ತಿಮ್ಮಪ್ಪ ಟಾಮಿಯ ತಬ್ಬಿಕೋ ಚಳವಳಿ!

ಆನೆ ಗಡಿಪಾರಿನ ವಿಷಯ ಎಲ್ಲರಂತೆ ನನ್ನಲ್ಲೂ ಕುತೂಹಲಕ್ಕೆ ಕಾರಣವಾಗಿತ್ತು. ಆ ವಿಷಯ ಓದಿ ತಿಳಕೊಂಡಿದ್ದೆನಾದ್ದರಿಂದ ಮಹಾ ಪರಿಸರವಾದಿಯಂತೆ ಮಾತನಾಡುತ್ತಿರುವ ತಿಮ್ಮಪ್ಪಟಾಮಿಯ ‘ಚಾ ಚರ್ಚೆ’ಗೆ ನಾನೂ ಧ್ವನಿಗೂಡಿಸಿದೆ. “ನಿನ್ ಮಾತಿಗೆ ನಂದೂ ಬೆಂಬ್ಲ ಐಯ್ತೆ ಟಾಮಿ. ಕಾಡೇ ಇಲ್ಲ ಅಂದಮ್ಯಾಲೆ ಆನೆಗಳು ವಾಕಿಂಗು, ಜಾಗಿಂಗು ಎಲ್ಲಿ ಮಾಡ್ಬೇಕು? ಆಗ ಊರಿಗ್ ಬಂದೇ ಬರ್‍ತಾವೆ...” ವ್ಯಂಗ್ಯದ ಧ್ವನಿಯಲ್ಲಿಯೇ ಕಿಚಾಯಿಸಿದೆ.

ತಿಮ್ಮಪ್ಪ ಟಾಮಿಯ ತಬ್ಬಿಕೋ ಚಳವಳಿ!

ಕೆರೆಯಂಗಳದ ತಿಮ್ಮಪ್ಪ ಟಾಮಿ ಲಕ್ಷ್ಮೀ ಕ್ಯಾಂಟೀನಿನಲ್ಲಿ ಗಂಭೀರವಾಗಿ ಚಾ ಹೀರುತ್ತಿದ್ದ. ಹಾಲಿನ ಪ್ಯಾಕೇಟು ತರಲೆಂದು ಹೋಗಿದ್ದ ನನ್ನನ್ನು ನೋಡಿದವನೇ, “ಬನ್ನೀ ಸಾಬ್ರೆ ಇಲ್ಲಿ... ಒಂದಿಸ್ಟ್ ಮಾತಾಡಾಣಾ...” ಎಂದು ಕರೆದ. ನಾನೂ ಚಾ ಕುಡ್ದಂಗಾಗುತ್ತೆ ಅಂತ ಹೋಗಿ ತಿಮ್ಮಪ್ಪ ಟಾಮಿ ಬಳಿ ಕುಳಿತುಕೊಂಡೆ. ಅವನೇ ಚಾಗೆ ಆರ್ಡರ್ ಮಾಡಿ, “ನೋಡಿ ಸಾಬ್ರೆ, ಇದೆಂಥಾ ಲಾಜಿಕ್ಕು... ಕಾಡು ಕಡ್ದಾಕಿದ್ರು... ಅಲ್ಲಿಂದ ಊರಿಗ್ ಬಂದಿರೋ ಆನೇನ್ನ ತೊಂದ್ರೆಕೊಡ್ತಿದೆ ಗಡಿಪಾರು ಮಾಡ್ರಿ ಅಂತ ಬೊಬ್ಬೆಹಾಕ್ತಿದ್ದಾರೆ ಜನ... ಇದು ನ್ಯಾಯಾನಾ?...” ಅಂದವನೇ ಚಾ ಹೀರತೊಡಗಿದ, ನೇರವಾಗಿ ವಿಷಯಕ್ಕೆ ಬಂದು.

ಆನೆ ಗಡಿಪಾರಿನ ವಿಷಯ ಎಲ್ಲರಂತೆ ನನ್ನಲ್ಲೂ ಕುತೂಹಲಕ್ಕೆ ಕಾರಣವಾಗಿತ್ತು. ಆ ವಿಷಯ ಓದಿ ತಿಳಕೊಂಡಿದ್ದೆನಾದ್ದರಿಂದ ಮಹಾ ಪರಿಸರವಾದಿಯಂತೆ ಮಾತನಾಡುತ್ತಿರುವ ತಿಮ್ಮಪ್ಪಟಾಮಿಯ ‘ಚಾ ಚರ್ಚೆ’ಗೆ ನಾನೂ ಧ್ವನಿಗೂಡಿಸಿದೆ. “ನಿನ್ ಮಾತಿಗೆ ನಂದೂ ಬೆಂಬ್ಲ ಐಯ್ತೆ ಟಾಮಿ. ಕಾಡೇ ಇಲ್ಲ ಅಂದಮ್ಯಾಲೆ ಆನೆಗಳು ವಾಕಿಂಗು, ಜಾಗಿಂಗು ಎಲ್ಲಿ ಮಾಡ್ಬೇಕು? ಆಗ ಊರಿಗ್ ಬಂದೇ ಬರ್‍ತಾವೆ...” ವ್ಯಂಗ್ಯದ ಧ್ವನಿಯಲ್ಲಿಯೇ ಕಿಚಾಯಿಸಿದೆ.

