ಅಮುಖ್ಯ

 ಆನಂದ ಕುಂಚನೂರ

ಅಮುಖ್ಯ

ಆಫೀಸಿನ ಮೊದಲ ದಿನ. ಹೊಸ ಮುಖಗಳು, ಹೊಸ ಜಾಗ. ಗಾಜಿನ ಹೂಜಿಗಳಂತಹ ಬೆಂಗಳೂರಿನ ಬಹುತೇಕ ಕಾರ್ಪೋರೇಟ್ ಕಂಪನಿಗಳು ಹೀಗೆಯೇ ಉಸಿರಾಡುತ್ತವೆಂದು ಅವನ ಅಂದಾಜು. ಅವನ ವೃತ್ತಿಜೀವನದ ಎರಡನೇ ಕಂಪನಿ ಇದು. ಹಾಗಾಗಿ ಇಂತಹ ಕಂಪನಿಗಳ ಕುರಿತಾಗಿ ತೀರ ಹೊಸಬರಿಗಿರುವ ಬೆರಗುಗಣ್ಣು ಇರಲಿಲ್ಲವಾದರೂ ಒಂದು ಸಣ್ಣ ಮಟ್ಟದ ಕುತೂಹಲವಂತೂ ಇತ್ತು. ಹಾಗೆಯೇ ಒಂದಷ್ಟು ಹೊಸ ಸಹೋದ್ಯೋಗಿಗಳ ಪರಿಚಯವಾಗುವ ಹೊತ್ತಿನಲ್ಲಿ ಒಬ್ಬಳು ಮಧ್ಯವಯಸ್ಸಿನ, ಗುಂಡುಸೈಜಿನ, ಸೀರೆಯುಟ್ಟ ಕಪ್ಪಗಿನ ಹೆಂಗಸು - ತನಗೂ ಈ ಆಫೀಸಿಗೂ ಸಂಬಂಧವೇ ಇಲ್ಲವೆಂಬಂತೆ ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ಓಡಾಡುತ್ತಿದ್ದಳು. ಇದೇನು, ಇವಳು ಹೀಗೆ? ಎಂದು ಯೋಚಿಸುತ್ತಿರುವಾಗಲೇ, ತನ್ನ ಪಕ್ಕದವನ ಹತ್ತಿರ ಬಂದು, 'ನಮ್ಮ ಅಜೀತ್ ದು ಈ ತೆಮಿಳು ಸಾಂಗ್ ಕೇಳಿದ್ದಿರಾ, ಶೆನ್ನಾಗೈತೆ' ಎನ್ನುವಾಗ ಅನಾಯಾಸ ಕಂಡ ಅವಳ ಉಬ್ಬುಹಲ್ಲು, ಇಳಿಬಿದ್ದ ಗಲ್ಲ, ಎದೆ, ಡೈ ಹಾಕಿ ಹಾಕಿ ಕಪ್ಪನೆಯ ಬಣ್ಣಕ್ಕೂ ಜಿಗುಪ್ಸೆಯಾಗುವಷ್ಟುಕಡುಗಪ್ಪಾದ ಕೆದರಿದ ಕೂದಲು ಮತ್ತು ಯಾರೋ ಅಸೆಂಬಲ್  ಮಾಡಿದಂತೆ ದೊಡ್ಡದಾಗಿ ಕಾಣುವ ಅವಳ ಕಣ್ಣುಗಳ ದರ್ಶನವಾದದ್ದು. ಅವಳು ಈ ಆಫೀಸಿನ ಆಯಾ,  ಸರ್ವಮಯ ಸರ್ವಾಂತರ್ಯಾಮಿ - ಇಲ್ಲಿ ಏನೇ ಸಹಾಯ ಬೇಕಾದರೂ ಅವಳನ್ನೇ ಕೇಳಬೇಕು ಎಂಬ ಪ್ರಾಥಮಿಕ ಸಂಗತಿ ತಿಳಿದುಕೊಂಡ. ಬಿಸಿಲಿನ ಝಳಕ್ಕೆ ಆಫೀಸಿನ ಹೊರಮೈ ಕೆಂಡದುಂಡೆಯಾಗಿದ್ದರೂ ಅಂತರಂಗದಲ್ಲಿ ಶೀತಲ ಹಿಮಗಿರಿಯಂತೆ ಹವೆ ನಿಯಂತ್ರಣದಲ್ಲಿತ್ತು. ಒಂದು ತೊಟ್ಟೂ ಬೆವರು ಬಸಿಯದ ಆ ಸುಪ್ರೀತ ವಾತಾವರಣದಲಿ ಗಂಟಲಿಗೆ ಒಂದೆರಡು ಹನಿ ಚಹಾ ಬಿದ್ದರೆ ಮೈಮನ ಹಗುರಾದೀತೆಂದು ಆಫೀಸಿನ ಮೂಲೆಯಲ್ಲಿರುವ ಪುಟ್ಟ ಪ್ಯಾಂಟ್ರಿಗೆ ಕಾಲಿಟ್ಟಿದ್ದೇ, ತಾನು ಯಾವುದೋ ಅಗಮ್ಯದ ಪರಿಚಿತ ಜಾಗಕ್ಕೆ ಬಂದಿದ್ದೇನೆಂದು ಅನಿಸತೊಡಗಿತು.

ಅನಾದಿ ಕಾಲದಿಂದ ಅನವರತ ಕಾಡುತ್ತಿದ್ದ ಕನಸೊಂದು ಇಂದು ಎದುರಿಗೆ ಬಂದಂತೆನಿಸಿ ಹೊಟ್ಟೆಯೊಳಗೆಲ್ಲೋ ಛುಳ್ಳೆಂದಿತು. ಥಣ್ಣಗೆ ಮುದುರಿಕೊಂಡಿದ್ದ ಬೆವರು ಗ್ರಂಥಿಗಳು ಈಗ ಎಚ್ಚೆತ್ತವು. ಸಮಾಧಾನವೆಂದರೆ ಆಯಮ್ಮ ಇರಲಿಲ್ಲ. ಇದ್ದಿದ್ದರೆ ಅವಳನ್ನು ಹೇಗೆ ಎದುರಿಸುವುದೆಂದು ಚಿಂತೆಯಾಗಿತ್ತು. ಕೈಗೆ ಸಿಕ್ಕ ಟೀ ಬ್ಯಾಗ್ ಒಂದನ್ನು ಬಿಸಿನೀರಿಗೆ ಹಾಕಿಕೊಂಡು ಇನ್ನೇನು ಹೊರಡಬೇಕೆನ್ನುವಾಗ, ಎಡಮಗ್ಗುಲಿನ ಮೂಲೆಯಲ್ಲಿ ಒಂದು ಚಿಕ್ಕ ಪೌಳಿಯ ಮೇಲೆ ನಾಲ್ಕು ಬೊಂಬೆಗಳು ಕಂಡವು. ಸೋಜಿಗವೆನಿಸಿತು. ಹತ್ತಿರಹೋಗಿ ನಿಂತ. ಬೊಂಬೆಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿದ್ದವು, ಈಗ ತಾನೇ ಕುಲುಮೆಯಿಂದ ತೆಗದ ಹೊಸ ಬಂಗಾರದ ತುಂಡುಗಳಂತೆ ಆಕರ್ಷಕವಾಗಿದ್ದವು. ಮೇಲ್ನೋಟಕ್ಕೆ ಅವು ಗಂಡು ಬೊಂಬೆಗಳೆಂದು ತೋರಿತು. ಒಂದಿಷ್ಟು ಹತ್ತಿ, ಮರ, ಕಡ್ಡಿ, ಬಟ್ಟೆ, ಹೀಗೆ ಏನೇನೋ ತುಂಡು ತುಂಡು ಸಾಮಾನುಗಳಿಂದ ಮಾಡಿದ ಆ ಬೊಂಬೆಗಳ ಮುಖದಲ್ಲಿ ಮಂದಹಾಸವೇನೂ ಇರಲಿಲ್ಲ. ಸಪ್ಪೆ ಮುಖದಲ್ಲೂ ಕೂಡ ಅವುಗಳ ಕಣ್ಣು ಮಾತ್ರ ಗುಲಗಂಜಿಯಂತೆ ಹೊಳೆಯುತ್ತಿದ್ದವು; ನೋಡುಗರ ಜೊತೆ ನೇರ ಸಂವಾದಕ್ಕಿಳಿಯುವಷ್ಟು ತೀಕ್ಷ್ಣವಾಗಿದ್ದವು. ಇನ್ನೂ ವಿಚಿತ್ರ ಎಂದರೆ ಅವುಗಳ ಮುಖ ಮಾತ್ರ ಮನುಷ್ಯರದ್ದು, ದೇಹ ಬೇರೆ ಯಾವುದೋ ಲೋಕದ ಅಪರಿಚಿತ ಪ್ರಾಣಿಗಳಂತಿತ್ತು. ಇದೇಕೆ ಹೀಗೆ? ಯಾರು ಮಾಡಿದ್ದು ಇದು? ಎಂದು ತಲೆಕೆರೆದುಕೊಳ್ಳುತ್ತಿರುವಾಗ, 'ಕಂಗಳಿರಂದಾಲ್, ಉನ್ಕಂಗಳಿರಂದಾಲ್' ಎಂದು ಗುಣುಗುತ್ತ ಬಂದ ಅವಳನ್ನು ನೋಡಿದವನೇ ಅಲ್ಲಿಂದ ಗೋಡೆಯ ಅಂಚನ್ನು ಸವರುತ್ತ ಹೊರಬಿದ್ದ. ಅವಳು ಅವಳದೇ ಲೋಕದಲ್ಲಿದ್ದಳು. ಅವನನ್ನು ಗಮನಿಸದೇ ಇದ್ದುದಕ್ಕೆ ಪೆಚ್ಚಾಗಿ ಅವನು, 'ಇವಳು ಪಕ್ಕಾ ಮೌಂಟ್ಬ್ಯಾಟನ್ನಿನ ತುಂಡೇ' ಎಂದು ಅಲ್ಲಿನ ಗಾಳಿಗೆ ಚಾಡಿ ಹೇಳಿ ಅರ್ಧತುಟಿಯಲ್ಲಿ ನಕ್ಕ. 

ಎರಡು, ಮೂರು, ನಾಲ್ಕನೇ ದಿನವೂ ಇಷ್ಟೇ ಆಗಿದ್ದು. ಅದೇ ಜಾಗ, ಬೇರೆ ಹಾಡು.

ಐದನೇ ದಿನಕ್ಕೆ ಸಲಿಗೆಯ ಭಾವವೊಂದು ತಾನಾಗೇ ಮೈಗೂಡಿತ್ತು. ಎಂದಿನಂತೆ ಸಮ್ಮೋಹನದ ಆ ಬೊಂಬೆಗಳನ್ನು ಕಳೆದುಹೋದ ತನ್ನ ಆತ್ಮಬಂಧುವ ನೋಡುವಂತೆ ನೋಡುತ್ತ ನಿಂತಿದ್ದ. ಅಲ್ಲಿಗೆ ಬಂದವಳೇ, 'ನಿಮ್ಮೆಸ್ರು ಸಸಿ ಅಂತೆ...ನಿಮ್ಮೂರುಸಿಮೊಗ್ಗಾ ಅಂತೆ?!' ಎಂದು ಮಾತು ಸರಿಸಿದಳು. 'ನೀವು ರುಂಬಸೈಲೆಂಟು, ವೊಳ್ಳೆವ್ರು ಅಂತಾ ಎಲ್ರೂ ಹೇಲ್ತಾರೆ!'

ಸಂತಸವೋ ಮುಜುಗರವೋ ಒಟ್ಟಿನಲ್ಲಿ, 'ಹ್ಞಾ, ಹೌದು. ಸಸಿ ಅಲ್ಲ, ಶಶಿ, ಶಶಿಕಾಂತ್' ಎಂದು ಅಭಾವದಲಿ ಹೇಳಿದ.

'ನಮ್ಕೆನಿಮ್ಮಷ್ಟು ಶೆನ್ನಾಗಿ ಹೇಲಕ್ಬರಲ್ಲ ಸಾ..' ಅಭಂಗಿಯ ಹಲ್ಲುಗಳು ಪ್ರದರ್ಶನಗೊಂಡವು.

'ಈ ಬೊಂಬೆಗಳನ್ನ ಯಾರು ಮಾಡಿದ್ದು?'

