ಆರ್ಥಿಕತೆ ಅಂಗಳದಲ್ಲಿ ಟ್ರಿಲಿಯನ್  ಲ್ಯಾಂಡಿಂಗ್ ಕನಸು!

ಆರ್ಥಿಕತೆ ಅಂಗಳದಲ್ಲಿ ಟ್ರಿಲಿಯನ್  ಲ್ಯಾಂಡಿಂಗ್ ಕನಸು!

ಉಪ್ಪು ಹೇಗೆ ಪ್ರತಿ ಮನೆಯಲ್ಲೂ ಬೇಕಾಗಿದ್ದರಿಂದ, ಇದರ ಮೇಲಣ ಸುಂಕ ಸರ್ಕಾರಕ್ಕೆ ಒಳ್ಳೆ ಆದಾಯ ತರುತ್ತೆ ಎಂದು ಆಂಗ್ಲರು, ಸುಂಕ ವಿಧಿಸಿದರೋ ಹಾಗೆ ವಾಹನಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿದೆ.

ದೇಶದ ಇಡೀ ವಾಹನ ಉದ್ದಿಮೆ ವಹಿವಾಟು ಪ್ರಪಾತಕ್ಕಿಳಿದಿದೆ. ದೇಶದ ಅರ್ಧದಷ್ಟು ಕೈಗಡಿಯಾರಗಳ ಮಾರುಕಟ್ಟೆ ಹೊಂದಿರುವ ಟೈಟಾನ್, ಆಭರಣ ವ್ಯವಹಾರದಲ್ಲಿ ಹೆಸರಾಗಿರುವ ತನಿಷ್ಕ್, ಕೃಷಿ ಸಂಬಂಧಿತ ಟ್ರಾಕ್ಟರ್ ತಯಾರಿಕಾ ಘಟಕ ಇದರಲ್ಲೆಲ್ಲ ಹೂಡಿಕೆ ಮಾಡಿದ್ದ ಭಾರತದ ಅತಿದೊಡ್ಡ ಹೂಡಿಕೆದಾರ ರಾಕೇಶ್ ಝುಂಜುವಾಲ ಮತ್ತು ಇವರ ಪತ್ನಿ ರೇಖಾ ಹೂಡಿಕೆಯಲ್ಲಿ ಕೋಟಿಗಟ್ಟಲೇ  ಹಣ ಕಳೆದುಕೊಂಡಿದ್ದಾರೆ.

ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೀಟನಾಶಕ ತಯಾರಿಸುವುದರಲ್ಲಿ 4ನೇ ಸ್ಥಾನ ಹೊಂದಿರುವ ಭಾರತದಲ್ಲಿ 40 ಪ್ರಮುಖ ಕೀಟನಾಶಕ ತಯಾರಿಕಾ ಸಂಸ್ಥೆಗಳಲ್ಲೂ ವ್ಯಾಪಾರದ ಕುಸಿತವಾಗಿದೆ. ವಾರ್ಷಿಕ 197 ಬಿಲಿಯನ್ ರುಪಾಯಿಗಳಷ್ಟು ವ್ಯವಹಾರ ನಡೆಸುವ ಬಾಬತ್ತು. ಇಲ್ಲಿಯೂ ಇಳಿಕೆ ಕಾಣಲಾರಂಭಿಸಿರುವುದು  ಕೃಷಿ ವಲಯದಲ್ಲಾಗುತ್ತಿರುವ ಪಾಡು ತಿಳಿಸುತ್ತಿರುವಂಥದ್ದು.

ಇಂಥವೆಲ್ಲವುಗಳ ಬೆನ್ನಲ್ಲೇ ಭಾರತದ ಬಹುತೇಕ ತೈಲ ಮತ್ತು ಅನಿಲೋದ್ಯಮವನ್ನು ನಡೆಸುತ್ತಿರುವ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗಿಗೆ ಮಾರುವ ಯತ್ನಗಳೂ ಕೇಂದ್ರ ಸರ್ಕಾರ ಮಾಡುತ್ತಿದೆ. ಆಯಿಲ್ ಮಾರ್ಕೆಟಿಂಗ್ ಕಾರ್ಪೊರೇಷನ್ ಅಡಿಯಲ್ಲಿ ಐಒಸಿ(ಇಂಡಿಯನ್ ಆಯಿಲ್ ಕಾರ್ಪೊರೇಷನ್), ಬಿಪಿಸಿಎಲ್(ಭಾರತೀಯ ಪೆಟ್ರೋಲ್ ಕಾರ್ಪೊರೇಷನ್ ಲಿ), ಎಚ್‍ಪಿಸಿಎಲ್(ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.) ಸಂಸ್ಥೆಗಳಿವೆ.

