ಎಗ್ಗಿಲ್ಲದೇ ನಡೆಯುತ್ತಿದೆ ವರ್ಗಾವಣೆ ಧಂದೆ : ನಿಯಮೋಲ್ಲಂಘನೆಯಲ್ಲಿ ಸಚಿವರು, ಶಾಸಕರು ಮುಂದೆ

ಎಗ್ಗಿಲ್ಲದೇ ನಡೆಯುತ್ತಿದೆ ವರ್ಗಾವಣೆ ಧಂದೆ : ನಿಯಮೋಲ್ಲಂಘನೆಯಲ್ಲಿ ಸಚಿವರು, ಶಾಸಕರು ಮುಂದೆ

ಸರ್ಕಾರಿ ನೌಕರರ ವರ್ಗಾವಣೆ ಸಂಬಂಧ ಸ್ಪಷ್ಟವಾಗಿ ರೂಪಿಸಿರುವ ಯಾವ ನಿಯಮಗಳೂ ಅನುಷ್ಠಾನಗೊಳ್ಳುತ್ತಿಲ್ಲ. ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಿದ್ದವರೇ ಹಸ್ತಕ್ಷೇಪ ನಡೆಸುತ್ತಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಅಧಿಕಾರಿ ಯಾವ ಜಾಗ ಬಯಸುತ್ತಾರೆ, ಆ ಜಾಗಕ್ಕೆ ಸರಕಾರ ಅವರನ್ನು ವರ್ಗಾವಣೆ ಮಾಡಲೇಬಾರದು ಎಂದು ನಿಯಮ ಹೇಳುತ್ತಿದ್ದರೆ, ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು ಅಧಿಕಾರಿ, ನೌಕರ ಬಯಸಿದ ಜಾಗಕ್ಕೇ ವರ್ಗಾವಣೆ ಮಾಡಿಸುತ್ತಿದ್ದಾರೆ. ದಕ್ಷ ಹಾಗೂ ಚುರುಕು ಆಡಳಿತಕ್ಕೆ ಸಾಧನವಾಗಬೇಕಾಗಿದ್ದ ವರ್ಗಾವಣೆ ಕೋಟಿಗಟ್ಟಲೆ ಹಣ ತರುವ ಉದ್ದಿಮೆಯಾಗಿ ಪರಿವರ್ತನೆಯಾಗುತ್ತಲೇ ಇದೆ ಎನ್ನುತ್ತಾರೆ ಜಿ.ಮಹಂತೇಶ್.

ಸರ್ಕಾರಿ ನೌಕರರ ವರ್ಗಾವಣೆಗೆ ರಾಜಕೀಯ ಪ್ರಭಾವವನ್ನು ಬಳಸುವಂತಿಲ್ಲ ಎಂಬ ನಿಯಮ ಮತ್ತೆ ಮತ್ತೆ ಉಲ್ಲಂಘನೆಯಾಗುತ್ತಲೇ ಇದೆ. ಲೋಕೋಪಯೋಗಿ, ಪ್ರಾಥಮಿಕ, ಪ್ರೌಢ,  ಉನ್ನತ ಶಿಕ್ಷಣ, ಜಲಸಂಪನ್ಮೂಲ ಮತ್ತು ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ,ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. 

