'ರಾಜೇಂದ್ರನಾಮೆ' ಎಂಬ ಟಿಪ್ಪು ವಿರೋಧಿ ದಾಖಲೆ..!!

ಟಿಪ್ಪುವನ್ನು ಒಬ್ಬ ಮತಾಂಧನಾಗಿ, ಮತಾಂತರಿಸುವವನಾಗಿ, ಸತತ ನರಹತ್ಯೆಗಳನ್ನು ಮಾಡಿದವನಾಗಿ, ದೇವಾಲಯಗಳನ್ನು ಧ್ವಂಸ ಮಾಡುವವನಾಗಿಯೇ ನೋಡೋಣ..! ಆದರೆ ಇದಕ್ಕೆ ದಾಖಲೆಗಳು ಬೇಕಲ್ಲವೆ? ಸರಿ,  'ಪಕ್ಕಾ' ದಾಖಲೆ ನಮಗೆ ಲಭ್ಯವಿರುವುದು ಟಿಪ್ಪುವನ್ನು ನಖಶಿಕಾಂತ ವಿರೋಧಿಸುವ ಆಗಿನ ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಬರೆಯಿಸಿದ "ರಾಜೇಂದ್ರನಾಮೆ" ಯನ್ನೇ ಆಧಾರವಾಗಿಟ್ಟುಕೊಂಡೇ ನೋಡೋಣ..?!

'ರಾಜೇಂದ್ರನಾಮೆ' ಎಂಬ ಟಿಪ್ಪು ವಿರೋಧಿ ದಾಖಲೆ..!!

ಹೈದರ್-ಟಿಪ್ಪು ಇಬ್ಬರೂ ಸೇರಿ ಬ್ರಿಟೀಶರ ವಿರುದ್ದ ಮಾಡಿದ ನಾಲ್ಕು ಯುದ್ದಗಳು, ಟಿಪ್ಪು ತನ್ನ ತಾಯ್ನಾಡಿಗಾಗಿ ತನ್ನ ಮಕ್ಕಳನ್ನೇ ಒತ್ತೇ ಇಟ್ಟಿದ್ದು, ಯುದ್ದಭೂಮಿಯಲ್ಲಿ ವೀರಯೋಧನಾಗಿ ಹೋರಾಡುತ್ತಲೇ ಪ್ರಾಣತ್ಯಾಗ ಮಾಡಿದ್ದು, ಬ್ರಿಟೀಶರಿಗೆ ಸಿಂಹಸ್ವಪ್ನನಾಗಿದ್ದುಹಿಂದೂ ದೇವಾಲಯಗಳನ್ನು, ಮಠಗಳನ್ನು ಶತೃಗಳಿಂದ ಕಾಪಾಡಿ ಜೀರ್ಣೋದ್ದಾರ ಮಾಡಿದ್ದು, ಮಠ, ದೇವಾಲಯಗಳಿಗೆ ಕಾಣಿಕೆಗಳನ್ನು ಅರ್ಪಿಸಿದ್ದೇ ಮುಂತಾದುವನ್ನು ಬಿಟ್ಟುಬಿಡೋಣ..! ಅದೇ ರೀತಿ ರೈತರಿಗಾಗಿ land revenue regulations ತಂದಿದ್ದು, ಸಿವಿಲ್ ಅಡ್ಮಿನಿಸ್ಟ್ರೇಷನ್ ಅನ್ನು ನಿಯಂತ್ರಣಗೊಳಿಸಲು ಮ್ಯಾನ್ಯುಯಲ್ ಗೈಡ್ ತಂದಿದ್ದು, ಕಂದಾಯ ಅಧಿಕಾರಿಗಳು ರೈತರನ್ನು, ಬಡವರನ್ನೂ ಯಾವ ಕಾರಣಕ್ಕೂ ಕಾಡದೇ ಅವರ ಕೆಲಸ ಮಾಡಿಕೊಡಬೇಕೆಂದು ಪ್ರತಿಜ್ಞೆ ಸ್ವೀಕರಿಸಬೇಕೆಂದು