ಟ್ರಾಯ್: ದರನೀತಿ ಪರಿಷ್ಕರಣೆಯ ಅನಿವಾರ್ಯತೆ

ಟ್ರಾಯ್: ದರನೀತಿ ಪರಿಷ್ಕರಣೆಯ ಅನಿವಾರ್ಯತೆ

ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಕಳೆದ ವರ್ಷ ಡಿಸೆಂಬರ್ ನಲ್ಲಿ ಜಾರಿಗೊಳಿಸಲಾದ ಡಿಟಿಎಚ್ ಹಾಗೂ ಕೇಬಲ್ ಸೇವೆಗಳ ಪರಿಷ್ಕೃತ ದರಗಳ ಮರುಪರಿಶೀಲನೆ ಮಾಡುವ ಬಗ್ಗೆ ಯೋಚಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಪಾರದರ್ಶಕ ವಹಿವಾಟಿಗೆ ಮತ್ತು ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್ಗೆ ಮಾತ್ರ ಹಣ ಪಾವತಿಸುವುದಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಕಳೆದ ವರ್ಷ ಹೊಸ ದರನೀತಿ ಜಾರಿಗೊಳಿಸಿತ್ತು. ಆದರೆ ಪಾರದರ್ಶಕತೆಯ ಸೋಗಿನಿಂದ ಜಾರಿಗೊಳಿಸಲಾದ ಹೊಸ ದರನೀತಿಯಿಂದ ಗ್ರಾಹಕರು ಹಾಗೂ ಕೇಬಲ್ ಆಪರೇಟರುಗಳಿಬ್ಬರ ಜೇಬಿಗೂ ಕತ್ತರಿ ಬಿದ್ದಿದೆ. ಈ ಸಂಬಂಧ ಕೇಬಲ್ ಆಪರೇಟರುಗಳ ಸಂಘಗಳು ದೇಶದಾದ್ಯಂತ ಹಲವು ಚಳವಳಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಗ್ರಾಹಕರೂ ಸಹ ಸರ್ಕಾರದ ಹೊಸ ದರನೀತಿಯ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹೊಸ ದರನೀತಿ ಜಾರಿಗೆ ಬಂದ ಮೇಲೂ ಅದನ್ನು ಕಾರ್ಯಗತಗೊಳಿಸುವ ವಿಷಯದಲ್ಲಿ ಟ್ರಾಯ್ ಗೆ ಸ್ಪಷ್ಟತೆ ಇದ್ದಂತಿಲ್ಲ. ಉದಾಹರಣೆಗೆ, ಉಚಿತ ಚಾನೆಲ್ ಗೆ ಅವಕಾಶ ನೀಡುವ ಬಗ್ಗೆ, ಅಲಕಾರ್ಟೆ (ವಾಹಿನಿಗಳ ಗುಚ್ಛ) ಪೇ ಚಾನೆಲ್ ನೀಡುವ ರಿಯಾಯಿತಿಗಳು ಇತ್ಯಾದಿಗಳ ಬಗ್ಗೆ ದರನೀತಿಯಲ್ಲಿ ಸ್ಪಷ್ಟ ವಿವರಣೆಯಿಲ್ಲ ಮತ್ತು ದರನೀತಿಯ ಹಲವು ಅಂಶಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿಯೂ ಇಲ್ಲ. ಸಾಲದೆಂದು ಚಾನೆಲ್ ಗಳು ಹಾಗೂ ಚಾನೆಲ್ ಪ್ರಸರಣಾ ಕಂಪನಿಗಳು ಸರ್ಕಾರದ ಹೊಸ ನೀತಿಯನ್ನು ತಮ್ಮ ಲಾಭಕ್ಕೆ ಅನುಕೂಲವಾಗುವಂತೆ ದುರ್ಬಳಕೆ ಮಾಡಿಕೊಳ್ಳಲಾರಂಭಿಸಿವೆ. ಉದಾಹರಣೆಗೆ ಚಾನೆಲ್ ಗಳು ಗ್ರಾಹಕರಿಗೆ ಕಡಿಮೆ ಬೆಲೆಗೆ ಅಲಕಾರ್ಟೆ ಆಫರ್ ನೀಡುವ ಮೂಲಕ ಸರ್ಕಾರ ಉದಾರವಾಗಿ ನೀಡುವ ದೂರಸಂಪರ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ಈ ಮೂಲಕ ಗ್ರಾಹಕರಿಗೆ ತಮಗೆ ಬೇಡದ ಚಾನೆಲ್ ಗಳಿಗೆ ಅನಗತ್ಯ ಹಣ (ಅದು ಕಡಿಮೆ ಮೊತ್ತವೇ ಇರಬಹುದು) ತೆರುವ ಮತ್ತು ಬೇಕಾದ ನಿರ್ದಿಷ್ಟ ಚಾನೆಲ್ಗಳಿಗೆ ದುಬಾರಿ ಬೆಲೆ ತೆರುವ ಪರಿಸ್ಥಿತಿ ನಿರ್ಮಿಸಿದೆ. ಈ ಬಗೆಯ ಅವೈಜ್ಞಾನಿಕ ಆಫರುಗಳಿಂದ ಗ್ರಾಹಕರ ಚಾನೆಲ್ ಗಳ ಆಯ್ಕೆ ಸೀಮಿತಗೊಳ್ಳುತ್ತದೆ. ಇದು ಅಂತಿಮವಾಗಿ ಖಾಸಗಿ ಚಾನೆಲ್ ಗಳ ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಡುತ್ತದೆ. ಇವೆಲ್ಲ ಗ್ರಾಹಕರ ಬೇಡಿಕೆಗಳಿಗೆ ಪೂರಕವಾದ ಬೆಳವಣಿಗೆಗಳಲ್ಲ, ಗ್ರಾಹಕರ ಹಿತಾಸಕ್ತಿಯನ್ನು ನಿರ್ಲಕ್ಷಿಸುವ ಲಾಭಕೋರತನದ ಬೆಳವಣಿಗೆಗಳಾಗಿವೆ. 