'ನಾನೇ ಸಾ..ನಂಕೆ ಬೊಂಬೆ ಮಾಡದು ಇಷ್ಟ ಸಾ..ನಿಮಕೂ ಒಂದು ಬೇಕಾ, ಮಾಡ್ಕೊಡ್ತೀನಿ' ಮಧ್ಯದಲ್ಲಿ ಸುರುಳಿಯಾಗಿ ಬಿದ್ದುಕೊಂಡಿದ್ದ ಸೆರಗನ್ನು ಆಕಡೆಗೂ ಈಕಡೆಗೂ ಕೊಂಚ ಸರಿಸಿ ನುಲಿದಳು.

'ಇಲ್ಲ, ಪರ್ವಾಗಿಲ್ಲ' ಎಂದು ಬಾಯಿಗೆ ಬಂದಿದ್ದ ಹೃದಯವನ್ನು ಗಪ್ಪನೆ ನುಂಗಿ ಅಲ್ಲಿಂದ ಕಾಲ್ಕಿತ್ತ. ಇದ್ಯಾವುದಿದು ವಿಚಿತ್ರ ಕ್ಯಾರೆಕ್ಟರ್, ಸ್ವಲ್ಪ ತಿಳ್ಕೋಬೇಕು ಎಂದು ತನ್ನ ಟೀಮಿನ ಸೀನಿಯರ್ ಒಬ್ಬನನ್ನು ಊಟದ ಸಮಯದಲ್ಲಿ ವಿಚಾರಿಸಿದ. 'ಗುರುವೇ, ಅವಳ ಸಾವಾಸ ಮಾತ್ರ ಮಾಡ್ಬೇಡ. ಮಾನ್ ಚತ್ರಿ ಅವ್ಳು. ನಿನ್ನಂತಾ ಬಕ್ರಾಗಳು ಸಿಗ್ಲಿಅಂತಾ ಕಾಯ್ತಿರ್ತಾಳೆ. ಯಾರಾದ್ರೂ ಅವ್ಳು ಹೇಳಿದ್ದಕ್ಕೆ ತಲೆ ಆಡ್ಸಿದ್ರೋ..ಅಷ್ಟೇ, ದುಡ್ಡು ಕೀಳೋದಕ್ಕೆ ಶುರು ಮಾಡ್ತಾಳೆ. ಹುಷಾರಾಗಿರು. ನಿನ್ನತ್ರ ಏನಾದ್ರು ಕೇಳಿದ್ಲಾ?'.

'ಹೇ, ಇಲ್ಲಪಾ..' ಎಂದು ಪೆಚ್ಚಾಗಿ ಬಾಯಿತೆಗೆಯುತ್ತಿದ್ದವ, ಗಪ್ಪನೆ ಮುಚ್ಚಿದ - ಅವಳು ಮೀರಾ ಅಲ್ವಾ? ಡೌಟೇ ಇಲ್ಲ, ಅವಳೇ! ಐದು ವರ್ಷದ ಮೇಲೆ ಇಲ್ಲಿ ಹೀಗೆ ನೋಡುತ್ತೇನೆಂದು ಅಂದುಕೊಂಡಿರಲಿಲ್ಲ. ಮೊದಲು ತನ್ನ ಜೀವದ ಅವಿಭಾಜ್ಯ ಅಂಗವಾಗಿದ್ದ ಪ್ರೀತಿ ಅದು. ಒಂದು ನೋಟ ಇಷ್ಟು ವೇಗದಲ್ಲಿ, ಅಂದರೆ ಸೆಕೆಂಡಿಗೂ ಕಡಿಮೆ ಸಮಯದಲ್ಲಿ ಸಾವಿರಾರು ಚಿತ್ರಗಳನ್ನು ಮಿಂಚಿಸಿಮಾಯವಾಗುವುದು ಎಂತಹ ಸೋಜಿಗ! ನಿನ್ನೆ ಮೊನ್ನೆಯಂತೆಯೇ ನಡೆದಿದ್ದ ಒಲವಿಂದ ಚೆನ್ನಾಟಗಳು, ಇಡೀ ಜೀವನಕ್ಕಾಗುವಷ್ಟು ತೆಗೆದುಕೊಂಡ ನಿರ್ಧಾರಗಳು, ಕಟ್ಟಿದ ಕನಸುಗಳು, ಆಡಿಯೂ ಆಡದ ಮಾತುಗಳು..ಇದ್ಯಾವುದಕ್ಕೂ ಈಗ ಮಾತಿಲ್ಲ. ನಮ್ಮೀ ಪ್ರೀತಿಯ ಆಟದಲ್ಲಿ ಗೆದ್ದಿದ್ದು ನಮ್ಮಪ್ಪನೋ, ಅವರಪ್ಪನೋ..ಒಟ್ಟಿನಲ್ಲಿ ನಾವು ಬೇರೆಯಾಗಿದ್ದು ಮಾತ್ರ ಸತ್ಯ. ಅಂದಿನಿಂದ ಅದೇ ಬೇಗುದಿಯನು ಎದೆಯೊಳಗಿಟ್ಟುಕೊಂಡು ಮದುವೆಯಾಗದೇ, ಮೀರಾ ಯಾವತ್ತಾದರೊಂದು ದಿನ ಸಿಗುತ್ತಾಳೆಂಬ ಮಾಯಕದ ಭರವಸೆಯಲ್ಲಿ ಅಲೆಯುತ್ತಿದ್ದೇನೆ. ಅವಳ ಬಗ್ಗೆ ವಿಷಯ ತಿಳಿಸುತ್ತಿದ್ದವರೂ ಸಂಪರ್ಕ ಕಡಿದುಕೊಂಡಿದ್ದರು. ಹಾಗಾಗಿ ಆಫೀಸೆಂಬ ಈ ಅಮೋಘ ಪ್ಲೂಟೋ ಗ್ರಹದಲ್ಲಿ ಅಪರಿಚಿತರಂತೆ ಮತ್ತೆ ಭೇಟಿಯಾಗಿದ್ದೇವೆ. ಓ ಗಾಡ್, ಸ್ವಲ್ಪ ದಪ್ಪಗಾಗಿದ್ದಾಳೆ ಅನ್ನೋದು ಬಿಟ್ರೆ, ಆಗಿನಷ್ಟೇ ಆಕರ್ಷಕವಾಗಿದ್ದಾಳೆ. ಅನಿರೀಕ್ಷಿತವಾಗಿ ಅನುಪಮ ಖನಿಯೊಂದು ಹೀಗೆ ಅಚಾನಕ್ಕಾಗಿ ಸಿಕ್ಕಿದರೆ ಅದನ್ನು ಸಂಪೂರ್ಣ ಬಾಚಿಕೊಳ್ಳುವ ಪರಿಯೆಂತು..?

ಅವಳೀಗ ಮೀರಾ ಮೋಹನ್. ಒಂಭತ್ತು ತಿಂಗಳಿಂದ ಮ್ಯಾಟರ್ನಿಟಿ ರಜೆಯಲ್ಲಿದ್ದವಳು ನಿನ್ನೆಯಷ್ಟೇ ಮತ್ತೆ ಆಫೀಸಿಗೆ ಬಂದಿದ್ದಾಳೆ. ಗಂಡ ಯಾವುದೋ ಸಾಫ್ಟ್ ವೇರ್ ಕಂಪನಿಯಲ್ಲಿ ಸೀನಿಯರ್ ಡೈರೆಕ್ಟರ್. ಶ್ರೀಮಂತಿಕೆಯಿದ್ದರೂ ಸ್ವಾಭಿಮಾನದ ಹಂಬಲಕ್ಕೆ ಕೆಲಸಕ್ಕೆ ಬರುತ್ತಾಳೆ. ಅವಳಿಗೂ ಅವನಿಗೂ ವಯಸ್ಸಿನ ಅಂತರ ಬಹಳ ಇದ್ದಿದ್ದರಿಂದ ಸಹಜವಾಗಿ ಇತರ ಅಂತರಗಳುಹೆಚ್ಚಿದ್ದವು. ಕೈತಪ್ಪಿದಪ್ರೇಮಿಯೊಬ್ಬಳು ಹೀಗೆ ಕೆಲ ವಿಷಯಗಳಿಂದ ವಂಚಿತಳಾಗಿದ್ದಾಳೆಂದುಕೇಳುವುದೇ ಎಷ್ಟು ಆನಂದ?! ಶಶಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆನಿಸಿತು. 'ನೀನ್ಯಾಕಿನ್ನೂ ಮದ್ವೆ ಆಗಿಲ್ವೋ ಸ್ಟುಪಿಡ್ಫೆಲೋ? ನಿನ್ನ ನೋಡಿದ್ರೆ ಹೊಟ್ಟೆ ಉರಿಯತ್ತೆ' ಎಂದು ಅನಾಮತ್ತಾಗಿ ಬಿಗಿದಪ್ಪಿದಳು. ಅನಿರೀಕ್ಷಿತವಾಗಿ ಹೆಣ್ಣುಹುಲಿಯೊಂದು ದಾಳಿ ಮಾಡಿದಾಗ ಹೇಗೆ ಪ್ರತಿಕ್ರಿಯಿಸುವುದೆಂದು ಶಶಿ ಯೋಚಿಸುತ್ತಿರುವಾಗಲೇ ಮುಖದ ತುಂಬ ಮುತ್ತು ಸುರಿದು, 'ಗೆಟ್ ಲಾಸ್ಟ್ಫ಼್ರಮ್ಹಿಯರ್' ಎಂದು ಆ ಮೀಟಿಂಗ್ ರೂಮಿಂದ ಹೊರದಬ್ಬಿದಳು ಅಮಾನವೀಯಳಂತೆ‌ ಯಾವಾಗಲೂ ಇವಳು ಹೀಗೆಯೇ, ಬ್ರಹ್ಮನಪ್ಪನಿಗೂಅರ್ಥವಾಗದಅನರ್ಥಕೋಶ - ಎಂದು ಬೈದುಕೊಳ್ಳುತ್ತ ಹೊರಬರುವ ಹೊತ್ತಲ್ಲಿ ಅವರಾಟವನ್ನು (ಪೂರ್ತಿ?) ನೋಡಿದಳೋ ಗೊತ್ತಿಲ್ಲ, ಕಾಟಿಯಮ್ಮ ಏನೋ ಅವ್ಯಕ್ತವಾದುದೊಂದು ದಕ್ಕಿದಂತೆ, ಪ್ರಶ್ನಾರ್ಥಾಕವಾಗಿ ನೋಡಿಯೂ ನೋಡದಂತೆ ಜಾರಿದಳು. ಮೀರಾಗೆ ನೆನಪುಗಳು ಹಳೆಯ ಟ್ರಂಕಿನಲ್ಲಿ ಯಾವುದೋ ಮೂಲೆಯಲ್ಲಿದ್ದರಷ್ಟೇ ಸಾಕು, ಪದೇಪದೇ ಮೂಗಿಗೆ ಬಡಿಯುವ ಊದುಬತ್ತಿಯ ಹೊಗೆಯಂತೆ ಕಾಡಬಾರದು. ಅವಳಿಗೆ ಪ್ರೀತಿ ಬೇಕು, ಆದರೆ ಅದು ಅವಳ ಧೈರ್ಯವನ್ನಾಗಲೀ, ಸಮಯವನ್ನಾಗಲೀ, ಜವಾಬ್ದಾರಿಯನ್ನಾಗಲೀ ಕೇಳಬಾರದು. 

