ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿಒಕ್ಕಲಿಗರ ಪ್ರತಿಭಟನೆ ಆರಂಭ  

ಡಿ.ಕೆ.ಶಿವಕುಮಾರ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿಒಕ್ಕಲಿಗರ ಪ್ರತಿಭಟನೆ ಆರಂಭ  

ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗರ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಂಯುಕ್ತವಾಗಿ ಬುಧವಾರ ಬೆಳಗ್ಗೆಯಿಂದಲೇ ಆಯೋಜಿಸಿದ್ದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಯಾಗುತ್ತಿದ್ದಾರೆ.

ಹಾಸನ ಹಾಗೂ ರಾಮನಗರ ಜಿಲ್ಲೆಯ ವಿವಿಧೆಡೆಯಿಂದ ಒಕ್ಕಲಿಗ ಸಂಘದ ಕಾರ್ಯಕರ್ತರು ಬೆಳಗ್ಗೆಯಿಂದಲೇ ಆಗಮಿಸಿದ್ದಾರೆ. ಕಾರ್ಯಕರ್ತರನ್ನು ಕರೆ ತರಲು ರಾಜ್ಯ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಲಾರಿ, ಜೀಪ್, ಟೆಂಪೋ ಸೇರಿದಂತೆ ಇತರೆ ವಾಹನಗಳಲ್ಲೂ ಜನ ಆಗಮಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಮುಖವಾಡಗಳನ್ನು ಧರಿಸಿರುವ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮೋದಿ-ಶಾ ನ್ಯೂ ಇಂಡಿಯಾ ಮಂತ್ರ: ಬಿಜೆಪಿಗೆ ಸಹಕಾರ ಕೊಟ್ಟರೆ ಬೇಲ್ ಸಿಗುತ್ತೆ, ಇಲ್ಲವೆಂದರೆ ಅವರಿಗೆ ಜೈಲು ಕಾಯಂ ಎಂಬ ಅರ್ಥ ಬರುವಂತೆ ವಿವಿಧ ಪೋಸ್ಟರ್ ಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಸಾಕ್ಷಿ ನುಡಿಯುತ್ತಿವೆ. ಕೇಂದ್ರ ಸರ್ಕಾರವು ಸಿಬಿಐ-ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ದುರುಪಯೋಗಪಡಿದಸಿಕೊಳ್ಳುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ. ಈ ಕುರಿತ, ಕೆಪಿಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್ ಅವರ ಟ್ವಿಟ್ಟರ್ ಗಮನ ಸೆಳೆಯುತ್ತಿದೆ.

ಟ್ವಿಟರ್ ನಲ್ಲಿ ಅಭಿನಂದನೆಗಳು: ಡಿ.ಕೆ.ಶಿವಕುಮಾರ್ ಪರ ಆಗಮಿಸಿರುವ ಕಾರ್ಯಕರ್ತರನ್ನು ಹುರುದುಂಬಿಸಲು ಸ್ವತಃ ಡಿ,ಕೆ.ಶಿವಕುಮಾರ್, ಸಹೋದರ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಇತರರು ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದು, ಪ್ರತಿಭಟನಾಕಾರರಿಗೆ ಮೆರವಣೆಗೆಯಲ್ಲಿ ಸಕ್ರಿಯವಾಗಲು ಉತ್ತೇಜಿಸುತ್ತಿದೆ.

ಸಹಸ್ರಾರು ಸಂಖ್ಯೆಯಲ್ಲಿ ವಿಶ್ವ ಒಕ್ಕಲಿಗರ ಒಕ್ಕೂಟದಡಿ  ಜಮಾಯಿಸಿರುವ  ಒಕ್ಕಲಿಗ ಸಮುದಾಯದ ಕಾರ್ಯಕರ್ತರು ನ್ಯಾಷನಲ್ ಮೈದಾನದಿಂದ ನಿಗದಿತ ಪ್ರಮುಖ ರಸ್ತೆಗಳ ಮೂಲಕ’ ರಾಜಭವನ ಚಲೋ’ ನಡೆಸಲಿದ್ದಾರೆ. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರ್ಯಾಯ ಮಾರ್ಗಗಳನ್ನು ಈಗಾಗಲೇ ಸೂಚಿಸಲಾಗಿದೆ. ಪೊಲೀಸ್ ಬಿಗಿಭದ್ರತೆ ಕೈಗೊಂಡಿದೆ.

ಶಾಂತಿಯುತ ಪ್ರತಿಭಟನೆ : ಈ ಮಧ್ಯೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ, ಸ್ವತಃ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಂತೆ ಸಮಾಜದ ಸದಸ್ಯರು ಕಾನೂನಿಗೆ ಗೌರವ ಕೊಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.