ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಫೋಟೋ ಬಹಿರಂಗಪಡಿಸಿದ ಸುರೇಶ್ ಕುಮಾರ್: ಇದು ಶಿಕ್ಷಣ ಸಚಿವರ ಅಜ್ಞಾನವೇ? ನಿರ್ಲಕ್ಷ್ಯವೇ?

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರ ಗುರುತನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಬಹಿರಂಗಗೊಳಿಸುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಫೋಟೋ ಬಹಿರಂಗಪಡಿಸಿದ ಸುರೇಶ್ ಕುಮಾರ್: ಇದು ಶಿಕ್ಷಣ ಸಚಿವರ ಅಜ್ಞಾನವೇ? ನಿರ್ಲಕ್ಷ್ಯವೇ?

ಬಿಜೆಪಿ ಸರ್ಕಾರದ ಸಚಿವರ ಪೈಕಿ ಚಲನಶೀಲರು ಎಂದೇ ಕರೆಸಿಕೊಳ್ಳುತ್ತಿರುವ  ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್ ಅವರು ಬೆಂಗಳೂರು ನಗರದ ಕೋರಮಂಗಲದ ಬಳಿ ಇರುವ ಖಾಸಗಿ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಬಾಲಕ ಮತ್ತು ಆತನ ಕುಟುಂಬ ಸದಸ್ಯರ ಗುರುತನ್ನು ಬಹಿರಂಗಗೊಳಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

2019ರ ಡಿಸೆಂಬರ್‌ 16ರಂದು ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು 2019ರ ಡಿಸೆಂಬರ್‌ 17ರಂದು ದೂರು ಸಲ್ಲಿಸಿದ್ದಾರೆ. ಇದನ್ನಾಧರಿಸಿ ಪೋಕ್ಸೋ ಕಾಯ್ದೆ 2012 ರಡಿಯಲ್ಲಿಯೇ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ 1860(354(ಎ) 324, 504, 506, 509,34) ಪೋಕ್ಸೋ ಕಾಯ್ದೆ 2012ರ ಸೆಕ್ಷನ್‌ 12, ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 75ರಡಿಯಲ್ಲಿ ಆರೋಪಿತರ ವಿರುದ್ಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ 2019ರ ಡಿಸೆಂಬರ್‌ 18ರಂದು ಮೊಕದ್ದಮೆ ದಾಖಲಾಗಿದೆ. ಇನ್ನು, ಈ ಪ್ರಕರಣ ತನಿಖೆ ಹಂತದಲ್ಲಿದೆ.

ಆದರೂ ಸಚಿವ ಸುರೇಶ್‌ಕುಮಾರ್‌ ಅವರು ದೌರ್ಜನ್ಯಕ್ಕೆ ಒಳಗಾಗಿರುವ ವಿದ್ಯಾರ್ಥಿ, ಆತನ ತಾಯಿ ಮತ್ತು ಅಕ್ಕನೊಂದಿಗೆ ಮಾತನಾಡುತ್ತಿರುವ ಫೋಟೋಗಳನ್ನು 2019ರ ಡಿ.21ರಂದು ತಮ್ಮ ಅಧಿಕೃತ  ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೆ ಪೋಕ್ಸೋ ಮತ್ತು ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಬ್ಬ ಶಿಕ್ಷಣ ಸಚಿವರಾಗಿ ಪೋಕ್ಸೋ ಮತ್ತು ಮಕ್ಕಳ ನ್ಯಾಯ ಕಾಯ್ದೆ ಕುರಿತು ಅರಿವಿಲ್ಲದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಿರುವುದಕ್ಕೆ ಶಿಕ್ಷಣ ವಲಯ ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನಾಧರಿಸಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಖಾಸಗಿ ಶಾಲೆಗೆ ಭೇಟಿ ಕೊಟ್ಟಿದ್ದರು. ಭೇಟಿ ನಂತರ ಅವರು ಸಂತ್ರಸ್ತ ವಿದ್ಯಾರ್ಥಿ, ಆತನ ತಾಯಿ ಮತ್ತು ಅಕ್ಕನ ಫೋಟೋಗಳನ್ನು 2019ರ ಡಿಸೆಂಬರ್ 21ರ ಮಧ್ಯಾಹ್ನ 2.33ಕ್ಕೆ ತಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಂತ್ರಸ್ತ ಕುಟುಂಬದ ಗುರುತನ್ನು ಬಹಿರಂಗಗೊಳಿಸಿದ್ದಾರೆ.

