ಇಂದಿನಿಂದ 3 ದಿನ 15 ನೇ ಹಣಕಾಸು ಆಯೋಗ ತಂಡದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ

ಇಂದಿನಿಂದ 3 ದಿನ 15 ನೇ ಹಣಕಾಸು ಆಯೋಗ ತಂಡದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ

ರಾಜ್ಯದಲ್ಲಿ ಬೀಸುತ್ತಿರುವ ಭಿನ್ನಮತೀಯ ಗಾಳಿಯ ವೇಗ ತುಸು ತಣ್ಣಗಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಬೀಸುವ ದೊಣ್ಣೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗುತ್ತಲೇ ಒಂದು ವರ್ಷ ಸವೆಸಿದ್ದಾರೆ.  ಈ ಎಲ್ಲ ಬೆಳವಣಿಗೆ, ಚಟುವಟಿಕೆಗಳ ನಡುವೆಯೇ ರಾಜ್ಯಕ್ಕೆ ಬಂದಿಳಿದಿರುವ 15ನೇ ಹಣಕಾಸು ಆಯೋಗದ ತಂಡ, ಸಾಲ ಮನ್ನಾದಿಂದಾಗಿರುವ ಹೊರೆಯೂ ಸೇರಿದಂತೆ ರಾಜ್ಯದ ಒಟ್ಟಾರೆ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದರ ಕುರಿತು ಜಿ.ಮಹಂತೇಶ್  ಬೆಳಕು ಚೆಲ್ಲಿದ್ದಾರೆ.


ಮೈತ್ರಿ ಸರ್ಕಾರದ ಪಾಲುದಾರಿಕೆ ಪಕ್ಷಗಳ ನಡುವಿನ ಭಿನ್ನಮತ, ಉಭಯ ಪಕ್ಷಗಳ ನಡುವೆ ಎದ್ದಿರುವ ಅಸಮಾಧಾನ, ಕಾಲೆಳೆಯುವ ರಾಜಕಾರಣ, ಇನ್ನೂ ತಣ್ಣಗಾಗದ ಅಪಸ್ವರದ ಕೂಗು ಮತ್ತು ರಾಜಕೀಯ ಅಸ್ಥಿರತೆ ನಡುವೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಒಂದು ವರ್ಷ ಸವೆಸಿದ್ದಾರೆ.

ಭಿನ್ನಮತ ಮತ್ತು ಭಿನ್ನಮತೀಯ ಚಟುವಟಿಕೆಗಳನ್ನು ನಿಯಂತ್ರಿಸುವುದರಲ್ಲೇ ಅತಿ ಹೆಚ್ಚು ಸಮಯ ಕಳೆದಿರುವ ಎಚ್ ಡಿ ಕುಮಾರಸ್ವಾಮಿ ಅವರು ಈಗಷ್ಟೇ ಮೊದಲ ಗ್ರಾಮ ವಾಸ್ತವ್ಯವನ್ನೂ ಪೂರ್ಣಗೊಳಿಸಿದ್ದಾರೆ. ಇನ್ನೇನು ಜುಲೈ ತಿಂಗಳಿನಲ್ಲಿ ಮುಂಗಾರು ಅಧಿವೇಶನವೂ ನಡೆಯಲಿದೆ.