ರಾಜಕೀಯ ಪ್ರಭಾವವಿಲ್ಲದೆಯೇ ವರ್ಗಾವಣೆ ಆಗದು ಎಂಬ ಸ್ಥಿತಿಗೆ ಬಂದಿರುವ ಸರ್ಕಾರಿ ಅಧಿಕಾರಿ ಮತ್ತು  ನೌಕರರು,  ಶಾಸಕರು ಹಾಗೂ ಸಚಿವರ ಶಿಫಾರಸ್ಸು ಪತ್ರಗಳನ್ನು ಹಿಡಿದು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಶಿಫಾರಸ್ಸು ಪತ್ರಗಳನ್ನು ನೀಡುವುದರಲ್ಲಿ ಮೈತ್ರಿ ಸರ್ಕಾರದ ಸಚಿವರು, ಶಾಸಕರೂ ಹೊರತಾಗಿಲ್ಲ. ಶಾಸಕರು ಮತ್ತು ಸಚಿವರು ಮಾಡುವ ಶಿಫಾರಸ್ಸು ಪತ್ರಗಳನ್ನು ಆಧರಿಸಿಯೇ ಅಧಿಕಾರಿ, ನೌಕರರು ಬಯಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಲು ಸರ್ಕಾರವೂ ಅನುಮತಿ ನೀಡುತ್ತಿದೆ. 

ವರ್ಗಾವಣೆ ನಿಯಮ 12ರ ಪ್ರಕಾರ, ಯಾವುದೇ ಸರಕಾರಿ ನೌಕರರು ವರ್ಗಾವಣೆಗೆ ರಾಜಕೀಯ ಪ್ರಭಾವವನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದು ದುರ್ನಡತೆ ಆಗುತ್ತದೆ ಮತ್ತು ರಾಜಕೀಯ ಪ್ರಭಾವ ಬಳಸಿ ಅಧಿಕಾರಿ ಯಾವ ಜಾಗ ಬಯಸುತ್ತಾರೆ, ಆ ಜಾಗಕ್ಕೆ ಸರಕಾರ ಅವರನ್ನು ವರ್ಗಾವಣೆ ಮಾಡಲೇಬಾರದು ಎಂಬ ನಿಯಮವಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿನ್ಸಿಪಾಲರು, ಉಪನ್ಯಾಸಕರು ಸೇರಿದಂತೆ ಒಟ್ಟು 31 ಮಂದಿ, ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ 10ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು, ನೀರಾವರಿ ನಿಗಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿ ನೌಕರರ ಪೈಕಿ 20ಕ್ಕೂ ಹೆಚ್ಚು ಮಂದಿ ವರ್ಗಾವಣೆಗೆ ಸಂಬಂಧಿಸಿದಂತೆ 2019ರ ಜುಲೈ 3ರಂದು ಸರ್ಕಾರ ಅನುಮತಿ ನೀಡಿದೆ. 

