ಆತಂಕ ಮೂಡಿಸಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬೇಕಿದೆ ಕಠಿಣ ಕ್ರಮ

ಇಂಡಿಯಾ 2019 ವರದಿಯ ಪ್ರಕಾರ ಉದ್ಯೋಗ ಲಭ್ಯವಿರುವ ರಾಜ್ಯಗಳಲ್ಲಿ ಸುಮಾರು 20ರಿಂದ 24 ವಯಸ್ಸಿನ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶ ಹಾಗೂ ಪುರುಷ ಮತ್ತು ಮಹಿಳೆಯರೂ ಉದ್ಯೋಗಾವಕಾಶದಿಂದ ವಂಚಿತರಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ನಿಜಕ್ಕೂ ಆತಂಕಕಾರಿಯ ಬೆಳವಣಿಗೆ ಎಂದು ವರದಿ ಹೇಳುತ್ತದೆ.

ಆತಂಕ ಮೂಡಿಸಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬೇಕಿದೆ ಕಠಿಣ ಕ್ರಮ

ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಆಡಳಿತ ಜನರಿಗೆ “ಅಚ್ಚೇದಿನ್” ತರುವ ಬದಲಿಗೆ ಆತಂಕ ಮತ್ತು ಕಳವಳಕಾರಿ ದಿನಗಳನ್ನು ತಂದಿದೆ ಎನ್ನುವುದರಲ್ಲಿ ಅಚ್ಚರಿಪಡಬೇಕಾಗಿಲ್ಲ. ದಿನೇ ದಿನೇ ಮುಂದುವರಿದ ಆರ್ಥಿಕ ಹಿಂಜರಿತ, ನಿರುದ್ಯೋಗ ಮತ್ತು ಇರುವ ಕೆಲಸವನ್ನೂ ಕಳೆದುಕೊಳ್ಳುತ್ತಿರುವ ಆಘಾತಕಾರಿ ಬೆಳವಣಿಗೆ ಗಾಬರಿ ಉಂಟು ಮಾಡುತ್ತಿದೆ.

ಆರ್ಥಿಕ ಹಿಂಜರಿತಕ್ಕೆ ನೋಟು ಅಮಾನೀಕರಣ ಮತ್ತು ಜಿ.ಎಸ್.ಟಿ ಜಾರಿಯೇ ಕಾರಣ ಎಂದು ಕೆಲವು ಖ್ಯಾತ ಅರ್ಥ ತಜ್ಞರಾದ ಅಮರ್ತ್ಯಸೇನ್, ರಘುರಾಂ ರಾಜನ್, ಡಾ. ಮನಮೋಹನ್ ಸಿಂಗ್ ಹೇಳಿದರೆ ಆರ್.ಬಿ.ಐ.ನ ನಿವೃತ್ತ ಗೌರ್ನರ್ ಆರ್. ರಂಗರಾಜನ್,  ನೋಟು ಅಮಾನೀಕರಣದ ನಂತರದ ದಿನಗಳ ಹಣಕಾಸು ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುತ್ತಾರೆ. ಇವರೆಲ್ಲರ ಅಭಿಪ್ರಾಯವನ್ನು ಸುಲಭವಾಗಿ ತಳ್ಳಿಹಾಕಲೂ ಬರುವುದಿಲ್ಲ. ಏಕೆಂದರೆ ಅಮಾತ್ರ್ಯ ಸೇನ್ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲ ದೇಶದ ವಿಶೇಷವಾಗಿ ಆರ್.ಬಿ.ಐ ಗೌರ್ನರ್ ಆಗಿ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಹಣಕಾಸು ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸಿದವರು.