“ಆನೆ ಓಡಾಡೋ ದಾರೀಲಿ ಗದ್ದೆ ತ್ವಾಟ ಮನೆ ಮಾಡ್ಕೊಂಡು ಕುಂತ್ರೆ ಅದು ಆನೆ ತಪ್ಪಾ? ಜನ್ರು ತಪ್ಪಾ? ಓಡಾಡೋ ದಾರೀಲಿ ತಲೆಕೆಟ್ಟವ್ನು ಗಾಡಿ ನಿಲ್ಲುಸ್ಕೊಂಡ್ರೆ ನಾವಾದ್ರೂ ಸುಮ್ನರ್‍ತೀವಾ? ಕಾಡಲ್ಲಿ ಉಳ್ದಿರಾದೇ ಒಂದಾನೆ. ಅದನ್ನೂ ಗಡಿಪಾರು ಮಾಡ್ರಿ ಅಂದ್ರೆ ಹೆಂಗ್ರಿ? ಈ ಜನಕ್ಕೆ ಬುದ್ದೀನೇ ಇಲ್ವಾ?” ಒಂದೇ ಸಮನೆ ತಿಮ್ಮಪ್ಪಟಾಮಿ ಭಾಷಣ ಬಿಗಿಯಲಾರಂಭಿಸಿದ.

“ಚಾ ಹೇಳಿದ್ರಿ. ಬಂದೇ ಇಲ್ವಲ್ಲಾ!” ಎಂದು ಬ್ರೇಕು ಹಾಕಿದೆ, ಅವನ ಮಾತಿಗೆ. “ಅದೇನ್ ಅರ್ಜೆಂಟ್ರೀ ನಿಮ್ಗೆ. ಪ್ರೆಶ್ಶಾಗಿ ಬರುತ್ತೆ ತಡೀರಿ ಸ್ವಲ್ಪ” ಎಂದವನೇ ಕ್ಯಾಂಟೀನಿನ ಭಟ್ಟರಿಗೆ ಕೂಗಿ, “ಬೇಗ ಚಾ ಕೊಡಪ್ಪಾ” ಎಂದ. ಅವನು ಚಾ ತಂದಿಟ್ಟು ಹೋದಮೇಲೆ ಸುಡುತ್ತಿದ್ದ ಚಾ ಆರಿಸಿಕೊಂಡು ಕುಡಿಯಲು ಪ್ರಯತ್ನಿಸಿದೆ. ಅಷ್ಟರಲ್ಲಿ ತಿಮ್ಮಪ್ಪಟಾಮಿ ಮತ್ತೆ ಮಾತಿಗಿಳಿದ;

“ನಮ್ ಜನಕ್ಕೆ ಸಿಂಹ ಕಾಣಂಗಿಲ್ಲ, ನರಿ ಹೂಸು ಬಿಡಂಗಿಲ್ಲ, ಹುಲಿ ಸಿಗಂಗಿಲ್ಲ, ಹಾವ್ ಹರಿಯಂಗಿಲ್ಲ, ಕೊನೇಗ್ ಮರಾನೂ ಬೆಳ್ದು ನಿಲ್ಲೋಹಂಗಿಲ್ಲ... ಎಲ್ಲದಕ್ಕೂ ಹೆದರ್‍ತಾವೆ. ಹೆದರ್‍ಕೊಂಡೇ ಎಲ್ಲಾನೂ ಕೊಂದಾಕ್ತಾವೆ. ಅತ್ಲಾಗ್ ಕಾಡೂ ನೆಟ್ಟಗಿಲ್ಲ, ಇತ್ಲಾಗ್ ನಾಡೂ ನೆಟ್ಟಗಿಲ್ಲ... ಇರೋ ಆನೇನ ಗಡಿಪಾರು ಮಾಡ್ರಿ ಅಂದ್ಬಿಟ್ರೆ ಮಾಡೋದೆಂಗ್ರೀ ಸಾಬ್ರೆ...” ಆನೆಯನ್ನು ಗಡಿಪಾರು ಮಾಡುವುದು- ಬಿಡುವುದು ನಮ್ಮ ಕೈಯಲ್ಲೇ ಇದೆಯೇನೋ ಎಂಬಂತೆ ಮಾತನಾಡುತ್ತಿದ್ದ ತಿಮ್ಮಪ್ಪಟಾಮಿಯ ಹಾವಭಾವ ವಿಚಿತ್ರವಾಗಿ ಬದಲಾಗತೊಡಗಿತ್ತು. ಗಂಭೀರವಾದ ಆತನ ಮುಖದಲ್ಲಿ ಭಾವುಕತೆ ತುಂಬಿಕೊಳ್ಳತೊಡಗಿತ್ತು. ಯಾವತ್ತೂ ಹೀಗೆ ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ತಿಮ್ಮಪ್ಪಟಾಮಿ ಮಾತಾಡಿದವನೇ ಅಲ್ಲ. ಇವತ್ಯಾಕೋ ಗಡಿಪಾರಾಗಲಿರುವ ಆನೆಯ ಬಗ್ಗೆ ವಿಪರೀತವಾಗಿಯೇ ಭಾವುಕನಾಗಿದ್ದಾನೆ ಎನಿಸಿತು.

