ಸಮಾಜನಿಷ್ಠೆಯೂ ಇಲ್ಲ, ವೃತ್ತಿ ನಿಷ್ಠೆಯೂ ಇಲ್ಲ:  ಮಾಧ್ಯಮ ಜಗತ್ತಿನ ಆತಂಕ ಹುಟ್ಟಿಸುವ ವಿದ್ಯಮಾನಗಳು

ಸಮಾಜನಿಷ್ಠೆಯೂ ಇಲ್ಲ, ವೃತ್ತಿ ನಿಷ್ಠೆಯೂ ಇಲ್ಲ:  ಮಾಧ್ಯಮ ಜಗತ್ತಿನ ಆತಂಕ ಹುಟ್ಟಿಸುವ ವಿದ್ಯಮಾನಗಳು

ಪ್ರಿಯ ಓದುಗರೇ,

ಕಳೆದ ಕೆಲವು ದಿನಗಳಿಂದ ಮಾಧ್ಯಮ ಜಗತ್ತಿನ ಕೆಲವು ವಿದ್ಯಮಾನಗಳನ್ನು ಕಂಡು ಆತಂಕಗೊಂಡಿದ್ದೇನೆ. ಒಂದೊಂದು ಸುದ್ದಿಯೂ ಬೆಚ್ಚಿ ಬೀಳುವಂತೆ ಮಾಡಿದೆ.  ಸಮಾಜಕ್ಕೆ ನಿಷ್ಠೆಯಿಂದಿರಬೇಕಾದ ಮಾಧ್ಯಮದ ಪ್ರತಿನಿಧಿಗಳು ಸುಲಿಗೆಕೋರರಂತೆ ಸುದ್ದಿಯಾಗುತ್ತಿದ್ದಾರೆ. ಹಾಗೆ ನೋಡಿದರೆ ಎಲ್ಲ ವೃತ್ತಿಗಳಂತೆ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವುದೂ ಕೂಡ ಒಂದು ವೃತ್ತಿಯಾಗಷ್ಟೇ ಬದಲಾಗಿದೆ.

ನಾನು ಪತ್ರಿಕೋದ್ಯಮಕ್ಕೆ ಬರುವ ಸಂದರ್ಭದಲ್ಲಿ ಸಮಾಜದಲ್ಲಿ ಏನೋ ಬದಲಾವಣೆ ಮಾಡಿಬಿಡಬಹುದು, ಕ್ರಾಂತಿಯಾಗಿಬಿಡುತ್ತದೆ ಎಂಬೆಲ್ಲ ಭ್ರಮೆಗಳಿದ್ದವು, ಕನಸುಗಳಿದ್ದವು. ಆದರೆ ಅಂಥ ಕನಸುಗಳು ಕರಗಿಹೋಗಿವೆ.

ಅದು ಭ್ರಮೆ ಅಂತ ಈಗ ಅನ್ನಿಸುತ್ತಿದ್ದರೂ ಅದಕ್ಕೊಂದು ಆದರ್ಶವಿತ್ತು. ಯಾಕೆಂದರೆ ಅದು ಕೇವಲ ವೃತ್ತಿಯಾಗಿರಲಿಲ್ಲ. ಅದೇ ನನ್ನಂಥವರ ಧರ್ಮವಾಗಿತ್ತು. ಈಗ ಅಂದಿನಂತಿಲ್ಲ ಎನ್ನವುದೇ ನೋವಾಗಿ ಮಡುಗಟ್ಟಿದೆ. ಹೀಗಾಗಿಯೇ ಏನೋ ಮಾಧ್ಯಮದ ಶುದ್ಧೀಕರಣ ಬಯಸುವ ಒಂದಷ್ಟು ಮಂದಿ ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ.