ನಿಯಮ ಮಾಡಿದ್ದನ್ನು, ಬಡ ಕೃಷಿಕರಿಗಾಗಿ ಜಮೀನ್ದಾರಿ ಮತ್ತು ಜಾಗೀರ್ದಾರಿಗಳ ಪದ್ದತಿ ನಿರ್ಮೂಲನೆ ಮಾಡಿದ್ದನ್ನು, ಜಾತಿಮತಗಳ ತೊರೆದು ಯಾರು ಉಳುತ್ತಾನೋ ಅವನೇ ಭೂಮಿಯ ಒಡೆಯ ಎಂಬ ಕಾಯಿದೆ ತಂದಿದ್ದು, ಮಠ ಮತ್ತು ದೇವಾಲಯಗಳ ಹೆಸರಲ್ಲಿದ್ದ ಕೃಷಿಭೂಮಿಯನ್ನು ರೈತರಿಗೆ ಕೊಡಿಸಿದ್ದು, ಮೈಸೂರು ರೆವಿನ್ಯೂ ಪಾಲಿಸಿ ಪ್ರಕಾರ ಬೇಡ, ಕುರುಬ, ಈಡಿಗ, ಒಕ್ಕಲಿಗ ಮತ್ತು ಲಿಂಗಾಯಿತರಿಗೆ ತನ್ನ ಸೇನೆಯಲ್ಲಿ ಉತ್ತಮ ಹುದ್ದೆಗಳನ್ನು ನೀಡಿದ್ದು, ಬೇಡ ಜನಾಂದವರಿಗೆ ಭೂಮಿ ಹಂಚಿದ್ದು, ಅಸಂಖ್ಯಾತ ಎಕರೆ ಭೂಮಿಯನ್ನು ಕಠಿಣ ದೈಹಿಕ ಶ್ರಮದಿಂದ ದುಡಿಯುವ ಪರಿಯ, ಬಲೂವನ್, ಶಿಕ್ಕಲಿಗ, ತೋಟಿ, ನೀರಗಂಟಿಗಳಿಗೆ ಹಂಚಿ ವಿಶೇಷ ಅನುದಾನ ನೀಡಿದ್ದನ್ನು, ಹೊಲೆಯರಿಗೆ ಮತ್ತು ಮಾದಿಗರಿಗೆ ಇತಿಹಾಸದಲ್ಲೇ ಮೊದಲಬಾರಿಗೆ ಭೂಮಿಯ ಹಕ್ಕನ್ನು ನೀಡಿದ್ದು, ಪಾಳೇಗಾರರು, ವೈದಿಕ ಬ್ರಾಹ್ಮಣರು(ಕೃಷಿಕ ಬ್ರಾಹ್ಮಣರನ್ನು ಹೊರತುಪಡಿಸಿ) ತಲೆತಲಾಂತರಗಳಿಂದ ಶಾನುಭೋಗರು, ಪಟೇಲರು ಇಟ್ಟುಕೊಂಡಿದ್ದ ಸಹಸ್ರಾರು ಎಕರೆ ಭೂಮಿಯನ್ನು ತನ್ನ ಸೇನೆಯಲ್ಲಿ ಕೆಲಸ ಮಾಡುವ ದಲಿತರು, ಹಿಂದುಳಿದವರು, ಒಕ್ಕಲಿಗರು, ಲಿಂಗಾಯತರೇ ಮುಂತಾದ ಕೃಷಿ ಆಧಾರಿತ ಕುಟುಂಬಗಳಿಗೆ ನೀಡಿದ್ದು, ರೇಷ್ಮೆ ತಂದಿದ್ದು, ಹೊಸಹೊಸ ತಳಿ ಹಣ್ಣು, ತರಕಾರಿ, ಧಾನ್ಯ, ಹೂವು ಮುಂತಾದ ಮರಗಿಡಗಳನ್ನು, ಬೀಜಗಳನ್ನು ತಂದಿದ್ದು, ಕನ್ನಂಬಾಡಿ ಕಟ್ಟೆಗೆ ನೀಲಿನಕಾಶೆ ಹಾಕಿದ್ದೇ ಮುಂತಾದ ಅಸಂಖ್ಯಾತ ವಿಷಯಗಳನ್ನೂ ಕೂಡ ಬಿಟ್ಟು ಬಿಡೋಣ..!?

