ಟಿ.ವಿ.ಜ್ಯೋತಿಷ್ಯ ಎಂಬ ಮಾಯಾಜಾಲ

ಟಿ.ವಿ.ಜ್ಯೋತಿಷ್ಯ ಎಂಬ ಮಾಯಾಜಾಲ

ಯಾಕೋ ಇತ್ತೀಚೆಗೆ ಟಿವಿಯಲ್ಲಿ ಬರುವ ಜ್ಯೋತಿಷ್ಯದ ಕಾರ್ಯಕ್ರಮಗಳನ್ನು ನೋಡುವಾಗ  ನಮ್ಮ ಬದುಕನ್ನು ಟ್ರೇಲರ್ ರೂಪದಲ್ಲಿ ಹೇಳುತ್ತಿದ್ದಾರಾ ಅನ್ನಿಸತೊಡಗಿದೆ. ಸಿನಿಮಾದ ಟ್ರೇಲರ್ ಅನ್ನೇ ನೋಡಿ, ಹೆಚ್ಚೆಂದರೆ ಎರಡರಿಂದ ಮೂರು ನಿಮಿಷ ಇರುತ್ತದೆ.ಅಷ್ಟು ಸಮಯದಲ್ಲೆ ಇಡೀ ಸಿನಿಮಾದಲ್ಲಿ ಏನಿದೆ  ಅಂತಾ ಕೂತೂಹಲಕಾರಿಯಾಗಿ, ನೋಡಿದವರು ಬೆರಗಾಗುವ ರೀತಿಯಲ್ಲಿ ಕಣ್ಸಳೆಯುವ ಹಾಗೆ ತೋರಿಸಬೇಕು. ನಂತರ ಆ ಸಿನಿಮಾ ಹೇಗೆ ಇರಲಿ , ಅದು ಬೇರೆ ಮಾತು. ಟ್ರೇಲರ್ ಮಾತ್ರ ಚೆನ್ನಾಗಿ ಇರಬೇಕು. ಇಡೀ ಸಿನಿಮಾವನ್ನು ನೋಡುವ ತಾಳ್ಮೆ  ಈಗೀನ ಬಹುತೇಕ ಮಂದಿಗೆ ಇಲ್ಲಾ ಅಂತಾ ಸಿನಿಮಾದವರಿಗೂ ಗೊತ್ತು. ಟ್ರೇಲರ್ ಚೆನ್ನಾಗಿ ಇದ್ದರೆ, ಹಾಗೆಯೆ ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಅದರ ಸೌಂಡ್ ಜೋರಾಗಿ ಕೇಳಿ ಬಂದರೆ ಮುಂದೆ ಆ ಸಿನಿಮಾ ನೋಡಬೇಕಾ ಬೇಡವಾ ಅನ್ನೊದು ಆಗ ನಿರ್ಧಾರ ಆಗುತ್ತದೆ.

ಈಗ ನಮ್ಮ ಬದುಕಿಗೆ ಬನ್ನಿ. ನಮಗ್ಯಾರಿಗೂ ಮೂವತ್ತು  ನಲವತ್ತು ವರುಷಗಳ ನಂತರ ಏನಾಗುತ್ತೇವೆ  ಅನ್ನೊದು ಬೇಕಾಗಿಲ್ಲ.ಈ ದಿನ, ಈ ಒಂದು ತಿಂಗಳು ಇಲ್ಲಾ ಈ ಒಂದು ವರುಷದಲ್ಲಿ ಏನೇನ್ ಆಗುತ್ತದೆ ಅಷ್ಟು ಮಾತ್ರ ತಿಳಿದುಕೊಂಡರೆ ಸಾಕು. ಏಕೆಂದರೆ ಈ ಒಂದು ಅವಧಿಯೊಳಗೆ ಏನೊ ಒಂದು ಆಗಿ ಬಿಡಬೇಕು. ಸಮಸ್ಯೆಗಳೆಲ್ಲ ಚಿಟಕಿ ಹೊಡೆಯುವುದರೊಳಗೆ ಕಳೆಯಬೇಕು. ಅದಾದ ಮೇಲೆ ಒಂದು ನಿರಂತರವಾದ ಸುಖ ಎದುರಾಗಬೇಕು.ಅಂದುಕೊಂಡಿದ್ದೆಲ್ಲಾ ಕೈಗೆ ಎಟುಕುತ್ತಿರಬೇಕು.ನಮ್ಮದು ವೀಕೆಂಡ್ ಸಂಸ್ಕೃತಿಯಾಗಿ ಬದಲಾಗಿಬಿಟ್ಟಿದೆ. ಸುಖಕ್ಕೇನೆ ಒಂದು ದಿನ, ಕಷ್ಟ ಒತ್ತಡಗಳಿಗೇನೆ ಮತ್ತೊಂದು ದಿನ ಅಂತಾ ವಿಂಗಡಿಸಿಕೊಂಡು ಮೈಂಡ್ ಫಿಕ್ಸ್ ಮಾಡಿಕೊಂಡಿದ್ದೇವೆ. ಲೈಫ್ ಈಸ್ ಶಾರ್ಟ್.ಹಾಗಾಗಿ  ಎಲ್ಲಾ ಬೇಗ ಬೇಗ ಆಗಬೇಕು. ಉಸಿರಾಡ್ತ ಇರೋದೆ ವಿಷದ ಗಾಳಿ, ಕುಡಿಯೋದೆ ಕೆಮಿಕಲ್ ನೀರು, ಇನ್ನು ತಿನ್ನೋದೆಲ್ಲ ಕಲಬೆರಕೇನೆ. ಇದೆಲ್ಲವೂ ನಮಗೆ  ಗೊತ್ತು. ಹಾಗೂ ಗೊತ್ತಾಗದಿದ್ದರೆ ವರುಷಕ್ಕೆ ಒಂದು ಹತ್ತು ಸಲ ಆಸ್ಪತ್ರೆಗೆ ಹೋಗಿ ಅಲ್ಲಿ ಸಾವಿರ ಲಕ್ಷ ಕಳೆದ ಮೇಲೆ ಅನುಭವವಾಗುತ್ತದೆ.ಇದೆಲ್ಲ ಗೊತ್ತಾಗಿಯೂ ನನಗೇನು ತುಂಬಾ ವರುಷ ಬದುಕುವ ಆಸೆಗಳಿಲ್ಲ ಅನ್ನೊ ನಾಟಕದ ಡೈಲಾಗ್ ಗಳು ಬೇರೆ. ವಾಸ್ತವವಾಗಿ ಈ ಹಿಂದಿನವರ ಹಾಗೆ ತುಂಬಾ ವರುಷಗಳ ಕಾಲ ಬದುಕಿರೊದಕ್ಕೆ ಸಾಧ್ಯವಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಹಾಗಾಗಿನೆ ಎಲ್ಲದಕ್ಕೂ ಅವಸರ ಮಾಡುವುದು.