ಹಾಗೆಂದು ವೃತ್ತಿಯಲ್ಲಿದ್ದ ಎಲ್ಲರೂ ಎಲ್ಲ ಕಾಲಘಟ್ಟಗಳಲ್ಲೂ ಪ್ರಾಮಾಣಿಕರೇ ಆಗಿದ್ದರೆಂದು ನಾನು ಹೇಳುತ್ತಿಲ್ಲ. ನಮ್ಮ ವೃತ್ತಿಯಲ್ಲಿನ ಹಿರಿಯರು ಹಣದ ವಿಷಯದಲ್ಲಿ ತುಂಬ ಪ್ರಾಮಾಣಿಕರಾಗಿದ್ದ ದಿನಗಳೂ ಇದ್ದವು. ಬಹುತೇಕ ಪತ್ರಕರ್ತರು ಬ್ರಾಹ್ಮಣ ಎಂಬ ಒಂದೇ ಜಾತಿಗೆ ಸೇರಿದವರಾಗಿರುತ್ತಿದ್ದರು. ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಬ್ರಾಹ್ಮಣೇತರರೂ ಇರುತ್ತಿದ್ದರು. ಈಗಲೂ ಮಾಧ್ಯಮದ ಹಿಡಿತ ಬ್ರಾಹ್ಮಣರಲ್ಲೇ ಇದೆ. ಆದರೆ ಬೇರೆ ಜಾತಿಗೆ ಸೇರಿದ ಅನೇಕ ಪ್ರತಿಭಾವಂತ ಪತ್ರಕರ್ತರೂ ಬಂದು  ಹೋಗಿದ್ದಾರೆ. ಆದರೆ ಬ್ರಾಹ್ಮಣರಲ್ಲಿ ಹಣದ ಬಗ್ಗೆ ಇದ್ದ ಪ್ರಾಮಾಣಿಕತೆ ಜಾತಿ ವಿಷಯದಲ್ಲಿ ಇರಲಿಲ್ಲ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಬ್ಬ ಸಾಮಾನ್ಯ ರಾಜಕಾರಣಿಯನ್ನೂ ರಾಷ್ಟ್ರೀಯ ನಾಯಕ, ಕನ್ನಡ ನಾಡು ಕಂಡ ಅಪರೂಪದ ನಾಯಕ ಎಂದು ಬಿಂಬಿಸುತ್ತಿದ್ದ ಬ್ರಾಹ್ಮಣ ಪತ್ರಕರ್ತರು ಅಂಬೇಡ್ಕರ್ ಅವರನ್ನು ಮಹಾನ್‌ ಮಾನವತಾವಾದಿ ಎಂದೋ, ಸಮತಾವಾದಿಯೆಂದೋ ಗುರುತಿಸುತ್ತಿರಲಿಲ್ಲ. ಅವರ ಪಾಲಿಗೆ ಅಂಬೇಡ್ಕರ್ ಕೇವಲ ದಲಿತ ಸಮುದಾಯದ ವಿಮೋಚನೆಗಾಗಿ ಹೋರಾಡಿದ ನಾಯಕ. ಹಾಗೇ ಜಗಜೀವನರಾಮ್ ವಿಷಯದಲ್ಲೂ ಮಂದಿ ಘೋರ ಅನ್ಯಾಯವನ್ನೇ ಮಾಡಿದ್ದಾರೆ. ಕೃಷಿಕ್ರಾಂತಿಯ ಹರಿಕಾರ ಜಗಜೀವನರಾಮ್ ಕೂಡ ಮಂದಿಗೆ ಕೇವಲ ದಲಿತ ನಾಯಕ. ಮಲ್ಲಿಕಾರ್ಜುನ ಖರ್ಗೆಯೂ ಇದರಿಂದ ಹೊರತಲ್ಲ. ಹೀಗಾಗಿಯೇ ಅವರು ತಮ್ಮನ್ನು ದಲಿತ ಕೋಟಾದಲ್ಲಿ ಗುರುತಿಸಬಾರದೆಂದೂ, ತಮ್ಮ ಯೋಗ್ಯತೆಯನ್ನಷ್ಟೇ ಗುರುತಿಸಬೇಕೆಂದು ಈಗಾಗಲೇ ಮನವಿ ಮಾಡಿಬಿಟ್ಟಿದ್ದಾರೆ.

 ಭಾರತೀಯ ಅರ್ಥ ವ್ಯವಸ್ಥೆಯನ್ನು ನಿಜಕ್ಕೂ ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಸೂಚಿಸುವಷ್ಟು ಸಮರ್ಥರಾಗಿದ್ದ ಚರಣ್ ಸಿಂಗ್ ಪತ್ರಕರ್ತರಿಗೆ ಕೇವಲ ಜಾಟ್ ನಾಯಕ. ದೇವೇಗೌಡರು ಒಕ್ಕಲಿಗ ನಾಯಕ. ವೀರೇಂದ್ರ ಪಾಟೀಲರು ಲಿಂಗಾಯತ ನಾಯಕ. ಆದರೆ ರಾಮಕೃಷ್ಣ ಹೆಗಡೆ ರಾಷ್ಟ್ರೀಯ ನಾಯಕ! ವಿಚಿತ್ರ ಎಂದರೆ ಯಾರೂ ಹೆಗಡೆಯನ್ನಾಗಲೀ, ಅನಂತಕುಮಾರ್‌ರನ್ನಾಗಲೀ, ರಮೇಶ್ ಕುಮಾರ್‌ರನ್ನಾಗಲೀ ಬ್ರಾಹ್ಮಣ ನಾಯಕರೆಂದು ಕರೆಯಲಿಲ್ಲ. ಅವರೆಲ್ಲ ನೆಲದ ನಾಯಕರು! ರಾಷ್ಟ್ರೀಯ ನಾಯಕರು! ಬ್ರಾಹ್ಮಣ ಪತ್ರಕರ್ತರಿಗೆ ಇತರ ಜಾತಿಗಳಿಗೆ ಸೇರಿದ ನಾಯಕರು ಆಯಾ ಜಾತಿಯ ನಾಯಕರು! ಅಷ್ಟೇ ಅಲ್ಲ. ಬ್ರಾಹ್ಮಣ ರಾಜಕಾರಣಿಗಳ ಸುದ್ದಿ ಗೋಷ್ಠಿಗಳಲ್ಲಿ ಶೀಘ್ರಲಿಪಿಕಾರರಂತೆ, ಆಪ್ತ ಸಹಾಯಕರಂತೆ ಮೆದುವಾಗಿ ವರ್ತಿಸುವ ಪತ್ರಕರ್ತರು ಇತರ ಜಾತಿಗಳ ನಾಯಕರ ಸುದ್ದಿ ಗೋಷ್ಠಿಗಳಲ್ಲಿ ಮೈಮೇಲೆ ಆವಾಹನೆಯಾದಂತೆ ದನಿ ಏರಿಸಿ ಪ್ರಶ್ನೆಗಳ ಬಾಣವನ್ನೇ ಪ್ರಯೋಗಿಸುತ್ತಾರೆ, ಸಾಧ್ಯವಾದಷ್ಟೂ ಅವಮಾನ ಮಾಡುವ ಕೆಲಸವನ್ನೂ ಮಾಡುತ್ತಾರೆ. ಬ್ರಾಹ್ಮಣ ಪತ್ರಕರ್ತರು ಸಮಾಜಕ್ಕೆ ರೀತಿಯ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ.   ಪತ್ರಿಕೋದ್ಯಮ ಧರ್ಮಕ್ಕೆ ಸಂಬಂಧಿಸಿದಂತೆ ಇದು ಕೂಡ ಭ್ರಷ್ಟಾಚಾರವೇ.

