ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅಗತ್ಯ

ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅಗತ್ಯ

ದೇಶದ ಇತಿಹಾಸ, ಒಕ್ಕೂಟ ವ್ಯವಸ್ಥೆಯ ಅರ್ಥ ಗೊತ್ತಿಲ್ಲದವರೆಲ್ಲ ಜನಪ್ರತಿನಿಧಿಗಳಾಗಿ ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮಾತನಾಡಿದರೆ ಆಗುವುದೇ ಹೀಗೆ. 

ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ಸಿ.ಟಿ.ರವಿ, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ, ಸಂವಿಧಾನಾತ್ಮಕವಾಗಿ ರೂಪುಗೊಂಡ ರಾಷ್ಟ್ರದ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದು ಸಾಧ್ಯವಿಲ್ಲ ಎಂದು ಅಪ್ಪಣೆ ಕೊಡಿಸಿದ್ದಾರೆ. ಭಾರತೀಯತೆ ಮತ್ತು ಕನ್ನಡತನ ಎನ್ನುವುದು ಅವರು ಅಂದುಕೊಂದಷ್ಟು ಸರಳವಾಗಿಲ್ಲ. 

ಭಾರತವನ್ನು ವಿವಿಧತೆಯಲ್ಲಿ ಏಕತೆ ಇರುವ ದೇಶ ಎಂದು ಭಾವನಾತ್ಮಕವಾಗಿ ಒಂದು ದೇಶವೆಂಬ ಕಲ್ಪನೆಯನ್ನು ಗಟ್ಟಿಯಾಗಿ ಬೇರೂರುವಂತೆ ಸ್ವಾತಂತ್ರ್ಯ ಬಂದಾಗಿನಿಂದಲೂ ವ್ಯವಸ್ಥಿತ ಪ್ರಯತ್ನ ನಡೆಸಲಾಗುತ್ತಿದೆ. ಈ ಪ್ರಯತ್ನ ಒಳ್ಳೆಯದೇ. ಭಾರತೀಯರೆಲ್ಲರೂ ಒಂದೆಂಬುದೇ ನಮ್ಮ ಶಕ್ತಿ.

ಆದರೆ ವಾಸ್ತವದಲ್ಲಿ ಭಾರತದ ಪ್ರತಿಯೊಂದು ರಾಜ್ಯವೂ ಪ್ರತ್ಯೇಕ ದೇಶದಂತೆ ಇರುವುದನ್ನು ನಾವು ಕಾಣಬಹುದಾಗಿದೆ. ಒಂದೊಂದು ರಾಜ್ಯವೂ ಒಂದೊಂದು ಭಾಷೆ, ಸಂಸ್ಕೃತಿ, ವಿಭಿನ್ನ ಆಹಾರ, ಉಡುಪು, ವಿಭಿನ್ನ ಸಂಸ್ಕೃತಿಯನ್ನು ಒಂದೊಂದು ರಾಜ್ಯದಲ್ಲೂ ಕಾಣಬಹುದಾಗಿದೆ. ಅನೇಕ ಜಾತಿ, ಧರ್ಮಗಳೂ ಭಾರತದ ಅಂತಃಸತ್ವವಾಗಿದೆ. ಕೇರಳದ  ಭಾಷೆ ಮಲಯಾಳಂ. ತಮಿಳಿನಾಡಿನ ಭಾಷೆ ತಮಿಳು, ಕರ್ನಾಟಕದ ಭಾಷೆ ಕನ್ನಡ, ಮಹಾರಾಷ್ಟ್ರದ ಭಾಷೆ ಮರಾಠಿ. ಈ ಎಲ್ಲ ರಾಜ್ಯಗಳಲ್ಲೂ ವಿಭಿನ್ನ ಉಡುಪು, ಆಹಾರ ಪದ್ಧತಿ, ಜನರ ನಡವಳಿಕೆ ನೋಡಬಹುದು. ಒಂದು ರಾಜ್ಯ ಇದ್ದಂತೆ ಇನ್ನೊಂದಿಲ್ಲ. ಇದರರ್ಥ ಒಂದೊಂದು ರಾಜ್ಯವೂ ಪ್ರತ್ಯೇಕ ದೇಶದಂತಿದೆ ಎನ್ನುವುದು. ಒಕ್ಕೂಟ ವ್ಯವಸ್ಥೆಯಡಿ ಎಲ್ಲ ರಾಜ್ಯಗಳು ಮಾನಸಿಕವಾಗಿ ಒಗ್ಗೂಡಿ ಭಾರತೀಯತೆಯ ಕಲ್ಪನೆಯನ್ನು ಸಾಕಾರಗೊಳಿಸಿವೆ. ಹಾಗೆಂದ ಮಾತ್ರಕ್ಕೆ ಒಂದೊಂದು ರಾಜ್ಯಕ್ಕೂ ಪ್ರತ್ಯೇಕ ಅಸ್ತಿತ್ವವಿಲ್ಲ ಎನ್ನುವಂತೆ ಕೆಲವೇ ಕೆಲವು ಪ್ರಭಾವಿಗಳ ಭಾವನೆಯನ್ನು ಭಾರತೀಯ ರಾಜ್ಯಗಳ ಮೇಲೆ ಹೇರುವುದು ಸಲ್ಲ. ಒಕ್ಕೂಟ ಎಂದು ಕರೆದಿರುವುದೇ ಈ ಅರ್ಥದಲ್ಲಿ.     