ಮೀರಾ ಒಲಿದಿದ್ದುಒಗಟಾಗಿಯೇ. ಶಶಿ ಅಷ್ಟು ಪ್ರೀತಿಸುತ್ತಾನಾದರೂ ಅವಳು ಪೂರ್ತಿ ಅರ್ಥವಾಗಿದ್ದೇ ಇಲ್ಲ. ಹುಡುಗರು ಎಷ್ಟು ಕ್ಲ್ಯಾರಿಟಿಇಟ್ಟುಕೊಂಡಿರುತ್ತಾರೆ ಈ ವಿಷಯದಲ್ಲಿ. ಮೀರಾಳಂಥಹುಡುಗಿಯರೇಕೆ ಹೀಗೆ? ಬೇಕು ಅಂದ್ರೆ ಬೇಡ, ಬೇಡ ಅಂದ್ರೆ ಬೇಕು. ಅದರಲ್ಲೂ ಈ ಹುಡುಗಿಯೋ...ಅವಳನ್ನು ತಿಳಿಯಬೇಕೆಂದರೆ ಒಮ್ಮೊಮ್ಮೆ ಚಿಟ್ಟೆ ಹಿಡಿದಂತೆ, ಮತ್ತೊಮ್ಮೆ ಜೇನುಗೂಡಿಗೆಕೈಹಾಕಿ ನಖಶಿಖಾಂತ ಕಚ್ಚಿಸಿಕೊಂಡಂತೆ. ಮಾತನಾಡುವ ಸಂದರ್ಭದಲ್ಲಿ ಮೌನಿ, ಶಾಂತವಾಗಿರುವಾಗ ವಿಪರೀತ ವಾಚಾಳಿ. ಮಾತನಾಡುವ ಸಂದರ್ಭ ಎಂದರೆ - ನಮ್ಮ ಮದುವೆಯ ವಿಚಾರಕ್ಕೆ ಬಂದಾಗ ಅವಳಿಂದ ಸಿಗುತ್ತಿದ್ದುದು ಒಂದೇ ಉತ್ತರ - ಗೊತ್ತಿಲ್ಲ. ಏನು ಹಾಗೆಂದರೆ? ಈಗಾಗಲೇ ತನಗೆ ಮದುವೆಯ ವಯಸ್ಸು ಮೀರತೊಡಗಿದೆ. ಮನೆಯವರ ಒತ್ತಾಯವೂಹೆಚ್ಚುತ್ತಿದೆ. ಮನಸಿಲ್ಲದಿದ್ದರೂ ಮನೆಯವರ ಒತ್ತಾಯಕ್ಕೆ ಹುಡುಗಿಯರನ್ನು ನೋಡುವ ಕಾರ್ಯಕ್ರಮ ಕೂಡ ಶುರುವಾಗಿದೆ. ಅಂಥದರಲ್ಲಿ ನೀನು ಯಾವ ನಿರ್ಧಾರವನ್ನೂತಿಳಿಸುತ್ತಿಲ್ಲ ಎಂದರೆ ಹೇಗೆ, ಎಂದು ಶಶಿ ಅವಲತ್ತುಕೊಂಡರೆ, ಮೀರಾ ಅನ್ಯಮನಸ್ಕಳಾಗಿ, 'ಆಯ್ತು, ನೀವು ನನಗೋಸ್ಕರ ಕಾಯೋದೇನೂ ಬೇಡ. ನಿಮಗಿಷ್ಟ ಬಂದವರನ್ನ ಮದ್ವೆ ಆಗಿ' ಎನ್ನುವಳು. ಒಡನೆಯೇ, 'ನಾನು ಹೇಗಿದ್ರೂ ಒಂಟಿ ಪಿಶಾಚಿ, ನನ್ನನ್ಯಾರು ನೋಡ್ತಾರೆ..ಕರಿಪಿ ಎಂದು ದೂರ ತಳ್ಳೋರೆ ಹೆಚ್ಚು. ಎಲ್ರೂಇದ್ದೂನನ್ನನ್ನಅರ್ಥಮಾಡ್ಕೊಳ್ಳೋರು, ನಂಜೊತೆಕೊನೆವರೆಗೂಇರ್ತೀನಿಅನ್ನೋರು ಯಾರೂ ಇಲ್ಲ' ಎಂದು ಕಣ್ಣೆರುಹಾಕುವಳು. 'ಅದಕ್ಕೆ ಕಣೆ, ನಿನ್ನ ಮದ್ವೆಯಾಗಿ ಸುಖವಾಗಿ ನೋಡ್ಕೋಬೇಕು. ಎಲ್ಲಾ ಬಿಟ್ಟು ಬಂದುಬಿಡು, ಮದುವೆಯಾಗೋಣ' ಎಂದರೆ - 'ನನಗೇನೂ ಗೊತ್ತಿಲ್ಲ. ಸದ್ಯಕ್ಕೆ ಮದುವೆಗೆ ನಾನು ರೆಡಿ ಇಲ್ಲ. ನಿಮಗೆ ತೋಚಿದಂತೆ ಮಾಡಿ' ಎಂದು ಹೇಳಿ ತನ್ನ ಕೆಲಸದಲ್ಲಿ ಮಗ್ನಳಾಗಿಬಿಡುತ್ತಿದ್ದಳು. 

'ಅದ್ಯಾವನೋ ಉತ್ತರ ಕರ್ನಾಟಕದ ಯಾವುದೋ ಮೂಲೆಯವನು, ಅದರಲ್ಲೂ ಲಿಂಗಾಯತ ಅಂತೆ. ಬೇಕಾದ್ರೆ ನನ್ನ ಮಗಳನ್ನ ಬೆಂಗಳೂರಿನ ಯಾವುದಾದ್ರೂ ಹೊಲೆಯನಿಗೆ ಕೊಡ್ತೇನೆ ಹೊರ್ತು ಅವನಿಗೆ ಮಾತ್ರ ಕೊಡಲ್ಲ' ಎಂದು ಅವಳ ತಂದೆ ಹೀಗಾಡಿದರಲ್ಲದೇ; 'ತಮ್ಮಾ, ಮದಲ ಭಾಳ ನಾಜೂಕಿನ ಮಂದ್ಯನ ಬೆಂಗ್ಳೂರ ಮಂದಿ ಬರೇ ಸಿನಿಮಾದಾಗ, ಟೀವ್ಯಾಗ ಅಷ್ಟ ಛಂದ ಕಾಣ್ತಾರ. ನೀ ಅವ್ರ ಬೆನ್ನತ್ತಿಹ್ವಾದೆಂದ್ರ ಜೀವನಾನ ಬರ್ಬಾದ್ಮಾಡ್ಕೋತಿ ನೋಡ. ನಿನಗನಾವ್ಬೇಕಂದ್ರ ಇಕಾಡಿ ಬಾ' ಎಂದು ಶಶಿಯ ಅಪ್ಪ ತಾವೂ ಪಾಂಚಜನ್ಯ ಊದಿದ್ದರು. ಈ ಹಗ್ಗಜಗ್ಗಾಟದಲ್ಲಿಆಗಿದ್ದಿಷ್ಟು - ಅವಳು ಮದುವೆಯಾದಳು, ಶಶಿಗೆ ಇನ್ನೂ ಹೆಣ್ಣು ಸಿಗದೆ ಒದ್ದಾಡುತ್ತಿದ್ದ... ಈ ರೀತಿ ಸದರೀ ನೆನಪುಗಳಿಗೆ ಅಭಂಗವಾಗಿದ್ದು ಕಾಟಿಯಮ್ಮ ಹಲ್ಲುಕಿರಿಯುತ್ತ 'ಸಾ...' ಎಂದು ಭುಜ ಅಲ್ಲಾಡಿಸಿದಾಗ. ಆದರೂ ಮೀರಾ ತನ್ನಂಥವನಿಗೆ ಈ ರೀತಿ ಮೋಸ ಮಾಡಬಾರದಿತ್ತು ಎಂದು ಹಲುಬಿತ್ತಲೇ ಎದ್ದವನಿಗೆ, 'ಸಾರ್, ಇವತ್ತು ನನ್ನ ಮಕಳ್ದು ಬರ್ತಡೇ. ಸಂಜೇಕೆ ನೀವು ಮನೇಕೆ ಬರ್ಬೇಕು. ಇಲ್ಲಿ ಯಾರನ್ನೂ ಕರೀತಿಲ್ಲಸಾ..ಎಲ್ಲಾ ಸ್ವಾರ್ಥಿಗಳು. ನೀವು ವೊಳ್ಳೇರು. ನೀವ್ ಬಂದ್ರೆ ನನ್ಮಗಾ ಖುಷಿ ಆಕ್ತೈತೆ. ಪಿಲೀಜ್ ಬನ್ನಿ' ಎಂದು ಗೋಗರೆದಳು. 

ತಪ್ತನಾದವ ದಾಕ್ಷಿಣ್ಯಕ್ಕೆ ಬೇಗ ಒಳಗಾಗುತ್ತಾನೆ. ತನ್ನ ಧ್ಯಾನವನ್ನು ಮರೆತು ಇನ್ನೊಬ್ಬರ ಪ್ರಭಾವಳಿಗೆ ಬೇಗ ಸಿಲುಕುತ್ತಾನೆ‌. ಲೋಕದ ತಕ್ಕಡಿಗಳಲ್ಲಿ ಅವನಿಗೆ ಆಸಕ್ತಿಯಿರುವುದಿಲ್ಲ. ನರಳಿಕೆಗಳು ಅವನಿಗೆ ಹಳೆಯ ಪ್ರೇಯಸಿಯಂತೆ ಹೆಚ್ಚು ಆಪ್ತವಾಗಿರುತ್ತವೆ. ಶಶಿ ಶುದ್ಧ ಮುಗ್ಧನೋ, ತಪ್ತ ಪ್ರಾಮಾಣಿಕನೋ ಆ ತರ್ಕದ ಮಾತು. ಪ್ಯಾಂಟಿನಲ್ಲಿ ಎಲ್ಲ ಜೇಬುಗಳನ್ನು ಉಪಯೋಗಿಸಿದರೂ ಬಳಸದೆ ಖಾಲಿಯಿರುವ ಜೇಬೊಂದಿರುತ್ತದೆ. ಅದನ್ನು ಹೆಚ್ಚಾಗಿ ಯಾರೂ ಬಳಸುವುದಿಲ್ಲ. ಅಲ್ಲಿ ಅವನು ತನ್ನ ಬುದ್ಧಿಯನ್ನು ಭದ್ರವಾಗಿ ಸಿಕ್ಕಿಸಿಕೊಂಡು ಓಡಾಡುತ್ತಿದ್ದ. 

ಕಾಟಿಯಮ್ಮನದೊಂದು ಹಳೆಯ ಲೂನಾ ಗಾಡಿ. ನಂಬರ್ ಪ್ಲೇಟ್ ಇಲ್ಲದ ಆ ಪಾಪದ ಗಾಡಿಗೆ ಪೆಟ್ರೋಲ್ ಹಾಕಿದರೆ ಅವಳ ಎಂಭತ್ತು ಕೇಜಿ ದೇಹವನ್ನು ಸುಮ್ಮನೆ ಹೊತ್ತುಕೊಂಡುಓಡಾಡುತ್ತಿತ್ತು. ಕತ್ತೆಗಳನ್ನು ಬಳಸಿ ಬಂಡಿ ಕಟ್ಟಲಾಗದು. ಲೂನಾ ಅವಳ ಕೈಯಲ್ಲಿ ಸಿಕ್ಕು ಕತ್ತೆಯಂತೆಯೇಆಗಿತ್ತೆನ್ನುವುದರಲ್ಲಿ ಆಶ್ಚರ್ಯವೇನೂ ಉಳಿದಿರಲಿಲ್ಲ. ಅಂಡನ್ನು ಹಿಂದಕ್ಕಿಕ್ಕಿ ಮುಂದೆ ಬಾಗಿ ಎನ್ ಫೀಲ್ಡ್ ಓಡಿಸುವವಳಂತೆ ಆ ಲೂನಾವನ್ನುದುರೂಪಯೋಗ ಮಾಡುವುದನ್ನು ನೋಡಿದರೆ ಯಾರಿಗಾದರೂ ಜ್ವರ ಬಂದೀತು; ಸ್ವತಃ ಲೂನಾ ಗೊಂದಲಕ್ಕೆ ಬಿದ್ದು ಮುಗ್ಗರಿಸಿದ್ದೂ ಉಂಟು. ಅವಳ ತಲೆಗೆ ಹೊಂದುವಂತಹ ಹೆಲ್ಮೆಟ್ ಅನ್ನು ಯಾವ ಕಂಪನಿಯೂತಯಾರಿಸಿದ್ದಿಲ್ಲವಾದ್ದರಿಂದ ಅಂತಹ ಅಪಘಾತಗಳಿಂದ ಹೆಲ್ಮೆಟ್ ಬಚಾವಾಗಿದ್ದವು. 'ಇಂಥಾ ಊನದಗಾಡಿಯನ್ನ ಟ್ರಾಫಿಕ್ಕಿನವರು ಹಿಡಿಯಲ್ವಾಕಾಟಮ್ಮ' ಎಂದರೆ, 'ಅಂಥಾ ಧೈರ್ಯ ಯಾರಿಗೈತೆ ಚಾಮಿ? ಇಡೀ ಬೆಂಕ್ಳೂರ್ನಇದ್ರಾಗೇಸುತ್ತತೀನಿ. ನನ್ನ ಹಿಡಿಯಾಕೆ ಯಾರಿಗೂ ಆಗಾದು. ಅದೊನ್ನೂಮುಡಿಯಾದುಚಾಮೀ..' ಎಂದು ಡೋಂಟ್ ಕೇರ್ ಮಾಡದೇ ಹೊರಟುಬಿಡುತ್ತಾಳೆ. ಇಪ್ಪತ್ತೈದು ಮೂವತ್ತು ವರ್ಷದಿಂದ ಇಲ್ಲೇ ಇದ್ದರೂ ಕನ್ನಡವನ್ನುತಮಿಳಿಗೆ ಚೆನ್ನಾಗಿ ಬಗ್ಗಿಸಿಕೊಂಡು ಮಾತಾಡುತ್ತಾಳೆ. ತನ್ನ ಮನಸಿಗೆ ಉಲ್ಲಾಸ ಬರುವಂತೆ ನಡೆದುಕೊಳ್ಳುವವರನ್ನು ಮನೆಯ ದೇವರಂತೆ ಉಪರಿಚರಿಸುವ ಈ ಪ್ರೀತಿಯ ಗಯ್ಯಾಳಿ, ವಿರುದ್ಧ ನಿಂತವರನ್ನು ತನ್ನ ಲೂನಾ ಕೆಳಗೆ ಸಿಕ್ಕುವ ಇರುವೆಗಳಂತೆ ಹೊಸಕಿ ಹಾಕುತ್ತಾಳೆ. ಇಷ್ಟಕ್ಕೂ ಶಶಿ ಕನ್ನಡಿಯಲ್ಲಿ ಮುಖವನ್ನು ಮಾತ್ರ ನೋಡುವುದನ್ನು ಕಲಿತಿದ್ದ. 