 ಇದರ ಬೆನ್ನಲ್ಲೇ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ಕೊಟ್ಟಿದೆ. ಕೇಂದ್ರದಿಂದ ಆಗಮಿಸಿರುವ ಈ ತಂಡ,  ಜೂನ್ 24ರಿಂದ 26ವರೆಗೆ ರಾಜ್ಯದ ಹಣಕಾಸಿನ ಸ್ಥಿತಿ, ಸಾಲ, ಆರ್ಥಿಕ ಸುಧಾರಣೆ, ತೆರಿಗೆ ದಕ್ಷತೆ, ಸಂಪನ್ಮೂಲಗಳ ಕ್ರೋಢೀಕರಣ, ವೆಚ್ಚದ (ವೇತನ, ಪಿಂಚಣಿ) ಮೇಲಿನ ವಿಶ್ಲೇಷಣೆ, ಹಣಕಾಸು ಆಯೋಗ ನೀಡಿರುವ ಅನುದಾನಗಳ ಬಳಕೆ, ಜಿಎಸ್ಟಿ ಅನುಷ್ಠಾನವೂ ಸೇರಿದಂತೆ ರಾಜ್ಯದ ಒಟ್ಟಾರೆ ಹಣಕಾಸಿನ ಸ್ಥಿತಿಗತಿ ಕುರಿತು ತಂಡದ ಸದಸ್ಯರ ಜತೆ ಚರ್ಚೆ ನಡೆಸಲಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಕರ್ನಾಟಕದ ಆರ್ಥಿಕ ಪರಿಸ್ಥಿತಿಯಲ್ಲಿನ ಬೆಳವಣಿಗೆಗಳು, ಎದುರಾಗಿರುವ ಆರ್ಥಿಕ ಸವಾಲುಗಳ ಕುರಿತು ತಯಾರಿಸಿರುವ ಪ್ರಾತ್ಯಕ್ಷಿಕೆಯನ್ನು ಅಂತಿಮಗೊಳಿಸುವುದರಲ್ಲಿ ನಿರತರಾಗಿದ್ದಾರೆ.

ಸದ್ಯದ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆಯೆಂದರೆ, ಮಹತ್ವದ ವಲಯಗಳಲ್ಲಿನ ವೆಚ್ಚದ ಅಗತ್ಯಭರಿಸಲು ಬೇಕಾದ ಸಂಪನ್ಮೂಲಸಂಗ್ರಹಣೆಯ ಸಲುವಾಗಿ ಅಧಿಕ ತೆರಿಗೆ ಪ್ರಯತ್ನವನ್ನು ಕಾಯ್ದುಕೊಳ್ಳಬೇಕಾಗಿದೆ. ಜತೆಗೆ ರಾಜ್ಯವು ವಿವೇಕಯುತ ಆರ್ಥಿಕ ಮಾನದಂಡಗಳನ್ನು ಪಾಲಿಸಬೇಕಲ್ಲದೆ, ತುರ್ತು ಆರ್ಥಿಕ ವಲಯಗಳಿಗೆ ಅವಶ್ಯಕವಾದಷ್ಟು ನಿಧಿ ಒದಗಿಸುವ ಅಗತ್ಯವನ್ನೂಸರಿದೂಗಿಸಬೇಕಾಗಿದೆ. ಇದು ರಾಜ್ಯಕ್ಕೆ ಒಂದು ರೀತಿಯ ಸವಾಲು ಕೂಡ ಹೌದು.

ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಲವು ವರ್ಷಗಳಿಂದಲೂ ಇಳಿಮುಖಗೊಂಡಿದೆ. ಪ್ರಮುಖವಾಗಿ ವೆಚ್ಚ ವಸೂಲಾತಿ ದರಗಳಲ್ಲಿನ ಇಳಿಕೆ ಮತ್ತು ಕ್ಷೀಣತೆ, ಸಾರ್ವಜನಿಕ ಉದ್ದಿಮೆಗಳಲ್ಲಿ ಕಳಪೆ ಕಾರ್ಯನಿರ್ವಹಣೆ, ಲಾಭಕರವಲ್ಲದ, ದುಬಾರಿ ಸಹಾಯಧನಗಳಿಂದಾಗಿ ಒಟ್ಟಾರೆ ರಾಜ್ಯ ಆಂತರಿಕ ಉತ್ಪನ್ನ (ಜಿಎಸ್ಡಿಪಿ)ಕ್ಕೆ ಹೋಲಿಸಿದ್ದಲ್ಲಿ ತೆರಿಗೆಯೇತರ ರಾಜಸ್ವದ ಪ್ರಮಾಣ ನಗಣ್ಯವಾಗಿದೆ. ಅಲ್ಲದೆ, ಆಡಳಿತ ಇಲಾಖೆಗಳಿಂದ ಕಾಲಕಾಲಕ್ಕೆ ಕ್ರಮಬದ್ಧವಾಗಿ ನಡೆಸಬೇಕಿದ್ದ ಮೇಲ್ವಿಚಾರಣೆಯಲ್ಲಿನ ಕೊರತೆ ಮತ್ತು ಬಳಕೆ ಶುಲ್ಕಗಳನ್ನು ಪರಿಷ್ಕರಿಸದಿರುವುದು ಕೂಡ ತೆರಿಗೆಯೇತರ ಆದಾಯದಲ್ಲಿ ಕಂಡು ಬರುತ್ತಿರುವ ಇಳಿಕೆಗೆ ತನ್ನ ಪಾಲನ್ನು ನೀಡಿದೆ.

