಮನುಷ್ಯನೇ ಆಗಿರಬೇಕು. ಇಲ್ಲದಿದ್ದರೆ, ಕನಿಷ್ಠ ಮನುಷ್ಯತ್ವ ಇದ್ದವರ್ಯಾರೆ ಆಗಿದ್ದರೂ ಇಷ್ಟೊತ್ತಿಗೆ ಪರಿಹಾರ ಬಿಡುಗಡೆ ಮಾಡ್ತಿದ್ರು. ನಮ್ಮ ಕಡೆ ಒಂದು ಗಾದೆ ಮಾತಿದೆ( ಕಾಗೆಯ ಕ್ಷಮೆ ಕೋರುತ್ತಾ)  “ಕಾಗೆ ಕೈಯಲ್ಲಿ ಕಚೇರಿ ಕೊಟ್ರೆ ಕಚೇರಿ ತುಂಬಾ ಹೇತಿತ್ತಂತೆ”. ಹಾಗಾಯ್ತು ನಮ್ಮ ಕತೆ. ಮಾಡಿದ್ದುಣ್ಣೋ ಮಾರಾಯ, ಈಗ ಅಷ್ಟೇ ನಮ್ಕತೆ.

                                                                                       -ಹನುಮಂತ ಹಾಲಿಗೇರಿ