ಆಫೀಸ್ ಮುಗಿಸಿ ಕಾಟಿಯಮ್ಮನಲೂನಾಬೆನ್ನುಹತ್ತಿ ಅವಳ ಮನೆಯಕಡೆಗೆಹೊರಟಿದ್ದಶಶಿಗೆ ಅಲ್ಲಿ ಬೇರೆಯದೇಕೋರಮಂಗಲದ ಪರಿಚಯವಾಯಿತು. ಹೊರಮೈಗೆ ಬರೀ ಪಬ್ಬು, ಬಾರು, ಮೋಜು ಮಸ್ತಿಗಳನ್ನುಅಂಟಿಸಿಕೊಂಡು ಸೆಳೆಯುವ ಅದೇ ಕೋರಮಂಗಲ ತನ್ನ ಕಂಕುಳಲ್ಲಿ ಇಂಥ ಸ್ಲಮ್ ಒಂದನ್ನು ಹೊತ್ತುಕೊಂಡಿರುತ್ತದೆ ಎಂದು ಎಣಿಸಿರಲಿಲ್ಲ. ಅದೊಂದು ದೊಡ್ಡ ಮೋರಿ - ನಗರದ ದೈನಂದಿನ ಅವಶೇಷಗಳ ಸಂಗಮ ಸ್ಥಾನ. ಅದಕ್ಕೆ ಹೊಂದಿಕೊಂಡ ನೂರಾರು ಚಿಕ್ಕಚಿಕ್ಕ ಮನೆಗಳು. ಅವರ ದಿನದ ಬಹುತೇಕ ಕೆಲಸಗಳು ಮನೆಯ ಹೊರಗೇ ನಡೆಯುತ್ತಿದ್ದುದರಿಂದ ದೊಡ್ಡ ಮೋರಿಯು ಅಲ್ಲಲ್ಲಿ ಸಣ್ಣ ಸಣ್ಣಮರಿ ಮೋರಿಗಳಿಗೆ ಜನ್ಮಕೊಟ್ಟು ಇಡೀ ರಸ್ತೆಗಳೇಗಬ್ಬೆದ್ದು ಹೋಗಿದ್ದವು. ಅಂಥ ಜಾಗದಲ್ಲಿ ಹಿಂದುಳಿದ ವರ್ಗದವರಿಗೆ ಆಶ್ರಯಮನೆ ಯೋಜನೆಯಲ್ಲಿ ಸರ್ಕಾರ ಕಟ್ಟಿಸಿಕೊಟ್ಟ ಅಪಾರ್ಟ್ಮೆಂಟ್ ಒಂದರಲ್ಲಿ ಕಾಟಿಯಮ್ಮನ ಮನೆ ಎರಡನೇ ಮಹಡಿಯಲ್ಲಿದೆ. ಆ ಕಟ್ಟಡವೂ ಅಷ್ಟೇ, ಎಲ್ಲ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಟ್ಟುಹೋದ ಫ್ಲ್ಯಾಟ್ ಗಳು. ಮನೆ ಸಿಕ್ಕಿರೋದುಯಾರಿಗೋ, ವಾಸವಾಗಿರೋದುಇನ್ಯಾರೋ. ಕಾಟಿಯಮ್ಮ ಎರಡು ಲಕ್ಷಕ್ಕೆ ಕೊಂಡ ಮನೆ ಅದು. ಮೆಟ್ಟಿಲು ಹತ್ತುವಾಗ ಒಂದಿಷ್ಟು ಹೆಂಗಸರು ಕಾಲು ಅಗಲಿಸಿಕೊಂಡುಮನಸೋ ಇಚ್ಛೆ ಹರಟುತ್ತ ಕುಳಿತಿದ್ದರು. ಅವರ ವಾರೆಗಣ್ಣು ಇತ್ತ ಬೀಳುವ ಮೊದಲೇ, 'ಇವರು ನಮ್ ಆಫೀಸಿನ ಸಾರು' ಎಂದು ಗಡಿಬಿಡಿ ಮಾಡಿಕರೆದೊಯ್ದಳು. ಅಲ್ಲಿನ ಅಷ್ಟೂ ಹೆಂಗಸರು ನೋಡುವುದಕ್ಕೆ ಕಾಟಿಯಮ್ಮನ ಹೊಕ್ಕುಳಬಳ್ಳಿಯ ಹೂಗಳಂತೆಯೇ ಕಂಡರು. ಕ್ರಿಶ್ಚಿಯನ್ನಿಗೆ ಮತಾಂತರ ಹೊಂದಿದ ತಮಿಳಿನ ಹಿಂದುಳಿದ ವರ್ಗದವರು ಎಂದು ಮೇಲ್ನೋಟಕ್ಕೆ ಅನಿಸಿತು. ಇಲ್ಲೇ ಹುಟ್ಟಿ ಬೆಳೆದಿದ್ದರೂ ಅವರಿಗೆ ದಿನಸಿಯ ಕನ್ನಡ ಮಾತ್ರ ಗೊತ್ತು, ಮನಸಿನ ಕನ್ನಡವಲ್ಲ. ಹೀಗೆ ಭಗ್ನಗೊಂಡ ಐತಿಹಾಸಿಕ ಸ್ಥಳವನ್ನು ನೋಡುವಂತೆ ಎಲ್ಲವನ್ನು ಗಮನಿಸುತ್ತ, ತರ್ಕಿಸುತ್ತಕಳೆದು ಹೋಗುತ್ತಿದ್ದ ಶಶಿ ಕಾಟಿಯಮ್ಮನ ಮನೆಯ ಕಮಟು ವಾಸನೆಗೆಎಚ್ಚೆತ್ತ. 'ಸಾರ್, ನಿಮಕೆಇಸ್ಟಾಆಕತ್ತೆ ಅಂತ ಮಾಡಿದ್ದೀನಿ' ಎಂದು ಎಣ್ಣೆ ತುಪ್ಪ ಸುರುವಿದಭಕ್ಷ್ಯಗಳನ್ನು ಬಡಿಸಿದಳು. ಎಂಟನೇ ಇಯತ್ತೆಯಲ್ಲಿ ಓದುತ್ತಿರುವ ಅವಳ ಮಗಳು ಏಂಜೆಲ್ನಾಚುತ್ತ, ತುಟಿಯಂಚಲಿ ನಗುತ್ತ, ವಿಶೇಷವಾಗಿ ನುಲಿಯುತ್ತ, ವಿಚಿತ್ರವಾಗಿ ಗಮನಿಸುತ್ತಿದ್ದುದು, ಶಶಿಗೆ ಆ ಹುಡುಗಿಯನ್ನು ಸಂಭಾಳಿಸುವುದುಪೇಚಾಯಿತು. ಗಿಫ಼್ಟ್ ಏನೂ ತಂದಿಲ್ಲವಾದ್ದರಿಂದ ಕೈಗೆ ಸಿಕ್ಕ ಎರಡುಸಾವಿರ ರೂಪಾಯಿಯ ನೋಟೊಂದನ್ನು ಅವಳ ಕೈಗಿಟ್ಟಾಗ ಅವಳು ಕುಣಿದಾಡಿದ್ದುದ ಕಂಡು ಒಂದು ನಮೂನೆಯ ತೃಪ್ತಿಯಾಯಿತು. 'ಇರ್ಲಿ ಬಿಡಿ ಸಾರ್' ಎಂದು ಆ ನೋಟನ್ನು ಕಿತ್ತುಕೊಂಡು ಕಂಕುಳಲ್ಲಿ ಸಿಕ್ಕಿಸ್ಕೊಂಡಳು. ಮತ್ತೆ ತನ್ನ ಬೊಚ್ಚುಬಾಯಿ ತೆರೆದು, 'ಸಾರ್, ನೀವು ರುಂಬನೊಂದಿದ್ದೀರಿ ಅಂತ ಗೊತ್ತಾಗ್ತದೆ. ಅವತ್ತು ಮೀಟಿಂಗ್ ರೂಮಲ್ಲಿ ನೋಡಿದೆ ನಿಮ್ಮನ್ನ. ಏನಾಯ್ತು ಸಾರ್? ನಾನು ನಿಮ್ಮ ಸ್ವಂತ ಅಕ್ಕ ಅನಕೊಳ್ಳಿ. ಪಿಲೀಜ್ಹೀಗಿರ್ಬ್ಯಾಡಿ ನೀವು' ಎಂದು ಕಾಟಿಯಮ್ಮ ಕರುಣ ರಸ ಚಿಮ್ಮಿಸಿದಳು. ಸಾಂತ್ವನವನ್ನೂ ಟಾಕ್ಟೈಮ್ಲೆಕ್ಕದಲ್ಲಿ ಬಿಕರಿಮಾಡುವ ಇಷ್ಟು ದೊಡ್ಡ ಬೆಂಗಳೂರಿನ ಈ ಚಿಕ್ಕ ಮನೆಯಲ್ಲಿ ತನ್ನೆಲ್ಲ ನೋವುಗಳನ್ನುನಿಸ್ವಾರ್ಥದಿಂದ ಕೇಳುವ ಕಾಟಿಯಮ್ಮ ಮತ್ತು ಅವಳ ಮಗಳು ಏಂಜೆಲ್ ಅವತ್ತು ಯಾವುದೋ ಜನ್ಮದ ತನ್ನ ರಕ್ತಬಂಧುಗಳಂತೆಯೆ ತೋರಿದರು. ಛೆ, ಇವರ ಕುರಿತಾಗಿ ನಾನು ಇಷ್ಟು ಸಣ್ಣ ಮನಸಿನವನಾಗಬಾರದಿತ್ತು ಎಂದು ಶಶಿ ಬಿಟ್ಟೂಬಿಡದೆ ತನ್ನ ಮನೆಯ, ಮನೆಯವರ ವಿವರಗಳನ್ನು, ಬಾಲ್ಯದಿಂದ ತಾನು ಬೆಳೆದು ಬಂದ ಬಗೆಯನ್ನು, ನೌಕರಿಗೆ ಬೆಂಗಳೂರಿಗೆ ಬಂದು ತನ್ನ ಸಹೋದ್ಯೋಗಿ ಮೀರಾಳನ್ನುಪ್ರೀತಿಸಿದ್ದು, ಆನಂತರ ನಡೆದ ದುರಂತಗಳನ್ನು ಯಾವ ತಪ್ಪೂ ಇಲ್ಲದಂತೆ ವ್ಯಾಕರಣ ಬದ್ಧವಾಗಿ ತೆರೆದಿಟ್ಟನು. ಅಂದು ಶಶಿ ತನ್ನ ಮನದ ಅಂಗಳದಲ್ಲಿ ಪೂರ್ಣಚಂದ್ರನಂತೆ ಹೊಳೆಯುತ್ತ ಸಂತೃಪ್ತಿಯ ಹಾಲ್ದಿಂಗಳನ್ನು ಸೂಸುತ್ತ ಅಂತರ್ಗತನಾಗಿದ್ದ. 

