ಶಾಸಕರ ರಾಜೀನಾಮೆಗೆ “ಅಸದೃಶ”  ಕಾರಣಗಳಿರಬಹುದು

ಶಾಸಕರ ರಾಜೀನಾಮೆಗೆ “ಅಸದೃಶ”  ಕಾರಣಗಳಿರಬಹುದು

ಅತೃಪ್ತ ಶಾಸಕರು ತಮ್ಮ ವಿಧಾನಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಹೋಟೆಲೊಂದರಲ್ಲಿ ಮೊಕ್ಕಾಂ ಮಾಡಿರುವವರ ರಾಜೀನಾಮೆ ಪತ್ರಗಳನ್ನು ಅಂಗೀಕರಿಸುವ ವಿಷಯ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟದ್ದು. ಹಾಗೆಯೇ ಸದನದ ಕಲಾಪಕ್ಕೆ ಹಾಜರಾಗಬೇಕೆಂದು ಶಾಸಕರನ್ನು ಒತ್ತಾಯ ಮಾಡಲಾಗದು. ಅದು ಸಹಾ ಶಾಸಕರ ಇಚ್ಚೆಗೆ ಬಿಟ್ಟದ್ದು. ಆದರೆ ಈ ಪ್ರಕರಣದಲ್ಲಿ ಸ್ಪೀಕರ್ ಅವರು ಕೈಗೊಳ್ಳುವ ತೀರ್ಮಾನವನ್ನು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಮ್ಮ ಸಂವಿಧಾನವು ಶಾಸಕಾಂಗಕ್ಕೆ ನೀಡಿರುವ ಹಕ್ಕು ಮತ್ತು ಕರ್ತವ್ಯದಲ್ಲಿ ಚ್ಯುತಿ ಬರದಂತೆ ಮತ್ತು ಶಾಸಕಾಂಗದ ಮೇಲೆ ತನ್ನ ಸವಾರಿ ಮಾಡದಂತೆ ಎಚ್ಚರಿಕೆಯಿಂದ ತೀರ್ಪು ನೀಡಿರುವುದು ಸ್ವಾಗತಾರ್ಹ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಅವುಗಳಿಗಿರುವ ಹಕ್ಕು ಮತ್ತು ಕರ್ತವ್ಯವನ್ನು ಸ್ಪಷ್ಟಪಡಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮೂರು ಅಂಗಗಳಿಗೂ ನೀಡಿರುವ ಪ್ರಾಮುಖ್ಯತೆಗೆ ಎಂದೂ ಧಕ್ಕೆ ಉಂಟಾಗಬಾರದು. ಇವುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಒಂದರ ಮೇಲೆ ಮತ್ತೊಂದು ಸವಾರಿ ಮಾಡಬಾರದು. ಮೂರು ಅಂಗಗಳೂ ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಶಾಸಕಾಂಗ ಮತ್ತು ಕಾರ್ಯಾಂಗ ತಮಗೆ ನೀಡಿರುವ ಹಕ್ಕುಗಳ ವ್ಯಾಪ್ತಿ ಮೀರಿ ಸಂವಿಧಾನಕ್ಕೆ ಚ್ಯುತಿ ಬಂದಾಗ ಅದನ್ನು ಸರಿಪಡಿಸುವ ಹಕ್ಕು ನಮ್ಮ ನೆಲದ ಕಾಯ್ದೆ ಕಾನೂನನ್ನು ರಕ್ಷಿಸುವ ಸರ್ವೋಚ್ಛ ನ್ಯಾಯಾಲಯಕ್ಕೆ ಇದೆ. ಆಗಲೇ ನಮ್ಮ ಜನತಂತ್ರ ವ್ಯವಸ್ಥೆ ಜೀವಂತವಾಗಿ ಉಳಿಯುವುದು. ಈ ತೀರ್ಪಿನ ಹಿನ್ನೆಲೆಯಲ್ಲಿ ಮತ್ತು ನಾಳೆ ನಡೆಯುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸದನದ ವಿಶ್ವಾಸ ಮತ ಕೋರಿಕೆಯಲ್ಲಿ ಏನಾಗುತ್ತದೋ ಎನ್ನುವುದನ್ನು ನಾಳೆವರೆಗೆ ಕಾದು ನೋಡಬೇಕಿದೆ.