ಬಿಪಿಸಿಎಲ್‍ನಲ್ಲಿ ಕೇಂದ್ರದ ಹೂಡಿಕೆ 1.05 ಲಕ್ಷ ಕೋಟಿ ರೂ.ಗಳಷ್ಟಿದ್ದು ಇದನ್ನ ವಾಪಸ್ ಪಡೆಯುವುದಕ್ಕಾಗಿ, ಐಒಸಿಯೊಡನೆ ವಿಲೀನಗೊಳಿಸಿ ಎಂಬ ನಿಲುವನ್ನು ಇಂಧನ ಖಾತೆ ಸಚಿವಾಲಯ ಹೊಂದಿದ್ದರೆ, ಆರ್ಥಿಕ ಇಲಾಖೆ ಖಾಸಗಿಕರಣಗೊಳಿಸಿ ಎನ್ನುತ್ತಿದೆ. ಪರಿಣಾಮವಾಗಿ, ರಾಷ್ಟ್ರದ ಶೇ.40ಕ್ಕೂ ಹೆಚ್ಚಿನ ಪೆಟ್ರೋಲ್ ಬಂಕ್‍ಗಳನ್ನು ಹೊಂದಿರುವ ಬಿಪಿಸಿಎಲ್ ಖಾಸಗಿ ಪಾಲಾಗುವ ಹಾದಿಯಲ್ಲಿದೆ.

ಆರ್ಥಿಕ ಹಿಂಜರಿತದ ಹಲವಾರು ಉದಾಹರಣೆಗಳು ಕಣ್ಣ ಮುಂದಿದ್ದರೂ, ಕಾನೂನು ಪ್ರಜ್ಞೆ ಮೂಡಿಸುವ ಭರದಲ್ಲಿ ಸಂಚಾರಿ ನಿಯಮ ಉಲ್ಲಂಘನೆಗಾಗಿ ವಿಧಿಸುತ್ತಿರುವ ದಂಡ, ಮತ್ತು ವಾಹನಗಳ ಮೇಲಣ ಜಿಎಸ್‍ಟಿಯಿಂದಾಗಿ ವಾಹನ ಉದ್ದಿಮೆ ಮತ್ತಷ್ಟು ದಿಕ್ಕೆಡುವುದಕ್ಕೆ ಆರಂಭಗೊಂಡಿದೆ.

ದಂಡ ಅಥವಾ ಸುಂಕ ವ್ಯವಸ್ಥೆ ರಾಜರ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿದೆ. ಇಂಗ್ಲಿಷರು ಕಂದಾಯ ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ದೊಡ್ಡ ಮಟ್ಟದ ಹೋರಾಟಗಳಾಗಿವೆ. ಸಾಮಾನ್ಯ ಜನರೂ ಬಳಸುವ ಉಪ್ಪಿನ ಮೇಲೆ ಸುಂಕ ವಿಧಿಸಿದ್ದು, ಸ್ವಾತಂತ್ರ್ಯ ಹೋರಾಟ ಜನಸಾಮಾನ್ಯರೆಲ್ಲರ ಹೋರಾಟಕ್ಕೆ ಕಾರಣವಾದ ವಾಸ್ತವ ಸತ್ಯವೂ ನಮ್ಮ ಮುಂದಿದೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಪ್ರಪ್ರಥಮವಾಗಿ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಲು ತುರ್ತುಸ್ಥಿತಿ ಹೇರಿದ್ದು ಹೇಗೆ ಕಾರಣವೋ, ಈರುಳ್ಳಿ ಮತ್ತು ಖಾದ್ಯ ತೈಲದ ಬೆಲೆಯೇರಿಕೆಯಾಗಿದ್ದುದು ಕಾರಣ ಎಂಬುದನ್ನು  ಅಲ್ಲಗಳೆಯುವಂತಿಲ್ಲ.

