ಸ್ಯಾಂಡಲ್ ವುಡ್‌ನಲ್ಲಿ ಸದ್ಯ ಸದ್ದು ಮಾಡ್ತಿರೋ ಬಯೋಪಿಕ್ ಗಳು

ಸ್ಯಾಂಡಲ್ ವುಡ್‌ನಲ್ಲಿ ಸದ್ಯ ಸದ್ದು ಮಾಡ್ತಿರೋ ಬಯೋಪಿಕ್ ಗಳು

ಬಾಲಿವುಡ್ ನಂತೆಯೇ ಸ್ಯಾಂಡಲ್ ವುಡ್ ನಲ್ಲೀಗ ಬಯೋಪಿಕ್ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. ಸಿನಿಮಾ ನಟ-ನಟಿಯರು, ಪೊಲೀಸ್ ಆಫಿಸರ್ಸ್, ಅಂಡರ್ ವರ್ಲ್ಡ್ ಡಾನ್ಸ್ ಗಳನ್ನು ಆಧರಿಸಿ ಸಿನಿಮಾ ಮಾಡಲಾಗ್ತಿದೆ. ಹಿಂದಿ ಚಿತ್ರರಂಗದಲ್ಲಿ ಈಗಾಗ್ಲೇ ಎಂ ಎಸ್ ಧೋನಿ, ಸಚಿನ್ ತೆಂಡೂಲ್ಕರ್, ಪಿ ಎಂ ಮೋದಿ, ಮೇರಿ ಕೋಮ್, ಮನಮೋಹನ್ ಸಿಂಗ್, ಸಂಜು, ಎನ್ ಟಿ ಆರ್ ಹೀಗೆ ಸಾಕಷ್ಟು ಸೆಲೆಬ್ರಿಟಿಗಳ ಬಯೋಪಿಕ್ ಸಿನಿಮಾಗಳು ರಿಲೀಸ್ ಆಗಿವೆ. ಸದ್ಯ ಕಂಗನಾ ರಣಾವತ್ ನಾಯಕಿಯಾಗಿ ಅಭಿನಯಿಸ್ತಿರೋ ಜಯಲಲಿತಾ ಜೀವನಾಧರಿತ ಚಿತ್ರವನ್ನು ನಿರ್ದೇಶಕ ವಿಜಯ್  ಡೈರೆಕ್ಟ್ ಮಾಡ್ತಿದ್ದಾರೆ. ಹಾಗೆಯೇ 1983ರಲ್ಲಿ ನಡೆದ ವಿಶ್ವಕಪ್ ಸನ್ನಿವೇಶ ಹಾಗೂ ಕ್ರಿಕೆಟಿಗ ಕಪಿಲ್ ದೇವ್ ಬಯೋಪಿಕ್ ಕೂಡ ರಣ್ವೀರ್ ಸಿಂಗ್ ನಟನೆಯಲ್ಲಿ ಮೂಡಿಬರಲಿದೆ. ಈಗಾಗ್ಲೇ ರಿಲೀಸ್ ಆಗಿರೋ ಪಿ ಎಂ ಮೋದಿ ಸಿನಿಮಾ ಹಾಗೂ ಮನಮೋಹನ್ ಸಿಂಗ್ ಜೀವನಾಧರಿತ ಸಿನಿಮಾಗಳು ಬರೀ ಎಲೆಕ್ಷನ್ ಗಿಮಿಕ್ ಅನ್ನೋ ಮಾತುಗಳು ಸಹ ಇವೆ. ಯಾಕಂದ್ರೆ ಸಿನಿಮಾ ಅನೌನ್ಸ್ ಆದ ಹಾಗೂ ರಿಲೀಸ್ ಆದ ಡೇಟ್ ಲೋಕಸಭಾ ಚುನಾವಣಾ ಸಾಮಿಪ್ಯವೇ ಇದ್ದವು. ಪರೋಕ್ಷವಾಗಿ, ಬಿಜೆಪಿ ಪರ ಜನರ ಗಮನ ಸೆಳೆಯೋಕೆ ಪಿ ಎಂ ಮೋದಿ ಸಿನಿಮಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತ ಸಿನಿಮಾ ಕಾಂಗ್ರೆಸ್ ವಿರುದ್ಧವಾಗಿಯೇ ಮೂಡಿಬಂದಿರಲೂಬಹುದೇನೋ..? ಆದ್ರೆ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಯಾವ ರಾಜಕಾರಣಿಯ ಜೀವನಾಧರಿತ ಸಿನಿಮಾವೂ ಬರ್ತಿಲ್ಲ. ಬದಲಾಗಿ ಮಿನುಗುತಾರೆ ಕಲ್ಪನಾ, ಬಹುಭಾಷಾ ತಾರೆ ಶಕೀಲಾ ಹಾಗೂ ಐಪಿಎಸ್ ಆಫಿಸರ್ ಅಣ್ಣಾಮಲೈ ಜೀವನಾಧಾರಿತ ಸಿನಿಮಾಗಳು ರೆಡಿಯಾಗ್ತಿವೆ. ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿ ಡಿಕೆ ರವಿ ಅವ್ರ ಜೀವನಾಧಾರಿತ ಸಿನಿಮಾ ಅಂತಲೇ ಬಿಂಬಿಸಲ್ಪಟ್ಟ ಚಂಬಲ್ ಸಿನಿಮಾ ಕೂಡ ತೆರೆ ಮೇಲೆ ಬಂದಿತ್ತು. ಆದ್ರೆ ದಕ್ಷ ಅಧಿಕಾರಗಳ ಕಾರ್ಯ ವೈಖರಿ ಇನ್ನಿತರ ವಿಚಾರಗಳ ಮೇಲೆ ತಯಾರಾದ ಚಿತ್ರ ಇದು ಅಂತ ಚಿತ್ರತಂಡ ಸಮರ್ಥಿಸಿಕೊಂಡಿತ್ತು. 