ಟಿಪ್ಪುವನ್ನು ಒಬ್ಬ ಮತಾಂಧನಾಗಿ, ಮತಾಂತರಿಸುವವನಾಗಿ, ಸತತ ನರಹತ್ಯೆಗಳನ್ನು ಮಾಡಿದವನಾಗಿ, ದೇವಾಲಯಗಳನ್ನು ಧ್ವಂಸ ಮಾಡುವವನಾಗಿಯೇ ನೋಡೋಣ..! ಆದರೆ ಇದಕ್ಕೆ ದಾಖಲೆಗಳು ಬೇಕಲ್ಲವೆ? ಸರಿ,  'ಪಕ್ಕಾ' ದಾಖಲೆ ನಮಗೆ ಲಭ್ಯವಿರುವುದು ಟಿಪ್ಪುವನ್ನು ನಖಶಿಕಾಂತ ವಿರೋಧಿಸುವ ಆಗಿನ ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಬರೆಯಿಸಿದ "ರಾಜೇಂದ್ರನಾಮೆ" ಯನ್ನೇ ಆಧಾರವಾಗಿಟ್ಟುಕೊಂಡೇ ನೋಡೋಣ..?!

ಈಚೆಗಷ್ಟೇ(2019) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ, ಇತಿಹಾಸದ ಸಂಶೋಧಕರು ಹಾಗೂ ಹಿರಿಯ ಶ್ರೇಣಿಯ ಪ್ರೊಫೆಸರ್ ಡಾ.ವಿಜಯ ಪೂಣಚ್ಚ ತಂಬಂಡ ರವರು ಸಂಪಾದಿಸಿ, ಪ್ರಸ್ತಾವನೆ ಮತ್ತು ಟಿಪ್ಪಣಿಗಳನ್ನು ಬರೆದಿರುವ "ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಅವರು ಬರೆಯಿಸಿದ ರಾಜೇಂದ್ರನಾಮೆ ಮರು ಓದು" ಕೃತಿಯಲ್ಲಿನ ಮುಖ್ಯಾಂಶಗಳನ್ನು ನೋಡೋಣ. ಟಿಪ್ಪುವಿನ ಟೀಕಾಕಾರರು ಈಗ ಮತ್ತೆ ಮತ್ತೆ ಹೇಳುತ್ತಿರುವುದು ಮತ್ತು ಇಂದಿನ ಟಿಪ್ಪು ವಿರೋಧಕ್ಕೆ ಮುಖ್ಯ ಕಾರಣವಾಗಿರುವುದು ಟಿಪ್ಪು ಕೊಡಗಿನಲ್ಲಿ ಮಾಡಿದ ಮತಾಂತರ ಮತ್ತು ನರಮೇಧದ ಬಗ್ಗೆ, ಆದ್ದರಿಂದ ಕೊಡಗಿಗೇ ಸಂಬಂಧಿಸಿದ 'ರಾಜೇಂದ್ರನಾಮೆ'ಯನ್ನೇ ದಾಖಲೆಯಾಗಿ ಉದ್ಧರಿಸುವುದು ಇಲ್ಲಿ ಹೆಚ್ಚು ಪ್ರಸ್ತುತ.

ಇದು ಯಾಕೆ ಪ್ರಸ್ತುತ ಎಂದರೆ 'ರಾಜೇಂದ್ರನಾಮೆ'ಯುದ್ದಕ್ಕೂ ಕೊಡಗಿನವೀರರಾಜನು ತನ್ನ ಆಜನ್ಮ ವೈರಿಯಾಗಿದ್ದಟಿಪ್ಪುಸುಲ್ತಾನನೊಂದಿಗೆ ಹೊಂದಿದ್ದ ಸಂಬಂಧಗಳನ್ನು ಭಾವುಕನಾಗಿ ವಿವರಿಸಿದ್ದಾನೆ. ಟಿಪ್ಪುವಿನಪತನಕ್ಕಾಗಿಯೇ ವೀರರಾಜನು ಬ್ರಿಟೀಶರೊಂದಿಗೆ ಗಾಢವಾದ ಸಂಬಂಧವನ್ನು ಉಳಿಸಿಕೊಳ್ಳಲು ಪಟ್ಟ ಪಾಡು ರಾಜೇಂದ್ರನಾಮೆಯಲ್ಲಿ ಅಡಕವಾಗಿದೆ.

ಇಷ್ಟಕ್ಕೂ ರಾಜೇಂದ್ರನಾಮೆಯ  ಹಿನ್ನೆಲೆಯೇನು?

ಡಾ.ವಿಜಯ್ ಪೂಣಚ್ಚರವರು ಹೇಳುವಂತೆ "ಕೊಡಗಿನ ಚರಿತ್ರೆ ಕುರಿತಂತೆ ಕನ್ನಡದಲ್ಲಿ ಪ್ರಕಟವಾದ ಆದ್ಯ ಗ್ರಂಥ 'ರಾಜೇಂದ್ರನಾಮೆ'. ಕೊಡಗಿನ ಅರಸನಾಗಿದ್ದ ವೀರರಾಜನು 1807 ಹೊತ್ತಿಗೆ ಕೃತಿಯನ್ನು ಬರೆಯಿಸುವ ಕೆಲಸ ಪೂರ್ಣಗೊಳಿಸಿದ. ಕೊಡಗಿನ ಅರಸೊತ್ತಿಗೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಜನರಲ್ ರಾಬರ್ಟ್ ಅಬರ್ಕ್ರಾಂಬಿಯು 1808 ರಲ್ಲಿ ಕೃತಿಯನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ. .ಗು.ಹಳಕಟ್ಟಿ ಅವರ ಶಿವಾನುಭವ ಗ್ರಂಥಮಾಲೆಯ ಸಂಪುಟಗಳ ಜತೆ ಬಿ.ರಾಮರಾಯರು ರಾಜೇಂದ್ರನಾಮೆಯನ್ನು 1943ರಲ್ಲಿ ಪ್ರಕಟಿಸಿದರು..." ಮುಂತಾಗಿ ಇದರ ಹಿನ್ನೆಲೆಯನ್ನು ತಿಳಿಸುತ್ತಾರೆ