ಭಾರತದ ಧ್ವಜವನ್ನೇ ನೋಡಿ. ಅದು ತ್ರಿವರ್ಣ ಧ್ವಜ. ನಡುವಿನ ಚಕ್ರಕ್ಕೂ ಬೇರೊಂದು ಬಣ್ಣ. ಹಾಗೆ ಭಾರತ ಹಲವು ಬಣ್ಣಗಳ ದೇಶ. ಎಲ್ಲ ರೀತಿಯ ಬಣ್ಣಗಳಿದ್ದರೆ ಮಾತ್ರ ಒಂದು ಅದ್ಭುತ ಚಿತ್ರ ಕಲಾಕೃತಿ ಸೃಜನಶೀಲ ಕುಂಚದಿಂದ ರೂಪುಗೊಳ್ಳುವುದು ಸಾಧ್ಯ. ಅದರ ಬದಲು ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಒಂದೇ ಬಣ್ಣ ಇರಬೇಕೆಂದು ಬಯಸಿದರೆ ಸುಂದರ ಕಲಾಕೃತಿ ಹೊರ ಹೊಮ್ಮುವುದು ಸಾಧ್ಯವಿಲ್ಲ.  ಕರ್ನಾಟಕ ಮತ್ತು ತಮಿಳುನಾಡು ಭಾರತದ ರಾಜ್ಯಗಳಾಗಿದ್ದರೂ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಇಷ್ಟಬಂದಂತೆ ವರ್ತಿಸುವುದು ಸಾಧ್ಯವಿಲ್ಲ. ಇದು ಸಾಧ್ಯವಾಗಿರುವುದು ಒಕ್ಕೂಟ ವ್ಯವಸ್ಥೆಯಿಂದಲೇ. ಆದರೆ ಎರಡೂ ರಾಜ್ಯಗಳ ಭಾಷೆ, ಸಂಸ್ಕೃತಿ, ಉಡುಪು, ರಾಜಕಾರಣ ಎಲ್ಲವೂ ಬೇರೆ ಬೇರೆಯೇ. ಒಕ್ಕೂಟದ ಒಪ್ಪಂದದಿಂದಾಗಿ ಒಂದಾಗಿದ್ದೇವೆಯೇ ಹೊರತು, ವಾಸ್ತವದಲ್ಲಿ ಏಕ ಸಂಸ್ಕೃತಿಯ ಕಾರಣದಿಂದಲ್ಲ. 

ಕೇವಲ ಮೂರ್ನಾಲ್ಕು ರಾಜ್ಯಗಳ ಪ್ರಾದೇಶಿಕ ಭಾಷೆಯಾಗಿರುವ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹೇರಲು ಹೊರಡುವುದು ಕೂಡ ಒಕ್ಕೂಟ ವ್ಯವಸ್ಥೆಯ ಮೇಲಿನ ಭಾಷಾ ಅಲ್ಪಸಂಖ್ಯಾತರ ದಬ್ಬಾಳಿಕೆಯೇ ಆಗಿಬಿಡುತ್ತದೆ. 