ಇಂಗ್ಲಿಷರನ್ನು ಓಡಿಸಲು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮನೆಗೆ ಕಳುಹಿಸಲು ಸುಂಕ ಮತ್ತು ಬೆಲೆ ನೀತಿಯೇ ಕಾರಣ ಎಂಬುದಿದ್ದರೂ, ಬಿಜೆಪಿ ಸರ್ಕಾರವೀಗ ಸಂಚಾರ ವ್ಯವಸ್ಥೆಗಾಗಿ ವಿಧಿಸುತ್ತಿರುವ ದಂಡ ಪ್ರಮಾಣ ಜನಾಕ್ರೋಶಕ್ಕೆ ಕಾರಣವಾಗುವಂತಾಗುತ್ತಿದೆ. 

ಭಾರತದಲ್ಲಿ ಬೇರೆಬೇರೆ ಸುಂಕ, ಕಂದಾಯಗಳಿದ್ದರೂ ಆದಾಯ ತೆರಿಗೆಯನ್ನು  ಪರಿಚಯಿಸಿದ್ದು 1960 ರಲ್ಲಿ. ಇದಕ್ಕೆ ಮೂರು ವರ್ಷ ಮುಂಚಿತವಾಗಿ ಅಂದರೆ 1957 ರಲ್ಲಿ ಸಿಪಾಯಿ ದಂಗೆಯಾಗಿತ್ತು. ಇದರಲ್ಲಿ ಸಿಪಾಯಿಗಳ ಜತೆ ಸಾರ್ವಜನಿಕರೂ ಕೈಜೋಡಿಸಲು ಆಂಗ್ಲರ ಕಂದಾಯ ನೀತಿಯೂ ಕಾರಣವಾಗಿತ್ತು. ಆ ಸಿಪಾಯಿ ದಂಗೆಯ ಖರ್ಚುವೆಚ್ಚ ಮತ್ತು ನಂತರದಲ್ಲಿ ಸೈನಿಕ ಬಲ ಹೆಚ್ಚಿಸಿಕೊಳ್ಳುವುದಕ್ಕಾಗಿ ಜೇಮ್ಸ್ ವಿಲ್ಸನ್ ಎಂಬಾತ ಮೊಟ್ಟಮೊದಲಿಗೆ ಆದಾಯ ತೆರಿಗೆಯನ್ನು ಹೇರಿದ್ದ. ಅದಾದ ಇಷ್ಟು ಶತಮಾನಗಳು ಕಳೆದರೂ ವಾರ್ಷಿಕ 10 ಲಕ್ಷ ರೂ. ಆದಾಯವಿದೆ ಎಂದು ಘೋಷಿಸಿಕೊಂಡಿರುವವರ ಸಂಖ್ಯೆ ಸಹಸ್ರಾರು  ಲೆಕ್ಕದಲ್ಲಿಲ್ಲ. ಆದರೆ 35 ಸಾವಿರ ಐಷಾರಾಮಿಯದೂ ಸೇರಿದಂತೆ  ವರ್ಷಕ್ಕೆ 25 ಸಾವಿರ ಕಾರುಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ.

ಉಪ್ಪು ಹೇಗೆ ಪ್ರತಿ ಮನೆಯಲ್ಲೂ ಬೇಕಾಗಿದ್ದರಿಂದ, ಇದರ ಮೇಲಣ ಸುಂಕ ಸರ್ಕಾರಕ್ಕೆ ಒಳ್ಳೆ ಆದಾಯ ತರುತ್ತೆ ಎಂದು ಆಂಗ್ಲರು, ಸುಂಕ ವಿಧಿಸಿದರೋ ಹಾಗೆ ವಾಹನಗಳ ವಿಷಯದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿದೆ. ಈಗಲೂ ಕಾರುಗಳಲ್ಲದಿದ್ದರೂ, ದ್ವಿಚಕ್ರ ವಾಹನ ಇಲ್ಲದೇ ಇರುವ ಕುಟುಂಬಗಳ ಸಂಖ್ಯೆ ತೀರಾ ಕಡಿಮೆ. ನಿಜ ಜೀವನದಲ್ಲಿ ಹಾಸುಹೊಕ್ಕಾಗಿರುವ ವಾಹನಗಳ ಮೇಲೆ ಶೇ.28 ರಷ್ಟು ಜಿಎಸ್‍ಟಿ ವಿಧಿಕೆ, ವಿಮಾ ಕಂತು ಹೆಚ್ಚಿಸಿದ್ದೇ ದೊಡ್ಡ ತಲೆನೋವಾಗಿ ಇಡೀ ಉದ್ಯಮವೇ ಕಂಗೆಟ್ಟಿದ್ದರೆ, ಸಂಚಾರ ನಿಯಮ ಉಲ್ಲಂಘನೆಗಾಗಿ ವಿಧಿಸುತ್ತಿರುವ ದಂಡ ಜನರಲ್ಲಿ ಕಿಚ್ಚು ಹೆಚ್ಚಿಸುತ್ತಿದೆ.