ಟಿಪ್ಪುವಿನಮೈಸೂರು ಸೇನೆ ಮತ್ತು ಕೊಡಗಿನ ವೀರರಾಜನ  ಗೆರಿಲ್ಲಾ ಪಡೆಯ ನಡುವೆ ನಡೆಯುವ ಸಂಘರ್ಷದ ವಿವರಗಳನ್ನು ಜನಸಾಮಾನ್ಯರ ಇತಿಹಾಸ ಬರೆದ, ಕ್ರಾಂತಿಕಾರಿ ಸಾಮಾಜಿಕ ಕಾರ್ಯಕರ್ತ "ಸಾಕಿ"(ಸಾಕೇತ್ ರಾಜನ್)ರವರು ತಮ್ಮ "Making history" (karnataka people and their past) ಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅದನ್ನು ಹೊರತುಪಡಿಸಿ ನೋಡಿದರೆ ರಾಜೇಂದ್ರನಾಮೆಯಲ್ಲಿ ಟಿಪ್ಪು ಮತ್ತು ಕೊಡಗಿನರಾಜ ವೀರರಾಜೇಂದ್ರ ನಡುವಿನ ನಿರಂತರ ಸಂಘರ್ಷದ ವಿವಿಧ ಮುಖಗಳನ್ನು ಪರಿಚಯಿಸುತ್ತದೆ, ಅದರೊಂದಿಗೆ 'ಶತೃವಿನ ಶತೃ ಮಿತ್ರ' ಎನ್ನುವಂತೆ ಕೊಡಗು ದೇಶ ಮತ್ತು ಇಂಗ್ಲಿಷ್ ಸರ್ಕಾರದ ಅನ್ಯೋನ್ಯತೆ "ಸೂರ್ಯ ಚಂದ್ರರಿರುವವರೆಗೂ" ಉಳಿಯುತ್ತದೆ ಎಂದು ದಾಖಲಾಗಿದೆ! ಮಧ್ಯೆ ತನ್ನ ಆಜನ್ಮ ಶತ್ರು ಟಿಪ್ಪುವನ್ನು ಕೆಲವು ವಿಷಯಗಳಲ್ಲಿ ರಾಜೇಂದ್ರನಾಮೆಯು ಪ್ರಶಂಸಿಯೂ ಬಿಡುತ್ತದೆ!

ಈಗ ಟಿಪ್ಪುವಿನ ವಿರುದ್ಧ ಕೊಡಗಿನ ಮತಾಂತರ ಮತ್ತು ನರಮೇಧವನ್ನು ಕುರಿತು ಮಾತನಾಡುತ್ತಿರುವುದು ರಾಜೇಂದ್ರನಾಮೆಯ ಹಿನ್ನೆಲೆಯಲ್ಲಿಯೇ ಅಂದುಕೊಂಡಿದ್ದೇನೆ, ಆದರೆ ಅವರು ಯಾರೂ ಇದನ್ನು ತಿರುವಿ ಕೂಡ ನೋಡದಿರುವುದು ಅವರು ದಿಕ್ಕು ತಪ್ಪಿರುವುದಕ್ಕೆ 'ಮಿಸ್ಕೋಟ್' ಮಾಡುತ್ತಿರುವುದಕ್ಕೆ ಕಾರಣವಾಗಿದೆ!? ಯಾಕೆಂದರೆ ರಾಜೇಂದ್ರನಾಮೆಯಲ್ಲಿ ಟಿಪ್ಪು ವಿರುದ್ದ ಇರುವ ಸಂಗತಿಗಳೇ ಅನೇಕ ಸಲ ಒಂದಕ್ಕೊಂದು ಢಿಕ್ಕಿ ಹೊಡೆದುಕೊಳ್ಳುತ್ತವೆ! ವೈರುಧ್ಯಗಳಿಂದ ಕೂಡಿವೆ ಎಂಬುದನ್ನು ಇತಿಹಾಸಕಾರರು ಎತ್ತಿ ಹಿಡಿದಿದ್ದಾರೆ. ಇತಿಹಾಸದ ವಿದ್ಯಾರ್ಥಿ ಅಲ್ಲದ, ವಿಜ್ಞಾನ ಮತ್ತು ಕಾನೂನು ವಿದ್ಯಾರ್ಥಿಯಾದ ನನ್ನಂತವನಿಗೂ ಇತಿಹಾಸದ ವೈರುಧ್ಯಗಳು ಢಾಳಾಗಿ ಕಾಣುತ್ತವೆ!

ಉದಾಹರಣೆಗೆ ಟಿಪ್ಪುವಿನ ಮತಾಂತರದ ಬಗ್ಗೆ ದಾಖಲಿಸುವ ರಾಜೇಂದ್ರನಾಮೆಯಲ್ಲಿ ವೀರರಾಜನ ಸಹೋದರಿಯರಾದ ದೇವಮ್ಮಾಜಿ(ಮೆಹ್ತಾಬ್) ಮತ್ತು ನೀಲಮ್ಮಾಜಿ(ಅಫ್ತಾಭ್)ರನ್ನು ಟಿಪ್ಪು ಮದುವೆಯಾಗಿರುತ್ತಾನೆ. ಟಿಪ್ಪುವಿನಮರಣಾನಂತರ ಇಬ್ಬರೂ ಹೆಂಡತಿಯರು ನಿಧನರಾಗುತ್ತಾರೆ. ಇವರನ್ನು ಇಸ್ಲಾಂ ಧರ್ಮದ ವಿಧಿಗಳಂತೆ ವೀರರಾಜನೇ ಧಫನ್ ಮಾಡುತ್ತಾನೆ ಆದರೆ ಇದನ್ನು ತಾನು ಬರೆಸಿದ ರಾಜೇಂದ್ರನಾಮೆಯಲ್ಲಿ ದಾಖಲಿಸುವುದಿಲ್ಲ!?