ಇಲ್ಲಿ ಮುಖ್ಯವಾಗಿ ನಮ್ಮನ್ನು ಕಾಡುವ ಪ್ರಶ್ನೆ ಪಕ್ಷದ ನೀತಿ ಮತ್ತು ಸಿದ್ಧಾಂತಗಳಿಗೆ ಮೊದಲಿನಿಂದಲೂ ಬದ್ಧರಾದ ಕೆಲವು ಕಾಂಗ್ರೆಸ್ಸಿನ ಶಾಸಕರು ಹಾಗು ಮೂವರು ಜನತಾದಳ ಶಾಸಕರು ಪಕ್ಷ ನಿಷ್ಠೆಯನ್ನೂ ಮೀರಿ ಅಚ್ಚರಿಪಡುವಂತೆ ತಮ್ಮ ಸರ್ಕಾರ ಹಾಗು ನಾಯಕತ್ವದ ವಿರುದ್ಧ ತಿರುಗಿ ಬಿದ್ದು ತಮ್ಮ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡುರುವ ಸಂಗತಿ. ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಈ ಶಾಸಕರು ವಿಶ್ವಾಸಮತದ ಕಲಾಪಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಅವರು ತಮ್ಮ ಪಕ್ಷಗಳು ನೀಡಿರುವ ‘ವಿಪ್’ ಉಲ್ಲಂಘಿಸಲೂ ತೀರ್ಮಾನಿಸಿದ್ದಾರೆ. ಈಗಾಗಲೇ ತಮ್ಮ ಸ್ಥಾನಗಳಿಗೆ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿರುವಾಗ ಸದಸ್ಯತ್ವ ಕಳೆದುಕೊಳ್ಳುವ ಭಯವೂ ಅವರಿಗೆ ಇದ್ದಂತಿಲ್ಲ.

ಇರಲಿ. ಇತ್ತೀಚಿನ ವರ್ಷಗಳಲ್ಲಿ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಅಥವಾ ರಾಜ್ಯಸಭೆಗಾಗಲಿ ಆಯ್ಕೆಯಾಗುತ್ತಿರುವ ಯಾರೂ ಕೂಡ ಆರ್ಥಿಕವಾಗಿ ದುರ್ಬಲರಲ್ಲ. ಬಹುತೇಕ ಸದಸ್ಯರು ಒಂದಲ್ಲ ಒಂದು ಮೂಲಗಳಿಂದ ತಿಂಗಳಿಗೆ ಲಕ್ಷಗಟ್ಟಲೆ ಮತ್ತು ಕೋಟಿಗಟ್ಟಲೆ ಸಂಪಾದನೆಯ ಮೂಲಗಳನ್ನು ಕಂಡುಕೊಂಡಿರುವವರು. ಅವರ ಮನೆಗಳು ಕನಿಷ್ಟ ಎಂದರೂ ಐದತ್ತು ಕೋಟಿಗಿಂತ ಕಡಿಮೆ ಇರದು. ಐದರಿಂದ ಐವತ್ತು ಕೋಟಿ ಬೆಲೆಬಾಳುವಂತಹ ಬೃಹತ್ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ. ಇದರಹೊರತಾಗಿ ನೂರಾರು ಮತ್ತು ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಪಾಸ್ತಿ ಮತ್ತು ವ್ಯವಹಾರಗಳನ್ನು ಹೊಂದಿರುವವರೇ ಆಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಬಿಜೆಪಿಯು ಕೊಟ್ಟಿದೆ ಎನ್ನಲಾದ ಹಣದ ಆಮಿಷವೇ ಅವರ ರಾಜೀನಾಮಗೆ ಪ್ರಮುಖ ಕಾರಣವಿರಲಾರದು. ಇದಕ್ಕೂ ಹೊರತಾದ ಈ ಶಾಸಕರ ಪ್ರತಿಷ್ಠೆ ಮತ್ತು ಮರ್ಯಾದೆಗೆ ಕಾರಣವಾದ ಅಸದೃಶ್ಯ ಕಾರಣಗಳು ಇರಬಹುದು !