ಆದರೆ ಕಾಲಾಂತರದಲ್ಲಿ ಬ್ರಾಹ್ಮಣ ಪತ್ರಕರ್ತರು ಮಾಡುತ್ತಿದ್ದ ಕೆಲಸವನ್ನು ಒಕ್ಕಲಿಗ, ಲಿಂಗಾಯತ, ಕುರುಬ ಸಮುದಾಯಕ್ಕೆ ಸೇರಿದ ಪತ್ರಕರ್ತರು ಮಾಡಲು ಶುರು ಮಾಡಿದ್ದಾರೆ. ಸಮಾಜಕ್ಕೆ ಬದ್ಧವಾಗಿರುವ ಬದಲು ತಮ್ಮ ಸಮುದಾಯದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ  ಅಡಿಯಾಳುಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸಂಘಟನೆಗಳ ಮೇಲೆ ಹಿಡಿತ ಸಾಧಿಸಿ ಬ್ರಾಹ್ಮಣರನ್ನು ಹಿಮ್ಮೆಟ್ಟಿಸಿದ್ದಾರೆ. ಇಂಥವರ ನಡುವೆ ಅಪವಾದವೂ ಇಲ್ಲವೆಂದೇನಲ್ಲ. ಬಹುತೇಕರು ಇದೇ ಕಸುಬಿನ ಫಲಾನುಭವಿಗಳಾಗುತ್ತಿದ್ದಾರೆ. ಇದರಿಂದಾಗಿಯೇ ಮಂತ್ರಿಗಳು, ಶಾಸಕರು ಕೂಡ ತಮ್ಮ ಸಮುದಾಯದ ಪತ್ರಕರ್ತರನ್ನು ಪ್ರತ್ಯೇಕವಾಗಿ ಭೇಟಿ ಮಾಡುವ ಪರಿಪಾಠ ಆರಂಭವಾಗಿದೆ.

ಪಿ.ಲಂಕೇಶ್ ಇದ್ದಾಗಿನ ಲಂಕೇಶ್ ಪತ್ರಿಕೆಯಲ್ಲಿ ನನ್ನದೇ ಅನುಭವವನ್ನು ಹೇಳುತ್ತೇನೆ. ನಾನು ದೇವೇಗೌಡರು ಮುಖ್ಯಮಂತ್ರಿಯಾಗಬೇಕು ಎಂದು ಬರೆದ ಸಂದರ್ಭದಲ್ಲಿ ನಾನೂ ಒಕ್ಕಲಿಗನೇ ಎಂಬಂತೆ ಅನೇಕ ಒಕ್ಕಲಿಗರು ನನಗೆ ಪ್ರೀತಿ ತೋರುವಂತೆ ಮಾತಾಡಿದ್ದರು. ಅದೇ ದೇವೇಗೌಡರ ತಪ್ಪುಗಳನ್ನು ಪಟ್ಟಿ ಮಾಡಿ ಒಂದೊಂದೇ ವರದಿ ಮಾಡುತ್ತಿದ್ದಂತೆ ನಾನು ಒಕ್ಕಲಿಗ ವಿರೋಧಿಯಾಗಿಬಿಟ್ಟಿದ್ದೆ.

