ಅನ್ನ ನೀರಿಗಾಗಿ ಹಾಹಾಕಾರ ಪಡುವಾಗಲೂ ಅಸ್ಪೃಶ್ಯತೆ !!

ಅನ್ನ ನೀರಿಗಾಗಿ ಹಾಹಾಕಾರ ಪಡುವಾಗಲೂ ಅಸ್ಪೃಶ್ಯತೆ !!

ಜಾತಿ ಮತ್ತು ಅಸ್ಪೃಶ್ಯತೆ ಎನ್ನುವುದು ಹಿಂದೂ ಧರ್ಮದಲ್ಲಿರುವ ವ್ಯಕ್ತಿಯ ಮನಸ್ಸಿನ ಸ್ಥಿತಿ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳುತ್ತಾರೆ. ಈ ಮನಸ್ಥಿತಿ ಎಲ್ಲರೊಳಗೂ ಸುಪ್ತವಾಗಿ ಮತ್ತೆ ಕೆಲವರಲ್ಲಿ ತನ್ನದು ಮೇಲ್ ಜಾತಿ ಎನ್ನುವ ಅಹಮ್ಮಿಕೆಯಿಂದ ಬಹಿರಂಗವಾಗಿಯೇ ಕಾಣುತ್ತದೆ.

ಹುಟ್ಟು ಸಾವು, ಬರ ಮತ್ತು ಪ್ರವಾಹ ಬಂದಾಗ ಪ್ರಕೃತಿಗೆ ಯಾರು ಯಾವ ಜಾತಿ ಎನ್ನುವುದರ ಭೇದ ಇರದು. ಆದರೆ ಈ ಭೇದ ಎನ್ನುವ ಮತ್ತು ಜಾತಿ ಎನ್ನುವ ಕೊಳಕು ಮನಸ್ಥಿತಿ ನಮ್ಮ ಜನರಲ್ಲಿ ಆಗಿಂದ್ದಾಗ್ಗೆ ಬಹಿರಂಗವಾಗಿಯೇ ಅನಾವರಣಗೊಳ್ಳುತ್ತಿದೆ.

ಕಳೆದ ವಾರವೆಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ. ಈ ಪ್ರವಾಹದಲ್ಲಿ ಉಳ್ಳವರು ಮತ್ತು ಇಲ್ಲದವರು ಎನ್ನುವ ಭೇದವಿಲ್ಲ. ಪ್ರವಾಹ ಬಂದಾಗ ಬಹುತೇಕ ಗ್ರಾಮಗಳಲ್ಲಿ ಎಲ್ಲರೂ ಮನೆಮಠ ಕಳೆದುಕೊಂಡರು. ಹಲವು ಕಡೆ ಊರಿಗೆ ಊರೇ ಕೊಚ್ಚಿಕೊಂಡು ಹೋಗಿದೆ. ಪ್ರಕೃತಿಯ ಮುಂದೆ ಎಲ್ಲರೂ ಒಂದೇ. ಕಪಿಲಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಾಗ ನಂಜನಗೂಡು ತಾಲ್ಲೂಕಿನ ಚೊಕ್ಕಹಳ್ಳಿಯ 80ಕ್ಕೂ ಹೆಚ್ಚು ಮನೆಗಳು ಮುಳುಗಡೆ ಆದವು. 