ಹೇಳಿ ಕೇಳಿ ಇದು ಬಂಡವಾಳ ಹೂಡಿಕೆಯ ಯುಗ. ಅದು ರಾಜಕೀಯ ಕ್ಷೇತ್ರವಾಗಿರಲಿ ಅಥವಾ ಬೇರೊಂದು ಕ್ಷೇತ್ರವಾಗಿರಲಿ ಬಂಡಹಾಗಾಗಿ ನಮ್ಮ ಈ ಜನಪ್ರತಿನಿಧಿಗಳಲ್ಲಿ ಅನೇಕರು ಬಂಡವಾಳ ಹೂಡಿಯೇ ಈ ಸ್ಥಾನಗಳಿಗೆ ಬಂದಿರುವುದು. ಹಿಂದೆ ಮುವ್ವತ್ತು ನಲವತ್ತು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ಮಂದಿ ಶ್ರೀಮಂತಿಕೆ, ಭೂ ಒಡೆಯರು, ಉದ್ದಿಮೆದಾರರು ಮತ್ತು ವಕೀಲರು ವಿಧಾನಸಭೆ ಮತ್ತು ಲೋಕಸಭೆಗೆ ಆಯ್ಕೆ ಆಗುತ್ತಿದ್ದರು. ಅನೇಕ ಉದ್ದಿಮೆದಾರರು ಚುನಾವಣೆಗೆ ಸ್ಪರ್ಧಿಸದೇ ಪರೋಕ್ಷವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮತ್ತು ಚುನಾವಣೆಗೆ ಸ್ಪರ್ಧಿಸುವವರಿಗೆ ಹಣದ ಸಹಾಯ ಮಾಡುವ ಮೂಲಕ ಸರ್ಕಾರದಿಂದ ತಮಗಾಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಯಾರನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ಮತ್ತು ಅವರ ಲಾಬಿ ಕೂಡ ಜೋರಾಗಿರುತ್ತಿತ್ತು ಎನ್ನುವುದು ಬೆಳಕಿನಷ್ಟು ನಿಚ್ಚಳ. 

ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಈ ಹಿಂದೆ ತಮ್ಮ ಹಣದ ಥೈಲಿಯಿಂದ ಲಾಬಿ ಮಾಡುತ್ತಿದ್ದ ಜನರಲ್ಲದೆ  ಇತ್ತೀಚೆಗೆ ಹೊಸ ಪೀಳಿಗೆ ಹುಟ್ಟಿಕೊಂಡಿದೆ. ಈ ಪೀಳಿಗೆಯೇ ರಿಯಲ್ ಎಸ್ಟೇಟ್ ದಂಧೆ ಮಾಡುವ ಮತ್ತಿತರ ಅಧಿಕಾರ ಸ್ಥಾನಮಾನಗಳನ್ನು ಹೊಂದಿ ಮಾಡಬಾರದ ವ್ಯವಹಾರವನ್ನೆಲ್ಲ ಮಾಡಿರುವ ಇವರು  ನೇರವಾಗಿ ರಾಜಕೀಯ ಪ್ರವೇಶ ಮಾಡುವ ಮತ್ತು ಪಕ್ಷಗಳಿಗೆ ಕೋಟ್ಯಂತರ ಹಣ ನೀಡಿ ಅಧಿಕಾರ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯಿಂದಲೇ ಇಂದು ಸಂಸದೀಯ ವ್ಯವಸ್ಥೆಯೂ ಗಂಡಾಂತರದಲ್ಲಿದೆ.