ಹಾಗೆ ನೋಡಿದರೆ ಟಿಪ್ಪುವಿಗಿಂತಲೂ ಮುಂಚಿತವಾಗಿಯೇ ಕೊಡವ ರಾಜರ ಮತ್ತು ಮೈಸೂರ ಒಡೆಯರ ನಡುವಿನ ಸಂಘರ್ಷ ಅತ್ಯಂತ ಭೀಕರವಾಗಿತ್ತುಆದರೂ ಕೊಡವರ ಸಿಟ್ಟು ಕೇವಲ ಟಿಪ್ಪುಗೆ ಮಾತ್ರ ಸೀಮಿತವಾದುದು ಆಶ್ಚರ್ಯ! ಟಿಪ್ಪುವಿನ ಅಪ್ಪ ಹೈದರನ ಜತೆ ಕೊಡಗು ರಾಜರು ಅನ್ಯೋನ್ಯದಿಂದ ಇದ್ದ ದಾಖಲೆಗಳೂ ಇವೆನಿರ್ಣಾಯಕವಾಗಿದ್ದ ಮೈಸೂರು ಯುದ್ದದಲ್ಲಿ ಕೊಡಗಿನ ಸೈನ್ಯ, ಕಂಪನಿ ಸೈನ್ಯಕ್ಕೆ ಪೂರಕ ಸಾಮಗ್ರಿಗಳನ್ನು ಒದಗಿಸುವ ಕೆಲಸಕ್ಕೆ ಮೀಸಲಾಗಿತ್ತು. ಟಿಪ್ಪುವಿನಆಳ್ವಿಕೆಯಲ್ಲಿನ ಮೈಸೂರು ಗಡಿ ಪ್ರದೇಶಗಳಲ್ಲಿ, ಕರಾವಳಿ ಪ್ರದೇಶಗಳಲ್ಲಿ ಕೊಡಗು ಜನರನ್ನು ಹಿಂಸಿಸಿ, ಅಲ್ಲಿನ ಗಂಡಸರನ್ನು ಕೊಂದು, ಮಹಿಳೆಯರನ್ನು ಮತ್ತು ಮಕ್ಕಳನ್ನು ಹತೋಟಿಗೆ ತೆಗೆದುಕೊಂಡು, ಅವರ ನಗನಾಣ್ಯಗಳನ್ನು, ಸರಕು ಸರಂಜಾಮುಗಳನ್ನು ದೋಚಿದ್ದ ಘಟನೆಗಳಿದ್ದರೂ ಸಹ ಟಿಪ್ಪುವಿನ ಬಗ್ಗೆ ಮಾತ್ರ ರೋಷವಿತ್ತು ಯಾಕೆ?!  ಟಿಪ್ಪು ಮಾಡಿದ ಮತಾಂತರದ ರಾಜಕೀಯಕ್ಕೆ ಮಾಡಿದ ಪ್ರತೀಕಾರವಿದು ಎಂಬ ಸರಳ ನಿಲುವು ರಾಜೇಂದ್ರನಾಮೆಯಲ್ಲಿದೆ. ಇದೇ ರೀತಿಯ ಶತ್ರುತ್ವದ ಭಾವನೆ ಕೇರಳ ಪ್ರದೇಶದಲ್ಲಿರುವವರ ಬಗ್ಗೆಯೂ ಇತ್ತು. ಎಲ್ಲದರೊಂದಿಗೆ ಪಿರಿಯಾಪಟ್ಟಣ ಮತ್ತು ಕೊಡಗಿನ ನಡುವಿನ ಸಂಬಂಧಗಳನ್ನು ಕೂಡ ಫ್ರಾನ್ಸಿಸ್ ಬುಕನನ್ ದಾಖಲಿಸುತ್ತಾರೆ.

ಡಾ. ವಿಜಯ್ ಪೂಣಚ್ಚ ಅವರು ದಾಖಲಿಸುವಂತೆ.. ರಾಜೇಂದ್ರನಾಮೆ ಯುದ್ದಕ್ಕೂ ಟಿಪ್ಪುವಿನಬಗ್ಗೆ ತಿರಸ್ಕಾರ, ಹಗೆತನ ಹೊಂದಿದ್ದ ವೀರರಾಜನು ಟಿಪ್ಪುವಿನ ಮರಣಾನಂತರ ಮೈಸೂರು - ಕೊಡಗು ಪ್ರದೇಶವನ್ನು ವಿಭಾಗಿಸಿ ಅಂತಿಮಗೊಳಿಸುವ ಸಂದರ್ಭದಲ್ಲಿ ಮೈಸೂರು ಒಡೆಯರಿಂದಾಗುತ್ತಿದ್ದ ಹಿಂಸೆಯನ್ನು ಇಂಗ್ಲಿಷರಿಗೆ ವಿವರಿಸಿರುವುದು ಕುತೂಹಲಕಾರಿಯಾಗಿದೆ. "ಟಿಪ್ಪು ಸುಲ್ತಾನನು 'ಮುಸ್ಲಮಾನನಾದರೂ' ಇಷ್ಟು ಹಗೆತನ ಸಾಧಿಸದೆ ತಾನು ಬದುಕಿರುವವರೆಗೂ 'ಸರಹದ್ದಿನ' ಬಗ್ಗೆ ತಕರಾರು ಮಾಡಿರಲಿಲ್ಲ.." ಎನ್ನುತ್ತಾನೆ ವೀರರಾಜ. ಆದರೆ ಈಗ ನಮ್ಮ ಹಿಂದೂ ಜಾತಿ ದೋಸ್ತುದಾರರು ಮೈಸೂರು ಕೃಷ್ಣರಾಜ ಸಾಹೇಬರವರು ಜಬರ್ದಸ್ತಿನಿಂದ ಕೊಡಗಿನಸೀಮೆಯನ್ನು ತನ್ನದೆಂದು ವಾದಿಸುತಿದ್ದ ಪರಿಯ ಬಗ್ಗೆ ವಿಷಾದದಿಂದ ಬರೆದಿದ್ದಾನೆ