ನಾಕು ಋತುಗಳು ಸುಮ್ಮನೆ ಸಂದುಹೋಗಿದ್ದವು ತಮಗೇನೂ ಅರಿವಿಲ್ಲವೆಂಬಂತೆ. ಎಂಟು ತಿಂಗಳ ಸುದೀರ್ಘ ಅನಾರೋಗ್ಯದ ರಜೆಯ ಬಳಿಕ ವಾಪಸಾಗಿದ್ದ ಶಶಿ ಬಳಲಿಹೋಗಿದ್ದ. ಮುಖದಲಿ ಒಂದಿಷ್ಟೂ ಕಾಂತಿಯಿಲ್ಲದೆ ಬಿಳುಚಿಕೊಂಡಿದ್ದ. ಮತ್ತೆ ಕೆಲಸಕ್ಕೆ ಮರಳಿದ್ದಕ್ಕೆ ಕ್ಷೀಣ ಉತ್ಸಾಹವಿತ್ತು. ಈ ಉತ್ಸಾಹ ಹತ್ತು ನಿಮಿಷವೂ ಉಳಿಯಲಿಲ್ಲ. ಕುತೂಹಲದಿಂದ ತನ್ನ ಡೆಸ್ಕ್ ಮೇಲಿದ್ದ ಮದುವೆ ಆಮಂತ್ರಣ ಪತ್ರಿಕೆ ನೋಡಿ ಕುಸಿದು ಕುಳಿತ. ಅದು, ಕಾಟಿಯಮ್ಮ ವೆಡ್ಸ್ಪೀಟರ್ಎಂದಿತ್ತು! ಮದುವೆ ತಾರೀಖೂ ಇವತ್ತೇ. ಮನಸಿನ ಮೇಲೆ ಯಥೇಚ್ಛ ಹೀಗೆ ದಾಳಿನಡೆಸುತ್ತಿರುವ ಈ ಕಾಟಿಯಮ್ಮನನ್ನು ಹೇಗೆ ಕ್ಷಮಿಸುವುದು? ಅವಳನ್ನು ಎದುರಿಸಲೂ ತನ್ನಲ್ಲಿ ಶಕ್ತಿಯಿಲ್ಲ. ಮೀರಾ ಅಲ್ಲಿಗೆ ಬಂದವಳೇ, ಶಶಿಯ ಮನಸನ್ನೋದಿ, 'ಬೇಡ ಶಶಿ, ದಿಸ್ ಈಸ್ ಇನಫ಼್. ಇನ್ನಾದರೂ ಅವಳ ಸಹವಾಸ ಬಿಟ್ಟುಬಿಡು. ನಿನಗೆ ಕೈಮುಗಿದು ಕೇಳ್ತಿನಿ' ಎಂದು ಬೇಡಿದರೂ, 'ಇಲ್ಲ ಮೀ.., ಅವಳನ್ನ ನಾನು ಕೇಳಲೇಬೇಕು. ನನ್ನ ಸ್ವಂತ ಅಕ್ಕನಂತೆಯೇ ಅವಳನ್ನ ಟ್ರೀಟ್ ಮಾಡಿದ್ದೀನಿ. ಯಾಕೆ ಹೀಗೆ ಮೋಸ ಮಾಡ್ತಿದ್ದಾಳೆ ನನಗೆ, ತಿಳ್ಕೋಬೇಕು. ಇವತ್ತು ಅವಳ ಮದ್ವೆಯಲ್ಲೇ ಕೇಳ್ತೀನಿ...' ಎಂದು ಅಲ್ಲಿಂದ ಹೊರಟೇಬಿಟ್ಟಿದ್ದ. ಸೇಂಟ್ ಮೇರಿಸ್ಚರ್ಚ್ ನಲ್ಲಿ ಮದುವೆ ಮುಗಿಸಿ ಸಂಜೆ ಪಕ್ಕದಲ್ಲೇ ಗಾರ್ಡನ್ ಹೌಸ್ ನಲ್ಲಿ ರಿಸೆಪ್ಶನ್. ಶಶಿ ಆ ವೈಭವ ಕಂಡು ದಿಗ್ಭ್ರಾಂತನಾದ. ಶ್ರೀಮಂತರ ಮದುವೆಗಳಲ್ಲಿರುವಂತೆಯೆ ಕಣ್ಕುಕುಕ್ಕುವ ದೀಪಾಲಂಕಾರ, ಹೂರಾಶಿಯದೊಡ್ಡ ಕಮಾನು, ಸುಗಂಧ ಪೂಸಿಕೊಂಡ ಸುತ್ತಲಿನ ವಾತಾವರಣ..ನಿಜವಾಗಿಯೂ ಇದು ಕಾಟಮ್ಮನಮದುವೆನಾ? ಇಲ್ಲಿಗೆ ಬಂದಿರುವ ಈ ಹೈಫ಼ೈ ಜನರನ್ನು ನೋಡಿದರೆ ತಾನೇ ಯಾವುದೋ ಸ್ಲಮ್ಮಿಂದ ಬಂದಂತೆ ಕಾಣುತ್ತಿದ್ದೀನಿ ಎಂದು ಶಶಿಯ ಮುಖ ಕಪ್ಪಾಯಿತು. ಆದರೂ ಧೈರ್ಯ ತಂದುಕೊಂಡು ಹೋಗಬೇಕೆನ್ನುವಾಗ ಹೊರಗೆ ರಸ್ತೆಯಂಚಿನಲ್ಲಿತನ್ನಷ್ಟಕ್ಕೇ ಏನೋ ವದರುತ್ತ, ಅಳುತ್ತ, ಶಾಪ ಹಾಕುತ್ತ, ಕ್ಷೀಣವಾಗಿಕುಡಿಮತ್ತಿನಲ್ಲಿಓಲಾಡುತ್ತಿದ್ದ‌ ವ್ಯಕ್ತಿಯೊಬ್ಬನನ್ನು ನೋಡಿ ಶಶಿಗೆ ಅರ್ಥವಾಯಿತು - ಅವನು ಕಾಟಿಯಮ್ಮನ ಮೊದಲ ಗಂಡ. ಬಹುಶಃ ಇವನೂ ತನ್ನಂತೆಯೇ ಮೊದಲು ಇಲ್ಲಿ ಗಲಾಟೆ ಮಾಡಲು ಬಂದಿರಬೇಕು. ಅವಳ ಕಡೆಯ ಗಂಡಸರು ಇವನನ್ನು ತದಕಿ ಇಲ್ಲಿ ಬಿಸಾಕಿಹೋಗಿರಬೇಕೆಂದುಅಂದಾಜಿಸಿದ. 

ಶಶಿಯನ್ನುನೋಡಿದವಳೇಕಾಟಮ್ಮಸ್ಟೇಜ್ ಮೇಲೆ ಬರುವಂತೆ ಸನ್ನೆ ಮಾಡಿದಳು. ಹಲ್ಲು ಬಿಗಿಹಿಡಿದುಕೊಂಡುಆಕ್ರಮಣದಧಾಟಿಯಲ್ಲಿ ಹೋದ ಶಶಿಗೆಪೀಟರ್ಅಂಡ್ಗ್ರೂಪ್ ನೋಡಿ ಹೆದರಿಕೆ ಶುರುವಾಯಿತು. 'ಸಾರ್, ನಿಮ್ಮನ ನೋಡಿ ರುಂಬಕುಷಿಯಾಯ್ತು. ನಿಮ್ಕೆತಿಳ್ಸೊಕೆಆಕ್ಲಿಲ್ಲ. ನೀವು ಊರಿಕೆಓಗಿದ್ರಿ. ಎಲ್ಲ ಗಡಿಬಿಡಿಲಿ ಆಯ್ತು ಸಾ.. ಹೆಂಗಿದೆ ಸಾರ್ ಅರೆಂಜ್ಮೆಂಟ್ಸು?' ಎಂದು ಕಾಟಮ್ಮ ಕಣ್ಣಲ್ಲೆ ನಕ್ಕಳು. ಹಂದಿಮೂತಿಯ, ಡೊಳ್ಳುಹೊಟ್ಟೆಯಪೀಟರ್ಮತ್ತವನ ಗ್ಯಾಂಗು ಗಹಗಹಿಸಿನಗುತ್ತಿದ್ದರು. 

ತಪ್ತನಾಗಿ ಅಲ್ಲಿಂದ ಸಿಡಿದುಬಂದವನೆ ಸಿಕ್ಕ ಬೆಂಚೊಂದರ ಮೇಲೆ ಕುಸಿದು ಕುಳಿತು ಬಿಕ್ಕತೊಡಗಿದ. ಕಾಟಮ್ಮನ ಆ ವಿಚಿತ್ರ ನಗುವಿನಲ್ಲಿಏನಿತ್ತು? ಮದುವೆಯಾಗುತ್ತಿರುವಖುಷಿಯೋ? ನಾನು ಮದುವೆಗೆ ಬಂದು ಹರಸುತ್ತಿರುವೆನೆಂಬಧನ್ಯತಾಭಾವವೋ? ಛೇ, ಖಂಡಿತ ಇದ್ಯಾವುದೂ ಅಲ್ಲ. ಅದು - 'ನೋಡು, ಹೇಗೆ ನಿನ್ನ ಪ್ರಪಾತಕ್ಕೆತಳ್ಳಿದೆ' ಎಂಬ ವ್ಯಂಗ್ಯವೆ? ಹೌದು, ಅದೇ. ಅಷ್ಟಿಲ್ಲದಿದ್ದರೆ ಅವಳು ಪ್ರತಿಸಲ ನನ್ನ ಹತ್ತಿರ ಬಂದು ತನ್ನ ಕರುಣಾಜನಕ ಕಥೆಗಳನ್ನು ಹೇಳಿ ಹೇಳಿ ನನ್ನಿಂದ ಅನಾಮತ್ತಾಗಿ ದುಡ್ಡು ಕೀಳುತ್ತಿರಲಿಲ್ಲ. ಇದೆಲ್ಲ‌ಶುರುವಾಗಿದ್ದುಏಂಜೆಲ್‌ಳಹುಟ್ಟುಹಬ್ಬವಾದ ಒಂದು ವಾರಕ್ಕೆ. ಆಫೀಸಿನಲ್ಲಿ ಜೋಲುಮುಖ ಹಾಕಿಕೊಂಡು, ಅಳುವವರಂತೆಮೂಗೇರಿಸಿ, ಸೆರಗಿನಿಂದ ಆಗಾಗ‌ ಕಣ್ಣೊರಿಸಿಕೊಂಡು ತನ್ನ ಹಿಂದೆಮುಂದೆಯೇಓಡಾಡುತ್ತಿದ್ದಳು. 'ಯಾಕೆ ಕಾಟಿಯಮ್ಮ, ಏನಾಯ್ತು?' ಎಂದರೆ, 'ಏನಿಲ್ಲ ಬಿಡಿ ಸಾ..ನಮ್ಕಸ್ಟಾನಮ್ಕೆ. ನಿಮಕ್ಯಾಕೆತೊಂದ್ರೆ?' ಎಂದು ಮತ್ತೊಮ್ಮೆ ಮೂಗೇರಿಸಿದಳು. 'ಏನ್ ಕಾಟಮ್ಮ ನೀನು, ಸ್ವಂತ ಅಕ್ಕನ ಥರ ಅಂತಿಯಾ..ನಿನ್ನ ತಮ್ಮ ಆಗಿ ನಾನು ಅಕ್ಕನ್ನ ಏನು ಎತ್ತ ಅಂತ ವಿಚಾರಿಸಬಾರದಾ?' ಶಶಿಗೆ ಎಲ್ಲಿಲ್ಲದ ಜವಾಬ್ದಾರಿಯ ಖುಷಿ. ಕಣ್ಣಲ್ಲಿ ಒಂದೆರಡು ಹನಿ ತುಳುಕಿಸಿಕೊಂಡು, 'ಏನ್ ಹೇಳ್ಲಿಸಾ..ನನ್ನ ಗಂಡ ಅಂತ ಒಬ್ನವ್ನೆ, ಲೋಪರ್ನನ್ಮಗ. ಅವ್ನುಕೆಲ್ಸಾಮಾಡಲ್ಲ. ನಾನು ದುಡಿದಿದ್ದೆಲ್ಲ ಕುಡ್ಕೊಂಡು ಹಾಲ್ಮಾಡ್ತಾನೆ. ಮನೆಕಾದ್ರು ಬಂದ್ರೆ ಪರ್ವಾಯಿಲ್ಲ. ಆದ್ರೆ ಕುಡ್ದು ಎಲ್ಲೋ ಬಿದ್ದಿರ್ತಾನೆ. ಗೊತ್ತಿರೋರು ಕರ್ಕೊಂಡ್ ಬಂದು ಬಿಸಾಕಿ ಬೈದು ಹೋಗ್ತಾರೆ. ಇಲ್ಲಾಂದ್ರೆ ನಾನು, ನನ್ ಮಗಳು ಓಗ್ಬೇಕು. ನನ್ ಮಗಳ ಸ್ಕೂಲಲ್ಲಿ ಫೀಜು ತುಂಬಿಲ್ಲ ಅಂತ ಹೊರಕ್ಹಾಕವ್ರೆ‌. ಅದು ಮನೇಲಿ ಕುಂತ್ಕಂಡು ಅಲ್ತಾ ಇರ್ತದೆ...'.