ಕೊನೆಗೆ ತಾಳ್ಮೆ ಕಳೆದುಕೊಳ್ಳುತ್ತಲೇ ಈ ಕಷ್ಟಗಳೆಲ್ಲ ಇದ್ದಿದ್ದೆ ಕೊನೆಪಕ್ಷ ಒಂದು ದಿನವಾದರೂ ಎಲ್ಲರ ಕಣ್ಣು ಕುಕ್ಕುವ ಹಾಗೆ ಬದುಕಬೇಕು,ಇಷ್ಟ ಬಂದದ್ದೆಲ್ಲ ಮಾಡಿಬಿಡಬೇಕು, ಎಂಜಾಯ್ ಮಾಡಬೇಕು,ನಾಳೆ ಏನು ಬೇಕಾದರೂ ಆಗಲಿ,  ನಮಗೀಗ ದೀಢೀರ್ ಆಗಿ ಉದ್ಧಾರ ಆಗಬೇಕು.

ವಿಷಯ ಏನಂದ್ರೆ , ಹೀಗೆಲ್ಲ ದಿಢೀರ್ ದಿಢೀರ್ ಅಂತಾ ಅನ್ನಿಸಿದಾಗಲೆಲ್ಲ ಶಾಶ್ವತವಾದ ಪರಿಹಾರಗಳು  ಕಾಣಿಸುವುದಿಲ್ಲ. ಇನ್ನು ಆ ಕ್ಷಣಕ್ಕೆ ತಾತ್ಕಾಲಿಕವಾಗಿ  ಏನು ಪರಿಹಾರ ಕಾಣುತ್ತದೊ ಅದೆಲ್ಲವೂ ನಮಗೆ ತುರ್ತಾಗಿ ಬೇಕು.ಹಾಗಾಗಿನೆ ಇವತ್ತು ಗಲ್ಲಿ ಗಲ್ಲಿಗೂ ಆಸ್ಪತ್ರೆಗಳಿವೆ. ಜ್ಯೊತಿಷ್ಯ ಕೇಂದ್ರಗಳಿವೆ.ಹಾಗೂ ಅವುಗಳು ಕಾಲಕ್ಕೆ ತಕ್ಕಂತೆ ವೇಷ, ವೇಷಕ್ಕೆ ತಕ್ಕಂತೆ ಭಾಷೆ ಅನ್ನುವ ಹಾಗೆ ಜನರ ಮನಸ್ಥಿತಿಗೆ ತಕ್ಕಂತೆ ಅಪ್ ಡೇಟ್ ಆಗಿವೆ, ಇಲ್ಲಾ ಜನರ ಮನಸ್ಸನ್ನೆ ಅಪ್ ಡೇಟ್ ಮಾಡುತ್ತಿವೆ. ಆಸ್ಪತ್ರೆಗಳಲ್ಲೆ ನೋಡಿ, ನಮ್ಮ ದೇಹದಲ್ಲಿ ಎಷ್ಟೆಷ್ಟು ಅಂಗಗಳಿವೆಯೊ ಅವಕ್ಕೆಲ್ಲ ಸ್ಪೆಷಲಿಸ್ಟ್ ಅನ್ನೊ ಡಾಕ್ಟರ್ ಗಳಿದ್ದಾರೆ.ಜ್ಯೋತಿಷ್ಯದಲ್ಲೆ  ನಾಡಿ ಭವಿಷ್ಯ, ಮುಖ ಭವಿಷ್ಯ, ಕೈ ಭವಿಷ್ಯ, ಕಂಪ್ಯೂಟರ್ ಭವಿಷ್ಯ ಅಂತಾ ನಾನಾ ಪ್ರಕಾರಗಳಿವೆ.ಅದರಲ್ಲೆ ಸ್ಪೆಷಲಿಸ್ಟ್ ಆಗಿರೋ ಪಂಡಿತರಿದ್ದಾರೆ.

ಇನ್ನು ಟಿವಿ ಮಾಧ್ಯಮಗಳು ಬಂದ ಮೇಲಂತೂ ಯಾರ ಭವಿಷ್ಯ ಬದಲಾಗಿದೆಯೋ ಗೊತ್ತಿಲ್ಲ, ಈ ಜ್ಯೋತಿಷಿಗಳ ಭವಿಷ್ಯ ಬದಲಾಗಿರುವುದಂತೂ ಹೌದು.ಅಂದ ಹಾಗೆ ನಾವು ಜ್ಯೋತಿಷಿಗಳ ವಿರೋಧಿಯಲ್ಲ. ಅವರ ಪಾಂಡಿತ್ಯವನ್ನು ಅನುಮಾನಿಸುತ್ತಲೂ ಇಲ್ಲಾ.ನಮ್ಮ ಅನುಮಾನ, ವಿರೋಧ, ತಕರಾರುಗಳೆಲ್ಲ ಟಿವಿಯಲ್ಲಿ ಬರುವ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ಬಗೆಯಲ್ಲಿ. ದಿನದ ಅರ್ಧ ಇಲ್ಲಾ ಒಂದು ಗಂಟೆಯ ಕಾರ್ಯಕ್ರಮದಲ್ಲಿ ದಿನ ರಾಶಿ ಭವಿಷ್ಯ ಹೇಳುತ್ತಲೊ, ಇಲ್ಲಾ ಸ್ತೊತ್ರಗಳನ್ನೊ ಹೇಳುತ್ತಲೊ ಅರ್ಧ ಟೈಮ್ ಕಳೆದಿರುತ್ತಾರೆ. ಇನ್ನೊಂದೆಡೆ ಕಾಲರ್ ಗಳಿಗೊ ಮಹಾ ಅರ್ಜೆಂಟ್ ಇರುತ್ತದೆ. ಬೆಂಬಿಡದೆ ಕಾಡುತ್ತಿರುವ ಸಮಸ್ಯೆಗಳಿಗೆ ತುರ್ತಾಗಿ  ಒಂದು ಸಮಧಾನ ಬೇಕಿರುತ್ತದೆ.ಹೇಳಿ ಕೇಳಿ ಟಿವಿಯಲ್ಲಿ ಬರುವ ಜ್ಯೋತಿಷಿಗಳೆಂದರೆ ಸೆಲಿಬ್ರಟಿಗಳ ಹಾಗೆ.ಅವರೆಲ್ಲ ಅಷ್ಟು ಸುಲಭವಾಗಿ ಸಿಗುವವರಲ್ಲ. ದಿನ ಟಿವಿ ಮುಂದೆ ಕಾರ್ಯಕ್ರಮ ನೋಡುವವರಿಗೆ ಆ ಜ್ಯೋತಿಷಿಗಳು ಹೇಳಿದರೆ ಸಾಕ್ಷಾತ್ ದೇವರ ವಾಣಿಯೆನ್ನುವ ಭಾವನೆ.ಹಾಗಾಗಿ ಅವರ ಜೊತೆ ಮಾತನಾಡಲು ಕುತೂಹಲದಿಂದ ಕಾಯುತ್ತಲೆ ಕಾಲ್ ಡಯಲ್ ಮಾಡುತ್ತಾರೆ. ಹಾಗೂ ಒಂದು ದಿನ ಕನೆಕ್ಟ್ ಆಗುತ್ತದೆ. ಸಮಯ ಕಡಿಮೆ. ಇರೋದೆಲ್ಲ ಒಂದೇ ಕ್ಷಣಕ್ಕೆ ಕಕ್ಕಿ ಬಿಡಬೇಕು. ಅದು ಸಾಧ್ಯವಾದರೆ...! ಮಧ್ಯದಲ್ಲಿ ನಿರೂಪಕಿ ಜಸ್ಟ್ ನಿಮ್ಮ ಜನ್ಮ ದಿನಾಂಕ ರಾಶಿ ನಕ್ಷತ್ರ ಹೇಳಿ ಸಾಕು,ಮಿಕ್ಕಿದ್ದೆಲ್ಲಾ ಗುರೂಜಿಗಳು ಹೇಳುತ್ತಾರೆ ಅನ್ನುತ್ತಾ ತಡೆ ಹಾಕುತ್ತಾಳೆ.ಕೊನೆಗೆ ಇವರುಗಳು ಕೇಳಿದ ಹಾಗೆ ಜನ್ಮದಿನಾಂಕ ರಾಶಿ ನಕ್ಷತ್ರ ಹೇಳುತ್ತಾರೆ,

