ಸರ್ಕಾರ ರಚಿಸಿದರೂ, ಶಾಸಕರ ಗೆಲುವೇ ಡೌಟು

 ಸರ್ಕಾರ ರಚಿಸಿದರೂ, ಶಾಸಕರ ಗೆಲುವೇ ಡೌಟು

 ನಾಳೆಯಾದರೂ ವಿಶ್ವಾಸ ಮತಕ್ಕೆ ಅಂತ್ಯವಾಗುತ್ತಾ ಇಲ್ಲವಾ ಎಂಬುದಿನ್ನೂ ನಿಗೂಢವಾಗಿರುವ ಬೆನ್ನಲ್ಲೇ ತಮ್ಮ ತಮ್ಮ ಶಾಸಕರನ್ನ  ತಮ್ಮಲ್ಲೇ ಉಳಿಸಿಕೊಳ್ಳುವ ದಾವಂತದಲ್ಲಿ ಮೂರೂ ಪಕ್ಷಗಳು ಬಿದ್ದು ಒದ್ದಾಡುತ್ತಿವೆ. ಇದಕ್ಕೆ ಹೆಚ್ಚುವರಿಯಾಗಿ ಅತೃತ್ತ ಶಾಸಕರನ್ನ ಸೆಳೆದುಕೊಳ್ಳಲು ದೋಸ್ತಿ ಪಡೆ ನಾನಾ ವಿಧದ ಪಟ್ಟುಗಳನ್ನ ಪ್ರದರ್ಶಿಸುತ್ತಿರುವಂತೆಯೇ, ಬಿಜೆಪಿ ಇಂತದ್ದೆಲ್ಲಕ್ಕೂ ಫಲ ಸಿಗದಂತಾಗಲು ಭಾರೀ ರಕ್ಷಣಾ ಕೋಟೆಯನ್ನೇ ಕಟ್ಟಿಟ್ಟಿದೆ.

 ಈ ಪಗಡೆಯಾಟದೊಳಗೆಯೇ, ಬಿಜೆಪಿಗೆ ತರೇವಾರಿ ತಲೆಬೇನೆಗಳು ಆವರಿಸಿಕೊಳ್ಳುತ್ತಿದ್ದು ಕಂಪನವನ್ನೆಬ್ಬಿಸುತ್ತಿವೆ.  ಇಂಥದ್ದರಲ್ಲಿ  ಅರವಿಂದ ಲಿಂಬಾವಳಿಯ ಕಥಾನಕ ಮೊದಲಿನದ್ದು. ಇಡೀ ಆಪರೇಷನ್ ಕಮಲ ರಹಸ್ಯವಾಗಿಯೇ ನಡೆದಿತ್ತು, ಇದರಲ್ಲಿ ಗುಪ್ತ ಪಾತ್ರಧಾರಿಯಾಗಿದ್ದವರು ಲಿಂಬಾವಳಿ. ಇವರನ್ನೀಗ ಸಲಿಂಗ ಕಾಮದ ವೀಡಿಯೋ ಮತ್ತು ಬಲಿಪಶು ಯುವಕ ಈಶ್ವರಪ್ಪ ಜತೆ ಹೇಳಿಕೊಂಡಿರುವ ವಿಚಾರದ ಆಡಿಯೋಗಳನ್ನ ವೈರಲ್ ಮಾಡುತ್ತಿರುವುದು ನೈತಿಕವಾಗಿ ಶಕ್ತಿ ಉದುಗುವಂತಾಗಲಿ ಎಂದು ಮಾಡುತ್ತಿರುವ ಒಂದು ಭಾಗವಾಗಿಯೇ ಕಾಣಿಸಿಕೊಳ್ಳುತ್ತಿದೆ ಮಾತ್ರವಲ್ಲ, ಬಿಜೆಪಿಯ ಇತರೆ ಅಸಭ್ಯ ನಡವಳಿಕೆಯನ್ನ ಮತ್ತೆ ನೆನಪಿಸಿಕೊಡುವ ಪ್ರಯತ್ನವಾಗಿಯೂ ಇದೆ. ಆದರೆ  ಸದ್ಯಕ್ಕಿದು ದೊಡ್ಡ ಮಟ್ಟದ ಕಂಪನವನ್ನೇನೂ ಮಾಡಿಲ್ಲ.