ಹೊಸ ದರನೀತಿಗೆ ಮುನ್ನ ಮಾಸಿಕ  150 ರೂ. ಶುಲ್ಕ ಪಾವತಿಸುತ್ತಿದ್ದ ಗ್ರಾಹಕ ಹೊಸ ದರನೀತಿಯ ಅಡಿಯಲ್ಲಿ 350 ರೂ.  ಶುಲ್ಕ ತೆರುವಂತಾಗಿದೆ. ಅಂದರೆ ಗ್ರಾಹಕ ಶೇ. 35ರಷ್ಟು ಹೆಚ್ಚುವರಿ ಪಾವತಿ ಮಾಡುತ್ತಿದ್ದಾನೆ. ಸಾಲದೆಂದು ವೀಕ್ಷಿಸುವ ಚಾನೆಲ್ ಗಳ ಸಂಖ್ಯೆಯ ಪ್ರಮಾಣವೂ ಇದರಡಿಯಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಇದು ಯಾವ ಬಗೆಯ ಗ್ರಾಹಕ ಹಿತಾಸಕ್ತಿಯೋ ದೇವರೇ ಬಲ್ಲ! ಖಾಸಗಿ ಚಾನೆಲ್ಗಳು ನೀಡುವ ರಿಯಾಯಿತಿಯ ಮೇಲೆ ನಿಯಂತ್ರಣ ಸಾಧಿಸಬೇಕಾಗಿದೆ. ಬೇಕಿದ್ದರೆ ನೆಟ್ವರ್ಕ್ ಸಂಪರ್ಕ ಶುಲ್ಕ(ಎನ್ಸಿಎಫ್)ದಲ್ಲಿ (ಹಾಲಿ ಶುಲ್ಕ 130 ರೂ.) ಹಾಗೂ ಆಪರೇಟರುಗಳಿಗೆ ತೆರುವ ರಿಟೇಲ್ ಶುಲ್ಕದಲ್ಲಿ ಗರಿಷ್ಠ ರಿಯಾಯಿತಿ ನೀಡಲಿ.

ಒಂದೆಡೆ, ಕೇವಲ ಒಂದು ರೂಪಾಯಿ ಪಾವತಿಸಿ ತಮ್ಮ ವಾಹಿನಿಯ ಎಲ್ಲಾ ಚಾನೆಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದು ಎಂದು ಖಾಸಗಿ ಚಾನೆಲ್ ಗಳು ಪ್ರಚಾರ ಮಾಡುತ್ತಿದ್ದರೆ ಮತ್ತೊಂದೆಡೆ ದೂರದರ್ಶನದ ಎಲ್ಲಾ ಚಾನೆಲ್ ಗಳನ್ನೂ ಕಡ್ಡಾಯವಾಗಿ ಪ್ರಸಾರ ಮಾಡತಕ್ಕದ್ದು ಎಂದು ಸರ್ಕಾರ ಹೇರಿಕೆ ಹಾಕುತ್ತಿದೆ; ಮತ್ತು ಇದಕ್ಕಾಗಿ ಗ್ರಾಹಕರಿಂದ 130 ರೂ. ಗಳನ್ನು ಎನ್ಸಿಎಫ್ ಶುಲ್ಕವಾಗಿ ವಸೂಲಿ ಮಾಡುತ್ತಿದೆ. ಇದನ್ನು ಗಮನಿಸಿದರೆ ಲಾಭಕೋರತನದಲ್ಲಿ ಸರ್ಕಾರ ಖಾಸಗಿಯವರೊಂದಿಗೆ ಪೈಪೋಟಿಗೆ ನಿಂತಂತಿದೆ. ಆಪರೇಟರುಗಳು ಸರ್ಕಾರಿ ಚಾನೆಲ್ಗಳನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ಪ್ರಸರಣ ಮಾಡುವ ಅಗತ್ಯವೇನಿದೆ? ದೂರದರ್ಶನದ ಪಂಜಾಬಿ, ಭೋಜ್ಪುರಿ ಅಥವಾ ಒಡಿಯಾ ಭಾಷೆಯ ಚಾನೆಲ್ ಗಳನ್ನು ಕರ್ನಾಟಕದಲ್ಲಿ ಅಥವಾ ಬೇರೆ ಮತ್ತೊಂದು ರಾಜ್ಯದಲ್ಲಿ ಎಷ್ಟು ಮಂದಿ ವೀಕ್ಷಿಸುತ್ತಾರೆ? ಈ ಬಗೆಯ ಫ್ರೀಬೀಗಳು ಸರ್ಕಾರಕ್ಕೆ ಮತ್ತು ಪ್ರತಿ ತಿಂಗಳೂ ರೂ. 130 ಪಾವತಿಸುವ ಗ್ರಾಹಕರಿಗೆ ಅನಗತ್ಯ ಹೊರೆಯಲ್ಲವೇ?     