ಅದಕ್ಕೆ ಸಂಬಂಧ ಪಟ್ಟಂತೆ ಗುರೂಜಿ ಏನೋ ಒಂದು ಚಿತ್ರಣವನ್ನು ಕೊಡುತ್ತಾರೆ. ಮೊದಲೇ ಕಷ್ಟದಲ್ಲಿದ್ದವರಿಗೆ ಅವರ ಮಾತುಗಳು ಕೇಳಲಿಕ್ಕೆ ಚೆಂದವಾಗಿದ್ದು ಹೌದೌದು  ಅಂತಾ ಅನಿಸುತ್ತಲೇ ಇರುತ್ತದೆ. ಅದೇ ಗುಂಗಿನಲ್ಲಿದ್ದವರಿಗೆ ಕೊನೆಯ ಒಂದು ಲೈನ್ ನಲ್ಲಿ ಅವರು ಹೇಳುವ ಪರಿಹಾರ ಅರ್ಧಂಬರ್ಧ ತಲೆಗೆ ಹೋಗಿರುತ್ತದೆ.ಅಷ್ಟರಲ್ಲಿ ಕಾಲ್ ಕಟ್ಟಾಗಿರುತ್ತದೆ. ಅಲ್ಲಿಗೆ ಆ ಗೂರೂಜಿ  ಕಾಲ್ ಮಹಾಶಯರ ಜೀವನವನ್ನ ಚಿಕ್ಕ ಟ್ರೇಲರ್ ರೂಪದಲ್ಲಿ ಹೇಳಿ ಮುಗಿಸಿರುತ್ತಾರೆ.ಬದುಕು ಅನ್ನೊ ಸಿನಿಮಾದ ಪ್ರಶ್ನೆ ಪ್ರಶ್ನೆಯಾಗೆ ಉಳಿದಿರುತ್ತದೆ. ಈಗಾಗಲೇ ಟ್ರೇಲರ್ ನ್ನು ನೋಡಿ ಆಕರ್ಷಿತರಾಗಿರುವುದರಿಂದ ,ಅದು ಅರ್ಥ ಆಗದಿದ್ದರೂ ಸಹ ಪೂರ್ತಿ ಸಿನಿಮಾ ನೋಡೊ ಕುತೂಹಲವನ್ನಂತೂ ಮಾಡಿಸುತ್ತದೆ. ಅಲ್ಲಿಗೆ ಆ ಗುರೂಜಿಯವರ ಕಾಂಟಾಕ್ಟ್ ನಂಬರ್ ಹಾಗೂ ಕಚೇರಿಯ ವಿಳಾಸವನ್ನು ತಿಳಿದುಕೊಂಡು, ಹಾಗೆಯೆ ಅಪಾಯಿಂಟ್ ಮೆಂಟ್ ಪಡೆದುಕೊಂಡು, ಮುಂದೆ ತಮ್ಮ ಬದುಕಿನ  ಸಿನಿಮಾ ಕತೆ ಯಾವ ಹಂತದಲ್ಲಿ ಯಾವ ತಿರುವು ಕಾಣುತ್ತದೆ ಅಂತಾ ಕೇಳಲು ಕಾತರರಾಗುತ್ತಾರೆ..ಅಲ್ಲಿಗೆ ಹೋದರೆ ಮೊದಲು ಕನ್ಸಲ್ಟೇಶನ್ ಫೀಸ್ ಅಂತಾ ಒಂದಿಷ್ಟು ಮತ್ತು ದೀರ್ಘವಾದ ವಿವರಣೆ ಬೇಕಿದ್ದರೆ ಅದಕ್ಕೆ ಬೇರೆನೇ ಪ್ಯಾಕೆಜ್ ಸಿಸ್ಟಮ್ಮು,ಹೀಗೆ ಪಟ್ಟಿ ಬೆಳೆಯುತ್ತದೆ... ಇನ್ನು ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಪರಿಹಾರ ಮಾಡಿಕೊಂಡಿಲ್ಲ ಅಂದರೆ ಹೇಗೆ...? ಮತ್ತೆ ಅದಕ್ಕೆ ಬೇರೆ ಚಾರ್ಜಸ್ಸು...ಹಾಗೂ ಅದರಲ್ಲಿ ರಿಸಲ್ಟ್ ಕಾಣದಿದ್ದರೆ ಮತ್ತೆ ಅವರ ಬಳಿನೆ ಹೋಗಬೇಕು.ಆಗ ಆಗದಿದ್ದಕ್ಕೆ   ಕಾರಣಗಳನ್ನು ಹುಡುಕಿ ಒಂದಿಷ್ಟು ಹೀಗಲ್ಲ ಹೀಗೆ ಅಂತಾ ಉಪದೇಶ ಹೇಳಿ ಇದು ಇಷ್ಟೇ ಹಣೆಬರಹ ಅಂತಾ ಹೇಳಿಯೋ ಅಥವಾ ಇನ್ನು ಏನೋ ಹೊಸ ಪರಿಹಾರ ಹುಡುಕಿಯೋ ಅಂತೂ ಸಮಾಧಾನ ಹೇಳಿ ಕಳುಹಿಸುತ್ತಾರೆ.ಅಷ್ಟು ಹೊತ್ತಿಗೆ ತಾಳ್ಮೆ ಕೆಟ್ಟಿರುತ್ತದೆ. ದಿಢೀರ್ ಪರಿಹಾರ ಅಂತಾ ಬಂದವರಿಗೆ ತಾತ್ಕಾಲಿಕವಾಗಿ ಖುಷಿ ಮೂಡಿಸಿದ ತಮ್ಮದೆ ಬದುಕಿನ ಆ ಚಿಕ್ಕ ಟ್ರೇಲರ್,ಮುಂದೆ  ಪೂರ್ತಿ  ಸಿನಿಮಾನ  ನೋಡುವ ಹೊತ್ತಿಗೆ ತುಂಬಾ ಎಳೆದಾಡುತ್ತಿದೆಯಲ್ಲ ಅಂತಾ ಅನ್ನಿಸಿಬಿಡುತ್ತದೆ.ಯಾಕೊ ಇದು ಆಗೊ ಹೋಗೊ ಕೆಲಸ ಅಲ್ಲಾ ಅಂತಾ ಕೈ ಚೆಲ್ಲುತ್ತಾರೆ.