ಜೆ.ಎಚ್.ಪಟೇಲರ ಲಿಂಗಾಯತ ಒಡ್ಡೋಲಗ ಕುರಿತು ಬರೆದಾಗ ನಾನು ಲಿಂಗಾಯತ ವಿರೋಧಿಯಾಗಿಬಿಟ್ಟಿದ್ದೆ. ಉನ್ನತ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನನಗೆ ಫೋನ್ ಮಾಡಿ, “ಲಿಂಗಾಯತರನ್ನೆಲ್ಲ ಗ್ಯಾಸ್ ಚೇಂಬರ್‌ನಲ್ಲಿರಿಸಿ ಕೊಂದುಬಿಡಿ” ಎಂದು ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದರು. ಇದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ನಾಯಕರೇ ಎಂದು ಬರೆದಿದ್ದ ನನ್ನ ವರದಿಯಿಂದ ನಾನು ಕುರುಬ ಸಮುದಾಯದ ವಿರೋಧಿಯಂತೆ ಕಂಡಿದ್ದೆ. ಓರ್ವ ಕುರುಬ ಸಮುದಾಯದ ಯುವಕನಂತೂ ಒಂದು ತಿಂಗಳ ಕಾಲ ನನ್ನ ವರದಿ ಪ್ರತಿಭಟಿಸಿ ಟೆಲಿಗ್ರಾಂ ಕಳಿಸುತ್ತಲೇ ಇದ್ದ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ಶಾಸನ ಶಾಸ್ತ್ರ ವಿದ್ಯಾರ್ಥಿಯೊಬ್ಬನಿಗೆ ದಲಿತ ಸಮುದಾಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಅನ್ಯಾಯ ಮಾಡಿದ ಕುರಿತು ಬರೆದಾಗ ನಾನು ದಲಿತ ವಿರೋಧಿಯೂ ಆಗಿಬಿಟ್ಟಿದ್ದೆ. ಹಿಂದೊಮ್ಮೆ ವಿಧಾನಸಭಾ ಕಾರ್ಯದರ್ಶಿಯಾಗಿದ್ದ ಯಾಕುಬ್ ಷರೀಫ್ ಭ್ರಷ್ಟಾಚಾರದ ಕುರಿತು ಬರೆದಾಗ ನನ್ನ ಮುಸ್ಲಿಂ ಪರಿಚಿತರೇ ಮುಸ್ಲಿಂ ವಿರೋಧಿಯಂತೆ ಮಾತಾಡಿದ್ದರು. ಸ್ವತಃ ಲಂಕೇಶರೇ ನನ್ನನ್ನುದ್ದೇಶಿಸಿ, “ಏನೋ, ನನ್ನನ್ನೊಬ್ಬನನ್ನು ಬಿಟ್ಟು ಎಲ್ಲರನ್ನೂ ಮುಗಿಸಿಬಿಟ್ಟೀದ್ದೀಯಲ್ಲ” ಎಂದು ತಮಾಷೆ ಮಾಡಿದ್ದರು. ಮಾಜಿ ಸಚಿವ ದಿವಂಗತ ಡಿ.ಟಿ.ಜಯಕುಮಾರ್ ತೋಟಗಾರಿಕಾ ಸಚಿವರಾಗಿದ್ದಾಗ ಬರೆದ ಹೋಪ್‌ಲೆಸ್‌ ಹಾಪ್‌ಕಾಮ್ಸ್ ಎಂಬ ವರದಿಯಿಂದ ರೊಚ್ಚಿಗೆದ್ದ  ಸಚಿವರು ನಾನು ಲೋಕಸಭಾ ಚುನಾವಣೆ ಸಮೀಕ್ಷೆಗೆ ತೆರಳಿದ್ದಾಗ ಚಿನ್ನದಗುಡಿಹುಂಡಿ ಎಂಬಲ್ಲಿ ಹಲ್ಲೆ ನಡೆಸಿದಾಗ ಆಗಿನ ಆರೋಗ್ಯ ಸಚಿವ ಎಚ್.ಸಿ.ಮಹದೇವಪ್ಪ ಅವರು ಬೇಸರದಿಂದ, “ನಾನು ಕೂಡ ಹಿಂದುಳಿದವನೇ ಎಂದು ಜಯಕುಮಾರ್ ಹೇಳಿಬಿಟ್ಟಿದ್ದರೆ ನೀವು ಸುಮ್ಮನಾಗುತ್ತಿದ್ದೀರಲ್ಲ” ಎಂದಿದ್ದರು. “ಹಿಂದುಳಿದ ವರ್ಗದವರು ತಪ್ಪು ಮಾಡಿದರೆ ಅದು ಇನ್ನೂ ದೊಡ್ಡ ತಪ್ಪು. ಇನ್ನೊಬ್ಬರ ತಪ್ಪನ್ನು ಟೀಕಿಸಬೇಕಾದರೆ ನಾವು ತಪ್ಪು ಮಾಡಬಾರದು” ಎಂದಿದ್ದೆ.

ಎಲ್ಲ ಸಂದರ್ಭಗಳಲ್ಲಿ ಒಂದೊಂದು ಜಾತಿಯ ವಿರೋಧಿ ಎಂಬಂತೆ ಗುರುತಿಸುತ್ತಿದ್ದ ನನ್ನನ್ನು ಕಾಡುತ್ತಿದ್ದುದು ನಾನ್ಯಾವ ಜಾತಿ ಎಂಬುದಷ್ಟೇ. ಈ ಪ್ರಶ್ನೆ ಎಲ್ಲ ಪತ್ರಕರ್ತರನ್ನು ಕಾಡುವಂಥ ಆಂತರಿಕ ಬದಲಾವಣೆ ಆಗಬೇಕೆನ್ನುವುದೇ ನನ್ನ ಆಶಯ.

