ಗೆದ್ದವರು ಸೋತರು, ಸೋತವರು ಸುಣ್ಣವಾದರು 

ವಾಸ್ತವವಾಗಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕತಾರ್ ಗೆ ಕೊಟ್ಟಿದ್ದೇ ಅಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಸಂಘಗಳ ಮಹಾಸಂಘಟನೆ ಮಾಡಿದ ಮೊದಲ ತಪ್ಪು.

ಗೆದ್ದವರು ಸೋತರು, ಸೋತವರು ಸುಣ್ಣವಾದರು 

ಕತಾರ್ ನ ದೊಹಾದಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ವಿಶ್ವ ಅಥ್ಲೆಟಿಕ್ಸ್ ಸ್ಪರ್ಧೆ ವಿವಾದಕ್ಕೊಳಗಾಗಿದೆ. ಮಹಿಳಾ ವಿಭಾಗದ ಮ್ಯಾರಥಾನ್ ನಲ್ಲಿ ಅರವತ್ತೆಂಟು ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆ ಮಧ್ಯರಾತ್ರಿ ನಡೆಯಿತಾದರೂ ಮರುಭೂಮಿಯ ತಾಪಮಾನವನ್ನು ತಡೆಯಲಾರದೆ 28 ಓಟಗಾರ್ತಿಯರು ರೇಸ್ ನಿಂದ ಹೊರಬಿದ್ದು ಅವರನ್ನು ಸ್ಟ್ರೆಚರ್, ವೀಲ್ ಚೇರ್, ಅಥವಾ ಗಾಲ್ಫ್ ಗಾಡಿಗಳಲ್ಲಿ ಹತ್ತಿರದ ವೈದ್ಯಕೀಯ ಡೇರೆಗಳಿಗೆ ಕೊಂಡೊಯ್ಯಲಾಯಿತು. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಸ್ ಗೆದ್ದವನು ಸೋತ, ಸೋತವನು ಸತ್ತ ಎಂಬ ಮಾತು ಈ ಸ್ಪರ್ಧೆಗೂ ಅನ್ವಯವಾಗುವಂತೆ ಸೋತವರು ಸುಣ್ಣವಾದರೂ, ಗೆದ್ದವರು ಮ್ಯಾರಥಾನ್ ಓಟದ ಹಿಂದಿನ ದಾಖಲೆಗಿಂತ ಗಣನೀಯವಾಗಿ ಹಿಂದುಳಿಯುವಂತಾಯಿತು. (ಮಹಿಳಾ)  ಕಳೆದ ಮೂವತ್ತೈದು ವರ್ಷಗಳಲ್ಲಿ ಅತಿ ಮಂದಗತಿಯ ಮಹಿಳಾ ಮ್ಯಾರಥಾನ್ ಎಂಬ ಅಪಹಾಸ್ಯದ ದಾಖಲೆ ನಿರ್ಮಾಣವಾಯಿತು. ನಡುರಾತ್ರಿ ಆರಂಭವಾದ ರೇಸ್ ನಲ್ಲಿ ರೂತ್ ಶೂಪ್ನ್ ಗ್ಯಾಟಿಚ್ ಗೆಲ್ಲಲು ತೆಗೆದುಕೊಂಡ ಅವಧಿ 2 ಗಂಟೆ 32 ನಿಮಿಷ 43ಸೆಕೆಂಡ್ ಗಳು. ಸುಮಾರು ಸ್ಪರ್ಧಿಗಳು ಸೆಖೆಯಿಂದ ತತ್ತರಿಸುತ್ತಿದ್ದರೆ, ಬೆವರಿನಿಂದ ಒದ್ದೆಮುದ್ದೆಯಾಗಿದ್ದ ಕೀನ್ಯಾ ದೇಶದ ಶೂಪ್ನ್ ಗ್ಯಾಟಿಚ್ ವಿಜಯದ ಮಂದಹಾಸ ಬೀರುತ್ತಿದ್ದರು.    