ತಿಮ್ಮಪ್ಪ ಶಿವಮೊಗ್ಗದ ಬಸ್ಟಾಡ್ ಹಿತ್ತಲಲ್ಲೇ ಹುಟ್ಟಿದವನು. ಬಸ್ಟಾಯಂಡ್ ಹಿತ್ತಲು ಎಂದರೆ ಅದು ಕೆರೆಯಂಗಳವೇ. ಈ ಸ್ಲಮ್ಮಿನಲ್ಲೊಂದು ಗುಡಿಸಲು ಅವನದು. ತರಕಾರಿ ತಂದು ಗಾಡಿಯಲ್ಲಿ ಮಾರೋದು ಕೆಲಸ. ಎಲ್ಲಾ ಕಡೆ ಸುತ್ತಾಡಿ ಮಾರೋ ಉಸಾಬರಿಗೆ ಅವನು ಹೋಗ್ತಿರಲಿಲ್ಲ. ಒಂದಿಷ್ಟು ಹೋಟ್ಲುಗಳಿಗೆ ತರಕಾರಿ ಸರಬರಾಜು ಮಾಡಿಬಿಟ್ರೆ ಅವನ ಕೆಲಸ ಅವತ್ತಿಂದು ಮುಗಿದಂಗೆ. ಆಮೇಲೆ ಚಾ ಚರ್ಚೆಗೆ ಕುಂತುಬಿಟ್ರೆ ಮುಗಿದೇಹೋಯ್ತು. ರಾತ್ರಿಗೂ ಲಗಾಮೇ ಇಲ್ಲ ಮಾತಿಗೆ. ಅಂಥವನು ಈ ತಿಮ್ಮಪ್ಪಟಾಮಿ. ಇನ್ನೊಂದು ವಿಷಯ -ಈ ತಿಮ್ಮಪ್ಪನಿಗೆ ಟಾಮಿ ಜತೆಯಾಗಿದ್ದು ಹೇಗೆ? ಅಂತದ್ರೆ... ಅವನ ಮಾತಲ್ಲೇ ಕೇಳಿ!

“ನನ್ ಗುಡಿಸ್ಲು ಐತಲ್ಲ ಆ ಕೆರೆಯಂಗಳದಲ್ಲಿ ಕಜ್ಜಿನಾಯಿವೊಂದಿತ್ತು. ಕಜ್ಜಿನಾಯಿಯಲ್ವಾ... ಕಂಡೋರೆಲ್ಲ ಕಲ್ಲು ಹೊಡೆಯೋರು. ಹಿಂಗೆ ಕಲ್ಲು ಹೊಡ್ತಾ ತಿಂದುತಿಂದೂ ಕಜ್ಜಿನಾಯಿ ಮತ್ತಷ್ಟು ಭೀಕರವಾಗಿಬಿಟ್ಟಿತ್ತು. ನಗರ್‌ಸಭೇಗೆ ಕಂಪ್ಲೆಂಟೂ ಕೊಟ್ರು. ಈ ನಾಯೀನ ಹಿಡಿಯೋಕೆ ಬಂದಾಗ ನಾಯೀನೇ ಮಂಗಮಾಯ! ಬಂದೋರು ಹುಡ್ಕೋವಸ್ಟು ಹುಡ್ಕಿದ್ರು. ಹೊಂಟುಹೋದ್ರು. ಅವ್ರು ಹೋಗಿದ್ದೇತಡ ಮತ್ತೆ ಎಲ್ಲಿಂದ್ಲೋ ಕಜ್ಜಿನಾಯಿ ಪ್ರತ್ಯಕ್ಷ ಆಗ್ಬಿಡ್ತು. ಮತ್ತೆ ಜನ ಕಲ್ಲು ಹೊಡೆದ್ರು, ಹೊಡೀತಾನೇ ಇದ್ರು. ರಾತ್ರಿ ಗುಡಿಸ್ಲಿಗೆ ಹೋಗೋವಾಗ ನನ್ನೇ ಅಲ್ಲಿಇಲ್ಲಿ ನಿತ್ಗಂಡು ಗುರಾಯಿಸ್ತಿತ್ತು. ಕಜ್ಜಿನಾಯಿಬೇರೆ, ಕಚ್ಚಿಬಿಟ್ರೆ ಅಂತ ನಂಗೆ ಭಯ. ಈ ನಾಯಿಗೆ ಹುಚ್ಚುಗಿಚ್ಚು ಹಿಡ್ಕಂಡಿದ್ರೆ! ಅದು ನಂಗೆ ಕಚ್ಚಿ ನಾನು ನಾಯಿಥರಾ ಬೊಗ್ಳಕ್ಕೆ ಶುರುಮಾಡ್ಬಿಟ್ರೆ? ಜನ ನಂಗೂ ಕಲ್‌ತಗಂಡು ಬೀಸಿದ್ರೆ... ಏನೇನೋ ಯೋಚ್ನೆಗಳು, ಏನೇನೋ ಕನ್ಸುಗಳು ಬೀಳ್ತಿದ್ವು...