ಮೊದಲೆಲ್ಲ ಕಾಫಿ, ಟೀ, ಊಟ, ಗುಂಡು, ಬಾಡು ಇಷ್ಟಕ್ಕೇ ಸೀಮಿತವಾಗಿದ್ದ, ಹೆಚ್ಚೆಂದರೆ ಕಷ್ಟದ ಸಂದರ್ಭದಲ್ಲಿ ನೆರವು ಕೇಳುವುದಕ್ಕೆ ಬಳಕೆಯಾಗುತ್ತಿದ್ದ ಪ್ರಭಾವ, ಕಾಮರ್ಸ್ ಸುದ್ದಿಗೋಷ್ಠಿಗಳಲ್ಲಿ ಕೈಗಡಿಯಾರ, ಪೆನ್, ಥರ್ಮಾಸ್ ಫ್ಲಾಸ್ಕ್‌ಗೆ ಕೊನೆಯಾಗುತ್ತಿದ್ದ ಗಿಫ್ಟ್(ಇಂಥವರನ್ನು ಗಿಫ್ಟೆಡ್ ಜರ್ನಲಿಸ್ಟ್ ಎಂದು ಗೇಲಿ ಮಾಡುವ ಕಾಲವೂ ಇತ್ತು) …ಈ ಎಲ್ಲವೂ ಎಲ್ಲೆ ಮೀರಿ, ಅಂತಹಾ ಪತ್ರಕರ್ತರೆಲ್ಲ ಈಗ ದೇವಮಾನವರಂತೆ ಕಾಣುತ್ತಿದ್ದಾರೆ.

ಕಾರ್ಯನಿರತ ಪತ್ರಕರ್ತರಿಗೆ ಅದರಲ್ಲೂ ವಿಧಾನಸೌಧ ರೌಂಡ್ಸ್‌ಗೆ ಹೋಗುವ ವರದಿಗಾರರಿಗೆ ತಮ್ಮ ಪ್ರಭಾವದ ಅರಿವಿರುತ್ತದೆ. ಹೀಗಾಗಿ ಒಂದು ಕೆಲಸ ಕಳೆದುಕೊಂಡ ತಕ್ಷಣ ಇನ್ನೊಂದು ಕೆಲಸ ಹೇಗದರೂ ಹುಡುಕಿ ಸಕ್ರಿಯರಾಗುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ. ಅಂಥವರು ಸಾಮಾನ್ಯವಾಗಿ, "ನಾವು ಸದಾ ಚಲಾವಣೆಯಲ್ಲಿರಬೇಕು.ಇಲ್ಲದಿದ್ದರೆ ಯಾವುದೇ ಲಾಭ ಇರುವುದಿಲ್ಲ" ಎಂದು ಹೇಳುತ್ತಿರುತ್ತಾರೆ.

ಅಂಥವರಿಗೆಲ್ಲ ನಾನು ವಿವಿಧ ಸಂದರ್ಭಗಳಲ್ಲಿ "ಉಳಿದ ದೇಶಗಳಲ್ಲಿ ಹೇಗೋ ಗೊತ್ತಿಲ್ಲ.ನಮ್ಮ ದೇಶದಲ್ಲಂತೂ ಖೋಟಾ ನೋಟು ಕೂಡಾ ಚಲಾವಣೆಯಲ್ಲಿದೆ. ಬ್ಯಾಂಕ್, ಪೆಟ್ರೋಲ್ ಬಂಕ್, ಹೊಟೆಲ್, ಮಾಲ್ ಅಥವಾ ಎಲ್ಲಾದರೂ ಯಾರಾದರೂ ಸೂಕ್ಷ್ಮವಾಗಿ ಗಮನಿಸುವವರ ಕಣ್ಣಿಗೆ ಬೀಳುವವರೆಗೆ ಖೋಟಾ ನೋಟು ಸುಗಮವಾಗಿ ಚಲಾವಣೆಯಲ್ಲಿರುತ್ತದೆ. ಹಾಗೇ ಹರಿದು ಮಾಸಲಾದ ನೋಟುಗಳು ಸೆಲ್ಲೋಟೇಪ್ ಅಂಟಿಸಿಕೊಂಡು ಚಲಾವಣೆಯಲ್ಲಿರುತ್ತವೆ. ಹಾಗೇ ನಾವೂ ಕೂಡಾ. ಖೋಟಾ ವ್ಯಕ್ತಿತ್ವ ಇರುವವರು ಬೆತ್ತಲಾದಾಗ ಬೆಲೆ ಕಳೆದುಕೊಳ್ಳುತ್ತಾರೆ ಅಷ್ಟೇ. ಪತ್ರಿಕೋದ್ಯಮದಂಥ ವೃತ್ತಿ ವೈಯಕ್ತಿಕ ಲಾಭ ನಷ್ಟವನ್ನು ಲೆಕ್ಕ ಹಾಕಬಾರದು. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಅಚ್ಚುಕಟ್ಟುತನ ಇರಬೇಕೇ ಹೊರತು ಅದರಿಂದೇನೋ ವೈಯಕ್ತಿಕ ಲಾಭ ಸಿಗಬಹುದು ಎಂಬ ರೀತಿಯಲ್ಲಿ ಕೆಲಸ ಮಾಡಬಾರದು. ಮೌನವಾಗಿ ಸುಮ್ಮನಿರುವುದನ್ನೂ ಕಲಿಯಬೇಕು. ಪತ್ರಕರ್ತರು, ರಾಜಕಾರಣಿಗಳು,ಅಧಿಕಾರಿಗಳು, ಪೊಲೀಸರು ತಮಗೆ ಸಿಕ್ಕ ಅವಕಾಶವನ್ನು ಸಮಾಜಕ್ಕಾಗಿ ಬಳಸಿಕೊಳ್ಳಬೇಕೇ ಹೊರತು ಅದರಲ್ಲಿ ಸ್ವಾರ್ಥದ ಸೋಂಕು ಇರಕೂಡದು. ಹಾಗಿದ್ದಾಗ ಮಾತ್ರ ಚಲಾವಣೆಯಲ್ಲಿಲ್ಲದಿದ್ದರೂ ನೆಮ್ಮದಿಯಾಗಿರಬಹುದು.ಕೂಲಿಗಳು,ಕಾರ್ಮಿಕರು,ಸಣ್ಣ ಪುಟ್ಟ ಕೆಲಸದಲ್ಲಿರುವವರಿಗೆ ಯಾವ ರೀತಿಯಲ್ಲಿ ಚಲಾವಣೆ ಇರುತ್ತದೆ ನೀವೇ ಹೇಳಿ" ಎಂದು ಪ್ರತಿಕ್ರಿಯಿಸುತ್ತಿದ್ದೆ.