ಇನ್ನು, ಕ್ರೋಡೀಕೃತ ಸಾಲ ತೀರಿಕೆ ನಿಧಿಗೆ ಸಂಬಂಧಿಸಿದಂತೆ 14ನೇ ಹಣಕಾಸು ಆಯೋಗ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿತ್ತಾದರೂ ವಿತ್ತೀಯ ಕೊರತೆ ಮುಂದುವರೆಯುತ್ತಲೇ ಇದೆ. ಇದರಿಂದಾಗಿ ನಿಧಿಗಳಲ್ಲಿ ಹೂಡಿಕೆ ಮಾಡಲು ಸಾಲ ಪಡೆಯಲೇಬೇಕಾಗುವಂತಹ ಅನಿವಾರ್ಯ ಸ್ಥಿತಿಯಲ್ಲಿದೆ.  ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿನ ರೈತರ ಸಾಲಮನ್ನಾ ಯೋಜನೆಯ ಕಾರಣದಿಂದ ವೆಚ್ಚದ ಅಗತ್ಯಗಳು ಹೆಚ್ಚಿವೆ. 

ರಾಜ್ಯದಲ್ಲಿ 2017-18ನೇ ಸಾಲಿನಿಂದ ಜಾರಿಗೊಂಡಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ), ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ದೀರ್ಘಾವಧಿಯಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆಯಾದರೂ ರಾಜಸ್ವಗಳ ಮೇಲೆ ಋಣಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಸರಕು ಮತ್ತು ಸೇವಾ ತೆರಿಗೆಯು ಮೂಲ ಸ್ಥಳಾಧರಿತ ತೆರಿಗೆಯಿಂದ ಗುರಿ ಆಧರಿತ ತೆರಿಗೆಗೆ ಪಲ್ಲಟಗೊಳ್ಳುವ ಕಾರಣ ಕರ್ನಾಟಕಕ್ಕೆ ತೆರಿಗೆ ನಷ್ಟ ಉಂಟಾಗುತ್ತಿದೆ. ಪ್ರವೇಶ ತೆರಿಗೆಯಂತಹ ಇತರೆ ತೆರಿಗೆಗಳೂ ಸರಕು ಸೇವಾ ತೆರಿಗೆಯೊಂದಿಗೆ ವಿಲೀನಗೊಳ್ಳುವುದರಿಂದಲೂ ನಷ್ಟಕ್ಕೆ ಗುರಿಯಾಗಿದೆ.

ರಾಜ್ಯದ ಆಯವ್ಯಯದ ಗಾತ್ರವು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದರೂ ಸಹ ಅದರಲ್ಲಿನ ಬಹುಪಾಲು ಬದ್ಧ ವೆಚ್ಚಗಳ ರೂಪದಲ್ಲಿದೆ. ಸೀಮಿತ ಹಣಕಾಸಿನ ಅವಕಾಶದಲ್ಲಿ ರಾಜಸ್ವ ಪ್ರವೃತ್ತಿಯು ಬದ್ಧತಾ ವೆಚ್ಚಕ್ಕೆ ವೆಚ್ಚದ ತಂತ್ರಗಾರಿಕೆಯು ಸದ್ಯದ ಸನ್ನಿವೇಶದಲ್ಲಿ ರಾಜ್ಯ ಸರ್ಕಾರಕ್ಕೆ ಇದೊಂದು ಪ್ರಮುಖ ಸವಾಲಾಗಿ ಪರಿಣಿಮಿಸಿದೆ. 

