ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಕೇಂದ್ರ ಸಚಿವರಿಂದ ಒತ್ತಡ: ಯತ್ನಾಳ್

ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಕೇಂದ್ರ ಸಚಿವರಿಂದ ಒತ್ತಡ: ಯತ್ನಾಳ್

ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಇಬ್ಬರು ಸಚಿವರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪನವರಿಗೆ 76 ವರ್ಷ ವಯಸ್ಸಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಇಬ್ಬರು ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ನನಗೆ ದೆಹಲಿಯಿಂದ ವಿಶ್ವಾಸನೀಯ ಮೂಲಗಳು ಇದನ್ನು ಖಚಿತಪಡಿಸಿವೆ.  ಆ ಸಚಿವರು ಯಾರು ಎಂಬುದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

ಹೈಕಮಾಂಡ್‍ಗೆ ಬಿಎಸ್‍ವೈ ಶಕ್ತಿ ಏನೆಂಬುದು ಗೊತ್ತಿರುವುದರಿಂದಲೇ ಅಷ್ಟು ಸುಲಭವಾಗಿ ಮುಟ್ಟಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಒಂದು ವೇಳೆ ಯಡಿಯೂರಪ್ಪನವರ ಬಗ್ಗೆ ಹೈಕಮಾಂಡ್‍ಗೆ ಅಸಮಾಧಾನವಿದ್ದರೆ ರಾಜೀನಾಮೆ ಪಡೆಯಲಿ. ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದ ಈ ಚಾಡಿಕೋರ ಸಚಿವರು ಮೋದಿ ಯ ಬಳಿ ನನ್ನ ಬಗ್ಗೆಯೂ ಚಾಡಿ ಮುಟ್ಟಿಸುತ್ತಿದ್ದಾರೆ. ಅವರ ಕುತಂತ್ರದಿಂದಲೇ ನನಗೆ ಶೋಕಾಸ್​ ನೊಟೀಸ್​ ಬಂದಿದೆ. ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ನೆರೆ ಪರಿಹಾರದ ಕುರಿತು ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲು ಅವಕಾಶ ಸಿಗದಿರುವುದಕ್ಕೂ ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪ್ರಧಾನಿ ಭೇಟಿಯಾಗಲು ಅವಕಾಶ ಕೊಡುತ್ತಾರೆ. ಆದರೆ ಯಡಿಯೂರಪ್ಪನವರಿಗೆ ಆ ಅವಕಾಶ ಏಕೆ ಸಿಗುತ್ತಿಲ್ಲ ಎಂದು ಯತ್ನಾಳ್ ಪ್ರಶ್ನೆ ಮಾಡಿದರು. ನೆರೆ ಸಂದರ್ಭದಲ್ಲಿ ನಾನು ಧ್ವನಿ ಎತ್ತದೇ ಇದ್ದಿದ್ದರೆ ಯಡಿಯೂರಪ್ಪ ಇಷ್ಟೊತ್ತಿಗೆ ಅಧಿಕಾರವನ್ನೇ ಕಳೆದುಕೊಳ್ಳುತ್ತಿದ್ದರು ಎಂದರು.

ಬಿಜೆಪಿ ಕೊಟ್ಟಿರುವ ನೋಟಿಸ್​ಗೆ ನಾನು ಉತ್ತರ ನೀಡಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರಲ್ಲ ಎಂದು ಹೇಳಿದರು.