ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರುತ್ತಿದ್ದಾರೆ ಹೊಸ ನಾಯಕಿಯರು : ಸದ್ಯ ಅವರದೇ ಕಾರುಬಾರು 

ಸ್ಯಾಂಡಲ್ ವುಡ್ ನಲ್ಲಿ  ನೆಲೆಯೂರುತ್ತಿದ್ದಾರೆ  ಹೊಸ  ನಾಯಕಿಯರು :  ಸದ್ಯ  ಅವರದೇ  ಕಾರುಬಾರು 

ಈಗಿನ ಜನರೇಷನ್ ನಲ್ಲಿ ಜನ ಟ್ರೆಂಡ್ ಗೆ ತಕ್ಕಂತೆ ಬದಲಾಗ್ತಾರೆ. ಈ ಬದಲಾವಣೆ ಅನ್ನೋ ವಿಚಾರ ಗಾಂಧಿನಗರದಲ್ಲಿ, ಅದ್ರಲ್ಲೂ ಹೀರೋಯಿನ್ ಗಳ ವಿಚಾರದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಗಾಂಧಿನಗರದಲ್ಲಿ ವರ್ಷಕ್ಕೆ ಸಾಕಷ್ಟು ಹಿರೋಯಿನ್ ಗಳು ಕಾಲಿಡ್ತಾರೆ. ಅದ್ರಲ್ಲಿ ಕೆಲವೇ ಕೆಲವು ನಟಿಯರು ಮಾತ್ರ ಹತ್ತಾರು ಸಿನಿಮಾ ಮಾಡ್ತಾರೆ. ಬಳಿಕ ಮದುವೆ, ಸಂಸಾರ ಮಕ್ಕಳು ಅಂತ ಬ್ಯುಸಿಯಾಗ್ತಾರೆ. ಆಗ ಸಿನಿಮಾ ಅವಕಾಶಗಳೂ ಕಡಿಮೆ ಆಗುತ್ತವೆ. ಇದುವರೆಗೂ ದಶಕದ ಬಳಿಕವೂ ನೆಲೆಕಂಡುಕೊಂಡಿರೋ ಹೀರೋಯಿನ್ ಗಳ ಲಿಸ್ಟ್ ಸ್ಯಾಂಡಲ್ ವುಡ್ ನಲ್ಲಿ ಬಹಳ ಕಡಿಮೆ. ಆದ್ರೆ ಹೀರೋಗಳ ವಿಚಾರಕ್ಕೆ ಬಂದ್ರೆ ಈ ಮಾತು ಹೊರತು. ಹೀರೋಗಳು 60 ವರ್ಷ ಆದ್ರೂ ಹೀರೋ ಆಗಿಯೇ, ಕಾಲೇಜು ನಟನಾಗಿಯೇ ನಟಿಸೋ ಕಾಲ ಇದು. ಆದ್ರೆ ಹೀರೋಯಿನ್ ಗಳ ವಿಚಾರದಲ್ಲಿ ಗ್ಲಾಮರಸ್, ಫ್ರೆಶ್ ಫೇಸ್ ಇನ್ನಿತರ ಮಾನದಂಡಗಳು ಅಪ್ಲೈ ಆಗತ್ತೆ.  

ಸದ್ಯ ಗಾಂಧಿನಗರದಲ್ಲಿರೋ ಹಿರೋಯಿನ್ ಗಳಿಗೆ ಸೆಡ್ಡು ಹೊಡೆದು ಹೊಸಹೊಸ ಅವಕಾಶಗಳನ್ನು ಗಿಟ್ಟಿಸುಕೊಳ್ಳುವಲ್ಲಿ ಒಂದಿಷ್ಟು ಹೊಸ ನಾಯಕಿಯರು ಸಫಲರಾಗಿದ್ದಾರೆ. ಸದ್ಯ ಈ ಸಾಲಿಗೆ ಅದಿತಿ ಪ್ರಭುದೇವ, ಸೋನಲ್ ಮಾಂಥೆರಿಯೋ, ಸಂಜನಾ ಆನಂದ್ ಸೇರ್ಪಡೆಯಾಗಿದ್ದಾರೆ. 