ಎಷ್ಟೋ ಗ್ರಾಹಕರು ತಮ್ಮ ಮನೆಯ ಟಿವಿಗಳನ್ನು ಪ್ರತಿ ಮುಂಜಾನೆ ಅಥವಾ ಸಂಜೆ ಒಂದೆರಡು ಗಂಟೆಗಳಷ್ಟೇ ವೀಕ್ಷಿಸುತ್ತಾರೆ. ಹೀಗಿರುವಾಗ ತಿಂಗಳ ಲೆಕ್ಕದಲ್ಲಿ ಶುಲ್ಕ ಪಾವತಿಸುವುದು ಅವೈಜ್ಞಾನಿಕ ಪದ್ಧತಿಯಾಗಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಚಾನೆಲ್ಗಳ ಬಳಕೆಯನ್ನು ಗಂಟೆಯ ಲೆಕ್ಕದಲ್ಲಿ ಅಥವಾ ಸೆಕೆಂಡಿನ ಲೆಕ್ಕದಲ್ಲಿ ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಶುಲ್ಕ ನಿಗದಿ ಪಡಿಸುವುದು ಅಸಾಧ್ಯದ ಕೆಲಸವೇನಲ್ಲ. ನೆಟ್ವರ್ಕ್ ಬಳಕೆಯನ್ನು ಸೆಕೆಂಡ್ ಲೆಕ್ಕದಲ್ಲಿ ಅಂದಾಜಿಸಲು ಟೆಲಿಕಾಂ ಸಂಸ್ಥೆಗೆ ಸಾಧ್ಯವಾಗುತ್ತದೆಂದ ಮೇಲೆ ಟಿವಿ ಚಾನೆಲ್ ಗಳಿಗೆ ಏಕೆ ಸಾಧ್ಯವಾಗುವುದಿಲ್ಲ? ಇದರಿಂದ ವಿವಿಧ ಚಾನೆಲ್ ಗಳಿಗೆ ಗ್ರಾಹಕರ ಆದ್ಯತೆಯ ಸಮಯಾವಧಿ ಯಾವುದೆಂದು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಗ್ರಾಹಕರಿಗೆ ಹಣದ ಉಳಿತಾಯವೂ ಆಗುತ್ತದೆ. ಗ್ರಾಹಕ ತನ್ನಿಚ್ಛೆಯ ಚಾನೆಲ್ಗಳನ್ನು ಬೇಕಾದ ಸಮಯಾವಧಿಯಲ್ಲಿ ಬೇಕಾದ ಹಾಗೆ ಸುಲಭವಾಗಿ ಆಯ್ಕೆ ಮಾಡಿಕೊಳ್ಳಲು ಬಯಸುತ್ತಾನೆಂಬ ಅಂಶ ಪ್ರಾಯಶಃ ಟ್ರಾಯ್ ಗೆ ಅರ್ಥವಾದಂತಿಲ್ಲ. ಟ್ರಾಯ್ ನ ಹೊಸ ದರನೀತಿಯಿಂದ ಸಾಮಾನ್ಯ ಗ್ರಾಹಕನಷ್ಟೇ ಅಲ್ಲ ಕೇಬಲ್ ಆಪರೇಟರುಗಳೂ ಸಹ ಅಸಹಾಯಕತೆ ಅನುಭವಿಸುವಂತಾಗಿದೆ. 

                                                                                                   -ಆನಂದ್ ಎನ್.

                                                                                                        ಮಾಲೀಕರು,

                                                                  ವೆಂಕಟೇಶ್ವರ ನೆಟ್ವರ್ಕ್, ಬೆಂಗಳೂರು