ನೀವೇ  ಬಣ್ಣ ತುಂಬಿದ ರಂಗೋಲಿ ಈ ದೆಹಲಿ

ನೆಮ್ಮದಿಯ ಬಣ್ಣ ತುಂಬಿದ್ದು ನೀವೇ ಶೀಲಾ ಜೀ

ನೀವೇ  ಬಣ್ಣ ತುಂಬಿದ ರಂಗೋಲಿ ಈ ದೆಹಲಿ

ತಮ್ಮ ಸಾಧನೆಗಳ ಪಟ್ಟಿಯನ್ನು ಗಂಟಲು ಹರಿಯುವಂತೆ ಹೇಳಿಕೊಳ್ಳುತ್ತ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಸ್ವಪ್ರಶಂಸಕರ ನಡುವೆ ಮಹತ್ತರವಾದ ಕೆಲಸಗಳನ್ನು ಮಾಡಿ ಸದ್ದಿಲ್ಲದೇ ಎದ್ದು ನಡೆದವರು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್. ಹಿರಿಯ ಕಾಂಗ್ರೆಸ್ ನಾಯಕಿ ಹಾಗೂ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಪಂಚಭೂತಗಳಲ್ಲಿ ಲೀನವಾದರೂ ದೆಹಲಿ ಅವರನ್ನು ಎದೆಯಲ್ಲಿಟ್ಟುಕೊಂಡಿರುತ್ತದೆ ಸದಾ. 

ಶೀಲಾ ದೀಕ್ಷಿತ್ 1998 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಇವರು 2003ರಲ್ಲಿ ಪಕ್ಷವನ್ನು ಗೆಲ್ಲಿಸಿ ಎರಡನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. 2008ರಲ್ಲಿ ನಡೆದ ರಾಜ್ಯ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಇವರು ಮೂರನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ದಾಖಲೆ ಸೃಷ್ಟಿಸಿದ್ದ ಶೀಲಾ ದೀಕ್ಷಿತ್  ಅವರ ಹೊಸ ದಿಲ್ಲಿ ಅಂದಗೊಳ್ಳುವಾಗಿನ ನೋವು ನಲಿವುಗಳನ್ನು ಅನುಭವಿಸಿದ ದೆಹಲಿವಾಸಿಗಳಲ್ಲಿ ನಾನೂ ಒಬ್ಬಳು !  

ನಾನು ಉದ್ಯೋಗವರಸಿ ಮನೆಯಿಂದ ಹೊರಬಿದ್ದದ್ದು 1994ರ ಆಸುಪಾಸು. ಹೊಸದಿಲ್ಲಿ, ದೇಶದ ರಾಜಧಾನಿ ಎಂಬ ಹೆಗ್ಗಳಿಕೆಯ ನಗರದಲ್ಲಿ ಸಾರಿಗೆ ವ್ಯವಸ್ಥೆ ಒಂಚೂರು ಸರಿಯಿದ್ದಿಲ್ಲ. ಸರ್ಕಾರದ ಸಾರ್ವಜನಿಕ ಬಸ್ಸುಗಳೆಂಬ ಡಿಟಿಸಿ ಬಸ್ಸುಗಳು ಇದ್ದರೂ ಖಾಸಗಿ ಬಸ್ಸಿನವರು ನಡೆಯಲು ಬಿಡುತ್ತಿದ್ದಿಲ್ಲ. ಜಗಳ ಮಾರಾಮಾರಿ ಮಾಡಿಯಾದರೂ ಡಿಟಿಸಿ ಬಸ್ಸುಗಳನ್ನು ಮೂಲೆಗೊತ್ತಿ ತಮ್ಮ ಅಟಾಟೋಪ ನಡೆಸುತ್ತಿದ್ದವರು ಖಾಸಗಿ ಬಸ್ಸುಗಳನ್ನು ನಡೆಸುವ ಜಾಟ್  ಗುಜ್ಜರ ಪುಂಡುಪೋಕರಿಗಳು.    