ಆ ಹಳ್ಳಿಯಲ್ಲಿದ್ದ 370ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ನಾಯಕ ಜನರು ಬೀದಿಗೆ ಬಿದ್ದರು. ಅನ್ನ ಆಹಾರವಿಲ್ಲದೆ ಪರಿತಪಿಸುವಾಗ ಸರ್ಕಾರ ಈ ನೆರೆ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಪರಿಹಾರ ಶಿಬಿರ ವ್ಯವಸ್ಥೆ ಮಾಡಿತು. ಎಲ್ಲರಿಗೂ ಊಟದ ವ್ಯವಸ್ಥೆ ಆಯಿತು. ಆದರೆ ಈ ನಾಯಕ ಜನರು ತಾವು ಪರಿಶಿಷ್ಟ ಜಾತಿಯ ಜನರ ಜೊತೆ ಇರುವುದಿಲ್ಲ. ತಮಗೇ ಬೇರೆ ವ್ಯವಸ್ಥೆ ಮಾಡಬೇಕೆಂದು ಹಠ ಹಿಡಿದರು. ಕಷ್ಟದಲ್ಲಿರುವ ಈ ಜನರ ಜೊತೆ ಇನ್ನು ಜಗಳಕ್ಕಿಳಿಯುವುದು ವ್ಯರ್ಥ ಎಂದು ನಾಯಕ ಜನರಿಗೇ ಬೇರೆ ಪರಿಹಾರ ಕೇಂದ್ರ ಮಾಡಿ ಅವರಿಗೆ ಊಟದ ಸೌಲಭ್ಯ ಒದಗಿಸಲಾಯಿತು. ಇನ್ನು ಮುಂದೆಯಾದರೂ ಜಾತಿ ಭೇದ ಮಾಡುವವರಿಗೆ ಇಲ್ಲಿ ಅವಕಾಶವಿಲ್ಲ ಎನ್ನುವ ಎಚ್ಚರಿಕೆಯನ್ನಾದರೂ ನೀಡುವ ಬಗ್ಗೆ ಸರ್ಕಾರವಾಗಲಿ ಅಥವಾ ಇಂತಹ ಪರಿಹಾರ ಕೇಂದ್ರಗಳನ್ನು ಮಾಡುವವರು ಪರಿಶೀಲಿಸುವುದು ಅವಶ್ಯ ಎನಿಸುತ್ತದೆ..

ಈ ಎರಡು ಜಾತಿಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಹೆಚ್ಚು ಕಡಿಮೆ ಒಂದೇ. ಆದರೆ ಈ ನಾಯಕ ಜನರಲ್ಲಿರುವ ಕೊಳಕು ಜಾತಿ ಮನಸ್ಸು ಪರಿಶಿಷ್ಟ ಜಾತಿಯ ಜನರೊಡನೆ ಬೆರೆಯುವ ಕೂಡಿ ಬಾಳುವ ದೊಡ್ಡ ಮನಸ್ಸು ಕಾಣದೇ ಹೋದುದು ದುರಂತ. ಜಾತಿ ಮತ್ತು ತಮ್ಮ ಸಂಪ್ರದಾಯದ ಕಟ್ಟುಪಾಡುಗಳ ಬಗೆಗೆ ನಂಬಿಕೆ ಇರುವವರು ತಮ್ಮ ಮನೆಗಳಲ್ಲಿ ಖಾಸಗಿಯಾಗಿ ಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಮತ್ತು ಸಾರ್ವತ್ರಿಕ ಜಾಗಗಳಲ್ಲಿ ಜಾತಿ ಮತ್ತು ಅಸ್ಪೃಶ್ಯತೆ ಆಚರಣೆ ಅಪರಾಧ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು

ಕನ್ನಡದ ಹೆಸರಾಂತ ಬರಹಗಾರ ದೇವನೂರ ಮಹಾದೇವ ಅವರು ತಮ್ಮ “ಎದೆಗೆ ಬಿದ್ದ ಅಕ್ಷರ” ದ ಕೃತಿಯಲ್ಲಿನ ಒಂದು ಲೇಖನದಲ್ಲಿ ಬರೆಯುತ್ತಾರೆ ನಂಜನಗೂಡಿನ ಬದನವಾಳು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ನಾಯಕ ಜನಾಂಗದ ನಡುವೆ ಗಲಾಟೆ ಆಗುತ್ತದೆ. ಆಗ ನಾಯಕ ಜನರು ಪರಿಶಿಷ್ಟರ ಕೇರಿಗೆ ದಾಳಿ ಮಾಡಿದಾಗ ಅವರ  ಗುರಿ ಮನೆಗಳಲ್ಲಿದ್ದ ಟಿವಿ, ಸೈಕಲ್, ಸ್ಕೂಟರ್ ಮತ್ತು ಇತರ ವಸ್ತುಗಳು. ಅವುಗಳನ್ನು ಒಡೆದು ಚೂರು ಚೂರು ಮಾಡುತ್ತಾರೆ.