ಬಹುತೇಕರು ನನ್ನ ಮಾತು ಕೇಳಿದ ನಂತರ ಹೆಚ್ಚು ವಾದ ಮಾಡುತ್ತಿರಲಿಲ್ಲ. ಪತ್ರಕರ್ತ ಸೃಷ್ಟಿಸಿಕೊಳ್ಳುವ ಪ್ರಭಾವಲಯ ಅಂಥದ್ದು. ಅದನ್ನು ದುರುಪಯೋಗಪಡಿಸಿಕೊಳ್ಳುವುದೆಂದರೆ ಸಮಾಜಕ್ಕೆ ಬಗೆಯುವ ದ್ರೋಹವೇ ಆಗುತ್ತದೆ. ಪತ್ರಕರ್ತನಾದವನು ಸಮಾಜಕ್ಕೆ ಬದ್ಧನಾಗಿರಬೇಕೇ ಹೊರತು ಪಡಪೋಸಿ ನಾಯಕರು ಅಥವಾ ಅಧಿಕಾರಿಗಳಿಗಲ್ಲ.

ಪತ್ರಕರ್ತನ ಕೆಲಸ ಆಳುವವರ ಅಂಗಳದಲ್ಲಿ ಕುಳಿತು ಭಜನೆ ಮಾಡುವುದೂ ಅಲ್ಲ, ವಿರೋಧ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವುದೂ ಅಲ್ಲ.  ಸಮಾಜದ ಹಿತವನ್ನು ಬಯಸಿ ಈ ಎರಡರ ನಡುವಿನ ಸತ್ಯವನ್ನು ತಿಳಿಸುವುದು ಪತ್ರಕರ್ತನ ಜವಾಬ್ಧಾರಿ.

 ಪತ್ರಕರ್ತ ಜನರಿಗೆ ಅರಿವು ಮೂಡಿಸಬೇಕೇ ಹೊರತು ಉರಿವ ಬೆಂಕಿಗೆ ತುಪ್ಪ ಸುರಿಯಬಾರದು. ಒಬ್ಬ ಪತ್ರಕರ್ತ, ಒಬ್ಬ ರಾಜಕೀಯ ವಿಶ್ಲೇಷಕ ಅಥವಾ ಓರ್ವ ಸಮಾಜ ವಿಜ್ಞಾನಿ ಎಡವಿದರೆ ಅದರಿಂದ ಸಮಾಜಕ್ಕೆ ಆಗುವ ಹಾನಿ ಅಪಾರ. ಹಾಗೆ ನೋಡಿದರೆ ನಿಷ್ಪಕ್ಷಪಾತ ಪತ್ರಿಕೋದ್ಯಮ ಎನ್ನುವುದೇ ಅತಿ ದೊಡ್ಡ ಬುರುಡೆ.ವೃತ್ತಿ ಮತ್ತು ಸಮಾಜಕ್ಕೆ ನಿಷ್ಠನಾದ ಪತ್ರಕರ್ತ ನಿಷ್ಪಕ್ಷಪಾತಿ ಅಲ್ಲ. ಆತ ದುರ್ಬಲರು, ಶೋಷಿತರು,ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಪಕ್ಷಪಾತಿಯಾಗಿರಬೇಕು. ಯಾಕೆ ಗೊತ್ತಾ?  ಈ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳುವುದಕ್ಕೆ, ಕೇಳುವುದಕ್ಕೆ ತುಂಬ ಹಿತವಾಗಿರುತ್ತದೆ .. ಯಾಕೆಂದರೆ ವಾಸ್ತವವಾಗಿ ನಿಷ್ಪಕ್ಷಪಾತಿ ಎಂದು ಹೇಳಿಕೊಳ್ಳುವ ಪತ್ರಕರ್ತ ಸಮಾಜದ ಕೊಳೆ ತೆಗೆಯುವ ಬದಲು ಇನ್ನಷ್ಟು ಮಾಲಿನ್ಯವನ್ನು ಜನರ ಮನಸ್ಸಿಗೆ ಬಿತ್ತುತ್ತಲೇ ಇರುತ್ತಾನೆ. 

