ಸಮುದಾಯ ಬಾನುಲಿಗಳನ್ನು ಬಳಸಿ, ಬೆಳೆಸಿ

ಸಮುದಾಯ ಬಾನುಲಿಗಳನ್ನು ಬಳಸಿ, ಬೆಳೆಸಿ

ಕೇಂದ್ರವಿರಲಿ ರಾಜ್ಯಸರ್ಕಾರವಿರಲಿ ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ಈ ಸಮುದಾಯ ಬಾನುಲಿಗಳ ಮೂಲಕ ಮುಟ್ಟಲಿ ಎನ್ನುವುದು ಕೇಂದ್ರ ಸರ್ಕಾರದ ಆಶಯ. ಆದರೆ ಆಗುತ್ತಿರುವುದೇ ಬೇರೆ.

ಸುಮಾರು ನಲವತ್ತು ವರ್ಷಗಳ ಹಿಂದೆ ಮನೆ ಮನೆಗೂ ಟೆಲಿವಿಷನ್ ಸೆಟ್ ಗಳು ಬಂದ ಕೆಲವೇ ವರ್ಷಗಳಲ್ಲಿ ರೇಡಿಯೋ ಕೇಳುಗರ ಸಂಖ್ಯೆ ಕಡಿಮೆ ಆಗುತ್ತಾ ಬಂದಿತು. ಇನ್ನು ರೇಡಿಯೋ ಕೇಳುವ ಕಾಲ ಮುಗಿಯಿತು ಎಂಬ ಮಾತುಗಳು ಕೇಳಿ ಬಂದವು. ಹೌದು ಅದರಂತೆಯೇ ಬಹುತೇಕ ಮನೆಗಳಲ್ಲಿದ್ದ ರೇಡಿಯೋಗಳ ಸದ್ದು ಕಡಿಮೆ ಆಗುತ್ತಾ ಬಂತು. ರೇಡಿಯೋ ಜೊತೆ ಭಾವನಾತ್ಮಕ ಸಂಪರ್ಕ ಹೊಂದಿದ್ದ ಜನರು ರೇಡಿಯೋ ಕಾರ್ಯಕ್ರಮಗಳನ್ನು ಕೇಳುತ್ತಾ ಬಂದಿದ್ದವರ ಮನೆಗಳಲ್ಲೂ ಬದಲಾವಣೆ ಗಾಳಿ ಬೀಸಿತು. ಯಾವುದೇ ಶ್ರಮವಿಲ್ಲದೆ ಕಣ್ಣಿಗೆ ಇಂಪಾಗಿ ಕಾಣುವ ಕಿವಿಗೆ ಮುಟ್ಟುವ ಟಿವಿ ಸಹಜವಾಗಿಯೇ ಜನರಿಗೆ ಇಷ್ಟವಾದ ಮಾಧ್ಯಮವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಎಂಬತ್ತರ ದಶಕದವರೆಗೆ ಆಕಾಶವಾಣಿ ಮತ್ತು ಅದರ ವಾಣಿಜ್ಯ ಕೇಂದ್ರದ ಕಾರ್ಯಕ್ರಮಗಳನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ದೇಶದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಸಂಪರ್ಕ ಮಾಧ್ಯಮ ಕ್ಷೇತ್ರದಲ್ಲಿ ಭಾರೀ ಕ್ರಾಂತಿ ಆಯಿತು. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿನ ಶರವೇಗದ ಸಾಧನೆಯಿಂದ ಇಂಟರ್ ನೆಟ್ ಸೌಲಭ್ಯ ಸಿಕ್ಕಿತು. ಎಸ್.ಟಿ.ಡಿ-ಐಎಸ್ ಡಿ ಟೆಲಿಫೋನ್ ಬೂತ್ ಗಳು ಹೆದ್ದಾರಿ ಮತ್ತು ಗಲ್ಲಿ ಗಲ್ಲಿಗಳಲ್ಲಿ ಬಂದವು. ಅದೇ ವೇಳೆಗೆ ಎಲ್ಲರ ಕೈಗೆ ಮೊಬೈಲ್ ಗಳು ಬಂದವು. ಈಗಂತು ಮೊಬೈಲ್ ಸೆಟ್ ಗಳು ಇಲ್ಲದವರಿಲ್ಲ. ಆಕಾಶವಾಣಿ ಕೇಳುಗರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಮಹಾನಗರಗಳಲ್ಲಿ ಮನರಂಜನೆಯೇ ಪ್ರಧಾನವಾದ ಎಫ್ ಎಂ ಚಾನೆಲ್ ಗಳು ಬರುವ ಮೂಲಕ ರೇಡಿಯೋ ಕೇಳುವ ಸಂಸ್ಕೃತಿಗೆ ಮರು ಜೀವ ಬಂದಿತು. 

