ಬಿಬಿಎಂಪಿಯಲ್ಲಿ ಎಸ್.ಜಿ.ರವೀಂದ್ರ ಎಂಬ ಅಪ್‌ರೈಟ್ ಅಧಿಕಾರಿ :  ಸಕಾರಾತ್ಮಕ ಬದಲಾವಣೆಯೇ ಅವರ ಪ್ರಮುಖ ಗುರಿ

ಬಿಬಿಎಂಪಿಯಲ್ಲಿ ಎಸ್.ಜಿ.ರವೀಂದ್ರ ಎಂಬ ಅಪ್‌ರೈಟ್ ಅಧಿಕಾರಿ :  ಸಕಾರಾತ್ಮಕ ಬದಲಾವಣೆಯೇ ಅವರ ಪ್ರಮುಖ ಗುರಿ

ಎಸ್.ಜಿ.ರವೀಂದ್ರ ಎಂಬ ಪ್ರಾಮಾಣಿಕ, ದಿಟ್ಟ, ದಕ್ಷ ಅಧಿಕಾರಿ ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುತ್ತಾರೆ. ಕೆಲಸದಲ್ಲಿ ಸದಾ ಅಚ್ಚುಕಟ್ಟುತನ ಬಯಸುವ ಅವರು ನೇರ ಮಾತು, ನಿಷ್ಠುರ ವರ್ತನೆಗೆ ಹೆಸರಾದವರು. ಅಂಥ ಓರ್ವ ಅಧಿಕಾರಿ ನಮ್ಮ ನಡುವೆ ಇರುವುದೇ ಹೆಮ್ಮೆ ಎಂಬಂತೆ ಇರುತ್ತದೆ ಅವರ ಕಾರ್ಯ ನಿರ್ವಹಣೆ. ಅವರು ಬಿಬಿಎಂಪಿ ವಿಶೇಷ ಆಯುಕ್ತರಾಗಿ ಬಂದ ನಂತರ ಮಾಡಿರುವ ಸಾಧನೆಗಳ ಕುರಿತು ರಕ್ಷಿತ್ ಬಂಗೇರ ವರದಿ.

ಕೆಲವು ತಿಂಗಳ ಹಿಂದೆ ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಗಳಲ್ಲಿ ಸುರಕ್ಷತೆ, ಸ್ವಚ್ಚತೆ , ಪಾರ್ಕಿಂಗ್ ಮೊದಲಾದ ಮೂಲಭೂತ ಅಗತ್ಯಗಳನ್ನು ಕಾಪಾಡಿಕೊಳ್ಳುವುದು ಕೆಲ ವ್ಯಾಪಾರಿಗಳ ಅಕ್ರಮ ಒತ್ತುವರಿಯಿಂದಾಗಿ ಅಸಾಧ್ಯವಾಗಿತ್ತು. ಹೀಗಾಗಿ ಕರ್ನಾಟಕ ಹೈಕೋರ್ಟ್‍ ಮಾರುಕಟ್ಟೆ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವಂತೆ ಆದೇಶಿಸಿತ್ತು. ಹೈಕೋರ್ಟ್‌ ಆದೇಶದಂತೆ ಬಿಬಿಎಂಪಿ ವಿಶೇಷ ಆಯುಕ್ತ ಎಸ್‍.ಜಿ ರವೀಂದ್ರ ಅವರು ಕಾರ್ಯಾಚರಣೆ ಕೈಗೊಂಡ ಬಳಿಕ ಮಾರುಕಟ್ಟೆಗಳ ಸುರಕ್ಷತೆ ವಿಚಾರದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.