  ಇದಕ್ಕಿಂತಲೂ ಆಘಾತಕಾರಿಯಾದ ಸಂಗತಿ ಎಂದರೆ, ಯಾರ್ಯಾರು ರಾಜೀನಾಮೆ ಕೊಟ್ಟು ರಾಜ್ಯದಿಂದ ಹೊರಗೆ ತಲೆ ಮರೆಸಿಕೊಂಡಿದ್ದಾರೋ, ಆ ಶಾಸಕರೆಲ್ಲ ಮಾಜಿಯಾಗಿ ಮತ್ತೆ ಚುನಾವಣೆಯನ್ನ ಕಮಲ ಗುರುತಿನಿಂದಲೇ ಎದುರಿಸಲು ನಿಂತರೆ ಗೆಲ್ಲುವವರೆಷ್ಟು ಮಂದಿ ಎಂಬುದಕ್ಕೆ ಮಾಡಿಸಿರುವ ಗುಪ್ತ ಸಮೀಕ್ಷೆಯೇ ತಲೆ ಕೆಡುವಂತೆ ಮಾಡಿಟ್ಟಿದೆ.

 ಕೆ.ಆರ್.ಪೇಟೆಯ ನಾರಾಯಣಗೌಡ, ಹುಣಸೂರಿನ ಎಚ್. ವಿಶ್ವನಾಥ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯ ಈ ಮೂರೂ ಕ್ಷೇತ್ರಗಳಲ್ಲಿ ಜನತಾದಳದ್ದೇ ಹವಾ ಇದೆ. ಲೋಕಸಭೆ ಚುನಾವಣೆಯಲ್ಲಿ ಇದು ಸುಳ್ಳಾಗಿದೆಯಾದರೂ, ರಾಜ್ಯ ರಾಜಕೀಯ ಮತ್ತು ದಳಕ್ಕೆ ಮೋಸ ಮಾಡಿದರು ಎಂಬ ಅಂಶ, ಒಕ್ಕಲಿಗ ಜಾತಿ ಇವೆಲ್ಲ ಸೇರಿ ಈ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಎಷ್ಟೇ ಲಾಗಾ ಹಾಕಿದರೂ ಗೆಲ್ಲಲ್ಲ ಎಂಬ ವರದಿಗಳಾಗಿವೆ.

 ರೋಷನ್ ಬೇಗ್ ಪ್ರತಿನಿಧಿಸುತ್ತಿರುವ ಶಿವಾಜಿನಗರದಲ್ಲಿ ಕಮಲ ಅಸಾಧ್ಯ ಎನುತಿರುವಂತೆ, ಯಶವಂತಪುರದ ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂ.ಟಿ.ಬಿ. ನಾಗರಾಜ್, ಕೆ.ಆರ್.ಪುರಂನ ಬೈರತಿ ಬಸವರಾಜು ಇಲ್ಲೆಲ್ಲ ಬಿಜೆಪಿ ತನ್ನ ಹಿಡಿತ ತೋರಿಸಬಹುದಾದರೂ, ಇದೇ ಪಕ್ಷದ ಮೂಲ ಮುಖಂಡರು, ಕಾರ್ಯಕರ್ತರು ವಲಸೆ ಬಂದವರ ಜತೆಗೆ ಮನ:ಪೂರ್ವಕವಾಗಿ ನಿಲ್ಲಲ್ಲ, ಸಂಸತ್ ಚುನಾವಣೆಯಲ್ಲಿ ಮೈತ್ರಿ ಪಕ್ಷದವರು ಹೇಗೆ ಪರಸ್ಪರ ಕಾಲನ್ನ ಎಳೆದುಕೊಂಡರೋ, ಅದೇ ರೀತಿ ಇಲ್ಲಿ ಮೂಲ ಮತ್ತು ವಲಸಿಗರ ನಡುವೆ ಕದನ ತಪ್ಪಿದ್ದಲ್ಲ. ಅದೂ ಸಾಲದೆಂಬಂತೆ ದೋಸ್ತಿ ಪಕ್ಷಗಳೂ ಕೂಡ ಏನಾದರಾಗಲಿ ಸರ್ಕಾರ ಬೀಳುವಂತೆ ಮಾಡಿದವರನ್ನ ಪತನಗೊಳಿಸಲೇಬೇಕು ಎಂದು ನಿಲ್ಲುವುದೂ ಪ್ಲಸ್ ಆಗಿ, ಈ ಐದೂ ಕ್ಷೇತ್ರಗಳಲ್ಲೂ ಕಮಲ ಗೆದ್ದೇಬಿಡುವ ಸಾದ್ಯತೆಗಳು ತೀರಾ ಕಡಿಮೆ.(ಶಿವಾಜಿ ನಗರ ಪಕ್ಕಾ ಕಷ್ಟವಂತೆ)