ಇದರಿಂದಾಗಿ ರೇಡಿಯೋ ಕೇಳುಗರ ಸಂಖ್ಯೆ ಮತ್ತೆ ಹೆಚ್ಚಾಯಿತು. ಹಾಡು, ಹರಟೆ ಮತ್ತು ಸಂಚಾರ ಮಾಹಿತಿ ಹಾಗು ಚಿತ್ರಗೀತೆಗಳನ್ನೇ ಪ್ರಧಾನ ವಿಷಯಗಳನ್ನಾಗಿ ಪ್ರಸಾರ ಮಾಡುವ ಎಫ್ ಎಂ ಚಾನೆಲ್ ಗಳು ಆಕರ್ಷಣೀಯವಾದವು. ಈ ಅವಕಾಶ ಕೇವಲ ಮಹಾನಗರಗಳಲ್ಲಿ ಮಾತ್ರ ದೊರೆಯಿತು. ಮೊಬೈಲುಗಳಲ್ಲಿ ಮತ್ತು ಕಾರಿನಲ್ಲಿ ಪ್ರಯಾಣಿಸುವಾಗ ಎಫ್ ಎಂ ಚಾನೆಲ್ ಗಳ ಕಾರ್ಯಕ್ರಮಗಳನ್ನು ಕೇಳುವವರ ಸಂಖ್ಯೆಯು ಹೆಚ್ಚಿದ್ದನ್ನು ಅಲ್ಲಗಳೆಯಲಾಗದು.

ಈ ಮಧ್ಯೆ ಎರಡು ಸಾವಿರದ ಇಸವಿಯಲ್ಲಿ ಸಮುದಾಯ ಬಾನುಲಿಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತು. ಶಿಕ್ಷಣ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ (ಎನ್. ಜಿ. ಓ) ಪರವಾನಗಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಅದರಂತೆ ದೇಶದಾದ್ಯಂತ ಸಮುದಾಯ ಬಾನುಲಿ ಕೇಂದ್ರಗಳು ಪ್ರಾರಂಭವಾದವು. ಇವುಗಳ ಪ್ರಸಾರ ವ್ಯಾಪ್ತಿ ಕಡಿಮೆ ಇದ್ದರೂ, ಜನಸಾಮಾನ್ಯರ ಬಾನುಲಿ ಇದು. ಇಲ್ಲಿ ಜನಸಾಮಾನ್ಯರೇ ಮುಖ್ಯ. 

ಸಮುದಾಯ ಬಾನುಲಿಗಳು ವಿದೇಶಗಳಲ್ಲಿ ಪ್ರಸಿದ್ಧಿ. ಆಯಾ ಪ್ರದೇಶಗಳ ಸಾಂಸ್ಕೃತಿಕ ಚಟುವಟಿಕೆ, ಸುದ್ದಿ ಸಮಾಚಾರ ಮತ್ತು ಇತರೆ ಮಾಹಿತಿಗಳ ಪ್ರಸಾರ ಮಾಡುವ ಕಮ್ಯೂನಿಟಿ ರೇಡಿಯೋ ಎಂದರೆ ಅಚ್ಚು ಮೆಚ್ಚು. ಅದೇ ಮಾದರಿಯ ಸಮುದಾಯ ಬಾನುಲಿಗಳು ಈಗ ದೇಶದಾದ್ಯಂತ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ ಈಗ 260 ಸಮುದಾಯ ಬಾನುಲಿಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ಇವುಗಳ ಸಂಖ್ಯೆ 17 ಇವೆ. ಅತಿ ಹೆಚ್ಚು ಸಮುದಾಯ ಬಾನುಲಿಗಳು ಇರುವುದು ಉತ್ತರ ಪ್ರದೇಶ (24) ಮತ್ತು ತಮಿಳುನಾಡಿನಲ್ಲಿ (22).