ಸುವ್ಯವಸ್ಥಿತವಾದ ನಗರವೆಂದರೆ ಆ ನಗರಕ್ಕಿರುವ ಅತ್ಯುತ್ತಮ ಸಾರಿಗೆ ಸಂಪರ್ಕ ಮತ್ತು ನಾಗರಿಕರಿಗೆ ಒದಗಿಸಲಾದ ಹಲವಾರು ಮೂಲಭೂತ ಸೌಕರ್ಯಗಳು ಎನ್ನಬಹುದು.  ಬ್ರಿಟಿಷರ ವಾಸುಶಿಲ್ಪಿ  ಎಡ್ವಿನ್ ಲುಟಿಯನ್ ಮತ್ತು ಕಟ್ಟಡ ನಿರ್ಮಾತೃಗಳಾಗಿದ್ದ ಸರದಾರ್ ಸುಜಾನ್ ಸಿಂಗ ಮತ್ತು ಸರ್ದಾರ್ ಶೋಭಾ ಸಿಂಗ್ ಅವರುಗಳೆಲ್ಲ ಸೇರಿ ಕಟ್ಟಿದ ದಿಲ್ಲಿ ಮಹಾನಗರವೇನೋ ಚೆನ್ನಾಗಿತ್ತು, ಸುಂದರವಾಗಿತ್ತು. ರಾಷ್ಟ್ರಪತಿಭವನ, ನಾರ್ಥ್ ಬ್ಲಾಕ್ ಸೌತ್ ಬ್ಲಾಕ್ ಕಡೆಗಿನ ಅಧಿಕಾರ ಕೇಂದ್ರಿತ ಸ್ಥಳಗಳತ್ತ ಹೋದರೆ ದಿಲ್ಲಿಯ ಚೆಲುವೇ ಬೇರೆ. ಗತ್ತು ಗಮ್ಮತ್ತಿನ ವೈಭವವೇ ಬೇರೆ. ಆ ಕೆಂಪು ಕಲ್ಲಿನ ಭವ್ಯ ಕಟ್ಟಡಗಳ ಸೊಬಗೇ ಬೇರೆ.  ಊರೊಳಗಿನ ಅವ್ಯವಸ್ಥೆ ಅನಾನುಕೂಲಗಳ ಸಂಕಟಗಳ ಜಗತ್ತೇ ಬೇರೆ ಎನ್ನುವಂತಿತ್ತು ದಿಲ್ಲಿ. 
 
ದೆಹಲಿಯ ರಸ್ತೆಗಳಲ್ಲಿ ಯಮದೂತ ರೆಡ್ ಲೈನ್ / ಬ್ಲೂ ಲೈನ್ ಬಸ್ಸುಗಳು ಯರ್ರಾಬಿರ್ರಿಯಾಗಿ ಓಡುತ್ತಿದ್ದವು. ಹೊಟ್ಟೆ ಬಿರಿಯುವಂತೆ ಜನರನ್ನು ತುಂಬಿಕೊಂಡು ರೆಡ್ ಲೈನ್ ಮತ್ತು ಬ್ಲೂ ಲೈನ್ ಬಸ್ಸುಗಳ ಜೊತೆ ಪೈಪೋಟಿಯಲ್ಲಿ ಓಡಾಡುತ್ತಿದ್ದದ್ದು ಮಿನಿ ಬಸ್ಸುಗಳು. ಇವು  ದೌಲಾ ಕುಂವಾದಿಂದ ನೆಹರೂಪ್ಲೇಸಿನವರೆಗೂ ಓಡಾಡುತ್ತಿದ್ದು ಸಮಯಕ್ಕೆ ಸರಿಯಾಗಿ ಬಾರದ, ಬಂದರೂ  ಹತ್ತಲಾಗದಷ್ಟು ವೇಗವಾಗಿ ಹೊರಟೇಬಿಡುತ್ತಿದ್ದ ಡಿಟಿಸಿ ಬಸ್ಸುಗಳಿಗಿಂತ ಅಲ್ಲಲ್ಲಿ  ನಿಂತು ಸವಾರರನ್ನು ಹತ್ತಿಸಿಕೊಳ್ಳುತ್ತಿದ್ದ  ಮಿನಿಬಸ್, ರೆಡ್ ಲೈನ್, ಬ್ಲೂ ಲೈನ್ ಖಾಸಗಿ ಬಸ್ಸುಗಳು ದಿಲ್ಲಿ ಬದುಕಿಗೆ ಅನಿವಾರ್ಯವಾಗಿದ್ದವು. ಆದರೆ ಅನಕೂಲಕರವಾಗಿದ್ದಿಲ್ಲ. ಪರಿಸರ ಸ್ನೇಹಿಯಾಗಿದ್ದಿಲ್ಲ. ದೆಹಲಿಯ ಕೆಟ್ಟ ಸಾರಿಗೆ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿದ್ದು, ದೆಹಲಿಯ ಉಸಿರನ್ನು ಹಸಿರಾಗಿಸಿದ್ದು  ಶೀಲಾ ದೀಕ್ಷಿತ್ ಅವರ ದಕ್ಷ ಆಡಳಿತದ ಕಾಲ.  ದಿಲ್ಲಿಯ ಹಳೆಗೋಡೆಯ ಮೇಲೆ ಹೊಸ ಇತಿಹಾಸವನ್ನು ಬರೆದದ್ದು ಶೀಲಾ ದೀಕ್ಷಿತ್ ಅವರ ದೂರದೃಷ್ಟಿ ಮತ್ತು ದಿಲ್ಲಿಯ ಮೇಲಿರುವ ಅದಮ್ಯ ಪ್ರೇಮ.  