ಮತ್ತೆ ಮಧ್ಯದಲ್ಲಿ ಕೈ ಚೆಲ್ಲಿ ತಪ್ಪು ಮಾಡಿದೆವಾ ಅಂತಾ ಅನಿಸೋಕೂ ಶುರುವಾಗುತ್ತದೆ.ಯಾಕೊ ಆ ಸೆಲೆಬ್ರಿಟಿ ಜ್ಯೋತಿಷಿಗಳು ಜಾಸ್ತಿ ಫೀಸ್ ಕೇಳುತ್ತಾರೆ ಎಂದೆನಿಸಿ, ಸುಮಾರಾಗಿ ಹೇಳುವ ಜ್ಯೋತಿಷಿಯಾದರೆ ಸಾಕು ಅನ್ನೋ ನಿರ್ಧಾರಕ್ಕೆ ಬಂದು,  ಅಂತವರನ್ನೆ ಹುಡುಕಿ, ಮತ್ತೆ ಅವರೇನು ಹೇಳಬಹುದು ಅನ್ನೊ ಕುತೂಹಲ ಹುಟ್ಟಿಸಿಕೊಂಡು, ಕೊನೆಯಲ್ಲಿ ಅವರ ಕೈಗೆನೆ ತಮ್ಮ  ಇಡೀ ಬದುಕಿನ ಜಾತಕ ಇಟ್ಟು, ಕೈ ಕಟ್ಟಿ ನಿಲ್ಲುತ್ತಾರೆ.ಒಂದಿಷ್ಟು ತಲೆಯಲ್ಲಿ ತುಂಬಿಕೊಂಡ ಹುಳ ಸಾಯುವವರೆಗೂ ಇದು ಸಾಗುತ್ತಲಿರುತ್ತದೆ.

ಈಗ ಹೇಳಿ ಇಲ್ಲಿ ತಪ್ಪಿತಸ್ಥರು ಯಾರು...?ಟಿವಿ ಮಾಧ್ಯಮದವರಾ...?  ಜ್ಯೋತಿಷ್ಯಗಳದಾ..?ಇಲ್ಲಾ ದಿಢೀರ್ ಅಂತಾ ಎಲ್ಲಾ ಸರಿಹೋಗಬೇಕು ಅಂತಾ ಬಯಸುವ ನಾವುಗಳಾ...? ನೀವು ಹೇಳಬಹುದು,ಟಿವಿಯಲ್ಲಿ ಜ್ಯೋತಿಷ್ಯದಂಥ ಪ್ರೋಗ್ರಾಮ್ ಗಳನ್ನ ಬ್ಯಾನ್ ಮಾಡಲಿ. ಆವಾಗ ಯಾರು ನೋಡುತ್ತಾರೆ ಅಂತಾ... ಆದರೆ ನೆನಪಿರಲಿ. ನಮ್ಮ ಈ ಮನಸ್ಥಿತಿ ಇದೆಯಲ್ಲ... ದಿಢೀರ್ ಎಲ್ಲಾ ಸರಿಹೋಗಿಬಿಡುತ್ತದೆ ಅನ್ನೊ  ಆಸೆ, ಭ್ರಮೆ, ಮೊದಲು ಅದನ್ನ ಬಿಡಬೇಕು. ಸ್ವಲ್ಪ ಸೂಕ್ಷ್ಮವಾಗಿ ಯೋಚಿಸಿ ನೋಡಿ. ಒಂದೆರಡು ಮೂರು ನಿಮಿಷದಲ್ಲಿ ಆ ಕರೆ ಮಾಡಿದವರು ತಮ್ಮ ಸಮಸ್ಯೆಯನ್ನ ಎಷ್ಟರ ಮಟ್ಟಿಗೆ ಸ್ಪಷ್ಟವಾಗಿ  ಹೇಳಿಕೊಳ್ಳಬಹುದು..!? ಹಾಗೂ ಅದನ್ನ ಅರ್ಥೈಸಿಕೊಂಡು ಆ ಸಮಯದೊಳಗೆ ಗುರೂಜಿಯವರು ಅದೆಷ್ಟರ ಮಟ್ಟಿಗೆ ಪರಿಹಾರ ಸೂಚಿಸಬಹುದು...!?ಹಾಗೆ ಹೇಳಿದ ಪರಿಹಾರ ಆ ಕಾಲರ್ ಮಹಾಶಯರಿಗೆ ಅದೆಷ್ಟರ ಮಟ್ಟಿಗೆ  ಅರ್ಥವಾಗಿ, ಮುಂದೆ ಅದನ್ನ ಹೇಗೆಲ್ಲಾ ಅನುಷ್ಟಾನಕ್ಕೆ ತರುತ್ತಾರೊ ಗೊತ್ತಿಲ್ಲ!  ಕೊನೆಯಲ್ಲಿ ಕಾಲ್ ಸಿಕ್ಕಿ ದೈವ ಸಮಾನರೆನಿಸಿಕೊಂಡ ಗುರೂಜಿ ಜೊತೆ ಎರಡು ನಿಮಿಷ ಮಾತನಾಡಿದ ವಿಚಿತ್ರ ಸಮಧಾನವಷ್ಟೆ ಅವರಿಗಿರುತ್ತದೆ.ನೆನಪಿರಲಿ, ಇಷ್ಟಕ್ಕೂ ನಮ್ಮ ಜಾತಕವನ್ನು ಸೃಷ್ಟಿ ಮಾಡಿದವರು ಜ್ಯೋತಿಷಿಗಳಲ್ಲ.ಅದು ನೀವು ಹುಟ್ಟಿದಾಗಲೆ ಆಗಿರುತ್ತದೆ.ಅದನ್ನ ಯಾರಿಂದಲೂ ,ಯಾವ ವೇಳೆಯಲ್ಲಿಯೂ ಬದಲಾಯಿಸಲು ಸಾಧ್ಯವಿಲ್ಲ. ಅದರಲ್ಲಿ ಒಂದಿಷ್ಟು ಏನುಂಟು ಏನಿಲ್ಲ ಅನ್ನೊದನ್ನ ತಾವು ಕಲಿತಂತ ವಿದ್ಯೆಯಲ್ಲಿ ಅವರು ಹೇಳಿರುತ್ತಾರೆ ಅಷ್ಟೇ. ಅದು ಬಿಟ್ಟು ನಮ್ಮ ಜಾತಕವನ್ನೆ ಅವರು ಬದಲಾಯಿಸಬಲ್ಲರು ಅಂತಾ ತಿಳಿದುಕೊಂಡರೆ ಅದು ನಮ್ಮ ಭ್ರಮೆ.ಜ್ಯೋತಿಷಿಗಳು ಪವಾಡ ಪುರುಷರಲ್ಲ. ನಾವು ಅವರನ್ನ ಸಾಕ್ಷಾತ್ ದೇವರ ಸಮಾನರೆಂದು ಹೊತ್ತು ಮೆರೆಸಿದರೆ ಕೊನೆಯಲ್ಲಿ ಮೂಢಾಂಧರಾಗುವುದು ನಾವೇನೆ...ದಿನಬೆಳಗಾದರೆ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನೋಡುವುದರಿಂದ ನಮ್ಮ  ಜೀವನ ಖಂಡಿತ ಬದಲಾಗುವುದಿಲ್ಲ.ಹಾಗೆ ಬದಲಾಗುವುದೆನಿದ್ದರೂ ಒಬ್ಬ ಜ್ಯೋತಿಷಿ ಸೆಲಬ್ರಿಟಿಯಾಗಿ, ಹಾಗೂ ಚಾನೆಲ್ ಗಳ ಟಿಆರ್ ಪಿ ಏರುವಿಕೆಯಲ್ಲಿ ಅಷ್ಟೇ.