ಅದೊಂದಿನ ಕೆರೆಯಂಗಳದಲ್ಲಿ ಗಲಾಟೆಯೋ ಗಲಾಟೆ. ಕಜ್ಜಿನಾಯಿ ಮೇಲೆ ಯಾವ್ದೋ ಮಂಗ ಕುಂತ್ಗಂಡಿತ್ತು. ನಾಯಿ ಮೈಮೇಲಿದ್ದ ಕಜ್ಜೀನೆಲ್ಲ ನೆಕ್ತಿತ್ತು. ನಮ್‌ಬೀದಿ ಜನಾ ಸುಮ್ನರ್‍ಬೇಕಲ್ಲ, ಮತ್ತೆ ಕಲ್ಲು ಹೊಡೆದ್ರು. ನಾಯಿಗೆ ಅಭ್ಯಾಸ ಆಗ್ಬಿಟ್ಟಿತ್ತಲ್ಲ, ಸುಮ್ನಿತ್ತು. ಮಂಗಂಗೆ ಹೊಸಾ ಅನುಭವ. ಕಲ್ಲುಬಿದ್ದ ಕೂಡ್ಲೇ ಗೊರ್... ಗೊರ್... ಅಂತ ಮೂತಿ ಏರಿಸ್ತು. ಜನ ಮತ್ತೂ ಕಲ್ಲು ಹೊಡೆದ್ರು. ಮಂಗಂಗೆ ಸಿಟ್ಟು ನೆತ್ತಿಗರ್‍ತೇನೋ ಜನ್ರನ್ನೇ ಓಡುಸ್ಕೊಂಡು ಹೋಗಿ ಕಲ್ಲು ಬೀಸ್ತಿತ್ತು. ಜನ ಹೋ... ಅಂತ ದಿಕ್ಕಾಪಾಲು. ಮಂಗನ್ ಸಾವಾಸ್ವೇ ಬೇಡ ಅಂತ ಕಲ್ಲುಹೊಡೆಯೋದು ಬಿಟ್ರಾಗ. ದಿನ ಹಿಂಗೇ ಮುಂದೋದ್ವು. ನಾಯಿ-ಮಂಗನ್ ದೋಸ್ತಿ ಮನೆಮನೆ, ಬೀದಿಬೀದಿ ಕಥೆಯಾಯ್ತು. ಅವರ್‍ದನ್ನ ನೋಡಾಕಂತಾನೇ ಜನ ಬರೋರು. ನಾಯಿಯ ಕಜ್ಜಿ ನೆಕ್ಕಿನೆಕ್ಕಿ ಮಂಗ ಆಟತೋರಿಸ್ತಿತ್ತು. ನಾಯಿನೂ ಮಂಗಕ್ಕೆ ಮುದ್ದಿಸ್ತಿತ್ತು. ಜನ ಚಪ್ಪಾಳೆ ತಟ್ಟೋರು ಆಗ. ರಂತಾರಂತಾ ಕಜ್ಜಿನಾಯಿ ಮೈಯಲ್ಲಿ ಕರಿಕೂದ್ಲು ಬೆಳೆಯೋಕೆ ಶುರುವಾಯ್ತು. ನೋಡ್ತನೋಡ್ತಾನೇ ಕಜ್ಜಿನಾಯಿ ಸುಂದರ ನಾಯಿಯಾಗಿಬಿಡ್ತು...

ನಾಯಿಗ್ಹಾಕಿದ್ದು ಮಂಗ ಉಣ್ತಿತ್ತು. ಮಂಗಗ್ಹಾಕಿದ್ದು ನಾಯಿ ತಿನ್ತಿತ್ತು. ನಾನೂ ಬಿಸ್ಕತ್ತು, ಕಡ್ಲೆಕಾಯ್, ಬ್ರೆಡ್ಡು ಅವು ತಿನ್ಲಿಕ್ಕೇಂತ ತಗೊಂಡೋಗಾಕೆ ಶುರುಮಾಡ್ದೆ. ಆಮೇಲಾಮೇಲೆ ಬೀದೀಲಿ ನಾನ್ಕಂಡ್ರೆ ಸಾಕುರ್‍ಡೂ ಓಡೋಡಿ ಬರೋವು. ನಾಯಿ ಮೈಯಲ್ಲಾ ಮೂಸ್ತಿತ್ತು. ಮಂಗ ತಲೆಮೇಲೆ ಕರ್‍ತಿತ್ತು. ತಂದಿದ್ದು ತಿಂದಾದಮೇಲೂ ನನ್ಜೊತೇಗೇ ಇರವು. ಜತೇಗೇ ಮಲಕ್ಕಳವು. ಗುಡಿಸ್ಲೊಳ್ಗೆ ನಾವೇ ಮರುಜೀವಾ... ಸುಮ್ನೇ ಹಾಗೇ ಒಂದಿನ ನಾಯಿಗೆ ಟಾಮಿ ಅಂತ ಹೆಸ್ರಿಟ್ಟೆ. ಮಂಗಂಗೆ ಹನುಮಂತ ಅಂತ ರಂದೆ. ಹೆಸ್ರಿಟ್ಟಾಯ್ತಲ್ಲ, ಬೂಂದಿತಂದು ಕೆರೆಯಂಗಳಕ್ಕೆಲ್ಲಾ ಹಂಚ್ದೆ. ಅಲ್ಲಿಂದ ನಂಗೂ ಟಾಮಿ ಹೆಸ್ರು ಸರ್‍ಸಿ ಕರುದ್ರು ಜನ. ‘ತಿಮ್ಮಪ್ಪನ್ ಟಾಮಿಗೆ ಕರೀ’ ಅಂತ ಹುಡುಗ್ರಿಗೆ ಹೇಳಿಕೊಡೋರು. ಕಡೆಕಡೇಗೆ, ‘ಟಾಮಿ ತಿಮ್ಮಪ್ಪನತ್ರ ರ‍್ಕಾರಿತಾ’ ಅಂತಾನೇ ಮಕ್ಳಿಗೂ ಕಳ್ಸೋರು. ಹಿಂಗೆ, ನಾನು ತಿಮ್ಮಪ್ಪ ಹೋಗಿ ತಿಮ್ಮಪ್ಪಟಾಮಿ ಅಂತಾನೋ ಟಾಮಿ ತಿಮ್ಮಪ್ಪ ಅಂತಾನೋ ಜನ ಗುರುತ್ಸೋಹಂಗೆ ಆಗ್ಹೋದೆ!...
ಆಮೇಲೇನಾಯ್ತಂದ್ರೆ...