ವಾಸ್ತವವಾಗಿ ವಿಶ್ವ ಚಾಂಪಿಯನ್ ಶಿಪ್ ನ್ನು ಕತಾರ್ಗೆ ಕೊಟ್ಟಿದ್ದೇ ಅಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಸಂಘಗಳ ಮಹಾಸಂಘಟನೆ ಮಾಡಿದ ಮೊದಲ ತಪ್ಪು. ಉಷ್ಣಾಂಶ ನಿಯಂತ್ರಿತ ಖಲೀಫಾ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯುತ್ತವೆ ನಿಜ, ಆದರೆ ಮ್ಯಾರಥಾನ್ ಸ್ಪರ್ಧೆಯನ್ನು ಹೊರಗೇ ನಡೆಸಬೇಕು. ಬಿಸಿಲಿನ ಧಗೆ ಮತ್ತು ತೇವಾಂಶ ಜಾಸ್ತಿ ಇರುವ ಕಾರಣ ಸ್ಪರ್ಧೆಯನ್ನು ನಡುರಾತ್ರಿ ನಡೆಸಲಾಯಿತು. ಆದರೆ, ರಾತ್ರಿಯ ಉಷ್ಣಾಂಶವಿದ್ದುದು 33 ಡಿಗ್ರಿ ಸೆಲ್ಷಿಯಸ್. ತೇವಾಂಶ ಶೇಕಡಾ 80 ರಷ್ಟಿದ್ದು ಗಾಳಿಯ ಸುಳಿವೇ ಇರಲಿಲ್ಲ. ನಗರದ ವಾಟರ್ ಫ್ರಂಟ್ ಗೆ ಹೊಂದಿಕೊಂಡಂತೆ ಸ್ಪರ್ಧಿಗಳು ಓಡುವ ವ್ಯವಸ್ಥೆ ಇದ್ದರೂ ಅದರಿಂದ ಅಂತ ಪ್ರಯೋಜನವೇನೂ ಆಗಲಿಲ್ಲ. ಪ್ರತಿಕೂಲ ವಾತಾವರಣದಿಂದ ಸ್ಪರ್ಧಿಗಳ ಅರೋಗ್ಯ ಏರುಪೇರಾಗದಿರಲು ಎಂದಿಗಿಂತ ಹೆಚ್ಛೇ ವೈದ್ಯಕೀಯ ತಂಡಗಳು ಸಿದ್ಧವಾಗಿದ್ದವು. ಹವಾಮಾನದ ವೈಪರೀತ್ಯದಿಂದ ಅವರನ್ನು ಕಾಪಾಡಲು ಏರ್ಪಡಿಸಿದ್ದ ಎಲೆಕ್ಟ್ರೋಲೈಟ್ kiosk ಗಳಿಗೆ ಬರವಿರಲಿಲ್ಲ. ಇಷ್ಟೆಲ್ಲಾ ವ್ಯವಸ್ಥೆಯ ನಡುವೆಯೂ ಸ್ಪರ್ಧಿಗಳು ಹೈರಾಣಾಗಿಹೋದರು. ಅಂತಿಮ ಗೆರೆಯತ್ತ ನಡೆದು ಬಂಡ ಐಎಎಎಫ್ ಮುಖ್ಯಸ್ಥ ಮತ್ತು ಮಾಜಿ ಒಲಂಪಿಕ್ ಓಟಗಾರ ಸೆಬಾಸ್ಟಿಯನ್ ಕೋ ರ ಟಿ-ಶರ್ಟ್ ಬೆವರಿನಿಂದ ತೋಯ್ದಿತ್ತು. 

ಓಟದ ಮಧ್ಯದಲ್ಲೇ ತೊಟ್ಟ ಉಡುಗೆಯ ಒಳಗೆ ಬರಫ್ ಅನ್ನು ಇಳಿಬಿಟ್ಟುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎಲೆಕ್ಟ್ರಾಲ್ ಅನ್ನು ಎರಡೂ ಕೈಗಳಲ್ಲಿ ಹಿಡಿದು ಓಡುತ್ತಿದ್ದರೆಂದರೆ, ವಾತಾವರಣ ಅದೆಷ್ಟು ಭೀಕರವಾಗಿರಬೇಡ? 