ಅಜೀಂಪ್ರೇಂಜಿ ಯೂನಿವರ್ಸಿಟಿಯ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯಿಮೆಂಟ್ 2018ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ಶೇ 6ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದು 2000-2010ರ ಅವಧಿಯ ನಡುವಿನ ಎರಡರಷ್ಟು ಪಟ್ಟು ಉದ್ಯೋಗ ನಷ್ಟವಾಗಿದೆ. ಅಂದರೆ ಒಟ್ಟಾರೆ ಸುಮಾರು 50 ಲಕ್ಷ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಹೀಗೆ ಉದ್ಯೋಗ ಕಳೆದುಕೊಳ್ಳಲು ಉದ್ಯಮ ರಂಗ ಮತ್ತು ಇತರೆ ಕ್ಷೇತ್ರಗಳಲ್ಲಿನ ಉತ್ಪಾದನೆ ಹಾಗು ಸೇವಾ ಕ್ಷೇತ್ರದಲ್ಲಿ ಯಾವ ಪ್ರಗತಿಯೂ ಕಾಣದೇ ಹೋದುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಇನ್ನು  ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2019 ವರದಿಯ ಪ್ರಕಾರ ಉದ್ಯೋಗ ಲಭ್ಯವಿರುವ ರಾಜ್ಯಗಳಲ್ಲಿ ಸುಮಾರು 20ರಿಂದ 24 ವಯಸ್ಸಿನ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶ ಹಾಗೂ ಪುರುಷ ಮತ್ತು ಮಹಿಳೆಯರೂ ಉದ್ಯೋಗಾವಕಾಶದಿಂದ ವಂಚಿತರಾಗಿ ನಿರುದ್ಯೋಗಿಗಳಾಗುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ನಿಜಕ್ಕೂ ಆತಂಕಕಾರಿಯ ಬೆಳವಣಿಗೆ ಎಂದು ವರದಿ ಹೇಳುತ್ತದೆ.

ಈ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ಉದ್ಯಮ ಕ್ಷೇತ್ರದಲ್ಲಿ ಬೇಡಿಕೆ ಇಲ್ಲದೆ ವಾಹನಗಳ ತಯಾರಿಕೆ ಮತ್ತು ಮಾರಾಟದಲ್ಲಿ ಕುಸಿತ ಕಂಡು ಸುಮಾರು 3.5 ಲಕ್ಷ ಮಂದಿಯ ಉದ್ಯೋಗಕ್ಕೆ ಸಂಚಕಾರ ಆಯಿತೆನ್ನುವ ಮಾತು ಈಗ ಹಳೆಯದು. ಮತ್ತು ಮೋಟಾರ್ ವಾಹನಗಳ ಬಿಡಿಭಾಗಗಳ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮತ್ತೊಂದು ವರದಿ ಹೇಳುತ್ತಿದೆ.

ದೇಶದಲ್ಲಿನ ಆರ್ಥಿಕ ಹಿಂಜರಿತದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಯಾವುದೇ ತೊಂದರೆ ಆಗಿಲ್ಲ ಎನ್ನುವ ಬಲವಾದ ನಂಬಿಕೆ ಹಲವರಲ್ಲಿತ್ತು. ವಿದೇಶದಲ್ಲಿನ ಆರ್ಥಿಕ ಹಿಂಜರಿತವೂ ಈ ಕ್ಷೇತ್ರವನ್ನು ಇತ್ತೀಚೆಗೆ ಬಾಧಿಸಿಲ್ಲ. ಆದರೂ ಬೆಂಗಳೂರು ಮತ್ತು ದೇಶದ ಇತರೆ ಕಡೆ ಇರುವ ಅಮೆರಿಕದ ಕಾಗ್ನಿಜೆಂಟ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಭಾರತದಲ್ಲಿನ ತನ್ನ ಸಿಬ್ಬಂದಿಯಲ್ಲಿ ಸುಮಾರು ಮೂರು ಸಾವಿರ  ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ವರದಿಗಳಿವೆ.