ಇದರ ಜೊತೆಗೆ ಪಿ.ವಿ ನರಸಿಂಹರಾವ್ ಅವರ ಕಾಲದಲ್ಲಿ ಆರಂಭವಾದ “ಸ್ಥಳೀಯ ಸಂಸದರ ಪ್ರದೇಶಾಭಿವೃದ್ಧಿ ನಿಧಿ”ಯು ಸಂಸದರಿಗೆ ತಮ್ಮ ವೇತನ ಮತ್ತು ಭತ್ಯೆ ಜೊತೆಗೆ ಇದೊಂದು ಆದಾಯದ ಮೂಲವನ್ನು ಕಲ್ಪಿಸಿತು. ಈ ನಿಧಿ ಪ್ರತಿ ಸಂಸತ್ತಿನ ಅವಧಿಯಲ್ಲಿ ಕೋಟಿಗಟ್ಟಲೆ ಹೆಚ್ಚಾಗುತ್ತಾ ಹೋಯಿತು. ಇದೇ ಮಾದರಿಯು ವಿಧಾನ ಮಂಡಲ ಸದಸ್ಯರಿಗೂ ಎಲ್ಲ ರಾಜ್ಯಗಳಲ್ಲಿಯೂ ಜಾರಿಗೆ ಬಂದುದು ದುರಂತ.

ಕೇವಲ ಸಂಸತ್ತಿನಲ್ಲಿ ನಾವು ಮಾತನಾಡಿದರೆ ಸಾಲದು. ನಮ್ಮ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕಾರ್ಯದಲ್ಲಿ ನಮ್ಮ ಪಾಲುಗಾರಿಕೆ ಇಲ್ಲವಾದರೆ ನಮಗೆ ನಯಾಪೈಸೆ ಬೆಲೆ ಇರುವುದಿಲ್ಲ. ಆದ್ದರಿಂದ ಎಂಪಿಲ್ಯಾಡ್ ಸ್ಕೀಂ ಬರಬೇಕೆಂದು ಆಗ್ರಹ ಕೇಳಿ ಬಂದಿತು. ನಮ್ಮ ಪ್ರಜಾತಂತ್ರದ ಮೂಲ ಉದ್ದೇಶವನ್ನು ನೋಡಿದರೆ ಸಂಸದರ ಮತ್ತು ಶಾಸಕರ ಕೆಲಸ ಕಾರ್ಯಾಂಗಕ್ಕೆ ಪೂರಕವಾಗಿ ಸದನದಲ್ಲಿ ಕಾಯ್ದೆ ಮತ್ತು ನೀತಿರೂಪಿಸುವುದಷ್ಟೇ. ಆದರೆ ಈಗ ಸಂಸದರ ಮತ್ತು ಶಾಸಕರ ಕೆಲಸ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ತಮ್ಮ ನೇರ ಉಸ್ತುವಾರಿಯಲ್ಲಿಯೇ ನಡೆಸುವ ವ್ಯವಸ್ಥೆ ಜಾರಿಗೆ ಬಂದಿರುವುದು. ಇದರಿಂದ ಜನರ ನೇರ ಸಂಪರ್ಕವೂ ಅವರಿಗೆ ಹೆಚ್ಚಿತು.

ನಿಜ. ತಮ್ಮ ಮತದಾರರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಲು ಇದು ಸಹಕಾರಿ ಆಗಿದೆ. ಆದರೆ ನಮ್ಮ ಸಂಸದರು ಸಂಸತ್ತಿನ ಕಲಾಪದಲ್ಲಿ ಭಾಗವಹಿಸುವ ಮತ್ತು ಕಾಯ್ದೆ ಕಾನೂನು ರೂಪಿಸುವಲ್ಲಿ ಬೇಕಾದ ತಿಳುವಳಿಕೆಯನ್ನು ಧಾರೆ ಎರೆಯುವ ಬದಲಿಗೆ ಅಧಿಕಾರ ಹಿಡಿಯುವಲ್ಲಿಯೇ ಹೆಚ್ಚಿನ ಆಸಕ್ತಿ ಬಂದಿರುವುದು ಇಂತಹ ಅವಾಂತರಗಳಿಗೆ ಕಾರಣ.