ಕೊಡವರನ್ನು ಟಿಪ್ಪು ಸುಲ್ತಾನ್ ಸುಲಿದ, ಕೊಂದ, ಅವರ ಮೇಲೆ ಅಪಾರ ದೌರ್ಜನ್ಯ ಮಾಡಿದ ಎಂದು ಇಂದಿನ ಮೆಳ್ಳುಗಣ್ಣಿನ "ಇತಿಹಾಸಕೋರರು" ಹೇಳುತಿದ್ದಾರೆ! ಆದರೆ ಕೊಡವರ ಅಧಿಕೃತ ಧಾಖಲೆ ಎನಿಸಿಕೊಂಡ ರಾಜೇಂದ್ರನಾಮೆಯ ಯಾವ ಭಾಗದಲ್ಲೂ ಕೊಡಗು ಜನರು ಸೋತ,‌ ಸತ್ತ, ಅನಾಥವಾದ ವಿವರಗಳು ಸಿಗುವುದಿಲ್ಲ!? ರಾಜೇಂದ್ರನಾಮೆಯ ಪ್ರಕಾರ ಮರಾಠರು, ನಿಜಾಮರು ಮತ್ತು ಇಂಗ್ಲಿಷರು ಮೈತ್ರಿಕೂಟ ರಚಿಸಿಕೊಂಡು ಟಿಪ್ಪುವಿನವಿರುದ್ದ ಹೋರಾಡಲು ಸನ್ನದ್ದರಾದ ಸಂಧರ್ಭದಲ್ಲಿ ಇಂಗ್ಲಿಷರು ವೀರರಾಜನಿಂದ ತಮ್ಮ ಸೈನ್ಯಕ್ಕೆ ಬೇಕಾದ ಅಕ್ಕಿ, ಆಳು, ಎತ್ತು, ಸಹಾಯ ಸಂಪತ್ತುಗಳನ್ನು, ಆಳುಕಾಳುಗಳನ್ನು ನಿರೀಕ್ಷಿಸಿದ್ದರು. ಪರಿಣಾಮವಾಗಿ ವೀರರಾಜನು ಸಾಮಾನು ಸರಂಜಾಮು, ದವಸಧಾನ್ಯ ಇತ್ಯಾದಿಗಳನ್ನು ಶೇಖರಿಸಲು ಬೃಹತ್ ಪ್ರಮಾಣದ ದಾಸ್ತಾನು ಕೊಠಡಿಯನ್ನು ವೀರರಾಜಪೇಟೆಯಲ್ಲಿ ಕಟ್ಟಿಸಿ ಅದಕ್ಕೆ ಕೊಡಗು ಜನರನ್ನು ಪಹರೆ ಇಟ್ಟನು. ಇಂಗ್ಲಿಷ್ ಅಧಿಕಾರಿಗಳಿಗೆ ಜಾಗದಲ್ಲಿ ಮನೆ ಕಟ್ಟಲು ಹಾಗೂ ಅವರ ಸಹಾಯಕ್ಕಾಗಿ 250 ಮಂದಿ ಆಳುಗಳನ್ನು, ಹದಿನೈದು ಆನೆಗಳನ್ನು ನೀಡಿದ್ದನು. ಟಿಪ್ಪುವಿನನಾಶದಲ್ಲಿ ತನ್ನ ಹಿತ ಹಾಗೂ ಅದರ ಮೂಲಕ ಕೊಡಗಿನಹಿತ ಅಡಗಿದೆ ಎಂದು ನಂಬಿದ್ದನು. ಎಲ್ಲಾ ವಿವರಗಳೂ ರಾಜೇಂದ್ರನಾಮೆಯಲ್ಲಿವೆ!

