‘ಅನಕ್ಷರಸ್ಥ’ ಸಚಿವ ರೇವಣ್ಣನ  ಪ್ರಲಾಪ

‘ಅನಕ್ಷರಸ್ಥ’ ಸಚಿವ ರೇವಣ್ಣನ  ಪ್ರಲಾಪ

ಸಚಿವ ಸ್ಥಾನ ಎಂಬುದಕ್ಕೆ ಒಂದು ಘನತೆ ಇದೆ. ಜನಸಾಮಾನ್ಯರೂ ಇಂಥವರಿಂದ ಮಹತ್ವದ್ದನ್ನೇ ನಿರೀಕ್ಷಿಸುತ್ತಾರೆ. ಸಾರ್ವಜನಿಕವಾಗಿ ಸಚಿವರ ಮಾತು, ನಡವಳಿಕೆಯನ್ನು ಎಲ್ಲರೂ ಗಮನಿಸುತ್ತಿರುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಸಚಿವರಿಗೆ ಈ ಅರಿವು ಇದ್ದಂತಿಲ್ಲ. ಸಚಿವರಾದ ಮಾತ್ರಕ್ಕೆ ಯಾವ್ಯಾವುದೋ ಸಮಾರಂಭಗಳಲ್ಲಿ  ಅತಿಥಿಗಳಾಗಿ ಪಾಲ್ಗೊಳ್ಳುವ ಸಚಿವರು ತಮಗೆ ಸಾಂಸ್ಕೃತಿಕ, ಸಾಹಿತ್ಯಿಕ ಅಭಿರುಚಿಗಳಿಲ್ಲದಿದ್ದರೂ, ಇದ್ದರೂ ತಮ್ಮ ಜ್ಞಾನದ ವ್ಯಾಪ್ತಿಯನ್ನು ಮೀರಿ ಸಾಹಿತ್ಯ, ಕಲೆ ಮೊದಲಾದ ವಿಷಯಗಳ ಬಗ್ಗೆ ಒಂದಷ್ಟು ಮಾತುಗಳನ್ನು ಉದುರಿಸಿ ಕೃತಾರ್ಥರಾಗುತ್ತಾರೆ.

ಸಚಿವರನ್ನು ಆಹ್ವಾನಿಸುವವರಿಗೂ ಈ ಜ್ಞಾನ ಇರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬದಲು ಪುಡಾರಿಗಳನ್ನು ಕರೆಸುವುದರಿಂದ ತಮ್ಮ ಯಾವುದಾದರೂ ಕೆಲಸವಾಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಹೀಗಾಗಿ ತಮಗೆ ಸಂಬಂಧಪಡದ ಯಾವುದೇ ಕ್ಷೇತ್ರವಾದರೂ ಏನೇ ಮಾತನಾಡಿದರೂ ಚಪ್ಪಾಳೆ ಹೊಡೆಯುವ ಭಟ್ಟಂಗಿಗಳಿರುವಾಗ ನಿರಾಸೆ ಅನುಭವಿಸುವ ಮಾತೇ ಇಲ್ಲ.

ಅದೊಂದು ರೀತಿಯಾದರೆ ಬಿಜೆಪಿಗೆ ಸೇರಿದ ಕೆಲವು ಸಚಿವರು ಚುನಾವಣೆ ಸಂದರ್ಭದಲ್ಲಿ ತಮಗೆ ಮುಸ್ಲಿಮರ ಮತಗಳೇ ಬೇಡವೆಂದೂ, ಸಂವಿಧಾನ ಬದಲಾವಣೆ ಮಾಡುತ್ತೇವೆಂದೂ, ಹಿಂದೂ ಹೆಣ್ಣುಮಕ್ಕಳನ್ನು ಮುಟ್ಟುವ ಅಲ್ಪಸಂಖ್ಯಾತರ ಕೈಗಳನ್ನು ಕಡಿಯಬೇಕೆಂದೂ ಸಲಹೆ ನೀಡಿ ಪುನೀತರಾಗುತ್ತಲೇ ಇರುತ್ತಾರೆ.

ಇಂಥ ಹೇಳಿಕೆಗಳನ್ನು ನೀಡುವುದು ಕೆಲವರಿಗೆ ವಾಸಿಯಾಗದ ಕಾಯಿಲೆ. ಅಂಥವರಿಂದಲೇ  ‘ಮಾತೇ ಮುತ್ತು, ಮಾತೇ ಮಿತ್ತು’ ಎನ್ನುವುದು ಹುಟ್ಟಿಕೊಂಡಿದೆಯೋ ಏನೋ. ಮಿತ್ತು ಎನ್ನುವುದನ್ನು ಮೃತ್ಯು ಬದಲು myth ಅರ್ಥಾತ್ ಪುರಾಣ ಎಂದುಕೊಂಡರೋ ಏನೋ. ಅಂಥವರ ಮಾತುಗಳನ್ನು ಕೇಳಿದರೆ ಅದು ಪುರಾಣದಂತಿರುತ್ತದೆ!