ಬಹುತೇಕವಾಗಿ ಈ ಎಲ್ಲ ಸಮುದಾಯ ಬಾನುಲಿಗಳು ಪ್ರಸಾರ ಮಾಡುವುದು ಸ್ಥಳೀಯ ಸಮಸ್ಯೆಗಳು, ಸ್ಥಳೀಯ ಜನರ ಸಾಂಸ್ಕೃತಿಕ, ಆರೋಗ್ಯ, ಶಿಕ್ಷಣ, ಯುವಕರು ಮತ್ತು ಮಕ್ಕಳ ಹಾಗು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು. ಇದರ ಜೊತೆಗೆ ಜನರಿಗೆ ತಲುಪಬೇಕಾದ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು.

ಸ್ಥಳೀಯ ಸಾಂಸ್ಕೃತಿಕ ಹಾಗು ಜಾನಪದವನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಕಾರ್ಯಕ್ರಮಗಳು, ಸ್ಥಳೀಯ ಪ್ರತಿಭೆಗಳಿಗೆ ಈ ಬಾನುಲಿ ಕೇಂದ್ರಗಳು ಒಂದು ಉತ್ತಮ ವೇದಿಕೆ. ಈ ಸ್ಥಳೀಯ ಪ್ರತಿಭೆಗಳನ್ನು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರುವುದು ಈ ಸಮುದಾಯ ಬಾನುಲಿಗಳ ಉದ್ದೇಶ.

ಇಂತಹ ಸಮುದಾಯ ಬಾನುಲಿಗಳನ್ನು ಬಳಸಿಕೊಂಡು ಸ್ಥಳೀಯ ಪ್ರತಿಭೆಗಳು ತಾವು ಬೆಳೆಯಬೇಕು ಈ ರೇಡಿಯೋವನ್ನೂ ಬೆಳೆಸಬೇಕಿದೆ. ಇದಕ್ಕಾಗಿ ಸ್ಥಳೀಯ ಜನರ ಮತ್ತು ಸರ್ಕಾರದ ಪ್ರೋತ್ಸಾಹ ಇಂದು ತೀರಾ ಅವಶ್ಯವಾಗಿದೆ.

ಪ್ರತಿ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭಿವೃದ್ಧಿ ಇಲಾಖೆಗಳು ಮತ್ತು ತಾಲ್ಲೂಕು ಕೇಂದ್ರಗಳ ಸರ್ಕಾರಿ ಅಧಿಕಾರಿಗಳು ತಮ್ಮ ಇಲಾಖೆಗಳ ವಿಶೇಷವಾಗಿ ಕೃಷಿ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆಗಳ ಹೊಣೆಗಾರಿಗೆ ಹೆಚ್ಚಿದೆ. ಆದರೆ ವಾಸ್ತವವಾಗಿ ಬಹುತೇಕ ಅಧಿಕಾರಿಗಳು ಈ ಸಮರ್ಥವಾದ ಮಾಧ್ಯಮವನ್ನು ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. 