ಮೂಲ ರಾಜೇಂದ್ರನಾಮೆಯಲ್ಲಿ ಮತಾಂತರದ ಘಟನೆಯನ್ನು ವಿವರಿಸುವ ಸಂದರ್ಭದಲ್ಲಿ ಮತಾಂತರಗೊಂಡವರ ಸಂಖ್ಯೆಯನ್ನು ಉಲ್ಲೇಖಿಸಿರುವುದಿಲ್ಲ. ಆದರೆ ಬೇರೊಂದು ಘಟನೆಯನ್ನು ಉಲ್ಲೇಖಿಸುವ ಹಂತದಲ್ಲಿ ಮೂಲ ರಾಜೇಂದ್ರನಾಮೆಯು ಒಂದು ಲಕ್ಷದ ಹನ್ನೊಂದು ಸಾವಿರ ರೈತರನ್ನು ಹಿಡಿದುಕೊಂಡು ಹೋಗಿ ಶರಾರತ್ತು(ತುಂಟತನ) ಮಾಡಿದ್ದರ ಬಗ್ಗೆ ಉಲ್ಲೇಖಿಸಿದ್ದನ್ನು ಗಮನಿಸಬಹುದು. ಆದರೆ "ಕೊಡಗು ವೀರರಾಜೇಂದ್ರ ಪತ್ರ"ದಲ್ಲಿ... 

"ಕುಟುಂಬ ಮಕ್ಕಳು ಸಮೇತ ಅರವತ್ತು ನಾಲ್ಕು ಸಾವಿರ ಜನ ಕೊಡಗರು ಇದಲ್ಲದೆ ಇನ್ನು ಕೆಲವು ಜಾತಿ ಜನರ ಸಹಾ ಹಿಡುಕೊಂಡು ಹೋಗಿ ಪಟ್ಟಣದಲ್ಲಿ ಸೆರೆ ಹಾಕಿಕ್ಕೊಂ().. ನಮ್ಮ ಹೆಂಗಸರು ಮಕ್ಕಳನ್ನು ಟಿಪ್ಪು ಸುಲ್ತಾನನ್ನು ತನ್ನ ಕಡೆ ಜನಕ್ಕೆ ಕೊಟ್ಟುಬಿಟ್ಟು ಬಹಳ ಜನಕೊಂದು ಬಿಟ್ಟು ಉಳಿದ ಸಣ್ಣ ಮಕ್ಕಳನೆಲ್ಲ ಕೋಜಾ ಮಾಡಿಬಿಟ್ಟ..." ಎಂದಿದೆ. ರಾಜೇಂದ್ರನಾಮೆಯಲ್ಲಿ  ಮತಾಂತರದ ಬಗ್ಗೆ ಉಲ್ಲೇಖವಿದ್ದರೂ ಕೊಡಗರನ್ನು ಮನೆಗಳಿಂದ ಎಳೆದು ತಂದು  ಇಸ್ಲಾಂಗೆ  ಮತಾಂತರಿಸಿದ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ!

ಇದೇ ರೀತಿ ಶತ್ರುನಾಶದ ಸಂದರ್ಭದಲ್ಲಿ ದೇವಸ್ಥಾನ, ಮಸೀದಿಗಳು ನಾಶವಾದದ್ದು, ಬೆಂಕಿಗೆ ಆಹುತಿಯಾದದ್ದು ಕಾಲಘಟ್ಟದಲ್ಲಾದ ರಾಜಕಾರಣದಿಂದಲೇ ಎನ್ನುವುದು ಇಲ್ಲಿ ಗಮನಾರ್ಹ. ನಾಯರ್ ಗಳು ಕೊಡಗಿನ ಪಾಡಿನಾಲ್ಕುನಾಡು ದೇವಸ್ಥಾನವನ್ನು, ಗುಲಾಮಲ್ಲಿಯು ಪಯ್ಯನೂರು ದೇವಸ್ಥಾನವನ್ನು ಹಾಗೂ ಕೊಡಗು ಜನರು ಉದ್ಯಾವರದ ಮಸೀದಿಯನ್ನು ನಾಶ ಮಾಡಿರುವುದು ಯುದ್ದ ರಾಜಕಾರಣದಿಂದ ಉಂಟಾದ ಹಿಂಸಾತ್ಮಕ ಸನ್ನಿವೇಶದಿಂದಲೇ ಹೊರತು ಧರ್ಮರಾಜಕಾರಣದಿಂದಲ್ಲ ಎನ್ನುವುದು ಕೂಡ ಗಮನಾರ್ಹ.