ಸರಿಯಾದ ಹೊತ್ಗೆ ಉಣ್ಣಕ್ಕೊಡೋಣ ಅಂತ ಮಂಗನ ಕುತ್ಗೆಗೆ ಬೆಲ್ಟುಹಾಕಿ ಕಟ್ಟಾಕೋಕೆ ಶುರುಮಾಡ್ದೆ. ಅಲ್ಲೇ ಯಡ್ವಟ್ಟಾಗಿದ್ದು. ಹಂಗೊAದಿನ ಕಟ್ಟಾಕ್ದಾಗ ಯಾವಾಗ್ಲೋ ಗಂಟುಬಿಚ್ಕೊಂಡು ಹೋಗ್ಬಿಡ್ತು. ಯಾರ್ ಹಿಡ್ಕಂಡೋದ್ರೋ ಏನ್‌ಕಥೆಯೋ ಆಮೇಲೆ ಯಾರೂನೂ ಮಂಗನ್ನ ನೋಡ್ಲೇಯಿಲ್ಲ. ಒಂದ್ರುಮೇಲೊಂದು ಜೀವಾನೇ ಇಟ್ಕೊಂಡಿದ್ದವಲ್ಲ; ಮಂಗ ಇಲ್ದಿರೋದು ನೋಡಿ ಟಾಮಿ ಮಂಕಾಯ್ತು, ಊಟಬಿಡ್ತು, ಕೊನೇಗೆ ಜೀವಾನೂ ಬಿಡ್ತು. ಎರಡೂ ಜೀವ ಕಣ್ಮುಂದೇನೇ ಕಳ್ದುಹೋದ್ವು...”
ತಿಮ್ಮಪ್ಪ ತಿಮ್ಮಪ್ಪಟಾಮಿಯಾದ ಕಥೆ ಇದು.

“ಆನೇನ ಗಡೀಪಾರು ಮಾಡೋದನ್ನು ತಪ್ಪಿಸೋದು ಹೆಂಗೆ ಟಾಮಿಯವ್ರೇ?” ಪೂರ್ತಿ ಚಾ ಹೀರಿದ್ ಮೇಲೆ ಕೇಳ್ಬಿಟ್ಟೆ. ತಿಮ್ಮಪ್ಪಟಾಮಿ ಮತ್ತೆ ಬೈಟು ಚಾಗೆ ಆರ್ಡರ್ ಮಾಡಿ ನನ್ನನ್ನೇ ದುರುಗುಟ್ಟಿ ನೋಡಿದ. ಭಟ್ಟ ಅಷ್ಟರಲ್ಲಿ ಚಾ ತಂದಿಟ್ಟ. ಒಂದು ಸಿಪ್ಪು ಹೀರಿ, ‘ಅದೇನ್ ಚಾ ಮಾಡ್ತಿಯೋ ಭಟ್ಟ. ನೀರಾದ್ರೂ ರುಚಿಯಿರುತ್ತೆ. ಕೊಡೋ ಕಾಸ್ಗೆ ಬೆಲೆ ಇಲ್ವೇನೋ’ ಎಂದು ದಬಾಯಿಸಿದ. ಬೈತಾಬೈತಾನೇ ಚಾ ಕುಡ್ದು, “ಯಾವ್ದೋ ಟೀವೀಲಿ ತೋರುಸ್ತಿದ್ನಪ್ಪಾ, ಡ್ಯಾಮು ಕಟ್ಟಿದ್ಕೆ ಹಿಂಗಾಯ್ತಂತೆ. ಈಗ ಸತಾಯಿಸ್ತೆಂತಲ್ಲ ಆನೆ ಅದು ಭದ್ರಾಕಾಡಿಂದಂತೆ. ಇದ್ರ ಜತೇಗೆ ಇನ್ನೂ ಎರಡೂ ಆನೆಗಳಿದ್ವಂತೆ. ಅವರಡೂ ಸತ್ತೋಗಿ ಇದೊಂದೇ ಉಳ್ಕಂಡಿರೋದಂತೆ...” ಎಂದ. ಇದೆಲ್ಲಾ ಯಾವ ಟೀವೀಲಿ ತೋರಿಸುದ್ರೋ ಅಥವಾ ತಿಮ್ಮಪ್ಪಟಾಮಿಯ ಕಟ್ಟುಕಥೆಯೋ ಎಂಬ ಗೊಂದಲಕ್ಕೆ ಹೋಗದೇ ಕುತೂಹಲವಿದ್ದಿದ್ದರಿಂದ ಮತ್ತೊಂದಿಷ್ಟು ಕೇಳಲು ಮನಸಾಗಿ, ರೀ... ಡ್ಯಾಮಿಗೂ ಆನೆಗೂ ಏನ್ರಿ ಸಂಬಂಧ?” ಎಂದೆ.