ಈ ಹಿಂದೆ ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೊಬ್ಬರು (ಸಿಇಒ) ಸಮುದಾಯ ಬಾನುಲಿಯನ್ನು ಬಳಸಿಕೊಳ್ಳಲು ತೀವ್ರ ಆಸಕ್ತಿ ತೋರಿದ್ದರು. ತಮ್ಮ ಹಲವು ಇಲಾಖೆಗಳ ಅಧಿಕಾರಿಗಳಿಗೆ ನೀಡಿದ ಸೂಚನೆ ಎಂದರೆ ನಿಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ಸಮುದಾಯ ಬಾನುಲಿಯ ಮೂಲಕ ಜನರಿಗೆ ತಲುಪಿಸಿ. ಅದಕ್ಕಾಗಿ ಸಮುದಾಯ ಬಾನುಲಿ ಕೇಂದ್ರದ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳಿ ಎಂದು ತಮ್ಮ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಜಿಲ್ಲಾ ಪಂಚಾಯತ್ ಮೂಲಕ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮತ್ತು ಏನೇನು ಕಾರ್ಯಕ್ರಮಗಳಿವೆ ಎಂಬುದನ್ನು ಸಮುದಾಯ ಬಾನುಲಿ ಮೂಲಕವೂ ಜನರನ್ನು ಮುಟ್ಟಿ ಎಂದು ಸಲಹೆ ಮಾಡಿದ್ದರು. ಆದರೆ ಆದದ್ದೇ ಬೇರೆ. ಈ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯ ಮಾತಿಗೆ ಯಾವ ಕಿಮ್ಮತ್ತನ್ನೂ ಕೊಡಲಿಲ್ಲ. ಇದು ನಮ್ಮ ಸರ್ಕಾರಿ ಅಧಿಕಾರಿಗಳ ಮನೋಭಾವ.

ಒಂದರೆಡು ಇಲಾಖೆಗಳನ್ನು ಹೊರತು ಪಡಿಸಿದರೆ ಜನರನ್ನು ಮುಟ್ಟಬೇಕಾದ ಕೃಷಿ, ಸಮಾಜ ಕಲ್ಯಾಣ, ಅರಣ್ಯ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಸಮುದಾಯ ಬಾನುಲಿ ಕೇಂದ್ರಗಳಿಗೆ ಬರಲು ಹಿಂದೇಟು ಹಾಕಿದರು. ಈ ವಿಷಯವನ್ನು ಸಿಇಒ ಗಮನಕ್ಕೆ ತಂದಾಗ ಅವರು ಹೇಳಿದ್ದು “ ಅನೇಕ ಅಧಿಕಾರಿಗಳಿಗೆ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟುವುದು ಇಷ್ಟವಿಲ್ಲ. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಮುಟ್ಟಿದರೆ ನಾಳೆ ಬಂದು ಕೇಳುತ್ತಾರೆ. ಅದನ್ನು ಜನರಿಗೆ ತಲುಪಿಸುವ ಮನಸ್ಸು ಈ ಅಧಿಕಾರಿಗಳಿಗೆ ಇಲ್ಲ. ಇದು ದುರಂತ” ಎಂದರು.

ಸಾಮಾನ್ಯವಾಗಿ ಅರಣ್ಯ ಇಲಾಖೆಯು ರಸ್ತೆಗಳಲ್ಲಿ ಸಸಿ ನೆಡುತ್ತದೆ. ಆದರೆ ಆ ಸಸಿಗೆ ನೀರು ಹಾಕುವವರಿಲ್ಲ. ಆದರೆ ವಾಸ್ತವವಾಗಿ ಅವರ ದಾಖಲೆಗಳಲ್ಲಿ ಪ್ರತಿದಿನ ಇಲ್ಲವೇ ವಾರಕ್ಕೆ ಇಂತಿಷ್ಟು ದಿನ ಈ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಹಾಕಿ ಸಸಿಗಳನ್ನು ಬೆಳೆಸಲಾಗುತ್ತಿದೆ ಎಂದು ನಮೂದಿಸಲಾಗಿರುತ್ತದೆ.  ಆದರೆ ವಾಸ್ತವವಾಗಿ ಬೀದಿಬದಿಯಲ್ಲಿ ನೆಟ್ಟ ಆ ಸಸಿಗಳಿಗೆ ನೀರು ಹಾಕುವುದೇ ಇಲ್ಲ ಎನ್ನುವುದನ್ನು ನಾವಲ್ಲ ನೋಡಿದ್ದೇವೆ. ಅಪರೂಪಕ್ಕೊಮ್ಮೆ ನೀರು ಹಾಕಲಾಗುತ್ತದೆ ಎನ್ನುವುದು ನಿಜ. ಈ ನೀರು ಹಾಕುವ ಗುತ್ತಿಗೆಯನ್ನು ತಮಗೆ ಬೇಕಾದವರಿಗೆ ನೀಡಲಾಗಿರುತ್ತದೆ. ನೀರು ಹಾಕುವುದಾಗಿ ಸುಳ್ಳು ಲೆಕ್ಕ ಬರೆದು ಬರುವ ಹಣವನ್ನು ಅಧಿಕಾರಿಗಳು ಮತ್ತು ಗುತ್ತಿಗೆ ಪಡೆದವರು ಹಂಚಿಕೊಳ್ಳುತ್ತಾರೆ ಎಂದು ಕೇಳಿದ್ದೇನೆ. ಇಂತಹ ಮೋಸ ಇಂದು ಎಲ್ಲ ಇಲಾಖೆಗಳಲ್ಲೂ ಇದೆ. 