ಹಾಲಿ ಚಾಂಪಿಯನ್ ರೋಸ್ ಕೆಲಿಮೋ ಶೂಪ್ ನ ಗ್ಯಾಟಿಚ್ ಗಿಂತ 63 ಸೆಕೆಂಡ್ ಹಿಂದೆ ಬಿದ್ದರು. ಹೆಲಲೀಲಾ ಜೋನ್ಸ್ ಕಂಚಿನ ಪದಕ ಗೆದ್ದು ನಮೀಬಿಯಾ ದೇಶದ ಪ್ರಥಮ ಪದಕ ವಿಜೇತರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೀನ್ಯಾ ಮತ್ತು ಇಥಿಯೋಪಿಯ ದೇಶಗಳ ಓಟಗಾರರ ವಿಶೇಷ ಸಾಮರ್ಥ್ಯದ ಬಗ್ಗೆ ಇತ್ತೀಚಿಗೆ ಇದೇ ಅಂಕಣದಲ್ಲಿ ಬರೆದಿದ್ದೆ. ಆದರೆ ಇಥಿಯೋಪಿಯಾದಂಥ ನಾಡಿನ ಬಂದ ಮೂರು  ಓಟಗಾರ್ತಿಯರೂ ಬಸವಳಿದು ರೇಸ್ ನಿಂದ ವಿಮುಖರಾಗುವುದನ್ನು ಆ ದೇಶದ ಕೋಚ್ ಹಾಜಿ ಅಡಿಲೋ ರೋಹೆ ಖಿನ್ನರಾಗಿ ನೋಡುತ್ತಿದ್ದರು. ಆ ಮೂರ್ವರಲ್ಲಿ ಟೋಕಿಯೋ ಮ್ಯಾರಥಾನ್ ವಿಜೇತೆ ರುತಿ ಅಗಾ ಸೇರಿದ್ದರು. ಇಟಲಿಯ ಸಾರ ಡೊಸೇನರನ್ನು ವೀಲ್ ಛೇರ್ನಲ್ಲಿ ಸಾಗಿಸಬೇಕಾಯಿತು. ರೇಸ್ ನಂತರ, ಅನಭಿವೃದ್ಧಿ ದೇಶಗಳಲ್ಲೊಂದಾದ ಇಥಿಯೋಪಿಯ ಕೋಚ್ ಹೇಳಿದ್ದು: "ನಮ್ಮ ದೇಶದಲ್ಲಿ ಕೂಡ ಇಂತಹ ಹವಾಮಾನದಲ್ಲಿ ನಮ್ಮ ಓಟಗಾರ್ತಿಯರು ಓಡಲಾಗುತ್ತಿರಲಿಲ್ಲ."

ಚಿನ್ನದ ಪದಕ ಗೆದ್ದ ಶೂಪ್ನ್ ಗ್ಯಾಟಿಚ್ ಗೆದಿದ್ದಾದರೂ ಹೇಗೆ ಎಂದರೆ ಆಕೆ ಮಧ್ಯಾಹ್ನದ ಬಿಸಿಲಿನಲ್ಲಿ ಓಡಿ ಗಟ್ಟಿಯಾಗಿದ್ದು. ಆದರೆ ಆಕೆ ಕೂಡ, ಮ್ಯಾರಥಾನ್ ನಂತರ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಯಿತು. 

ಬ್ರಿಟನ್ನಿನ ಮೊದಲ ಮೂವರು ಮ್ಯಾರಥಾನ್ ಓಟಗಾರ್ತಿಯರಲ್ಲಿ ಒಬ್ಬರಾದ ಶಾರ್ಲೊಟ್  ಪರ್ಡ್ಯೂ ಓಟವನ್ನು ಮುಗಿಸಲಾಗಲಿಲ್ಲ. ಅವರ ರಾಷ್ಟ್ರದವರೇ ಆದ ಟೀಷ್ ಜೋನ್ಸ್ ರೇಸ್ ಗೆ ಮುನ್ನವೇ ಕಾಲಿಗೆ ಪೆಟ್ಟುಮಾಡಿಕೊಂಡು ಹೊರಗುಳಿದರು.