ಜನಗಣಮನ (ಅದರ ರಚನೆಯ ಕಾಲಘಟ್ಟದ ವಿವಾದ ಏನೇ ಇರಲಿ) ಎನ್ನುವುದು ಭಾರತದ ರಾಷ್ಟ್ರಗೀತೆಯಾಗಿದೆಯೋ ಅದೇ ರೀತಿಯಲ್ಲಿ ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಕರ್ನಾಟಕದ ನಾಡಗೀತೆಯಾಗಿದೆ. ರಾಷ್ಟ್ರಗೀತೆ ಇಡೀ ದೇಶವನ್ನು ಹೇಗೆ ಕೆಲವೇ ಪದಗಳಲ್ಲಿ ಭಾವನಾತ್ಮಕವಾಗಿ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತದೋ ನಾಡಗೀತೆಯೂ ನಾವು ಕನ್ನಡಿಗರೆಲ್ಲ ಒಂದೆಂಬ ಭಾವವನ್ನು ಹಿಡಿದಿಡುತ್ತದೆ. 

ಪ್ರತಿ ವರ್ಷ ಸ್ವತಂತ್ರ್ಯೋತ್ಸವ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ನಾವು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲೂ ಅರಿಶಿಣ, ಕುಂಕುಮ ಬಣ್ಣಗಳಿರುವ ಕನ್ನಡ ಧ್ವಜವನ್ನು ಜಾತಿ, ಮತ, ವರ್ಗ ತಾರತಮ್ಯವಿಲ್ಲದೇ ಹೆಮ್ಮೆಯಿಂದ ಹಾರಿಸಿ ಸಂಭ್ರಮಿಸುತ್ತೇವೆ. 

1960 ರಲ್ಲಿ ಕನ್ನಡ ಪರ ಹೋರಾಟಗಾರ, ಬರಹಗಾರ ಚಿಂತಕರಾದ ಮ.ರಾಮಮೂರ್ತಿಯವರ ಕಲ್ಪನೆಯ ಫಲವಾಗಿಯೇ ಕರ್ನಾಟಕ ರಾಜ್ಯ ಎಂದು ಪ್ರತಿನಿಧಿಸುವುದಕ್ಕಾಗಿಯೇ ಈ ಧ್ವಜ ರೂಪುಗೊಂಡಿತ್ತು.ಇದು ಕರ್ನಾಟಕ ಸರ್ಕಾರದ ಅಧಿಕೃತ ಧ್ವಜವಲ್ಲದಿದ್ದರೂ ಕನ್ನಡಿಗರ ಧ್ವಜವಾಗಿಯೇ ಭಾವನಾತ್ಮಕವಾಗಿ ಗುರುತಿಸಿಕೊಂಡಿತ್ತು. ಯಾಕೆಂದರೆ ಒಂದು ಧ್ವಜ, ನಾಡಗೀತೆ ಒಂದು ರಾಜ್ಯದ ನೆಲ, ಜಲ, ನುಡಿ, ಗಡಿಯನ್ನು ಪ್ರತಿನಿಧಿಸುತ್ತದೆ. ಒಂದು ನಿರ್ದಿಷ್ಟ ಭೂಪ್ರದೇಶದ ವಿಶಿಷ್ಠ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಅಸ್ತಿತ್ವವನ್ನೂ ನೆನಪಿಸುತ್ತದೆ. 

ಈ ಕಾರಣದಿಂದಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಧ್ವಜವೊಂದನ್ನು ರೂಪಿಸಲು ಕಾರಣರಾಗಿದ್ದರು. ಅದನ್ನು ನರೇಂದ್ರ ಮೋದಿ ಸರ್ಕಾರ ತಿರಸ್ಕರಿಸಿದ್ದರೂ ಕನ್ನಡಕ್ಕೊಂದು ಧ್ವಜವಿದ್ದೇ ಇದೆ.  ಅದು ಕನ್ನಡದ ಅಸ್ಮಿತೆ. 