ಈ ಸುದ್ದಿಯ ಜೊತೆಗೆ ಈಗ ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಕರ್ನಾಟಕದ ಇನ್ಫೋಸಿಸ್ ಕೂಡ ಹತ್ತು ಸಾವಿರ ಮಂದಿ ಉದ್ಯೋಗಿಗಳನ್ನು ಹೊರಹಾಕಲು ನಿರ್ಧರಿಸಿರುವುದಾಗಿ ಸುದ್ದಿ ಇದೆ. ಈ ಸಂಗತಿಯನ್ನು ಸಂಸ್ಥೆಯ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನೀಲೇಕಣಿ ಅಲ್ಲಗಳೆದಿಲ್ಲ. ಸಂಸ್ಥೆಯಲ್ಲಿನ ಹಿರಿಯ ದರ್ಜೆಯಲ್ಲಿರುವ ನೌಕರ ವರ್ಗದಲ್ಲಿರುವ ಅಧ್ಯಕ್ಷರು, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ಕೆಲಸದಿಂದ ತೆಗೆದುಹಾಕುವುದು ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಎಷ್ಟು ಮಂದಿಗೆ ಉದ್ಯೋಗದ ಸಂಚಕಾರ ಆಗಲಿದೆ ಎಂಬುದನ್ನು ಮಾತ್ರ ಅವರು ಹೇಳಿಲ್ಲ. ಒಂದು ಮೂಲದ ಪ್ರಕಾರ ಮಾಹಿತಿ ತಂತ್ರಜ್ಞಾನದ ಸೇವಾ ಪೂರೈಕೆಯ ಈ ಸಂಸ್ಥೆಗೆ ಈಗ ವಿದೇಶದಿಂದ ಹೊಸ ಹೊಸ ಪ್ರಾಜೆಕ್ಟ್ ಗಳು ಸಿಗದಿರುವುದು ಸಹಾ ಈ ಉದ್ಯೋಗ ಕಡಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೂಲಗಳ ಪ್ರಕಾರ ಈ ರೀತಿಯ ಪ್ರಕ್ರಿಯೆಯನ್ನು ಆರಂಭಿಸುವುದು ಮಧ್ಯ ವಯಸ್ಸಿನ ಅಸಮರ್ಥರಿಂದ ಹಿಡಿದು ನಮ್ಮ ವಾಣಿಜ್ಯ ವ್ಯವಹಾರದಲ್ಲಿ ಇವರು ಅಸಮರ್ಥರು ಎಂದು ಕಂಡು ಬರುವ ಉದ್ಯೋಗಿಗಳಿಗೆ ಅನ್ವಯ ಮಾಡಲಾಗುವುದು. ಅಂತೆಯೇ ಖಾಲಿ ಬೀಳುವ ಉದ್ಯೋಗಗಳಿಗೆ ಮತ್ತು ಪ್ರಾಜೆಕ್ಟ್ ಗಳಿಗೆ ಅನ್ವಯಿಸಿದಂತೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ರೀತಿಯ ಪ್ರಕ್ರಿಯೆ ಎಲ್ಲ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಇದೆ ಎಂಬುದಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿವೆ. ಕೈತುಂಬ ಸಂಬಳ ಪಡೆಯುತ್ತಿದ್ದ ಜನರು ಒಮ್ಮೆಯೇ ಉದ್ಯೋಗ ಕಳೆದುಕೊಂಡರೆ ಅದರ ಪರಿಣಾಮ ಕೇವಲ ಅವರ ಕುಟುಂಬಕ್ಕಷ್ಟೇ ಸೀಮಿತವಾಗುವುದಿಲ್ಲ. ಅದು ಸಮಾಜದ ಮೇಲೂ ಪರಿಣಾಮ ಬೀರಲಿದೆ. ಏನೇ ಆಗಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.