2013-14ರಿಂದ ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ವಸತಿ, ನೀರು ಸರಬರಾಜು ಮುಂತಾದ ವಲಯಗಳಿಗೆ ಒತ್ತು ನೀಡಲಾಗಿದೆ. 2013-14ನೇ ಸಾಲಿನಲ್ಲಿ 36,102.76 ಕೋಟಿ ರು.ಗಳಿಂದ 2018-19ನೇ ಸಾಲಿಗೆ 81,449.45 ಕೋಟಿ ರು.ಗಳಿಗೇರಿದೆ. ಅದೇ ಅವಧಿಯಲ್ಲಿ ಆರ್ಥಿಕ ಸೇವೆಗಳ ವೆಚ್ಚ 40,225.69 ಕೋಟಿ ರು.ಗಳಿಂದ 46,584.48 ಕೋಟಿ ರು.ಗಳಿಗೇರಿದೆ.

 ಇನ್ನು, ರಾಜ್ಯದ ತೆರಿಗೆಯೇತರ ವರಮಾನವನ್ನು ರಾಜ್ಯಾದಾಯದ ಪ್ರಮಾಣಕ್ಕೆ ಹೋಲಿಸಿದಾಗ ದೇಶದಲ್ಲಿಯೇ ಇದು ಅತ್ಯಂತ ಕಡಿಮೆ. ಇದು ಕಳೆದ 5-6 ವರ್ಷಗಳಿಂದ ಶೇ.1ರ ಸುತ್ತವೇ ಸುಳಿದಾಡುತ್ತಿದೆ. ಇದಕ್ಕೆ ವೆಚ್ಚಗಳ ಸಂಗ್ರಹಣೆ ಕಡಿಮೆಯಾಗಿರುವುದೇ ಕಾರಣ ಎನ್ನಲಾಗಿದೆ. ಅನೇಕ ಇಲಾಖೆಗಳಲ್ಲಿ ಬಳಕೆದಾರರ ಶುಲ್ಕ, ದಂಡ ಹಾಗೂ ಇತರೆ ತೆರಿಗೆಯೇತರ ಜಮೆಗಳ ಪರಿಷ್ಕರಣೆಯನ್ನು ಅನೇಕ ವರ್ಷಗಳಿಂದ ಕೈಗೆತ್ತಿಕೊಂಡಿಲ್ಲ.

ಮತ್ತೊಂದು ಸಂಗತಿ ಎಂದರೆ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗಿರುವ ಅನುದಾನವನ್ನು ಕಡಿತಗೊಳಿಸಿರುವುದು. ಈ ಯೋಜನೆಗಳ ಪೈಕಿ ಹಲವು ಯೋಜನೆಗಳು ಚಾಲ್ತಿಯಲ್ಲಿದೆಯಾದರೂ, ಇವುಗಳನ್ನು ತಕ್ಷಣಕ್ಕೆ ನಿಲ್ಲಿಸಲು ಸಾಧ್ಯವೂ ಇಲ್ಲ. ಹೀಗಾಗಿ ರಾಜ್ಯದ ಬೊಕ್ಕಸದ ಮೇಲೆ ಇದರ ನೇರ ಪರಿಣಾಮ ಬೀರಲಿದೆ. ಕೇಂದ್ರ ಅನುದಾನ ಕಡಿತಗೊಳಿಸಿರುವ ಯೋಜನೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಹುಡುಕುವುದು ರಾಜ್ಯದ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲಾಗಿ ಕಾಡಿದೆ.