ಕನ್ನಡದ ಹಿರೋಯಿನ್ ಗಳಲ್ಲಿ ಕಿರುತೆರೆಯಿಂದ ಹಿರಿತೆರೆಗೆ ಬಂದು ಸಿನಿಮಾ ಮಾಡಿ ಯಶಸ್ವಿಯಾದವರು ಕೆಲ ಮಂದಿಯಿದ್ದಾರೆ. ರಾಧಿಕಾ ಪಂಡಿತ್, ರಚಿತಾ ರಾಮ್ ಕೂಡ ಮೊದಲು ಕಿರುತೆರೆಯಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡು ಬಳಿಕ ಬೆಳ್ಳಿತೆರೆಗೆ ಲಗ್ಗೆ ಇಟ್ಟಿದ್ದು. ಈ ಸಾಲಿಗೆ ಸೇರಿದ ಇತ್ತೀಚಿನ ನಟಿ ಅದಿತಿ ಪ್ರಭುದೇವ. ಕಿರುತೆರೆಯ ಗುಂಡ್ಯಾನ ಹೆಂಡ್ತಿ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಅದಿತಿ ಕಾಲಿಟ್ರು. ಬಳಿಕ ನಾಗಕನ್ನಿಕೆ ಅನ್ನೋ ಮತ್ತೊಂದು ಧಾರಾವಾಹಿಯಲ್ಲೂ ಅಭಿನಯಿಸಿದ್ರು.

ಧಾರಾವಾಹಿ ನೋಡ್ತಿದ್ದ ಪ್ರೇಕ್ಷಕರು  ಅದಿತಿಯ ಅಭಿನಯ, ಮ್ಯಾನರಿಸಂ, ಸೌಂದರ್ಯವನ್ನು ಮೆಚ್ಚಿಕೊಂಡಿದ್ರು. ಬಾಲಿವುಡ್ ನಾಯಕಿಯರಿಗಿರೋ ವರ್ಚಸ್ಸನ್ನು ಈ ಧಾರಾವಾಹಿ ಮೂಲಕ ಅದಿತಿಯಲ್ಲಿ ನೋಡಿದ್ರು. ನಾಗಕನ್ನಿಕೆ ಧಾರಾವಾಹಿ ವಸ್ತ್ರ ವಿನ್ಯಾಸವೂ ಆಕೆಯ ಸೌಂದರ್ಯ ಸೊಬಗಿಗೆ ಹೇಳಿ ಮಾಡಿಸಿದಂತಿತ್ತು. ಈಕೆಯ ನಟನೆ ಅಭಿನಯ ಎಲ್ಲವೂ ಸ್ಯಾಂಡಲ್ ವುಡ್ ಗೆ ಈಕೆಯನ್ನು ಕರೆದುಕೊಳ್ಳುವಂತೆ ಮಾಡ್ತು. ಅಜಯ್ ರಾವ್ ಗೆ ಜೋಡಿಯಾಗಿ ಧೈರ್ಯಂ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ರು. ಇದುವರೆಗೂ ಅದಿತಿ ನಟಿಸಿರೋ ಸಿನಿಮಾ ಅಂಥ ಹಿಟ್ ಕಂಡಿರದೇ ಇದ್ರೂ ಅದಿತಿಯ ಅಭಿನಯದ ಬಗ್ಗೆ, ಪಾಪ್ಯುಲಾರಿಟಿ ಬಗ್ಗೆ ಯಾವುದೇ ದೂರುಗಳಿಲ್ಲ. ಧೈರ್ಯಂ ಸಿನಿಮಾದ ಬಳಿಕ ಧನ್ವೀರ್ ಜತೆ ಅದಿತಿ ಬಜಾರ್ ಸಿನಿಮಾದಲ್ಲಿ ನಟಿಸಿದ್ರು. ಸದ್ಯ ಅದಿತಿ ಕೈಯಲ್ಲಿ ಸಿನಿಮಾ ಆಫರ್ ಗಳು ಭರ್ಜರಿಯಾಗಿವೆ. ಚಿರಂಜೀವಿ ಸರ್ಜಾ ಜತೆಗೆ ಅಭಿನಯಿಸಿರೋ ಸಿಂಗ ಸಿನಿಮಾ ಮುಂದಿನ ತಿಂಗಳು ತೆರೆಕಾಣಲಿದೆ. ಈಗಾಗ್ಲೇ ಸಿನಿಮಾದ ‘ಶಾನೆ ಟಾಪ್ ಆಗವ್ಳೇ’ ಹಾಡಿನ ಮೂಲಕ ಪಡ್ಡೆಗಳಿಗೆ ಅದಿತಿ ಹತ್ತಿರವಾಗಿದ್ದಾರೆ.