'ಅಯ್ಯೋ, ಅಷ್ಟೇ ತಾನೆ, ಅವಳ ಫೀಸ್ ನಾನ್ ಕೊಡ್ತೀನಿ' ಎಂದು ಜಂಭಕೊಚ್ಚಿಕೊಂಡು ಹಣ ಅವಳ ಕೈಗಿಡುವಾಗ, 'ಸಾರ್, ನೀವು ರುಂಬs ವೊಳ್ಳೆವ್ರು. ನಿಮ್ಮ ಕಾಸು ವಾಪಸ್ ಕೊಡ್ತೀನಿ' ಎಂದು ತೆಗೆದುಕೊಂಡಳು. ಅಚ್ಚರಿಯೆಂಬಂತೆ ಮುಂದಿನ ಸಂಬಳ ಬರುತ್ತಿದ್ದಂತೆ ಹಣ ವಾಪಸ್ ಕೊಟ್ಟಳು ಕೂಡ. ಕಾಟಿಯಮ್ಮನ ಮೇಲಿನ ಕನಿಕರ, ಗೌರವ, ಅಭಿಮಾನಗಳು ದುಪ್ಪಟ್ಟಾದವು. ಔದಾರ್ಯದ ತನ್ನ ಗುಣ ಯಾರಿಗೂ ಗೊತ್ತಾಗಬಾರದೆಂದು ಕಣ್ಣುಮುಚ್ಚಿಕೊಂಡು ಕೆಲಸ ಮಾಡುತ್ತಿದ್ದ ಶಶಿ.

ಇನ್ನೊಂದು ಶುಕ್ರವಾರ ಮಧ್ಯಾಹ್ನ, 'ಸಾರ್, ಈಗಿನ ಹುಡಗ್ರಿಗೆ ಏನ್ಹೇಲ್ಬೇಕೊ ಗೊತ್ತಾಗಲ್ಲ. ನಮ್ಮ ಏಂಜೆಲ್ಕಿ ಒಂದು ಫೋನ್ ಬೇಕಂತೆ. ಇನ್ನೂ ಚಿನ್ನ ವಯಸ್ಸು, ಯಾಕಮ್ಮ ಫೋನು ಅಂದ್ರೆ - ನನ್ಫ್ರೆಂಡ್ಸ್ ಹತ್ರ ಇದೆ, ನನಕೂ ಬೇಕು ಅಂತಾಲೆ. ನಿನ್ನೆಯಿಂದ ಒಂದೇ ಹಟ. ಊಟ ಕೂಡ ಮಾಡಿಲ್ಲ‌. ಚಿನ್ನದೊಂದು ಫೋನ್ ಇದೆ, ತಗೊಮ್ಮ ಅಂದ್ರೆ ದೊಡ್ಡದೇ ಬೇಕಂತೆ. ಅದೇ ನಿಮ್ಹತ್ರಇದ್ಯಲ್ಲ, ಅಂಥದ್ದು. ಅದಕ್ಕೆ ರುಂಬಕಾಸಾಯ್ತದೆ. ಏನ್ಮಾಡದು ಗೊತ್ತಾಗ್ತಿಲ್ಲ ಸಾರ್..' ಎಂದಿದ್ದೇ ತಡ, ಶಶಿ ತನ್ನ ಕ್ರೆಡಿಟ್ಕಾರ್ಡ್ ನಿಂದ ಇಪ್ಪತ್ತು ಸಾವಿರ ರೂಪಾಯಿಯ ಮೊಬೈಲೊಂದನ್ನು ಆರ್ಡರ್ ಮಾಡಿಯೇಬಿಟ್ಟಿದ್ದ. ಅಲ್ಲಿಂದ ಅವಳು ಅವನನ್ನು ಮನೆಗೆ ಕರೆಯುವುದು, ಇವನೂ ಅವಳ ಮನೆಗೆ ಹೋಗುವುದು, ಹೋಗುವಾಗ ಏಂಜೆಲ್ ಗೆ ಚಾಕೊಲೇಟ್, ಸಿಹಿತಿನಿಸು, ಮನೆಗೆ ಬೇಕಾದ ದಿನಸಿ ಸಾಮಾನುಗಳನ್ನೆಲ್ಲ ತೆಗೆದುಕೊಂಡು ಹೋಗುವುದು ಅವ್ಯಾಹತವಾಯಿತು. ಕಾಟಿಯಮ್ಮನ ವಿಶೇಷ ಊಟೋಪಚಾರಗಳು, ಸಾಂತ್ವನದ ನುಡಿಗಳು, ವಿನಾಕಾರಣದ ಹೊಗಳಿಕೆಗಳು ಶಶಿಯಲ್ಲಿ ವಿಚಿತ್ರ ಹುಮ್ಮಸ್ಸನ್ನು ತುಂಬುತ್ತಿದ್ದವು. ಇದೇ ಸಂದರ್ಭದಲ್ಲಿ ಕಾಟಮ್ಮ ತನಗೆ ಲೂನಾದಯಪಾಲಿಸಿ ಬದುಕಿಗೆ ದಾರಿಮಾಡಿಕೊಟ್ಟ ತನ್ನ ಬಹುಕಾಲದ ಆಪ್ತ ಎಂದು ಪೀಟರ್ನನ್ನು ಪರಿಚಯಿಸಿದಳು. ಅವನೊಂದಿಗೆ ಕೆಲಸಕ್ಕಿದ್ದಬೇಬಿ, ಸುಬ್ಬು, ಚಾಂದ್ ಮತ್ತು ಲಿಯಾಮ್ನನ್ನೂ ಪರಿಚಯಿಸಿದಳು. ಆ ಏರಿಯಾಕ್ಕೆ ಕಾಲಿಟ್ಟರೆ ಸಾಕು, ಇವರು ಅಲ್ಲಲ್ಲಿ ಕಾಣಸಿಗುವರು. ಸಿಕ್ಸ್  ಪ್ಯಾಕಿನ ಯುವಕರು; ಸಾಮಾನ್ಯವಾಗಿ ಅವರ್ಯಾರೂ ನಗುತ್ತಿರಲಿಲ್ಲ, ಹರಟುತ್ತಿರಲಿಲ್ಲ. 

ಇದು ಸಿಕ್ಕು ಎಂದು ಶಶಿಗೆಅರ್ಥವಾಗಿದ್ದರೂ ಯಾವುದೋ ಮಾಯಕದಲ್ಲಿ ತಕ್ಷಣ ತನ್ನ ತಾನೇ ಸಮಾಧಾನಪಡಿಸಿಕೊಂಡುಸುಮ್ಮನಿರುತ್ತಿದ್ದ. ಕಾಟಿಯಮ್ಮನಿಗೆ ಆಗಾಗ ಪೂರೈಸುತ್ತಿದ್ದ ಹಣ ಈಗ ಸುಮಾರು ಒಂದು ಲಕ್ಷಕ್ಕೂ ಮೀರಿತ್ತು. ಕೆಳ ಮಧ್ಯಮ ವರ್ಗದ ತನ್ನಂಥವನು ಇಷ್ಟೊಂದು ಧಾರಾಳಿಯಾಗಬಹುದೆ? ಅವಳು ವಾಪಸು ಕೊಡ್ತೀನಿ ಎಂತಲೇ ಇಸ್ಕೊಂಡಿರೋದು. ಅದು ಆಗುವ ಮಾತೇ? ಅವಳಿರುವಪರಿಸ್ಥಿತಿಗೆ, ಬರುವ ಕಿರುಬೆರಳಿಗಾಗುವಷ್ಟುಸಂಬಳದಲ್ಲಿ ಹಣ ವಾಪಸು ಕೊಡುವಳೇ? ತಾನಿದನ್ನು ಪ್ರಸ್ತಾಪಿಸಬೇಕೆಂಬ ಹವಣಿಕೆಯಲ್ಲಿರುವಾಗ ಅದು ಹೇಗೆ ಅವಳಿಗೆ ಗೊತ್ತಾಗಿ ಇನ್ನೊಂದು ಕರುಣೆಯ ಕಥೆಯನ್ನು ಹೊಸೆದುಕೊಂಡೇ ಇರುತ್ತಿದ್ದಳು. ತಾನು ಅದು ಹೇಗೆ ಎಲ್ಲ ಕತೆಗಳನ್ನು ಕಣ್ಮುಚ್ಚಿ ನಂಬಿಬಿಡುತ್ತೇನೆ? ಅರೇ, ತಾನ್ಯಾಕೆ ಇವಳ ಕತೆಗಳನ್ನೆಲ್ಲ ಇಷ್ಟೊಂದು ಗಂಭೀರವಾಗಿ ಪರಿಗಣಿಸಬೇಕು? ಅದು ಅವಳ ಕರ್ಮ. ಇಷ್ಟಕ್ಕೂ ಅವಳ ಸಮಸ್ಯೆಗಳಿಗೆಲ್ಲ ನಾನೊಬ್ಬನೇ ಪರಿಹಾರವಲ್ಲ. ಇದನ್ನೂಸಹಿಸುತ್ತಿದ್ದೆ - ಮೀರಾ ತನ್ನವಳಾಗಿ ಬಂದಿದ್ದರೆ. ಕುತ್ತಿಗೆಯ ಮೇಲೆ ಯಾರೋ ಬಲವಂತವಾಗಿ ಕೈಯಿಟ್ಟು ಇನ್ನೇನು ಕತ್ತರಿಸಬೇಕೆಂದು ಚಾಕು ಹಿಡಿದಿರುವಾಗ ಚೀರಲೂ ಆಗದೆ ಅಸಾಧ್ಯ ಅಸಹಯಾಕತೆಯಲ್ಲಿ ಗಂಟಲಲ್ಲೇ ಕೀರಲು ದನಿಯಲ್ಲಿ ಚಡಪಡಿಸುವ ಕೋಳಿಯಂತಾಗಿದ್ದೇನೆ ಎಂಬ ಭಾವನೆ ಶಶಿಯನ್ನು ಪ್ರಪಾತಕ್ಕೆ ಕುಕ್ಕರಿಸಿತು. ಅರಿವು ಅಸ್ಪಷ್ಟವಾಗಿದ್ದು, ಮನಸು ಕಟುವಾಗಿರದಿದ್ದರೆ ಆತ್ಮವಿಮರ್ಶೆಯೆಂಬುದು ಸುಲಭದ ಮಾತೇ ಅಲ್ಲ.