ಇನ್ನೂ ಜ್ಯೋತಿಷ್ಯದ ಆಳ ಅಗಲ ಸಾಗರವನ್ನು ಮೀರುವಂತದ್ದು.ಇದರ ಬಗ್ಗೆ ಎಷ್ಟು ತಿಳಿದುಕೊಳ್ಳ ಹೋದರೂ ಅದಕ್ಕೆ ಕೊನೆ ಮೊದಲಿಲ್ಲ. ಇಂತಾ ವಿಷಯವನ್ನು ಜಸ್ಟ್ ಐದು ನಿಮಿಷದಲ್ಲಿ ಹೇಳ್ತೇವೆ, ಅರ್ಧ ಗಂಟೆಲಿ ಪರಿಹಾರ ಮಾಡ್ತಿವಿ ಎಂದು ಹೇಳುವವರಿಂದಲೇ ಇಂದು ಜ್ಯೋತಿಷ್ಯದ ಕಿಮ್ಮತ್ತು ಬೀದಿಗೆ ಬಂದಿರುವುದು.ಹಾಗೂ ಅದಕ್ಕಿರುವ ತೂಕ, ಬೆಲೆ ಕಡಿಮೆಯಾಗಿರುವುದು.ಕೊನೆಯಲ್ಲಿ ಈ ಜ್ಯೋತಿಷ್ಯ ಗಿತಿಷ್ಯ ಬಂಡಲ್ ಅಂತಾ ಅನಿಸುವುದು ಈ ಕಾರಣದಿಂದಲೆ.