ಕಮರ್ಷಿಯಲ್ ಸಿನಿಮಾಗಳ ಆಫರ್ ಬರ್ತಿರುವಾಗ ಪ್ರಯೋಗಾತ್ಮಕ ಸಿನಿಮಾಗಳು, ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸೋಕೆ ಕೆಲ ಹಿರೋಯಿನ್ ಗಳು ಹಿಂಜರಿಯುತ್ತಾರೆ. ಆದ್ರೆ ಅದಿತಿ ಈ ಸಿನಿಮಾಗಳ ಜತೆಗೆ ದಯಾಳ್ ಪದ್ಮನಾಭನ್ ನಿರ್ದೇಶಿಸ್ತಿರೋ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕುರಿತ ರಂಗನಾಯಕಿ ಸಿನಿಮಾದಲ್ಲಿ ಅದಿತಿ ಪ್ರಭುದೇವ ಅಭಿನಯಿಸ್ತಿದ್ದಾರೆ. ಇನ್ನುಳಿದಂತೆ ಸಸ್ಪೆನ್ಸ್ ಕಥಾಹಂದರವುಳ್ಳ ಆಪರೇಷನ್ ನಕ್ಷತ್ರ, ಜಗ್ಗೇಶ್ ಜತೆಗೆ ಕಾಮಿಡಿ ಜಾನರ್ ಕಥೆಯುಳ್ಳ ತೋತಾಪುರಿ ಸಿನಿಮಾ, ನೀನಾಸಂ ಸತೀಶ್ ಜತೆಗೆ ಬ್ರಹ್ಮಚಾರಿ ಸಿನಿಮಾದಲ್ಲೂ ಅದಿತಿ ಅಭಿನಯಿಸ್ತಿದ್ದಾರೆ. ಈ ಸಣ್ಣ ವಯಸ್ಸಿಗೆ ಎಂಥ ಪಾತ್ರ ಆಯ್ಕೆ ಮಾಡಬೇಕು, ಯಾವುದು ಸಮಾಜಕ್ಕೆ ಒಳಿತು, ಎಂಥ ಪಾತ್ರದಿಂದ ಎಂಥ ಸಂದೇಶವನ್ನು ಸಮಾಜಕ್ಕೆ ನೀಡಬಹುದು ಅನ್ನೋ ಜಾಣ್ಮೆ ಅದಿತಿಗಿದೆ. ಆದ್ರಿಂದ್ರಲೇ ನಟನೆ ಕೌಶಲ್ಯದ ಜತೆಗೆ, ಉತ್ತಮ ವ್ಯಕ್ತಿತ್ವವೂ ಆಕೆಯತ್ತ ಸಿನಿಮಾ ಆಫರ್ ಗಳು ಒಲಿದು ಬರುವಂತೆ ಮಾಡ್ತಿವೆ. 

ಕೆಲ ನಟಿಯರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ರೂ ಸಿನಿರಂಗದಲ್ಲಿ ಮನ್ನಣೆ ಸಿಕ್ಕಿರಲ್ಲ. ಆದ್ರೆ ಅದೃಷ್ವವೆಂಬಂತೆ ಕೆಲವರಿಗೆ ಕೆಲ ನಿರ್ದೇಶಕರ ಸಿನಿಮಾಗಳು ಹಿಟ್ ಕೊಡುತ್ತವೆ. ಆ ಪೈಕಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ, ನಟಿ ಸೋನಲ್ ಮಾಂಥೆರಿಯೋಗೆ ಒಳ್ಳೆಯ ಬ್ರೇಕ್ ಕೊಟ್ಟಿದೆ. ಪಂಚತಂತ್ರ ಸಿನಿಮಾಕ್ಕು ಮೊದಲು ಸೋನಲ್ ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ರು ಯಾರೂ ಆಕೆಯನ್ನು ಗುರುತಿಸಿರಲಿಲ್ಲ.