ಕರ್ನಾಟಕದಲ್ಲಿ ಪ್ರತಿ ವರ್ಷವೂ 110000 ಸಾವಿರ ಎಂಜಿನಿಯರಿಂಗ್ ಸೀಟುಗಳಿಗೆ 220 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಆದರೆ ಈ ವರ್ಷ ಸುಮಾರು 25 ಸಾವಿರ ಎಂಜಿನಿಯರಿಂಗ್ ಸೀಟುಗಳು ಕಾಲೇಜುಗಳಲ್ಲಿ ಖಾಲಿ ಬೀಳಬೇಕಾದ ಸ್ಥಿತಿ ಉಂಟಾಯಿತು. ಪ್ರತಿ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಎಂಜಿನಿಯರಿಂಗ್ ಕ್ಷೇತ್ರವೊಂದರಿಂದಲೇ ಪದವಿ ಪಡೆದು ಹೊರಬರುತ್ತಾರೆ. ಇವರಲ್ಲಿ ಸುಮಾರು ಶೇ 30 ರಷ್ಟು ಮಂದಿಗೆ ಉದ್ಯೋಗಾವಕಾಶಗಳು ಲಭ್ಯವಾಗಬಹುದು. ಇನ್ನು ಉಳಿದವರ ಪಾಡು ಹೇಳತೀರದು. 1995ರಿಂದ 2005ರವರೆಗೆ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಉದ್ಯೋಗ ವಿಫುಲವಾಗಿ ಲಭ್ಯವಾಗುತ್ತಿದ್ದವು. ಆಗ ಈ ಕ್ಷೇತ್ರದ ಬೆಳವಣಿಗೆ ಉತ್ತುಂಗಕ್ಕೇರಿತ್ತು. ಆ ದಿನಗಳಲ್ಲಿ ನೌಕರರ ವೇತನ ಕೂಡ ಅಚ್ಚರಿ ಉಂಟು ಮಾಡುವಂತೆ ಕೈತುಂಬ ಇತ್ತು.

ಆದರೀಗ ಪರಿಸ್ಥಿತಿ ಬದಲಾಗಿದೆ. ಈ ಕ್ಷೇತ್ರದಲ್ಲೂ ಉದ್ಯೋಗಾವಕಾಶ ಕಡಿಮೆ ಆಗುತ್ತಾ ಬಂದಿದೆ. ಈ ರೀತಿಯ ನಿರುದ್ಯೋಗ ಸಮಸ್ಯೆ ಉಂಟಾಗಲು ನಮ್ಮ ಶೈಕ್ಷಣಿಕ ವ್ಯವಸ್ಥೆ ಕೂಡ ಕಾರಣ ಎನ್ನುವುದು ಎಂಜಿನಿಯರಿಂಗ್ ಕ್ಷೇತ್ರದ ತಜ್ಞರ ಅಭಿಪ್ರಾಯ. ವಾಸ್ತವವಾಗಿ ಎಂಜಿನಿಯರಿಂಗ್ ಉದ್ಯಮಕ್ಕೆ ಬೇಕಾದ ಜ್ಞಾನವನ್ನು ಈಗಿನ ಶಿಕ್ಷಣ ನೀಡುತ್ತಿಲ್ಲ. ಕೇವಲ ಡಿಗ್ರಿಗಳನ್ನು ಮಾತ್ರ ನೀಡಲಾಗುತ್ತಿದೆ. ವಿಶ್ವ ವಿದ್ಯಾನಿಲಯಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪಠ್ಯ ಕ್ರಮ ಆಗಿಂದ್ದಾಗ್ಗೆ ಬದಲಾಗಬೇಕು. ಉದ್ಯಮದಲ್ಲಿ ಏನು ನಡೆಯುತ್ತಿದೆ. ಯಾವ ಬದಲಾವಣೆ ಆಗುತ್ತಿದೆ. ಈ ಉದ್ಯಮ ಎಂತಹ ಪದವೀದರರನ್ನು ಬಯಸುತ್ತಿದೆ ಎನ್ನುವುದನ್ನು ನಿರಂತರವಾಗಿ ಅಧ್ಯಯನ ಮಾಡುತ್ತ ತಮ್ಮ ಪಠ್ಯಕ್ರಮಗಳನ್ನು ಬದಲಾಯಿಸಿಕೊಳ್ಳಬೇಕು. ಅಂತಹ ಪರಿಸ್ಥಿತಿ ಬಂದಾಗ ಹೊಸಬರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎನ್ನುವುದು ಇವರ ಲೆಕ್ಕಾಚಾರ.