ರಾಜೇಂದ್ರನಾಮೆಯಲ್ಲಿ ವೀರರಾಜನು ಬ್ರಾಹ್ಮಣರ ವಿರುದ್ದ ಕೂಡ ತನ್ನ ಕೋಪ, ಅಸಮಾಧಾನ ವ್ಯಕ್ತಪಡಿಸಿರುವುದು ಗಮನಕ್ಕೆ ಬರುತ್ತದೆ. "ಅಧಿಕಾರಿಕೆ ಮಾಡದಂತಾ ಹಾರವರು ಈಗ ಇಂಗ್ಲಿಷರ ಜೊತೆ ಸೇರಿ, ಇಂಗ್ಲಿಷರ ಸ್ನೇಹಿತರಾದ ಕೊಡಗಿಗೆ ಅವಮಾನಮಾಡಿದ್ದಾರೆ.." ಎಂಬುದು ದಾಖಲಾಗಿದೆ! " ಹಾರವರ ಜಾತಿಗೂ ನಮಗೂ ಮೊದಲಾರಭ್ಯದಿಂದ ಹಗೆತನ ಇದೆ. ಪೂರ್ಣಯ್ಯ ಮುಂತಾದ ಬ್ರಾಹ್ಮಣರು ದೊಡ್ಡ ನವಾಬರ ದಿವಸದಲ್ಲಿ, ಟಿಪ್ಪು ಸುಲ್ತಾನರ ದಿವಸದಲ್ಲಿ ಸಹಾ, ನಾನಾ ಪ್ರಕಾರ ಹೇಳಿ, ನಮಗೆ ನಮ್ಮ ರಾಜ್ಯಕ್ಕೆ ಸಹಾ, ಬಹಳ ದುಖಃ ಕೊಟ್ಟು ಬಂದಿದ್ದಾರೆ. ಆದ್ದರಿಂದ ಬ್ರಾಹ್ಮಣರ ಜಾತಿ ಕಂಡರೆ ನಮಗೆ ಆಗುವುದಿಲ್ಲ" ಎಂದಿದೆ. ಅದೇ ರೀತಿ "ಕುಹರಾಮತನದಿಂದ ಹಣಕಾಸು ತಿಂದು, ರೈತರಿಗೂ ದುಖಃ ಕೊಟ್ಟ.." ಪ್ರಸಂಗವನ್ನೂ ವರ್ಣಿಸಲಾಗಿದೆ. ಮುಂದುವರೆದು " ಪೂರ್ಣಯ್ಯ ಎಂಬುವನು ಬ್ರಾಹ್ಮಣನಿದ್ದಾನೆ. ನಮ್ಮ ಜಾತಿಗೂ ಅವನಜಾತಿಗೂ ಕೂಡಿ ಬರುವುದಿಲ್ಲ" ಎಂದು ಮುಂದುವರೆಯುತ್ತದೆ ಆದರೆ ಬಗ್ಗೆ ನಮ್ಮ‌  ಕೊಡಗಿನರಾಜಕಾರಣಿಗಳುಅಪ್ಪಿತಪ್ಪಿಯೂ ಚಕಾರವೆತ್ತುವುದಿಲ್ಲ!?

ಹೀಗೆ ಮುಂದುವರೆಯುವ ರಾಜೇಂದ್ರನಾಮೆ ಎಪ್ಪತ್ತು ಸಾವಿರ ಕೊಡವರನ್ನು ಮತಾಂತರ ಮಾಡುವ ಬಗ್ಗೆ ಅತಿರೇಕದಿಂದ ಹೇಳುತ್ತೆ ಆದರೆ ಇದರ ನಲವತ್ತು ವರ್ಷದ ನಂತರವೂ ಕೊಡಗಿನ ಜನಸಂಖ್ಯೆ ಎಪ್ಪತ್ತು ಸಾವಿರ ಇರಲಿಲ್ಲ ಎನ್ನುವುದನ್ನು ಇತಿಹಾಸಕಾರ ರಾಮಚಂದ್ರರಾವ್ ಪುಂಗನೂರಿ ಸಾಬೀತುಪಡಿಸುತ್ತಾ ಆಗ ಮತಾಂತರ ಆಗಿದ್ದು ಕೇವಲ ಐದು ನೂರು ಜನ ಎಂದು ದಾಖಲಿಸಿ, ಸುಮಾರು ಹನ್ನೆರಡು ಸಾವಿರ ಜನ ಜೈಲಿನಿಂದ ತಪ್ಪಿಸಿಕೊಂಡ ಬಗ್ಗೆ ಸ್ಪಷ್ಟ ದಾಖಲೆ ನೀಡುತ್ತಾರೆ

ರೀತಿಯಲ್ಲಿ ಟಿಪ್ಪುವನ್ನು ಆಮೂಲಾಗ್ರವಾಗಿ ವಿರೋಧಿಸುವರಾಜೇಂದ್ರನಾಮೆಯೂ ಸಹ ಕೂಗುಮಾರಿಗಳ ವಿತಂಡವಾದಕ್ಕೆ ಯಾವ ರೀತಿಯಲ್ಲೂ ನೆರವಾಗುವುದಿಲ್ಲ ಎನ್ನುವುದು ಇಲ್ಲಿ ಗಮನಾರ್ಹ!! ಯಾವುದರ ಬಗ್ಗೆಯೂ ಕನಿಷ್ಟ ಜ್ಞಾನವೂ ಇಲ್ಲದೆ ಕುರುಡುಕುರುಡಾಗಿ ಟಿಪ್ಪುವನ್ನು ವಿರೋಧಿಸುವ ಇಂತವರನ್ನು ಕಂಡೇ ಇರಬೇಕು ರಾಷ್ಟ್ರಕವಿ ಕುವೆಂಪು ರವರು "ದಂಡಕಾರಣ್ಯಕ್ಕೆ ಎಷ್ಟು ಲಾಂದ್ರವಿಡಿದರೇನು?" ಎಂದದ್ದು...

   ‌‌‌‌‌