ಇನ್ನು ಒಂದು ವಿಚಾರ. ಜ್ಯೋತಿಷ್ಯ ತುಂಬಾ ಸಂಧರ್ಭಗಳಲ್ಲಿ  ಗೌಪ್ಯತೆಯನ್ನ ಕಾಪಾಡಬೇಕಾಗಿರುತ್ತದೆ. ಯಾರೇ ಒಬ್ಬ ವ್ಯಕ್ತಿ ತನ್ನ ಸಮಸ್ಯೆಗಳನ್ನು ಒಬ್ಬ ಜ್ಯೋತಿಷಿ ಬಳಿ ಹೇಳಿಕೊಳ್ಳುತ್ತಾರೆಂದರೆ ಅವನು ಆ ಜ್ಯೋತಿಷಿಯನ್ನು ನಂಬಿರುತ್ತಾನೆ. ಆದರೆ ಟಿವಿ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ನಡೆಯುವುದೇನು..? ಕಾಲರ್ ಒಬ್ಬರು ಹೇಳಿಕೊಳ್ಳಲಾರದಂಥ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗದೆ, ಹಾಗೆ ಇರಲು ಆಗದೆ, ಅತ್ತು ಕರೆದು ಮಾಡುತ್ತಾ, ಕೊನೆಗೂ ತಮ್ಮ ಅಳಲನ್ನು ತೊಡಿಕೊಳ್ಳುತ್ತಾ, ಕಾರ್ಯಕ್ರಮ ನೋಡುವ ಸಾವಿರ ಮಂದಿಯ ಕಣ್ಣಿಗೆ ಅಸಹಾಯಕ  ಸ್ಥಿತಿಯಲ್ಲಿ ಮಾನಸಿಕವಾಗಿ ಬೆತ್ತಲಾಗುತ್ತಿರುತ್ತಾರೆ.(ಕೆಲ ಚಾನೆಲ್ ನವರೇ ಹೀಗೆಲ್ಲಾ ಮಾಡಿಸುತ್ತಾರೆ ಅನ್ನೊ ವದಂತಿ ಇದೆ. ಗೊತ್ತಿಲ್ಲ).ಅದನ್ನು   ನೋಡುವ ಒಂದಿಷ್ಟು ಗೃಹಿಣಿಯರು ಅಯ್ಯೊ ಪಾಪ ಅನ್ನುತ್ತಿದ್ದರೆ ಚಾನೆಲ್ ಗಳ ಟಿ ಆರ್ ಪಿ ಹಾಗೆ ಏರುತ್ತಲೇ ಸಾಗುತ್ತದೆ. ಇಂತಾ ಕಾರ್ಯಕ್ರಮಗಳೆಲ್ಲ ನಮಗೆ ಬೇಕಾ..? ನೀವೇ ಯೋಚಿಸಿ . ಒಬ್ಬ ವ್ಯಕ್ತಿಯ ಜಾತಕದಲ್ಲಿನ ಸಾಧಕ ಬಾಧಕಗಳು ಸುಖ ದುಃಖಗಳು ಆ ವ್ಯಕ್ತಿಗೆ ಹಾಗೂ ತೀರಾ ಆ ವ್ಯಕ್ತಿಯ ಸಂಬಂಧ ಪಟ್ಟವರಿಗಷ್ಟೆ ತಿಳಿಯಬೇಕೆ ವಿನಾ ಮೂರನೇ ವ್ಯಕ್ತಿಗಳಿಗಲ್ಲ. ಇದು ಸಾಮಾನ್ಯ ಜ್ಞಾನ. ಇನ್ನು ಯಾವುದೋ ಪ್ರಸಿದ್ದ ವ್ಯಕ್ತಿಗಳ ಸಾಧಕರ ಕುಂಡಲಿಯನ್ನು ಇಟ್ಟುಕೊಂಡು ಅವರಿಗೆ ಆ ಯೋಗ ಇದ್ದಿತ್ತು ಹಾಗಾಗಿ ಅವರು ಎತ್ತರದ ಸ್ಥಾನಕ್ಕೆ ಏರಿದರು ಪ್ರಸಿದ್ದಿ ಪಡೆದರು ಅಂತಾ ಹೇಳುವುದು,ಇನ್ನೆನೋ ಅಡ್ಡ ಬಂತು ಹಾಗಾಗಿ ಮಣ್ಣು ಪಾಲಾದರು ಅನ್ನೋದು....ಗಮನಿಸಿ, ಇದರಲ್ಲಿ ಸತ್ಯ ಇದೆಯೋ ಇಲ್ಲವೋ ಅದು ಆ ಮೇಲಿನ ಮಾತು. ಇಂತಾ ವಿಷಯಗಳನ್ನ ಹೇಳುವ ದರ್ದಾದರೂ ಏನಿದೆ?ಹಾಗಾದರೆ ಏನೂ  ಶ್ರಮ ಪ್ರಯತ್ನ ಮಾಡದೆ ಆ ಸಾಧಕರು ಉನ್ನತ ಸ್ಥಾನ ಪಡೆದರೆ..? ಹಾಗೆ ಎಲ್ಲೊ ಸ್ವಯಂಕೃತ ಅಪರಾಧದಿಂದಲೊ, ನಿರ್ಲಕ್ಷ ,ಮೈ ಮರೆವಿನಿಂದಲೊ ಅವರು ಅಧಃಪತನಕ್ಕಿಳದಿರಲೂಬಹುದು ಅಲ್ಲವೇ..? ಅದಕ್ಕೆ ಗ್ರಹ ದೋಷ ಅಥವಾ ಇನ್ಯಾವುದೊ ದೋಷ ಕಾರಣವೇ... ಈಗ ಹೇಳಿ ಇಂತದ್ದೆಲ್ಲಾ ನೋಡುಗರಿಗೆ ಯಾವ ಸಂದೇಶ ಕೊಡುತ್ತದೆ? ಒಂದಿಷ್ಟು ನೋಡುಗರಿಗೆ ಕೀಳರಿಮೆಯನ್ನೊ ಗೊಂದಲವನ್ನೊ ಮೂಡಿಸುತ್ತದೆ ಅಷ್ಟೇ.