ಮಾಜಿ ಮುಖ್ಯಮಂತ್ರಿ ಹಾಗೂ ಬದಾಮಿ ಶಾಸಕ ಸಿದ್ದರಾಮಯ್ಯ(ರಾಮನಗೌಡ, ಯಾದಗಿರಿ) ಸಾರಿಗೆ ಸಚಿವ ಡಿ ಸಿ ತಮ್ಮಣ್ಣ(ನವ್ಯ ಎಸ್ ಬೀದರ್, ಎಸ್ ವಿ ರವಿಶಂಕರ್ ಪಿರಿಯಾಪಟ್ಟಣ)  ಕೃಷಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ (ಕೆ ಪಿ ಬಿಂಬ ಬೆಂಗಳೂರು)  ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ(ವಿಜಯಲಕ್ಷ್ಮಿ ಕೆ ಆರ್ ನಗರ) ಸತೀಶ್ ಜಾರಕಿಹೊಳಿ(ಪೂರ್ಣಿಮಾ ವಿಜಯಕುಮಾರ ಬೆಳವಡಿ ಗೋಕಾಕ್) ಬಂಡೆಪ್ಪ ಖಾಶೆಂಪೂರ(ವಿಜಯಕುಮಾರ ಚಿತ್ತಾಪುರ) ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್ ಕೆ ಪಾಟೀಲ್(ಗಿರೀಶ್ ವಾಮನರಾವ್ ನವಲಗುಂದ) ಶಾಸಕ ರಮೇಶ್ ಜಾರಕಿಹೊಳಿ(ಅನ್ನಪೂರ್ಣ ಕುರಬೇಟ ಗೋಕಾಕ್)  ಎಚ್ ವಿಶ್ವನಾಥ್(ಎಚ್ ವಿಜಯೇಂದ್ರಪ್ಪ ಚನ್ನಗಿರಿ) ವಿಧಾನಪರಿಷತ್ತಿನ ಸದಸ್ಯ ಎಸ್ ಎಲ್ ಬೋಜೇಗೌಡ( ವಿಜಯಕುಮಾರ್, ಮಲ್ಲೇಶಿ ಎಸ್ ನಾಟೀಕರ್, ಉದಯಕುಮಾರ್ ) ಶಾಸಕ ಶಾಮನೂರು ಶಿವಶಂಕರಪ್ಪ(ಜಿ ಕುಮಾರಸ್ವಾಮಿ ಹೊಳಲು) ಪರಿಷತ್ತಿನ ಸದಸ್ಯ ಕೆ ಟಿ ಶ್ರೀಕಂಠೇಗೌಡ,(ಸುರೇಶ್ಬಾಬು ಪೊನ್ನಂಪೇಟೆ) ಎಸ್ ಭೀಮಾನಾಯ್ಕ್(ಶೇಖರಗೌಡ ಬ ಕಿವಡಿ ಸವದತ್ತಿ) ಅಶ್ವಿನ್ ಕುಮಾರ್(ಸುಮತಿ ಎಚ್, ಸಂತೆಮಾಳ ಬನ್ನೂರು) ಸಿ ಆರ್ ಮನೋಹರ್(ಆನಂದ, ದಾರಿನಾಯಕನಪಾಳ್ಯ) ಬಿ ಎಲ್ ಕಾಂತರಾಜು(ಮಮತಾರಾಣಿ, ದೊಡ್ಡಬೆಳವಂಗಲ) ಅವರು ಪ್ರಿನ್ಸಿಪಾಲರು, ಉಪನ್ಯಾಸಕರು ಬಯಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಲು ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಪತ್ರಗಳನ್ನಾಧರಿಸಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ 2019ರ ಜುಲೈ 3ರಂದು ಪತ್ರ ಬರೆದು ನಿರ್ದೇಶಿಸಿದ್ದಾರೆ.

ಅದೇ ರೀತಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವ ಬಿ ಝಡ್ ಜಮೀರ್ ಅಹ್ಮದ್ಖಾನ್(ಬಸವರಾಜಪ್ಪ ಸಾಮಾಜಿಕ ಅರಣ್ಯ ವಿಭಾಗ ಮಂಡ್ಯ, ಶಿವರಾಯಪ್ಪ ಬಿ ಮೂಲೇರ ಸಣ್ಣ ಉಳಿತಾಯ ಇಲಾಖೆ)  ನಗರಾಭಿವೃದ್ಧಿ ಸಚಿವ ಯು ಟಿ ಖಾದರ್(ಎನ್ ಸುಬ್ರಹ್ಮಣ್ಯರಾವ್ ಪುತ್ತೂರು ಉಪ ವಿಭಾಗ) ವಿಧಾನಪರಿಷತ್ತಿನ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ(ಸುನೀತಾಬಾಯಿ ಜಲಾನಯನ ಅಭಿವೃದ್ಧಿ ಇಲಾಖೆ ಹಾಸನ)  ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್(ರಾಜು ಜಿ ವೈ ಕಾವೇರಿ ವನ್ಯಜೀವಿ ಉಪ ವಿಭಾಗ ಕನಕಪುರ) ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ(ಎಂ ಎಂ ಅಚ್ಚಪ್ಪ ಮೂಡಬಿದರೆ ಅರಣ್ಯ ವಿಭಾಗ)  ಶಾಸಕ ಅಮರೇಗೌಡ ಎಲ್ ಪಾಟೀಲ್ ಬಯ್ಯಾಪುರ( ವಿಜಯಲಕ್ಷ್ಮಿ ಯಾದಗಿರಿ), ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎನ್ ಮಹೇಶ್( ಕೆ ಎಸ್ ಮಹದೇವಪ್ರಸಾದ್, ಸಹಾಯಕ ಲೆಕ್ಕಾಧಿಕಾರಿ ಕೊಳ್ಳೆಗಾಲ) ಅವರು ಶಿಫಾರಸ್ಸು ಪತ್ರ ನೀಡಿದ್ದರು. ಈ ಶಿಫಾರಸ್ಸು ಪತ್ರಗಳನ್ನು ಸಂಬಂಧಿಸಿದ ಇಲಾಖೆಗಳ ನಿರ್ದೇಶಕರು, ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕಾರ್ಯದರ್ಶಿ ಡಾ ಎಸ್ ಸೆಲ್ವಕುಮಾರ್ ಅವರು ಅಧಿಕಾರಿ, ನೌಕರರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲು ಸೂಚಿಸಿ ಪತ್ರ ಬರೆದಿದ್ದಾರೆ. 