ಈ ಕುರಿತು ಸುಳಿವು ಪಡೆದ 'ಡೆಕ್ಕನ್‌'ನ್ಯೂಸ್‌ ಕೂಡ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರ ಅಧಿಕೃತ ಫೇಸ್‌ಬುಕ್‌ ಪುಟವನ್ನು 2019ರ ಡಿ.31ರ ಮಧ್ಯಾಹ್ನ 5-30ಕ್ಕೆ ವೀಕ್ಷಿಸಿತು. ಆ ಸಮಯದಲ್ಲಿಯೂ ಸಚಿವರ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಅದೇ ಫೋಟೋಗಳು ಇದ್ದವು.  ಪ್ರಕರಣದ ಗೌಪ್ಯತೆ ಮತ್ತು ಸಂತ್ರಸ್ತರ ಗುರುತು ಬಹಿರಂಗಪಡಿಸದ ಕಾಯ್ದೆಯನ್ನು ಎತ್ತಿ ಹಿಡಿದಿರುವ 'ಡೆಕ್ಕನ್‌'ನ್ಯೂಸ್‌ ಕೂಡ  ಫೋಟೋದಲ್ಲಿ ಸಂತ್ರಸ್ತರ ಮುಖಗಳನ್ನು ಮರೆಮಾಚಿದೆ.

'ಇಂದು ಬೆಳಗ್ಗೆ ಪತ್ರಿಕೆಯಲ್ಲಿ ಈ ಸುದ್ದಿ ಓದಿದ ನಾನು ಸಂಬಂಧಿಸಿದ ಶಾಲೆಗೆ ಹೋಗಿ ವಿದ್ಯಾರ್ಥಿಯನ್ನು, ಅವರ ಪೋಷಕರನ್ನು ವಿದ್ಯಾರ್ಥಿಯ ಅಕ್ಕನನ್ನು, ಶಾಲಾ ವ್ಯವಸ್ಥಾಪಕರನ್ನು, ಪೊಲೀಸ್‌ ಅಧಿಕಾರಿಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರತ್ಯೇಕವಾಗಿ ವಿಚಾರಿಸಿ ಮಾಹಿತಿ ಪಡೆದು ಅಗತ್ಯ ಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದೆ,' ಎಂದು ಹೇಳಿರುವ ಇವರು ಭೇಟಿ ನೀಡಿದ್ದ ಶಾಲೆ, ಸಂತ್ರಸ್ತ ಬಾಲಕ ಮತ್ತು ಆತನ ಕುಟುಂಬ ಸದಸ್ಯರ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವುದು ಕಂಡು ಬಂದಿದೆ.

2019ರ ಡಿಸೆಂಬರ್‌ 21ರ ಮಧ್ಯಾಹ್ನ 2.33ಕ್ಕೆ ಮಾಹಿತಿ ಮತ್ತು ಪೋಟೋಗಳು ಪ್ರಕಟಿಸಿದ ನಂತರ ಒಟ್ಟು 45 ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪುಟವನ್ನು ವೀಕ್ಷಿಸಿರುವ 41 ಸಂಖ್ಯೆಯಲ್ಲಿ ಮರು ಹಂಚಿಕೆ ಆಗಿದೆ. ಪ್ರತಿಕ್ರಿಯೆ ವ್ಯಕ್ತಪಡಿಸಿರುವವರ ಪೈಕಿ ಗೋವಿಂದರಾಜು ಗೋವಿಂದ್‌ ಎನ್ನುವವರು 'ಫೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ಆಗಿದೆ. ವಿದ್ಯಾರ್ಥಿಗಳ, ಪೋಷಕರ ಫೋಟೋ, ಶಾಲೆ ಹೆಸರು, ಆರೋಪಿತ ಶಿಕ್ಷಕರ ಫೋಟೋಗಳನ್ನು ಪಬ್ಲಿಷ್‌ ಮಾಡುವುದು ಕಾನೂನುಬಾಹಿರ ಸರ್‌,' ಎಂದು 2019ರ ಡಿಸೆಂಬರ್‌ 21ರ ರಾತ್ರಿ 9-00 ಗಂಟೆಗೆ ಸಚಿವರ ಗಮನಕ್ಕೆ ತಂದಿದ್ದರು. ಪ್ರತಿಕ್ರಿಯೆ ನೀಡಿ ಒಂದು ವಾರವಾದರೂ ಸಚಿವ ಸುರೇಶ್‌ಕುಮಾರ್‌ ಅವರು ಬರಹ ಮತ್ತು ಪೋಟೋಗಳನ್ನು ಹಿಂಪಡೆದುಕೊಂಡಿಲ್ಲ.