ಇದರ ಜೊತೆಗೆ ಬೇರೆ ಕೋರ್ಸುಗಳಾದ ಬಿಬಿಎಂ, ಎಂಬಿಎ, ಬಿಸಿಎ, ಎಂಸಿಎ, ಐಐಎಂ ಮತ್ತು ಐಐಟಿಗಳಿಂದಲೂ ಪದವೀಧರರು ಪ್ರತಿ ವರ್ಷವೂ ಸಾವಿರ ಗಟ್ಟಲೆ ಹೊರ ಬರುತ್ತಾರೆ. ಈ ಕೋರ್ಸುಗಳನ್ನು ಮಾಡಿಕೊಂಡು ಬರುವವರು ಸಹಜವಾಗಿಯೇ ತಮಗೆ ಉದ್ಯೋಗ ಖಚಿತ ಎನ್ನುವ ವಿಶ್ವಾಸವನ್ನು ಹೊಂದಿರುತ್ತಾರೆ. ಆದರೆ ಅಷ್ಟೂ ಮಂದಿ ಹೊಸಬರಿಗೆ ಉದ್ಯೋಗಾವಕಾಶ ಒದಗಿಸಲು ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆಗುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರವಂತು ವಿದೇಶಗಳ ಪ್ರಾಜೆಕ್ಟಗಳನ್ನು ನಂಬಿ ಕೆಲಸ ಮಾಡುವ ಸ್ಥಿತಿ ಇರುವುದನ್ನು ತಳ್ಳಿಹಾಕಲಾಗದು.

ಕಳೆದ ಎರಡು ದಶಕಗಳಿಂದ ಅಮೆರಿಕದಂತಹ ದೇಶಗಳಲ್ಲಿ ತಮ್ಮ ಮಕ್ಕಳಿಗೇ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದರಿಂದ ಭಾರತದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಪ್ರಜೆಕ್ಟ್ ಗಳು ಸಿಗುವುದು ಕಷ್ಟವಾಗಿದೆ ಮತ್ತು ಅಮೆರಿಕದ ವೀಸಾ ನೀಡಿಕೆ ಪದ್ಧತಿಯನ್ನು ಬಿಗಿಗೊಳಿಸಲಾಗಿದೆ. ಭಾರತದಲ್ಲಿ ಹೆಚ್ಚು ಮಂದಿಗೆ ಉದ್ಯೋಗಾವಕಾಶಗಳು ಕಡಿಮೆ ಆಗಲೂ ಇದು ಒಂದು ಮುಖ್ಯ ಕಾರಣ ಎಂಬುದು ಈ ಕ್ಷೇತ್ರದ ಉದ್ಯಮಿಗಳ ಮಾತು. 

ಆಗಿಂದ್ದಾಗೆ ಉದ್ಯೋಗ ಕ್ಷೇತ್ರಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡುವ ರಾಷ್ಟ್ರೀಯ ಸಮೀಕ್ಷೆಯ ವರದಿ ಅಧಿಕೃತವಾಗಿ ಹೊರಬೀಳದಿದ್ದರೂ, ಸೋರಿಕೆಯಾಗಿರುವ ಅಂಕಿ ಅಂಶಗಳ ಪ್ರಕಾರ ಕಳೆದ 45 ವರ್ಷಕ್ಕಿಂತ 2017-18ರ ಅವಧಿಯಲ್ಲಿ 6.1 ರಷ್ಟು ಉದ್ಯೋಗ ನಷ್ಟವಾಗಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯ ಪ್ರಕಾರ 1999-2011ರ ಅವಧಿಯಲ್ಲಿ ಶೇ 2-3 ರಷ್ಟು ನಿರುದ್ಯೋಗವಿತ್ತು. ಅದು 2015ರ ಹೊತ್ತಿಗೆ ಶೇ. 5ಕ್ಕೆ ಮುಟ್ಟಿತು. 2018ರಲ್ಲಿ ಇದು ಶೇ 6.1ರಷ್ಟಕ್ಕೆ ಏರಿಕೆ ಆಗಿದೆ. ದುಡಿಯುವ ಜನಸಂಖ್ಯೆಯೂ ಹೆಚ್ಚುತ್ತಾ ಹೋಗಿದೆ. ದೇಶದಲ್ಲಿನ ಈ ದುಡಿಯ ವರ್ಗದ ಪ್ರಮಾಣ ಸುಮಾರು ಹದಿನೈದು ವಯಸ್ಸಿಗಿಂತ ಹೆಚ್ಚಿನ ಜನರ ಸಂಖ್ಯೆ 2016ರಲ್ಲಿ 950.8 ದಶಲಕ್ಷ ಇದ್ದದ್ದು 2018ರಲ್ಲಿ 983.1 ದಶಲಕ್ಷಕ್ಕೆ ಹೆಚ್ಚಿದೆ.