ಸಚಿವ ರೇವಣ್ಣ ಕೂಡ ಇಂಥ ಕಾಯಿಲೆಯಿಂದ ನರಳುತ್ತಿರುವುದು ನಿನ್ನೆಯಷ್ಟೇ ಗೊತ್ತಾಗಿದೆ. ಅವರ ಮೌಢ್ಯ, ರಾಹುಕಾಲ, ಗುಳಿಕಾಲ, ಹೋಮ ಹವನದ ಖ್ಯಾತಿ ಎಲ್ಲವೂ ಗೊತ್ತು. ಸಚಿವರಾಗಿ ಹೋಂವರ್ಕ್ ಮಾಡಿಕೊಂಡು ಸುದ್ದಿಗೋಷ್ಠಿ ನಡೆಸುವುದರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗಿಂತಲೂ ಉತ್ತಮ. ಇಂಧನ ಇಲಾಖೆಯಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆಂಬ ಹೆಸರೂ ಅವರಿಗಿದೆ.

ಆದರೆ ಈ ಕಾಯಿಲೆಯ ಪರಿಣಾಮವಾಗಿಯೇ ಅವರು  ಉಡುಪಿಯ ಮತದಾರರು ಬಿಜೆಪಿಗೆ ಮತ ನೀಡಿದ್ದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಹೋಯಿತು. ಅಲ್ಲಿನ ಜನರು ಜಾತ್ಯತೀತ ಪಕ್ಷಕ್ಕೆ ಮತ ನೀಡಿದ್ದರೆ ಉಡುಪಿ ಮೊದಲನೇ ಸ್ಥಾನದಲ್ಲೇ ಇರುತ್ತಿತ್ತು. ಹಾಸನದ ಜನರು ಜಾತ್ಯತೀತ ಪಕ್ಷಕ್ಕೆ ಮತ ನೀಡಿರುವುದರಿಂದ ಮೊದಲನೇ ಸ್ಥಾನಕ್ಕೆ ಏರಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

 ಉಡುಪಿ ಯಾಕೆ ಮೊದಲ ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಇಳಿಯಿತು  ಎಂಬುದನ್ನು ಶಿಕ್ಷಣ ತಜ್ಞರ ಅಧ್ಯಯನದಿಂದಲೇ ತಿಳಿಯಬೇಕು. ಅಲ್ಲಿನ ಶಿಕ್ಷಕರು ಬೋಧನೆಯಲ್ಲಿ ನಿರಾಸಕ್ತಿ ವಹಿಸಿದರೋ? ವಿದ್ಯಾರ್ಥಿಗಳೇ ಅತಿಯಾದ ವಿಶ್ವಾಸದಿಂದ ಹಿಂದೆ ಉಳಿಯುವಂತಾಯಿತೇ? ನಾಲ್ಕು ಸ್ಥಾನಗಳಷ್ಟು ಹಿಂದಕ್ಕೆ ತಳ್ಳಿದ ಇತರ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ತರಬೇತಿ ನೀಡಲಾಯಿತೇ? ಪ್ರಾಮಾಣಿಕ ಅಧ್ಯಯನದಿಂದ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.

ತಮ್ಮ ಅಭ್ಯರ್ಥಿಗೆ ಮತ ನೀಡದ್ದರಿಂದ ಫಲಿತಾಂಶ ಋಣಾತ್ಮಕವಾಗಿತ್ತು ಎಂದು ಸಚಿವರೊಬ್ಬರು ಹೇಳುತ್ತಾರೆಂದರೆ ಅದರ ಅರ್ಥವಾದರೂ ಏನು? ಪ್ರಭಾವ ಬೀರಿ ಉಡುಪಿಯನ್ನು ಹಿಂದಕ್ಕೆ ತಳ್ಳಲಾಯಿತೆಂದೇ ಅಥವಾ ಹಾಸನಕ್ಕೆ ಒತ್ತು ನೀಡಿ ಮುಂದೆ ತರಲಾಯಿತೆಂದೇ? ಈ ಪ್ರಶ್ನೆಗಳಿಗೆ ಸಚಿವ ರೇವಣ್ಣ ಅವರೇ ಸ್ಪಷ್ಟೀಕರಣ ನೀಡಬೇಕು.