ಸಂತ್ರಸ್ತರ ಗುರುತನ್ನು ಬಹಿರಂಗಪಡಿಸಿರುವ ಸಚಿವರ ಕ್ರಮವನ್ನು ಟೀಕಿಸಿರುವ ಶಿಕ್ಷಣ ತಜ್ಞ ನಿರಂಜನ ಆರಾಧ್ಯ ಅವರು ' ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಶಾಲೆ, ಮಗು ಮತ್ತು ಸಂಬಂಧಿಸಿದ ಫೋಟೋಗಳನ್ನು ಬಹಿರಂಗಗೊಳಿಸಿರುವುದು ತಪ್ಪು. ಅಲ್ಲದೆ ಎಫ್‌ಐಆರ್‌ ದಾಖಲಾಗಿ ತನಿಖೆ ನಡೆಯುತ್ತಿರುವ ಹಂತದಲ್ಲಿ ಯಾವ ಮಾಹಿತಿಯನ್ನು ಬಹಿರಂಗಗೊಳಿಸಬಾರದು ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನೂ ಪೋಕ್ಸೋ ಕಾಯ್ದೆ ಸೆಕ್ಷನ್‌ 23ರ ಅನ್ವಯ ಪ್ರಕಟಿಸಬಾರದು. ಒಂದು ವೇಳೆ ಪ್ರಕಟಿಸಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ,' ಎಂದು 'ಡೆಕ್ಕನ್‌'ನ್ಯೂಸ್‌ಗೆ ಪ್ರತಿಕ್ರಿಯಿಸಿದರು.

ಅದೇ ರೀತಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು, ರಕ್ಷಣಾ ಆಯೋಗದ ಮಾಜಿ ಸದಸ್ಯ ಮರಿಸ್ವಾಮಿ ಅವರು 'ಕಾಯ್ದೆ ಬಗ್ಗೆ ಶಿಕ್ಷಣ ಸಚಿವರಿಗೆ ಕನಿಷ್ಟ ಅರಿವಾದರೂ ಇರಬೇಕಿತ್ತು. ಮಕ್ಕಳ ರಕ್ಷಣೆ ಕಾಯ್ದೆಯನ್ನು ಎತ್ತಿ ಹಿಡಿಯಬೇಕಿದ್ದ ಶಿಕ್ಷಣ ಸಚಿವರು ಗುರುತು ಬಹಿರಂಗಗೊಳಿಸಿರುವುದು ತಪ್ಪು,' ಎಂದು ಪ್ರತಿಕ್ರಿಯಿಸಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ ಕಾಯ್ದೆ) 2012 ರ ಸೆಕ್ಷನ್ 23(2) ರ ಪ್ರಕಾರ ಹಾಗೂ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 74 ರ ಪ್ರಕಾರ 18 ವರ್ಷದೊಳಗಿನ ಸಂತ್ರಸ್ತ ಮಕ್ಕಳ ಹೆಸರು ಮತ್ತು ಗುರುತನ್ನು ಬಹಿರಂಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧವನ್ನು ಎಸಗುವ ಮಾಧ್ಯಮಗಳಿಗೆ ಸೆಕ್ಷನ್‌ 23ರ(4)ನೇ ಉಪ ವಿಧಿ ಮತ್ತು 1 ಮತ್ತು 2 ರ ಪ್ರಕಾರ 6 ತಿಂಗಳು ಜೈಲು ಶಿಕ್ಷೆ ಅಥವಾ ಶಿಕ್ಷೆಯ ಅವಧಿಯನ್ನು ಒಂದು ವರ್ಷದ ತನಕವೂ ವಿಸ್ತರಣೆಗೊಳ್ಳಲಿದೆಯಲ್ಲದೆ, ಇದರ ಜತೆಗೆ ಸೂಕ್ತ ದಂಡವನ್ನೂ ಈ ಎರಡನ್ನೂ ವಿಧಿಸಬಹುದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೋ) ಕಾಯ್ದೆ 2012 ರ ತಿದ್ದುಪಡಿ ಪ್ರಸ್ತಾಪಕ್ಕೆ  ಅನುಮೋದನೆ ನೀಡಿದೆ.  ಇದರಿಂದ ಮಕ್ಕಳ ವಿರುದ್ದ ಲೈಂಗಿಕ ಅಪರಾಧ ಎಸಗುವವರಿಗೆ ಶಿಕ್ಷೆ ಹೆಚ್ಚು ಕಠಿಣವಾಗಲಿದೆ.