ಮಿನುಗು ತಾರೆ ಕಲ್ಪನಾ ಅನ್ನೋ ಹೆಸರು ಕನ್ನಡ ಸಿನಿಮಾರಂಗದಲ್ಲಿ ಎಂದಿಗೂ ಅಚ್ಚಳಿಯದೇ ಉಳಿಯೋ ನೆನಪು. ನಟನಾ ವಿಚಾರಕ್ಕೆ ಬಂದ್ರೆ 60-70ರ ದಶಕದಲ್ಲಿ ಕಲ್ಪನಾ ಹೆಸರು ಅಗ್ರ ಗಣ್ಯ ಸ್ಥಾನದಲ್ಲಿರತ್ತೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾ ಮೂಲಕ ಕಲ್ಪನಾ ಜನಪ್ರಿಯತೆ ಗಳಿಸಿದ್ರು.ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಸಾಲುಸಾಲು ಸಿನಿಮಾಗಳ ಆಫರ್ ಗಳು ಬಂದ್ರೂ ಸಹ ಅದು ಬಹಳ ವರ್ಷಗಳಿಗೆ ಸೀಮಿತವಾಗಲಿಲ್ಲ. ಕೊನೆಗೆ ವೈಯಕ್ತಿಕ ಜೀವನದಿಂದ ಬೇಸತ್ತು ಕಲ್ಪನಾ ಸಾವನ್ನಪ್ಪಿದ್ರು. ಕಲ್ಪನಾ ಸಾವಿನ ರಹಸ್ಯ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಮಿನುಗುತಾರೆ ಕಲ್ಪನಾ ಅವರು ತೀರಿಕೊಂಡ ಬಳಿಕ ಆ ಊರಿನಲ್ಲಿ ಕಲ್ಪನಾ ಆತ್ಮ ಓಡಾಡ್ತಿದೆ ಅಂತ ಊರಿನ ಜನ ಮಾತನಾಡಿಕೊಳ್ತಿದ್ದಾರೆ. ಸಂಕೇಶ್ವರ ಸಮೀಪದ ಗೋಟೂರು ಪ್ರವಾಸಿ ಮಂದಿರದ ಬಳಿ ಓಡಾಡೋಕೆ ಇಂದಿಗೂ ಜನ ಭಯ ಪಡ್ತಾರಂತೆ. ಇದೇ ನಿಗೂಢ ಸಾವಿನ ಎಳೆಯನ್ನು ಇಟ್ಕೊಂಡು ಬಹುತೇಕ ಹೊಸಬರೇ ಕೂಡಿರುವ ತಂಡವೊಂದು ಕಲ್ಪನಾ ವಿಲಾಸಿ ಅನ್ನೋ ಸಿನಿಮಾ ಮಾಡಿದ್ದಾರೆ. ಕ್ರೈಂ, ಹಾರರ್‌ ಎಳೆಯ ಕಥಾಹಂದರ ಹೊಂದಿರೋ ಕಲ್ಪನಾ ವಿಲಾಸಿ ಸಿನಿಮಾವನ್ನು  ವಿಶ್ವ ಜಿ ಕಡೂರ್‌ ನಿರ್ದೇಶಿಸಿದ್ದಾರೆ. ಐಶ್ವರ್ಯಾ, ವಿಜಯ್‌ ರಾಮ್‌, ವೇದಾ ಹಾಗೂ ಆಶಿತ್‌  ಕಲ್ಪನಾ ವಿಲಾಸಿ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಹುತೇಕ ಲಾವಿದರು ತಂತ್ರಜ್ಞರು ಐಟಿ ಕ್ಷೇತ್ರಕ್ಕೆ ಸೇರಿದವರು ಹಾಗೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವವರು. ಹಾರರ್ ಸಿನಿಮಾವಾಗಿದ್ರಿಂದ ಬಹುತೇಕ ರಾತ್ರಿ ಸಮಯದಲ್ಲೇ ಚಿತ್ರೀಕರಣ ನಡೆಸಲಾಗಿದೆಯಂತೆ. ಹಾಗಾಗಿ ಹಗಲು ಆಫೀಸ್ ಕೆಲಸ ಮಾಡಿಕೊಂಡು ರಾತ್ರಿ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗ್ತಿದ್ರಂತೆ. ಈ ಚಿತ್ರಕ್ಕೆ ಅಶೋಕ್‌ ಭಾರದ್ವಾಜ್‌ ಅವರು ಹಣ ಹೂಡಿದ್ದಾರೆ. ಈಗಾಗ್ಲೇ ಸಿನಿಮಾ ಸೆನ್ಸಾರ್ ಕೂಡ ಮುಗಿಸಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. 