ವಿದೇಶಗಳಲ್ಲಿ ಇಷ್ಟರ ಮಟ್ಟಿಗೆ ದಂಡ ವಿಧಿಸುತ್ತಿಲ್ಲ. ಬದಲಿಗೆ ಸೈಕಲ್ ಬಳಕೆಗೆ ಉತ್ತೇಜಿಸಲಾಗುತ್ತಿದೆ. ನೆದರ್‍ಲ್ಯಾಂಡ್‍ನಲ್ಲಿ ಕಚೇರಿ ಕೆಲಸಗಳಿಗೆ ಸೈಕಲ್ ಬಳಸಿದರೆ, ಪ್ರತೀ ಕಿ.ಮೀ.ಗೆ 16 ರು ಹೆಚ್ಚುವರಿ ಸಂಬಳ ಕೊಡಲಾಗುತ್ತಿದೆ. ಯುಕೆ ಬೆಲ್ಜಿಯಂ ಇತ್ಯಾದಿ ರಾಷ್ಟ್ರಗಳಲ್ಲಿ ರಿಯಾಯಿತಿ ದರದಲ್ಲಿ ಸೈಕಲ್ ಮತ್ತು ಬಿಡಿಭಾಗಗಳನ್ನ ಸೈಕಲ್ ಬಳಸುವ ನೌಕರರಿಗೆ ಕೊಡುತ್ತಿದೆ.

ಈ ರೀತಿ ಸುಧಾರಣಾ ಕ್ರಮಗಳತ್ತ ಜನರನ್ನ ಸೆಳೆಯುವ ಬದಲು, ದಂಡ ವಿಧಿಸುವ  ಪ್ರಮಾಣ ಮನಬಂದಂತೆ ಏರಿಸಿರುವುದು ಒಂದೆಡೆಯಾದರೆ, ಸೈಕಲ್ ಉದ್ಯಮದಲ್ಲಿ ಶೇ. 75 ರಷ್ಟು ಇರುವುದು ಪಂಜಾಬ್‍ನಲ್ಲೇ. ಹೀರೋ, ಏವನ್ ನಂಥ ಸೈಕಲ್‍ಗಳು ಸೇರಿದಂತೆ ವಾರ್ಷಿಕ 5000 ಕೋಟಿ ವಹಿವಾಟು ಈ ಉದ್ದಿಮೆಯಲ್ಲಿತ್ತು. ಶೆ. 18 ರಷ್ಟು ಜಿಎಸ್‍ಟಿ ಏರಿಕೆಯಿಂದಾಗಿ ಈ ಉದ್ದಿಮೆಯೇ ಕುಸಿದುಬಿದ್ದಿದೆ.

4000 ಘಟಕಗಳಲ್ಲಿ 2.5 ಲಕ್ಷ ಜನ ಉದ್ಯೋಗ ಕಂಡುಕೊಂಡಿದ್ದು, ಮನೆ ಮನೆ ಉದ್ದಿಮೆಯಾಗಿ ಇದು ಹೊರಹೊಮ್ಮಿದೆ. ರಾಡುಗಳು, ಪೆಡಲ್, ಸೀಟು, ಸೀಟ್ ಕವರ್, ಕ್ಯಾರಿಯರ್, ಹ್ಯಾಂಡಲ್, ಬೆಲ್, ಹೀಗೇ ಬೇರೆ ಬೇರೆ ಸಲಕರಣೆ ಬೇರೆ ಬೇರೆ ಘಟಕಗಳಲ್ಲೇ ತಯಾರಿಸಿದ್ದನ್ನ ದೊಡ್ಡ ಕಂಪನಿಗಳು ಖರೀದಿಸಿ ತಮ್ಮ ಬ್ರಾಂಡ್‍ನಲ್ಲಿ ಮಾರುಕಟ್ಟೆಗೆ ಬಿಡುತ್ತಿವೆ.