ಅಮೆರಿಕದ ಸ್ಪರ್ಧಿ ರಾಬರ್ಟಾ ಜೋನ್ಸ್ ಮೂರು ಮಕ್ಕಳ ತಾಯಿ ಮತ್ತು ವೃತ್ತಿಯಲ್ಲಿ ಪೂರ್ಣಾವಧಿ ಶುಶ್ರೂಷಕಿ. 41 ವರ್ಷ ವಯಸ್ಸಿನ ಆಕೆ ಆರನೆಯ ಸ್ಥಾನ ಪಡೆದರು. ರೇಸ್ ನಾದ್ಯಂತ ಹಣೆಪಟ್ಟಿಯೊಳಗೆ ಐಸ್ ಇಟ್ಟುಕೊಂಡು, ಅದರಿಂದ ಜಿನುಗುವ ನೀರಿನಿಂದ ಬವಣೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿಕೊಂಡ ಆಕೆ ಇಂತಹ ಅಮಾನವೀಯ ಮ್ಯಾರಥಾನನ್ನು ನಾನು ಎಂದೂ ಓಡಿಲ್ಲ ಎಂದರು.   

ಅಂತಹದೇ ಅಭಿಪ್ರಾಯವನ್ನು ಒಳಾಂಗಣದಲ್ಲಿ ಪೋಲ್ ವಾಲ್ಟ್ ಸ್ಪರ್ಧಿಸಿದ ಮತ್ತೊಬ್ಬ ಅಮೆರಿಕನ್ ಕ್ರೀಡಾಗಾರ್ತಿ ಸ್ಯಾಂಡಿ ಮಾರಿಸ್ ವ್ಯಕ್ತಪಡಿಸಿದರು. "ಸ್ಟೇಡಿಯಂ ಒಳಗೆ ಹವಾನಿಯಂತ್ರಣ ವ್ಯವಸ್ಥೆ ಇಲ್ಲದಿದ್ದರೆ ನಾನು ಇಂದೇ ಸಾಯುತ್ತಿದ್ದೆ. ನಮ್ಮೆಲ್ಲರ ಸಾಮೂಹಿಕ ಗೋರಿ ಇಲ್ಲೇ ತೋಡಬೇಕಾಗುತ್ತಿತ್ತು."  ರೇಸನ್ನು ಪೂರ್ಣಗೊಳಿಸಿದವರಲ್ಲಿ ಐದನೆಯವರಾದ ಬೆಲಾರಸ್ ನ ವೋಲ್ಹ ಮಜುರೋನಕ್ "ತೇವಾಂಶ ಕೊಲ್ಲುತ್ತಿತ್ತು. ನಾನು ಓಟವನ್ನು ಪೂರ್ಣಗೊಳಿಸುತ್ತೇನೆ ಎನ್ನುವ ಭರವಸೆ ಇರಲಿಲ್ಲ. ಗಾಳಿಯ ಸೋಂಕೇ ಇಲ್ಲದೇ  ಉಸಿರಾಡಲು ಕಷ್ಟವಾಗುತ್ತಿತ್ತು" ಎಂದು ತಮ್ಮ ಬವಣೆಯನ್ನು ಹಂಚಿಕೊಂಡರು. 

ರೇಸ್ ಮಧ್ಯೆ ತುಪುತುಪನೆ ಬೀಳುತ್ತಿದ್ದವರನ್ನು ಕಂಡು ಕಷ್ಟಪಟ್ಟು ಓಡುತ್ತಿದ್ದವರೂ ತಾವು ಯಾವಾಗ ಕುಸಿಯಬಹುದೆಂಬ ಆತಂಕದಲ್ಲೇ ಓಡುತ್ತಿದ್ದರು. 