ಹಾಗಾಗಿಯೇ ಅಧಿಕಾರಿಗಳು ತಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲು ಹಿಂದೇಟು ಹಾಕುತ್ತಾರೆ ಎನ್ನುವುದು ಈ ಸತ್ಯವನ್ನು ಕಂಡವರ ಮಾತು. 

ಕೇಂದ್ರವಿರಲಿ ರಾಜ್ಯಸರ್ಕಾರವಿರಲಿ ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ಈ ಸಮುದಾಯ ಬಾನುಲಿಗಳ ಮೂಲಕ ಮುಟ್ಟಲಿ ಎನ್ನುವುದು ಕೇಂದ್ರ ಸರ್ಕಾರದ ಆಶಯ. ಆದರೆ ಆಗುತ್ತಿರುವುದೇ ಬೇರೆ. ಎಲ್ಲ ಅಧಿಕಾರಿಗಳು ಹೀಗೆಯೇ ಇರುತ್ತಾರೆ ಎನ್ನುತ್ತಿಲ್ಲ. ಅದರೆ ಹೆಚ್ಚಿನ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳಿಗೆ ನೀಡುವ ಹಣವನ್ನೆಲ್ಲ ನುಂಗಿ ನೀರು ಕುಡಿಯುತ್ತಾರೆ ಎನ್ನುವುದನ್ನು ಮಾತ್ರ ಅಲ್ಲಗಳೆಯಲಾಗುತ್ತಿಲ್ಲ.

ಜನ ಸಮುದಾಯವನ್ನು ತಲುಪುವ ಈ ಸಮುದಾಯ ಬಾನುಲಿಯಂತಹ ಮಾಧ್ಯಮವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಇನ್ನಾದರೂ ಬಳಸಿಕೊಳ್ಳಬೇಕು. ಅದಕ್ಕಾಗಿ ಸಂಪನ್ಮೂಲ ಇಲ್ಲದೆ ನಲುಗಿ ಹೋಗುತ್ತಿರುವ ಸಮುದಾಯ ಬಾನುಲಿಗಳಿಗೆ ಆಕಾಶವಾಣಿ ಮತ್ತು ಪತ್ರಿಕೆಗಳಿಗೆ ನೀಡುವಂತಹ ಉತ್ತೇಜನವನ್ನು ನೀಡಬೇಕಿದೆ. ಅದಕ್ಕಾಗಿ ಸರ್ಕಾರ ತನ್ನ ಜಾಹೀರಾತು ನೀತಿಯಲ್ಲಿ ಬದಲಾವಣೆ ತರಬೇಕಿದೆ. ಹೊಸ ಬೆಳವಣಿಗೆಗಳನ್ನೂ ಗಮನಿಸಬೇಕಿದೆ. ಆ ದಿಕ್ಕಿನಲ್ಲಿ ಜನಸಾಮಾನ್ಯರ ದನಿಯಾಗಿರುವ ಸಮುದಾಯ ಬಾನುಲಿಗಳ ರಕ್ಷಣೆಗೆ ಸರ್ಕಾರವೂ ಹೆಗಲು ನೀಡಬೇಕಾಗಿದೆ. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಚಿಂತಿಸಬೇಕಾಗಿದೆ.