 

ಶಕೀಲಾ,  ದಕ್ಷಿಣ ಭಾರತ ಚಿತ್ರರಂಗದ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ಶಕೀಲಾ ಅವ್ರ ಕಾಲ್ ಶೀಟ್ ಗಾಗಿ ನಿರ್ದೇಶಕರು, ನಿರ್ಮಾಪಕರುಗಳು ಕ್ಯೂ ನಿಲ್ತಿದ್ರಂತೆ. ಯಾಕಂದ್ರೆ ಪಡ್ಡೆ ಹುಡುಗರಿಂದ ಹಿಡಿದು ಮುದುಕರ ವರೆಗೂ ಶಕೀಲಾ ಸಿನಿಮಾವನ್ನು ಎದ್ದು ಬಿದ್ದು ನೋಡ್ತಿದ್ರು ಅನ್ನೋ ಕಾರಣಕ್ಕಾಗಿ. ಆದ್ರೆ ಒಂದು ಕಾಲದಲ್ಲಿ ಶಕೀಲಾರನ್ನು ಮಾದಕ ನಟಿ, ಸೆಕ್ಸ್ ಬಾಂಬ್, ವಯಸ್ಕರ ಸಿನಿಮಾಗಳಿಗೆ ಮಾತ್ರ ಸೀಮಿತ ಅಂತಲೂ ಬ್ರ್ಯಾಂಡ್ ಮಾಡಲಾಗಿತ್ತು. ಹಣ ಮಾಡೋ ಉದ್ದೇಶದಿಂದ ನಿರ್ಮಾಪಕ, ನಿರ್ದೇಶಕರು ಶಕೀಲಾರನ್ನು ಬಿ-ಗ್ರೇಡ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿಟ್ಟಿದ್ರು ಅನ್ನೋ ಮಾತುಗಳಿವೆ. ಎರಡು ಸಿನಿಮಾ ಮಾಡಿ ಸೋತ ನಿರ್ಮಾಪಕರುಗಳು ಶಕೀಲಾ ಮೊರೆ ಹೋಗ್ತಿದ್ರಂತೆ. ಶಕೀಲಾ ಕಾಲ್ ಶೀಟ್ ಕೊಟ್ಟು ಸಿನಿಮಾದಲ್ಲಿ ನಟಿಸ್ತೀನಿ ಅಂದ್ರೆ ಸಾಕು ನಿರ್ಮಾಪಕರ ಜೇಬಿಗೆ ಕೋಟಿ ಕೋಟಿ ಬೀಳತ್ತೆ ಅನ್ನೋ ಕಾಲವೂ ಇತ್ತಂತೆ. ಆದ್ರೆ ಎಲ್ಲಾ ಜನಪ್ರಿಯತೆ ಮಾದಕತೆ ನಡುವೆಯೂ ಶಕೀಲಾ ಎಂಬ ನಟಿ ನೋವು, ಅವಮಾನ, ದುಖಃದಿಂದ ಬೆಂದು ಹೋಗಿದ್ರು. ಶಕೀಲಾ ಸಂಪೂರ್ಣ ಬದುಕಿನ ಏಳುಬೀಳಿನ ಕಥೆ ಆಧರಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿನಿಮಾ ಮಾಡಹೊರಟಿದ್ದಾರೆ. ಈ ಸಿನಿಮಾದಲ್ಲಿ ಶಕೀಲಾ ಪಾತ್ರವನ್ನು ರಿಚಾ ಚಡ್ಡಾ ನಿರ್ವಹಿಸಲಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ಅನೆಕ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. 