“ಭದ್ರಾ ಡ್ಯಾಮು, ಗಾಜ್ನೂರ್ ಡ್ಯಾಮು ಕಟ್ಟಿದ್ಮೇಲೆ ಆನೆದಾರಿ ಕಿತ್ತೋಯ್ತಂತೆ. ಒಂದ್ಕಾಡಿಂದ ಇನ್ನೊಂದ್ಕಾಡಿಗೆ ಹೋಗೋ ದಾರೀನೇ ಮುಚ್ಕಂಡು ಹೋಯ್ತಂತೆ. ಆಮೇಲೆ ಈ ಆನೆ ಇಲ್ಲೇ ಉಳ್ಕಂಡು ಉಳಿದೇರಡು ಅಲ್ಲೇ ಉಳ್ಕೊಂಡ್ವಂತೆ. ಅತ್ಲಾಗೆ ಹೋಗಕ್ಕಾಗ್ದೇ ಈ ಆನೆ ರಂಗೆಲ್ಲಾ ನುಗ್ತಂತೆ. ಕೆಂಚಪ್ಪ ಅನ್ನೋನ್ನ ತುಳ್ದಾಕಿ, ಕಂಡೋರನ್ನ ಓಡುಸ್ಕೊಂಡು ಹೋಗ್ತೆತಂತೆ. ಹೊಟ್ಟೆಗೂ ಏನಾರ ಬೇಕಲ್ವಾ? ಗದ್ದೆತ್ವಾಟ ನುಗ್ತು, ಸಿಕ್ಕದ್ನೆಲ್ಲಾ ತಿಂತು, ಹಾಳ್ಮಾಡ್ತು. ಆನೇದೇನೈತೆ ತಪ್ಪು? ಅಲ್ವಾ ಸಾಬ್ರೇ...” ತಿಮ್ಮಪ್ಪಟಾಮಿ ತಾನೇ ಕಥೆ ಹೆಣೆದಿದ್ದಾನೆ ಅಂತ ತಿಳಿಯೋಕೆ ಬಹಳ ಹೊತ್ತೇನೂ ಬೇಕಿರಲಿಲ್ಲ. ಆದ್ರೂ ಅವ್ನ ಆನೆ ಕಾಳಜಿಗೆ ಖುಷಿಯಾಯ್ತು. ತರ್ಕಾರಿ ಮಾರೋನ ತರ್ಕದಲ್ಲೂ ಅರ್ಥವಿತ್ತು. ಎಲಿಫೆಂಟ್‌ಪಾಥ್ ಬಗ್ಗೆ ಎಲ್ಲೋ ಓದಿದ್ದ ನೆನಪು ಬೇರೆ ಹಸಿರಾಯ್ತು. ತಿಮ್ಮಪ್ಪಟಾಮಿ ಹೆಣೆದ ಕಥೆಗೆ ನಾನೂ ಒಂದಿಷ್ಟು ಮಸಾಲೆ ಸೇರಿಸಲುತೊಡಗಿದೆ. “ಸರೀನೇ ಹೇಳಿದ್ರಿ. ಆನೆ ಓಡಾಡೋ ದಾರೀಲಿ ಕರ್‍ಟ್ಕೊಂಡ್ರು, ಡ್ಯಾಮುಕಟ್ಕೊಂಡ್ರು, ಗದ್ದೆತೋಟ ಮಾಡ್ಕಂಡ್ರು, ಓಡಾಡೋಕೆ ರಸ್ತೇನೂ ಮಾಡ್ಕಂಡ್ರು... ಈಗ್ನೋಡಿ, ಆನೆ ಹಂಗ್ಮಾಡ್ತು-ಆನೆ ಹಿಂಗ್ಮಾಡ್ತು ಅಂತ ಬೊಬ್ಬೆ ಹಾಕ್ತಿದಾರೆ. ಈ ಹಾಳುಜನ ನಮ್ದಾರಿ ಒತ್ತುವರಿ ಮಾಡ್ಕಂಡಿದಾರಂತ ಆನೆ ಕೋರ್ಟಿಗೆ ಹೋಗಿ ನ್ಯಾಯ ಕೇಳೋದುಂಟಾ? ಹೆಂಗಾದ್ರು ಮಾಡಿ ಆನೆಗೆ ನಾವೇ ನ್ಯಾಯ ಕೊಡುಸ್ಬೇಕು ಕಣ್ರೀ...” ಅಂದೆ. ನನ್ನ ಮಾತುಗಳಲ್ಲಿರೋ ವ್ಯಂಗ್ಯ ಅವನಿಗೆ ಅರ್ಥವಾಗುವಷ್ಟು ಬುದ್ದಿವಂತನಲ್ಲ ಎಂದುಕೊಂಡೇ ನಾನು ಮಾತನಾಡುತ್ತಿದ್ದೆ. ಅದು ನಿಜಾನೂ ಆಗಿತ್ತು.

