ಟಿ.ಎನ್. ಶೇಷನ್‍ರನ್ನು ಮರೆಯುವ ಮುನ್ನ : ಚುನಾವಣಾ ಆಯೋಗದ ಕಾಯಕಲ್ಪ ಹೇಗೆ?

ಒಂದು ಸಾಂವಿಧಾನಿಕ ಸಂಸ್ಥೆ ಹೀಗೆ ಹಲ್ಲು, ಉಗುರು ಕಳೆದುಕೊಂಡಂತೆ ವರ್ತಿಸಿದರೆ ಏನರ್ಥ? ಅದು ತನ್ನ ಸ್ವಾಯತ್ತತೆಯನ್ನು ಆಳುವವರ ಕೈಗೊಪ್ಪಿಸಿ ಅದರ ಸೂತ್ರದ ಗೊಂಬೆಯಂತೆ ವರ್ತಿಸುತ್ತಿರುವುದರ ಸೂಚನೆಯಲ್ಲವೇ? ಇಂತಹ ಸಂಸ್ಥೆಗಳನ್ನು ನೆಚ್ಚಿಕೊಂಡು ಪ್ರಜಾಪ್ರಭುತ್ವವನ್ನು ವಾಸ್ತವಗೊಳಿಸಲು ಹೊರಡುವುದು ತಿರುಕನ ಕನಸಾಗುತ್ತದೆ.

ಟಿ.ಎನ್. ಶೇಷನ್‍ರನ್ನು ಮರೆಯುವ ಮುನ್ನ : ಚುನಾವಣಾ ಆಯೋಗದ ಕಾಯಕಲ್ಪ ಹೇಗೆ?

ಹಿರಿಯ ಪತ್ರಕರ್ತರೊಬ್ಬರು 1991ರಲ್ಲಿ ನಡೆದ ಒಂದು ಘಟನೆಯನ್ನು ತಮ್ಮ ಒಂದು ಲೇಖನದಲ್ಲಿ ಹೀಗೆ ಸ್ಮರಿಸಿದ್ದಾರೆ.