ಈಗಾಗಲೇ ಕೃಷ್ಣರಾಜೇಂದ್ರ ಮಾರ್ಕೆಟ್ ಹಾಗೂ ರಸೆಲ್ ಮಾರ್ಕೆಟ್‍ಗಳ ಅಕ್ರಮ ಒತ್ತುವರಿಗಳು ಸಂಪೂರ್ಣ ತೆರವುಗೊಳಿಸಿದ್ದು ಮುಂದಿನ ಕಾರ್ಯಾಚರಣೆಯನ್ನು ಮಡಿವಾಳ ಮಾರ್ಕೆಟ್‍ನಲ್ಲಿ ನಡೆಸಲು ರವೀಂದ್ರ ಅವರು ಸಿದ್ದರಾಗಿದ್ದಾರೆ. ಇದರೊಂದಿಗೆ ತಮ್ಮ ವ್ಯಾಪ್ತಿಯಲ್ಲಿರುವ ಬೃಹತ್‍ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಆಸ್ತಿ, ಶಿಕ್ಷಣ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ವಿಶೇಷ ಆಯುಕ್ತರು ಚಿಂತನೆ ನಡೆಸಿದ್ದಾರೆ.

ಮಾರುಕಟ್ಟೆಗಳಿಗೆ ಚಿಕಿತ್ಸೆ

ಬೆಂಗಳೂರಿನ ಪ್ರಸಿದ್ದ ಮಾರುಕಟ್ಟೆಗಳಾದ ಕೆ.ಆರ್‍ ಮಾರ್ಕೆಟ್‍ ಹಾಗೂ ರಸೆಲ್ ಮಾರ್ಕೆಟ್‍ನಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವಲ್ಲಿ ಒಂದು ತಿಂಗಳ ಹಿಂದೆ ಕೈಗೆತ್ತಿಕೊಂಡಿರುವ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ ಅಗ್ನಿಶಾಮಕ ದಳದ ಸುರಕ್ಷತಾ ಮಾನದಂಡಗಳನ್ನು ಪಾಲಿಸಿರುವ ಮಾರುಕಟ್ಟೆಯಾಗಿ ಎರಡೂ ಮಾರುಕಟ್ಟೆಗಳು ಬದಲಾಗಲಿವೆ ಎಂದು ವಿಶೇ‍ಷ ಆಯು‍ಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ಜನರ ಓಡಾಟಕ್ಕೆ ಮೀಸಲಿಟ್ಟಿರುವ ಪಾದಚಾರಿ ಮಾರ್ಗಗಳಲ್ಲಿ ಕೆಲ ವ್ಯಾಪಾರಿಗಳು ಅಕ್ರಮ ಒತ್ತುವರಿಗಳನ್ನು ಮಾಡಿದ್ದರಿಂದ ಜನಸಂಚಾರ ಸುಲಭವಾಗಿರಲಿಲ್ಲ. ಇದೀಗ ಪಾಲಿಕೆ ಕೈಗೊಂಡಿರುವ ಕ್ರಮವನ್ನು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸ್ವಾಗತಿಸುತ್ತಾರೆ ಎಂದು ಎಸ್.ಜಿ ರವೀಂದ್ರ ಹೇಳಿದ್ದಾರೆ.

ಮಡಿವಾಳ ಮಾರ್ಕೆಟ್‍ನಲ್ಲಿರುವ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಈಗಾಗಲೇ ಸಿದ್ದಗೊಳ್ಳುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಸ್ಥಳೀಯ ಶಾಸಕರು, ಕಾರ್ಪೋರೇಟರ್‌ ಮತ್ತು ವರ್ತಕರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲೇ ಈ ಮಾರುಕಟ್ಟೆಯಲ್ಲೂ ಹೈಕೋರ್ಟ್ ನಿರ್ದೇಶನವನ್ನು ಪಾಲಿಕೆ ಪಾಲಿಸಲಿದೆ.