ಇದರ ಅರ್ಥ ನಮ್ಮಂತೆಯೇ ಹಿಂದುಳಿದಿರುವ ಪರಿಶಿಷ್ಟರ ಮನೆಗಳಲ್ಲಿ ಇರುವ ಟಿವಿ ಮತ್ತು ಇತರ ವಸ್ತುಗಳು ಇದ್ದದ್ದು ಅವರ ಹೊಟೆಯ ಕಿಚ್ಚಿಗೆ ಕಾರಣವಾಗುತ್ತದೆ. ಅಂದರೆ ಪರಿಶಿಷ್ಟ ಜಾತಿಯ ಜನರು ತಮಗಿಂತ ಮೇಲೆ ಬರಬಾರದು. ಅವರು ಇದ್ದಲ್ಲಿಯೆ ಇರಬೇಕು.

ಇದು ನಂಜನಗೂಡು ತಾಲ್ಲೂಕಿನ ಘಟನೆಯಾದರೆ ಲಿಂಗಸಗೂರು ತಾಲ್ಲೂಕಿನ ಕಡದರಗಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಯು ಜಲಾವೃತವಾಗಿದ್ದಾಗ ಸರ್ಕಾರಿ ಸಿಬ್ಬಂದಿ ಮತ್ತು ಇತರರು ಸಂತ್ರಸ್ತರಿಗೆ ಆಹಾರ ಪೂರೈಕೆ, ನೀರು ಮುಂತಾದ ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡುವಾಗ ಬೇರೆ ಜಾತಿಗಳ ಜನರಿಗೆ ಮೊದಲು ಹಂಚಿ ನಂತರ ಪರಿಶಿಷ್ಟ ಜಾತಿಯವರಿಗೆ ನೀಡುವುದು. ಪರಿಶಿಷ್ಟ ಜಾತಿಯ ಜನರು ಮೊದಲು ಕೇಳಿದ್ದು ಕುಡಿಯುವ ನೀರು ಕೊಡಿ ಎಂದು. ಆದರೆ ಅವರಿಗೆ ಸರಿಯಾಗಿ ನೀರನ್ನೂ ಒದಗಿಸಿಲ್ಲ ಎನ್ನುವ ವರದಿಗಳು ಪತ್ರಿಕೆಗಳಲ್ಲಿ ಬಂದವು.

ಬಿಜೆಪಿಯ ಸಂಘಪರಿವಾರದ ಕಾರ್ಯಕರ್ತರು ಮತ್ತು ಈ ಸಂಘಟನೆಗಳ ಸಿದ್ಧಾಂತದಲ್ಲಿ ನಂಬಿಕೆ ಇರುವ ಮಂದಿ ಸದಾ ಹೇಳುವುದು “ಹಿಂದು ನಾವೆಲ್ಲ ಒಂದು” ಈ ಘೋಷಣೆ ಬೋಗಸ್ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎನ್ನುವುದು ಬೇರೆ. ಆದರೆ ನಮ್ಮ ಜನರ ಈ ಇಬ್ಭಗೆಯ ನೀತಿ ಮತ್ತು ಮುಖವಾಡದ ಬದುಕು ನಿತ್ಯವೂ ಒಂದಲ್ಲ ಒಂದು ಕಡೆ ಬಹಿರಂಗಗೊಳ್ಳುತ್ತಲೇ ಇದ್ದರೂ, ಸುಳ್ಳು ಮತ್ತು ಸಮಾಜಕ್ಕೆ ವಂಚನೆ ಮಾಡುವುದು ಯಾವ ನಾಚಿಕೆಯೂ ಇಲ್ಲದೆ ಮುಂದುವರಿದಿರುವುದು ನಮ್ಮ ಇಬ್ಬಂದಿ ತನಕ್ಕೆ ಸಾಕ್ಷಿ. ಆದರೂ ನಾವು ಹೇಳುವುದು “ಮೇರಾ ಭಾರತ್ ಮಹಾನ್”!!!

ಶಾಲೆಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಜಾರಿಗೆ ಬಂದಾಗ ಮತ್ತು ಈಗಲೂ ಅಲ್ಲಲ್ಲಿ ಅಡುಗೆ ಮಾಡುವವರಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಇದ್ದರೆ ಊರಿನ ಸವರ್ಣೀಯ ಜಾತಿಯ ಜನರು ತಮ್ಮ ಮಕ್ಕಳು ಅಲ್ಲಿ ಊಟ ಮಾಡದಂತೆ ಹೇಳಿಕೊಡುವುದು ಮತ್ತು ಅಡುಗೆ ಮಾಡುವ ಆ ಮಹಿಳೆಯನ್ನೇ ಮತ್ತೊಂದು ಕಡೆಗೆ ವರ್ಗಾವಣೆ ಮಾಡಿಸುವುದು ನಡೆದೇ ಇದೆ.

ತಾಯಿಯೇ ಮೊದಲ ಶಿಕ್ಷಕಿ ಎಂದು ನಾವು ಹೇಳುತ್ತೇವೆ. ಆದರೆ ಬಹುತೇಕ ಎಲ್ಲ ತಾಯಂದಿರು ತಮ್ಮ ಮುಗ್ಧ ಮಕ್ಕಳಿಗೆ ಹೇಳಿ ಕೊಡುವುದು “ ಅವನ ಜೊತೆ ಸೇರಬೇಡ ಅವನು ನಮಗಿಂತ ಕೀಳು. ಅವನ ಕೈಯಿಂದ ಏನನ್ನೂ ಈಸಿಕೊಳ್ಳಬೇಡ. ಅವನು ಕೊಟ್ಟದ್ದನ್ನು ತಿನ್ನಬೇಡ. ಅವನ ಜೊತೆ ಕುಳಿತುಕೊಳ್ಳಬೇಡ ಎಂದು ತಾಯಿಯಾದವಳು ತಮ್ಮ ಮಕ್ಕಳಿಗೆ ಹೇಳಿಕೊಡುವುದು ಸಾಮಾನ್ಯ. ಮನೆಯಿಂದಲೇ ಈ ತಾರತಮ್ಯ ಕಲಿಯುವ ಮಕ್ಕಳು ಮುಂದೆ ಹೇಗೆ ಬೆಳೆಯುತ್ತಾರೆ !! ಪರಸ್ಪರರಲ್ಲಿ ತಾರತಮ್ಯ, ಭೇದ ಮತ್ತು ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ. ಎಳೆಯ ವಯಸ್ಸಿನಲ್ಲೇ ಈ ತಾರತಮ್ಯ ಕಲಿಯುವ ಮಕ್ಕಳು ಎಂತಹ ಸತ್ಪ್ರಜೆಯಾಗಲು ಸಾಧ್ಯ? ಈ ತಾಳಕ್ಕೆ ತಕ್ಕಂತೆ ಕುಣಿಯುವ ಹಲವು ಶಿಕ್ಷಕರೂ ಇದ್ದಾರೆ. ಇಂತಹವರು ಇದ್ದರೆ ಈ ದೇಶದ ಭವಿಷ್ಯ ಏನಾಗಬಹುದು? ಹಿಂದುಗಳೆಲ್ಲ ಹೇಗೆ ಒಂದಾಗುತ್ತಾರೆ?