'ನೀನು ಎಮೊಶನಲ್ ಅಂತ ಗೊತ್ತಿತ್ತು, ಆದ್ರೆ ಇಷ್ಟು ದೊಡ್ಡ ಫೂಲ್ ಅಂತ ಗೊತ್ತಿರಲಿಲ್ಲ ಕಣೋ..ನಾನು ಬೇಡ ಅಂದ್ರೂ ಅವಳ ಸಹವಾಸಕ್ಕೆಬಿದ್ದೆ ಅಲ್ವಾ? ನೀನು ಏನಾಗಿದ್ದೀಯ ಅ‌ತನೋಡ್ಕೊಂಡಿದ್ದಿಯ? ದೊಡ್ಡ ಮಾಟಗಾತಿ ಅವಳು. ಅವಳ ಹಿನ್ನೆಲೆ ಗೊತ್ತಾ ನಿನಗೆ?' ಅತೀವ ಕಾಳಜಿಯಲ್ಲಿ ಬೈಯುತ್ತಿದ್ದ ಮೀರಾಳನ್ನು ನೋಡಿ, 'ಗೊತ್ತಿಲ್ಲ ಮೀ... ನನಗೇ ಯಾಕೆ ಹೀಗಾಗುತ್ತದೆ? ಯಾಕೆ ಎಲ್ರೂ ನನ್ನ ಹೀಗೆ ಉಪಯೋಗಸ್ಕೊಂಡು ಮೋಸ ಮಾಡ್ತಾರೆ? ಇನ್ ಫ್ಯಾಕ್ಟ್ ನೀನೂ ಕೂಡ..' ಶಶಿ ತನಗಾದ ಅನ್ಯಾಯಗಳಿಗೆಲ್ಲ ಪರಿಹಾರ ಬೇಡುತ್ತಿದ್ದ. 'ಯಾರಪ್ಪಾ ನಿನಗೆ ಅನ್ಯಾಯ ಮಾಡಿದೋರು? ಮೋಸ ಮಾಡ್ಕೊಂಡಿದ್ದು ನಿನಗೆ ನೀನು. ಕಾಟಮ್ಮನದೇನೂ ತಪ್ಪಿಲ್ಲ. ಅವಳು ಚೆನ್ನಾಗಿರೋದಕ್ಕೆ ಏನೇನೋ ಹೇಳ್ತಾಳೆ. ಹಾಗಂತ ನಿನ್ಹತ್ರ ಇರೋದನ್ನೆಲ್ಲ ಕೊಟ್ಟುಬಿಡೋದಾ? ನಿನ್ ಕೈಲಿ ಆಗಲ್ಲ ಅಂತ ಹೇಳೋಕೆ ಏನಾಗಿತ್ತು? ನಿನಗೆ ಔದಾರ್ಯದ ಉರುಳು ಬೇಕಿತ್ತು, ಅದಕ್ಕೆ ಅವಳು ತನ್ನ ಶಕ್ತಿ ಉಪಯೋಗಿಸ್ಕೊಂಡು ಅದನ್ನ ನಿನ್ನ ಮೇಲೆ ಪ್ರಯೋಗ ಮಾಡಿ ವಸೂಲಿ ಮಾಡಿದಳು. ಹದ್ದಿನ ಕಣ್ಣಿಗೆ ಕಾಣುವುದೆಲ್ಲಆಹಾರವೇ. ಓಹ್, ಇಲ್ಲೊಂದು ಮುದ್ದಾದ ಹಕ್ಕಿಮರಿ ಇದೆಯೆಂದು ಅದನ್ನು ಮುದ್ದಿಸುವ ತಪ್ಪು ಯಾವತ್ತೂ ಮಾಡಲ್ಲ ಅದು. ಈ ಆಫೀಸ್‌ನಲ್ಲಿ ನಿನ್ನಂತೆ ಈ ಮೊದಲು ನಾಲ್ಕು ಜನ ಇದೇ ರೀತಿ ಹಾಳಾಗಿದ್ದಾರೆಂದು ಎಲ್ಲರೂ ಮಾತಾಡುತ್ತಾರೆ. ಅವರು ಇದ್ದಕ್ಕಿದ್ದಹಾಗೆ ಕೆಲಸಕ್ಕೆ ರಾಜೀನಾಮೆ ಕೂಡ ಕೊಡದೆ ಕಾಣೆಯಾಗಿದ್ದಾರೆ. ಅವರ ಬಗ್ಗೆ ಯಾರಿಗೂ ಯಾವ ಸುಳಿವೂ ಇಲ್ಲ. ಈಗ ನಿನ್ನನ್ನು ನಾನು ಉಳಿಸಿಕೊಳ್ಳುತ್ತೇನೆ. ಮೊದಲು ಪರಿಸ್ಥಿತಿಗೆ ಕಟ್ಟುಬಿದ್ದು ನಿನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾದೆ‌. ಅದೇ ನಾನು ಮಾಡಿದ ದೊಡ್ಡ ತಪ್ಪು. ನಿಷ್ಕಲ್ಮಶ ಪ್ರೀತಿಯನ್ನು ತೊರೆದಿದ್ದಕ್ಕೆ ನನಗೆ ಸರಿಯಾದ ಶಿಕ್ಷೆಯೆ ಆಯಿತು..'.

'ಏನಾಯ್ತು ಮೀ... ನೀನು ಈಗ ತಾನೆ ಮ್ಯಾಟರ್ನಿಟಿರಜೆಯಿಂದ ಬಂದಿದ್ದೀಯ..' ಶಶಿ ಗೊಂದಲಕ್ಕೊಳಗಾದ. 'ಇಲ್ಲ ಶಶಿ, ಮ್ಯಾಟರ್ನಿಟಿ ರಜೆ ಹೌದು, ಆದರೆ ಡೆಲಿವರಿ ಆದ ಮಗು ಉಳಿಯಲಿಲ್ಲ. ಅದು ನನ್ನ ತಪ್ಪಿನಿಂದ ಆದದ್ದು ಎಂದು ಎಲ್ಲರಿಂದ ಬೈಗುಳ ಅವಮಾನ ಅನುಭವಿಸಿದೆ. ಇದೇ ಕಾರಣ ಇಟ್ಟುಕೊಂಡು ಮನೆಯಲ್ಲಿ ದಿನಾಲೂ ಜಗಳ. ಇದಕ್ಕೆ ಮುಕ್ತಿಯೇಇಲ್ಲವಾ ಎನಿಸುತ್ತಿತ್ತು. ನೀನು, ನಿನ್ನ ಪ್ರೀತಿ ನೆನಪಾಗದ ಕ್ಷಣಗಳೇ ಇಲ್ಲ. ಪಶ್ಚಾತ್ತಾಪದಲ್ಲಿ‌ ಪ್ರತಿದಿನ ಬೇಯುತ್ತಿದ್ದೆ. ಇಷ್ಟೊಂದು ಹಿಂಸೆ ಅನುಭವಿಸಿ ಮನೆಯಲ್ಲಿರುವುದಕ್ಕೆ ನಾನೇನು ಪಾಪ ಮಾಡಿದ್ದೇನೆ ಎಂದು ದಿನಾ ಪ್ರಶ್ನಿಸಿಕೊಳ್ಳುತ್ತಿದ್ದೆ. ನಾನೀಗ ಸ್ವತಂತ್ರಳಾಗಬೇಕು ಶಶಿ.‌ ನನ್ನ ತಪ್ಪುಗಳನ್ನು ನಾನು ಸರಿಪಡಿಸಿಕೊಳ್ಳಬೇಕು. ದಯವಿಟ್ಟು ಈ ಆಫೀಸು, ಈ ಕಾಟಿಯಮ ಇವರಿಂದ ದೂರ ಇರು' ಎಂದು ಒಂದೇ ಸವನೆ ಅಳಲು ಶುರುವಿಟ್ಟಳು. ಶಶಿಗೆ ನಿಂತ ನೆಲವೇ ಸುಳ್ಳೆನಿಸತೊಡಗಿತು. ಕಾಣುವ ಮತ್ತು ಅದರಾಚೆಗಿನ ಮರ್ಮ ಎಂದು ಕೇಳಿ ಗೊತ್ತಿತ್ತಷ್ಟೇ. ಇಂದು ಮರ್ಮದ ನಿಜ ಅನುಭವವಾಯಿತು. ಮರ್ಮದಗಾಳಕ್ಕೆ ಸಿಲುಕಿದವರು ಎಂತಹ ಮನ್ವಂತರಕ್ಕೂ ಸಿದ್ಧರಾಗಿರಬೇಕು. ಎಲ್ಲ ಬೆರಗುಗಳನ್ನು ಅರಗಿಸಿಕೊಳ್ಳಲಾಗೆ ಶಶಿ ಬೆವೆತುಹೋಗಿದ್ದ. 

ಕಾಟಿಯಮ್ಮನದುತಮಿಳುನಾಡಿನ ಕಾರೆಕುಡಿಯ ಹತ್ತಿರದೊಂದು ಹಳ್ಳಿ. ಅಪ್ಪ ರುಂಡಮಾಲಿನಿಯನ್ನು ಕೈವಶ ಮಾಡಿಕೊಂಡ ಧೀರ. ಸುತ್ತಮುತ್ತಲಿನ ಊರುಗಳಲ್ಲಿ ಅವನ ಮಂತ್ರಶಕ್ತಿ ಎಲ್ಲರ ವಿಶ್ವಾಸ ಗಳಿಸಿತ್ತು. ಅದು ವಂಶಪಾರಂಪರ್ಯವಾಗಿ ಬಂದ ವಿದ್ಯೆ. ಅವನು ತಂತ್ರಗಾರಿಕೆಯಲ್ಲಿ ಪಳಗಿದ್ದರೂ ಯಾರಮೇಲೂ ವಿನಾಕಾರಣ ಕಾಟಕೊಡಲು ತನ್ನ ಶಕ್ತಿಯನ್ನು ಬಳಸುತ್ತಿರಲಿಲ್ಲ, ಬದಲಾಗಿ ಅಂಥ ಉದ್ದೇಶ ಇಟ್ಟುಕೊಂಡು ಬಂದ ಜನರಿಗೆ ಒಳ್ಳೆಯ ಮಾತುಗಳನ್ನು ಹೇಳಿ ವಾಪಸು ಕಳಿಸುತ್ತಿದ್ದ. ಅವನಿಗೆ ತಂತ್ರವಿದ್ಯೆಯೆಂದರೆ ಅದು ತಮ್ಮ ಮನೆದೇವರನ್ನುಒಲಿಸಲು ಇರುವ ಕಾಯಕ. ಅದನ್ನು ನಿಷ್ಠೆಯಿಂದ ಮಾಡಬೇಕು, ಆದಷ್ಟು ಜನರಿಗೆ ಅದರಿಂದ ಒಳ್ಳೆಯ ಫಲ ಸಿಗಬೇಕೆನ್ನುವುದೊಂದೇ ಧ್ಯೇಯವಾಗಿತ್ತು. ಹಾಗಾಗಿ ಅವನ ಈ ಧೋರಣೆಯಿಂದ ಬೇಸತ್ತು ಬೈದುಕೊಂಡು ಹೋಗುತ್ತಿದ್ದರು. ಅದು ಚಿಕ್ಕವಯಸ್ಸಿನ ಕಾಟಿಯಮ್ಮನ ಮನಸಿಗೆ ಘಾಸಿಗೊಳಿಸುತ್ತಿತ್ತು. ಅಂದಹಾಗೆ ಕಾಟಿಯಮ್ಮನ ಬಾಲ್ಯದ ಹೆಸರು ಭವಾನಿ. ಹುಟ್ಟಿದ ಏಳೆಂಟು ವರ್ಷಕ್ಕೆ ತಾಯಿಯನ್ನು ಕಳೆದುಕೊಂಡು ತಂದೆಯನ್ನು ಆಶ್ರಯಿಸಿದ್ದಳು. ಅವನಿಂದ ತಂತ್ರಗಾರಿಕೆಯ ಹಲವು ಪಾಠಗಳನ್ನು ಕಲಿತಳು. ದಿನಗಳೆದು ಅವಳು ದೊಡ್ಡವಳಾದಂತೆ ಅವಳ ದುರಾಸೆಯ ಗುಣವನ್ನು ಕಂಡು ಮರುಗಿ, ಕೆಲ ರಹಸ್ಯಗಳನ್ನು ತನ್ನಲ್ಲೇ ಉಳಿಸಿಕೊಂಡನು. ಅವಳೋ ತನ್ನ ತಂದೆಯಿಂದ ವಂಚಿತರಾದವರಿಗೆ ಗುಟ್ಟಾಗಿ ಪೂಜೆ ಮಾಡಿಕೊಡುವುದು, ಆಗದವರಿಗೆ ತಂತ್ರ ಬಳಸುವುದು ಶುರುವಿಟ್ಟುಕೊಂಡಿದ್ದಳು. ಇದರಿಂದ ಅವಳಿಗೆ ಎಲ್ಲಿಲ್ಲದ ಮರ್ಯಾದೆ, ಹಣ ಸಿಗಲಾರಂಭಿಸಿದ್ದವು. ಜನರನ್ನು ಎಷ್ಟು ಸುಲಭವಾಗಿ ಮರಳು ಮಾಡಬಹುದು...ಯಾಕೆ ನನ್ನಪ್ಪನಂಥವನಿಗೆಅರ್ಥವೇ ಆಗುವುದಿಲ್ಲ ಎಂದು ಅವನೊಂದಿಗೆ ವಾದಿಸುತ್ತಿದ್ದಳು. ಅವಳ ಈ ವರ್ತನೆಗೆ ಬೇಸತ್ತು ಹತ್ತಿರದ ಸಂಬಂಧಿಯೊಬ್ಬನಿಗೆ ಕೊಟ್ಟು ಮದುವೆ ಮಾಡಿದರು. ಅವನು ಬೆಂಗಳೂರಿನಲ್ಲಿ ಇರುತ್ತಾನೆಂಬ ಕಾರಣಕ್ಕೆ ಅವನನ್ನು ಒಪ್ಪಿ ಬಂದಳು. ಕೋರಮಂಗಲದ ಈ ಸ್ಲಮ್ಮಿಗೆ ಬಂದಮೇಲೆ ಅವಳ ಉತ್ಸಾಹ ಕಡಿಮೆ ಸಮಯದಲ್ಲೇ ಉಡುಗಿಹೋಗಿತ್ತು. ತನ್ನ ಊರಿನಲ್ಲಿ ಚಿಕ್ಕ ಮನೆಯಲ್ಲಿದ್ದರೂ ರಾಣಿಯಂತಿದ್ದವಳು ಇಲ್ಲಿ ತುಂಬ ಕಡೆಯಾಗಿ ಬಿಟ್ಟಿದ್ದಳು. ಜತೆಗೆ ಯಾರೂ ಅಷ್ಟು ಮರ್ಯಾದೆ ಕೊಡುತ್ತಿರಲಿಲ್ಲ. ಆಗ ಅವಳು ಹುಟ್ಟಿಸಿದ್ದೇ ಕಾಟಿ ಎಂಬ ಅಸ್ತ್ರ. ಮನೆಯಲ್ಲೇ ಕಾಟೇರಮ್ಮನದೊಂದು ಗುಡಿ ಕಟ್ಟಿ ಅದನ್ನು ಪೂಜಿಸಲು ಶುರುಮಾಡಿದಳು. ಅದು ಸುತ್ತಮುತ್ತಲಿನವರಿಗೆಲ್ಲ‌ ಕುತೂಹಲದ ವಿಷಯವಾಗಿ ಅವಳ ಹತ್ತಿರ ತಮ್ಮ ಸಮಸ್ಯೆಗಳನ್ನು ತಂದು ಸುರಿಯಲಾರಂಭಿಸಿದ್ದರು. ಎಲ್ಲರಿಗೂ ಅವಳು ಕಾಟಿ ಎಂಬ ಮದ್ದುಕೊಡುತ್ತಿದ್ದಳು. ಅದು ಚೂರ್ಣದ ಮಾದರಿಯ ತಯಾರಿಕೆ. ಅಪ್ಪನಿಂದ ಕದ್ದು ಕಲಿತದ್ದು ಇಲ್ಲಿ ಹೀಗೆ ಉಪಯೋಗವಾಗುತ್ತಿತ್ತು. ಅದನ್ನು ತಿಂದವರು ಏನೇ ರೋಗಗಳಿದ್ದರೂ ಗುಣವಾಗಿ ಅವರ ಸಮಸ್ಯೆಗಳಿಗೊಂದು ಪರಿಹಾರ ಸಿಗುತ್ತಿತ್ತು. ಭವಾನಿ ಎಂಬ ಹೆಸರು ತನಗೇ ಮರೆತು ಹೋಗುವಷ್ಟು ಎಲ್ಲರ ಬಾಯಲ್ಲಿ ಕಾಟಿಯಮ್ಮ ಎಂದು ಪ್ರಸಿದ್ಧಿಯಾದಳು. ಅಂದುಕೊಂಡಂತೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು, ಪೀಟರ್ಪರಿಚಯವಾಗುವವರೆಗೆ. 