ದಕ್ಷ ಹಾಗೂ ಚುರುಕು ಆಡಳಿತಕ್ಕೆ ಸಾಧನವಾಗಬೇಕಾಗಿದ್ದ ವರ್ಗಾವಣೆ ಕೋಟಿಗಟ್ಟಲೆ ಹಣ ತರುವ ಉದ್ದಿಮೆಯಾಗಿ ಪರಿವರ್ತನೆಯಾಗುತ್ತಲೇ ಇದೆ. ಸಚಿವರು,ಶಾಸಕರು, ನೌಕರರು ವರ್ಷಕ್ಕೆ 6 ತಿಂಗಳ ಕಾಲ ಇದರಲ್ಲೇ ಮಗ್ನರಾಗಿರುತ್ತಾರೆ. ಯಾವ ತಾಲೂಕು ಅಧಿಕಾರಿ, ಯಾವ ಪೊಲೀಸ್ ಇನ್ಸ್ ಪೆಕ್ಟರ್ ಎಲ್ಲಿದ್ದಾರೆ, ಎಲ್ಲಿಗೆ ವರ್ಗವಾಗಬೇಕು ಎಂದು ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು ತಲೆಕೆಡಿಸಿಕೊಳ್ಳುತ್ತಿದ್ದಾರೆ. 

ಸರ್ಕಾರಿ ನೌಕರರ ವರ್ಗಾವಣೆ ಕುರಿತು ಒಂದು ಸ್ಪಷ್ಟ ಹಾಗೂ ಪಾರದರ್ಶಕ ನೀತಿಯನ್ನು ಕಾನೂನುಬದ್ಧವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿಲ್ಲ.  ಈ ವರ್ಗಾವಣೆ ಕಾನೂನಿನಲ್ಲಿ ಮಂತ್ರಿಗಳು/ ಶಾಸಕರು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಗಳು ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶವಿರಬಾರದು ಎಂದು ನ್ಯಾಯಾಲಯ ಹಲವು ಬಾರಿ ಹೇಳುತ್ತಿದೆಯಾದರೂ ಹಸ್ತಕ್ಷೇಪ ನಡೆಸುವ ಮೂಲಕ ಪ್ರಭಾವ ಬೀರುವ ಮುಖ್ಯಮಂತ್ರಿ, ಸಚಿವರು, ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿಲ್ಲ.

ಸರ್ಕಾರಿ ನೌಕರರ ವರ್ಗಾವಣೆ ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಆಗಬೇಕೇ ಹೊರತು ಸ್ವಹಿತ ಲೆಕ್ಕಾಚಾರದಿಂದಲ್ಲ. ಸರ್ಕಾರಿ ನೌಕರರ ವರ್ಗಾವಣೆ ಕುರಿತು ಒಂದು ಸ್ಪಷ್ಟ ಹಾಗೂ ಪಾರದರ್ಶಕ ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವ ಅಗತ್ಯವಿದೆ.