ಇದೆಲ್ಲವೂ ಸರಿಯೇ ಆದರೆ “ಅತೃಪ್ತ ಶಾಸಕರು” ಮುಖ್ಯಮಂತ್ರಿ ಸೇರಿದಂತೆ ಇತರೆ ಸಚಿವರು “ತಮಗೆ ಗೌರವ ನೀಡುತ್ತಿಲ್ಲ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಹಣ ಮಂಜೂರಾಗುತ್ತಿಲ್ಲ. ಈ ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಯಾವ ಕಿಮ್ಮತ್ತೂ ಇಲ್ಲ” ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದೂರದ ಮುಂಬೈನ ಐಷಾರಾಮಿ ಹೋಟೆಲುಗಳಲ್ಲಿ ವಾಸ್ತವ್ಯ ಮಾಡಲು ಇರುವ ಬಲವಾದ ಕಾರಣಗಳು ಇವರುಗಳು ಹೇಳಿಕೊಂಡಿರುವುದಕ್ಕಿಂತ ಬೇರೇನೋ ಇವೆ. ಇವರು ಹೇಳಿಕೊಳ್ಳುತ್ತಿರುವ ಕಾರಣಗಳು ನಿಜಕ್ಕೂ ಸತ್ಯ ಎನಿಸುವುದಾದರೆ ಇವರೆಲ್ಲ ಕ್ಷೇತ್ರದ ಜನರ ಸನ್ಮಾನಕ್ಕೆ ಯೋಗ್ಯರು. ಆದರೆ ಅದು ನಿಜವಲ್ಲ ಎಂದು ತಿಳಿಯಲು ಯಾವ ರಾಜಕೀಯ ಪಾಂಡಿತ್ಯವೂ ಬೇಕಿಲ್ಲ. ಸಾಮಾನ್ಯ ಜ್ಞಾನ ಇದ್ದರೆ ಸಾಕು!

ಆ ಅಸದೃಶ್ಯ ಬಲವಾದ ಕಾರಣಗಳು ಯಾವುವು ಇರಬಹುದು? ನನಗನಿಸುವುದು ಇವರ ಮುನಿಸಿಗೆ ಮತ್ತು ರಾಜೀನಾಮೆಗೆ ಖಂಡಿತಾ ಬೇರೋನೋ ಕಾರಣಗಳಿವೆ. ಹೇಳಿ ಕೇಳಿ ಇವರೆಲ್ಲ ಒಂದಲ್ಲ ಒಂದು ಆದಾಯ ಮೂಲದ ವ್ಯವಹಾರಗಳನ್ನು ನಡೆಸುತ್ತಿರುವವರು. ಈ “ಆದಾಯ ಮೂಲದ ವ್ಯವಹಾರದಲ್ಲಿ ಏನೋ ಎಡವಟ್ಟುಗಳನ್ನು ಮಾಡಿರಬಹುದು. ಈ ಎಡವಟ್ಟು ಅಥವಾ ಅವ್ಯವಹಾರಗಳು, ಅಂದರೆ ಅದು ಆದಾಯ ತೆರಿಗೆ ವಂಚನೆ ಮತ್ತಿತರ ಕಾನೂನು ಉಲ್ಲಂಘನೆಯ ಕ್ರಮಗಳಿರಬಹುದು. ಈ ವಂಚನೆ ಪ್ರಕರಣಗಳು ಸಹಜವಾಗಿಯೇ ಕೇಂದ್ರ ಸರ್ಕಾರದ ಗಮನಕ್ಕೆ ಬಂದು ಅವು ಇವರನ್ನು ಇಕ್ಕಟ್ಟಿಗೆ ಸಿಕ್ಕಿಸಿರಬಹುದು. ಈ ಪ್ರಕರಣಗಳು ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಕಾಯ್ದೆ ಕ್ರಮಗಳಿಂದ ಶಿಕ್ಷೆ ಅನುಭವಿಸಬಹುದೆಂಬ ಬೆದರಿಕೆ ಆತಂಕ ಇವರನ್ನು ಕಾಡುತ್ತಿರಬಹುದು. ಈ ಅಸದೃಶ್ಯ ಮತ್ತು ಅವ್ಯಕ್ತವಾಗಿರುವ ಪ್ರಕರಣಗಳು ಇವರ ಬಾಯಿಗೆ ಬೀಗ ಹಾಕಿ ಇವರನ್ನು ಕಟ್ಟಿಹಾಕಿರಲೂ ಬಹುದು. ಈ ಕಾರಣಗಳನ್ನು ಸುಲಭವಾಗಿ ತಳ್ಳಿಹಾಕಲಾಗದು. ಶಾಸಕರ ವ್ಯವಹಾರ ಮತ್ತು ದಂಧೆಗಳನ್ನು ಒಳಹೊಕ್ಕಿ ನೋಡಿದರೆ ಇವುಗಳಿಗಿಂತ ಬೇರೇನೂ ಕಾರಣ ಇರಲಾರದು ಎನಿಸುತ್ತದೆ.

ಏಕೆಂದರೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಹೇಳುವುದು ಬಹುತೇಕ ಸತ್ಯ ಇರಲಾರದು. “ಪಬ್ಲಿಕ್ ಕನ್ಸಂಸನ್” ಅಂದರೆ ಹೊರನೋಟಕ್ಕೆ ಸಾರ್ವಜನಿಕರಿಗೆ ತಿಳಿಸುವುದೇ ಬೇರೆ ಅಲ್ಲಿ ನಡೆದಿರುವುದೇ ಬೇರೆ ಆಗಿರುತ್ತದೆ. ಹೀಗೆ ಕದ್ದು ಮುಚ್ಚಿ ನಡೆಯುವ ವ್ಯವಹಾರ ಮತ್ತು ನಡವಳಿಕೆಯಿಂದ ಈ ರಾಜೀನಾಮೆ ಪ್ರಹಸನ ಈ ಅತೃಪ್ತ ಶಾಸಕರಿಗೆ ಅನಿವಾರ್ಯವಾಗಿರಬಹುದು. ಆದರೆ ಇವರ ಈ ನಡೆ ಮತ್ತು ನಿರ್ಧಾರದಿಂದ ನಮ್ಮ ಜನತಂತ್ರ ವ್ಯವಸ್ಥೆ ದಿನೇ ದಿನೇ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದಂತು ನಿಜ. ಶಾಸಕರ ಈ ನಡೆಯಿಂದ ಇಂದಿನ ದಿನಗಳಲ್ಲಿ ಶಾಸಕ ಸ್ಥಾನವೂ ಮಾರಾಟಕ್ಕಿದೆ. ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ಪಡೆಯುವುದರಿಂದ ಹಿಡಿದು ಗೆಲ್ಲಲು ಮತ್ತು ಅಧಿಕಾರ ಗಳಿಸಲು ಹಣವೇ ಪ್ರಮುಖ ಪಾತ್ರವಹಿಸುವುದರಿಂದ ಈ ಎಲ್ಲ ಬೆಳವಣಿಗೆಗಳು ಸಹಜ ಎನ್ನುವಂತೆ ನಡೆಯುತ್ತದೆ. ಈ ವ್ಯವಸ್ಥೆಗೆ ತಕ್ಕಂತೆ ನಮ್ಮ ಜನರು ಹೊಂದಿಕೊಂಡಿದ್ದಾರೆ ಎನ್ನುವುದೇ ದುರಂತ! ಇದರ ಜೊತೆಗೆ ಜಾತಿ ಎನ್ನುವುದು ಪ್ರಬಲ ಜಾತಿಗಳಿಗೆ ಅಧಿಕಾರ ಹಿಡಿಯುವುದು ನಮ್ಮ ಹಕ್ಕು ಎನ್ನುವ ಅಹಮ್ಮಿಕೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಲು ಇದಕ್ಕಿಂತ ಇನ್ನೇನು ಬೇಕು?