ಇದಕ್ಕೆಲ್ಲ ಹೇಗೆ ಕಡಿವಾಣ ಹಾಕುವುದು? ಎಲ್ಲವನ್ನೂ ಎಲ್ಲರನ್ನೂ ಕಾನೂನಿನ ಪ್ರಕಾರ ದಂಡಿಸಿ ಸಮಾನತೆ ತರಲು ಸಾಧ್ಯವೇ? ಕಾಯ್ದೆ ಕಾನೂನಿನಿಂದಲೇ ಎಲ್ಲರನ್ನೂ ನಿಯಂತ್ರಿಸಲು ಆಗುವುದೇ? ಇಂತಹ ಸಮಾಜದಲ್ಲಿ ಮಾನವೀಯತೆ, ಸಹೋದರತೆ ಮತ್ತು ಸಮಾನತೆ ಬರಲು ಸಾಧ್ಯವಿದೆಯೇ? ಇಂತಹ ಜನರಿಗೆ ಮಾನವೀಯತೆ ಕಲಿಸುವುದಾದರೂ ಹೇಗೆ? ನಿಜ. ಈ ಸಮಸ್ಯೆ ಇಂದಿನದಲ್ಲ. ಸಾವಿರಾರು ವರ್ಷಗಳಿಂದ ದೇವರು, ಧರ್ಮದಿಂದ ನಮಗೆ ಬಳುವಳಿಯಾಗಿ ಬಂದಿರುವ ಅಮಾನವೀಯ ಗುಣಗಳು.

ಇಂತಹ ತಾರತಮ್ಯ ಇರಬೇಕು. ಕೆಳಜಾತಿಯವರಾಗಿ ಹುಟ್ಟಿರುವುದು ಅವರ ಕರ್ಮ ಎಂದು ಕರ್ಮಸಿದ್ಧಾಂತವನ್ನು ಪ್ರತಿಪಾದಿಸಿ ಈ ತಾರತಮ್ಯವನ್ನು ಬಲವಾಗಿ ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಹೀಗೆ ಹೇಳಿದ್ದನ್ನೆಲ್ಲ ಕೇಳಿಕೊಂಡು ಬಂದ ಜನರಿದ್ದಾಗ ಇದೆಲ್ಲ ಸರಾಗವಾಗಿ ನಡೆದು ಬಂದಿತು. ಆದರೆ ಈಗ ಕಾಲ ಬದಲಾಗುತ್ತಿದೆ. ಎಲ್ಲರನ್ನೂ ಸಮಾನವಾಗಿ ನೋಡುವ ವಿವೇಚನೆ ಚಿಗುರೊಡೆಯುತ್ತಿದೆ. ಸಮಾನತೆ ಮತ್ತು ಮಾನವ ಹಕ್ಕುಗಳ ಪರಿಜ್ಞಾನ ವಿಶ್ವ ಮಟ್ಟದಲ್ಲಿ ಪಸರಿಸಿದೆ. ಆದ್ದರಿಂದ ವಿವೇಚನೆ ಇರುವ ಜನರಾದರೂ ಸ್ವಲ್ಪಮಟ್ಟಿಗೆ ಹೊಸ ದೃಷ್ಟಿಕೋನವನ್ನು ಮೈಗೂಡಿಸಿಕೊಳ್ಳುವುದು ಹಿಂದೆಂದಿಗಿಂತಲೂ ಅವಶ್ಯ.