“ನ್ಯಾಯ ಕೊಡ್ಸುಬೇಕಂದ್ರೆ ಹೆಂಗ್ರೀ ಸಾಬ್ರೆ? ಜನರು ತರುಗಿಬಿದ್ದಿದ್ದಾರೆ. ಇರೋದೇ ಒಂದಾನೆ ಅಂದ್ರೆ ಕೇಳರ್‍ಬೇಕಲ್ಲ. ಆನೆಹಿಡ್ದು ಗಡಿಪಾರು ಮಾಡ್ರೀ ಅಂತಾನೇ ದ್ವಡ್‌ಗಲಾಟೆ ಆಗೋಗೈತೆ. ಪಾರೆಸ್ಟಾಪೀಸ್ನೇ ಪುಡಿಪುಡ್ಡೀ ಮಾಡವ್ರೆ. ನಾವೇನಾದ್ರು ಆ ಜನ್ಗಳತ್ರ ಹೋಗೋದುಂಟಾ? ನಮ್ನೇ ಸೀಳಿ ತಕ್ಷಣ ಕಟ್ಬಿಡ್ತಾರೆ... ಯಾವ್ದಕ್ಕೂ ನಾವೂನೂ ಹುಷಾರ್‍ ಇರ್ಬೇಕು ಸಾಬ್ರೇ...”
ತಿಮ್ಮಪ್ಪಟಾಮಿಯ ದನಿ ಗಡಸಿನಿಂದ ತೆಳುವಾಗಿದ್ದು ನೋಡಿ ನಗು ಬಂದಂಗಾಯ್ತು.

“ನನ್ನತ್ರ ಒಂದ್ ಐಡ್ಯಾ ಇದೆ ಕಣ್ರೀ ತಿಮ್ಮಪ್ಪಟಾಮಿಯವ್ರೇ... ಹೇಳೂಂದ್ರೆ ಹೇಳ್ತೀನಿ. ಸ್ವಲ್ಪ ಡೇಂಜರಸ್ಸು” ಅಂತಂದು ಅವನ ಮುಖನೋಡಿದೆ. ನಾನೆಲ್ಲೋ ಅವನಿಗೆ ತೊಂದರೆಗೆ ದೂಡ್ತಿದೀನಿ ಅಂದ್ಕೊಂಡಿರಬೇಕು. ಅವನ ಗಂಭೀರ ಮುಖ ಸಪ್ಪೆಯಾಗ್ತಿರೋದು ಸ್ಪಷ್ಟವಾಗಿತ್ತು. ಆದರೂ ಅದೇನಂತ ಕೇಳಿದ. ನಾನು ಹೇಳಿದೆ-

“ಅಪ್ಪಿಕೋ ಚಳವಳಿ ಅಂತ ಒಂದ್ಕಾಲ್ದಲ್ಲಿ ನಡೀತು. ಗೊತ್ತೆಂತಾ ನಿಮ್ಗೆ?” ಪ್ರಶ್ನಿಸಿದೆ. “ಊಂ...ಹ್ಞೂಂ...” ಎಂದು ತಲೆ ಅಲ್ಲಾಡಿಸಿದ. ನಾನು ವಿವರಿಸಿದೆ- “ಮರಗಳನ್ನು ಕಡಿಯೋಕೆ ಬಂದಿದ್ರಂತೆ. ಆಗ ಜನರ ಒಂದೊಂದು ಮರಾನ ಒಬ್ಬೊಬ್ರು ಅಪ್ಕೊಂಡು ನಿಂತು ಕಡೀರಿ ಅಂದ್ರಂತೆ. ಆಗ ಯಾವ್ ಮರಾನೂ ಕಡಿಯೋಕ್ಕಾಗ್ದೇ ಹಂಗೆಬಿಟ್ಟು ಹೊಂಟೋದ್ರಂತೆ...”

ಮಾತು ಮುಗಿಸುವ ಮುಂಚೇನೇ ತಿಮ್ಮಪ್ಪಟಾಮಿ ಬಾಯಿಹಾಕಿ, “ಐಡ್ಯಾ ಹೇಳ್ತೀನಂದ್ರಲ್ಲ ಸಾಬ್ರೇ... ಅದನ್ನೇಳ್ರೀ...” ಎಂದ. “ಅದ್ನೇ ಹೇಳ್ತಿರೋದು... ನೀವೂ ಹಂಗೇನೇ ಆನೇನ ತಬ್ಕಂಡು... ತಬ್ಬಿಕೋ ಚಳ್ವಳಿ ಮಾಡ್ರೀ... ಆನೇನೂ ಗಡಿಪಾರಾಗಲ್ಲ, ನೀವೂ ಫೇಮಸ್ಸಾಗ್ಬಿಡ್ತೀರಿ...” ಅಂದೆ. ನನ್ನ ಮಾತುಕೇಳಿ ತಿಮ್ಮಪ್ಪಟಾಮಿ ಇನ್ನೂ ಮಂಕಾಗ್ತಾನೆ ಅಂದ್ಕೊಂಡು ಮುಖ ನೋಡ್ದೆ. ಆದ್ರೆ ಹಂಗಾಗ್ದೇ ಸಪ್ಪೆ ಮುಖದ ಮೇಲೆ ಗರಿಗರಿ ಉತ್ಸಾಹ ಚಿಮ್ಮತೊಡಗಿ ದಂಗಾದೆ. ತಬ್ಬಿಕೋ ಚಳವಳಿ ಬಗ್ಗೆ ಹೇಳಿ ತಪ್ಪು ಮಾಡಿದ್ನಾ ಅಂದ್ಕೊಂಡೆನಾದ್ರೂ ತಿಮ್ಮಪ್ಪಟಾಮಿ ಹಂಗೇನೂ ಮಾಡೋ ಆಸಾಮಿಯಲ್ಲ ಎಂದು ಸುಮ್ಮನಾದೆ. ಅವನು ಮತ್ತೆ ಮಾತಾಡೋಕೆ ಮುಂಚೆ ಹಾಲಿನ ಪ್ಯಾಕೇಟು ತಗೊಂಡು ಮನೆದಾರಿ ತುಳಿದೆ.