ಪೀಟರ್ಕಾಟಿಯಮ್ಮನ ಮನೆಯ ಹತ್ತಿರ ಗ್ಯಾರೆಜ್ಇ ಟ್ಟುಕೊಂಡಿದ್ದಾನೆ‌. ಶ್ರೀಮಂತರಕಾರಗಳೆಲ್ಲ ಇವನ ಗ್ಯಾರೆಜಿಗೆ ಬರುತ್ತಿದ್ದವು. ಹಾಗಾಗಿ ಅವನಿಗೆ ಕೋರಮಂಗಲ ಹಾಗೂ ಸುತ್ತಮುತ್ತಲಿನ ಎಲ್ಲ ವಿಐಪಿಗಳು, ಅವರ ಕಾರುಗಳು ಎಲ್ಲ ಪರಿಚಿತವಿದ್ದವು, ಅವರ ಕಾರ್ ನಂಬರ್ ಸಮೇತ. ಅವನ ಜೊತೆ ಬೇಬಿ ಮತ್ತಿತರ ನಾಲ್ಕು ಜನರ ಗ್ಯಾಂಗು ಯಾವಾಗಲೂ ಜೊತೆಯಿರುತ್ತಿತ್ತು. ತನ್ನ ಗ್ಯಾರೆಜಿಗೆ ಬರುವ ಶ್ರೀಮಂತರಲ್ಲಿ ಕೆಲವರು ಅವನಿಗೆ ಸುಪಾರಿ ಕೊಟ್ಟು ಕೈಕಾಲು ಮುರಿಯುವಂತೆಯೋ, ಕೊಲೆಮಾಡಲೆಂತಲೋ ಬಳಸಿಕೊಳ್ಳುತ್ತಿದ್ದರು. ಯಾವಾಗ ಪೀಟರ್ ಗೆ ಕಾಟಿಯಮ್ಮ ಸಿಕ್ಕಿದಳೊ ಅಂದಿನಿಂದ ಅವನ ಯೋಜನೆಗಳೇ ಬದಲಾದವು. ಆ ಶ್ರೀಮಂತರಿಗೆಲ್ಲ ಕಾಟಿಯಮ್ಮನ ಬಗ್ಗೆ, ಅವಳ ವಿಶೇಷ ಶಕ್ತಿಯ ಬಗ್ಗೆ ಹೇಳಿ ಸ್ಮಶಾನ ಪೂಜೆ, ಮನೆಗಳಲ್ಲಿ ವಿಶೇಷ ಹೋಮ, ಮಂಡಲ ಪೂಜೆ ಶುರುವಾದವು. ಅವಳು ಪೂಜೆ ನಡೆಸುತ್ತಿದ್ದರೆ, ಇತ್ತ ಪೀಟರ್ಮತ್ತವನ ಗ್ಯಾಂಗ್ ಮನೆಯನ್ನು ಲೂಟಿಮಾಡುವುದರಲ್ಲಿ ತೊಡಗುತ್ತಿತ್ತು. ಆದರೆ ಇವೆಲ್ಲ ನಡೆಯುತ್ತಿದ್ದುದು ಬರಿ ರಾತ್ರಿಗಳಲ್ಲಿ, ಯಾರಿಗೂ ತಿಳಿಯದಹಾಗೆ. ಮಗಳು ಏಂಜೆಲ್ ಸ್ಕೂಲಿಗೆ ಹೋಗಲು ಶುರುವಿಟ್ಟಂತೆ ಮನೆಯಲ್ಲಿನ ಕಾಟೇರಮ್ಮನು ಎತ್ತಂಗಡಿ ಮಾಡಿಸಿ ತಾನು ಸ್ಟೈಲಾಗಿ ಆಫೀಸಿನ ಕೆಲಸಕ್ಕೆ ಬರಲಾರಂಭಿಸಿದ್ದಳು, ಟೈಮ್ ಪಾಸ್ ಗೋಸ್ಕರ. ಅವಳ ಈ ವೇಷ ಆಫೀಸಿನಲ್ಲಿ ಯಾರಿಗೂ ಗೊತ್ತಿರಲಿಲ್ಲ. ಶಶಿಯಂತಹಬಕರಾಗಳು ಸಿಕ್ಕರೆ ಅವರಿಂದ ಆದಷ್ಟು ದುಡ್ಡು ಕೀಳುವುದು, ಅವರಿಗೇನಾದರೂ ತನ್ನ ಬಗ್ಗೆ ಸ್ಱಲ್ಪ ಸಂದೇಹ ಬಂದರೂ ಅವರಿಗೆ ತನ್ನ ತಂತ್ರವನ್ನು ಪಯೋಗಿಸಿ ಅವರ ಆರೋಗ್ಯಕ್ಕೆ ಕುತ್ತು ತರುವುದು, ಇಲ್ಲವೆ ಅವರನ್ನು ಆಫೀಸಿನಿಂದಲೇ ಓಡಿಹೋಗಿ ಕಾಣೆಯಾಗುವಂತೆ ಮಾಡುವುದು.. ಅದು ಹೇಗೆ ಎಂದರೆ, ಅವರನ್ನು ಬೊಂಬೆಗಳಲ್ಲಿ ಬಂಧಿಸಿ, ಆ ಬೊಂಬೆಗಳು ಅಲಂಕಾರ ಮಾಡಿ ಪ್ರದರ್ಶನಕ್ಕಿಡುವುದು. ಶಶಿಯ ವಿಷಯದಲ್ಲೂ ಆಗಿದ್ದು ಇದೇ. ಕಾಟಿಯಮ್ಮ ಯಾವಾಗ ತನ್ನಿಂದ ದುಡ್ಡು ಕೀಳುತ್ತಿದ್ದಾಳೆ ಎಂದು ಅನಿಸುವ ಹೊತ್ತಲ್ಲೇ ಅವನಿಗೆ ವಿಚಿತ್ರ ಕಾಯಿಲೆ ಬಂದು ನರಳುವಂತೆಮಾಡಿದ್ದಳು. ಅದನ್ನು ನೋಡಲಾಗದೇ ಅವನ ತಂದೆ ಅವನನ್ನು ಊರಿಗೆ ಕರೆದುಕೊಂಡು ಹೋಗಿ ಉಪಚರಿಸುವಾಗ, ಪರಿಚಯದ ಸ್ವಾಮಿಗಳೊಬ್ಬರು ಸೂಕ್ಶ್ಮವಾಗಿ ಕಾಟಿಯಮ್ಮನ ಬಗ್ಗೆ ಹೇಳಿದ್ದರು. ಇದನ್ನು ಮೀರಾ ಕೂಡ ಹೇಳಿದ್ದಳು. ಆದರೆ ಅದನ್ನೆಲ್ಲ ನಂಬದ ಶಶಿ ತಳ್ಳಿಹಾಕಿದ್ದ. ಯಾವಾಗ ಅವಳು ಪೀಟರ್ನನ್ನುಮದುವೆಯಾದಳೋಶಶಿಗೆ ಪೂರ್ತಿ ಸಂದೇಹ ಬಂದು ಕಾಟಿಯಮ್ಮನ ಚಟುವಟಿಕೆಗಳನ್ನು ಗಮನಿಸತೊಡಗಿದ. ಈ ಹುಳ ಯಾಕೋ ತನ್ನನ್ನು ಕಾಡುತ್ತಿದೆಯಲ್ಲ, ಆದಷ್ಟು ಬೇಗ ಬೊಂಬೆಯೊಳಗೆ ಇವನನ್ನು ಬಂಧಿಸಿಬಿಡಬೇಕೆಂದು ಕಾಟಿಯಮ್ಮ ನಿರ್ಧರಿಸಿದಳು.

ಅಗೋಚರ:

ಆಫೀಸಿಗೆ ಹೊಸ ಉದ್ಯೋಗಿಯೊಬ್ಬ ಸೇರಿಕೊಂಡಿದ್ದಾನೆ. ಬಹುತೇಕ ಶಶಿಯನ್ನೇ ಹೋಲುವ ಅವನೂ ಪ್ಯಾಂಟ್ರಿಗೆ ಬಂದು ಬೊಂಬೆಗಳನ್ನು ನೋಡುತ್ತ ನಿಂತಿದ್ದಾನೆ. ಈಗ ಅಲ್ಲಿ ಆರು ಬೊಂಬೆಗಳಿವೆ, ಹೆಣ್ಣು ಬೊಂಬೆಯೊಂದು ಸೇರಿ. ಹೊಸದಾಗಿ ಸೇರ್ಪಡೆಯಾದ ಈ ಗಂಡು ಹೆಣ್ಣು ಬೊಂಬೆಗಳನ್ನು ಮೋಹಿತನಾಗಿ ನೋಡುತ್ತ ನಿಂತಿರುವುದನ್ನು ಕಂಡು ಶಶಿ ಮತ್ತು ಮೀರಾ ಆ ಬೊಂಬೆಗಳ ಮೂಲಕವೆ ಕಿರುಚುತ್ತಿದ್ದಾರೆ, 'ಇಲ್ಲಿ ನಿಲ್ಲಬೇಡ, ಹೋಗು. ನಿನ್ನಂತೆಯೆ ನಾನೂ ಇವಳ ಸೆಳೆತಕ್ಕೊಳಗಾಗಿ ಇಲ್ಲಿ ಸಿಲುಕಿದ್ದೇನೆ. ದಯವಿಟ್ಟು ಇಲ್ಲಿಂದ ಹೋಗು, ಹಾಗೆ ನೋಡುತ್ತ ನಿಲ್ಲಬೇಡ...'

ಗೋಚರ:

ಶಶಿ, ಮೀರಾ ಎಲ್ಲ ಹಂಗುಗಳ ತೊರೆದು ಹೊಸದೊಂದು ಗಮ್ಯದೆಡೆಗೆ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಪ್ರಯಾಣ ಬೆಳೆಸಿದ್ದರು. ಕಾಟಿಯಮ್ಮನಿಗೆ ಇದರ ಕಿಂಚಿತ್ತೂ ಸುಳಿವಿಲ್ಲದಾಗಿತ್ತು.