ಕಾಲ ಬದಲಾದಂತೆಲ್ಲ ವಲಸಿಗರ ಸಂಖ್ಯೆ ಬೆಳೆದಂತೆ ಊರಿಗೆ ಉತ್ತಮ ಸಾರಿಗೆ, ಹೆಚ್ಚುತ್ತಿದ್ದ ಟ್ರ್ಯಾಫಿಕ್ ಜಾಮ್ಗಳನ್ನು ನಿಯಂತ್ರಿಸುವಂಥ ಮೇಲ್ ಸೇತುವೆಗಳ ನಿರ್ಮಾಣ, ರಸ್ತೆ ದಾಟಲು ಅಂಡರ್ ಪಾಸ್‍ಗಳು, ಹಸಿರು ದಿಲ್ಲಿ ಸ್ವಚ್ಚ ದಿಲ್ಲಿ ಸ್ಲೋಗನ್ ಅಡಿಯಲ್ಲಿ ಸುಲಭ ಶೌಚಾಲಯಗಳನ್ನು ಸ್ಥಾಪಿಸುವುದು, ಹಸಿರು ಉದ್ಯಾನವನಗಳನ್ನು ಬೆಳೆಸುವ, ರಸ್ತೆ ಅಗಲೀಕರಣದ ಹಲವಾರು  ಕಾರ್ಯಗಳು ಏಕಕಾಲದಲ್ಲಿ ನಗರದ ಉದ್ದಗಲಕ್ಕೂ ಹಲವು ಹಂತಗಳಲ್ಲಿ ಹಲವು ಪ್ರದೇಶಗಳಲ್ಲಿ ನಡೆಯುತ್ತಿದ್ದವು.  ಸದಾ ವಾಹನಗಳ ಓಡಾಟವಿರುವ ಮಹಾನಗರದಲ್ಲಿ ನಿರ್ಮಾಣ ಕಾರ್ಯುವೇನು ಸುಲಭದ್ದಲ್ಲ. ಈಗ ನೋಡಿದರೆ ಎಷ್ಟು ಸಕ್ಷಮವಾಗಿ  ಹೇಗೆಲ್ಲ ಇಷ್ಟು ಮೆಟ್ರೋ ಕಾರ್ಯಗಳು ನಡೆದವು ಎಂದು ಅಚ್ಚರಿಯಾಗುತ್ತದೆ.