“ಕಾಂಗ್ರೆಸ್ ಪಕ್ಷವು ಚಂದ್ರಶೇಖರ್ ನೇತೃತ್ವದ ಜನತಾಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡು ಪಿ.ವಿ.ನರಸಿಂಹರಾವ್‍ರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣಾ ಕಣಕ್ಕಿಳಿಯಿತು. ನರಸಿಂಹರಾವ್ ಆಂಧ್ರದ ನಂದ್ಯಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಪ್ರಧಾನಿಯ ಕುರ್ಚಿಯನ್ನೇರಲು ಅವರು ಆ ಚುನಾವಣೆಯಲ್ಲಿ ಗೆಲ್ಲಲೇಬೇಕಿತ್ತು. ಸಹಜವಾಗಿಯೇ ಅವರ ಬೆಂಬಲಿಗರು ಚುನಾವಣಾ ನೀತಿ ಸಂಹಿತೆಯನ್ನು ಲೆಕ್ಕಿಸದೆ ಭರದಿಂದ ಎಗ್ಗಿಲ್ಲದೆ ಪ್ರಚಾರಕಾರ್ಯ ಪ್ರಾರಂಭಿಸಿದರು. ಇದು ಚುನಾವಣಾ ಆಯೋಗದ ಗಮನಕ್ಕೆ ಬಂದಿತು. ಆಗ ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು. ಅವರು ನಂದ್ಯಾಲ್ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದವು. ತಕ್ಷಣವೇ ನರಸಿಂಹರಾವ್ ಕಚೇರಿಯಿಂದ ದೆಹಲಿಯ ಪಂಡರಾ ರಸ್ತೆಯಲ್ಲಿದ್ದ ಟಿ.ಎನ್. ಶೇಷನ್ ಮನೆಗೆ ಒಂದು ದೂರವಾಣಿ ಕರೆ ಬಂದಿತು. ನಾನೂ ಅಲ್ಲೇ ಹಾಜರಿದ್ದೆ. ಕರೆ ಮಾಡಿದ ವ್ಯಕ್ತಿ ತಾನು ಪಿ.ವಿ. ನರಸಿಂಹರಾಯರ ಕಾರ್ಯದರ್ಶಿ ಎಂದು ಪರಿಚಯ ಮಾಡಿಕೊಂಡು 'ಸ್ವಲ್ಪ ತಡೆಯಿರಿ ಸಾಹೇಬರಿಗೆ ಕೊಡುತ್ತೇನೆ' ಎಂದ. ಆಗ ಶೇಷನ್ ಹಿಂದೆ ಮುಂದೆ ನೋಡದೆ ರಿಸೀವರನ್ನು ಫೋನ್ ಮೇಲೆ ಕುಕ್ಕಿ ಕೋಪದಿಂದ ಭುಸುಗುಟ್ಟಿದರು. ನನಗೆ ಅವರ ಈ ನಡೆಯನ್ನು ಕಂಡು ಆಘಾತವಾಯಿತು. ನನಗಾದ ಗಾಬರಿಯನ್ನು ಅರ್ಥ ಮಾಡಿಕೊಂಡ ಶೇಷನ್ ನೋಡಿ, ನಾನು ಮುಖ್ಯ ಚುನಾವಣಾ ಆಯುಕ್ತ, ಯಾವುದೇ ಆಡಳಿತ ಪಕ್ಷದ ಸೇವಕನಲ್ಲ ಎಂದು ಕೋಪದಿಂದ ನುಡಿದರು. ಆದರೆ ನರಸಿಂಹರಾವ್ ಸಂಗಡಿಗರು ಮತ್ತೆ ಪ್ರಯತ್ನಿಸಿ ಶೇಷನ್‍ರನ್ನು ಸಂಪರ್ಕಿಸುವಲ್ಲಿ ಸಫಲರಾದರು. ನಂದ್ಯಾಲ್ ಕ್ಷೇತ್ರದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಆಗದಂತೆ ಪ್ರಚಾರ ಕಾರ್ಯ ನಡೆಯುವುದನ್ನು ಖಾತರಿ ಪಡಿಸಿಕೊಂಡ ಮೇಲೆ ಚುನಾವಣೆಯನ್ನು ರದ್ದುಪಡಿಸುವ ತಮ್ಮ ನಿರ್ಧಾರವನ್ನು ಕೈಬಿಟ್ಟರು”.

ಒಬ್ಬ ಐಎಎಸ್ ಅಧಿಕಾರಿಗೆ ಕೇಂದ್ರ ಸಂಪುಟ ಸಚಿವರನ್ನೂ ತರಾಟೆಗೆ ತೆಗೆದುಕೊಳ್ಳುವಷ್ಟು ದಿಟ್ಟತನವಿರುತ್ತದೆ ಎಂಬುದು ಟಿ.ಎನ್. ಶೇಷನ್ ಕಾಲದಲ್ಲಿ ಜನಸಾಮಾನ್ಯರಿಗೂ ಮನವರಿಕೆಯಾಯಿತು. ಸಾರ್ವಜನಿಕ ಸೇವಕರು ಹಣ, ಪದವಿ, ಪ್ರತಿಷ್ಠೆಗಳಿಗಾಗಿ ರಾಜಕಾರಿಣಿಗಳ ಕೈಗೊಂಬೆಗಳಂತೆ ವರ್ತಿಸಿದಾಗಲಷ್ಟೇ ಅವರ ಅಧಿಕಾರ ನಿರ್ವೀರ್ಯವಾಗುವುದು.  