ಒಂದೇ ಭಾಷೆ, ಒಂದೇ ಸಂಸ್ಕೃತಿ ಎನ್ನುವುದು ಕೇವಲ ಬೊಗಳೆಯಾಗಿಬಿಡುತ್ತದೆ. ಈ ದೇಶದಲ್ಲಿ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಜಾತಿ, ಧರ್ಮಗಳಿರುವ ಫಲವಾಗಿಯೇ ಈ ದೇಶದ ಸಂಗೀತ, ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆಯ ಸಂಪತ್ತು ಸಮೃದ್ಧವಾಗಿರುವುದು ಸಾಧ್ಯವಾಗಿದೆ. ಕನಕದಾಸ, ಬಸವಣ್ಣ, ನಾರಾಯಣಗುರು, ಜ್ಯೋತಿಬಾಫುಲೆಗಳಂತೆ ವಿವಿಧ ಸಂಸ್ಕೃತಿ, ಭಾಷೆ, ರಾಜ್ಯಗಳಿಂದ ಬಂದ ಮಹಾನುಭಾವರು ಈ ನೆಲವನ್ನು ವೈವಿಧ್ಯಮಯವಾಗಿ ಅರಳುವಂತೆ ಮಾಡಿದ್ದಾರೆ. 

ಕನ್ನಡಕ್ಕೊಂದು ಧ್ವಜವಿದೆ ಎಂದರೆ ಅದು ಪ್ರತ್ಯೇಕ ಎಂಬ ಅರ್ಥವಲ್ಲ, ಭಾರತ ತಾಯಿಯ ಮಡಿಲಲ್ಲಿ ಕನ್ನಡಮ್ಮ ಎಂಬ ಮಗುವೂ ಇದೆ. ಕನ್ನಡತನ ಶಕ್ತಿಶಾಲಿಯಾದಷ್ಟೂ ಭಾರತೀಯತೆಯೂ ಶಕ್ತಿಶಾಲಿಯಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಂಥ ವಿಚಾರಗಳನ್ನು ವಿರೋಧಿಸಿದಷ್ಟೂ ಭಾರತೀಯತೆ ದುರ್ಬಲವಾಗುತ್ತದೆ. ತಮಿಳುನಾಡು ಭಾರತೀಯತೆಯನ್ನೂ ಒಪ್ಪಿಕೊಂಡಿದೆ. ತಮಿಳುತನಕ್ಕೆ ಧಕ್ಕೆಯಾಗದಂತೆ ಒಕ್ಕೂಟ ವ್ಯವಸ್ಥೆಯನ್ನು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವುದೇ ಇದಕ್ಕೊಂದು ಉತ್ತಮ ಉದಾಹರಣೆ. 

ಕನ್ನಡ ಧ್ವಜವೂ ಬೇಕು, ನಾಡಗೀತೆಯೂ ಬೇಕು. ಈ ಮೂಲಕ ಕನ್ನಡತನ ಸದೃಢವಾಗಬೇಕು. ಎಲ್ಲ ಭಾಷೆ, ಸಂಸ್ಕೃತಿ, ಆಹಾರ, ಉಡುಪು, ಉಳಿದು ಅರಳಿದಾಗಲೇ ಅದಕ್ಕೊಂದು ಸೌಂದರ್ಯ ಇರುವುದು ಸಾಧ್ಯ. ಒಂದು ತೋಟದಲ್ಲಿ ಕೇವಲ ಒಂದು ಬಣ್ಣದ ಗುಲಾಬಿ ಹೂವಿನ ಗಿಡಗಳಷ್ಟೇ ಇದ್ದರೆ ಹೇಗೆ ಕಾಣುತ್ತದೆ? ಎಲ್ಲ ಬಣ್ಣ, ಜಾತಿಗಳ ಹೂಗಿಡಗಳಿದ್ದರೆ ಮಾತ್ರ ಆ ಉದ್ಯಾನವನ ಸುಂದರವಾಗಿರುವುದು ಸಾಧ್ಯ.