ಪಂಚತಂತ್ರ ಸಿನಿಮಾ ಮೂಲಕ ಬೋಲ್ಡ್ ನಟನೆ, ಬಬ್ಲಿ ಲುಕ್, ಡ್ಯಾನ್ಸಿಂಗ್ ಸ್ಟೈಲ್ ನಿಂದ ಸೋನಲ್ ಗಾಂಧಿನಗರದಲ್ಲಿ ಗುರುತಿಸಿಕೊಂಡ್ರು. ಯೋಗರಾಜ್ ಭಟ್ ಸಿನಿಮಾಗಳು ಸಾಕಷ್ಟು ಮಂದಿಗೆ ಬದುಕು ರೂಪಿಸಿಕೊಟ್ಟಿವೆ. ಗಣೇಶ್, ಪೂಜಾಗಾಂಧಿ, ದಿಗಂತ್ ಇನ್ನಿತರ ಕಲಾವಿದರು ಗುರುತಿಸುಕೊಳ್ಳವಲ್ಲಿ ಯೋಗರಾಜ್ ಭಟ್ಟರ ಸಿನಿಮಾ ಪಾತ್ರ ಮಹತ್ವದ್ದು. ಈ ಲಿಸ್ಟ್ ಗೆ ಸದ್ಯ ಸೋನಲ್ ಸೇರ್ಪಡೆಯಾಗಿದ್ದಾರೆ.

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಗಾಳಿಪಟ-2, ಉಪೇಂದ್ರ ನಟನೆಯ ಬುದ್ಧಿವಂತ-2, ವಸಿಷ್ಟ ಜೋಡಿಯಾಗಿ ತಲ್ವಾರ್ ಪೇಟೆ ಸಿನಿಮಾದಲ್ಲೂ ಸೋನಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪಂಚತಂತ್ರ ಸಿನಿಮಾದಲ್ಲಿ ಸಾಹಿತಿಯ ಪಾತ್ರಧಾರಿಯಾಗಿದ್ದ ಸೋನಲ್, ಪ್ರೀತಿ ಪ್ರೇಮ ರೊಮ್ಯಾಂಟಿಕ್ ಸೀನ್ ನಲ್ಲಿ ಲೀಲಾಜಾಲವಾಗಿ ನಟಿಸಿದ್ರು. ಆದ್ರೆ ಮುಂದಿನ ಸಿನಿಮಾಗಳಲ್ಲಿ ಸೋನಲ್ ಪಾತ್ರ ಹಾಗೂ ಅಭಿನಯ ಹೇಗಿರತ್ತೆ ಅನ್ನೋ ಕ್ಯೂರಿಯಾಸಿಟಿ ಇದೆ.

ಸ್ಟಾರ್ ಆಗಬೇಕು ಅನ್ಕೊಂಡವ್ರಿಗೆ ಅವಕಾಶಗಳು ಯಾವ ರೂಪದಲ್ಲಿ ಬೇಕಾದ್ರೂ ಬರಬಹುದು. ಕೆಲವ್ರು ಡ್ಯಾನ್ಸ್ ರಿಯಾಲಿಟಿ ಶೋ, ಧಾರಾವಾಹಿ, ಬ್ಯೂಟಿ ಕಾಂಟೆಸ್ಟ್ ಹೀಗೆ ನಾನಾ ಮೆಟ್ಟಿಲನ್ನೇರಿ ಸಿನಿಮಾರಂಗಕ್ಕೆ ಬಂದಿರ್ತಾರೆ. ಈ ಮಾತು ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಹೀರೋಯಿನ್ ಸಂಜನಾ ಆನಂದ್ ಗೂ ಅನ್ವಯಿಸತ್ತೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಸಂಜನಾ ಗೆ ಕಿರುಚಿತ್ರವೊಂದ್ರಲ್ಲಿ ಅಭಿನಯಿಸೋ ಅವಕಾಶ ಸಿಕ್ಕಿತ್ತಂತೆ. ಕಿರುಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸಂಜನಾ ಮೂಲತಃ ಭರತನಾಟ್ಯ ಕಲಾವಿದೆ ಕೂಡ ಹೌದು. ಕೆಮಿಸ್ಟ್ರಿ ಕರಿಯಪ್ಪ ಸಿನಿಮಾ ತಂಡ ನಾಯಕಿಯರಿಗಾಗಿ ಹುಡುಕಾಟ ನಡೆಸ್ತಿದ್ದಾಗ ಸಂಜನಾ ಕೂಡ ಆಡಿಷನ್ ಕೊಟ್ರಂತೆ. ಅಲ್ಲಿಂದ ಸಂಜನಾ ಸಿನಿ ಜರ್ನಿ ಆರಂಭವಾವಾಯ್ತು.  