ಪೊಲೀಸ್ ಅಧಿಕಾರಿಗಳಂದ್ರೆ ದಕ್ಷ, ನಿಷ್ಠೆ, ನ್ಯಾಯಕ್ಕೆ ಇನ್ನೊಂದು ಹೆಸರು, ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳಿಗೂ ಕೂಡ ಕಷ್ಟ ಎದುರಾದ್ರೆ ಅಭಯಹಸ್ತ ನೀಡೋ ಆರಕ್ಷಕರು ಅಂತೆಲ್ಲಾ ಹೇಳಲಾಗತ್ತೆ. ಈಗಿನ ಕಾಲಕ್ಕೆ ಈ ಮಾತುಗಳು ಪೂರ್ತಿ ಸತ್ಯವಲ್ಲವಾದ್ರೂ, ಈಗಲೂ ಒಂದಿಷ್ಟು ಜನ ಪೊಲೀಸ್ ಆಫೀಸರ್ಸ್  ಕರ್ತವ್ಯ ಪ್ರಜ್ಞೆ ಮೆರೆಯುತಿದ್ದಾರೆ. ಆ ಸಾಲಿಗೆ ಕರ್ನಾಟಕದ ಸಿಂಗಂ ಅಂತಲೇ ಖ್ಯಾತಿ ಹೊಂದಿದ್ದ ಅಣ್ಣಾಮಲೈ ಕೂಡ ಒಬ್ರು. ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಇನ್ನಿತರ ಕಡೆ ಕಾರ್ಯನಿರ್ವಹಿಸಿದ್ದ ಐಪಿಎಸ್ ಆಫೀಸರ್ ಅಣ್ಣಾಮಲೈ ಅವ್ರ ಕಾರ್ಯವೈಖರಿಗೆ ಸಾಕಷ್ಟು ಮಂದಿ ಫ್ಯಾನ್ಸ್ ಇದ್ರು. ಕ್ರೈಂ ರೇಟ್ ಇಳಿಕೆಯಾಗುವಲ್ಲಿ ಅಣ್ಣಾಮಲೈ ಪಾತ್ರ ಮಹತ್ವದ್ದು ಅಂತಲೂ ಹೇಳಲಾಗ್ತಿತ್ತು. ಆದ್ರೆ ಇತ್ತೀಚೆಗಷ್ಟೇ ಅವ್ರು ವೈಯಕ್ತಿಕ ಕಾರಣಕ್ಕಾಗಿ ಪೊಲೀಸ್ ಸರ್ವೀಸ್ ಗೆ ರಾಜೀನಾಮೆ ನೀಡಿದ್ರು. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಅಣ್ಣಾಮಲೈ ಜೀವನಾಧರಿತ ಸಿನಿಮಾಕ್ಕೆ ತಯಾರಿ ನಡೀತಿದೆ. ಒನ್ಸ್ ಮೋರ್ ಕೌರವ ಸಿನಿಮಾ ಖ್ಯಾತಿಯ ನರೇಶ್ ಗೌಡ ಅಣ್ಣಾಮಲೈ ಬಯೋಪಿಕ್ ಗೆ ಸಿದ್ಧತೆ ಮಾಡಿಕೊಳ್ತಿದ್ದಾರೆ. 

ಶಕೀಲಾ, ಕಲ್ಪನಾ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದ ಕಲಾವಿದೆಯರು. ಅಣ್ಣಾಮಲೈ ಕೂಡ ಪೊಲೀಸ್ ಆಗಿ ಸುಮಾರು  8 ವರ್ಷ ಸೇವೆ ಸಲ್ಲಿಸಿದ್ದಾರೆ. ಬಯೋಪಿಕ್ ಸಿನಿಮಾಗಳನ್ನು ಮಾಡೋದು ನಿರ್ದೇಶಕ, ನಿರ್ಮಾಪಕರ ಆಯ್ಕೆಗೆ ಬಿಟ್ಟಿದ್ದು. ಆದ್ರೆ ಯಾರ ಜೀವನಾಧರಿತ ಸಿನಿಮಾ ಮಾಡಬೇಕು ಅನ್ನೋ ಜ್ಞಾನ ಇರಬೇಕಾಗತ್ತೆ. ಹಾಗಿದ್ದಾಗ  ಮಾತ್ರ ಆ ಕಥೆ, ಸಿನಿಮಾ ಗೆಲ್ಲೋಕೆ ಸಾಧ್ಯ. ಬದಲಾಗಿ ಏನೂ ಸಾಧಿಸಿದ, ಮಹಾನ್ ಸಾಧನೆ ಅಂತ ಬಿಂಬಿಸಲ್ಪಟ್ಟ ಅಥವಾ ಏನೂ ಅಲ್ಲದ ವ್ಯಕ್ತಿಗಳ ಬಯೋಪಿಕ್ ಮಾಡೋದು ಆ ಹೆಸರಿಗೆ ಸೂಚಿಸೋ ಅಗೌರವ ಅನಿಸತ್ತೆ.