ಈ ಮಧ್ಯೆ ಕೇಂದ್ರ ಸರ್ಕಾರದ ಸ್ವಾಮ್ಯದ ಬಿ ಎಸ್ ಎನ್ ಎಲ್ ಈಗ ನಷ್ಟದ ಹಾದಿ ತುಳಿದಿರುವುದಾಗಿ ಹೇಳಲಾಗುತ್ತಿದೆ. ಬಿ ಎಸ್‍ ಎನ್ ಎಲ್ ಮತ್ತು ಮಹಾನಗರ ಟೆಲಿಕಾಂ ನಿಗಮ ಲಿ ವಿಲೀನಗೊಳಿಸಲಾಗಿ ಎರಡನ್ನೂ ಪುನಶ್ಚೇತನಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಬಿ ಎಸ್ ಎನ್ ಎಲ್ ನಲ್ಲಿ ಒಂದೂವರೆ ಲಕ್ಷ ಮಂದಿ ಇದ್ದು ಅವರಲ್ಲಿ ಸುಮಾರು ಒಂದು ಲಕ್ಷ ಮಂದಿಗೆ ಸ್ವಯಂ ನಿವೃತ್ತಿ ಪಡೆಯಲು ಸರ್ಕಾರ ಆದೇಶಿಸಿದೆ. ಈ ಸ್ವಯಂ ನಿವೃತ್ತಿ ಬಯಸಿ ಅರ್ಜಿ ಹಾಕುವ ದಿನಾಂಕವನ್ನು ಡಿಸೆಂಬರ್ 4ರವರೆಗೆ ಅವಕಾಶ ನೀಡಲಾಗಿದೆ.

ಇದೇ ಹಾದಿಯಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಹಿಂದೂಸ್ತಾನ್ ಏರೋನಾಟಿಕಲ್ ಸಂಸ್ಥೆಯೂ ಇರುವುದಾಗಿ ವರದಿಗಳಿವೆ. ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ನಮ್ಮ ಇಂತಹ ನಷ್ಟಪೀಡಿತ ಸಂಸ್ಥೆಗಳನ್ನು ಜಂಟಿ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಲು ವಿದೇಶಿ ಉದ್ಯಮಗಳೂ ಬಂಡವಾಳ ಹೂಡಿಕೆಗೆ ಅಷ್ಟಾಗಿ ಮುಂದಾಗುತ್ತಿರುವುದು ಕಾಣುತ್ತಿಲ್ಲ.ಇದು ವಿದ್ಯಾವಂತರ ನಿರುದ್ಯೋಗ ಸಮಸ್ಯೆಯಾದರೆ ಗ್ರಾಮೀಣ ಪ್ರದೇಶದಲ್ಲಿನ ಅಸಂಘಟಿತ ಕೃಷಿ ಕಾರ್ಮಿಕರ ಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿ ನಮ್ಮ ಗ್ರಾಮೀಣ ಆರ್ಥಿಕ ಸ್ಥಿತಿಗತಿ ಯಾವುದೇ ಆಶಾಧಾಯಕವಾಗಿ ಕಾಣದಿರುವುದು ದುರದೃಷ್ಟಕರ ಬೆಳವಣಿಗೆ. ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರ ಕಟ್ಟು ನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವುದು ಇಂದಿನ ಅವಶ್ಯ.