ಸ್ಪರ್ಧಿಗಳಿಗೆ ಎಂದಿನಂತ ವೇಗವಾಗಿ ಓಡಿ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುವುದು ಅ ಮುಖ್ಯವಾಗಿ ಬದುಕಿದೆಯಾ ಬಡಜೀವವೇ ಎನ್ನುತ್ತಾ ರೇಸ್ ಮುಗಿಸಿವುದೇ ಮುಖ್ಯವಾಗಿತ್ತು. ನಿರೀಕ್ಷಿತವಾಗಿಯೇ ಈ ರೇಸನ್ನು ನೋಡಲು ನೆರೆದ ಪ್ರೇಕ್ಷಕರ ಸಂಖ್ಯೆಯೂ ಕ್ಷೀಣವಾಗೇ ಇತ್ತು. ಅದಕ್ಕೆ ಕಾರಣ ಅವೇಳೆಯಲ್ಲ. ಏಕೆಂದರೆ, ಹವಾನಿಯಂತ್ರಿತ ಖಲೀಫಾ ಸ್ಟೇಡಿಯಂನ ಸಾಮರ್ಥ್ಯ 50000 ವಿದ್ದು ಹತ್ತು ದಿನಗಳ ಕ್ರೀಡಾಸ್ಪರ್ಧೆಗಳಿಗೆ ಖರೀದಿಸಲ್ಪಟ್ಟ ಪಾಸ್ಗಳ ಸಂಖ್ಯೆ ಕೇವಲ 40000.  ಕ್ರೀಡಾಜಗತ್ತಿನ ಕಪ್ಪು ದಿನವೆಂಬ ತೀಕ್ಷ್ಣ ಪ್ರತಿಕ್ರಿಯೆಯೂ ವ್ಯಕ್ತವಾಯಿತು.  

ಈ ಮ್ಯಾರಥಾನ್ ನ ನಂತರದಲ್ಲಿ ನಡೆದ ಪುರುಷರ 50 ಕಿಮೀ ದೂರದ ನಡಿಗೆಯ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳೂ ಜೀವಂತವಾಗಿ ಹುರಿಯಲ್ಪಟ್ಟರು. ಒಟ್ಟು 46 ಸ್ಪರ್ಧಿಗಳಲ್ಲಿ ಹಾಲಿ ಚಾಂಪಿಯನ್ ಮತ್ತು ವಿಶ್ವ ದಾಖಲೆ ಹೊತ್ತ ಫ್ರಾನ್ಸ್ ದೇಶದ ಯೊಹಾನ್ ದಿನಿಜ್ ಸೇರಿದಂತೆ 18 ಪಟುಗಳು ಸ್ಪರ್ಧೆಯಿಂದ ವಿಮುಖರಾದರು. ದೋಹಾಕ್ಕೆ ಬಂದು ತಪ್ಪು ಮಾಡಿದೆ ಎಂದು ಯೊಹಾನ್ ಪರಿತಪಿಸಿದರು. 

ಸ್ಪರ್ಧೆಯನ್ನು ಗೆದ್ದು ಪುರುಷರ ನಡಿಗೆ ಸ್ಪರ್ಧೆಯನ್ನು ಗೆದ್ದ ಅತಿ ಹಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪೋರ್ಚುಗಲ್ನ ಜೋ ವಿಯೆರಾ ರೇಸ್ ನರಕಸದೃಶವಾಗಿತ್ತೆಂದು ವರ್ಣಿಸಿದರು.  

ಇಂತಹ ಯಾತನಾಮಯ ವಾತಾವರಣದಲ್ಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಸ್ಪರ್ಧಿಗಳಿಗೆ ಐ ಎ ಎ ಎಫ್ ತೋರಿದ ಅಗೌರವವೆಂಬ ಅಭಿಪ್ರಾಯ ಮೂಡಿಬಂದಿತು. 2022 ರ ವಿಶ್ವ ಕಪ್ ಫುಟ್ಬಾಲ್ ಇಲ್ಲೇ ನಡೆಯುವುದಿದ್ದು, ಇಂತಹ ಅಮಾನವೀಯ ಹವಾಮಾನದಲ್ಲಿ ಯಾವ ಸೀಮೆ ಫುಟ್ಬಾಲ್ ಆಡಲು ಸಾಧ್ಯ ಎಂಬುದು ಪ್ರಶ್ನೆ.