ಟೈರು ಮತ್ತು ಟ್ಯೂಬುಗಳಿಗೆ ಶೇ.5, ಬೆಲ್‍ಗೆ ಶೇ. 18 ರಷ್ಟು ಜಿಎಸ್‍ಟಿ ಇದ್ದು, ತೆರಿಗೆಯೇ ಶೇ.23 ರಷ್ಟಿದೆ. ಆದರೆ ಸೈಕಲ್ ಮಾರಲು ವಿಧಿಸಿರುವ ಜಿಎಸ್‍ಟಿ ಶೇ.18. ಅಂದರೆ ತಯಾರಿಕಾ ವೆಚ್ಚವೇ, ಮಾರಾಟ ವೆಚ್ಚಕ್ಕಿಂತ ಜಾಸ್ತಿ.  
 ಇದಲ್ಲದೆ ಚೀನಾ ಸೈಕಲ್‍ಗಳು ಪಂಜಾಬಿನ ಸೈಕಲ್ ಗಿಂತ ಶೇ.20 ರಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಬಾಂಗ್ಲಾ ಮತ್ತು ಶ್ರೀಲಂಕಾದೊಡನೆ ಸರಳ ವ್ಯಾಪಾರ ಇರುವುದರಿಂದ, ಅಲ್ಲಿಂದ ತರಿಸಿಕೊಳ್ಳುವ ಸರಕಿಗೆ ಸುಂಕ ಕಡಿಮೆ. ಇದರಿಂದಾಗಿ ಚೀನಾ ಆ ಎರಡು ರಾಷ್ಟ್ರಗಳ ಮೂಲಕ ಭಾರತಕ್ಕೆ ತನ್ನ ಸೈಕಲ್‍ಗಳನ್ನು ಕಳುಹಿಸುತ್ತಿದೆ.

ವಾಹನ ಉದ್ಯಮವೂ ಮುಗ್ಗರಿಸಿದೆ, ತೈಲ ಉತ್ಪಾದನೆ ಮತ್ತು ಮಾರುಕಟ್ಟೆಯನ್ನೂ ಖಾಸಗಿಗೊಪ್ಪಿಸಲು ಸರ್ಕಾರ ಮುಂದಾಗುತ್ತಿದೆ,  ಸೈಕಲ್ ಬಳಸುವ ಎಂದರೆ ಸ್ಥಳೀಯವಾಗಿನ ಸೈಕಲ್ ಉದ್ಯಮವೂ ಮುಚ್ಚುತ್ತಿದೆ, ಕೃಷಿ ಕ್ಷೇತ್ರವೂ ಸೊರಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ 2 ಟ್ರಿಲಿಯನ್ ರುಪಾಯಿಯ ಆರ್ಥಿಕತೆಯನ್ನು ಕೇಂದ್ರ ಪ್ರತಿಪಾದಿಸುತ್ತಲೇ ಇದೆ. ಇದೊಂದು ರೀತಿಯಲ್ಲಿ ಚಂದ್ರನ ಅಂಗಳದಲ್ಲಿ ವಿಕ್ರಮನನ್ನ ಇಳಿಸುವುದಕ್ಕೆ ಮಾಡಿಕೊಂಡ ಭರ್ಜರಿ ತಯಾರಿ, ಕೊನೇ ಕ್ಷಣದಲ್ಲಿ ವಿಫಲವಾದಂತೆ ಭಾಸವಾಗುತ್ತಿದೆ.  ಇದುವರೆಗೂ ಚಂದ್ರನ  ಕಗ್ಗತ್ತಲು ಪ್ರದೇಶ ದಕ್ಷಿಣ ಭಾಗದಲ್ಲಿ ಯಾವ ಲ್ಯಾಂಡರ್ ಇಳಿದಿರಲಿಲ್ಲ. ಭಾರತದ ವಿಕ್ರಮ ಇದನ್ನ ಸಾಧಿಸಬಹುದು ಎಂಬುದು ಸುಳ್ಳಾಯಿತಾದರೂ, ಆರ್ಬಿಟರ್ ಚಂದಿರನ ಸುತ್ತ ಏಳು ವರ್ಷ ಸುತ್ತುತ್ತಿರುತ್ತೆ ಎಂಬ ಸಮಾಧಾನ ಪಟ್ಟುಕೊಳ್ಳುವ ರೀತಿಯಲ್ಲಿ, ಶೇ.5 ಕ್ಕಿಳಿದಿರುವ ಜಿಡಿಪಿ ದರವನ್ನೇ ಸುತ್ತಾಕಿಸಿಕೊಂಡು, ಟ್ರಿಲಿಯನ್ ಗಟ್ಟಲೆ ಆರ್ಥಿಕತೆಯಲ್ಲಿ ಲ್ಯಾಂಡ್ ಆಗುವಂಥದ್ದಾಗುತ್ತಿದೆ.