ಇಂತಹ ದಿಟ್ಟ ಅಧಿಕಾರಿ ಮೊನ್ನೆ 10ನೇ ನವೆಂಬರ್ 2019ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಒಬ್ಬ ವ್ಯಕ್ತಿ ತೀರಿಕೊಂಡ ಮೇಲೆ ಅವನ ಸದ್ಗುಣಗಳನ್ನು ನೆನೆಯುವುದು ಶಿಷ್ಟಾಚಾರವಾಗುತ್ತದೆ. ಆದರೆ ಟಿ.ಎನ್. ಶೇಷನ್‍ರನ್ನು ಭಾರತೀಯ ಪ್ರಜೆಗಳು ಬರೀ ಶಿಷ್ಟಾಚಾರಕ್ಕೆ ನೆನೆಯುವುದಿಲ್ಲ. ಪ್ರತಿ ಸಲ ಚುನಾವಣೆ ಘೋಷಣೆಯಾದಾಗಲೂ, ದೇಶದಲ್ಲಿ ಯಾವುದೇ ಭ್ರಷ್ಟಾಚಾರ, ಅಕ್ರಮಗಳು ನಡೆದಾಗಲೂ ನಮ್ಮ ಜನ ಟಿ.ಎನ್. ಶೇಷನ್‍ರನ್ನು ಹಾಗೆಯೇ ಜಿ.ಆರ್. ಖೈರ್‍ನಾರ್, ಅಣ್ಣಾ ಹಜಾರೆ ಮುಂತಾದವರನ್ನು ನೆನೆಯುತ್ತಲೇ ಇರುತ್ತಾರೆ.

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷೀದ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದರು. ಮುಸ್ಲಿಂ ಪ್ರಾಬಲ್ಯದ ಫಾರುಕಾಬಾದ್‍ನಲ್ಲಿ ಭಾಷಣ ಮಾಡುತ್ತ ಮುಸ್ಲಿಂ ಮೀಸಲಾತಿಯಲ್ಲಿ ಶೇ. 9ರಷ್ಟು ಹೆಚ್ಚುವರಿ ಕೋಟಾ ನೀಡುವುದಾಗಿ ಆಶ್ವಾಸನೆ ನೀಡಿದರು. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಗೊತ್ತಿದ್ದೂ ಆಯೋಗ ಮಾತ್ರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿರೋಧ ಪಕ್ಷಗಳು ಆಕ್ಷೇಪದ ಮೇರೆಗೆ ಅವರಿಗೆ ಎಚ್ಚರಿಕೆಯ ಮಾತು ಹೇಳಿ ಸುಮ್ಮನಾಯಿತು.  

ಕಳೆದ ಲೋಕಸಭಾ ಚುನಾವಣೆ ಸನ್ನಿಹಿತವಾದಾಗಲೂ ಪ್ರಧಾನಿ ಮೋದಿ ಉಪಗ್ರಹ ನಿಗ್ರಹ ಕ್ಷಿಪಣಿಯ ಪ್ರಯೋಗವನ್ನು ವರ್ಣಿಸಿ ಭಾಷಣ ಮಾಡಿದ್ದರು. ನೀತಿ ಸಂಹಿತೆ ಜಾರಿಯಲ್ಲಿರುವಾಗ ಹೀಗೆ ಮಾತನಾಡಿದರೆ ಭಾರತದ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಸಾಧನೆಯು ಒಂದು ರಾಜಕೀಯ ಪಕ್ಷದ ಸಾಧನೆಯಾಗಿದೆ ಎಂಬ ತಪ್ಪು ಸಂದೇಶ ಮತದಾರನಿಗೆ ಹೋಗುವ ಅಪಾಯವಿತ್ತು. ಹಾಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾಲದೆಂದು ನೀತಿ ಸಂಹಿತೆ ಜಾರಿಯಲ್ಲಿದ್ದಾಗ 'ನಮೋ ಟಿವಿ' ಎಂಬ ಹೊಸ ಟಿವಿ ಚಾನೆಲ್‍ಗೆ ಚಾಲನೆ ನೀಡಲಾಯಿತು. ಇದಕ್ಕೂ ಚುನಾವಣಾ ಆಯೋಗ ಜಾಣಕುರುಡುತನ ತೋರಿಸಿತ್ತು. ವಿರೋಧ ಪಕ್ಷಗಳು ಇದನ್ನು ಪ್ರಶ್ನಿಸಿ ಆಯೋಗಕ್ಕೆ ಪತ್ರ ಬರೆದಾಗಲೂ ಆಯೋಗ ನಿದ್ರೆಯಿಂದೇಳಲಿಲ್ಲ, ಎದ್ದಂತೆ ನಟಿಸಿತು ಅಷ್ಟೇ. ಚುನಾವಣೆ ಸನ್ನಿಹಿತವಾಗಿರುವ ಈ ಸಮಯದಲ್ಲಿ ಇಂಥದೊಂದು ಚಾನೆಲ್ ಪ್ರಾರಂಭಿಸುವುದು ಸೂಕ್ತವೇ ಎಂದು ಕೇಳಿ ಚುನಾವಣಾ ಆಯುಕ್ತರು ಮೋದಿ ಸರ್ಕಾರಕ್ಕೇ ಪತ್ರ ಬರೆದು ವಿವರಣೆ ಕೇಳಿದ್ದು ಹಾಸ್ಯಾಸ್ಪದ. ಸಹಜವಾಗಿಯೇ ಆಡಳಿತ ಪಕ್ಷವು ತನಗೆ ಅನುಕೂಲವಾಗುವಂತೆ ವರದಿ ಬರೆಯಿಸಿದ್ದು ಈಗ ಇತಿಹಾಸ.