ವಾರವೊಂದರ ಹಿಂದೆ ರಸೆಲ್ ಮಾರ್ಕೆಟ್‍ ಪ್ರದೇಶದಲ್ಲಿ ಒತ್ತುವರಿಗಳು ತೆರವುಗೊಂಡಿರುವುದರಿಂದ ಮಾರ್ಕೆಟ್‍ನಲ್ಲಿ ಅಗ್ನಿ ಶಾಮಕ ದಳದ ವಾಹನ ಹಾಗೂ ಆಂಬುಲೆನ್ಸ್‍ಗಳ ಓಡಾಟಕ್ಕೆ ಸ್ಥಳಾವಕಾಶ ಸಿಕ್ಕಿದೆ ಎಂದು ವಿಶೇಷ ಆಯುಕ್ತರು ತಿಳಿಸಿದ್ದು. ರಸೆಲ್ ಮಾರುಕಟ್ಟೆ ಮುಂಬಾಗ ಸುಮಾರು 4.5 ಮೀಟರ್‍ ಸ್ಥಳದಲ್ಲಿ ಎಲ್ಲಾ  ವಾಹನಗಳ ಪ್ರವೇಶ ನಿರ್ಬಂಧಿಸಿರುವುದರಿಂದ ಅಗ್ನಿ ಅವಘಡಗಳ ಸಂದರ್ಭದಲ್ಲಿ ಮಾರುಕಟ್ಟೆ ಹೆಚ್ಚು ಸುರಕ್ಷಿತವಾಗಿರಲಿದೆ. ಕೆಲವು ವರ್ತಕರು ಮಾಧ್ಯಮಗಳ ಮುಂದೆ ಪಾಲಿಕೆ ಕ್ರಮಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರೂ ಕೂಡ ಸುರಕ್ಷತೆ ಒತ್ತು ಕೊಡುವುದು ಮುಖ್ಯ ಎಂದು ರವೀಂದ್ರ ಅವರು ಪಾಲಿಕೆಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಾಲಿಕೆ ಶಾಲೆಗಳಲ್ಲಿ ಆಧುನಿಕ ಸೌಲಭ್ಯ ಮತ್ತು ಉತ್ತಮ ಫಲಿತಾಂಶಕ್ಕೆ  ಒತ್ತು

ಶಾಲಾ ವಿದ್ಯಾರ್ಥಿಗಳಿಗೆ ಅಂತರ್ಜಾಲ ವ್ಯವಸ್ಥೆ ಲಭಿಸುವಂತೆ ಮಾಡಲು ವಿಶೇಷ ಆಯುಕ್ತರು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.  ಬೆಂಗಳೂರು  ಪಾಲಿಕೆ ವ್ಯಾಪ್ತಿಯ 156  ಶಾಲೆಗಳಿಗೆ ಅಂತರ್ಜಾಲ ವ್ಯವಸ್ಥೆ ಕಲ್ಪಿಸಲು ಬ್ರಾಡ್‍ಬ್ಯಾಂಡ್‍ ಸಂಸ್ಥೆಯಾದ ಎ.ಸಿ.ಟಿ ಯೊಂದಿಗೆ ಒಪ್ಪಂದ ಯಶಸ್ವಿಯಾಗಿದೆ.

ಪಿ.ಯು.ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳು ಈ ಬಾರಿ ಗಣನೀಯ ಸಾಧನೆ ತೋರಿರುವುದು ತೃಪ್ತಿಕರವಾಗಿದೆ ಎಂದಿದ್ದಾರೆ. ಪಾಲಿಕೆ ವ್ಯಾಪ್ತಿಯ ಕಾಲೇಜುಗಳು  ಹಿಂದಿನ ವರ್ಷ ಶೇ.57 ರಷ್ಟು ಫಲಿತಾಂಶ ಪಡೆದಿದ್ದರೆ ಈ ಬಾರಿ 67.5 ಫಲಿತಾಂಶ ಗಳಿಸಿದೆ. ಫಲಿತಾಂಶದಲ್ಲಿ ಶೇ.10.5 ನಷ್ಟು ಹೆಚ್ಚಳವಾಗಿರುವುದು ಉತ್ತಮ ಸಾಧನೆ ಎಂದಿದ್ದಾರೆ. ಈ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯ ಆರು ತಿಂಗಳ ಮೊದಲೇ ಸಿದ್ದಗೊಳಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಪೂರಕ ತರಗತಿಗಳು , ಆಪ್ತ ಸಮಾಲೋಚನೆಗಳನ್ನು ಒದಗಿಸಲಾಗಿತ್ತು ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ. ಜೊತೆಗೆ ಕಲಿಕೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ‘ಬಿಬಿಎಂಪಿ ರೋಶಿನಿ’ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ.1.3 ರಷ್ಟು ಏರಿಕೆಗೊಂಡಿದ್ದರೂ ಬಿಬಿಎಂಪಿಯ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕಿಲ್ಲ. ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪಾಲಿಕೆ ಶಿಕ್ಷಕರ ವತಿಯಿಂದಲೇ ಸಿದ್ದತಾ ಪರೀಕ್ಷೆ ನಡೆಸಿದ್ದರೂ ಗಣನೀಯ ಫಲಿತಾಂಶ ದೊರೆಯದಿರುವುದರಿಂದ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಅವರು ಆಶಿಸಿದ್ದಾರೆ.