ನಮ್ಮ ಸಂವಿಧಾನದ ನೇರ ನಿರ್ದೇಶನ ಮತ್ತು ಮೂಲಭೂತ ಹಕ್ಕುಗಳ ಪ್ರಕಾರ ಸರ್ಕಾರವು ಧರ್ಮ, ಜಾತಿ, ಲಿಂಗ ಬೇಧ ಮತ್ತು ಎಲ್ಲಿ ಹುಟ್ಟಿದವ ಎನ್ನುವ ಯಾವುದೇ ತಾರತಮ್ಯ ಮಾಡ ಕೂಡದು ಎಂದು ಹೇಳುತ್ತದೆ. ಮುಂದುವರೆದು ಸಂವಿಧಾನದ 21ನೇ ವಿಧಿಯಂತೆ ಯಾವುದೇ ವ್ಯಕ್ತಿಯು ನಿರ್ಭಯವಾಗಿ ಜೀವಿಸುವ ಹಕ್ಕನ್ನು ಹೊಂದಿರುತ್ತಾನೆ ಮತ್ತು ಯಾವುದೇ ವ್ಯಕ್ತಿಯು ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತನಾಗಬಾರದು. ಹಾಗೆಯೇ ಸಂವಿಧಾನದ 17ನೇ ವಿಧಿಯ ಪ್ರಕಾರ ಯಾವುದೇ ಬಗೆಯಲ್ಲಿ ಅಸ್ಪೃಶ್ಯತೆಯನ್ನು ಆಚರಿಸುವಂತಿಲ್ಲ. ಅಸ್ಪೃಶ್ಯತೆ ಆಚರಣೆಯನ್ನು ಮಾಡಿದ್ದಲ್ಲಿ ಅದು ಕಾನೂನಿನ ಪ್ರಕಾರ ಅಪರಾಧ. . (The Directive Principles and Fundamental Constitution declare: “The State shall not discriminate against any citizen on grounds only of religion, race, caste, sex, place of birth or any of them.”  Article 21 says: “No person shall be deprived of his life or personal liberty except according to procedure established by law.”  Again Article 17 of the Constitution states: “Untouchability is abolished and its practice in any form is forbidden. His enforcement of any disability arising out of untouchability shall be an offence punishable in accordance law.” )

ಕಳೆದ ವಾರ ಫೇಸ್ ಬುಕ್ ನಲ್ಲೊಬ್ಬರು, ಮೀಸಲಾತಿಯನ್ನು ತೆಗೆದುಹಾಕಿದರೆ ಜಾತಿ ತಾನಾಗಿಯೇ ಹೋಗುತ್ತದೆ ಎಂದು ತಮ್ಮ ಆಣಿಮುತ್ತನ್ನು ಉದುರಿಸಿದ್ದರು. ಅದೇ ಹೇಳಿಕೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುಶೇಂದ್ರ ಸಿಂಗ್ ಎಂಬುವವರು ಹೇಳಿದ್ದಾರೆ. ಈಗ ಮೀಸಲಾತಿಯ ವ್ಯಾಪ್ತಿಯಲ್ಲಿ ಇಲ್ಲದವರನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ. ತಾವು ಮೀಸಲಾತಿ ವ್ಯಾಪ್ತಿಯಲ್ಲಿ ಇದ್ದರೂ, ಮೀಸಲಾತಿ ಇರುವುದೆಂದರೆ ಅದು ಪರಿಶಿಷ್ಟ ಜಾತಿಯವರಿಗಾಗಿ ಮಾತ್ರ ಎನ್ನುವ ಆತ್ಮವಂಚನೆಯ ಮನಸ್ಥಿತಿ ಭಾರತೀಯರದ್ದು.

ಇರಲಿ, ಈ ಮೀಸಲಾತಿ ಬರುವ ಮುನ್ನ ದೇಶದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲವೇ? ಈ ಪ್ರಶ್ನೆಗೆ ಯಾರಾದರೂ ಸಮರ್ಥವಾಗಿ ಉತ್ತರಿಸಿದರೆ ಒಳ್ಳೆಯದು. ಮಿಸಲಾತಿ ರದ್ದಾಗುವುದರಿಂದ ಜಾತಿ ಹೋಗುವುದಾದರೇ ಮೀಸಲಾತಿಯು ರದ್ದಾಗಲಿ, ಜಾತಿಯೂ ಅಳಿಯಲಿ.