ಚುನಾವಣಾ ಆಯೋಗ ತನ್ನ ಸುಷುಪ್ತಾವಸ್ಥೆಯಿಂದ ಏಳದಿದ್ದ ಮೇಲೆ ಅದನ್ನು ಎಚ್ಚರಿಸಲು ಸರ್ವೋಚ್ಚ ನ್ಯಾಯಾಲಯವೇ ಬರಬೇಕಾಯಿತು. ಮಾಯಾವತಿ, ಯೋಗಿ ಆದಿತ್ಯನಾಥ್ ಮುಂತಾದವರು ದ್ವೇಷದ ಭಾಷಣ ಮಾಡಲಾಂಭಿಸಿದಾಗ ಇವರನ್ನೆಲ್ಲ ಹದ್ದುಬಸ್ತಿನಲ್ಲಿಡಬಾರದೇ ಎಂದು ಸರ್ವೋಚ್ಚ ನ್ಯಾಯಾಲಯ ಕಿವಿ ಹಿಂಡಿತು. ಒಂದು ಸಾಂವಿಧಾನಿಕ ಸಂಸ್ಥೆ ಹೀಗೆ ಹಲ್ಲು, ಉಗುರು ಕಳೆದುಕೊಂಡಂತೆ ವರ್ತಿಸಿದರೆ ಏನರ್ಥ? ಅದು ತನ್ನ ಸ್ವಾಯತ್ತತೆಯನ್ನು ಆಳುವವರ ಕೈಗೊಪ್ಪಿಸಿ ಅದರ ಸೂತ್ರದ ಗೊಂಬೆಯಂತೆ ವರ್ತಿಸುತ್ತಿರುವುದರ ಸೂಚನೆಯಲ್ಲವೇ? ಇಂತಹ ಸಂಸ್ಥೆಗಳನ್ನು ನೆಚ್ಚಿಕೊಂಡು ಪ್ರಜಾಪ್ರಭುತ್ವವನ್ನು ವಾಸ್ತವಗೊಳಿಸಲು ಹೊರಡುವುದು ತಿರುಕನ ಕನಸಾಗುತ್ತದೆ. ಇವು ಸಮರ್ಥವಾಗಿ ತಮ್ಮ ಕರ್ತವ್ಯ ನಿರ್ವಹಿಸುವುದರಿಂದ ಸಂವಿಧಾನದತ್ತ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುತ್ತದೆ. ಒಂದು ವೇಳೆ ಕರ್ತವ್ಯ ನಿರ್ವಹಿಸಲು ವಿಫಲವಾದರೆ ಅದು ಆ ಸಂಸ್ಥೆಯ ಲೋಪವಲ್ಲ, ಖಂಡಿತವಾಗಿಯೂ ಆಡಳಿತ ಯಂತ್ರದ ಸಮಸ್ಯೆಯಲ್ಲ; ಆ ಆಡಳಿತ ಯಂತ್ರವನ್ನು ನಡೆಸುತ್ತಿರುವ ವ್ಯಕ್ತಿಗಳಲ್ಲಿ ಸಮಸ್ಯೆಯಿದೆ, ದೌರ್ಬಲ್ಯವಿದೆ ಎಂದು ಭಾವಿಸಬೇಕಾಗುತ್ತದೆ.