ಹಾಗಾದರೆ ಜ್ಯೋತಿಷ್ಯವನ್ನ ನಾವು ಯಾವ ರೀತಿಯಲ್ಲಿ ಅರ್ಥೈಸಬೇಕು? ಹೀಗೆ ಪರಿಚಯದ ನೆರೆಹೊರೆಯವರೊಬ್ಬರು ಹೇಳಿಕೊಳ್ಳುತ್ತಿದ್ದರು,ತಮ್ಮ ಮಗನಿಗೆ ಮದುವೆ ಮಾಡಿಸಬೇಕೆಂದರೆ ಹೆಣ್ಣು ಸಿಗ್ತಾ ಇಲ್ಲಾ.ನೋಡಿದ ಹೆಣ್ಮಕ್ಕಳ್ಯಾರು ಒಪ್ಪತಾ ಇಲ್ಲಾ. ಅವನ ಜಾತಕದಲ್ಲಿ ಮದುವೆ ಆದ  ಮೇಲೆ ರಾಜಯೋಗವಿದೆ ಉನ್ನತಿ ಕಾಣುತ್ತಾನೆ ಅಂತಾ ಪಂಡಿತರು ಹುಟ್ಟಿದಾಗಲೆ ನುಡಿದಿದ್ದರು. ಈಗ ನೋಡಿ, ವರುಷ ಮೂವತ್ತೆರಡು ದಾಟಿದೆ. ಇನ್ನು ಯಾವ ಸೂಚನೆನೂ ಕಾಣುತ್ತಿಲ್ಲ. ಕಳೆದ ಏಳೆಂಟು ವರುಷಗಳಿಂದ ಪ್ರೈವೆಟ್ ಕಂಪನಿಯಲ್ಲಿ ಜಾಬ್ ಮಾಡುತ್ತಿದ್ದಾನೆ.ಒಂದು ಮದುವೆ ಅಂತಾ ಆಗಿದ್ದಿದ್ದರೆ ಚೆನ್ನಾಗಿ ಇರುತ್ತಿದ್ದನೆನೊ ಅಂತಾ ನೋವನ್ನ ತೊಡಿಕೊಂಡರು.  ಮೂವತ್ತೆರಡು ವರುಷಗಳ ಹಿಂದೆ ಪಂಡಿತರು ಹೇಳಿದ ಮಾತನ್ನ ಇನ್ನೂ ನಂಬಿಕೊಂಡು ಅವರು ಕೊರಗುತ್ತಿರುವುದನ್ನ ನೋಡಿ ಅವರೆಷ್ಟು ಅವಾಸ್ತವಿಕವಾಗಿ ಯೋಚಿಸುತ್ತಿದ್ದಾರೆ ಎಂದೆನಿಸಿತು.ಮತ್ತಿನ್ನೇನು...? ಈ ಮೂವತ್ತು ಚಿಲ್ಲರೆ ವರುಷಗಳಲ್ಲಿ ಅದೇನೆಲ್ಲಾ ಬದಲಾವಣೆಗಳಾಗಿವೆ..? ಹೆಣ್ಮಕ್ಕಳು ನಾಲ್ಕು ಗೋಡೆಯಿಂದ ಆಚೆ ಬಂದು ಓದಿ ವಿದ್ಯಾವಂತರಾಗಿ ಸ್ವತಂತ್ರವಾಗಿ ಬದುಕು ಶುರುಮಾಡಿದ ಮೇಲೆ ಅವರು ಯೋಚಿಸುವ ಧಾಟಿ ಹಾಗೂ ಆಯ್ಕೆ ಸ್ವಾತಂತ್ರ ಎರಡು ಬದಲಾಗಿ ಬಹಳ ವರುಷಗಳೇ ಕಳೆಯಿತು. ಏನೇ ಜಾತಿ, ಧರ್ಮ,ಕುಲ, ಗೋತ್ರ, ಅಂದ ಚೆಂದ ಗುಣಗಳ ಲೆಕ್ಕಚಾರವಿದ್ದರೂ ಒಂದು ಹುಡುಗಿ ಮೊದಲು ನೋಡುವುದು, ಹುಡುಗ ಏನು ಓದಿದಾನೆ ಯಾವ ಕೆಲಸದಲ್ಲಿದ್ದಾನೆ ಎಂದೇ.ಇದು ವಾಸ್ತವ ವಿಚಾರ. ಮತ್ತೆಲ್ಲಾ ವಿಚಾರಗಳು ಅನಂತರವಷ್ಟೆ ಚರ್ಚೆಯಾಗೋದು. ಈ ವಿಚಾರವನ್ನು ಅರ್ಥ ಮಾಡಿಕೊಳ್ಳದ ಅವರು ಪಂಡಿತರು ಹೇಳಿದಂತೆ ಯಾಕೆ ಆಗಲಿಲ್ಲ ಹಾಗಾದರೆ ಆವರು ಸುಳ್ಳು ಹೇಳಿದರಾ ಅಂತಾ ಅನುಮಾನಿಸುತ್ತಿದ್ದಾರೆ. ಮೂವತ್ತು ನಲವತ್ತು ವರುಷಗಳ ಹಿಂದೆ ಜ್ಯೋತಿಷಿಗಳು ಮಕ್ಕಳ ಜಾತಕವನ್ನು ನೋಡುತ್ತಿದ್ದ ಕಾಲದಲ್ಲಿ ಹುಡುಗನಿಗೆ ವಿದ್ಯೆ ಚೆನ್ನಾಗಿದೆ ಡಾಕ್ಟರ್ ಇಲ್ಲಾ ಇಂಜಿನಿಯರ್ ಲೈನಿಗೆ ಕಳುಹಿಸಿ ಅನ್ನುತ್ತಿದ್ದರು. ಅದೇ ಜ್ಯೋತಿಷಿಗಳು ಈಗ ಅದೇ ಲಕ್ಷಣವಿರುವ ಜಾತಕವನ್ನು ನೋಡುತ್ತಾ ಹುಡುಗನಿಗೆ ಕಂಪ್ಯೂಟರ್ ಸೈನ್ಸ್ ಗೆ ಕಳುಹಿಸಿ ಸಾಪ್ಟ್ ವೇರ್ ಕ್ಷೇತ್ರ ಆಗಿಬರುತ್ತದೆ ಎನ್ನುತ್ತಾರೆ. ಅರ್ಥ ಮಾಡಿಕೊಳ್ಳಬೇಕೀರುವುದು ಇಷ್ಟೇ. ಬದಲಾಗಿರುವುದು ಕಾಲವಷ್ಟೆ.ಆ ಕಾಲದೊಳಗೆ ಬದಲಾಯಿಸಿಕೊಳ್ಳಬೇಕಾದ ಸಾಕಷ್ಟು ಸಂಗತಿಗಳು ಇವೆಯಷ್ಟೆ. ಈಗೀಗ ಬಹಳಷ್ಟು ಜ್ಯೋತಿಷಿಗಳು ಕೆಲವರಿಗೆ ನೀವು ಮೀಡಿಯಾ ಲೈನ್ ಗೆ ಹೋಗಿ ಚೆನ್ನಾಗಿ ಆಗಿಬರುತ್ತದೆ ಅಂತಾ ಹೇಳುತ್ತಿರುತ್ತಾರೆ. ಕಾರಣ ಇಷ್ಟೆ. ಈಗ ಮೀಡಿಯಾ ಸಾಕಷ್ಟು ಬೆಳೆದಿದೆ. ಸಾಕಷ್ಟು ಜನ ಕಲಾವಿದರಿಗೆ ತಂತ್ರಜ್ಙರಿಗೆ ಬದುಕಿನ ದಾರಿ ಮಾಡಿಕೊಟ್ಟಿದೆ. ಇದೇ ಮಾತನ್ನ ಇಪ್ಪತ್ತು ಮೂವತ್ತು ವರುಷಗಳ ಹಿಂದೆ ಹೇಳಲು ಸಾಧ್ಯವಿರಲ್ಲಿಲ್ಲ.

ಮುಂದೊಂದು ದಿನ ಕಂಪ್ಯೂಟರ್ ಬರುತ್ತದೆ ಒಂದು ಚಿಕ್ಕ ಸ್ಮಾರ್ಟ್ ಫೋನ್ ಮನುಷ್ಯನನ್ನು ಬಿಟ್ಟು ಬಿಡದಂತೆ ಆಳುತ್ತದೆ ಅಂತಾ ಯಾವೊಬ್ಬ ಜ್ಯೋತಿಷಿಯು ಅಂದು ಹೇಳಿರಲಿಲ್ಲ ಅನ್ನೋದನ್ನ ಎಲ್ಲರೂ ನೆನಪಿನಲ್ಲಿಡಬೇಕು. ಜ್ಯೋತಿಷ್ಯ ವಾಸ್ತವದಲ್ಲಿನ ಅವಕಾಶ ಹಾಗೂ ಆಯ್ಕೆಗಳನ್ನು ತೆರೆದಿಡುತ್ತದೆಯೇ ವಿನಾ ನೀನು ಹೀಗೆಯೇ ಆಗುತ್ತಿಯಾ ಮುಂದೆ ನಿನಗೆ ಹೀಗೆನೇ ಆಗುತ್ತದೆಂದು ನಿಖರವಾಗಿ ಹೇಳದು. ಒಬ್ಬ ಜ್ಯೋತಿಷಿಯು ಕುಂಡಲಿಯನ್ನ ನೋಡುತ್ತ ಯಾವ ಅವಕಾಶ, ಆಯ್ಕೆ ಈ ಜಾತಕಕ್ಕೆ ಹತ್ತಿರದಲ್ಲಿದೆ ಎಂದಷ್ಟೆ ಹೇಳಿರುತ್ತಾರೆ.ಅದನ್ನ ಆಯ್ಕೆ ಮಾಡಿಕೊಳ್ಳುವ ಹಾಗೂ ಅದರ ಸಾಧಕ ಬಾಧಕಗಳಲ್ಲವೂ ಆ ಜಾತಕದಾರನ ನಿರ್ಧಾರದ ಮೇಲಷ್ಟೆ ನಿಂತಿರುತ್ತದೆ.