 ಐತಿಹಾಸಿಕ ಕಾರಣಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ವಿಶ್ಲೇಷಿಸುವ ಬದಲು ವಾಸ್ತವಾಂಶ ಮರೆಮಾಚುವ ಪತ್ರಕರ್ತರು ಇನ್ನಷ್ಟು ಕಿಚ್ಟು ಹಚ್ಚಿ ಅದರಲ್ಲಿ ತಮ್ಮ ಕೈ ಬೆಚ್ಚಗೆ ಮಾಡಿಕೊಳ್ಳಬಹುದೇ ಹೊರತು ಬದಲಾವಣೆಗೆ ಎಳ್ಳಷ್ಟು ಸಹಕಾರಿಯಾಗುವುದಿಲ್ಲ.ಕಾಲದ ಓಟಕ್ಕೆ ಸಮರ್ಥವಾಗಿ ಸ್ಪಂದಿಸುವ ಜಾಣ್ಮೆಯೂ ಇರಬೇಕು. ಹಾಗೆಂದ ಮಾತ್ರಕ್ಕೆ ಪತ್ರಕರ್ತ ಬಹುಸಂಖ್ಯಾತರ ನಿಲುವಿನ ಪ್ರತಿಪಾದಕನೂ ಅಲ್ಲ, ಅವರ ತುತ್ತೂರಿಯೂ ಆಗಿರಬಾರದು. ಪತ್ರಕರ್ತ ಸತ್ಯದ ಪ್ರತಿಪಾದಕನಾಗಿರಬೇಕು. ಇಂಥ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂದರ್ಭದಲ್ಲಿ ನಿಂದನೆ ಎದುರಿಸಲೂ ಸಿದ್ಧನಾಗಿರಬೇಕು.

ಸಮಾಜ ಮತ್ತು ವೃತ್ತಿಗೆ ನಿಷ್ಠನಾದ ಪತ್ರಕರ್ತನ ಬರವಣಿಗೆಯನ್ನು ಓದುವವರು ಅದರಲ್ಲಿ ಪರ ಮತ್ತು ವಿರೋಧವನ್ನು ಅವರವರ ಮನೋಸ್ಥಿತಿಗೆ ತಕ್ಕಂತೆ ಗುರುತಿಸುತ್ತಾರೆಯೇ ಹೊರತು ಆತ ಹಾಗಿರುವುದಿಲ್ಲ.

 ಓರ್ವ ಮುಖ್ಯಮಂತ್ರಿ ತಪ್ಪೆಸಗಿದರೆ ಲಾಭಬಡುಕರು ಪ್ರತಿಕ್ರಿಯಿಸುವ ರೀತಿಗೆ ಅವರದೇ ವ್ಯಾವಹಾರಿಕ ಕಾರಣಗಳಿರುತ್ತದೆ,ಜಾತೀವಾದಿಗಳಿಗೂ ಅವರದೇ ಕಾರ್ಯಸೂಚಿ ಇರುತ್ತದೆ.ಆದರೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲದಿದ್ದರೂ,  ಭಾವುಕವಾಗಿ ಪ್ರತಿಕ್ರಿಯಿಸುವ ಮೂಲಕ ಕೆಲವರು ಜಾತಿವಾದಿಗಳಂತೆ ಕಂಡುಬಿಡುವ ಆಕಸ್ಮಿಕವೂ ಘಟಿಸುತ್ತದೆ..ಇನ್ನು ಕೆಲವರ ಅಜ್ಞಾನ ಆತುರದ ಪ್ರತಿಕ್ರಿಯೆಯನ್ನು ಉತ್ತೇಜಿಸಿರುತ್ತದೆ. ಆದರೆ ಪತ್ರಕರ್ತರೇ ಇಂಥ ತಪ್ಪುಗಳನ್ನು ಮಾಡಿದರೆ ಅದರಿಂದಾಗುವ ಹಾನಿ ಸರಿ ಪಡಿಸಲು ಇನ್ನಷ್ಟು ವರ್ಷಗಳೇ ಬೇಕು.

 ಯಾರೋ ಹೇಳಿದ್ದನ್ನು, ಇನ್ನೆಲ್ಲೋ ಕೇಳಿದ್ದನ್ನು ಬರೆಯುವುದಕ್ಕೆ ಪತ್ರಕರ್ತರು ಬೇಕಿಲ್ಲ , ಈ ಕೆಲಸಕ್ಕೆ ಸ್ಟೆನೋಗ್ರಾಫರ್ ಗಳು ಸಾಕು.ಹಿಂದೊಮ್ಮೆ ಶಿವಮೊಗ್ಗದ ಕಾಲೇಜೊಂದರಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಓರ್ವ ವಿದ್ಯಾರ್ಥಿನಿ, "ಸರ್, ನೀವು ಇಷ್ಟೊಂದು ಅಪಾಯಗಳನ್ನು ಎದುರಿಸಿದರೂ ಯಾಕೆ ಇದೇ ವೃತ್ತಿಯಲ್ಲಿ ಮುಂದುವರಿದಿದ್ದೀರಿ?" ಎಂದು ಪ್ರಶ್ನಿಸಿದ್ದಳು.ಅದಕ್ಕೆ ನಾನು "ಕರೆಂಟ್ ಷಾಖ್ ಹೊಡೆಯುತ್ತದೆ ಎಂದು ಎಲ್ಲ ಲೈನ್ ಮನ್ ಗಳು ಕೆಲಸ ಬಿಟ್ಟರೆ ಏನಾಗಬಹುದು?" ಎಂದು ಮರು ಪ್ರಶ್ನೆ ಹಾಕಿದ್ದೆ. ಅಷ್ಟಕ್ಕೂ ಸುಮ್ಮನಾಗದೆ ಸತ್ಯ ಹೇಳುವ ಕೆಲಸ ನಾನು ಕೊನೆಯವರೆಗೂ ಬಿಡುವುದಿಲ್ಲ ಎಂದಿದ್ದೆ. ಈಗಲೂ ಮುಂದುವರಿಸಿದ್ದೇನೆ, ಮುಂದುವರಿಸುತ್ತೇನೆ.