ಆಳುವ ಪಕ್ಷದವರೇ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸುವ ಪಾರುಪತ್ಯೆ ಇಟ್ಟುಕೊಂಡಿರುವವರೆಗೂ ಅಂತಹ ಸಂಸ್ಥೆಗಳಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗದು. ಈ ಸಂಬಂಧವಾಗಿ 1975ರ ತಾರ್ಕುಂಡೆ ಸಮಿತಿ ಮತ್ತು 1990ರ ಗೋಸ್ವಾಮಿ ಸಮಿತಿ ವರದಿಗಳನ್ನು ಸಲ್ಲಿಸಿವೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡನ್ನೂ ಒಳಗೊಂಡ ಒಂದು ಸಂಸದೀಯ ಸಮಿತಿ ಚುನಾವಣಾ ಆಯುಕ್ತರನ್ನು ನೇಮಿಸತಕ್ಕದ್ದು ಎಂದು ಶಿಫಾರಸು ಮಾಡಿವೆ. ಈ ಕ್ರಮವನ್ನೇ ದಕ್ಷಿಣ ಆಫ್ರಿಕಾ, ಅಮೆರಿಕಾ ಮುಂತಾದ ದೇಶಗಳು ಅನುಸರಿಸುತ್ತಿವೆ ಎಂದು ಸಹ ವರದಿಗಳು ಹೇಳಿವೆ. ಆದರೆ ಯಾವ ಸರ್ಕಾರ ಬಂದರೂ ಇಂತಹ ವರದಿ, ಶಿಫಾರಸಿನ ಕಡತಗಳ ಮೇಲೆ ಸದಾ ಒಂದಿಂಚು ಧೂಳು ಕೂತಿರುತ್ತದೆ. ಏಕೆಂದರೆ ಎಲ್ಲ ಸರ್ಕಾರಗಳೂ ಕಾರ್ಯಾಂಗವನ್ನು - ಸಾಧ್ಯವಾದರೆ ನ್ಯಾಯಾಂಗವನ್ನೂ ಸಹ - ತನ್ನ ಹಿತಕ್ಕೆ ದುಡಿಸಿಕೊಳ್ಳುವ ದಾರಿಯನ್ನು ಹುಡುಕುತ್ತಿರುತ್ತದೆ. ವ್ಯವಸ್ಥೆ ಸಮರ್ಥವಾಗಿಯೇ ಇದೆ. ಆದರೆ ಅದನ್ನು ನಡೆಸುತ್ತಿರುವ ಜನ ಅದನ್ನು ಸಮರ್ಥವಾಗಿ ಬಳಕೆ ಮಾಡುತ್ತಿಲ್ಲ. ಅಂತಹ ವ್ಯಕ್ತಿಗಳ ಗೈರುಹಾಜರಿಯಲ್ಲಿ ಟಿ.ಎನ್. ಶೇಷನ್‍ರಂತಹವರು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತಾರೆ, ಆ ನೆನಪು ಅವರಿಗೆ ಸಲ್ಲಿಸುವ ಶಿಷ್ಟಾಚಾರವಲ್ಲ, ನಮ್ಮ ಯೋಗಕ್ಷೇಮಕ್ಕಾಗಿಯೂ ಆ ನೆನಪು ಅತ್ಯಗತ್ಯ. ವ್ಯಕ್ತಿತ್ವ ನಿರಸನದಿಂದ ಅಧ್ಯಾತ್ಮ ಸಾಕ್ಷಾತ್ಕಾರವಾಗುವಂತೆ, ವ್ಯಕ್ತಿನಿರಸನದಿಂದಲಷ್ಟೇ ಪ್ರಜಾಪ್ರಭುತ್ವ ಸಾಕಾರವಾಗುತ್ತದೆ.