ತಿಂಗಳಿನ ಹಿಂದೆ ನಮ್ಮ ಉತ್ತರ ಕರ್ನಾಟಕ, ಮಲೆನಾಡು ಭಾಗಗಳಲ್ಲಿ ಭಾರಿ ಮಳೆ, ಪ್ರವಾಹ ಬಂದು ಜನ ಜೀವನವೆ ತತ್ತರಿಸಿಹೋಯಿತು.ಬಡವ ಶ್ರೀಮಂತರೆನ್ನದೆ ಅದೆಷ್ಟೊ ಮಂದಿ ಸಾವನ್ನಪ್ಪಿದ್ದಲ್ಲದೆ ಮನೆ ಮಠವನ್ನೆಲ್ಲ ಕಳೆದುಕೊಂಡರು. ಈಗ ಹೇಳಿ, ಅವರೆಲ್ಲರ ಕುಂಡಲಿಯಲ್ಲೂ ಆ ಸಮಯದಲ್ಲೆ ಕಂಟಕ ಅಪಾಯಗಳಿವೆ  ಎಂದು ತಿಳಿಯಬೇಕಾ...? ಇಲ್ಲಾ ಅಲ್ಲವಾ..? ಹಾಗಾಗಿ ಜ್ಯೋತಿಷ್ಯವೇ ಎಲ್ಲವನ್ನು ನಿರ್ಧಾರ ಮಾಡುತ್ತದೆ ಎನ್ನಲಾಗದು. ಅಲ್ಲವಾ..? ಜ್ಯೋತಿಷ್ಯವನ್ನು ಮೀರಿ ಕೆಲ ಸಂಗತಿಗಳು ಈ ಪ್ರಪಂಚದಲ್ಲಿ ನಡೆಯುತ್ತಿರುತ್ತದೆ ಅನ್ನೋದು ಅಷ್ಟೇ ಸತ್ಯ.ಹೌದಲ್ಲವಾ..?

ಕೊನೆಯದಾಗಿ ಸ್ನೇಹಿತರೊಬ್ಬರು ಹೇಳಿದ ಮಾತು. ಯಾರೋ ಜ್ಯೋತಿಷ್ಯ ಮಿತ್ರರೊಬ್ಬರು ಅವರಿಗೆ ನಿನ್ನ ಜಾತಕ ಚೆನ್ನಾಗಿಲ್ಲ ಹುಟ್ಟಿದ ಗಳಿಗೆನೆ ಸರಿಯಾಗಿಲ್ಲ ತುಂಬಾ ಕೆಟ್ಟದಾಗಿದೆ ಅಂತಾ ನೇರವಾಗಿ ಹೇಳಿದರಂತೆ.ಅದನ್ನೆ ಅವರು ತುಂಬಾ ಖುಷಿಯಲ್ಲೆ ಹೇಳಿಕೊಂಡರು. ಮುಂದುವರೆಯುತ್ತಾ ಹೇಳಿದರು, 'ಸದ್ಯ ಅಷ್ಟೇ ಹೇಳಿ ಮುಗಿಸಿ ಒಳ್ಳೇದು ಮಾಡಿದರು.ಅದೇನು ನಾನು ಮಾಡಿಕೊಂಡಿದ್ದೆ..?ಇಂತಿಂತ ಸಮಯದಲ್ಲಿ ಹುಟ್ಟಬೇಕೆನ್ನುವುದು ನಮ್ಮ ಕೈಲಿ ಇರುತ್ತದೆಯೇ..? ಇದರಲ್ಲಿ ನಮ್ಮ ತಪ್ಪಿಲ್ಲ ಅಂದ ಮೇಲೆ ನಾವ್ಯಾಕೆ ಚಿಂತೆ ಮಾಡುತ್ತಾ ಮನಸ್ಸು ಕೆಡಿಸಿಕೊಳ್ಳಬೇಕು' ಅಂತಂದರು. ಹೌದಲ್ಲವ...?ಅವರು ಹೀಗೆ ಯೋಚನೆ ಮಾಡಿದ ಕ್ಷಣದಿಂದ ಮುಂದೆ ತಮ್ಮ ಜೀವನವನ್ನ ಹ್ಯಾಗ್ಯಾಗೆ ಒಳ್ಳೇದು ಮಾಡಿಕೊಳ್ಳಬಹುದು ಅನ್ನೊ ಎಲ್ಲಾ ದಾರಿಗಳು ಆ ಕ್ಷಣದಿಂದಲೇ ತೆರೆದುಕೊಂಡವು.ಇನ್ನು ಅವರಿಗೆ ಎಲ್ಲರಲ್ಲೂ, ಎಲ್ಲದರಲ್ಲೂ ಒಳ್ಳೆಯ ಸಂಗತಿಗಳೇ ಕಾಣುತ್ತಿರುತ್ತದೆ. ಮತ್ತೆ ಅವರ ಬದುಕು ಯಾವ ಜ್ಯೋತಿಷಿಗಳ ಕೈಯಲ್ಲಿ ಇರುವುದಿಲ್ಲ. ಯಾವ ಲೈಫ್ ಟ್ರೇಲರ್ ಗಳು ಅವರನ್ನ ಮರಳು ಮಾಡುವುದಿಲ್ಲ. ಜೀವನ ಅನ್ನೊ ಸಿನಿಮಾ ಹೇಗೇ ಇರಲಿ. ಅದು ಇಡಿಯಾಗಿ ಅನುಭವಕ್ಕೆ ದಕ್ಕುತ್ತದೆ.ಸದ್ಯಕ್ಕೆ ಹೀಗೆ ಯೋಚಿಸಬೇಕಾಗಿರುವುದು ಇಂದಿನ ಕಾಲದ ಜರೂರಿ.

                                                                                                                                                                               -ಮಧುಕರ್ ಬಳ್ಕೂರ್