ಔಟರ್ ರಿಂಗ್ ರೋಡಿನ ಹೌಜಕಾಸ, ಪಂಚಶೀಲ್ ಮಾಲವೀಯ  ನಗರ, ಚಿರಾಗ್ ದಿಲ್ಲಿ, ನೆಹರೂ ಪ್ಲೇಸ್  ಸೇತುವೆಗಳು ನಿರ್ಮಾಣವಾಗುತ್ತಿದ್ದಾಗ ನನ್ನ ನಿತ್ಯದ ಓಡಾಟದ ಹಾದಿ ಅದೇ ಆಗಿತ್ತು.  ಇತ್ತ ರಿಂಗ್ ರೋಡಿನಲ್ಲಿ ಸೌಥ ಎಕ್ಸ್, ಏಮ್ಸ್, ಸಫ್ದರ್ಜಂಗ್ ಆಸ್ಪೆತ್ರೆಯ ವರ್ತುಲಾಕಾರದ ಪ್ಲಸ್ ಮೈನಸ್ ಸೇತುವೆ, ಭಿಕಾಜಿ ಕಾಮಾ ಪ್ಲೇಸ್ ,  ಯೂಸೂಫ್ ಸರಾಯ್, ಗ್ರೀನ ಪಾರ್ಕ  ಪ್ರದೇಶಗಳಲ್ಲಿ ಒಂದಿಲ್ಲಾ ಒಂದು ಕಾರ್ಯ ನಡೆಯುತ್ತಲೇ ಇದ್ದಾಗ ಕೈಲಾಶ್ ಕಾಲೋನಿಯಲ್ಲಿ  ನನ್ನ ಕಚೇರಿಯಿದ್ದು ನಿತ್ಯದ ಓಡಾಟ ಆ ಮಾರ್ಗವಾಗಿಯೇ  ಇತ್ತು.  

ಒಟ್ಟಿನಲ್ಲಿ ದೆಹಲಿಯಲ್ಲಿ ಎತ್ತ ಹೋದರೂ ನಿತ್ಯವೂ ಅಸಾಧ್ಯವಾದ ಟ್ರ್ಯಾಫಿಕ್, ಧೂಳು, ದುಮ್ಮಾನಗಳನ್ನು ಕುಡಿಯುತ್ತ ಆಫೀಸಿಗೆ ಓಡಾಡಿದ ದಿನಗಳು ನೆನಪಾಗುತ್ತವೆ. ಜೊತೆಗೆ ಸದಾ ನಿರ್ಮಾಣ ಕಾರ್ಯದಿಂದುಂಟಾಗುತ್ತಿದ್ದ ಅನಾನುಕೂಲವೆಂದರೆ ಹಾವಿನಂತೆ ತೆವಳುವ ಸಾರಿಗೆ. ಇಂದು ನಗರದ ತುಂಬೆಲ್ಲ ಸೇತುವೆ , ಮೆಟ್ರೋ ರೈಲು , ಅಗಲವಾದ ರಸ್ತೆಗಳಿದ್ದರೂ ಒಂದು ಜೋರು ಮಳೆಯಾದರೂ ಸಾಕು ನೀರೆಲ್ಲ ಕಟ್ಟಿಹೋಗಿ ದೊಡ್ದ ಕೆರೆಯಾಗಿ ವಾಹನಗಳು ಕೆಟ್ಟುಹೋಗಿ  ಟ್ರ್ಯಾಫಿಕ್ ನಿಂತುಹೋಗಿ ಜನಜೀವನವೆಲ್ಲ ಅಸ್ತವ್ಯಸ್ತವಾಗುವ  ಹಿಂಸೆ ಇವತ್ತಿಗೂ ಇದೆ. 
   