ಈಗಾಗಲೇ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ದೊರೆಯಲಿರುವ ಪ್ರೋತ್ಸಾಹಗಳ ಕುರಿತು ಪೋಷಕರಿಗೆ ತಿಳಿಹೇಳಲಾಗಿದೆ. ಜೊತೆಗೆ ಫ್ಲೆಕ್ಸ್‌ಗಳನ್ನು ಬಳಸದೆ ಬಟ್ಟೆಗಳ ಮೇಲೆ ಅಚ್ಚು ಹಾಕಿರುವ ಶಾಲಾ ಸೇರ್ಪಡೆ ಕುರಿತ ಜಾಹೀರಾತು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಆಸ್ತಿ ನಿರ್ವಹಣೆಯಲ್ಲಿ ಡಿಜಿಟಲೀಕರಣಕ್ಕೆ ವೇಗ

ಈಗಾಗಲೇ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮಾಹಿತಿಯನ್ನು ಡಿಜಿಟಲೀಕರಣ ಆರಂಭವಾಗಿದ್ದು ಚುನಾವಣೆ ಮುಗಿದ ನಂತರದಲ್ಲಿ ಇನ್ನಷ್ಟು ಚುರುಕುಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಲಿದೆ ಎಂದು ವಿಶೇಷ ಆಯುಕ್ತರು ಭರವಸೆ ನೀಡಿದ್ದಾರೆ.

ಪಾಲಿಕೆ ಭೂಮಿ ಎನ್ನುವ ತಂತ್ರಾಂಶದ ಮೂಲಕ ಆಸ್ತಿಗೆ ಸಂಬಂಧಿಸಿದ 127 ರೀತಿಯ ವಿವರಗಳನ್ನು ಜಾಲತಾಣಕ್ಕೆ ತುಂಬುವ ಕೆಲಸವನ್ನು ಬಿಬಿಎಂಪಿ ಎತ್ತಿಕೊಂಡಿದೆ. 7000 ಕಡತಗಳ ಪೈಕಿ 3000 ಸಾವಿರ ಕಡತಗಳ ವಿವರ ಹಾಗೂ ಛಾಯಾಪ್ರತಿಯನ್ನು ಅಂತರ್ಜಾಲಕ್ಕೆ ತುಂಬಲಾಗಿದೆ. ಕಡತಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ‘ಅಗ್ನಿ  ಆಕಸ್ಮಿಕ’ದ ಮೂಲಕ ಪಾಲಿಕೆ ವ್ಯಾಪ್ತಿಯ ಕಡತಗಳು ನಷ್ಟವಾಗುವುದು ನಿಲ್ಲಲಿದೆ ಎಂದಿದ್ದಾರೆ. ಆಸ್ತಿ ದಾಖಲೆಗಳ ಡಿಜಿಟಲೀಕರಣ ದೇಶದ ಬೇರೆ ಬೇರೆ ನಗರಗಳಲ್ಲಿ ಆಗುತ್ತಿದ್ದರೂ ಬೆಂಗಳೂರು ಪಾಲಿಕೆಯಷ್ಟು ಸಮಗ್ರವಾಗಿ ರೂಪಿಸಲಾಗಿಲ್ಲ ಎಂದು ರವೀಂದ್ರ ಅವರು ಅಭಿಪ್ರಾಯ ಪಟ್ಟಿದ್ದಾರೆ. ವಿಶೇಷ ಆಯುಕ್ತರು ಸೇರಿದಂತೆ ಪಾಲಿಕೆಯ ಅಧಿಕಾರಿಗಳೇ ಕ್ರಮ ಬದ್ಧವಾಗಿ ರೂಪಿಸಿರುವ  ವಿವರಗಳ ಜಾಲತಾಣವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಆಯುಕ್ತರು ಕೂಡ ಪ್ರಶಂಸಿದ್ದಾರೆ.