 ಹಿರೇಕೆರೂರಿನ ಬಿ.ಸಿ.ಪಾಟೀಲ್, ಗೋಕಾಕ್‍ನ ರಮೇಶ್ ಜಾರಕಿಹೊಳಿ, ವಿಜಯನಗರದ ಆನಂದ ಸಿಂಗ್, ಕಾಗವಾಡದ ಶ್ರೀಮಂತ ಪಾಟೀಲ್, ಮಸ್ಕಿಯ ಪ್ರತಾಪ ಗೌಡ ಪಾಟೀಲ್, ಯಲ್ಲಾಪುರದ ಹೆಬ್ಬಾರ್, ಅಥಣಿಯ ಮಹೇಶ್ ಕುಮಟಳ್ಳಿ ಇಲ್ಲೆಲ್ಲ ಲಿಂಗಾಯತ ಮತಗಳಿವೆ, ಅಭ್ಯರ್ಥಿಗಳ ಹಿಂದಿರುವ ಮತಗಳೂ ಇವೆ. ಇದು ಬಿಜೆಪಿಗೆ ಪ್ಲಸ್ ಆಗುವುದಾದರೂ,  ಜಾರಕಿಹೊಳಿ ಕುಟುಂಬದ ಒಳ ಜಗಳ, ಹಿರೇ ಕೆರೂರಿನಂಥ ಕ್ಷೇತ್ರದಲ್ಲಿನ ಮೂಲ ಬಿಜೆಪಿಯ ಪ್ರಬಲ ಅಭ್ಯರ್ಥಿ ಇರುವುದರಿಂದ ಹೊಸಬರ ಗೆಲುವು ಸಲೀಸಲ್ಲ ಎಂಬ ವರದಿಗಳಿವೆ.

 ಹಾಗೆಯೇ, ಮಸ್ಕಿಯ ಪ್ರತಾಪಗೌಡ ಕಳೆಸ ಸಲ ಗೆದ್ದಿದ್ದು ಕೇವಲ ಶೇ.0.16 ಮತಗಳಿಂದಾದರೆ, ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ್ ಗೆದ್ದಿದ್ದುಕೇವಲ ಶೇ.0.37 ಅಂತರದಿಂದ ಅತ್ಯಂತ ತಿಣುಕಾಡಿಕೊಂಡು ಕೊನೆಗೂ ಪ್ರಯಾಸದಿಂದ ಗೆದ್ದವರು.

. ಯಲ್ಲಾಪುರದ ಹೆಬ್ಬಾರ್ ಶೇ.1.06, ಅಥಣಿಯಿಂದ ಮಹೇಶ್ ಕುಮಟಳ್ಳಿ ಶೆ. 1.37, ಯಶವಂತಪುರದ ಸೋಮಶೇಖರ್ ಶೇ. 3.73, ಹೊಸಕೋಟೆಯ ಎಂಟಿಬಿ ನಾಗರಾಜ್ ಶೇ. 3.94, ಹುಣಸೂರಿನಿಂದ ವಿಶ್ವನಾಥ್ ಶೇ. 4.6, ಮತಗಳ ಅಂತರದಿಂದ ಅಬ್ಬಾ ಗೆದ್ದೆವು ಎಂಬ ನಿಟ್ಟುಸಿರು ಬಿಟ್ಟಿದ್ದವರು.

 ವಿಜಯನಗರದ ಆನಂದಸಿಂಗ್ ಶೇ. 5.76, ಗೋಕಾಕಿನ ರಮೇಶ್ ಜಾರಕಿಹೊಳಿ ಶೇ. 8.2, ಕೆ.ಆರ್.ಪೇಟೆಯ ನಾರಾಯಣ ಗೌಡ ಶೇ.9.84, ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ ಶೇ.9.9 ಮತಗಳ ಅಂತರದಿಂದ ಗೆದ್ದವರಾಗಿದ್ದಾರಾದರೂ ಇವರ ಅಂತರ ಶೇ. 10 ನ್ನು ಮುಟ್ಟಿಲ್ಲ.

ಕೆ.ಆರ್.ಪುರಂನ ಬೈರತಿ ಶೆ. 12.89, ಶಿವಾಜನಗರದ ರೋಷನ್ ಬೇಗ್ ಶೇ. 1385, ಚಿಕ್ಕಬಳಾಪುರದ ಡಾ.ಸುಧಾಕರ್ ಶೇ. 17..54, ಮಹಾಲಕ್ಷ್ಮಿ ಲೇಜೌಟ್‍ನ ಗೋಪಾಲಯ್ಯ ಶೇ. 25.71 ಮತಗಳ ಅಂತರಿಂದ ಗೆದ್ದವರು. ಇವರ ಗೆಲುವಿನ ಅಂತರ ಶೇ. 10 ಕ್ಕೂ ಮೀರಿದ್ದವರಾದ್ದರಿಂದ, ಇವಾಗಲೂ ಹೋರಾಟ ಕೊಡಬಹುದು ಎನಿಸಿಕೊಂಡಿರುವ ನಾಲ್ಕು ಮಂದಿ ಮಾತ್ರ.