ಒಮ್ಮೆ ಗ್ರೇಟರ್ ಕೈಲಾಶ್ ಪಾರ್ಟ್ ಎರಡರ  ತಿರುವಿನಲ್ಲಿ ರೆಡ್ ಲೈನ್ ಬಸ್ಸು ಹತ್ತಲಾಗದೇ  ಬಸ್ಸಿನಿಂದ ಬಿದ್ದು ಮೊಣಕಾಲು ಕೆತ್ತಿಸಿಕೊಂಡಿದ್ದೂ ಇದೆ. ಕಿಕ್ಕಿರಿದು ತುಂಬಿದ ಮಿನಿ ಬಸ್ಸಿನಿಂದ ಹೊರಬರಲಾರದೇ – “ಬೈಯ್ಯಾ  ಮುಝೆ ಉತಾರೋ “ ….ನನ್ನನ್ನು ಇಳಿಸಪ್ಪಾ….ಎಂದು ಕೂಗಿದರೂ ಆತ ಕ್ಯಾರೇ ಅನ್ನದೇ ನಾನು ಗಲಾಟೆ ಮಾಡಿ  ಮಿನಿ ಬಸ್ಸಿನ ಮಿನಿ ಕಂಡಕ್ಟರ್ ನನ್ನ ವ್ಯಾನಿಟಿ ಬಾಗನ್ನು ಅಕ್ಷರಶಃ ರಸ್ತೆಯ  ಪಕ್ಕಕ್ಕೆ  ಬಿಸಾಡಿ, ನೂಕುನುಗ್ಗಲಿನ ಸಂದಣಿಯಲ್ಲಿ ಸಿಕ್ಕಿಕೊಂಡಿದ್ದ  ನನ್ನನ್ನೂ ಎಳೆದು ಹೊರಗೆ ಬಿಸಾಕುವವನಂತೆ ಯಥಾವತ್ ಕೆಳಗೆ ಎಳೆದು ಹಾಕಿದ್ದ.  ಅಬ್ಬಾ, ಇಳಿದೆನಲ್ಲ ಅಂತ ಉಸಿರು ಬಿಟ್ಟಿದ್ದೆ.  ರಸ್ತೆಯಲ್ಲಿ ಬಿದ್ದ ನನ್ನ ಬ್ಯಾಗನ್ನು ಯಾರೋ ಎತ್ತಿಕೊಟ್ಟಿದ್ದರು.  ಅಂತೂ ಇಂತೂ ಹೇಗೋ ಮನೆ ತಲುಪಿದ್ದೆ. ಇಂಥ ಅವಾಂತರಗಳನ್ನೆಲ್ಲ ನೆನೆಪಿಸಿಕೊಂಡರೆ ಇಂದಿನ ದಿಲ್ಲಿಯ ಜೀವನ ನಿವೃತ್ತ ಜೀವನದಂತೆ ಆರಾಮದಾಯಕವಾಗಿದೆ ಎನ್ನಬಹುದು. ದೆಹಲಿ ಮತ್ತು ದೆಹಲಿಯ ಹೊರವಲಯದವರೆಗೂ ಚಾಚಿಕೊಂಡ ಮೆಟ್ರೊ ಸಾರಿಗೆ ನಮ್ಮ ಬದುಕನ್ನು ನೆಮ್ಮದಿಯಾಗಿಸಿದೆ ಎನ್ನಲಡ್ದಿಯಿಲ್ಲ.    
 
ವಾಯುಮಾಲಿನ್ಯದ ಅನುಪಾತ ಮಹಾನಗರದ ನರನಾಡಿಗಳಲ್ಲಿ ಹರಿದು ಪುಪ್ಪುಸಗಳನ್ನು ವಿಷವಾಗಿಸುತ್ತಿದ್ದಾಗ ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಆಧಾರಿತ ಬಸ್ಗಳನ್ನು ಕಡ್ದಾಯಗೊಳಿಸಿದ  ಹೆಗ್ಗಳಿಕೆ ಸಹ ಶೀಲಾ ಅವರಿಗೆ ಸಲ್ಲುತ್ತದೆ. ಆ ತನಕ ದೆಹಲಿಯಂಥ ರಾಜಧಾನಿಯಲ್ಲಿ ಹವಾ ನಿಯಂತ್ರಿತ ಬಸ್ಸುಗಳೇ ಇದ್ದಿಲ್ಲ.  ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಅನಕೂಲವಿರುವ ಲೋ ಫ್ಲೋರ್ ಸಿಎನ್‍ಜಿ ಬಸ್ಸುಗಳು ದೆಹಲಿಯ ಬಿರುಬಿಸಿಲಿನಿಂದ ನೆತ್ತಿಯನ್ನು ತಂಪುಗೊಳಿಸಿದವು. ಬೆಂಗಳೂರಿಗೆ ಹೋಲಿಸಿದರೆ ದಿಲ್ಲಿಯಲ್ಲಿ ಸಾರಿಗೆ ದರವೂ ಕಡಿಮೆ ಅನ್ನಬಹುದು.   