ರಾಜ್ಯ ಸರ್ಕಾರದ ಮಂತ್ರಿಯಾಗಿ ತಮ್ಮ ಜವಾಬ್ದಾರಿ ಎಲ್ಲ ಜಿಲ್ಲೆಗಳಿಗೆ ಸಂಬಂಧಿಸಿದ್ದು ಎಂಬ ಅರಿವಾದರೂ ರೇವಣ್ಣ ಅವರಿಗೆ ಇರಬೇಕಿತ್ತು. ಅದು ಇದ್ದಂತಿಲ್ಲ. ಅಥವಾ ಮತ ರಾಜಕಾರಣ ನಿರೀಕ್ಷಿಸುವ ದುರಹಂಕಾರ ಅವರಲ್ಲಿ ತಾರಕಕ್ಕೆ ಹೋಗಿರಬೇಕು. ಹಾಸನ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಶ್ರಮವೇ ಈ ಬೆಳವಣಿಗೆಗೆ ಕಾರಣ ಎಂಬ ಮಾಧ್ಯಮ ವರದಿಗಳನ್ನೂ ಅವರು ಒಪ್ಪಲು ತಯಾರಿಲ್ಲ. “ಅವರೇನು ಕಡಿದು ಕಟ್ಟೆ ಹಾಕಿದ್ದಾರೆ? “ ಎಂದು ಧಾರ್ಷ್ಟ್ಯ ಪ್ರದರ್ಶಿಸುತ್ತಾರೆ.

ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಶಾಲೆಗಳ ಮುಖ್ಯೋಪಾಧ್ಯಾಯರು ನಡೆಸಿದ ಪ್ರಯತ್ನಗಳು, ಅಷ್ಟೇ ಏಕೆ, ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯೂ ಆಗಿರುವ ತಮ್ಮ ಪತ್ನಿ ಭವಾನಿ ಕಡಿಮೆ ಅಂಕಗಳನ್ನು ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಕೈಗೊಂಡ ಕ್ರಮಗಳೂ ಹಾಸನ ಜಿಲ್ಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಭಡ್ತಿ ಪಡೆಯಲು ಮುಖ್ಯ ಕಾರಣ ಎಂದು ಹೇಳಿಕೊಂಡಿದ್ದಾರೆ.

ಅವರ ಪತ್ನಿ ಭವಾನಿ ಅಂಥ ಕೆಲಸ, ಮಾಡಿದ್ದರೆ ಅವರು ಅಭಿನಂದನಾರ್ಹರು. ಆದರೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೇವಲ ಒಂದು ಜಿಲ್ಲೆಯ ಪ್ರಗತಿಗೆ ಅಷ್ಟೊಂದು ಶ್ರಮ ವಹಿಸಿ ಉಳಿದ ಜಿಲ್ಲೆಗಳನ್ನು ನಿರ್ಲಕ್ಷಿಸಿದ್ದರೆ ಅದು ತಾರತಮ್ಯವಲ್ಲವೇ? ರೋಹಿಣಿ ಸಿಂಧೂರಿ ಜಿಲ್ಲೆಯ ಅಭಿವೃದ್ಧಿಗೆ ಒಂದಿಷ್ಟೂ ಶ್ರಮಿಸಿಲ್ಲ ಎನ್ನುವುದು ಕೇವಲ ದ್ವೇಷದ ಕಾರಿಕೆಯಾಗುತ್ತದೆಯೇ ಹೊರತು ಅದಕ್ಕೆ ತಾರ್ಕಿಕ ಅಡಿಪಾಯವಿಲ್ಲ.

ಸರ್ಕಾರದ ವ್ಯಾಪ್ತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳೇ ಹಾಸನ ಜಿಲ್ಲೆಯ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಭಡ್ತಿ ಪಡೆಯಲು ಕಾರಣವಾಗಿದ್ದರೆ ಜಾತ್ಯತೀತ ಪಕ್ಷಕ್ಕೆ ಮತ ಹಾಕಿದ್ದರಿಂದಲೇ ಹಾಸನ ಮೇಲುಗೈ ಪಡೆದಿದೆ, ಬಿಜೆಪಿಗೆ ಮತ ಹಾಕಿದ್ದರಿಂದಲೇ ಉಡುಪಿ ಹಿಂದೆ ಸರಿದಿದೆ ಎಂದು ಏಕೆ ಹೇಳಬೇಕಿತ್ತು? ಸಚಿವ ರೇವಣ್ಣ ಮಾತುಗಳಲ್ಲೇ ಗೊಂದಲವಿದೆ. ಸಿಟ್ಟು, ಅಹಂಕಾರ, ತಾರತಮ್ಯ ಮನೋಸ್ಥಿತಿ ಇವೆಲ್ಲವೂ ಅವರ ಹೇಳಿಕೆಗೆ ನಿಜವಾದ ಸಾಕ್ಷಿಗಳಾಗಿವೆ. ಮಂತ್ರಿಯಾದವರು ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಹಾಗೆ ಹೇಳಿಕೆ ನೀಡುವುದು ಅನಕ್ಷರಸ್ಥನ ಹಳಹಳಿಕೆಯಂತಿರುತ್ತದೆ. ಅದು ಅಕ್ಷಮ್ಯ.

                                                                                                 -ಪ್ರಧಾನ ಸಂಪಾದಕ