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಸಹಜ ನಟನೆಯನ್ನು ಗಾಂದಿನಗರದ ಮಂದಿ ಮೆಚ್ಚಿಕೊಂಡು ಸಂಜನಾ ಮೇಲಿಂದ ಮೇಲೆ ಆಫರ್ ನೀಡ್ತಿದ್ದಾರೆ. ಯಾವ ಮಟ್ಟಿಗೆ ಅಂದ್ರೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸ್ತಿರೋ ಸಲಗ ಸಿನಿಮಾ,ಅಜಯ್ ರಾವ್ ಜತೆಯಾಗಿ ಜಾಕಿ ಸಿನಿಮಾದಲ್ಲಿ, ಚಿರಂಜೀವಿ ಸರ್ಜಾ ಜೋಡಿಯಾಗಿ ಕ್ಷತ್ರಿಯ ಸಿನಿಮಾದಲ್ಲಿ, ಕಾಮಿಡಿ ಜಾನರ್ ಸಿನಿಮಾ ಕುಷ್ಕದಲ್ಲೂ ಸಂಜನಾ ಆನಂದ್ ಹೀರೋಯಿನ್ ಆಗಿ ಅಭಿನಯಿಸ್ತಿದ್ದಾರೆ. ಒಂದ್ರಲ್ಲಿ ಹಳ್ಳಿ ಹುಡುಗಿ ಪಾತ್ರ, ಇನ್ನೊಂದು ಎಮೋಷನಲ್ ಪಾತ್ರ ಮತ್ತೊಂದು ಕಾಮಿಡಿ ಟಚ್ ಇರೋ ಪಾತ್ರ  ಹೀಗೆ ನಟನೆಯ ಎಲ್ಲಾ ಆಯಾಮಗಳಿಗೂ ತೆರೆದುಕೊಳ್ಳೋ ಪ್ರಯತ್ನ ಸಂಜನಾ ಮಾಡ್ತಿದ್ದಾರೆ.

ಒಂದು ಸಿನಿಮಾ ಮಾಡಿದ ತಕ್ಷಣ ನಾವೇ ಸ್ಟಾರ್ಸ್ ಅನ್ನೋ ಭ್ರಮೆಯಲ್ಲಿ ಮುಳುಗಿ, ಇಂಥ ಸಿನಿಮಾ ಮಾಡಲ್ಲ, ಅಂಥ ಸಿನಿಮಾ ಮಾಡಲ್ಲ, ಇಂಥ ಹೀರೋನೆ ಬೇಕು ಅಂತೆಲ್ಲಾ ಡಿಮ್ಯಾಂಡ್ ಮಾಡಿದ್ರೆ ಗಾಂಧಿನಗರದಲ್ಲಿ ನೆಲೆಯೂರೋದು ಕಷ್ಟಸಾಧ್ಯ. ಆದ್ರೆ ಈ ಮೂವರು ಹೀರೋಯಿನ್ ಗಳು ಎಲ್ಲಾ ರೀತಿಯ ಕಥೆ, ಪಾತ್ರಗಳಿಗೂ ಒಗ್ಗಿಕೊಂಡು ಯಾವುದು ಉತ್ತಮವೆನಿಸತ್ತೋ ಅಂಥ ಪಾತ್ರವನ್ನು ಆಯ್ಕೆ ಮಾಡಿಕೊಂಡು ಅಭಿನಯಿಸ್ತಿದ್ದಾರೆ. ಇದ್ರಲ್ಲಿ ಹೊಸ ನಟಿಯರ ಪ್ರತಿಭೆಯ ಜತೆಗೆ ನಿರ್ದೇಶಕ ನಿರ್ಮಾಪಕರುಗಳು ಹೊಸ ನಟಿಯರಿಗೆ ಮನ್ನಣೆ ನೀಡ್ತಿರೋದು ಕೂಡ  ಗಮನಾರ್ಹ