ಇಂದು  ದೆಹಲಿಯ ಏಂಸ್ ರಿಂಗರೋಡಿನಿಂದ ನೇರವಾಗಿ ಮಯೂರ ವಿಹಾರ ಮತ್ತು ನೊಯಿಡಾಗಳನ್ನು ತಲುಪಲು ಬರಾಪುಲ್ಲಾ ಸೇತುವೆ ಇದೆ.   ಬರಾಪುಲ್ಲಾ ಸೇರಿದಂತೆ ರಸ್ತೆ ಮೂಲಸೌಕರ್ಯ, ಗಾಂಧಿ ನಗರದಿಂದ ನೋಯ್ಡಾ ನಡುವಿನ ಸಿಗ್ನಲ್ ಮುಕ್ತ ಕಾರಿಡಾರ್, ಏಮ್ಸ್ ಫ್ಲೈಓವರ್-ಎಲಿವೇಟೆಡ್ ರೋಡ್ ನೆಟ್ವರ್ಕ್, ಐಟಿಒ ಫ್ಲೈಓವರ್, ರಾಜ್ಘಾಟ್ ರಿಂಗ್ ರೋಡ್ ಮತ್ತು ಟ್ರಾನ್ಸ್ ಯಮುನಾ ಪ್ರದೇಶದ ಎಲ್ಲಾ ಫ್ಲೈಓವರ್, ಮೇಲು ರಸ್ತೆ  ಅಭಿವೃದ್ಧಿ ಶೀಲಾ ಅವರ ಸಾಧನೆಯಾಗಿದೆ. 

"ಆಗಿನ ರೈಲ್ವೆ ಸಚಿವರು ಮತ್ತು ಸಂಸ್ಕೃತಿ ಸಚಿವರು ಬರಾಪುಲ್ಲಾ ಎಲಿವೇಟೆಡ್ ಕಾರಿಡಾರ್ ಹುಮಾಯೂನ್ ಸಮಾಧಿಯ ಸಮೀಪ ಹಾದುಹೋಗುತ್ತಿದ್ದ ಕಾರಣ ಬಲವಾಗಿ ವಿರೋಧಿಸಿದ್ದರು.ಅದೊಂದು ಸಂರಕ್ಷಿತ ಸ್ಮಾರಕವಾಗಿದೆ ಎಂಬ ಕಾರಣಕ್ಕೆ ಅವರು ಆಕ್ಷೇಪಿಸಿದ್ದರು. ಆದರೆ ಶೀಲಾ ದೀಕ್ಷಿತ್ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ. ಇದು ಜನತೆಗೆ ಅನುಕೂಲ ಕಲ್ಪಿಸುವ ಮಹತ್ವದ ಯೋಜನೆ ಎಂಬ ಮುನ್ನೋಟವಿದ್ದ  ಆಕೆ ಎಲ್ಲರ ಮನವೊಲಿಸಿದರು.  ಅಲ್ಲದೆ ನಗರ ಸಂಚಾರ ದಟ್ಟಣೆಗೆ ಇದು ಪರಿಹಾರವಾಗಲಿದೆ ಎಂಬ ಅರಿವೂ ಶೀಲಾ ಅವರಿಗಿತ್ತು.  ಯಾಕೆಂದರೆ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಶೀಲಾ ದೀಕ್ಷಿತ್ ನಗರದಲ್ಲಿ ಓಡಾಡುವಾಗ ಎಲ್ಲೆಲ್ಲಿ ಟ್ರ್ಯಾಫಿಕ್ ಜಾಮ್ ನಿಂದ ಅಡಚಣೆಗಳುಂಟಾಗುತ್ತಿದೆ , ಎಲ್ಲೆಲ್ಲಿ ಯಾವ ಯಾವ ಪ್ರಕಾರದಿಂದ ಜನರ ಜನಜೀವನವನ್ನು ಸುರಳಿತಗೊಳಿಸಬಹುದು ಎಂದೆಲ್ಲ  ಯೋಚಿಸುತ್ತಿದ್ದರು ಮತ್ತು ಯೋಚಿಸಿದ್ದನ್ನು ಮೌನವಾಗಿ ಕಾರ್ಯರೂಪಕ್ಕಿಳಿಸುತ್ತಿದ್ದರು.   