ಇಷ್ಟೆಲ್ಲ ನನ್ನನ್ನು ಕಾಡುವುದಕ್ಕೆ ಕಾರಣವೂ ಇದೆ.

ಇತ್ತೀಚಿನ ಸುಲಿಗೆಕೋರ ಪತ್ರಕರ್ತರು ಬಂಧನಕ್ಕೊಳಗಾಗಿರುವ ಪ್ರಕರಣಗಳಲ್ಲಿ ನಾಲ್ವರು ಒಂದೇ ಸಮುದಾಯಕ್ಕೆ ಸೇರಿದವರು. ಒಂದು ಕಾಲದಲ್ಲಿ ಕೈ ಕೊಳಕು ಮಾಡಿಕೊಳ್ಳದೇ ಇದ್ದ ಬ್ರಾಹ್ಮಣ ಸಮುದಾಯದವರು. ಈ ನಾಲ್ವರು ಸಿಕ್ಕಿ ಬಿದ್ದಿದ್ದಾರೆಂದರೆ ಬ್ರಾಹ್ಮಣ ಪತ್ರಕರ್ತರೆಲ್ಲ ಭ್ರಷ್ಟರು ಎಂದು ಹೇಳಬಾರದು. ಕೆಲವು ಮುಸ್ಲಿಮರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದರೆ ಇಡೀ ಸಮುದಾಯವನ್ನೇ ಭಯೋತ್ಪಾದಕರು ಎಂದು ಗುರುತಿಸಿದಂತಾಗುತ್ತದೆ.

ಹಾಗೆಂದ ಮಾತ್ರಕ್ಕೆ ಸಿಕ್ಕಿಬಿದ್ದವರಷ್ಟೇ ಸುಲಿಗೆಕೋರರಲ್ಲ. ಭ್ರಷ್ಟವಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಪತ್ರಕರ್ತರೂ ಹೊರತಲ್ಲ. ಇನ್ನೂ ಅನೇಕ ಭ್ರಷ್ಟ ತಿಮಿಂಗಲಗಳಿದ್ದರೂ ವಿವಿಧ ಪ್ರಭಾವಗಳಿಂದ ನುಣುಚಿಕೊಂಡಿದ್ದಾರೆ. ಇಂಥವರನ್ನೆಲ್ಲ ಬಯಲಿಗೆಳೆಯಬೇಕು.

 ಅಂದ ಹಾಗೆ ಪತ್ರಕರ್ತರ ಭ್ರಷ್ಟಾಚಾರಕ್ಕೆ ಅಧಿಕೃತ ಮನ್ನಣೆ ಎಂಬಂತೆ ನಿವೇಶನಗಳನ್ನು ನೀಡಿದವರು ಎಸ್.ಎಂ.ಕೃಷ್ಣ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಮಾಡಿದ ಅತಿ ದೊಡ್ಡ ತಪ್ಪೆಂದರೆ ಪತ್ರಕರ್ತರನ್ನು ಭ್ರಷ್ಟರಾಗಿಸಿದ್ದು. ಅಲ್ಲಿಂದಲೇ ಪತ್ರಕರ್ತರ ಆಸೆಗಳೂ ಹೆಚ್ಚುತ್ತಾ ಹೋಯಿತು. ನಿಜವಾದ ತಪ್ಪಿತಸ್ಥರು ಯಾರು? ರಾಜಕಾರಣಿಗಳೇ? ಪತ್ರಕರ್ತರೇ? ಮೊಟ್ಟೆಯಿಂದ ಕೋಳಿಯೇ, ಕೋಳಿಯಿಂದ ಮೊಟ್ಟೆಯೇ? ಏನೇ ಆಗಲಿ. ಸಮಾಜಕ್ಕೆ ಬದ್ಧವಾದ ಪತ್ರಕರ್ತರಿಗೆ ವಡ್ಡರ್ಸೆ ರಘುರಾಮಶೆಟ್ಟಿ ಮತ್ತು ಪಿ.ಲಂಕೇಶ್ ಆದರ್ಶವಾಗಬೇಕು.

-ಟಿ.ಕೆ.ತ್ಯಾಗರಾಜ್

ಪ್ರಧಾನ ಸಂಪಾದಕ