ಉನ್ನಾವೊ ಬಾಲಕಿ ತಂದೆಯ ಹತ್ಯೆ ಪ್ರಕರಣದಡಿ ಬಿಜೆಪಿ ಉಚ್ಛಾಟಿತ ಶಾಸಕ, ಸಹೋದರನ ಮೇಲೆ ದೆಹಲಿ ಕೋರ್ಟ್ ದೋಷ ನಿರೂಪಣೆ

ಉನ್ನಾವೊ ಬಾಲಕಿ ತಂದೆಯ ಹತ್ಯೆ ಪ್ರಕರಣದಡಿ ಬಿಜೆಪಿ ಉಚ್ಛಾಟಿತ ಶಾಸಕ, ಸಹೋದರನ ಮೇಲೆ ದೆಹಲಿ ಕೋರ್ಟ್ ದೋಷ ನಿರೂಪಣೆ

ದೆಹಲಿ: ಉತ್ತರಪ್ರದೇಶದ ಉನ್ನಾವೊನಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ ಸಿಂಗ್ ಸೆಂಗಾರ್ ಹಾಗೂ ಆತನ ಸಹೋದರ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ದೆಹಲಿ ನ್ಯಾಯಾಲಯವು ದೋಷಗಳನ್ನು ನಿರೂಪಿಸಿದೆ.

ಸಂತ್ರಸ್ತ ಬಾಲಕಿಯ ತಂದೆ ನ್ಯಾಯಾಂಗ ಬಂಧನದಲ್ಲಿರುವಾಗಲೇ 2018 ಏ. 9 ರಂದು ಮೃತಪಟ್ಟಿದ್ದರು. ತಂದೆಯ ಈ ಸಾವು ಕೊಲೆ ಎಂದು ಬಾಲಕಿಯ ಕಡೆಯವರು ಆರೋಪಿಸಿದ್ದು, ಇದರ ಹಿಂದೆ ಬಿಜೆಪಿ ಶಾಸಕ ಕುಲದೀಪ ಸಿಂಗ್ ಸೆಂಗಾರ್ ಹಾಗೂ ಆತನ ಸಹೋದರ ಅತುಲ್ ಸೆಂಗಾರ್ ಹಾಗೂ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಶ್ ಶರ್ಮಾ, ಮಂಗಳವಾರ ಪ್ರಕರಣ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನದಲ್ಲಿರುವಾಗಲೇ ಬಾಲಕಿಯ ತಂದೆಯ ಕೊಲೆಯಾಗಿರಬೇಕಾದರೆ ವಿವರ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಗಳ ವಿರುದ್ಧ ದೋಷಗಳನ್ನು ನಿರೂಪಿಸಿದರು.

ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಆರೋಪಿಗಳು ಹಾಗೂ ಬಾಲಕಿಯ ತಂದೆಯ ಹತ್ಯೆ ಈ ಎರಡೂ ಪ್ರಕರಣಗಳನ್ನು ಜತೆಯಾಗಿಯೇ ವಿಚಾರಣೆ ನಡೆಸಬೇಕು ಅಥವಾ ಇಲ್ಲವೇ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಅಭಿಪ್ರಾಯಪಟ್ಟಿತು.

ಬಾಲಕಿಯ ಅತ್ಯಾಚಾರದ ಪ್ರಕರಣದಲ್ಲಿ ಕಳೆದ 14 ತಿಂಗಳಿಂದ ಶಾಸಕ ಕುಲದೀಪಸಿಂಗ್ ಸೆಂಗಾರ್ ಅವರು ವಿಚಾರಣಾಧೀನ ಕೈದಿಯಾಗಿದ್ದಾರೆ. ಕಳೆದ ಆ. 1 ರಂದು ನಡೆದ ಅಪಘಾತದಲ್ಲಿಸಂತ್ರಸ್ತೆ ಬಾಲಕಿ ಹಾಗೂ ವಕೀಲೆಗೆ ಗಂಭೀರ ಗಾಯಗಳಾಗಿದ್ದು, ಅವರು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಪ್ರಕರಣವನ್ನು ಸುಪ್ರೀಂಕೋರ್ಟ್ ದೆಹಲಿಗೆ ವರ್ಗಾಯಿಸುವಂತೆ ಆದೇಶಿಸಿತ್ತು.

ಬಾಲಕಿಯ ತಂದೆಯ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಉದ್ದೇಶಪೂರ್ವಕವಾಗಿಯೇ ಪ್ರಮುಖ ಆರೋಪಿಗಳಾದ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪಸಿಂಗ್ ಸೆಂಗಾರ ಹಾಗೂ ಆತನ ಸಹೋದರ ಅತುಲ್  ಸೆಂಗಾರ್ ಅವರ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ ಎಂದೂ ಆರೋಪಿಸಲಾಗಿತ್ತು.