 ಇನ್ನುಳೀದವರು ಹೋದ ಸಲವೇ ಸುಲಭವಾಗಿ ಗೆದ್ದವರಲ್ಲ. ಇನ್ನು ಈಗ ಆಪರೇಷನ್ ಕಮಲದ ಹಣೆಪಟ್ಟಿಯನ್ನಾಕಿಕೊಂಡು ಇವರೇ ಆಗಲಿ, ಇವರ ಕುಟುಂಬದವರೇ ಆಗಲಿ ಕಣಕ್ಕಿಳಿದರೆ ಪಕ್ಷದ ಆಂತರಿಕ ಕಾಲೆಳೆತ, ದೋಸ್ತಿ ಪಕ್ಷಗಳ ಸೇಡಿನ ಮುಂದೆ ಮಗುಚಿಬೀಳುತ್ತಾರೆ ಎಂಬ ಸಂದೇಶವನ್ನೇ ಕೊಟ್ಟಿದೆ.

 ಹಾಗಾದರೆ, ಸರ್ಕಾರ ತಾವೇ ರಚಿಸಿಕೊಂಡು ಆರು ತಿಂಗಳು ಇದ್ದರೂ, ಆಗ ನಡೆಯುವ ಕಮಲದ ಗುರುತಲ್ಲಿ ಚುನಾವಣೆ ಎದುರಿಸುವ (ಪಕ್ಷೇತರರಿಬ್ಬರನ್ನೂ ಸೇರಿಸಿಕೊಂಡು)ಹೊಸಬ ಬಿಜೆಪಿಗರಲ್ಲಿ ಮುಕ್ಕಾಲು ಪಾಲು ಮಣ್ಣುಮುಕ್ಕುತ್ತಾರೆ. ಮುಕ್ಕರಿಸಿಕೊಂಡು ಒಂದೈದು ಮಂದಿ ಗೆದ್ದರೂ, ಹಾಲಿ 105 ಪ್ಲಸ್ 5, ಒಟ್ಟು 110 ಸ್ಥಾನವನ್ನಷ್ಟೇ ಗಳಿಸಬಹುದು. 224 ಬಲದಲ್ಲಿ ಮ್ಯಾಜಿಕ್ ಸಂಖ್ಯೆ 113 ಗಳಿಸಲು ಆಗಲ್ಲ. ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಈ ದಿಗಿಲು ಈಗಾಗಲೇ ಹುಟ್ಟಿಕೊಂಡಿದ್ದು, ಸರ್ಕಾರ ರಚನೆಯಾದೊಡನೆ ಇನ್ನಷ್ಟು ಶಾಸಕರನ್ನ ಕಾಂಗ್ರೆಸ್ ದಳದಿಂದ ಎತ್ತಾಕಿಕೊಳ್ಳಲೇಬೇಕು ಎಂಬ ಗಟ್ಟಿ ನಿರ್ಧಾರಕ್ಕೆ ಬಂದುಬಿಟ್ಟಿದೆ.

 ಸೋಲೋದೇ ಖಚಿತ ಎಂಬಂಥ ವರದಿಗಳನ್ನ ನೋಡಿ ತಲ್ಲಣಗೊಂಡಿರುವ ಅತೃಪ್ತ ಶಾಸಕರೀಗ ಉಲ್ಟಾ ಹೊಡೆದರೇನು ಗತಿ ಎಂಬ ಚಿಂತೆಯೂ ಹೊತ್ತಿಕೊಂಡಿರುವುದರಿಂದ, ಅಂಥ ಸ್ಥಿತಿ ಬಂದರೂ ನಿಗಮ ಮಂಡಳಿಗಳಲ್ಲಿ ನೀವು ಕೇಳಿದ್ದನ್ನ ಕೊಡುತ್ತೇವೆ ಎಂಬ ಹೊಸಾ ಭರವಸೆಗಳನ್ನ ಕೊಡಲಾರಂಭಿಸಿದೆ, ಜತೆಗೆಯೇ ತಮ್ಮ ಸರ್ಕಾರದ ಬಳಿಕ ಇನ್ನು ಯಾರ್ಯಾರನ್ನ ಎತ್ತಾಕಿಕೊಳ್ಳಬೇಕು ಎಂಬ ಪಟ್ಟಿಯನ್ನ ಸಜ್ಜುಗೊಳಿಸಿಕೊಂಡಿರುವುದರಿಂದ, ಆಪರೇಷನ್ ಎಂಬುದು `ಮೂಗು ಇರುವವರೆಗೆ ನೆಗಡಿ ತಪ್ಪಿದ್ದಲ್ಲ' ಎಂಬಂತೆ ಸಾಂಗೋಪಸಾಂಗವಾಗಿ ನಡೆಯುವುದು ಖಚಿತ.