ಮಾರನೇ ದಿನಾನೇ ತಿಮ್ಮಪ್ಪಟಾಮಿ ದೊಡ್ಡ ಸುದ್ದಿಯಾಗಿದ್ದ. ಡೀಸಿ ಆಫೀಸಿನ ಮುಂದೆ ಕುಳ್ತು ಆನೆ ಉಳ್ಸೋ ಹೋರಾಟ ಆರಂಭಿಸಿದ್ದ. ‘ಆನೆ ಗಡಿಪಾರು ಮಾಡ್ಬಾರ್ದು. ಕಾಡುಗಳ್ರು ಜನ್ಗಳನ್ನ ದಿಕ್ಕುತಪ್ಸಿ ಆನೆ ಗಡಿಪಾರ್ ಮಾಡ್ಸೋಕೆ ಹೊಂಟಿದಾರೆ. ಆನೆ ಇದ್ರೆ ಮರಕಡಿಯೋಕ್ಕಾಗಲ್ವಲ್ಲ ಅದ್ಕೆ ಹಿಂಗೆ ಮಾಡ್ತಿದಾರೆ. ಆನೆ ಉಳ್ಸೋತನ್ಕ ಉಪ್ವಾಸ ಮಾಡ್ತೀನಿ. ಕಾಡು ಕಾಯೋಕ್ಕಿರೋದೇ ಒಂದಾನೆ... ಡೀಸಿ ಒಪ್ಕಳ್ಳದಿದ್ರೆ ಆನೆ ತಬ್ಕೊಂಡು ಚಳ್ವಳಿ ಮಾಡ್ತೀನಿ... ಸಾಯ್ತೀನಿ...’ ಎಂದೇನೇನೋ ಟೀವೀಲಿ ಹೇಳ್ಕೊಂಡಿದ್ದ. ತಮಾಷೆಗೆ ಹೇಳಿದ್ದ ತಬ್ಬಿಕೋ ಚಳವಳಿ ನಿಜವಾಗ್ಲೂ ನಡೆಯೋಕೆ ಶುರುಮಾಡಿತ್ತು. ಎಲ್ಲ ಟೀವಿ, ಪೇಪರ್‍ಗಳಲ್ಲೂ ‘ಆನೆತಬ್ಬಿಕೋ ಚಳವಳಿ’ ತುಂಬಿಹೋಗಿತ್ತು. ಎಲ್ಲರ ಬಾಯಲ್ಲೂ ತಿಮ್ಮಪ್ಪಟಾಮಿಯ ತಬ್ಬಿಕೋ ಚಳವಳಿಯದೇ ಮಾತು. ಹಿಂಗೆ, ಆನೆ ಗಡಿಪಾರು ನಿಲ್ಲಿಸೋ ಸುದ್ದಿ ಊರೂರು ಮುಟ್ಟಿತು. ಸಂಘಟನೆಗಳು ಬೆಂಬಲ ಸೂಚಿಸಿದವು. ಸತ್ಯಾಗ್ರಹ ಜೋರಾಯ್ತು. ತಿಮ್ಮಪ್ಪಟಾಮಿ ಒಬ್ಬನೇ ಆರಂಭಿಸಿದ ಸತ್ಯಾಗ್ರಹದಲ್ಲೀಗ ನೂರಾರು ಜನ. ದಿನಕ್ಕೊಂದು ಸಂಘಟನೆ ಉಪ್ವಾಸಕ್ಕೆ ಕುಂತು ಚಳವಳಿ ಗಂಭೀರವಾಯ್ತು. ‘ಆನೆ ರೌಡಿಯಲ್ಲ- ಗಡಿಪಾರು ಕೈಬಿಡಿ’ ಎಂದು ಬರೆದಿದ್ದ ಬ್ಯಾನರುಗಳನ್ನು ಹಿಡಿದು ಜನರು ಬೀದಿಯಲ್ಲೂ ಮರ‍ವಣಿಗೆ ಮಾಡಿದ ಮೇಲೆ ಡೀಸಿ, ‘ಆನೆ ಗಡಿಪಾರು ಮಾಡೋದಿಲ್ಲ. ಜನ್ರಿಗೂ ತೊಂದ್ರೆ ಆಗದಿರೋಹಂಗೆ ಕಾಡಲ್ಲೇ ಉಳುಸ್ಕೋತೀವಿ’ ಅಂತ ಘೋಷಿಸಲೇಬೇಕಾಯ್ತು.

ಆನೆ ಗಡಿಪಾರಿಂದ ಉಳಿದಂಗೇನೇ ತಿಮ್ಮಪ್ಪಟಾಮಿ ಆನೇನ ತಬ್ಕೊಂಡು ಸಾಯೋದ್ರಿಂದ ಉಳಿದ! ಇಲ್ದಿದ್ರೆ... ತಬ್ಕೊಳಕ್ಕೆ ಬಂದ ತಿಮ್ಮಪ್ಪಟಾಮೀನ ಗಡಿಪಾರಿಗೆ ಒಳ್ಗಾದ ಆನೆ ಸುಮ್ನೆಬಿಡ್ತಿತ್ತಾ?! ಎಲ್ಲೆಲ್ಲೂ ಈಗ ತಿಮ್ಮಪ್ಪಟಾಮಿಗೆ ಜಿಂದಾಬಾದ್... ಜಿಂದಾಬಾದ್...