ವಿದ್ಯುತ್ ವಿತರಣೆ ಮತ್ತು ಉತ್ಪಾದನಾ ಜಾಲದಲ್ಲಿ ಖಾಸಗಿ ಪಾಲುದಾರರನ್ನು ದೀಕ್ಷಿತ್ ಸರ್ಕಾರ ಸ್ವಾಗತಿಸಿತ್ತು. ಇದರಿಂದಾಗಿ ಇಂದು ದೆಹಲಿ ವಿದ್ಯುತ್ ವಿಚಾರದಲ್ಲಿ ಅನಿಯಮಿತ ವಿದ್ಯುತ್ ಸರಬರಾಜು ಪಡೆಯುವ ದೊಡ್ಡ ನಗರವೆನಿಸಿದೆ. ವಿದ್ಯುತ್ ಖರೀದಿಸಲು ನಗರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೇಕಾದ ಎಲ್ಲವನ್ನೂ ಅವರು ಮಾಡಿದರು. ಮಾಲಿನ್ಯ ಮತ್ತು ಪರಿಸರ  ಕಾಳಜಿ ಅವರ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದವು. ಇದಕ್ಕಾಗಿ ಅವರು ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು. ಪಟಾಕಿ ಮುಕ್ತ ದೀಪಾವಳಿಗಾಗಿ, ಅವರು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದನ್ನು ನನ್ನ ಮಕ್ಕಳೂ ಇವತ್ತಿನವರೆಗೂ ಪಾಲಿಸಿಕೊಂಡು ಬಂದಿದ್ದಾರೆ. 

ಶೀಲಾ ಜಿ ಮಹಿಳೆಯರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ಯೋಜನೆಗಳನ್ನು ಪ್ರಾರಂಭಿಸಿದ್ದರು. 'ಸ್ಟ್ರೀ ಶಕ್ತಿ' (ಪವರ್ ಆಫ್ ವುಮನ್) ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರ ಅಗತ್ಯತೆಗಳನ್ನು ಪೂರೈಸುತ್ತದೆ. ಅಲ್ಲದೆ ಈ ಯೋಜನೆ ಮಹಿಳೆಯರಿಗೆ ಉತ್ತಮ ಆರೋಗ್ಯ, ಪೋಷಣೆ, ಶಿಕ್ಷಣ, ಆದಾಯ ಉತ್ಪಾದನೆ ಮತ್ತು ಕಾನೂನು ರಕ್ಷಣೆ ಒದಗಿಸುತ್ತದೆ.

ದೆಹಲಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಅವರ ಜನನ ನೋಂದಣಿಯನ್ನು ಉತ್ತೇಜಿಸಲು ಲಾಡ್ಲಿ ಯೋಜನೆ ನೆರವಾಯಿತು. ಭಾಗೀದಾರಿ' ಯೋಜನೆಯ ಮೂಲಕ ನಗರದ ಮೊದಲ ಸಾರ್ವಜನಿಕ ಸಹಭಾಗಿತ್ವ ಆಡಳಿತ ಮಾದರಿಯನ್ನು ಕಲ್ಪಿಸಿ ಅದರ ಜಾರಿಗೊಳಿಸಿದ ಕೀರ್ತಿ ದೀಕ್ಷಿತ್ ಅವರದ್ದು. 

ಭವ್ಯತೆಯ ಲುಟಿಯನ್ಸ್ ದಿಲ್ಲಿಯನ್ನು ಸಾಮಾನ್ಯರ ದಿಲ್ಲಿಯಾಗಿಸುವಲ್ಲಿ ನಿಮ್ಮಕೈಚಳಕವಿದೆ. ಸಮಯಪ್ರಜ್ಞೆಯಿದೆ. ಎಲ್ಲಕ್ಕೂ ಹೆಚ್ಚಾಗಿ ಪ್ರೀತಿಯಿದೆ. ಲಕ್ಷಾಂತರ  ನಾಗರಿಕರ ಬದುಕನ್ನು ಸುರಳಿತಗೊಳಿಸುವ ಆಶಯದಲ್ಲಿ ದೆಹಲಿಯೆಂಬ ರಂಗೋಲಿಯಲ್ಲಿ ನೆಮ್ಮದಿಯ ಬಣ್ಣ ತುಂಬಿದ್ದು ನೀವೇ ಶೀಲಾ ಜೀ,  ಸದಾ ನೆನಪಲ್ಲಿರುತ್ತೀರಿ ನೀವು ! ಮಿಸ್ ಯೂ…